ನಾ ದಿವಾಕರ
ಭಾರತ ಇಂದು ಕವಲು ಹಾದಿಯಲ್ಲಿದೆ. ಡಿಜಿಟಲೀಕರಣದ ಯುಗದಲ್ಲಿ ದೇಶದ ಸಕಲ ಸಂಪನ್ಮೂಲಗಳೂ ಮಾರುಕಟ್ಟೆಯ ವಶಕ್ಕೊಳಪಟ್ಟು, ಶೋಷಿತ ಸಮುದಾಯಗಳ ಮರುವಸಾಹತೀಕರಣ ಪ್ರಕ್ರಿಯೆಗೆ ಪೂರಕವಾದ ಆರ್ಥಿಕ ನೀತಿಗಳನ್ನು, ಸಾಮಾಜಿಕ ನಿಯಮಗಳನ್ನು ಮತ್ತು ಸಾಂಸ್ಕೃತಿಕ ಸಂಹಿತೆಗಳನ್ನು ರೂಪಿಸಲಾಗುತ್ತಿದೆ. ಕಾರ್ಪೋರೇಟ್ ಬಂಡವಾಳದ ನವ ವಸಾಹತು ಯುಗದಲ್ಲಿ ಭಾರತದ ಅಸಂಖ್ಯಾತ ಸಮುದಾಯಗಳು ತಮ್ಮ ಸುಸ್ಥಿರ ನೆಲೆಯನ್ನು ಕಳೆದುಕೊಂಡು, ಜಾತಿ ಪೀಡಿತ ಸಾಮಾಜಿಕ ಚೌಕಟ್ಟಿನೊಳಗೇ ಬಂದಿಸಲ್ಪಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಈ ಅಪಾಯವನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡುವ ಮಾರ್ಗಗಳೇನು ? ಅಂಬೇಡ್ಕರ್ ಜಯಂತಿಯಂದು ನಾವು ಮಾಡಬೇಕಿರುವ ವಾಗ್ದಾನ ಏನು? ಮುಂದೆ ಓದಿ
ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂದು ತನ್ನ ಕಳೆದುಕೊಂಡ ಮೌಲ್ಯಗಳನ್ನು ಹುಡುಕುವುದರಲ್ಲಿ ತೊಡಗಿದೆ. ಹಾಗೆಯೇ ಕ್ರಮೇಣ ಶಿಥಿಲವಾಗುತ್ತಿರುವ ಪ್ರಜಾಪ್ರಭುತ್ವದ ಮೂಲ ನೆಲೆಗಳನ್ನು ಸಂರಕ್ಷಿಸುವುದರಲ್ಲಿ ತೊಡಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಅತಿ ರಂಜಿತ ವ್ಯಾಖ್ಯಾನಗಳು ಇಂದು ಹಳಸಲಾಗಿದ್ದು, ಪ್ರಜೆ ಮತ್ತು ಪ್ರಭುವಿನ ನಡುವೆ ಕಂದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಳಮಟ್ಟದ ಸಾಮಾನ್ಯ ಪ್ರಜೆಯಿಂದ ಬಹುದೂರದಲ್ಲಿ ಉಪ್ಪರಿಗೆಯ ಮೇಲೆ ಕುಳಿತಿರುವ ಆಳುವವರ ದೃಷ್ಟಿಯಲ್ಲಿ ಜನಸಾಮಾನ್ಯರು ಅಧಿಕಾರ ರಾಜಕಾರಣಕ್ಕೆ ಅವಶ್ಯವಾದ ವಾಹಿನಿಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಬೇಕಾದ ಸಂದೇಶ ವಾಹಕರಾಗಿಯೋ ಅಥವಾ ಕಾರ್ಯವಾಹಕರಾಗಿಯೋ ಕಾಣುತ್ತಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶ್ರೇಷ್ಠತೆ ಮತ್ತು ಪಾರಮ್ಯ ಮೆರೆಯುವ ವೈದಿಕಶಾಹಿಯು ಅಸ್ಪೃಶ್ಯ ಸಮುದಾಯವನ್ನು ನೋಡುವ ರೀತಿಯಲ್ಲೇ ಇಂದು ಅಧಿಕಾರ ರಾಜಕಾರಣದ ವಾರಸುದಾರರು ತಳಸಮುದಾಯಗಳ ಬಡಜನತೆಯನ್ನು ನೋಡುತ್ತಿದ್ದಾರೆ. “ ಸಿರಿತನ ದೈವೀಕ ವರ ಬಡತನ ದೇವರ ಶಾಪ” ಎನ್ನುವ ಪ್ರಾಚೀನ ನಂಬಿಕೆಯನ್ನು ಇಂದಿಗೂ ಅಕ್ಷರಶಃ ಉಳಿಸಿಕೊಂಡಿರುವ ಭಾರತದಲ್ಲಿ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಗೆ ಬಡತನ ಎನ್ನುವುದು ಕೇವಲ ತಾತ್ಕಾಲಿಕವಾಗಿ ನೀಗಿಸಬೇಕಾದ ಒಂದು ಸಮಸ್ಯೆಯಾಗಿ ಮಾತ್ರವೇ ಕಾಣುತ್ತಿದೆಯೇ ಹೊರತು ಶಾಶ್ವತವಾಗಿ ನಿವಾರಿಸಬೇಕಾದ ಸಾಮಾಜಿಕ ಸವಾಲಾಗಿ ಕಾಣುತ್ತಿಲ್ಲ.
ಈ ಸಂದಿಗ್ಧತೆಯ ನಡುವೆಯೇ ಭಾರತ ಡಾ ಬಿ ಆರ್ ಅಂಬೇಡ್ಕರ್ ಅವರ 131ನೆಯ ಜನ್ಮದಿನವನ್ನು ಅದ್ದೂರಿಯಿಂದ ಆಚರಿಸುತ್ತಿದೆ. ದಲಿತ ಸಮುದಾಯದ ಪಾಲಿಗೆ, ಇಂದಿಗೂ ಅಸ್ಪೃಶ್ಯತೆಯ ಅಪಮಾನವನ್ನು ಅನುಭವಿಸುತ್ತಿರುವ ತಳಸಮುದಾಯಗಳ ಪಾಲಿಗೆ ವಿಮೋಚಕನಾಗಿ ಕಾಣುವ ಅಂಬೇಡ್ಕರ್ ಸಹಜವಾಗಿಯೇ ಹತಾಶ ಮನಸುಗಳಿಂದ ಆರಾಧನೆಗೊಳಗಾಗುತ್ತಿದ್ದಾರೆ. ತಮ್ಮ ದೈನಂದಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಅಧಿಕಾರಸ್ಥ ರಾಜಕಾರಣಿಗಳತ್ತ ನೋಡಬೇಕಾದ ಬಡ ಜನತೆ, ಸ್ವಾತಂತ್ರ್ಯ ಬಂದು 75 ವರ್ಷಗಳು ಗತಿಸಿದ್ದರೂ, ಇಂದಿಗೂ ಸಂವಿಧಾನದತ್ತಲೇ ನೋಡುತ್ತಿದ್ದಾರೆ. ಜಾತಿ ತಾರತಮ್ಯ, ದೌರ್ಜನ್ಯ, ಅಸ್ಪೃಶ್ಯತೆಯ ಅಪಮಾನ ಮತ್ತು ಹಸಿವು-ಬಡತನ ಕೋಟ್ಯಂತರ ಜನರನ್ನು ಕಾಡುತ್ತಿರುವ ಸಂದರ್ಭದಲ್ಲಿ ಆಳುವ ವರ್ಗಗಳು ದೇಶದ ಸಂಪತ್ತನ್ನು ಮಾರುಕಟ್ಟೆಯ ಅಧಿಪತಿಗಳಿಗೆ ಪರಭಾರೆ ಮಾಡುತ್ತಾ, ಕೋಟ್ಯಧಿಪತಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಹೆಚ್ಚು ಆಸ್ಥೆ ವಹಿಸುತ್ತಿವೆ. ಉಪ್ಪರಿಗೆಯ ಮೇಲಿನ ಸಿರಿವಂತಿಕೆಯನ್ನು ನೋಡಲೂ ಸಾಧ್ಯವಾಗದಂತೆ ತಳಸಮುದಾಯಗಳ ಕಣ್ಣಿನ ಮುಂದೆ ಜಾತಿ, ಮತ, ಧರ್ಮ ಮತ್ತು ನಂಬಿಕೆಗಳ ಪರದೆಯನ್ನು ಹರಡಲಾಗುತ್ತಿದೆ.
ಈ ಸಂದರ್ಭದಲ್ಲಿ ಆಳುವ ವರ್ಗಗಳಿಗೆ ಡಾ ಅಂಬೇಡ್ಕರ್ ಮತ್ತು ಅವರ ತಾತ್ವಿಕ ನೆಲೆಗಳು ಎರಡು ನೆಲೆಯಲ್ಲಿ ಆಪ್ತವಾಗುತ್ತವೆ. ಮೊದಲನೆಯದು ಆಡಳಿತ ವ್ಯವಸ್ಥೆಯ ವಾರಸುದಾರಿಕೆಗೆ ಅಗತ್ಯವಾದ ಪ್ರಜಾತಂತ್ರ ವ್ಯವಸ್ಥೆಯ ಸರಕುಗಳನ್ನು ಇದು ಒದಗಿಸುತ್ತದೆ. ಸಂವಿಧಾನರೀತ್ಯಾ ನೀಡಲಾಗುವ ಸೌಲಭ್ಯಗಳು, ಸವಲತ್ತುಗಳು ಮತ್ತು ಅನೇಕ ಜನೋಪಯೋಗಿ ಯೋಜನೆಗಳು ಅಂಬೇಡ್ಕರ್ ಅವರನ್ನು ಆರಾಧಿಸಲು ಬೇಕಾದ ಪರಿಕರಗಳನ್ನು ಒದಗಿಸುತ್ತವೆ. ತಮ್ಮ ಆಡಳಿತ ನೀತಿಗಳ ಮೂಲಕ ಅಂಬೇಡ್ಕರ್ ಆಶಿಸಿದ ಸಮ ಸಮಾಜದ ಕನಸನ್ನು ಸಾಕಾರಗೊಳಿಸಲು, ತುಳಿತಕ್ಕೊಳಗಾದ ಜನತೆಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವುದು ಅಧಿಕಾರ ರಾಜಕಾರಣದ ವಾರಸುದರಾರರಿಗೆ ಅನಿವಾರ್ಯವೂ ಆಗುತ್ತದೆ. ಎರಡನೆಯದಾಗಿ, ಅಂಬೇಡ್ಕರ್ ಆಶಿಸಿದಂತೆ ಸಮ ಸಮಾಜವನ್ನು ನಿರ್ಮಿಸಲು ಅಗತ್ಯವಾದ ಆಡಳಿತಾತ್ಮಕ ನೀತಿಗಳನ್ನು ಜಾರಿಗೊಳಿಸುವ ಮೂಲಕ ಅವಕಾಶ ವಂಚಿತ ಸಮುದಾಯಗಳಲ್ಲಿ ಭರವಸೆಯನ್ನು ಮೂಡಿಸಲಾಗುತ್ತದೆ. ರಾಜಕೀಯ ಮೀಸಲಾತಿ ಮತ್ತು ಉದ್ಯೋಗ-ಶಿಕ್ಷಣ ವಲಯದಲ್ಲಿ ನೀಡಲಾಗುವ ಮೀಸಲಾತಿ ಸೌಲಭ್ಯಗಳು ಈ ಭರವಸೆಗೆ ಪೂರಕವಾಗಿಯೇ ಇರುತ್ತವೆ.
ಆದರೆ ಅಂಬೇಡ್ಕರ್ ಆಶಿಸಿದ ಈ ಸಾಂವಿಧಾನಿಕ ಮಾರ್ಗಗಳು ಹೇಗೆ ಶಿಥಿಲವಾಗುತ್ತಿವೆ ಎನ್ನುವುದನ್ನು ಗಮನಿಸುವುದು ನಮ್ಮ ಈ ಹೊತ್ತಿನ ಆದ್ಯತೆಯಾಗಬೇಕಿದೆ. ಭಾರತ ಎತ್ತ ಸಾಗುತ್ತಿದೆ ? ಈ ಪ್ರಶ್ನೆ ಈ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಕಾಡುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಸ್ವಾತಂತ್ರ್ಯ ಪೂರ್ವದ ಕನಸುಗಳು ಹಂತಹಂತವಾಗಿ ಮರೆಯಾಗುತ್ತಾ, ಗಾಂಧಿ, ನೆಹರೂ, ಪಟೇಲ್, ಅಂಬೇಡ್ಕರ್, ಮೌಲಾನಾ ಅಜಾದ್ ಮುಂತಾದ ನೇತಾರರು ಭ್ರಮಿಸಿದ್ದ ಭಾರತ ಇಂದು ಬದಲಾಗುತ್ತಿದೆ. ತಮ್ಮ ಸಮಾನತೆಯ ಕನಸು ಐವತ್ತು ವರ್ಷಗಳಲ್ಲಾದರೂ ಸಾಕಾರಗೊಳ್ಳುತ್ತದೆ ಎಂಬ ಭರವಸೆಯೊಂದಿಗೇ ಒಂದು ಜಾತ್ಯತೀತ, ಸಮಾಜವಾದಿ ಸಂವಿಧಾನವನ್ನು ರೂಪಿಸಿದ ಡಾ ಅಂಬೇಡ್ಕರ್ ಶಿಕ್ಷಣದ ಮೂಲಕವೇ ಜನ ಜಾಗೃತಿ ಸಾಧ್ಯ ಎಂದು ನಂಬಿದ್ದರು. ಭಾರತದ ಬಹುತ್ವ ಸಂಸ್ಕೃತಿಯನ್ನು ರಕ್ಷಿಸುವ ಮೂಲಕವೇ ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ನಂಬಿದ್ದರು. ಸಾಂಸ್ಕೃತಿಕ ವೈವಿಧ್ಯ ಮತ್ತು ಭಾಷಾ ವೈವಿಧ್ಯತೆಯ ಸಮನ್ವಯದೊಂದಿಗೆ ಎಲ್ಲ ಜಾತಿ-ಮತ-ಪಂಥಗಳ ಜನತೆಯ ನಡುವೆ ಭ್ರಾತೃತ್ವವನ್ನು ಸಾಧಿಸುವ ಮೂಲಕವೇ ಈ ಸಮ ಸಮಾಜವನ್ನು ನಿರ್ಮಿಸುವ ಧ್ಯೇಯದೊಂದಿಗೆ ಡಾ ಅಂಬೇಡ್ಕರ್ ಸಂವಿಧಾನವನ್ನು ರೂಪಿಸಿದ್ದರು. ಆದರೆ ಇಂದು ಶಿಕ್ಷಣ ವ್ಯವಸ್ಥೆಯನ್ನೇ ಬಹುತ್ವ ಸಂಸ್ಕೃತಿಯ ನಾಶಕ್ಕೆ ವೇದಿಕೆಯನ್ನಾಗಿ ರೂಪಿಸಲಾಗುತ್ತಿದೆ.
ಇಂದು ಅಂಬೇಡ್ಕರ್ ಅವರ 131ನೆಯ ಜನ್ಮದಿನದ ಸಂದರ್ಭದಲ್ಲಿ ನಾವು ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಕೇಂದ್ರೀಕರಿಸಬೇಕಿದೆ. ಸಂಪತ್ತು, ಸಂಪನ್ಮೂಲ, ಸವಲತ್ತುಗಳು ಮತ್ತು ಅನುಕೂಲತೆಗಳ ಸಮಾನ ವಿತರಣೆ ನ್ಯಾಯಯುತವಾಗಿದ್ದಲ್ಲಿ ಮಾತ್ರವೇ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಜನತೆಗೆ ಒದಗಿಸುವುದೆಂದರೆ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳು ಮತ್ತು ಆರ್ಥಿಕ ಪ್ರಗತಿಯಲ್ಲಿ ಸಮಾನ ಅನುಕೂಲತೆಗಳನ್ನು ಒದಗಿಸುವುದೇ ಆಗಿರುತ್ತದೆ. ಶತಮಾನಗಳ ಕಾಲ ಅವಕಾಶವಂಚಿತರಾಗಿಯೇ ಇರುವ ಕೋಟ್ಯಂತರ ಸಂಖ್ಯೆಯ ಜನಸಮುದಾಯಗಳು ಇಂದಿಗೂ ತಮ್ಮ ಅವಕಾಶಗಳಿಗಾಗಿ ಹಾತೊರೆಯುತ್ತಿರುವುದನ್ನು ನೋಡಿದರೆ ನಾವು ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿ ನಡೆದುಕೊಂಡಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ. ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಲು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಸಾಧಿಸುವುದು ಸಮಾಜದ ಪರಮೋಚ್ಛ ಗುರಿಯಾಗುವುದು ಅತ್ಯವಶ್ಯ ಎಂದು ಅಂಬೇಡ್ಕರ್ ಪದೇ ಪದೇ ಹೇಳುತ್ತಾರೆ. ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ, ಮತ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಹೋಗಲಾಡಿಸಲು ಅಂಬೇಡ್ಕರ್ ಅವರ ಧ್ಯೇಯವಾಕ್ಯ ಪ್ರೇರಣೆಯಾಗಬೇಕಿತ್ತಲ್ಲವೇ ?
ಆದರೆ ಮತ್ತದೇ ಪ್ರಶ್ನೆ ಕಾಡುತ್ತದೆ, ಭಾರತ ಎತ್ತ ಸಾಗುತ್ತಿದೆ ? ಏಕೆಂದರೆ ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿವೆ. ದೇಶದ ಸಂಪತ್ತಿನ ಸಮಾನ ವಿತರಣೆಗೆ ಬದಲಾಗಿ ಸಂಪತ್ತಿನ ಕ್ರೋಢೀಕರಣ ಮತ್ತು ಸಂಪನ್ಮೂಲಗಳ ವಸಾಹತೀಕರಣಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಏಳು ದಶಕಗಳ ಕಾಲ ಈ ದೇಶದ ದುಡಿಯುವ ಜನತೆ ಕಟ್ಟಿದ ಆಶಾಗೋಪುರಗಳು ಇಂದು ಒಂದೊಂದಾಗಿ ಕುಸಿಯುತ್ತಿವೆ. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಹಂತವನ್ನೂ ದಾಟಿ ಇಂದು ನಗದೀಕರಣದತ್ತ ದೇಶ ಸಾಗುತ್ತಿದೆ. ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳು ಸಂವಿಧಾನದ ಆಶಯದಂತೆ ಇಂದಿಗೂ ಲಭ್ಯವಾಗಿದ್ದರೂ, ಅರ್ಥವ್ಯವಸ್ಥೆಯ ಎಲ್ಲ ವಲಯಗಳನ್ನೂ ನಗದೀಕರಣಗೊಳಿಸುತ್ತಿರುವುದರಿಂದ ಉದ್ಯೋಗಾವಕಾಶಗಳೇ ಇಲ್ಲವಾಗುತ್ತಿದೆ. ರಸ್ತೆ, ರೈಲು ಮತ್ತು ವಿಮಾನ ಸಾರಿಗೆ, ದೂರ ಸಂಪರ್ಕ, ಉತ್ಪಾದನಾ ವಲಯ, ಖನಿಜ ಸಂಪತ್ತು, ಅರಣ್ಯ ಸಂಪತ್ತು, ಕೃಷಿ ವಲಯ ಮತ್ತು ಜಲಸಂಪನ್ಮೂಲಗಳು ಇನ್ನು ಕೆಲವೇ ವರ್ಷಗಳಲ್ಲಿ ನಗದೀಕರಣಗೊಂಡು ಖಾಸಗಿ ಸ್ವತ್ತುಗಳಾಗುತ್ತವೆ. ಭೂಮಿ ನಮ್ಮ ಹಕ್ಕು ಎಂಬ ದನಿ ಕ್ಷೀಣಿಸುತ್ತಿರುವಂತೆಯೇ ಭೂಮಿಯಿಂದ ಒದಗುವ ನೈಸರ್ಗಿಕ ಹಾಗೂ ಮಾನವ ಶ್ರಮದ ಸರಕುಗಳೂ ಸಹ ಕಾರ್ಪೋರೇಟ್ ಮಾರುಕಟ್ಟೆಯ ಪಾಲಾಗುತ್ತವೆ.
ಇಂದಿಗೂ ಈ ದೇಶದ ಶೇ 60ರಷ್ಟು ಜನರು ಭೂಮಿಯನ್ನೇ ನಂಬಿ ಬದುಕುತ್ತಿರುವುದು ವಾಸ್ತವ. ಕೃಷಿ ಸಂಬಂಧಿತ ಕಸುಬುಗಳು ಮತ್ತು ವೃತ್ತಿಗಳು ಕೋಟ್ಯಂತರ ಜನರ ಜೀವನೋಪಾಯದ ಮಾರ್ಗಗಳಾಗಿವೆ. ಅಭಿವೃದ್ಧಿಯ ನೆಪದಲ್ಲಿ, ಆಧುನಿಕ ನಗರೀಕರಣದ ಹೆಸರಿನಲ್ಲಿ ಭೂಮಿ ಇಂದು ಮಾರುಕಟ್ಟೆ ಸರಕಿನಂತೆ ಮುಕ್ತ ಮಾರುಕಟ್ಟೆಯಲ್ಲಿ ಹರಾಜಾಗುತ್ತಿದೆ. ಸಹಜವಾಗಿಯೇ ಕೃಷಿ ಆಧಾರಿತ ಜನಸಮುದಾಯಗಳು ತಮ್ಮ ಜೀವನ ನಿರ್ವಹಣೆಗೆ ನಗರಗಳತ್ತ ವಲಸೆ ಹೋಗಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲೆಂದೇ ಭೂ ಸುಧಾರಣಾ ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ಭೂಸ್ವಾಧೀನಕ್ಕೆ ಸುಲಭ ಮಾರ್ಗಗಳನ್ನು ಕಲ್ಪಿಸಲಾಗುತ್ತಿದೆ. ಔದ್ಯಮಿಕ ವಲಯದಲ್ಲಿ ಉದ್ಯೋಗಾವಕಾಶಗಳಿಲ್ಲದೆ ನಗರೀಕರಣಗೊಳ್ಳುವ ತಳಸಮುದಾಯಗಳು ಶ್ರೇಣೀಕೃತ ಜಾತಿ ವ್ಯವಸ್ಥೆಯ ಎಲ್ಲ ತಾರಮತ್ಯಗಳ ನಡುವೆಯೇ ತಮ್ಮ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಜಾತಿ ವ್ಯವಸ್ಥೆಯ ಎಲ್ಲ ರೀತಿಯ ತಾರತಮ್ಯ ಮತ್ತು ಅಪಮಾನಗಳು ನಗರಗಳಲ್ಲೂ ಜೀವಂತವಾಗಿರುವುದರಿಂದ, ನಗರೀಕರಣಗೊಳ್ಳುವ ತಳಸಮುದಾಯಗಳು ತಮ್ಮ ಸಾಮಾಜಿಕ ಹೊರಗುಳಿಯುವಿಕೆಯೊಂದಿಗೇ ಜೀವನ ನಿರ್ವಹಿಸಬೇಕಾಗುತ್ತದೆ.
ಇದಕ್ಕೆ ಪೂರಕವಾಗಿಯೇ ಇಡೀ ಭಾರತದ ಸಾಂಸ್ಕೃತಿಕ ವಲಯವನ್ನು ವೈದಿಕಶಾಹಿಯು ಆಕ್ರಮಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗ್ರಾಮೀಣ ವಲಯದ ತಳಸಂಸ್ಕೃತಿಯನ್ನು ಪ್ರತಿನಿಧಿಸುವ ದೈವಾರಾಧನೆಗಳು, ಜಾತ್ರೆಗಳು ಮತ್ತು ಪೂಜಾ ವಿಧಾನಗಳೂ ಸಹ ಕ್ರಮೇಣ ವೈದಿಕಶಾಹಿಗೆ ಬಲಿಯಾಗುತ್ತಿದ್ದು, ಹಿಂದೂ ಮೂಲಭೂತವಾದಿ ಸಂಘಟನೆಗಳ ಮಾಂಸಾಹಾರ ನಿಷೇಧ ಕಾರ್ಯಾಚರಣೆಯ ಮೂಲಕ ತಳಸಂಸ್ಕೃತಿಯ ಆಹಾರ ಪದ್ಧತಿಯೂ ದಾಳಿಗೊಳಗಾಗುತ್ತಿದೆ. ಶತಮಾನಗಳ ಅಸ್ಪೃಶ್ಯತೆಯ ನಡುವೆಯೂ ಜಾತಿ-ಮತಗಳ ಗೋಡೆಗಳನ್ನು ದಾಟಿ ಸಮಸ್ತ ಜನಸಮುದಾಯಗಳನ್ನು ಒಂದುಗೂಡಿಸುತ್ತಿದ್ದ ಜಾತ್ರೆಗಳು ಇಂದು ಮತೀಯವಾದದ ದಾಳಿಗೆ ಬಲಿಯಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮಾಂಸಾಹಾರವನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ಮೂಲಕ ತಳ ಸಮುದಾಯಗಳ ಆಹಾರ ಪದ್ಧತಿಗೆ ಧಕ್ಕೆ ಉಂಟಾಗುವುದೇ ಅಲ್ಲದೆ ಜಾನುವಾರು, ಸಾಕುಪ್ರಾಣಿಗಳ ಸಾಕಾಣಿಕೆಯನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಕುಟುಂಬಗಳು ಬೀದಿಪಾಲಾಗುತ್ತವೆ. ಮೇಲ್ನೋಟಕ್ಕೆ ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ಅಭಿಯಾನದಂತೆ ಕಂಡುಬಂದರೂ, ಮೂಲತಃ ಇದು ತಳಸಮುದಾಯಗಳ ಜೀವನೋಪಾಯಕ್ಕೆ ಸಂಚಕಾರ ತರುವ ಒಂದು ಪ್ರಯತ್ನವಾಗಿದೆ. ಇಲ್ಲಿ ಕಂಡುಬರುವ ಧರ್ಮರಕ್ಷಣೆ ಎಂಬ ಸೂಕ್ಷ್ಮ ಪರದೆಯನ್ನು ಸರಿಸಿ, ವಾಸ್ತವವನ್ನು ಗ್ರಹಿಸದೆ ಹೋದರೆ, ಶೋಷಿತ ಸಮುದಾಯಗಳು ಪುನಃ ತಮ್ಮ ಪರಾವಲಂಬಿ ಬದುಕಿಗೆ ಮರಳಬೇಕಾಗುತ್ತದೆ.
ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಂಪತ್ತು ಮತ್ತು ಸಂಪನ್ಮೂಲಗಳ ಸಮಾನ ವಿತರಣೆ ಮತ್ತು ಸಮಾನ ಅವಕಾಶಗಳು ಮುಖ್ಯವಾದ ಅಂಶಗಳಾಗಿವೆ. ಆರ್ಥಿಕ ನೆಲೆಯಲ್ಲಿ ಸಂಪತ್ತಿನ ಕ್ರೋಢೀಕರಣವಾಗುತ್ತಿರುವುದರೊಂದಿಗೇ, ತಳಮಟ್ಟದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಅನುಕೂಲತೆಗಳನ್ನೂ, ಅವಕಾಶಗಳನ್ನೂ ಕಸಿದುಕೊಳ್ಳುವ ನಿಟ್ಟಿನಲ್ಲಿ ನವ ಭಾರತದ ಆಡಳಿತ ನೀತಿಗಳು ರೂಪುಗೊಳ್ಳುತ್ತಿವೆ. ನೆಲ-ಜಲ-ಅರಣ್ಯ ಸಂಪತ್ತಿನ ಮೇಲೆ ತಮ್ಮ ಹಕ್ಕನ್ನು ಕಳೆದುಕೊಳ್ಳಲಿರುವ ಗ್ರಾಮೀಣ ಜನತೆ ಸಾಮಾಜಿಕ ಅಸಮಾನತೆಯೊಂದಿಗೇ ಆರ್ಥಿಕ ಹೊರಗುಳಿಯುವಿಕೆಯನ್ನೂ ಅನುಭವಿಸಬೇಕಾಗುತ್ತದೆ. ಸಾಮಾಜಿಕ ಅಂತರ ಮತ್ತು ತಾರತಮ್ಯಗಳನ್ನು ಜೀವಂತವಾಗಿರಿಸಲು ಬಳಸಲಾಗುವ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಾರ್ಗಗಳು ಈ ಹೊರಗುಳಿಯುವಿಕೆಯನ್ನು ಮರೆಮಾಚುವ ತಂತ್ರಗಳಾಗಿಯೂ ಬಳಕೆಯಾಗುತ್ತವೆ. ಹಾಗಾಗಿಯೇ ಇಂದು ನಗರೀಕರಣಕ್ಕೊಳಗಾದ ತಳಸಮುದಾಯದ ಹಿತವಲಯಗಳಿಗೆ ತಮ್ಮದೇ ಸಮುದಾಯದ ಜನತೆ ಬಹಿಷ್ಕೃತರಂತೆ ಬದುಕುತ್ತಿರುವುದು ಗೋಚರಿಸುತ್ತಿಲ್ಲ. ಸಾಂವಿಧಾನಿಕ ಸವಲತ್ತುಗಳ ಫಲಾನುಭವಿಗಳಾಗಿರುವ ಮಧ್ಯಮ ವರ್ಗದವರು ಹೆಚ್ಚು ಹೆಚ್ಚಾಗಿ ಹಿಂದುತ್ವದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಅಪಾಯವನ್ನು ಸಮರ್ಪಕವಾಗಿ ಗ್ರಹಿಸದೆ ಹೋದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಅಪಹಾಸ್ಯಕ್ಕೀಡಾಗುತ್ತದೆ.
ಈ ಕಾರಣಕ್ಕಾಗಿಯೇ ಡಾ ಅಂಬೇಡ್ಕರ್ ಸಾಮಾಜಿಕ ನ್ಯಾಯ ಸಾಧಿಸಲು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಬಹುಮುಖ್ಯವಾದ ಅಂಶಗಳೆಂದು ಒತ್ತಿ ಹೇಳುತ್ತಾರೆ. ಭಾರತದ ಸಂವಿಧಾನವೂ ಇದೇ ಆಶಯದೊಂದಿಗೆ ರಚಿತವಾಗಿದೆ. ಆದರೆ ಇಂದು ಈ ಮೂರೂ ಧ್ಯೇಯಗಳು ಅಪಾಯಕ್ಕೊಳಗಾಗಿವೆ. ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಮರೀಚಿಕೆಯಾಗುತ್ತಿರುವಂತೆಯೇ, ಭಾರತದ ಸಮಾಜವನ್ನು ಶತಮಾನಗಳಿಂದ ಬಂಧಿಸಿರುವ ಭ್ರಾತೃತ್ವದ ಸ್ನೇಹ ಸಂಕೋಲೆಗಳನ್ನು ಭಂಜಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಭ್ರಾತೃತ್ವದ ಮೂಲ ಸೆಲೆ ಇರುವುದು ಭಾರತದ ಬಹುತ್ವ ಸಂಸ್ಕೃತಿಯಲ್ಲಿ ಮತ್ತು ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿಯ ನಿರ್ಮೂಲನೆಯಲ್ಲಿ. ಆದರೆ ಇಂದು ಅಸ್ಪೃಶ್ಯತೆ ರೂಪಾಂತರಗೊಂಡು ಮತ್ತೆಮತ್ತೆ ತಲೆದೋರುತ್ತಿದೆ. ಭೌತಿಕವಾಗಿ ಕಾಣದಿರುವ ಅಸ್ಪೃಶ್ಯತಾಚರಣೆಯನ್ನು ಬೌದ್ಧಿಕವಾಗಿ ಕಾಣಬಹುದಾದ ಹಲವಾರು ಪ್ರಸಂಗಗಳನ್ನು ಗಮನಿಸುತ್ತಲೇ ಬಂದಿದ್ದೇವೆ. ಸಾಂವಿಧಾನಿಕವಾಗಿ ನಿಷಿದ್ಧವಾದ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳು ಸಾಮಾಜಿಕ ವಲಯದಲ್ಲಿ ಯಾವುದೇ ಪಾಪಭೀತಿ ಇಲ್ಲದೆಯೇ ವ್ಯಕ್ತವಾಗುತ್ತಿದೆ. ಆಹಾರ ಪದ್ಧತಿಯ ಮೇಲಿನ ದಾಳಿಯೂ ಇದರ ಒಂದು ಭಾಗ ಎನ್ನುವುದನ್ನು ಗಮನಿಸಬೇಕಿದೆ.
ಹಿಂದೂ ಬಹುಸಂಖ್ಯಾವಾದಕ್ಕೆ ಬೆನ್ನೆಲುಬಾಗಿ ನಿಂತಿರುವ ಸಂವಿಧಾನದ ಫಲಾನುಭವಿಗಳು, ಜನಪ್ರತಿನಿಧಿಗಳು, ಈ ದಾಳಿಗಳಿಗೆ ವಿಮುಖರಾಗಿ ತಮ್ಮದೇ ಆದ ಹಿತವಲಯಗಳ ಹಿತರಕ್ಷಕರಾಗಿರುವುದರಿಂದಲೇ ಇಂದು ಬಹುತ್ವದ ನೆಲೆಗಳು ಶಿಥಿಲವಾಗತೊಡಗಿವೆ. ಸಂವಿಧಾನದ ಮೂಲ ಆಶಯವಾದ ಭ್ರಾತೃತ್ವಕ್ಕೆ ಬಹುತ್ವ ಸಂಸ್ಕೃತಿಯೇ ಬುನಾದಿ ಎಂಬ ವಾಸ್ತವವನ್ನು ಅರಿತಿದ್ದೂ, ಈ ಬಹುತ್ವವನ್ನು ಶಿಥಿಲಗೊಳಿಸುವ ಬಹುಸಂಖ್ಯಾವಾದದ ಮತಾಂಧತೆಯೊಡನೆ ಗುರುತಿಸಿಕೊಳ್ಳುವ ಜನಪ್ರತಿನಿಧಿಗಳಿಗೆ, ಅಂಬೇಡ್ಕರ್ ಅವರನ್ನು ಸ್ತುತಿಸಲು ಅಥವಾ ಸಂವಿಧಾನವನ್ನು ಎತ್ತಿ ಹಿಡಿಯಲು ನೈತಿಕ ಅರ್ಹತೆ ಇದೆಯೇ ಎಂದು ಪ್ರಶ್ನಿಸಬೇಕಿದೆ. ಸರ್ವ ಧರ್ಮ ಸಮನ್ವಯ ಅಥವಾ ಮತ ನಿರಪೇಕ್ಷತೆಯನ್ನು ಬಯಸುವ ಭಾರತದ ಸಂವಿಧಾನವನ್ನು ಜನತೆಯ ಪರವಾಗಿ ಪ್ರತಿನಿಧಿಸುವ ಚುನಾಯಿತ ಶಾಸಕ ಸಂಸದರು, ಈ ಸಾಂವಿಧಾನಿಕ ಆಶಯಗಳಿಗೇ ಧಕ್ಕೆ ತರುವಂತಹ ರಾಜಕೀಯ ಚಟುವಟಿಕೆಗಳಿಗೆ, ಮತೀಯವಾದ ಮತ್ತು ಮತಾಂಧತೆಗೆ ಒತ್ತಾಸೆಯಾಗಿ ನಿಲ್ಲುವುದು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎನಿಸುವುದಿಲ್ಲವೇ ? ತಮ್ಮ ಅಧಿಕಾರ ರಾಜಕಾರಣದ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಬಹುತ್ವ ಸಂಸ್ಕೃತಿಯನ್ನು ಅಲ್ಲಗಳೆದು ಏಕಸಂಸ್ಕೃತಿಯನ್ನು ಹೇರುವ ಒಂದು ರಾಜಕೀಯ ಸಿದ್ಧಾಂತವನ್ನು ಅಪ್ಪಿಕೊಳ್ಳುವ ಜನಪ್ರತಿನಿಧಿಗಳು, ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಹೇಗೆ ಎತ್ತಿಹಿಡಿಯಲು ಸಾಧ್ಯ ? ಈ ಪ್ರಶ್ನೆಗೆ ಉತ್ತರ ಪಡೆಯಲು ಬೌದ್ಧಿಕ ಉತ್ಖನನವೇ ನಡೆಯಬೇಕಿದೆ.
ಭಾರತ ಇಂದು ಕವಲು ಹಾದಿಯಲ್ಲಿದೆ. ಡಿಜಿಟಲೀಕರಣದ ಯುಗದಲ್ಲಿ ದೇಶದ ಸಕಲ ಸಂಪನ್ಮೂಲಗಳೂ ಮಾರುಕಟ್ಟೆಯ ವಶಕ್ಕೊಳಪಟ್ಟು, ಶೋಷಿತ ಸಮುದಾಯಗಳ ಮರುವಸಾಹತೀಕರಣ ಪ್ರಕ್ರಿಯೆಗೆ ಪೂರಕವಾದ ಆರ್ಥಿಕ ನೀತಿಗಳನ್ನು, ಸಾಮಾಜಿಕ ನಿಯಮಗಳನ್ನು ಮತ್ತು ಸಾಂಸ್ಕೃತಿಕ ಸಂಹಿತೆಗಳನ್ನು ರೂಪಿಸಲಾಗುತ್ತಿದೆ. ಕಾರ್ಪೋರೇಟ್ ಬಂಡವಾಳದ ನವ ವಸಾಹತು ಯುಗದಲ್ಲಿ ಭಾರತದ ಅಸಂಖ್ಯಾತ ಸಮುದಾಯಗಳು ತಮ್ಮ ಸುಸ್ಥಿರ ನೆಲೆಯನ್ನು ಕಳೆದುಕೊಂಡು, ಜಾತಿ ಪೀಡಿತ ಸಾಮಾಜಿಕ ಚೌಕಟ್ಟಿನೊಳಗೇ ಬಂದಿಸಲ್ಪಡುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಈ ಅಪಾಯವನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡುವ ಮಾರ್ಗಗಳೇನು ? ಡಾ ಬಿ ಆರ್ ಅಂಬೇಡ್ಕರ್ ಅವರ 131ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಂಬೇಡ್ಕರ್ ಸ್ಮರಣೆ, ಬೌದ್ಧ ಸ್ತುತಿ ಮತ್ತು ವಿಭಿನ್ನ ಆಚರಣೆಗಳ ನಡುವೆಯೇ ತುಳಿತಕ್ಕೊಳಪಟ್ಟ-ತುಳಿತಕ್ಕೊಳಗಾಗಲಿರುವ ತಳಸಮುದಾಯದ ಪ್ರತಿಯೊಬ್ಬ ನಾಗರಿಕನಿಗೂ ನವ ಉದಾರವಾದದ ಮತ್ತು ಮತೀಯ ಬಹುಸಂಖ್ಯಾವಾದದ ಅಪಾಯಗಳನ್ನು ಮನದಟ್ಟು ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಅಂಬೇಡ್ಕರ್ ಮತ್ತು ಮಾರ್ಕ್ಸ್ನ ಸಮನ್ವಯದೊಂದಿಗೆ, ಮನೆಮನೆಯಲ್ಲೂ ಬೆಳಗುವ ಅಂಬೇಡ್ಕರ್ ಜ್ಯೋತಿಯೊಂದಿಗೇ ಈ ಜ್ಞಾನಬುತ್ತಿಯನ್ನೂ ತಲುಪಿಸಿದರೆ ಅಂಬೇಡ್ಕರ್ ಜಯಂತಿಯ ಆಚರಣೆಯೂ ಸಾರ್ಥಕವಾದೀತು.