- ಇ-ಕೆವೈಸಿ ಮಾಡಿಸಲು ಮೇ31 ಕೊನೆಯ ದಿನಾಂಕ
- ಇ- ಕೆವೈಸಿ ಮಾಡದಿದ್ದಲ್ಲಿ ಹೆಸರು ರದ್ದು, ರೇಷನ್ ಸಿಗೋಲ್ಲ
- 35.5 ಲಕ್ಷ ಜನರು ಬಿಪಿಎಲ್ ಫಲಾನುಭವಿಗಳು
- ರಾಜ್ಯದಲ್ಲಿ 21,232 ಸರ್ಕಾರಿ ನೌಕರರ ಕೈಯಲ್ಲಿ ಬಿಪಿಎಲ್ ಕಾರ್ಡ್
ಬೆಂಗಳೂರು : ಎಲ್ಲಾ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದ ಐದು ವರ್ಷಗಳ ನಂತರ, ರಾಜ್ಯ ಸರ್ಕಾರವು ಸುಮಾರು 22 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಅಮಾನತಿನಲ್ಲಿಡಲು ಸಜ್ಜಾಗಿದೆ, ಇನ್ನೂ 35.5 ಲಕ್ಷ ಫಲಾನುಭವಿಗಳಿಗೆ ಅವರ ಸಾರ್ವಜನಿಕ ವಿತರಣಾ ಅಂಗಡಿಗಳ ಮೂಲಕ ಸರಬರಾಜು ಮಾಡಬೇಕಾಗಿದೆ. 35.5 ಲಕ್ಷ ಜನರು ಸಾರ್ವಜನಿಕ ವಿತರಣಾ ಅಂಗಡಿಗಳಲ್ಲಿ ತಮ್ಮ ಹೆಬ್ಬೆರಳಿನ ಗುರುತನ್ನು ನೀಡಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಸರ್ಕಾರವು ಇ-ಕೆವೈಸಿ ಮಾಡಿಸಲು ಸುಮಾರು ಬಾರಿ ಕೊನೆಯ ದಿನಾಂಕ ಘೋಷಿಸಿತ್ತು .ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ,ಬಿಪಿಎಲ್ ಫಲಾನುಭವಿಗಳಿಗೆ ತಮ್ಮ ಬಯೋಮೆಟ್ರಿಕ್ಗಳನ್ನು ಒದಗಿಸಲು ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ಮೇ 31 ಎಂದು ನಿರ್ಧಾರ ಮಾಡಿದೆ. ಒಟ್ಟು 4.75 ಲಕ್ಷ ಅಂತ್ಯೋದಯ ಫಲಾನುಭವಿಗಳು ಮತ್ತು 30.75 ಲಕ್ಷ ಬಿಪಿಎಲ್ ಫಲಾನುಭವಿಗಳು ಇದ್ದಾರೆ.
ಅನರ್ಹರು (ಆರ್ಥಿಕವಾಗಿ ಸಬಲರು) ಬಿಪಿಎಲ್ ಪಡಿತರ ಚೀಟಿಯನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಇಲಾಖೆಯು ಪ್ರತಿ ವರ್ಷ ಮಾಹಿತಿ ನವೀಕರಣಕ್ಕೆ ಸೂಚಿಸುತ್ತದೆ. ಅದೇ ರೀತಿ ಈ ಬಾರಿಯೂ ಮಾಹಿತಿ ಕೋರಿದ್ದು, ಮಾಹಿತಿ ನೀಡಲು ಹಾಗೂ ಪಡಿತರ ಚೀಟಿಗೆ ಆಧಾರ್ ಕಾರ್ಡು ಜೋಡಣೆ ಮಾಡಲು ಮೇ 31 ಅಂತಿಮ ದಿನವಾಗಿದೆ. ಈ ಅವಧಿ ವೇಳೆಗೆ ಪಡಿತರದಾರರು ತಮ್ಮ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಜೋಡಣೆ ಮಾಡಬೇಕು ಹಾಗೂ ಪ್ರತಿ ಸದಸ್ಯನೂ ಖುದ್ದಾಗಿ ತೆರಳಿ ಬೆರಳಚ್ಚು ನೀಡಬೇಕು ಎಂದು ಆದೇಶ ನೀಡಿದೆ.
ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಲ್ಲಿ 21,232 ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಅನಧಿಕೃತವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಹೊಂದಿದ್ದಾರೆ. ತಂತ್ರಜ್ಞಾನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದಾಗಿ ಅನರ್ಹರನ್ನು ಗುರುತಿಸಲಾಗಿದೆ. ಸರ್ಕಾರದ ನಿಯಮಗಳನ್ನು ಮೀರಿ ಅರ್ಹತೆ ಇಲ್ಲದವರು ಕೂಡಾ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
“ಕಾರ್ಡ್ ಮೂರು ತಿಂಗಳವರೆಗೆ ಮಾತ್ರ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತದೆ.ಇ-ಕೆವೈಸಿ ಪೂರ್ಣಗೊಳಿಸಿದ ತಕ್ಷಣ, ಅಮಾನತು ರದ್ದುಗೊಳಿಸಲಾಗುತ್ತದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ ಕಾರ್ಡ್ಗಳನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದರು.
ಕಡುಬಡವರಿಗೆ ನೀಡುವ ಪಡಿತರ ಧಾನ್ಯ ಶ್ರೀಮಂತರು ಪಡೆಯುವುದನ್ನು ತಡೆಯುವ ಉದ್ದೇಶದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕುಟುಂಬವೊಂದರ ವಾರ್ಷಿಕ ಆದಾಯ 1.2 ಲಕ್ಷ ರು. ಒಳಗೆ ಇದ್ದರೆ ಮಾತ್ರ ಬಿಪಿಎಲ್ ಪಡಿತರ ಚೀಟಿ ದೊರೆಯುತ್ತದೆ. ಇದಕ್ಕಿಂತ ಹೆಚ್ಚು ಆದಾಯ ಇದ್ದವರ ಪತ್ತೆಗಾಗಿ ಆಧಾರ್ ಜೋಡಣೆಗಾಗಿ ಸರ್ಕಾರ ಈ ನಿಯಮವನ್ನು ತಂದಿದೆ ಮತ್ತು ಆಧಾರ್ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಥಿತಿವಂತರ ಪತ್ತೆ ಸುಲಭವಾಗಿ ತಿಳಿಯುತ್ತದೆ.ನಿಧನ ಹೊಂದಿದವರ ಹೆಸರಲ್ಲೂ ಪಡಿತರ ಪಡೆಯುವುದನ್ನು ತಪ್ಪಿಸಲು ಇ-ಕೆವೈಸಿ ಸಹಾಯ ಮಾಡುತ್ತದೆ ಎಂದು ಇಲಾಖೆ ತಿಳಿಸಿದೆ.
ಇ. ಕೆವೈಸಿ ಸರ್ವರ್ ಸಮಸ್ಯೆ : ಇಕೆವೈಸಿ ಮಾಡಿಸುವಾಗ ಸಹಜವಾಗಿ ತಾಂತ್ರಿಕ ದೋಷಗಳು ಬಂದಿವೆ. ಸರ್ವರ್ ಸಮಸ್ಯೆ, ಇಲ್ಲವೆ ವಿದ್ಯುತ್ ಅಭಾವ, ಹೀಗೆ ಅನೇಕ ಸಮಸ್ಯೆಗಳು ಇ-ಕೆವೈಸಿ ಮಾಡುವಾಗ ಅಗುತ್ತಿವೆ. ಇದಕ್ಕಾಗಿ ದಿನ ಪೂರ್ತಿ ಕೆಲಸ ಬಿಟ್ಟು ನಿಲ್ಲಬೇಕಾದ ಕಾರಣ, ಒಂದು ದಿನದ ಕೂಲಿ ಹಣ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಸರ್ವರ್ ಕೇಂದ್ರಕ್ಕೆ ಬರಲು ಹಿಂದೇಟು ಹಾಕಿದ ಉದಾಹರಣೆಗಳು ಇವೆ. ಅಷ್ಟೆ ಅಲ್ಲದೆ 35 ಲಕ್ಷ ಫಲಾನುಭವಿಗಳಲ್ಲಿ ಹಲವರು ವಲಸೆ ಕಾರ್ಮಿಕರಾಗಿರಬಹುದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರು, ಅವರು ಈ ಉಪಕ್ರಮವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇ-ಕೆವೈಸಿಯನ್ನು ಪೂರ್ಣಗೊಳಿಸಲು ರಾಜ್ಯದ ಅಂಕಿಅಂಶಗಳು 91.9% ರಷ್ಟಿದ್ದರೆ, ಆರು ಜಿಲ್ಲೆಗಳು – ಯಾದಗಿರಿ, ಚಾಮರಾಜನಗರ, ವಿಜಯಪುರ, ರಾಯಚೂರು, ಕಲಬುರಗಿ ಮತ್ತು ಗದಗ – 89% ಕ್ಕಿಂತ ಕಡಿಮೆಯಿದ್ದು, ಈ ಜಿಲ್ಲೆಗಳಿಂದ 35 ಲಕ್ಷ ಜನರು ಬರುತ್ತಿದ್ದಾರೆ ಎಂದು ಸರಕಾರಿ ದಾಖಲೆಗಳು ಹೇಳುತ್ತಿವೆ. ಒಟ್ಟಿನಲ್ಲಿ ಶ್ರೀಮಂತರ ಕೈಯಿಂದ ಕಿತ್ತು ಕೊಳ್ಳುವ ಭರಾಟೆಯಲ್ಲಿ ಬಡವರ ಹೊಟ್ಟೆಗೆ ಸರಕಾರ ಹೊಡೆಯದಿದ್ದರೆ ಸಾಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.