ಸಿಪಿಐ(ಎಂ) 23ನೇ ಮಹಾಧಿವೇಶನದ ಯಶಸ್ವಿಗೆ ಕಣ್ಣೂರು ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ

ಎಚ್.ಆರ್. ನವೀನ್ ಕುಮಾರ್, ಹಾಸನ

ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ ಪ್ರಾರಂಭವಾಗಿ ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಪಕ್ಷದ ಚರಿತ್ರೆಯನ್ನು ಮುಂದೊಯ್ಯಲು ಸಂಕಲ್ಪಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರತಿ ಮೂರು ವರ್ಷಗಳಿಗೊಮ್ಮೆ, ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಕುರಿತು ವಿವರವಾಗಿ ಚರ್ಚಿಸಿ, ಪಕ್ಷದ ಸಂಘಟನಾ ವಿಮರ್ಶೆಯೊಂದಿಗೆ ಮುಂದಿನ ಮೂರು ವರ್ಷಗಳಿಗೆ ಬೇಕಾದ ರಾಜಕೀಯ ತಂತ್ರಗಾರಿಕೆ ಮತ್ತು ಸಂಘಟನಾ ಗುರಿಗಳನ್ನು ನಿಗದಿಪಡಿಸಿಕೊಳ್ಳಲು ಪಕ್ಷದ ಮಹಾಧಿವೇಶನವನ್ನು ನಡೆಸುತ್ತದೆ. ಪಕ್ಷದಲ್ಲಿ ಇದೇ ಅತ್ಯುನ್ನತ ಅಂಗವಾಗಿದೆ.

ಪಕ್ಷದ 23 ನೇ ಮಹಾಧಿವೇಶನವು ಕೇರಳದ ಕಣ್ಣೂರಿನಲ್ಲಿ ಏಪ್ರಿಲ್ 6 ರಿಂದ 10 ವರೆಗೆ ನಡೆಯಲಿದೆ. ಪಕ್ಷದ ಮಹಾಧಿವೇಶನ ನಿಗದಿಯಾಗಿರುವ ಕೇರಳ ರಾಜ್ಯಕ್ಕೆ ಕಮ್ಯೂನಿಸ್ಟ್ ರಾಜಕಾರಣದಲ್ಲಿ ಒಂದು ಚಾರಿತ್ರಿಕ ಹಿನ್ನೆಲೆಯಿದೆ. ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ 1957 ರಲ್ಲಿ ಚುನಾವಣೆಗಳ ಮೂಲಕ ಕಾಮ್ರೇಡ್ ಇಎಂಎಸ್ ನಂಬೂದರಿ ಪಾಡ್ ರವರ ನೇತೃತ್ವದ ಎಡರಂಗ ಸರ್ಕಾರ ರಚನೆಯಾಯಿತು. ಇಲ್ಲಿಯವರೆಗೆ ಕೇರಳ ರಾಜ್ಯದಲ್ಲಿ ಪಕ್ಷವು ರಾಜಕೀಯವಾಗಿ ಮತ್ತು ಸಂಘಟನಾತ್ಮಕವಾಗಿ ಬಲಗೊಳ್ಳುತ್ತಾ ಬರುತ್ತಿದೆ. ಕಳೆದ 40 ವರ್ಷಗಳ ನಂತರ ಎರಡಂಗ ಸರ್ಕಾರ ಕೇರಳದಲ್ಲಿ ಎರಡನೇ ಬಾರಿಗೆ ನಿರಂತರವಾಗಿ ಗೆಲುವು ಸಾಧಿಸುವ ಮೂಲಕ ಜನಪರ ಅಧಿಕಾರವನ್ನು ನೀಡುತ್ತಿದೆ. ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರು ಮತ್ತು ಕೇರಳದ ಮುಖ್ಯಮಂತ್ರಿಗಳಾದ ಕಾಮ್ರೆಡ್ ಪಿಣರಾಯಿ ವಿಜಯನ್ ಸ್ವತಃ ಕಣ್ಣೂರು ಜಿಲ್ಲೆಯವರು ಎನ್ನುವುದು ಮತ್ತೊಂದು ವಿಶೇಷ. ದೇಶದ ಪಕ್ಷ ಸಂಘಟನೆಯಲ್ಲಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಅತ್ಯಂತ ಬಲಿಷ್ಟವಾದ ಜಿಲ್ಲೆ. ಜಿಲ್ಲೆಯಲ್ಲಿ 61,668 ಪಕ್ಷದ ಸದಸ್ಯರಿದ್ದು, 4,245 ಶಾಖೆಗಳು, 243 ಸ್ಥಳೀಯ ಸಮಿತಿಗಳು ಮತ್ತು 18 ಪ್ರದೇಶ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ. ಮಾತ್ರವಲ್ಲದೆ ಕಣ್ಣೂರು ಜಿಲ್ಲೆಗೆ ಜನ ಚಳುವಳಿಯ, ಸಮರಶೀಲ ಹೋರಾಟದ ಒಂದು ದೊಡ್ಡ ಪರಂಪರೆಯೇ ಇದೆ.

ಪಕ್ಷ ಇಷ್ಟೊಂದು ಬಲಿಷ್ಟವಾಗಿರುವ ಕಣ್ಣೂರು ಜಿಲ್ಲೆಯಲ್ಲಿ ಪಕ್ಷದ 23 ನೇ ಮಹಾಧಿವೇಶನ ನಿಗದಿಯಾದಾಗಿನಿಂದ ದೇಶದೆಲ್ಲೆಡೆ ದೊಡ್ಡ ಮಟ್ಟದ ನಿರೀಕ್ಷೆಗಳು ಪ್ರಾರಂಭವಾಗಿವೆ. ಪಕ್ಷದ ಮಹಾಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ದಾಖಲೆಯಾಗಿ ಉಳಿಸುವ ನಿಟ್ಟಿನಲ್ಲಿ ತಯಾರಿಗಳಿಗೆ ಪೂರಕವಾಗಿ ಸ್ವಾಗತ ಸಮಿತಿಯನ್ನು ರಚಿಸಿಕೊಂಡು ಕೆಲಸಗಳನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಮತ್ತು ಪೊಲಿಟ್ ಬ್ಯೂರೋ ಸದಸ್ಯರಾದ ಪಿಣರಾಯಿ ವಿಜಯನ್, ಪ್ರಧಾನ ಕಾರ್ಯದರ್ಶಿಗಳಾಗಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕೊಡಿಯೇರಿ ಬಾಲಕೃಷ್ಣನ್ ಮತ್ತು ಖಜಾಂಚಿಗಳಾಗಿ ಪಕ್ಷದ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜನ್ ರವರ ನೇತೃತ್ವದಲ್ಲಿ 21 ಉಪಸಮಿತಿಗಳನ್ನು ರಚಿಸಿ ತಯಾರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ.

ಕಣ್ಣೂರಿನಲ್ಲಿ ಮಹಾಧಿವೇಶನ ನಡೆಯುತ್ತದೆ ಎಂದರೆ ಹಾಗೆ. ಅಲ್ಲಿಯ ಪಕ್ಷದ ಸದಸ್ಯರನ್ನು ಮಾತ್ರ ಒಳಗೊಳಿಸುವುದಲ್ಲ. ಬದಲಾಗಿ, ಇಡೀ ಜಿಲ್ಲೆಯ ಎಲ್ಲಾ ವಿಭಾಗದ ಜನಸಮುದಾಯಗಳನ್ನು ಒಳಗೊಳಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಮಹಾಧಿವೇಶನದ ಅಂಗವಾಗಿ ವಿವಿಧ ವಿಷಯಗಳ ಮೇಲೆ ವಿಚಾರ ಸಂಕಿರಣಗಳು, ಉಪನ್ಯಾಸ ಸರಣಿಗಳು, ವಿವಿಧ ಕ್ರೀಡಾ ಸ್ಪರ್ಧೆಗಳು, ಚಿತ್ರಕಲಾ ಮತ್ತು ಶಿಲ್ಪಕಲಾ ಸ್ಪರ್ಧೆಗಳು, ಪಕ್ಷದ ಇತಿಹಾಸವನ್ನು ಬಿಂಬಿಸುವ ವಸ್ತು ಪ್ರದರ್ಶನ, ಅತ್ಯಾಕರ್ಷಕ ಗೋಡೆಬರಹಗಳು, ಸಾಂಸ್ಕೃತಿಕ ಚಟುವಟಿಕೆಗಳು ಹೀಗೆ ಎಲ್ಲಾ ವಿಭಾಗದ ಜನಸಮುದಾಯವನ್ನು ಪಕ್ಷದ ಮಹಾಧಿವೇಶನದ ಭಾಗವಾಗಿಸಲು ಬೇಕಾದ ಎಲ್ಲಾ ಚಟುವಟಿಕೆಗಳನ್ನು ನಡೆಸುವ ಜೊತೆಗೆ ಇಡೀ ಕಣ್ಣೂರನ್ನು ಕಂಗೊಳಿಸುವ ರೀತಿಯಲ್ಲಿ ಸಿಂಗರಿಸಲಾಗುತ್ತಿದೆ.

ಜನತೆಯಿಂದ ನಿಧಿ ಸಂಗ್ರಹ:

ಪಕ್ಷದ ಹೋರಾಟ ಮತ್ತು ಸಮ್ಮೇಳನಗಳ ಯಶಸ್ವಿಗೆ ಜನತೆಯಿಂದ ನೇರವಾಗಿ ನಿಧಿ ಸಂಗ್ರಹಿಸುವ ಪರಂಪರೆಯೇ ಸಿಪಿಐ(ಎಂ) ಪಕ್ಷಕ್ಕಿದೆ. ಇದರಿಂದಲೇ ಪಕ್ಷ ಈಗಲೂ ಜನತೆಯ ಪಕ್ಷವಾಗಿ ಉಳಿದಿದೆ. ಪಕ್ಷದ 23 ನೇ ಮಹಾಧಿವೇಶನವನ್ನು ಯಶಸ್ವಿಗೊಳಿಸಲು ಇಡೀ ಜಿಲ್ಲೆಯಲ್ಲಿ ಜನತೆಯಿಂದ ಮತ್ತು ಪಕ್ಷದ ಸದಸ್ಯರಿಂದ ವ್ಯಾಪಕವಾಗಿ ನಿಧಿ ಸಂಗ್ರಹ ಮಾಡಲಾಗಿದೆ. ಸಾರ್ವಜನಿಕರು ಅತ್ಯಂತ ಸಂತೋಷದಿಂದ ಉದಾರವಾಗಿ ಸಹಾಯ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗು ನೇರವಾಗಿ ಜನತೆಯಿಂದ 4.18 ಕೋಟಿ ರೂ ಸಂಗ್ರಹಿಸಲಾಗಿದೆ. (4,18,41,539) ಪಕ್ಷದ ಕಾರ್ಯಕರ್ತರು ಮತ್ತು ಜನಸಾಮಾನ್ಯರ ಬಳಿ ನಾಯಕರುಗಳು ಖದ್ದಾಗಿ ಮನೆ ಮನೆಗಳಿಗೆ, ಅಂಗಡಿಗಳಿಗೆ ಭೇಟಿ ನೀಡಿ ಹಣ ಸಂಗ್ರಹಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜನತೆಯಿಂದ ಸಂಗ್ರಹವಾದ ನಿಧಿ ಪಯ್ಯನ್ನೂರು:- 2678000, ಎಡಕ್ಕಾಡ್:- 2201480, ಪೆರಿಂಗೊಮ್‌:- 2682430, ಅಂಚರಕಂಡಿ:- 2391686, ಅಲಕ್ಕೋಡ್:- 1724470, ಪಿಣರಾಯಿ:- 2459065, ಶ್ರೀಕಂದಪುರಮ್:- 2440270, ತಲಶ್ಶೇರಿ:- 2413545, ತಳಿಪ್ಪರಂಬು:- 2577495, ಪಾನೂರು:- 2856870, ಮಡಾಯಿ:- 2349150, ಕೂತುಪರಂಬು:- 2788735, ಪಪ್ಪಿನಿಸ್ಸೆರಿ:- 1714319, ಮಟ್ಟನ್ನೂರು:- 2583168, ಮಯ್ಯಿಲ್: – 1803113, ಇರಿಟ್ಟಿ: – 2174850, ಕಣ್ಣೂರು: – 2095383, ಪೆರವೂರ್ – 1907510

ಪ್ರಚಾರ:

ಪಕ್ಷದ ಮಹಾಧಿವೇಶನಕ್ಕೆ ಪೂರಕವಾಗಿ ನಡೆಯುವ ಚಟುವಟಿಕೆಗಳು ಮತ್ತು ಮಹಾಧಿವೇಶನದ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಜನರ ನಡುವೆ ಪ್ರಚಾರ ಮಾಡುವ ಉದ್ದೇಶದಿಂದ ಮಾಧ್ಯಮಗಳನ್ನು ಅದರಲ್ಲೂ ಸಾಮಾಜಿಕ ಮಾಧ್ಯಮಗಳನ್ನು ಪಕರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ ಸ್ವಾಗತ ಸಮಿತಿಯು ಸಿಪಿಐ(ಎಂ) 23 ನೇ ಮಹಾಧಿವೇಶನದ ಹೆಸರಿನಲ್ಲಿ CPIM 23rd Party Congress ವೆಬ್‌ಸೈಟ್, ಯೂಟ್ಯೂಬ್, ಫೇಸ್‌ಬುಕ್ ಪೇಜ್ ಮತ್ತು ಟ್ವಿಟರ್ ಖಾತೆಗಳನ್ನು ಪ್ರಾರಂಬಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿ ಟ್ವಿಟರ್ ಖಾತೆಗೆ ಚಾಲನೆ ಕೊಟ್ಟರೆ, ಪೊಲಿಟ್ ಬ್ಯೂರೋ ಸದಸ್ಯರಾದ ಕಾಮ್ರೇಡ್ ಎಸ್. ರಾಮಚಂದ್ರನ್ ಪಿಳ್ಳೆಯವರು ವೆಬ್‌ಸೈಟ್ ಉಧ್ಘಾಟಿಸಿದರು, ಮತ್ತೋರ್ವ ಪೊಲಿಟ್ ಬ್ಯೂರೋ ಸದಸ್ಯರಾದ ಕಾಮ್ರೇಡ್ ಬೃಂದಾ ಕಾರಟ್‌ರವರು ಯೂಟ್ಯೂಬ್‌ಗೆ ಚಾಲನೆ ನೀಡಿದರು, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕೋಡಿಯೇರಿ ಬಾಲಕೃಷ್ಣನ್‌ರವರು ಫೇಸ್‌ಬುಕ್ ಪೇಜಿಗೆ ಚಾಲನೆ ನೀಡಿದರು. ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆಗಾಗಿ ಡಿಜಿಟ್ ಪೋಸ್ಟರ್ ಮತ್ತು ಸ್ಟೇಟಸ್ ವೀಡಿಯೋ ಸ್ಪರ್ಧೆಗಳನ್ನು ನಡೆಸಲಾಗಿದೆ. “ಇತಿಹಾಸದ ಗೋಡೆ” ಎನ್ನುವ ಶೀರ್ಷಿಕೆಯಡಿ ಪಕ್ಷದ ಮೊದಲ ಮಹಾಧಿವೇಶನದಿಂದ 22 ನೇ ಮಹಾಧಿವೇಶನದವರೆಗಿನ ಪಕ್ಷದ ಬೆಳವಣಿಗೆಗಳ ಕುರಿತು ವೀಡಿಯೋ ಸರಣಿ ಪ್ರಸಾರವಾಗುತ್ತಿದೆ. “ಕಣ್ಣೂರು ಪ್ರಣಾಳಿಕೆ” ಎಂಬ ಶೀರ್ಷಿಕೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಪಕ್ಷ ಬೆಳವಣಿಗೆಗೆ ದುಡಿಯುತ್ತಿರುವ ವಿಶೇಷ ಸಂಗಾತಿಗಳನ್ನು ಪರಿಚಯಿಸುವ ವೀಡಿಯೋ ಸರಣಿ ಬಿತ್ತರಗೊಳ್ಳುತ್ತಿದೆ. ಜೊತೆಗೆ ಪ್ರತಿದಿನ ಮಹಾಧಿವೇಶನದ ತಯಾರಿಗಳು ಮತ್ತು ಬೆಳವಣಿಗಗಳ ಕುರಿತು ವಾರ್ತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದಕ್ಕಾಗಿ ಪರಿಣಿತ, ಅನುಭವವಿರುವ ಸಂಗಾತಿಗಳನ್ನು ನಿಯೋಜನೆ ಮಾಡಲಾಗಿದೆ.

ಕಲಾಪಗಳು ನಡೆಯುವ ಪ್ರದೇಶದ ಸುತ್ತಮುತ್ತ, ಕಣ್ಣೂರು ನಗರ ಮಾತ್ರವಲ್ಲದೆ ಇಡೀ ಜಿಲ್ಲೆಯನ್ನ ಮಹಾಧಿವೇಶನಕ್ಕಾಗಿ ಸಿಂಗಾರಗೊಳಿಸಲು ಈಗಾಗಲೇ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ನಡೆಸಲಾಗಿದೆ. ಇದಕ್ಕಾಗಿ ಎಲ್ಲೆಡೆಗಳಲ್ಲಿ ಅತ್ಯಕರ್ಷಕವಾದ ಬಹುವರ್ಣದ ಗೋಡೆಬರಹಗಳು ಚಿತ್ರಿಸಲಾಗಿದೆ, ಮುಗಿಲೆತ್ತರದ ಕಟೌಟ್‌ಗಳನ್ನು ಹಾಗಲಾಗಿದೆ. ಜಿಲ್ಲೆಯಲ್ಲಿರುವ ಪಕ್ಷದ ಪ್ರತಿ ಶಾಖೆಗಳು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಿಕೊಂಡು ಸಮ್ಮೇಳನದ ಪ್ರಚಾರದ ಕೆಲಸವನ್ನು ಮಾಡುತ್ತಿವೆ. ಅದಕ್ಕಾಗಿ ಆ ಪ್ರದೇಶದಲ್ಲಿ ಪಕ್ಷದ ವಿಚಾರಗಳನ್ನು ಬಿಂಬಿಸುವ ಟ್ಯಾಬ್ಲೋಗಳನ್ನು ನಿರ್ಮಾಣ ಮಾಡಿ ಎಲ್ಲರ ಗಮನವನ್ನು ಸೆಳೆಯಲಾಗುತ್ತಿದೆ.

ವಿಚಾರ ಸಂಕಿರಣಗಳು:

ಸ್ವಾಗತ ಸಮಿತಿ ರಚನೆಯಾದಾಗಿನಿಂದ ಮಹಾಧಿವೇಶನ ಮುಕ್ತಾಯವಾಗುವವರೆಗೂ ನಿರಂತರವಾಗಿ ವಿವಿಧ ವಿಷಯಗಳ ಮೇಲೆ ರಾಜ್ಯ ಮತ್ತು ಜಿಲ್ಲೆಯಾದ್ಯಂತ ಮತ್ತು ಆನ್‌ಲೈನ್‌ಗಳಲ್ಲಿ ವಿಚಾರ ಸಂಕಿರಣಗಳು ಮತ್ತು ಉಪನ್ಯಾಸ ಸರಣಿಗಳನ್ನು ನಡೆಸಲಾಗುತ್ತಿದೆ. ಫೆಬ್ರವರಿ 23 ರಂದು ಡಾ. ಸುನಿಲ್ ಪಿ ಇಳೈದಂ ಅವರು “ಮಾರ್ಕ್ಸ್ ಮರು ಓದು” ಉಪನ್ಯಾಸವನ್ನು ನೀಡುವ ಮೂಲಕ ಆನ್‌ಲೈನ್ ಉಪನ್ಯಾಸ ಸರಣಿಗೆ ಚಾಲನೆ ನೀಡಿದರು. ಹಲವು ವಿಷಯಗಳ ಮೇಲೆ ವಿಚಾರ ಸಂಕಿರಣಗಳು ನಡೆಯುತ್ತಿದ್ದು ಅವುಗಳಲ್ಲಿ ಪ್ರಮುಖವಾಗಿ “ಮಾಧ್ಯಮ ಮತ್ತು ಸಾಮಾಜಿಕ ಬದ್ದತೆ” “ನಿರುದ್ಯೋಗ ಮತ್ತು ಕೇಂದ್ರ ರಾಜ್ಯ ಸರ್ಕಾರದ ನೀತಿಗಳು” “ಕೋಮುವಾದ ಹುಟ್ಟುಹಾಕಿರುವ ಸವಾಲುಗಳು” “ಸ್ವಾತಂತ್ರ್ಯ ಮತ್ತು ಕಮ್ಯೂನಿಸ್ಟರು” “ಮಾರ್ಕ್ಸ್‌ವಾದದ ಪ್ರಸ್ತುತತೆ” “ಕೇಂದ್ರ ಮತ್ತು ರಾಜ್ಯ ಬಜೆಟ್” “ಇಎಂಎಸ್ ದಿನದ ಹಂಗವಾಗಿ ಭೂಮಿಯ ಹಕ್ಕಿನ ಕುರಿತು” “ಕೇರಳದ ಅಧಿಕಾರ ವಿಕೇಂದ್ರೀಕರಣ ಮಾದರಿ” “ಕೇಂದ್ರ ಸರ್ಕಾರದ ಉದ್ಯೋಗ ವಿರೋಧಿ ನೀತಿಗಳು ಮತ್ತು ಕಾನೂನುಗಳು” “ಜಾಗತೀಕರಣ ನೀತಿ ಮತ್ತು ಎಡ ಪರ್ಯಾಯ” “ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಕಾನೂನುಗಳು” “ಸಾಮಾಜಿಕ ಅಭಿವೃದ್ಧಿಯಲ್ಲಿ ಗ್ರಂಥಾಲಯಗಳ ಪಾತ್ರ” “ಲಿಂಗ ಸಮಾನತೆ” “ಮೋದಿ ಸರ್ಕಾರದ ವಿಜ್ಞಾನ ವಿರೋಧಿ ನೀತಿಗಳು” ಕೃಷಿ ಬಿಕ್ಕಟ್ಟು ಮತ್ತು ಪರಿಹಾರ” ಹೀಗೆ ಹಲವು ವಿಷಯಗಳ ಮೇಲೆ ವಿಚಾರ ಸಂಕಿರಣ, ಉಪನ್ಯಾಸ ಸರಣಿಗಳನ್ನು ಸಂಘಟಿಸಲಾಗಿದೆ. ಇವುಗಳಲ್ಲಿ ಪಕ್ಷದ ಕೇಂದ್ರ ಮುಖಂಡತ್ವ, ಚಿಂತಕರು, ಸಾಹಿತಿಗಳು, ವಿಷಯ ತಜ್ಞರು ಭಾಗವಹಿಸಿ ಮಾತನಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದಾರೆ.

ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಮತ್ತು ಇತರ ಚಟುವಟಿಕೆಗಳು:

ಮಹಾಧಿವೇಶನದ ಅಂಗವಾಗಿ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಲಾಗಿದೆ. ವಾಲಿಬಾಲ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಶೆಟಲ್ ಕಾಕ್, ಚೆಸ್, ಹಗ್ಗ ಜಿಗಿತ, ಕಬ್ಬಡಿ, ಅಥ್ಲೆಟಿಕ್ಸ್, ಗಾಳಿಪಟ ಸ್ಪರ್ಧೆ ಹೀಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ, ಗೆದ್ದ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗಿದೆ. ಪ್ರತಿ ದಿನ ಜಿಲ್ಲೆಯ ಒಂದಲ್ಲಾ ಒಂದು ಪ್ರದೇಶದಲ್ಲಿ ಮಹಾಧಿವೇಶನದ ಅಂಗವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಹಾಡುಗಾರಿಕೆ, ನೃತ್ಯಪ್ರದರ್ಶನ, ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ‘ಭಾರತದಲ್ಲಿ ನೂರು ವರ್ಷಗಳ ಕಮ್ಯುನಿಸ್ಟ್ ಚಳವಳಿ’ ವಿಷಯದ ಕುರಿತು ಅಂತಾರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ಜಗತ್ತಿನಾದ್ಯಂತ ಇರುವ ಮಲೆಯಾಳಿಗಳು ಭಾಗವಹಿಸುವ ರೀತಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜೊತೆಗೆ ಚಿತ್ರಕಲೆ, ಬೀದಿ ನಾಟಕ, ಕ್ರಾಂತಿಗೀತೆ, ಲೇಖನ, ಕವಿತೆ, ಸಣ್ಣಕಥೆ, ಕಾರ್ಟೂನ್ ಬರಹ, ಶಿಲ್ಪಕಲೆ, ಕಿರುಚಿತ್ರ, ಛಾಯಾಗ್ರಹಣ, ಡಿಜಿಟಲ್ ಪೇಂಟಿಂಗ್ ಹೀಗೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಲೆ ಮತ್ತು ಸಾಹಿತ್ಯದ ಕೃತಿಗಳು ಕೋಮುವಾದ, ಜಾತ್ಯತೀತ ಮೌಲ್ಯಗಳು, ಮಾನವೀಯತೆ, ವೈಜ್ಞಾನಿಕ ಪ್ರಜ್ಞೆ, ಕೇರಳದ ಸಾಮಾಜಿಕ ಅಭಿವೃದ್ಧಿಯಲ್ಲಿ ಎಡಪಂಥೀಯ ಚಳುವಳಿಗಳ ಪಾತ್ರ ಮತ್ತು ಜನರ ಅಭಿವೃದ್ಧಿಯ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ.

ಪ್ರದರ್ಶನಗಳು:

ಮಹಾಧಿವೇಶನದ ಅಂಗವಾಗಿ ಪಕ್ಷದ ಇತಿಹಾಸವನ್ನು ಬಿಂಬಿಸುವ “ಹಿಸ್ಟರಿ ವಾಲ್” ಹೆಸರಿನ ಐತಿಹಾಸಿಕ ವಸ್ತು ಪ್ರದರ್ಶನ, ಪಕ್ಷದ ಕೇರಳ ರಾಜ್ಯದ ಇತಿಹಾಸ ಮತ್ತು ಜನತೆಯ ಹೋರಾಟಗಳನ್ನು ಬಿಂಬಿಸುವ ಚಿತ್ರಕಲಾ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಜ್ಞಾನ ವಸ್ತು ಪ್ರದರ್ಶನ ಹೀಗೆ ವಿವಿಧ ರೀತಿಯ ಪ್ರದರ್ಶನಗಳನ್ನು ಏಪ್ರಿಲ್ 1 ರಿಂದ 10 ರವರೆಗೆ ನಡೆಸಲಾಗುತ್ತಿದೆ. ಹತ್ತು ದಿನಗಳು ನಡೆಯುವ ಈ ಪ್ರದರ್ಶನಗಳಲ್ಲಿ ಲಕ್ಷಾಂತರ ಜನ ಭೇಟಿ ನೀಡಿ ವೀಕ್ಷಿಸುವ ನಿರೀಕ್ಷೆಗಳಿವೆ. ಈ ಪ್ರದರ್ಶನಗಳನ್ನು ನಡೆಸಲು ನೂರಾರು ಜನ ಕಲಾವಿದರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.

ಮಹಾಧಿವೇಶನ ನಡೆಯುವ ಸಂಭಾಂಗಣ ಮತ್ತು ಅದರ ಸುತ್ತಮುತ್ತಲ ಪ್ರದೇಶ ಹಾಗೂ ಏಪ್ರಿಲ್ 10 ರಂದು ನಡೆಯುವ ಕೆಂಪು ಸ್ವಯಂ ಸೇವಕರ ಆಕರ್ಷಕ ಮೆರವಣಿಗೆ, ಬಹಿರಂಗ ಸಭೆ ಇವುಗಳ ವೇದಿಕೆ ಮತ್ತು ಸುತ್ತಮುತ್ತಲ ಪರಿಸರವನ್ನು ಪಕ್ಷದ ಇತಿಹಾಸ, ಹೋರಾಟದ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಆಕರ್ಷಕವಾಗಿ ಸಿದ್ದಪಡಿಸಲು ಅನುಭವಿ ಕಲಾವಿದರುಗಳನ್ನು ಒಳಗೊಂಡು ವೇದಿಕೆ ನಿರ್ಮಾಣದ ಕೆಲಸಗಳನ್ನು ಸ್ವಾಗತ ಸಮಿತಿ ಆರಂಭಿಸಿದೆ. ಮಹಾಧಿವೇಶನಕ್ಕೆ ಭಾಗವಹಿಸುವ ಪ್ರತಿನಿಧಿಗಳು, ವೀಕ್ಷಕರು, ಮತ್ತು ನಾಯಕತ್ವಕ್ಕೆ, ಸುಗಮ ಕಲಾಪಗಳಿಗೆ ಯಾವುದೇ ರೀತಿಯ ಅಡ್ಡಿಗಳಾಗದಂತೆ ಕೋವಿಡ್‌ನ ಎಲ್ಲಾ ನಿಯಮಗಳನ್ನು ಅನುಸರಿಸಿ ಅಗತ್ಯ ತಯಾರಿಗಳನ್ನು ನಡೆಸಲಾಗುತ್ತಿದೆ. ಈ ಮಹಾಧಿವೇಶನದ ಕಲಾಪಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಂಘಟನಾತ್ಮಕ ಪ್ರಶ್ನೆಗಳ ಮೇಲೆ ಎಷ್ಟು ಗಂಭೀರವಾದ ಚರ್ಚೆಗಳು ನಡೆಯುತ್ತವೆಯೋ ಅಷ್ಟೇ ಆಕರ್ಷಕವಾಗಿ ಕಣ್ಣೂರನ್ನು ಕಮ್ಯೂನಿಸ್ಟ್ ಪಕ್ಷದ ನೂರು ವರ್ಷಗಳ ಇತಿಹಾಸ ಬಿಂಬಿಸುವ ರೀತಿಯಲ್ಲಿ ಸಿಂಗರಿಸಿ ಸಜ್ಜುಗೊಳಿಸಲಾಗುತ್ತಿದೆ. ಇವೆಲ್ಲವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಆನಂದ ಮತ್ತು ವಿಶೇಷ ಅನುಭವ.

Donate Janashakthi Media

Leave a Reply

Your email address will not be published. Required fields are marked *