ಮುಳಬಾಗಿಲು: ಪದವಿ ವಿದ್ಯಾರ್ಥಿಗಳ ದಾಖಲಾತಿಗೆ ರಾಷ್ಟ್ರೀಯ ಅರ್ಹತೆ ಪರೀಕ್ಷೆ ನಡೆಸುವ ಯುಜಿಸಿ ಅಧ್ಯಕ್ಷರ ಸೂಚನೆ ವಿರೋಧಿಸಿ ಹಾಗೂ ಈ ಅಪಾಯಕಾರಿ ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್ಇಪಿ) ವಿದ್ಯಾರ್ಥಿ ವಿರೋಧಿ ನೀತಿ ಕೈಬಿಡಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಸ್.ಶೋಭಿತಾ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ಜಾರಿಗೊಳಿಸುತ್ತಿರುವುದರಿಂದ ರಾಜ್ಯದಲ್ಲಿ ಶೈಕ್ಷಣಿಕ ಅರಾಜಕತೆ ನಿರ್ಮಾಣವಾಗಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಬೇಕಾದ ರಾಜ್ಯ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ ಜಾರಿಯಿಂದ ಬಡ, ಮಧ್ಯಮ ವರ್ಗ, ತಳಸಮುದಾಯಗಳ ಮಕ್ಕಳಿಗೆ ಉನ್ನತ ಶಿಕ್ಷಣ ಇನ್ನು ಮುಂದೆ ಕೈಗೆ ಎಟುಕದಂತೆ ಮಾಡುವ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ದೂರಿದರು.
ಇದನ್ನು ಓದಿ: ಪದವಿ ಶಿಕ್ಷಣಕ್ಕೂ ಪ್ರವೇಶಾತಿ ಪರೀಕ್ಷೆ-ಯುಜಿಸಿ ಅಧ್ಯಕ್ಷರ ಸೂಚನೆಗೆ ಎಸ್ಎಫ್ಐ ವಿರೋಧ
ಇತ್ತೀಚಿಗೆ ಬೆಂಗಳೂರಲ್ಲಿ ಯುಜಿಸಿ ಅಧ್ಯಕ್ಷರು ವಿಶ್ವವಿದ್ಯಾಲಯದ ಕುಲಪತಿಗಳ ಸಭೆಯಲ್ಲಿ ಪದವಿ ಹಂತದ ಬಿಎ, ಬಿಕಾಂ ,ಬಿಎಸ್ಸಿ ವಿಭಾಗಕ್ಕೆ ನೀಟ್ ಮಾದರಿಯ ರಾಷ್ಟ್ರೀಯ ಅರ್ಹತೆ ಪರೀಕ್ಷೆ(ಪ್ರವೇಶಾತಿ ಪರೀಕ್ಷೆ) ಮಾಡಬೇಕು ಇದಕ್ಕೆ ರಾಜ್ಯದ ವಿಶ್ವವಿದ್ಯಾಲಯಗಳ ಸಿದ್ದವಾಗಿ ನೊಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಆತಂಕಕ್ಕೆ ಕಾರಣವಾಗಿದೆ. ಇದು ಉನ್ನತ ಶಿಕ್ಷಣವನ್ನು ವ್ಯಾಪಾರೀಕರಣ ಟ್ಯೂಷನ್ ಲಾಬಿಗೆ ಅವಕಾಶ ನೀಡುವುದರಿಂದ ಈ ಕೂಡಲೇ ಈ ಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಒತ್ತಾಯ ಮಾಡುತ್ತಿದೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಹಂತದ ಬಿ.ಎ, ಬಿ.ಕಾಂ ಬಿ.ಎಸ್ಸಿ ಹಾಗೂ ಇತರೆ ಕೋರ್ಸ್ ಗಳಿಗೆ ದಾಖಲಾತಿ ಮಾಡಿಸುವ ವಿದ್ಯಾರ್ಥಿಗಳಿಗೆ ಇಲ್ಲಿವರೆಗೂ ಕೇವಲ ಪಿಯುಸಿ ಅಂಕಗಳ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ
ಬಿಎ, ಬಿಕಾಂ, ಬಿಎಸ್ಸಿ ಪದವಿ ಕೋರ್ಸ್ ಗೆ ಎಂಟ್ರೆನ್ಸ್ ಎಕ್ಸಾಂ ಕಡ್ಡಾಯ ಮಾಡಲು ಹೊರಟಿರುವುದು ಸರಿಯಲ್ಲ ಇದರಿಂದ ಈಗ ಇರುವ ಪಿಯುಸಿ ಪರೀಕ್ಷೆಗಳು ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತವೆ ಮತ್ತು ಯುಜಿಸಿ ಅಧ್ಯಕ್ಷರ ಈ ಸೂಚನೆಯ ಮೂಲಕ ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾಲಯಗಳು ತಮ್ಮ ಅಧಿಕಾರ ಮೊಟಕುಗೊಳಿಸಿದಂತೆ ಆಗುತ್ತದೆ ಆದ್ದರಿಂದ ರಾಜ್ಯ ಸರಕಾರ ಯುಜಿಸಿ ಅಧ್ಯಕ್ಷರ ಸೂಚನೆ ಕೈ ಬಿಡಬೇಕು ಹಾಗೂ ಈಗಿರುವ ನಿಯಮಗಳನ್ನು ಮುಂದುವರಿಸಬೇಕೆಂದು ಎಸ್ಎಫ್ಐ ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಉಪಕುಲಪತಿಗಳಲ್ಲಿ ಒತ್ತಾಯ ಮಾಡುತ್ತದೆ.
ಇಡೀ ದೇಶದಲ್ಲಿ ಪ್ರಸ್ತುತ 45 ಸಾವಿರ ಪದವಿ ಕಾಲೇಜುಗಳಿವೆ ಇವುಗಳ ಸಂಖ್ಯೆಯನ್ನು 2030 ರೊಳಗೆ 15 ಸಾವಿರಕ್ಕೆ ಇಳಿಸುವ ಅಪಾಯಕಾರಿ ವಿಧ್ಯಾರ್ಥಿ ವಿರೋಧಿ ಗುರಿಯನ್ನು ಎನ್ಇಪಿ ಹೊಂದಿದೆ.
ಪದವಿಗೆ ಪಿಯುಸಿ ಪಾಸ್ ಆದ ಎಲ್ಲಾ ವಿದ್ಯಾರ್ಥಿಗಳಿಗೆ ದಾಖಲಾತಿ ಪಡೆಯಲು ಅವಕಾಶ ಇದ್ದರು ಸಹ ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಕೇವಲ ಶೇಕಡ 20ರಷ್ಟು ಮಾತ್ರವಿದೆ. ಇನ್ನೂ ಅರ್ಹತಾ ಪ್ರವೇಶ ಪರೀಕ್ಷೆ ಜಾರಿಯಾದರೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೀರಾ ಕಡಿಮೆಯಾಗಲಿದೆ.
ಇತ್ತೀಚಿನ ದಿನಗಳಲ್ಲಿ ಬಡವರು, ದಲಿತರು, ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ಕೆಲವು ವಿದ್ಯಾರ್ಥಿಗಳು, ಮಹಿಳೆಯರು ಮಾತ್ರ ಉನ್ನತ ಶಿಕ್ಷಣಕ್ಕೆ ಬರುತ್ತಿದ್ದಾರೆ ಅದರಲ್ಲಿ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಪಿಎಚ್ ಡಿ ಕೋರ್ಸ್ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಉನ್ನತ ಶಿಕ್ಷಣ ಕಲಿಯಲು ಆದ್ಯತೆ ಕೊಡಬೇಕಾಗಿತ್ತು ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ ಜಾರಿಯ ಭಾಗವಾಗಿ ಪದವಿಗೆ ಅರ್ಹತಾ ಪ್ರವೇಶ ಪರೀಕ್ಷೆ ನಡೆಸಿ ರಾಜ್ಯದ ಬಡವರ, ದಲಿತರ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನಿರಾಕರಣೆ ಮಾಡುವ ಹುನ್ನಾರ ಮಾಡುತ್ತಿರುವುದನ್ನು ಎಸ್ಎಫ್ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಎನ್ಇಪಿ ಜಾರಿಯ ಭಾಗವಾಗಿ ನಾಲ್ಕು ವರ್ಷಗಳ ಪದವಿ ಕೋರ್ಸ್, ಐಚ್ಛಿಕ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳ ಕಡ್ಡಾಯ ಆಯ್ಕೆ, ಆನ್ ಲೈನ್ ಶುಲ್ಕ ಪಾವತಿ ಮುಂತಾದ ಅವೈಜ್ಞಾನಿಕ ನೀತಿಗಳಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ನಿರ್ಮಾಣವಾಗಿದೆ.
ಪದವಿ ಶಿಕ್ಷಣವನ್ನು ಇನ್ನಷ್ಟು ವ್ಯಾಪಾರೀಕರಣ ಮಾಡುವ ಹುನ್ನಾರವೇ ಅಥವಾ ಖಾಸಗಿ ಕಾಲೇಜುಗಳ ಟ್ಯೂಷನ್ ಲಾಬಿ ಹೆಚ್ಚು ಮಾಡುವ ಮೂಲಕ ಬಡ, ಮಧ್ಯಮ ವರ್ಗ, ತಳ ಸಮುದಾಯಗಳ ವಿದ್ಯಾರ್ಥಿಗಳನ್ನು ಪದವಿ ಶಿಕ್ಷಣದಿಂದ ವಂಚಿಸುವ ಕೆಲಸವೇ ಎಂದು ಎಸ್ಎಫ್ಐ ಸಂಘಟನೆಯು ಉನ್ನತ ಶಿಕ್ಷಣ ಸಚಿವರನ್ನು ಪ್ರಶ್ನೆ ಮಾಡುತ್ತದೆ ಎನ್ಇಪಿ ನೀತಿಯ ಭಾಗವಾಗಿ ಜಾರಿಗೊಳಿಸಲು ಮುಂದಾಗಿರುವ ಈ ಅಪಾಯಕಾರಿ ನೀತಿಯನ್ನು ವಿರೋಧಿಸಿ ಈಗಿರುವ ಪ್ರವೇಶಾತಿ ನಿಯಮವೇ ಮುಂದುವರಿಸಬೇಕೆಂದು ಎಸ್ಎಫ್ಐ ಸಂಘಟನೆಯು ಪ್ರತಿಭಟನೆ ಮೂಲಕ ರಾಜ್ಯ ಸರಕಾರವನ್ನು ಒತ್ತಾಯ ಮಾಡುತ್ತದೆ. ವಿಧ್ಯಾರ್ಥಿಗಳ ಭವಿಷ್ಯವನ್ನು ನಾಶ ಮಾಡುವ ಈ ನೀತಿಯನ್ನು ಸರ್ಕಾರ ಕೈಬಿಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದೆಂದು ಎಸ್ಎಫ್ಐ ಎಚ್ಚರಿಸಿದೆ.
ಈ ಪ್ರತಿಭಟನೆಯ ನೇತೃತ್ವವನ್ನು ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಪ್ಪ, ತಾಲ್ಲೂಕು ಅಧ್ಯಕ್ಷ ಸುರೇಶ್ ಬಾಬು, ಎಸ್ಎಫ್ಐನ ಸುದರ್ಶನ್, ಗೋಪಿ, ಮೋಹನ್ , ಜಿಯಾವುಲ್ಲಾ, ಮಾರ್ಕೊಂಡರೆಡ್ಡಿ ಮತ್ತಿತರರು ಹಾಜರಿದ್ದರು.