ನಾಟೋ ಸದಸ್ಯತ್ವಕ್ಕೆ ಸ್ವೀಡನ್, ಫಿನ್ ಲ್ಯಾಂಡ್ ಅರ್ಜಿ : ಕಾರಣ ಮತ್ತು ಪರಿಣಾಮಗಳೇನು?

 

     – ವಸಂತರಾಜ ಎನ್.ಕೆ

ರಶ್ಯಾದ ಜತೆ 800 ಕಿ.ಮಿ ಗಡಿ ಹೊಂದಿರುವ ಫಿನ್ ಲ್ಯಾಂಡ್ ನಾಟೋ ಕೂಟಕ್ಕೆ ಸೇರಿದರೆ ಅಲ್ಲಿ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಮತ್ತಿತರ ಆಕ್ರಾಮಕ ಅಸ್ತ್ರಗಳನ್ನು ಸಜ್ಜುಗೊಳಿಸುವುದು ಖಚಿತ. ಇದರಿಂದ ಫಿನ್ ಲ್ಯಾಂಡ್ ಅಣ್ವಸ್ತ್ರದ ರಣರಂಗವಾಗುವ ಎಲ್ಲಾ ಸಾಧ್ಯತೆಗಳೂ ಇವೆ.  ಇವೆಲ್ಲ ಈಗಾಗಲೇ ಇರುವ ಶಸ್ತ್ರಾಸ್ತ್ರ ಪೈಪೋಟಿಯನ್ನು ಇನ್ನಷ್ಟು ತೀವ್ರಗೊಳಿಸಬಹುದು. ಜಗತ್ತಿನಲ್ಲಿ ಅದರಲ್ಲೂ ಯುರೋಪಿನಲ್ಲಿ ಅಣ್ವಸ್ತ್ರ ಯುದ್ಧದ ಅಪಾಯ ಹಿಂದೆಂದಿಗಿಂತಲೂ ಹೆಚ್ಚಾಗಲಿದೆ.  ಹಾಗಾಗಿ ನಾಟೋ ಸದಸ್ಯತ್ವಕ್ಕೆ ಸ್ವೀಡನ್, ಫಿನ್ ಲ್ಯಾಂಡ್ ಅರ್ಜಿ, ಯುರೋಪಿನ ಏಕೆ ಇಡೀ ಜಗತ್ತಿನ ಭದ್ರತೆ, ಶಾಂತಿ ಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಬಲ್ಲ ಮಹತ್ವದ ಆತಂಕಕಾರಿ ಬೆಳವಣಿಗೆ.

 

ಸ್ವೀಡನ್ ಮತ್ತು ಫಿನ್ ಲ್ಯಾಂಡ್ ನಾಟೋ ಸದಸ್ಯತ್ವಕ್ಕೆ ಅರ್ಜಿ ಹಾಕಲು ಅಧಿಕೃತವಾಗಿ ನಿರ್ಧರಿಸಿವೆ.   ಈ ಬೆಳವಣಿಗೆಗೆ ಕಾರಣಗಳೇನು? ಯುರೋಪಿನ ಮತ್ತು ಇಡೀ ಜಗತ್ತಿನ ಭದ್ರತೆ, ಶಾಂತಿ ಗಳ ಮೇಲೆ ಇದು ಯಾವ ಪರಿಣಾಮ ಬೀರಬಹುದು? .ಎರಡನೆಯ ಮಹಾಯುದ್ಧದ ನಂತರ ಶೀತಯದ್ಧದ ಕಾಲದ ಉದ್ದಕ್ಕೂ ಈ ವರೆಗೂ ಈ ಎರಡು ಉತ್ತರ ಯುರೋಪಿನ ದೇಶಗಳು – ವಾರ್ಸಾ ಒಪ್ಪಂದ ಅಥವಾ ನಾಟೋ – ಎರಡೂ ಮಿಲಿಟರಿ ಕೂಟಗಳಿಗೆ ಸೇರಿರಲಿಲ್ಲ. ಇದರಿಂದಾಗಿ ಅವು ಪಾಶ್ಚಿಮಾತ್ಯ ಮತ್ತು ಸೋವಿಯೆಟ್ ಒಕ್ಕೂಟ ನಾಯಕತ್ವದ ಸಮಾಜವಾದಿ ಬಣದ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದವು. ಎರಡೂ ದೇಶಗಳು ಪ್ರಬಲ ಸೈನ್ಯ ಹೊಂದಿದ್ದರೂ ದೀರ್ಘಕಾಲೀನ ರಾಷ್ಟ್ರೀಯ ಭದ್ರತೆ, ಹಿತಾಸಕ್ತಿ, ಶಾಂತಿಯ ದೃ಼ಷ್ಟಿಯಿಂದ ನಾಟೋ ಮಿಲಿಟರಿ ಕೂಟದಿಂದ ದೂರವುಳಿದಿದ್ದವು.

ಫಿನ್ ಲ್ಯಾಂಡ್ ಎರಡನೆಯ ಮಹಾಯುದ್ಧದ ನಂತರವಷ್ಟೇ ಈ ಧೋರಣೆ ತಳೆದಿದೆ. ಫಿನ್ ಲ್ಯಾಂಡ್ ರಶ್ಯದ ಜತೆ 830 ಮೈಲಿ ಉದ್ದದ ಗಡಿಯನ್ನು ಹೊಂದಿದ್ದು, ಸೂಪರ್ ಪವರ್ ಆಗಿದ್ದ ಸೋವಿಯೆಟ್ ಒಕ್ಕೂಟವನ್ನೂ ಮತ್ತು ಅದರ ಪತನದ ನಂತರವೂ ಸಹ ದೊಡ್ಡ ಮಿಲಿಟರಿ ಶಕ್ತಿಯಾಗಿದ್ದ ರಶ್ಯಾವನ್ನು ಕೆಣಕದಿರುವುದು ಅದರ ತಟಸ್ಥತೆಗೆ ಮುಖ್ಯ ಪ್ರೇರಕ ಶಕ್ತಿಯಾಗಿತ್ತು. ಆದರೆ ಸ್ವೀಡನ್ ನ ಪೂರ್ಣ ಪ್ರಮಾಣದ ತಟಸ್ಥ ಮಿಲಿಟರಿ ಧೋರಣೆ 200 ವರ್ಷಕ್ಕೂ ಹಳೆಯದು. ಎರಡೂ ಮಹಾಯುದ್ಧಗಳಲ್ಲಿ ಮತ್ತು ಅದರ ಹಿಂದೆಯೂ ದೀರ್ಘ ಕಾಲದ ಯುರೋಪಿನ ಒಳಗಿನ ಮಿಲಿಟರಿ ಸಂಘರ್ಷಗಳಿಂದ ಅದು ದೂರವಿತ್ತು. ಮಾತ್ರವಲ್ಲ, ಶೀತಸಮರದ ಅವಧಿಯಲ್ಲಿ ಇವು ಪಾಶ್ಚಿಮಾತ್ಯ ರಾಜಕೀಯ-ಆರ್ಥಿಕ ಕೂಟಗಳಿಂದಲೂ ದೂರವಿದ್ದವು. 1995ರಲ್ಲಷ್ಟೇ ಎರಡೂ ದೇಶಗಳು ಯುರೋ ಕೂಟವನ್ನು ಸೇರಿದ್ದು. ಸ್ವೀಡನ್ ಯುರೋ ಕೂಟ ಸೇರಿದ್ದರೂ ಯುರೋ ನಾಣ್ಯವನ್ನು ಅಂಗೀಕರಿಸದೆ ತನ್ನ ಕ್ರೋನರ್ ನಾಣ್ಯವನ್ನು ಈಗಲೂ ಮುಂದುವರೆಸುತ್ತಿದೆ.

ಆದರೆ 1995ರಲ್ಲಿ ಆದರೆ ಇವೆರಡೂ ದೇಶಗಳು ನಾಟೋ ಕೂಟದೊಂದಿಗೆ ‘ಶಾಂತಿಗಾಗಿ ಸಹಭಾಗಿತ್ವ’ ಒಪ್ಪಂದಕ್ಕೆ ಸಹಿ ಹಾಕಿದವು. ಅದರ ಭಾಗವಾಗಿ ಎರಡೂ ಮಿಲಿಟರಿ ವ್ಯವಸ್ಥೆಯ ಉಪಕರಣಗಳು ಜಂಟಿಯಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳುವುದನ್ನು ಆರಂಭಿಸಿದ್ದವು. ಯುಗೋಸ್ಲಾವಿಯ, ಅಫ್ಘಾನಿಸ್ತಾನ, ಲಿಬ್ಯಾ ಮತ್ತು ಇರಾಕ್ ಯುದ್ಧಗಳಲ್ಲಿ ನಾಟೋ ಪಡೆಗಳೊಂದಿಗೆ ಭಾಗವಹಿಸಿದ್ದವು.

ನಾಟೋ ಬೇಡ’ – ಸ್ವೀಡನ್ ನಲ್ಲಿ ಪ್ರತಿಭಟನೆ

ಈ ಎರಡೂ ದೇಶಗಳಲ್ಲಿ ನಾಟೋ ಕೂಟಕ್ಕೆ ಸೇರದಿರುವುದು ಬರಿಯ ಸರಕಾರಗಳ ನೀತಿಯಾಗಿರಲಿಲ್ಲ. ಅದಕ್ಕೆ ಪೂರ್ಣ ಜನಬೆಂಬಲ ಮತ್ತು ಎಲ್ಲ ರಾಜಕೀಯ ಶಕ್ತಿಗಳ ಸಹಮತವಿತ್ತು. ಈ ವರ್ಷದ ಆರಂಭದಲ್ಲಿ ಫಿನ್ ಲ್ಯಾಂಡ್ ಪ್ರಧಾನಿ ನಾಟೋ ಕೂಟಕ್ಕೆ ಸೇರುವ ಪ್ರಶ್ನೆಯಿಲ್ಲ ಎಂದಿದ್ದರು. ಆದರೆ ಉಕ್ರೇನ್ ಯುದ್ಧ ಎಲ್ಲವನ್ನೂ ಬದಲಾಯಿಸಿದಂತಿದೆ. ಎರಡೂ ದೇಶಗಳಲ್ಲಿ ಜನಮತಸಂಗ್ರಹದಲ್ಲಿ ಬಹುಸಂಖ್ಯಾತರು ನಾಟೋ ಸೇರುವುದನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ತಟಸ್ಥ ನೀತಿಯ ಪರವಾಗಿದ್ದ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷಗಳು ಸಹ ತಮ್ಮ ಧೋರಣೆ ಬದಲಾಯಿಸಿವೆ. ಎರಡೂ ದೇಶಗಳ ಆಳುವ ವಲಯಗಳಿಗಂತೂ ಯು.ಎಸ್-ಯುರೋ ಆಳುವ ವಲಯಗಳ ಭಾಗವಾಗಲು  ಹವಣಿಸುವ ಭಾಗವಾಗಿ ಈ ನಿಟ್ಟಿನಲ್ಲಿ ಒಲವು ಇತ್ತು.

ಆದರೆ ಸ್ವೀಡನ್ ಮತ್ತು ಫಿನ್ ಲ್ಯಾಂಡ್ ನಾಟೋ ಸದಸ್ಯತ್ವಕ್ಕೆ ಅರ್ಜಿಯನ್ನು ಟರ್ಕಿ ಬಲವಾಗಿ ವಿರೋಧಿಸಿದೆ. ಟರ್ಕಿಯ ‘ಭಯೋತ್ಪಾದಕರು’ ಮತ್ತು ‘ವಿಚ್ಛಿದ್ರಕಾರಿ’ ರಾಜಕೀಯ ಶಕ್ತಿಗಳಿಗೆ ಆಶ್ರಯ ಕೊಟ್ಟಿವೆ, ಬೆಂಬಲಿಸುತ್ತಿವೆಯೆಂಬುದು ಅದರ ಈಗಿನ ಅಧ‍್ಯಕ್ಷರ  ತಕರಾರು. ಆದರೆ ಅದನ್ನು ಎಷ್ಟರ ಮಟ್ಟಿಗೆ ಇತರ ಯುರೋ ಕೂಟ ಸದಸ್ಯರು ಒಪ್ಪುತ್ತಾರೆಂದು ಹೇಳುವಂತಿಲ್ಲ. ಆದರೆ ನಾಟೋ ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಎಲ್ಲ ಸದಸ್ಯರೂ  ಒಪ್ಪಬೇಕೆಂಬ ನಿಯಮವಿರುವುದರಿಂದ ಇದು ಕಂಟಕವಾಗಬಹುದು. ಪ್ರತಿಯೊಂದು ಸದಸ್ಯ ದೇಶ ಪ್ರತಿಯೊಂದು ಸದಸ್ಯತ್ವದ ಹೊಸ ಅರ್ಜಿಯನ್ನು ಅದರ ಸಂವಿಧಾನ/ಕಾನೂನುಗಳ ಪ್ರಕಾರ ಅನುಮೋದಿಸಬೇಕು. ಹೆಚ್ಚಿನ ನಾಟೋ ಸದಸ್ಯ ದೇಶಗಳಲ್ಲಿ ಆಯಾ ಪಾರ್ಲಿಮೆಂಟಿನ ಅನುಮೋದನೆ (ಸರಳ ಅಥವಾ ಹೆಚ್ಚಿನ ಉದಾ. 2/3ರ ಬಹುಮತ) ಅಗತ್ಯವಿದೆ. ಕೆಲವು ದೇಶಗಳಲ್ಲಿ ಜನಮತಸಂಗ್ರಹವೂ ಅಗತ್ಯವಾಗಬಹುದು. ಹಾಗಾಗಿ ಈ ಪ್ರಕ್ರಿಯೆ ದೀರ್ಘವಾದದ್ದು.

ಸ್ವೀಡನ್, ಫಿನ್ ಲ್ಯಾಂಡಿನಲ್ಲಿ ಜನಮತ ನಾಟೋ ಕೂಟಕ್ಕೆ ಸೇರುವ ಪರವಾಗಿ ತಿರುಗಲು, ಉಕ್ರೇನಿಗೆ ಆಗಿದ್ದು ತಮ್ಮ ದೇಶಕ್ಕೂ ಆಗಬಹುದು ಎಂದು ಮೂಡಿದ ಅಥವಾ ಜಾಗತಿಕ ಮಾಧ್ಯಮಗಳು ಮೂಡಿಸಲು ಪ್ರಯತ್ನಿಸಿದ ಆತಂಕವೇ ಮುಖ್ಯ ಕಾರಣ. ತಮ್ಮ ದೇಶದ ಅಥವಾ ಇಡೀ ಯುರೋಪಿನ ಭದ್ರತೆ, ಶಾಂತಿ, ಸಾರ್ವಭೌಮತೆಗೆ ಹಿಂದೆ ಸೋವಿಯೆಟ್ ಬಣದ ಅಥವಾ ಆ ಮೇಲೆ ರಶ್ಯದ ‘ಅಪಾಯ’ ಇಲ್ಲ. ಆ ರೀತಿಯ ‘ಅಪಾಯ’ ಯು.ಎಸ್-ಯುರೋ ಕೂಟದ ಆಳುವ ವಲಯಗಳ ಪ್ರಚಾರವಷ್ಟೇ ಎಂಬುದು ಜನರ ಅಭಿಪ್ರಾಯವಾಗಿತ್ತು. ಆದರೆ ಉಕ್ರೇನ್ ಯುದ್ಧದ ನಂತರ ಈಗಿನ ಬದಲಾದ ಸ್ಥಿತಿಯಲ್ಲಿ ದೇಶದ ಮತ್ತು ಯುರೋಪಿನ ಭದ್ರತೆ, ಶಾಂತಿ, ಸಾರ್ವಭೌಮತೆಗಳ ರಕ್ಷಣೆಗೆ ನಾಟೋ ಕೂಟಕ್ಕೆ ಸೇರುವುದು ಕ್ಷೇಮ ಎಂಬ ಅಭಿಪ್ರಾಯಕ್ಕೆ ಬಲ ಬರತೊಡಗಿದೆ.

ಆದರೆ ಈ ತರ್ಕವನ್ನು ಸ್ವೀಡನ್, ಫಿನ್ ಲ್ಯಾಂಡಿನಲ್ಲಿ ಎಲ್ಲರೂ ಒಪ್ಪಿದಂತಿಲ್ಲ. ಈ ಎರಡು ದೇಶಗಳ ಮಾತ್ರವಲ್ಲ ಯುರೋಪಿನ ಶಾಂತಿ ಚಳುವಳಿ ಮತ್ತು ಎಡ ರಾಜಕೀಯ ಶಕ್ತಿಗಳು,  ನಾಟೋ ಕೂಟಕ್ಕೆ ಸೇರುವುದು ದೇಶದ ಮತ್ತು ಯುರೋಪಿನ ಭದ್ರತೆ, ಶಾಂತಿ, ಸಾರ್ವಭೌಮತೆಗಳಿಗೆ ಮಾರಕವಾಗುವ ಸಂಭವವೇ ಹೆಚ್ಚು ಎಂದು ವಾದಿಸಿವೆ. ಉಕ್ರೇನ್ ಯುದ್ಧವನ್ನು ಇವು ಖಂಡಿಸಿವೆ. ಆದರೆ ಯು.ಎಸ್ ನಾಯಕತ್ವದಲ್ಲಿ ನಾಟೋ ಕೂಟ ಉಕ್ರೇನನ್ನು ಬಲಿಪಶು ಮಾಡಿ ರಶ್ಯಾವನ್ನು ಈ ಯುದ್ಧಕ್ಕೆ ಪ್ರಚೋದಿಸಿದೆ. ನಾಟೋ ಯುರೋಪಿನ ಭದ್ರತೆ, ಶಾಂತಿ, ಸಾರ್ವಭೌಮತೆಗಳಿಗೆ ಕಟ್ಟಿದ ಮಿಲಿಟರಿ ಕೂಟವಲ್ಲ. ಬದಲಿಗೆ ಯು.ಎಸ್ ನ ಜಾಗತಿಕ ಅಧಿಪತ್ಯ ಸ್ಥಾಪಿಸುವುದು,  ಅದಕ್ಕೆ ಸವಾಲು ಹಾಕಿದವರಿಗೆ ‘ಬುದ್ಧಿ ಕಲಿಸುವುದು, ಯು.ಎಸ್ – ಯುರೋ ವಲಯದ ಶಸ್ತ್ರಾಸ್ತ್ರ ಉದ್ಯಮದ ಮತ್ತು ಮಿಲಿಟರಿ-ಕೈಗಾರಿಕಾ ಸಂಕೀರ್ಣದ ಸೂಪರ್ ಲಾಭ ದೊರಕಿಸುವುದು ಅದರ ನಿಜವಾದ ಉದ್ದೇಶ.  ಉಕ್ರೇನ್ ಯುದ್ಧದಿಂದ ಈ ಶಕ್ತಿಗಳಿಗೆ ಲಾಭವಿರುವುದರಿಂದಲೇ ಯಾವುದೇ ಶಾಂತಿ ಮಾತುಕತೆಗೆ ಗಂಭೀರ ಪ್ರಯತ್ನ ನಡೆಯುತ್ತಿಲ್ಲ ಎಂದೂ ವಾದಿಸಿವೆ.

ನಾಟೋ ಬೇಡ’ – ಟರ್ಕಿಯಲ್ಲಿ ಪ್ರತಿಭಟನೆ

ಈ ವರೆಗಿನ ಯಾವ ನಾಟೋ ಮಿಲಿಟರಿ ಅಭಿಯಾನ ಸಹ  ಯುರೋಪಿನ ದೇಶಗಳ ಭದ್ರತೆ, ಶಾಂತಿ, ಸಾರ್ವಭೌಮತೆಗಳಿಗೆ ಮಾಡಿದ್ದಲ್ಲ. ಯುರೋಪಿನ ನೆಲದಲ್ಲಿ ಆದ ಯುಗೋಸ್ಲಾವಿಯವನ್ನು ಛಿದ್ರಗೊಳಿಸಿದ ಯುದ್ಧದಿಂದ ಆರಂಭಿಸಿ, ಅಫ್ಗಾನಿಸ್ತಾನ, ಇರಾಕ್, ಲಿಬ್ಯಾ, ಸಿರಿಯಾ ಯುದ್ಧಗಳೆಲ್ಲ ಯು.ಎಸ್ ನ ಜಾಗತಿಕ ಅಧಿಪತ್ಯದ ರಕ್ಷಣೆಗೆ ಹೂಡಿದ್ದು. ಆಯಾ ದೇಶಗಳ ಸಾರ್ವಭೌಮತೆಯನ್ನು ನಾಶ ಮಾಡಿತ್ತು. ಈ ಯುದ್ಧಗಳಿಂದ ಯುರೋಪಿನ ಭದ್ರತೆ, ಶಾಂತಿ, ಸಾರ್ವಭೌಮತೆಗಳಿಗೆ ಅಪಾಯವೇ ಆಗಿದೆ. ಯುರೋಪಿಗೆ ಸವಾಲಾಗಿರುವ ದೊಡ್ಡ ಪ್ರಮಾಣದ ವಲಸೆಗಾರರು ನಾಟೋ ಯುದ್ಧಗಳ ಸಂತ್ರಸ್ತರು ಎಂಬುದು ಅವರ ವಾದ.

ಈಗಾಗಲೇ ಪೂರ್ವಕ್ಕೆ ನಾಟೋ ವಿಸ್ತರಣೆ ರಶ್ಯಾದ ಆತಂಕಕ್ಕೆ ಕಾರಣವಾಗಿದೆ. ಈ ಎರಡು ದೇಶಗಳು ನಾಟೋ ಸೇರಿದರೆ ಐದು ದೇಶಗಳನ್ನು ಬಿಟ್ಟರೆ ಎಲ್ಲ ಯುರೋ ಕೂಟದ ದೇಶಗಳು ನಾಟೋ ಕೂಟದ ಭಾಗವಾದಂತಾಗುತ್ತದೆ. ಇದು ಇನ್ನಷ್ಟು ರಶ್ಯಾದ ಆತಂಕಕ್ಕೆ ಕಾರಣವಾಗಬಹುದು. ಈಗಾಗಲೇ ಫಿನ್ ಲ್ಯಾಂಡ್ ಮೇಲೆ ಇಂಧನ ನಿರ್ಬಂಧ ಹೇರುವ ಬೆದರಿಕೆಯನ್ನು ರಶ್ಯಾ ಹಾಕಿದೆ. ರಶ್ಯಾದ ಜತೆ 800 ಕಿ.ಮಿ ಗಡಿ ಹೊಂದಿರುವ ಫಿನ್ ಲ್ಯಾಂಡ್ ನಾಟೋ ಕೂಟಕ್ಕೆ ಸೇರಿದರೆ ಅಲ್ಲಿ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಮತ್ತಿತರ ಆಕ್ರಾಮಕ ಅಸ್ತ್ರಗಳನ್ನು ಸಜ್ಜುಗೊಳಿಸುವುದು ಖಚಿತ. ಇದರಿಂದ ಫಿನ್ ಲ್ಯಾಂಡ್ ಅಣ್ವಸ್ತ್ರದ ರಣರಂಗವಾಗುವ ಎಲ್ಲಾ ಸಾಧ್ಯತೆಗಳೂ ಇವೆ.  ರಶ್ಯಾವೇ ಫಿನ್ ಲ್ಯಾಂಡ್  ಮೇಲೆ ಆಕ್ರಮಣ ಮಾಡಬೇಕೆಂದಿಲ್ಲ. ಎಲ್ಲೇ ಇರಲಿ ಯಾವುದೇ ನಾಟೋ ದೇಶದ ಮಿಲಿಟರಿ ಕಾರ್ಯಾಚರಣೆಯ ಫಲವನ್ನು ಫಿನ್ ಲ್ಯಾಂಡ್  ಉಣ್ಣಬೇಕಾಗಬಹುದು. ಇವೆಲ್ಲ ಈಗಾಗಲೇ ಇರುವ ಶಸ್ತ್ರಾಸ್ತ್ರ ಪೈಪೋಟಿಯನ್ನು ಇನ್ನಷ್ಟು ತೀವ್ರಗೊಳಿಸಬಹುದು. ಜಗತ್ತಿನಲ್ಲಿ ಅದರಲ್ಲೂ ಯುರೋಪಿನಲ್ಲಿ ಅಣ್ವಸ್ತ್ರ ಯುದ್ಧದ ಅಪಾಯ ಹಿಂದೆಂದಿಗಿಂತಲೂ ಹೆಚ್ಚಾಗಲಿದೆ. ಹೀಗೆಂದು ಯುರೋಪಿನ ಶಾಂತಿ ಚಳುವಳಿ ಮತ್ತು ಎಡ ಶಕ್ತಿಗಳು ಪ್ರಚಾರ ಮಾಡುತ್ತಿವೆ.

ಯು.ಎಸ್ ನ ಜಾಗತಿಕ ಅಧಿಪತ್ಯ ಮತ್ತು ಅದರ ಅಸ್ತ್ರವಾದ ನಾಟೋ ಕೂಟಕ್ಕೆ ಸವಾಲು ಹಾಕುವುದು, ಅದನ್ನು ದುರ್ಬಲಗೊಳಿಸಿ ಬಯಲು ಮಾಡುವುದು, ಉಕ್ರೇನ್ ಯುದ್ಧದ ರಶ್ಯನ್ ಸರಕಾರದ ಉದ್ದೇಶವಾಗಿದ್ದರೆ ಅದು ಬ್ಯೂಮರಾಂಗ್ ಆಗಿದೆ ಎಂದು ಹೇಳಬಹುದು. ಒಂದು ಕಡೆ ನಾಟೋ ಕೂಟದ ಈಗಿನ ಸದಸ್ಯರನ್ನು ಈ ಯುದ್ಧ ಹತ್ತಿರ ತಂದಿದೆ. ಅದರ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಸಹಾಯ ಮಾಡಿದೆ. ನಾಟೋ ಕೂಟದ ಒಳಗಿದ್ದೂ ಯು.ಎಸ್ ಅಧಿಪತ್ಯಕ್ಕೆ ಸವಾಲು ಹಾಕುತ್ತಿದ್ದ, ರಶ್ಯಾ ಯುರೋಪಿಗೆ ಅಪಾಯಕಾರಿ ಎಂಬ ಅಭಿಪ್ರಾಯಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದ   ಜರ್ಮನಿ, ಪ್ರಾನ್ಸ್ ನಂತಹ ದೇಶಗಳನ್ನು ಅದು ದುರ್ಬಲಗೊಳಿಸಿದೆ. ಇನ್ನೊಂದು ಕಡೆ ಸ್ವೀಡನ್, ಫಿನ್ ಲ್ಯಾಂಡ್ ಗಳು ನಾಟೋ ಸದಸ್ಯತ್ವಕ್ಕೆ ಅರ್ಜಿ ಹಾಕುವ ಕೆಲವೇ ತಿಂಗಳ ಹಿಂದೆ ಕಲ್ಪಿಸಲೂ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿದೆ. ಮತ್ತೊಂದು ಕಡೆ  ನಾಟೋ ಕೂಟದ ವಿರುದ್ಧ ಸತತವಾಗಿ ಪ್ರಚಾರ ಮಾಡುತ್ತಿದ್ದ ಶಾಂತಿ ಚಳುವಳಿಯ ಸ್ಥಿತಿಯನ್ನೂ ದುರ್ಬಲಗೊಳಿಸಿದೆ.

ಹಾಗಾಗಿ ನಾಟೋ ಸದಸ್ಯತ್ವಕ್ಕೆ ಸ್ವೀಡನ್, ಫಿನ್ ಲ್ಯಾಂಡ್ ಅರ್ಜಿ, ಯುರೋಪಿನ ಏಕೆ ಇಡೀ ಜಗತ್ತಿನ ಭದ್ರತೆ, ಶಾಂತಿ ಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಬಲ್ಲ ಮಹತ್ವದ ಆತಂಕಕಾರಿ ಬೆಳವಣಿಗೆ.

 

 

Donate Janashakthi Media

Leave a Reply

Your email address will not be published. Required fields are marked *