ಸ್ವಾತಂತ್ರ್ಯ ಹೋರಾಟದಲ್ಲಿ ನೆಲದ ನಕ್ಷತ್ರಗಳು

ಸುಭಾಸ ಎಂ, ಶಿಗ್ಗಾಂವಿ

ದೇಶಕ್ಕೆ ಸ್ವಾತಂತ್ರ‍್ಯ ತರುವುದರಲ್ಲಿ ಈ ನೆಲದ ನಕ್ಷತ್ರಗಳ ಕೊಡುಗೆ ಅಪಾರ, ಅನನ್ಯವಾಗಿದ್ದು, ಅದರ ಮಹತ್ವ ಕುರಿತು ಯುವಪೀಳಿಗೆಗೆ ತಿಳಿಸುವ ಕಾಯಕ ಅತ್ಯಂತ ಪ್ರಮುಖ ವಾಗಿದೆ. ಮತೀಯವಾದಕ್ಕೆ ಬಲಿಯಾಗುತ್ತಿರುವ ಇಂದಿನ ವಿದ್ಯಾರ್ಥಿ-ಯುವಜನರಿಗೆ ಸ್ವಾತಂತ್ರ‍್ಯ ಹೋರಾಟ ಈ ನೆಲದಲ್ಲಿ ನಡೆದ ಬಲಿದಾನಗಳ ಹಿನ್ನೆಲೆಯನ್ನ ಅರ್ಥೈಸುವ ಕಾರ್ಯ ಪ್ರಮುಖವಾಗಿ ನಡೆಯಬೇಕಿದೆ.

ಕಾಂತನ ಕಳಕೊಂಡ ಕಾಮಿನಿಯಂತೆ
ಭಾರತ ಹಾಕ್ವುದು ಕಣ್ಣೀರ…
ಶಾಂತಿ ಸಮರದೊಳು ಗುಂಡಿನೇಟಿನೊಳು
ಮಡಿದ ಮಹದೇವ ಮೈಲಾರ…

  • ಸಮದ್ ಸಾಹೇಬರ ಲಾವಣಿ ಹಾಡು.
ಮೃತರಾದ ಮೂರು ಜನ ಸಂಗಾತಿಗಳು

23 ಮಾರ್ಚ್ 1931ರಂದು ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರು, ದೇಶದ ಯುವಜನರಿಗೆ ಇವಾಗಲೂ ಸ್ಪೂರ್ತಿಯ ಸೆಲೆಯಾಗಿ ನಿಂತಿರುವ ಭಗತ್ ಸಿಂಗ್, ರಾಜಗುರು, ಸುಖದೇವ್ ಹುತಾತ್ಮರಾದ ದಿನ… ಭಗತ್ ಸಿಂಗ್ ಗಲ್ಲಿಗೇರಿದಾಗ ಅವರಿಗೆ 23 ವರ್ಷ, ಬಿಸಿ ರಕ್ತದ ಯುವಕ ಇನ್ನೂ… ಕರ್ನಾಟಕದಲ್ಲಿಯೂ ಅದೇ ರೀತಿಯಾದ 30ರ ಆಸುಪಾಸಿನ ಮೂರು ಜನ ಸಂಗಾತಿಗಳು ಬ್ರಿಟಿಷರು ಹಾರಿಸಿದ ಗುಂಡಿಗೆ ಎದೆಯೊಡ್ಡಿ ಬಲಿಯಾಗುತ್ತಾರೆ ಅವರೆ, ಮೈಲಾರ ಮಹದೇವ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಮೂರು ಜನ ಸಂಗಾತಿಗಳು ಹುತಾತ್ಮರಾಗುತ್ತಾರೆ.

ಎಪ್ರಿಲ್ 1 ಬಂತೆಂದರೆ ಇಡೀ ವಿಶ್ವವೇ ಮೂರ್ಖರ ದಿನಾಚರಣೆಯೆಂದು ಆಚರಿಸುತ್ತೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಇದು ಹುತಾತ್ಮರ ದಿನಾಚರಣೆಯಾಗಿದೆ. 1943 ಎಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರನ ದೇವಸ್ಥಾನದೊಳಗೆ ಮೂವರು ಸ್ವಾತಂತ್ರ‍್ಯ ಹೋರಾಟಗಾರರ ಪ್ರಾಣಾರ್ಪಣೆಯಾಗುತ್ತದೆ.

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹಾವೇರಿಯ ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಂದಿನ ಮುಂಜಾವು ರಕ್ತಸಿಕ್ತವಾಗಿತ್ತು, ಬ್ರಿಟಿಷರು ಹಾರಿಸಿದ ಗುಂಡುಗಳು ಮೂರು ಜನ ಸಂಗಾತಿಗಳ ಬಲಿ ಪಡೆದಿದ್ದವು.

ತನ್ನ 12ನೇ ವಯಸ್ಸಿಗೆ ಸ್ವಾತಂತ್ರ‍್ಯ ಹೋರಾಟಕ್ಕಿಳಿದಿದ್ದ ಮಹದೇವಪ್ಪ ತನ್ನ ಗುರುಗಳಾದ ಕೆ.ಎಫ್.ಪಾಟೀಲ, ನೇಶ್ವಿಯವರ ಮಾರ್ಗದರ್ಶನದ ನಡುವೆ ಶಿಕ್ಷಣವನ್ನ ಮೊಟಕುಗೊಳಿಸಿ ಕಲಾದಗಿಯ ನೇಯ್ಗೇ ಶಿಕ್ಷಣ ಪಡೆದರು, ನಂತರ ಧಾರವಾಡದ “ಭಾರತೀಯ ತರುಣ ಸಂಘ” ಸೇರಿ ಅಲ್ಲಿ ಅನೇಕ ರಾಷ್ಟ್ರೀಯ ಮುಖಂಡರ ಪ್ರಭಾವಕ್ಕೆ ಒಳಗಾಗಿ ‘ಈ ದೇಹ ದೇಶಸೇವೆಗೆ ಮೀಸಲು, ತಾಯಿನಾಡಿನ ಬಂಧ ವಿಮೋಚನೆಯಾಗಲೇಬೇಕು’ ಎಂದು ಪ್ರತಿಜ್ಞೆ ಮಾಡಿದರು. ನಂತರದಲ್ಲಿ ಗಾಂಧೀಜಿಯವರು 1930ರಲ್ಲಿ ನಡೆಸಿದ ದಂಡಿ ಯಾತ್ರೆಯಲ್ಲಿ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಸಬರಮತಿ ಆಶ್ರಮಕ್ಕೆ ಹೋಗಿ 79 ಜನರೊಟ್ಟಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಆಶ್ರಮದ ದಾಖಲೆಯಲ್ಲಿ ಮೈಲಾರ ಮಾರ್ತಾಂಡ ಎಂದು ಇವರ ಹೆಸರಿದೆ. ದಂಡಿ ಸತ್ಯಾಗ್ರಹ ಯಶಸ್ವಿಯಾಯಿತು. ಮಹಾದೇವಪ್ಪಗೆ ಒಂದು ವರ್ಷ ಶಿಕ್ಷೆಯಾಯಿತು. ಬಂಧನದಿಂದ ಬಿಡುಗಡೆಯಾದ ನಂತರ ಮರಳಿ ಮನೆಗೆ ಬಂದ ಮೈಲಾರ ಮಹಾದೇವಪ್ಪ ಸ್ವಾತಂತ್ರ‍್ಯ ಹೋರಾಟಕ್ಕೆ ಯುವಕರನ್ನು ಸಜ್ಜುಗೊಳಿಸುವ ಕಾಯಕದಲ್ಲಿ ನಿರತರಾದರು. ಚಿಗುರು ಮೀಸೆಯ ಹುಡುಗನೊಬ್ಬ ಸ್ವತಂತ್ರ ಭಾರತಕ್ಕಾಗಿ ತನ್ನ ವಯಸಿನ ಹುಡುಗರ ಗುಂಪನ್ನು ಕಟ್ಟಿಕೊಂಡು ಸ್ವತಂತ್ರ ಚಳುವಳಿಗೆ ಧುಮಿಕಿದರು, ಹಾವೇರಿಯ ಮೂಟೆಬೆನ್ನೂರ ಗ್ರಾಮದ ಮೈಲಾರ ಮಹದೇವಪ್ಪ, ಕೂಗನೂರಿನ ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಸ್ವಾತಂತ್ರ‍್ಯ ಚಳುವಳಿಯಲ್ಲಿ ಒಂದಾದವರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಅವರು ಮಾಡಿದ ಸಾಹಸ, ಪಟ್ಟ ಕಷ್ಟಕೋಟಲೆ, ತೋರಿದ ಧಾಡಸಿತನ ಅಸಾಧಾರಣ. ‘ಮಾಡು ಇಲ್ಲವೆ ಮಡಿ’ ಎಂಬ ಗಾಂಧೀಜಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ. ದೇಶಕ್ಕಾಗಿ ತ್ಯಾಗ ಮಾಡಬೇಕಾದಾಗ ಪ್ರಾಣವನ್ನೇ ತ್ಯಾಗಮಾಡಿದವರು.

ಹಿರಿಯ ಸ್ವತಂತ್ರ ಹೋರಾಟಗಾರ, ಮೈಲಾರ ಮಹದೇವಪ್ಪನವರ ಜೊತೆಗಾರರಾಗಿದ್ದ ದಿವಂಗತ ಪರಮಣ್ಣ ಹರಕಂಗಿಯವರು ತಮ್ಮ ಅನುಭವವನ್ನು ಪುಸ್ತಕವೊಂದರಲ್ಲಿ ಹೇಳಿದ್ದಾರೆ, ಗುಡ್ಡದ ಗವಿಗಳಲ್ಲಿ ಅಡಗಿ ಕುಳಿತುಕೊಳ್ಳುವುದು, ಕಾಡು ಹಂದಿಗಳು ವಾಸವಿದ್ದ ಗವಿಗಳು ನಮಗೆ ವಾಸಕ್ಕೆ ಸಿಕ್ಕ ಸ್ಥಳಗಳು, ಪಕ್ಕದ ತಾಂಡಾದ ಲಂಬಾಣಿ ಸಮುದಾಯ ನಮಗೆ ಆಗಾಗ ಊಟಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದರು, ಅದು ತಿಳಿದ ಬ್ರಿಟಿಷ್ ಪೋಲಿಸರು ಅವರಲ್ಲಿ 11 ಜನರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿತು.

ಈಗಿನ ಹಾವೇರಿ ಜಿಲ್ಲೆ ಸ್ವಾತಂತ್ರ‍್ಯ ಚಳವಳಿಯ ಸಂದರ್ಭದಲ್ಲಿ ಬಹಳಷ್ಟು ಜನ ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರರನ್ನು ದೇಶಕ್ಕೆ ಅರ್ಪಿಸಿದೆ. ಸಿದ್ದಪ್ಪ ಹೊಸಮನಿ, ಗುದ್ಲೆಪ್ಪ ಹಳ್ಳಿಕೇರಿ, ಸಂಗೂರ ಕರಿಯಪ್ಪ, ಫಕ್ಕಿರಪ್ಪ ತಾವರೆಯವರಂಥ ಧೀರ ಹೋರಾಟಗಾರರನ್ನು ಈ ನೆಲ ದೇಶಕ್ಕೆ ಅರ್ಪಿಸಿದೆ.

ಒಂದು ಅನುಕೂಲವಂತ ರೈತ ಕುಟುಂಬದಲ್ಲಿ ಮೋಟೆಬೆನ್ನೂರು ಎಂಬ ಹಳ್ಳಿಯಲ್ಲಿ 1911ರ ಜೂನ್ 8ರಂದು ಮಹಾದೇವಪ್ಪ ಹುಟ್ಟಿದರು. ತಂದೆ ಮಾರ್ತಾಂಡಪ್ಪ, ತಾಯಿ ಬಸಮ್ಮ. ದೇವರ ಗುಡ್ಡದ ಮೈಲಾರನ ಭಕ್ತರಾದ ಇವರು ಮಗನಿಗೆ ಮೈಲಾರ ಮಹಾದೇವ ಎಂದು ಹೆಸರಿಟ್ಟರು, ಆತ ಮೋಟೆಬೆನ್ನೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು. ನಂತರ ಹಂಸಬಾವಿಯಲ್ಲಿ ಟಿ.ಆರ್.ನೇಶ್ವಿಯವರು ನಡೆಸುತ್ತಿದ್ದ ಶಾಲೆ ಸೇರಿ. ಅಲ್ಲಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಗುರುಗಳಾಗಿದ್ದ ಕೆ.ಎಫ್ ಪಾಟೀಲರೂ ಅಧ್ಯಾಪಕರಾಗಿದ್ದರು. ಖಾದಿ ಸಿದ್ದಲಿಂಗಪ್ಪ, ಹರ್ಡೇಕರ್ ಮಂಜಪ್ಪ ಬಂದಾಗಲೊಮ್ಮೆ ಖಾದಿ, ಸ್ವದೇಶಿ ವಿಚಾರಗಳ ಕುರಿತು ಚರ್ಚೆಗಳು, ಭಾಷಣಗಳು ನಡೆಯುತ್ತಿದ್ದವು.

1932ರ ಚಳವಳಿ ಕಾಲಕ್ಕೆ ಮಹಾದೇವಪ್ಪ ಮತ್ತೆ ಬಂಧಿತರಾಗಿ ಎರಡು ವರ್ಷ ಜೈಲು ಕಂಡರು. ಮೈಲಾರ ಮಹದೇವಪ್ಪನವರ ಪತ್ನಿ ಸಿದ್ದಮ್ಮ ಆಗ ಸಬರಮತಿ ಆಶ್ರಮದಲ್ಲೇ ಇದ್ದರು.

ಜೈಲಿನಿಂದ ಬಿಡುಗಡೆ ಆದ ನಂತರ ಊರಿಗೆ ಮರಳಿ ಆಗ ಆರಂಭವಾದ ಆಸ್ಪೃಶ್ಯತಾ ನಿವಾರಣಾ ಚಳವಳಿಯಲ್ಲಿ ಪಾಲ್ಗೊಂಡು ಮರಡೂರು ಎಂಬ ಊರಲ್ಲಿ ಒಂದು ಆಶ್ರಮ ತೆರೆದರು. ತಳ ಸಮುದಾಯ, ದಲಿತರ ನಡುವೆ ಕೆಲಸಾರಂಭಿಸಿದರು, ದಲಿತರ ಕೇರಿಗೆ ಹೋಗಿ ಸ್ವಚ್ಚ ಮಾಡುವುದು ಹಾಗೂ ದಲಿತ ಮಹಿಳೆಯರಿಗೆ ನೂಲುವುದು, ನೇಯುವುದು ಕಲಿಸಿದರು. ನಾಲ್ಕೈದು ಮಗ್ಗ ಹಾಕಿದರು. ರೈತ ಮಹಿಳೆಯರಿಗೂ ನೂಲುವುದು, ಅಕ್ಷರಾಭ್ಯಾಸ ಮಾಡಿಸಿದರು. ಹಾಲಗಿ, ಮರೋಳ ಮುಂತಾದ ಊರುಗಳಲ್ಲಿ ಕೆಲಸ ಮಾಡಿದರು.

ಒಬ್ಬ ಮುದಕಿಯು ಖಾದಿ ಕೆಲಸಕ್ಕಾಗಿ ಮಹಾದೇವಪ್ಪನವರಿಗೆ ಒಂದು ಸಾವಿರ ರೂ. ಸಾಲ ಕೊಟ್ಟಿದ್ದರು. ಮುಂದೆ ಅವಳು ತೀರಿಕೊಂಡಳು. ಆದರೆ ಅವಳ ಮಗನ ಮದುವೆ ಕಾಲಕ್ಕೆ ಆ ಹಣವನ್ನು ಮರಳಿಸಿದರು. ಊರ ಜನರ ಗೌರವಕ್ಕೆ ಪಾತ್ರರಾದ ನಾಯಕರಾದರು.

ಎರಡನೇ ಮಹಾಯುದ್ಧ ಆದಾಗ ಗಾಂಧೀಜಿ ಪ್ರಕಟಿಸಿದ ವೈಯಕ್ತಿಕ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಒಂದು ವರ್ಷ ಜೈಲುವಾಸ ಅನುಭವಿಸಿ 1941ರಲ್ಲಿ ಬಿಡುಗಡೆ ಆಯಿತು. 1942ರಲ್ಲಿ ಗಾಂಧೀಜಿ ‘ಕ್ವಿಟ್ ಇಂಡಿಯಾ’ ಚಳುವಳಿಗೆ ಕರೆ ಕೊಟ್ಟರು. ಈ ಚಳುವಳಿ ದೇಶದೆಲ್ಲೆಡೆ ಹೆಚ್ಚಾಗ ತೊಡಗಿತು ಇದರಿಂದ ಗಾಂಧೀಜಿ ಮತ್ತು ಇತರ ನಾಯಕರ ಬಂಧನವಾಯಿತು. ಸರಕಾರ ಸ್ಥಗಿತವಾಗುವಂತೆ, ರೈಲುಗಳು ಓಡದಂತೆ, ಸರಕಾರದ ಕಚೇರಿಗಳು ನಡೆಯದಂತೆ, ಕಂದಾಯ ಪಾವತಿಯಾಗದಂತೆ ಎಲ್ಲೆಡೆ ವಿಧ್ವಂಸಕ ಕೃತ್ಯ, ಆಡಳಿತವನ್ನ ಬುಡಮೇಲು ಮಾಡಲು ಅನೇಕ ಚಟುವಟಿಕೆ ನಡೆಸಲು ನಾಯಕರು ಕರೆ ಕೊಟ್ಟಂತೆ ಮಹಾದೇವಪ್ಪ ಮತ್ತು ಅವರ 40-50 ಗೆಳೆಯರು ಭೂಗತರಾಗಿ, ಮನೆಮಾರು ಬಿಟ್ಟು ಸ್ವಾತಂತ್ರ‍್ಯ ಚಳವಳಿಯಲ್ಲಿ ತೊಡಗಿದರು. ಇವರ ನಾಲ್ಕು ತಂಡಗಳು ಜಿಲ್ಲೆಯಾದ್ಯಂತ ಕೆಲಸ ಮಾಡಲು ಶುರು ಮಾಡಿದವು. ಆಡಳಿತ ಯಂತ್ರವನ್ನೆ ಸ್ಥಗಿತಗೊಳಿಸುವ ಕೆಲಸಕ್ಕೆ ಕೈ ಹಾಕಿದವರ ಬಂಧನಕ್ಕೆ ಬ್ರಿಟಿಷ್ ಸರ್ಕಾರ ಸ್ವಾತಂತ್ರ‍್ಯ ಹೋರಾಟಗಾರರನೆಲ್ಲ ಬಂಧಿಸಿ ಜೈಲಿಗಟ್ಟಲು ಕರೆ ನೀಡಿತು. ಪರಮಣ್ಣ ಹರಕಂಗಿಯವರ ಪುಸ್ತಕದಲ್ಲಿ ಹೇಳಿರುವಂತೆ ಹಗಲು ಹೊತ್ತು ಜೋಳದ ಅಥವಾ ಕಬ್ಬಿನ ಬೆಳೆ ಇಲ್ಲವೆ ನದಿಗಳ ಅಕ್ಕಪಕ್ಕದಲ್ಲಿ, ಗುಡ್ಡದ ತಪ್ಪಲುಗಳಲ್ಲಿ ಅಡಗಿದ್ದು, ರಾತ್ರಿ ಹೊತ್ತು ಮಾತ್ರ ಕೆಲಸ ಮಾಡಲು, ಸಂಚರಿಸುವುದು ಶುರು ಮಾಡುತ್ತಿದ್ದರು. ಅಕ್ಕ ಪಕ್ಕದ ಹಳ್ಳಿಗಳಿಂದ ಸ್ವಾತಂತ್ರ‍್ಯ ಹೋರಾಟಗಾರರನ್ನ ಬೆಂಬಲಿಸಿ ಊಟವನ್ನು ಸಹ ಕಳುಹಿಸುತ್ತಿದ್ದರು. ಕೆಲವೊಮ್ಮೆ ಅದೂ ಇಲ್ಲದೆ ಉಪವಾಸ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸೆಪ್ಟೆಂಬರ್ 15ಕ್ಕೆ ರಾತ್ರಿ ಬ್ಯಾಡಗಿ ರೈಲ್ವೇ ಸ್ಟೇಷನ್ ಸುಟ್ಟು. ಅದೇ ದಿನ ಮತ್ತೊಂದು ಗುಂಪು ಸೇರಿ ಒಟ್ಟು ನಾಲ್ಕು ಸ್ಟೇಷನ್ ಸುಟ್ಟರು. ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದ್ದರು.

ಬಿಜ್ಜೂರು, ಹೊನ್ನತ್ತಿ, ಹೆಬ್ಬಾಳ ಮುಂತಾದ ಹತ್ತಾರು ಗ್ರಾಮದ ಚಾವಡಿ ಸುಟ್ಟು ಹಾಕಿದರು. ಚಳುವಳಿ ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಯಾರೊಬ್ಬರಿಗೂ ದೈಹಿಕ ಹಾನಿಮಾಡದೆ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡುವುದು ಸ್ವಾತಂತ್ರ‍್ಯ ಹೋರಾಟಗಾರ ಮೈಲಾರ ಮಹದೇವಪ್ಪನವರ ಯೋಚನೆಯಾಗಿತ್ತು. ಹೊನ್ನತ್ತಿಯಲ್ಲಿ ಸುತ್ತಲ ಗ್ರಾಮದಿಂದ ಕಂದಾಯ ಸಂಗ್ರಹಿಸುವ ಕೆಲಸ ನಡೆದಾಗ, ಹಾಡಹಗಲೇ ಈ ತಂಡ ಅಲ್ಲಿಗೆ ಹೋಗಿ ತಹಸೀಲ್ದಾರರನ್ನೂ ಇತರ ಅಧಿಕಾರಿಗಳನ್ನೂ ತೆಕ್ಕೆಬಿದ್ದು ಬಂಧಿಸಿ ಒಂದು ಕೊಠಡಿಯಲ್ಲಿ ಕೂಡಿಹಾಕಿ, ಸಂಗ್ರಹವಾದ ಕಂದಾಯದ ಹಣ ಸೆಳೆದುಕೊಂಡರು. ಕಂದಾಯ ದಾಖಲೆಗಳನ್ನೆಲ್ಕ ಸುಟ್ಟು ಹಾಕಿದರು.

ಪರಮಣ್ಣ ಹರಕಂಗಿಯವರು ಭಾಷಣವೊಂದರಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಅದು ಹಳ್ಳಿಯೊಂದರಲ್ಲಿ ವಸೂಲಿ ಮಾಡಿದ್ದ ಕಂದಾಯ ಕಸಿದು ಬ್ರಿಟಿಷರ ದಾಖಲೆಗೆ ಬೆಂಕಿ ಹಾಕಿದಂತಹ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ಹುಲ್ಲಿನ ಬಣವಿಗೆ ಬೆಂಕಿ ಬಿತ್ತು ಅದನ್ನ ಮೈಲಾರ ಮಹದೇವಪ್ಪನವರ 20-30 ಜನರಿದ್ದ ತಂಡ ಇಡೀ ಬಣವಿಯನ್ನೆ ತಿರುವಿ ಹಾಕಿ ಯಾರೊಬ್ಬರಿಗೂ ಹಾನಿಯಾಗದಂತೆ ಕಾಪಾಡಿದ್ದರು.

ಅಂಚೆಯ ಪೋಸ್ಟ್ ಬ್ಯಾಗ್ ಕಸಿಯುವುದು, ಅಂಚೆ ಕಚೇರಿ ಸುಡುವುದು, ಗ್ರಾಮದ ಚಾವಡಿ ಮತ್ತು ಇತರ ಸರಕಾರಿ ಕಚೇರಿ ಜಖಂ ಮಾಡುವುದು, ಗ್ರಾಮಗಳ ಕಂದಾಯ ದಾಖಲೆ ಕಸಿದು ಸುಡುವುದು, ರೈಲು ಹಳಿ ಕೀಳುವುದು ಹೀಗೆ ಅನೇಕ ಬ್ರಿಟಿಷರಿಗೆ ಆಡಳಿತದ ಯಂತ್ರಕ್ಕೆ ಪೆಟ್ಟು ಕೊಡುವಂತಹ ಕೆಲಸ ಮಾಡಿ ಇವರ ಗುಂಪು ಬ್ರಿಟಿಷರಿಗೆ, ಪೊಲೀಸರಿಗೆ ಸಿಂಹಸ್ವಪ್ನವಾಯಿತು.

ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಮೂರು ಜನರ ಒಂದೇ ಸಮಾಧಿಯ ಸ್ಮಾರಕ

ಇಂಥ ನಾನಾ 74 ಸಾಹಸ ಮಾಡಿ, 75ನೆಯ ಸಾಹಸವೆಂದು ಹೊಸರಿತ್ತಿ ಊರಲ್ಲಿ ಸುತ್ತಲ ಗ್ರಾಮದಿಂದ ಸಂಗ್ರಹಿಸಿದ ಕಂದಾಯದ ಹಣ ಕಸಿಯಬೇಕೆಂದು 01 ಏಪ್ರಿಲ್ 1943ರಂದು ಸುಮಾರು 20 ಜನರ ತಂಡ ಬೆಳಗಿನ ಮುಂಜಾವು ಅಲ್ಲಿಗೆ ತಲುಪಿತ್ತು. ವೀರಭದ್ರ ದೇವರ ಗುಡಿಯಲ್ಲಿ ಒಂದು ಕಬ್ಬಿಣದ ಸಂದೂಕಿನಲ್ಲಿ ಹಣ ಇಟ್ಟು ಅದನ್ನು ಕಬ್ಬಿಣದ ಸರಪಳಿಯಿಂದ ಕಂಬಕ್ಕೆ ಬಿಗಿದಿದ್ದರು. ಬಂದೂಕು ಹಿಡಿದ ಬ್ರಿಟಿಷರ ಪೊಲೀಸರು ಕಾವಲು ಕಾಯುತ್ತಿದ್ದರು, ಅವರಲ್ಲಿ ಇಬ್ಬರು ಬೆಳಗ್ಗೆ ಬಹಿರ್ದೆಸೆಗೆ ನದಿ ಬಳಿಗೆ ಹೋದ ಸಮಯದಲ್ಲಿ ಒಬ್ಬನೇ ಕಾವಲಿದ್ದ ಅವನ ಮೇಲೆರಗಿದ ಮಹಾದೇವಪ್ಪ ಹಾಗೂ ಮಿತ್ರರು ಧಾಡಸಿತನದಿಂದ ಒಳನುಗ್ಗಿ ಕಬ್ಬಿಣದ ಸಂದೂಕು ಕೀಳಲು ಯತ್ನಿಸಿದರು. ಗರ್ಭಗುಡಿಯಲ್ಲಿ ಅಡಗಿದ್ದ ಒಬ್ಬ ಕಾನ್ಸ್‌ಟೇಬಲ್ ಮಹಾದೇವಪ್ಪನವರಿಗೆ ಬಂದೂಕಿನ ಮುಂದೆ ಇರುವ ಚಾಕುವಿನಿಂದ ತೀವ್ರವಾಗಿ ಇರಿದರು. ಪೊಲೀಸರು ಇಟ್ಟುಹೋದ ಬಂದೂಕನ್ನು ಕೈಗೆತ್ತಿಕೊಂಡ ಮಹಾದೇವಪ್ಪನವರ ಸಹಚರನೊಬ್ಬ ಪೊಲೀಸನನ್ನು ಕೊಲ್ಲಲು ಮುಂದಾದಾಗ ಮಹಾದೇವಪ್ಪ ಜೋರಾಗಿ ಕೂಗಿ “ನಮ್ಮದು ಅಹಿಂಸಾತ್ಮಕ ಹೋರಾಟ, ನಮ್ಮಿಂದ ಯಾವುದೇ ಪ್ರಾಣ ಹಾನಿಯಾಗಬಾರದು” ಎಂದು ಕೂಗಿ ಅವನನ್ನು ತಡೆದರು! ಆಗ ಅವರ ದೇಹದಲ್ಲಿ ಗಾಯದಿಂದಾಗಿ ರಕ್ತ ಹರಿಯುತ್ತಿತ್ತು. ಅಷ್ಟರಲ್ಲಿ ಹೊರಗೆ ಹೋಗಿದ್ದ ಪೊಲೀಸರು ಬಂದು ಗುಂಡು ಹಾರಿಸಾದಾಗ, ಮಹಾದೇವಪ್ಪ ಮತ್ತು ಅವರ ಇಬ್ಬರು ಸಂಗಾತಿಗಳಾದ ತಿರುಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅಲ್ಲೇ ಹುತಾತ್ಮರಾದರು. ಹೊಸರಿತ್ತಿಯ ವೀರಭದ್ರನ ಗರ್ಭಗುಡಿ ಅಂದಿನ ಚುಮುಚುಮು ಮುಂಜಾವು ರಕ್ತಸಿಕ್ತವಾಗಿತ್ತು.

ಮೈಲಾರ ಮಹದೇವಪ್ಪನವರು ಹಾಗೂ ಸಂಗಾತಿಗಳ ಪ್ರಾಣಾರ್ಪಣೆಯನ್ನು ಹಾವೇರಿಯ ಸಾಹಿತಿಗಳು, ಲಾವಣಿ ಪದಕಾರರು, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನಂತಹ ವಿದ್ಯಾರ್ಥಿ ಸಂಘಟನೆಗಳು ನಡೆಸುವ ಹುತಾತ್ಮ ದಿನ ಅಂಗವಾಗಿ ಹುತಾತ್ಮ ಜ್ಯೋತಿ ಯಾತ್ರೆ, ಮೈಲಾರ ಮಹದೇವಪ್ಪ ಅವರ ಕುರಿತಾದ ದಾರಿ ಯಾವುದು? ಬೀದಿ ನಾಟಕ, ವಿಚಾರ ಸಂಕಿರಣಗಳು ನಡೆಯುತ್ತಿವೆ, ಮನಸುಗಳ ಕಟ್ಟುವ ಕವಿ ಸತೀಷ ಕುಲಕರ್ಣಿಯಂತವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳು ಹುತಾತ್ಮ ಸಂಗಾತಿಗಳ ನೆನಪುಗಳನ್ನು, ಆಶಯಗಳನ್ನು ಜೀವಂತವಾಗಿಡುವ ಪ್ರಯತ್ನ ನಡೆಸುತ್ತಿದ್ದಾರೆ.

ಬ್ರಿಟಿಷರ ವಿರುದ್ಧ ಅಪ್ರತಿಮ ಹೋರಾಟ ನಡೆಸಿ ಅವರಿಗೆ ಸಿಂಹಸ್ವಪ್ನವಾಗಿ ಕೊನೆಗೆ ಅವರ ಗುಂಡಿಗೆ ಬಲಿಯಾದ ಮೈಲಾರ ಮಹಾದೇವ ನಾಡಿನ ಅಸಂಖ್ಯ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದವರು ಅಂತವರ ತ್ಯಾಗ ಬಲಿದಾನಗಳು ಇಂದು ವ್ಯರ್ಥವಾಗಲು ಬಿಡಬಾರದು, ಮತೀಯವಾದಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿ-ಯುವ ಜನರ ಮಧ್ಯೆ ಸ್ವಾತಂತ್ರ‍್ಯ ಚಳುವಳಿಯ ಆಶಯವನ್ನು ಕೊಂಡೊಯ್ಯಬೇಕಿದೆ.

Donate Janashakthi Media

Leave a Reply

Your email address will not be published. Required fields are marked *