ಬೆಂಗಳೂರು: ವಿದ್ಯುತ್ ತಂತಿ ತಗುಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಸಂಜಯನಗರ ಮುಖ್ಯರಸ್ತೆಯಲ್ಲಿ ನಡೆದಿದೆ. 27 ವರ್ಷದ ದಿನಗೂಲಿ ಕಾರ್ಮಿಕರೊಬ್ಬ ಸಾವನ್ನಪ್ಪಿದ್ದಾರೆ. ಬೆಸ್ಕಾಂ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಮತ್ತಿಕೆರೆ ನಿವಾಸಿ ಕಿಶೋರ್ ಬಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ಹಾಗೂ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕಿಶೋರ್ ಬಲಿಯಾಗಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಮೃತದೇಹವನ್ನ ಬೆಸ್ಕಾಂ ಆವರಣದಲ್ಲಿ ಇಟ್ಟು ಕುಟುಂಬ ನ್ಯಾಯ ಕೇಳಿದೆ. ನಮಗೆ ಅನ್ಯಾಯವಾಗಿದೆ ಎಂದು ಕುಟುಂಬದವರು ಕಣ್ಣೀರು ಹಾಕಿದ್ದಾರೆ.
ಮೂಲತ: ಹೊಸಕೋಟೆ ಮೂಲದವನಾಗಿರುವ ಕಿಶೋರ್ ತಂಗಿ ಹಾಗೂ ಬಾವನ ಜೊತೆ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಈತ ಕೇವಲ 3 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ. ನಿನ್ನೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗ್ತಿದ್ದಾಗ ದುರಂತ ಸಂಭವಿಸಿದೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಷ್ಟರಲ್ಲಿ ಕೆಳಗೆ ಬಿದ್ದಿದ್ದ ಇಂಟರ್ನೆಟ್ ಕೇಬಲ್ ಸಂಪರ್ಕಕ್ಕೆ ಬಂದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಸ್ಕಾಂ ಹಾಗೂ ಖಾಸಗಿ ಕೇಬಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಸ್ಕಾಂನಿಂದ ವಿದ್ಯುತ್ ಪ್ರವಹಿಸಿದ್ಯಾ ಅಥವಾ ಖಾಸಗಿ ಕೇಬಲ್ ನಿಂದ ವಿದ್ಯುತ್ ಹರಿದಿದೆಯಾ, ಸದ್ಯ ವಿದ್ಯುತ್ ಪ್ರವಹಿಸಲು ಕಾರಣವಾದ ತಂತಿ ಯಾರಿಗೆ ಸೇರಿದ್ದು ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲು ಪೊಲೀಸರ ನಿರ್ಧಾರ ಮಾಡಿದ್ದಾರೆ. ತಡರಾತ್ರಿ ಎಫ್‍ಐಆರ್ ದಾಖಲು ಮಾಡಿರುವ ಪೊಲೀಸರು, ಇಂದು ಮೃತ ಕಿಶೋರ್ ಮರಣೋತ್ತರ ಪರೀಕ್ಷೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆಸಿದ್ದಾರೆ.