ಬೆಂಗಳೂರು: ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಬರೆಹಗಳ ಸಂಕಲನವಾದ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಾಳೆ(ಏಪ್ರಿಲ್ 16) ಬೆಂಗಳೂರಿನ ಗಾಂಧಿಭವನದಲ್ಲಿ ಜರುಗಲಿದೆ.
ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ತದನಂತರ ‘ಓದುಗರ ಒಡೆತನದ ಪತ್ರಿಕೆ’ ಕಟ್ಟುವ ಆಶಯದಲ್ಲಿ ‘ಮುಂಗಾರು’ ಎಂಬ ಪತ್ರಿಕೆ ಸ್ಥಾಪಿಸಿದ್ದರು. ಸ್ಥಾಪಿತ ಮೇಲ್ವರ್ಗದ ಹಿತಾಸಕ್ತಿಯುಳ್ಳ ಪತ್ರಿಕೆಗಳಿಗೆ ಎದುರಾಗಿ ಜನಪರ ಉದ್ದೇಶ ಮತ್ತು ಕಾಳಜಿ ಹೊಂದಿದ್ದ ಮುಂಗಾರು ಪತ್ರಿಕೆ ಅಲ್ಪಕಾಲದಲ್ಲಿಯೇ ಖ್ಯಾತಿ ಗಳಿಸಿತ್ತು. ಹಾಗಾಗಿ ವಡ್ಡರ್ಸೆಯವರು ಓದುಗರ ಸಂಪಾದಕ ಎಂದೇ ಕರೆಯಲ್ಪಡುತ್ತಿದ್ದರು.
ಅವರ ಅಮೂಲ್ಯ ಬರೆಹಗಳನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ಸಂಪಾದಿಸಿ ‘ಬೇರೆಯೇ ಮಾತು’ ಕೃತಿ ರೂಪ ನೀಡಿದ್ದಾರೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.
ಬೆಳಿಗ್ಗೆ 11 ಗಂಟೆಗೆ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಜೊತೆಗೂಡಿ ಆಯೋಜಿಸಿವೆ. ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ, ಲೇಖಕರಾದ ಕೆ.ಪುಟ್ಟಸ್ವಾಮಿ, ಪುಸ್ತಕದ ಸಂಪಾದಕರಾದ ದಿನೇಶ್ ಅಮಿನ್ ಮಟ್ಟು, ಜನನುಡಿ ಬಳಗದ ಮುನೀರ್ ಕಾಟಿಪಳ್ಳ ಮತ್ತು ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುತ್ತಾರೆ.