ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ ಮಾಡಿಕೊಂಡು, ತಮ್ಮ ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ ಸೇರಿದಂತೆ ಕಷ್ಟಕಾಲದಲ್ಲಿ ಬೇಕಾಗಬಹುದೆಂದು ಅಂಚೆ ಕಛೇರಿಯಲ್ಲಿ 100-200 ರೂ.ಗಳನ್ನು ಠೇವಣಿ ಕಟ್ಟುತ್ತಾರೆ. ಆದರೆ, ಜನರ ಬಳಿ ದುಡ್ಡು ಪಡೀತಿದ್ದ ಚಿಕ್ಕಬಳ್ಳಾಪುರ ನಗರದ ಅಂಚೆ ಪೇದೆ ಜಯರಾಜ್ ಎಂಬವನು ಜನರ ಖಾತೆಗೆ ಹಣವನ್ನು ಜಮೆ ಮಾಡದರೆ ಸ್ವಂತಕ್ಕೆ ಬಳಸಿಕೊಂಡಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಕಷ್ಟಕಾಲಕ್ಕೆ ಆಗಲಿ ಎಂದು ಪ್ರತಿದಿನ ತಾವು ದುಡಿದ ಹಣದಲ್ಲಿ ಬಡಮಧ್ಯಮ ವರ್ಗದ ಜನ ಒಂದಿಷ್ಟು ಅಂತ ಉಳಿತಾಯ ಮಾಡಿ ಠೇವಣಿ ಮಾಡುತ್ತಿದ್ದರು. ಹಣವನ್ನು ನೇರವಾಗಿ ಅಂಚೆಪೇದೆ ಜಯರಾಜ್ ಕೈಗೆ ಕೊಡುತ್ತಿದ್ದರು. ಬಡವರ ಬಳಿ ದುಡ್ಡು ಪಡೀತಿದ್ದ ಅಂಚೆಪೇದೆ ಜಯರಾಜ್ ಇವರಿಗೆ ನಕಲಿ ಸೀಲ್ ಸಹಿ ಮಾಡಿದ ರಸೀದಿ ನೀಡಿದ್ದಾನೆ.
ಜನರು ದಿನ ಹಣ ಕಟ್ಟುತ್ತಿದ್ದರೂ ಸಹ ಅವರ ಖಾತೆಯಲ್ಲಿ ಹಣವಿರುತ್ತಿರಲಿಲ್ಲ. ಅರೇ ಇದೇನಪ್ಪಾ ಅಂತ ಪೋಸ್ಟ್ಮ್ಯಾನ್ ಕರೆಸಿ ವಿಚಾರಣೆ ಮಾಡಿದಾಗ ಆಸಲಿ ಸತ್ಯ ತಿಳಿದುಬಂದಿದೆ. ಜಯರಾಜ್ ಕೈಗೆ ಹಣ ಕಟ್ಟಿದ್ದ ಜನರು ಕಷ್ಟ ಇದೆ ಎಂದು ಅಂಚೆ ಕಛೇರಿಯಲ್ಲಿ ಹಣವನ್ನು ಹಿಂಪಡೆಯಲು ಹೋದರೆ ತಮ್ಮ ಖಾತೆಗೆ ಜಮೆ ಆಗದಿರುವ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.
ಅಂಚೆ ಪೇದೆ ಜಯರಾಜ್ ಜನರ ಖಾತೆಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ. ಜಯರಾಜ್ ತಮ್ಮ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದರಿಂದ ಈಗ ದಿಕ್ಕು ತೋಚದಂತಾಗಿ ಜನರು ಆಕ್ರೋಶ ಹೊರಹಾಕಿದ್ದಾರೆ.
30 ಜನರ ಬಳಿ ಸರಿಸುಮಾರು 13 ಲಕ್ಷ ಹಣವನ್ನ ಸ್ವಂತಕ್ಕೆ ಬಳಸಿಕೊಂಡಿರೋ ಬಗ್ಗೆ ಜಯರಾಜ್ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಜಮೀನು ಮಾರಿ ಹಣ ವಾಪಾಸ್ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾನೆ. ಇತ್ತ ವಂಚನೆ ಮಾಡಿದ ಜಯರಾಜ್ನನ್ನು ಇಲಾಖೆ ಅಮಾನತು ಮಾಡಿದ್ದು, ತಮ್ಮ ದುಡ್ಡು ಅದ್ಯಾವಾಗ ಸಿಗುತ್ತೋ ಇಲ್ವೋ ಅಂತ ಬಡ ಜನರು ಅಂಚೆ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿ ಹಣಕ್ಕಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.