ಕ್ರಿಪ್ಟೊ ಕರೆನ್ಸಿ ಕಾನೂನುಬದ್ಧವೋ ಕಾನೂನುಬಾಹಿರವೋ?

ಮೂಲ: ಸಿ.ಪಿ.ಕೃಷ್ಣನ್
ಭಾವಾನುವಾದ: ಕೋಟ ನಾಗರಾಜ

ಈ ವರ್ಷದ ಬಜೆಟ್ ಭಾಷಣದ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವರು ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಎರಡು ಪ್ರಸ್ತಾಪಗಳನ್ನು ಮಾಡಿದ್ದಾರೆ: ಇದರಿಂದ, ಕ್ರಿಪ್ಟೋ ಕರೆನ್ಸಿಯು ಕಾನೂನು ಬದ್ಧವೇ ಅಥವಾ ಕಾನೂನು ಬಾಹಿರವೇ ಎನ್ನುವ ವಿಷಯವು ಇನ್ನಷ್ಟು ಗೊಂದಲಕ್ಕೆ ಈಡಾಗಿದೆ. ಕ್ರಿಪ್ಟೋ ಕರೆನ್ಸಿ ವಿನಿಮಯ ಮತ್ತು ಭಾರತದಲ್ಲಿ ಹೂಡಿಕೆದಾರರ ಸಂಖ್ಯೆಯ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲದಿದ್ದಾಗ, ಅಂತಹ ವ್ಯವಹಾರಗಳ ಲಾಭಗಳ ಮೇಲೆ 30% ತೆರಿಗೆ ವಿಧಿಸುವ ಪ್ರಸ್ತಾಪವು ಕೇವಲ ಕಾಗದದ ಮೇಲೆ ಉಳಿದಂತಾಗುವುದಿಲ್ಲವೇ? ಕಳೆದ ಚಳಿಗಾಲದ ಅಧಿವೇಶನದವರೆಗೂ ನಿಷೇಧಿಸಲು ಉದ್ದೇಶಿಸಿದ್ದ ವರ್ಚುವಲ್ ಕರೆನ್ಸಿಯನ್ನು ಈ ತೆರಿಗೆ ಪ್ರಸ್ತಾಪದಿಂದ ಕಾನೂನುಬದ್ಧ ಗೊಳಿಸಿದಂತಾಗುವುದಿಲ್ಲವೇ ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ. ಆದರೆ ಚುನಾವಣಾ ಬಾಂಡ್‌ನಂತಹ ಅತ್ಯಂತ ಅಪಾರದರ್ಶಕ ವ್ಯವಹಾರದ ಫಲಾನುಭವಿಯಾದ ಪಕ್ಷದ ಸರಕಾರದಿಂದ ಇಂತಹ ಗಂಭೀರ ಪ್ರಶ್ನೆಗಳಿಗೆ ಉತ್ತರ ಸಿಗಬಲ್ಲುದೇ?

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೊ ಕರೆನ್ಸಿಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. 2022ರ ಕೇಂದ್ರ ಬಜೆಟ್ ಮಂಡನೆಯಾದ ನಂತರ ಕ್ರಿಪ್ಟೋ ಕರೆನ್ಸಿಯು ಕಾನೂನುಬದ್ಧವೋ, ಅಥವಾ ಕಾನೂನು ಬಾಹಿರವೋ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಕ್ರಿಪ್ಟೋ ಕರೆನ್ಸಿ ಎಂದರೇನು? ಪ್ರಪಂಚದಲ್ಲಿ ಪ್ರತೀ ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿರುತ್ತದೆ. ಉದಾ: ಭಾರತದಲ್ಲಿ ರೂಪಾಯಿ. ಅಮೇರಿಕಾದಲ್ಲಿ ಡಾಲರ್. ನಮ್ಮ ದೇಶದ ಕರೆನ್ಸಿ ಆದ ರೂಪಾಯಿಯ ಬಿಡುಗಡೆ, ಚಲಾವಣೆ, ನಿಯಂತ್ರಣ, ಲೆಕ್ಕಾಚಾರ ಇತ್ಯಾದಿಗಳು ರಿಸರ್ವ್ ಬ್ಯಾಂಕ್‌ನ ಜವಾಬ್ದಾರಿ. ಇತರ ದೇಶಗಳಲ್ಲಿಆಯಾಯ ದೇಶದ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಕರೆನ್ಸಿಯ ನಿರ್ವಹಣೆ ಮಾಡುತ್ತವೆ.

ಕ್ರಿಪ್ಟೋ ಕರೆನ್ಸಿ ಹಾಗಲ್ಲ. ಇದು ಯಾವ ದೇಶವಾಗಲಿ, ಬ್ಯಾಂಕ್ ಆಗಲಿ, ಇನ್ಯಾವುದೇ ಹಣಕಾಸು ಸಂಸ್ಥೆ ಬಿಡುಗಡೆ ಮಾಡಿದ ಕರೆನ್ಸಿಯೇ ಅಲ್ಲ. ಈ ಕರೆನ್ಸಿಯು ಯಾವ ನಿಯಂತ್ರಣ/ ನಿಬಂಧನೆಗಳಿಗೂ ಒಳಪಟ್ಟಿಲ್ಲ. ಇದರ ನಿರ್ವಹಣೆಗೆ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಇದರ ವ್ಯವಹಾರಗಳು ಯಾವ ಲೆಕ್ಕಪರಿಶೋಧನೆಗೂ ಒಳಪಡುವುದಿಲ್ಲ. ಇದು ಅಂತರ್ಜಾಲದ (internet) ಮೂಲಕ ಚಲಾವಣೆಯಲ್ಲಿರುವ ಡಿಜಿಟಲ್ ಕರೆನ್ಸಿ. ಇದಕ್ಕೆ ಯಾವುದೇ ಭೌತಿಕ ರೂಪವಿಲ್ಲ. ಸರಕು ಮತ್ತು ಸೇವೆಗಳನ್ನು ಈ ಕರೆನ್ಸಿ ಬಳಸಿ ಖರೀದಿಸಲು ಸಾಧ್ಯವಿಲ್ಲ. ಇದಕ್ಕೆ ಯಾವ ಗ್ಯಾರಂಟಿಯನ್ನು ಯಾರೂ ನೀಡುವುದಿಲ್ಲ. ಎಲ್ಲ ತರದ ಕ್ರಿಪ್ಟೋ ಕರೆನ್ಸಿಗಳೂ ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಿಡುಗಡೆ ಮಾಡಲ್ಪಡುತ್ತವೆ. ಇದನ್ನು ಬಿಡುಗಡೆ ಮಾಡುವವರು ಯಾರು ಎನ್ನುವುದೂ ಸಹ ಯಾರಿಗೂ ತಿಳಿದಿರುವುದಿಲ್ಲ.ಆದ್ದರಿಂದಲೇ ಇದಕ್ಕೆ ಕ್ರಿಪ್ಟೊ ಅಂದರೆ ಗೂಢ ಎಂಬ ವಿಶೇಷಣ ಸೇರಿಸಿರುವುದು. ಇದನ್ನು ಯಾರು ಬೇಕಾದರೂ ಖರೀದಿಸಬಹುದು. ಇದರಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಮಾರಬಹುದು. ಇದರ ಮುಖಾಂತರ ಹಣವನ್ನೂ ವರ್ಗಾಯಿಸಬಹುದು.

ವಹಿವಾಟು ನಡೆಯುವುದು ಹೇಗೆ?

ಇದರ ವಹಿವಾಟು ಬ್ಲಾಕ್ ಚೈನ್ ಅಥವ ಖಂಡ ಸರಪಣಿ ತಂತ್ರಜ್ಞಾನ (block chain techinolog) ಎಂಬುದರ ಮೂಲಕ ನಡೆಯುತ್ತದೆ. ಈ ತಂತ್ರಜ್ಞಾನವನ್ನು 2009 ರಲ್ಲಿ ಸತೋಷಿ ನಕಮೊಟೊ ಎಂಬ ಗುಪ್ತ ಹೆಸರಿನವರು ಕಂಡುಹಿಡಿದರು. ಕ್ರಿಪ್ಟೋ ಕರೆನ್ಸಿಗಳ ಪೈಕಿ ಬಿಟ್‌ಕಾಯಿನ್ ತುಂಬಾ ಜನಪ್ರಿಯ. ಬಿಟ್‌ಕಾಯಿನ್ ರೀತಿಯ ಅನೇಕ ಡಿಜಿಟಲ್ ಕರೆನ್ಸಿಗಳು ಇಂದು ಮಾರುಕಟ್ಟೆಯಲ್ಲಿವೆ. ಕ್ರಿಪ್ಟೋ ಕರೆನ್ಸಿಗಳ ವ್ಯವಹಾರಗಳ ಮಾಹಿತಿಗಳನ್ನು ಈ ತಂತ್ರಜ್ಞಾನದ ಮೂಲಕ ಸಂಗ್ರಹಿಸಿ ಇಡಲಾಗುತ್ತದೆ. ಇದೊಂದು ವಿಕೇಂದ್ರೀಕೃತ ದತ್ತಾಂಶ(ಡೇಟಾ) ಸಂಗ್ರಹ ವ್ಯವಸ್ಥೆ. ಪ್ರತಿ ವ್ಯವಹಾರವೂ ದತ್ತಾಂಶ ಸರಪಳಿಯಲ್ಲಿರುವ ಬ್ಲಾಕ್ ಅಂದರೆ ಖಂಡದಲ್ಲಿ ಸಂಗ್ರಹ ಆಗಿರುತ್ತದೆ. ಒಂದು ಖಂಡ ಭರ್ತಿಯಾದನಂತರ ಇನ್ನೊಂದು ಖಂಡದಲ್ಲಿ ವ್ಯವಹಾರ ದಾಖಲಿಸುವ ಕ್ರಮ ಮಂದುವರಿಯುತ್ತದೆ. ಎಲ್ಲ ಬ್ಲಾಕ್‌ಗಳೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ವ್ಯವಹಾರದ ಸರಪಳಿಯಲ್ಲಿರುವ ಎಲ್ಲರ ಕಂಪ್ಯೂಟರ್‌ಗಳಲ್ಲೂ ಈ ಖಂಡ ಸರಪಳಿಯನ್ನು ನೋಡಬಹುದಾಗಿದೆ. ಅಂದರೆ, ಇದು ಕಂಪ್ಯೂಟರ್ ಜಾಲದ ಮೂಲಕ ಬೆಸೆಯಲ್ಪಟ್ಟಿದೆ

ಉದಾಹರಣೆಗೆ ‘ಎ ‘ವ್ಯಕ್ತಿಯು ‘ಬಿ ‘ವ್ಯಕ್ತಿಗೆ ಕೆಲವು ಬಿಟ್‌ಕಾಯಿನ್ ಮಾರುತ್ತಾನೆ ಎಂದಿಟ್ಟುಕ್ಕೊಳ್ಳಿ. ಈ ವ್ಯವಹಾರವು ಸರಪಳಿಯಲ್ಲಿರುವ ಬ್ಲಾಕ್‌ನಲ್ಲಿ ದಾಖಲಾಗುತ್ತದೆ. ‘ಎ’ ವ್ಯಕ್ತಿಯ ಬಳಿ ‘ಬಿ ‘ ವ್ಯಕ್ತಿಗೆ ಮಾರುವಷ್ಟು ಬಿಟ್‌ಕಾಯಿನ್ ಇದೆಯೇ?, ವ್ಯವಹಾರ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡುವವರನ್ನು ‘ಮೈನರ್ಸ್ ‘ ಎಂದು ಕರೆಯಲಾಗುತ್ತದೆ. ಈ ಚಟುವಟಿಕೆಯು ‘ಮೈನಿಂಗ್ ‘ ಎಂದು ಕರೆಯಲ್ಪಡುತ್ತದೆ. ಎಲ್ಲವೂ ಕೋಡ್ ಮೂಲಕವೇ ನಡೆಯುವುದರಿಂದ, ಯಾರ ಬಳಿ ಎಷ್ಟು ಬಿಟ್‌ಕಾಯಿನ್ ಗಳಿವೆ, ಅದರ ಮೌಲ್ಯ ಎಷ್ಟು ಎನ್ನುವುದು ಗೌಪ್ಯವಾಗಿರುತ್ತದೆ. ಮೈನರ್ಸ್‌ಗಳಿಗೆ ಬಿಟ್‌ಕಾಯಿನ್‌ನಲ್ಲಿ ಒಂದು ಅಂಶವು ದಲ್ಲಾಳಿ ರೂಪದಲ್ಲಿ ಸೇವಾ ಶುಲ್ಕವಾಗಿ ಸಿಗುತ್ತದೆ. ನಮ್ಮ ದೇಶದಲ್ಲಿ ಈ ಕರೆನ್ಸಿಯಲ್ಲಿ ಹೂಡಿಕೆ ಮಾಡಿದವರು ಸುಮಾರು 1.5 ಕೋಟಿಯಿಂದ 2 ಕೋಟಿಯಷ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯ ಅಂದಾಜಿನ ಪ್ರಕಾರ ಸುಮಾರು ರೂ.40,000 ಕೋಟಿಯಷ್ಟು ಹಣ ಇದರಲ್ಲಿ ಹೂಡಿಕೆಯಾಗಿರುತ್ತದೆ.

ಇಂದು ಕ್ರಿಪ್ಟೋ ಕರೆನ್ಸಿ ವಹಿವಾಟು ನಡೆಸುವ ಹಲವಾರು ಖಾಸಗಿ ವಿನಿಮಯ ಕೇಂದ್ರಗಳಿವೆ. ಇವುಗಳ ಮೂಲಕ ಇದರ ಮಾರಾಟ, ಖರೀದಿ, ಸಟ್ಟಾ-ವ್ಯಾಪಾರ ನಡೆಯುತ್ತದೆ. ಷೇರುಗಳ ಮಾರಾಟ, ವಿನಿಮಯ ಸ್ಟಾಕ್ ಎಕ್ಸ್ಚೇಂಜ್‌ಗಳ ಮೂಲಕ ನಡೆಯುವ ರೀತಿಯಲ್ಲಿ ಇಲ್ಲಿಯೂ ಸಹ ದಲ್ಲಾಳಿಗಳು ಇರುತ್ತಾರೆ. ಆದರೆ, ಯಾವುದೇ ಕಾನೂನಿಗೆ/ನಿಯಮ ನಿಯಂತ್ರಣಗಳಿಗೆ ಒಳಪಡುವುದಿಲ್ಲ. ಎಲ್ಲವೂ ಅಂತರ್ಜಾಲದ (internet) ಮೂಲಕ ನಡೆಯುತ್ತದೆ. ಯಾರು ಯಾರಿಂದ ಎಷ್ಟು ಖರೀದಿಸಿದ್ದಾರೆ, ಯಾರ ಬಳಿ ಎಷ್ಟು ಕರೆನ್ಸಿ ಇದೆ, ಅದರ ಮೌಲ್ಯ ಎಷ್ಟು ಎಂಬುದನ್ನು ಮತ್ತುಈ ಕರೆನ್ಸಿಯ ರೂಪದಲ್ಲಿ ಯಾರಿಂದ ಯಾರಿಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭವಲ್ಲ. ಈ ವಿನಿಮಯ ಕೇಂದ್ರಗಳು ಬೇರೆ ಬೇರೆ ಕರೆನ್ಸಿಗಳನ್ನು ( ರೂಪಾಯಿ, ಡಾಲರ್, ಇತ್ಯಾದಿ) ಕ್ರಿಪ್ಟೋ ಕರೆನ್ಸಿ(ಬಿಟ್ಕಾಯಿನ್ ) ಆಗಿಯೂ, ಬಿಟ್ಕಾಯಿನ್ನನ್ನು ಹಣವನ್ನಾಗಿಯೂ ( ರೂ, ಡಾಲರ್, ಇತ್ಯಾದಿ.) ಪರಿವರ್ತಿಸುವ ಕೇಂದ್ರವಾಗಿವೆ.

ಎಷ್ಟು ಸುರಕ್ಷಿತ?

ಕ್ರಿಪ್ಟೋ ಕರೆನ್ಸಿಯ ಸಮರ್ಥಕರ ಪ್ರಕಾರ, ಈ ವಿಧಾನದ ವಹಿವಾಟು, ಹೂಡಿಕೆಗಳು ಬ್ಲಾಕ್ ಚೈನ್ ತಂತ್ರಜ್ಞಾನ ಬಳಕೆಯಿಂದಾಗಿ ಅತ್ಯಂತ ಸುರಕ್ಷಿತ ಹಾಗೂ ಸುಲಭವಾಗಿವೆ. ಬ್ಲಾಕ್ ಚೈನ್ ತಂತ್ರಜ್ಞಾನವು ಒಂದು ವಿಕೇಂದ್ರೀಕ್ರತ ದತ್ತಾಂಶ ಸಂಗ್ರಹಣಾ ವ್ಯವಸ್ಥೆ. ಆದ್ದರಿಂದ, ಯಾರೊಬ್ಬರೂ ಸರಪಳಿಯಲ್ಲಿರುವ ಬಹು ಜನರ ಅನುಮತಿ ಇಲ್ಲದೆ ಯಾವುದೇ ಖಂಡದ ದತ್ತಾಂಶವನ್ನು ಬದಲಾಯಿಸುವಂತಿಲ್ಲ.ಈ ತಂತ್ರಜ್ಞಾನವನ್ನು ಶಿಕ್ಷಣ, ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಿಗೂ ಮುಂದಿನ ದಿನಗಳಲ್ಲಿ ಬಳಸಬಹುದಾಗಿದೆ ಎಂಬುದು ಇವರ ವಾದ. ಆದರೆ, ಪ್ರಪಂಚದ ಅನೇಕ ಹೆಸರಾಂತ ಅರ್ಥಶಾಸ್ತ್ರಜ್ಞರು ಈ ಕರೆನ್ಸಿಯ ಬಗ್ಗೆ ವಿರುದ್ಧ-ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ ಮತ್ತು ಇದರ ಭೀಕರ ಪರಿಣಾಮಗಳ ಬಗ್ಗೆ ಸರ್ಕಾರಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಹವಾಲಾ ವಹಿವಾಟು, ಕಪ್ಪು-ಹಣದ ಸಂಗ್ರಹಣೆಗೆ ಅನುಕೂಲ ಮಾಡಿಕೊಡುತ್ತದೆ ಮತ್ತುಅಕ್ರಮ ವಹಿವಾಟುಗಳು, ಮಾದಕವಸ್ತು ಜಾಲಕ್ಕೆ ಹಣಪೂರೈಕೆ, ಮಾನವ ಕಳ್ಳಸಾಗಣೆ, ಭಯೋತ್ಪಾದಕ ಚಟುವಟಿಕೆಗಳು, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಇತ್ಯಾದಿಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದಾಗಿ ತಮ್ಮ ಆತಂಕವನ್ನೂ ವ್ಯಕ್ತಪಡಿಸಿರುತ್ತಾರೆ..

ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹ್ಯಾಕಿಂಗ್ ನಿದರ್ಶನಗಳು ಸಹ ಸಾಮಾನ್ಯವಾಗಿವೆ. ಉದಾಹರಣೆಗೆ, ಅರ್ನ್ಸ್ಟ್&ಯಂಗ್ ಅಧ್ಯಯನವು ಕ್ರಿಪ್ಟೋ ಕರೆನ್ಸಿ ಕೊಡುಗೆಗಳ ಮೂಲಕ ಸಂಗ್ರಹಿಸಲಾದ ಒಟ್ಟು3.7 ಬಿಲಿಯನ್ ಡಾಲರ್ ಹಣದಲ್ಲಿ ಸುಮಾರು 400 ಮಿಲಿಯನ್ ಡಾಲರ್ ಅನ್ನು ಕದಿಯಲಾಗಿದೆ ಎಂಬುದನ್ನು ಪತ್ತೆ ಮಾಡಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಬಯಲಾಗಿರುವ ಬಿಟ್ಕಾಯಿನ್ ಹ್ಯಾಕಿಂಗ್ ಹಗರಣವು ಕ್ರಿಪ್ಟೋ ಕರೆನ್ಸಿಯ ಸುರಕ್ಷತೆಯ ಬಗ್ಗೆಇರುವ ಮಿಥ್ಯೆಯನ್ನು ಅನಾವರಣಗೊಳಿಸಿದೆ.

ಕ್ರಿಪ್ಟೋ ಕರೆನ್ಸಿಗಳ ವ್ಯವಹಾರಗಳ ಬಗ್ಗೆ ಆರ್‌ಬಿಐ ನಿಷೇಧ:

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಪ್ರಿಲ್ 6, 2018 ರಂದು, ವರ್ಚುವಲ್ ಕರೆನ್ಸಿ(ವಿಸಿ) ಎಂದು ಕರೆಯಲ್ಪಡುವ ಕ್ರಿಪ್ಟೋ ಕರೆನ್ಸಿಯಲ್ಲಿ ವ್ಯವಹರಿಸುವುದನ್ನು ನಿಷೇಧಿಸಿದೆ, ” ರಿಸರ್ವ್ ಬ್ಯಾಂಕ್ ಡಿಸೆಂಬರ್ 24, 2013, ಫೆಬ್ರವರಿ 01, 2017 ಮತ್ತು ಡಿಸೆಂಬರ್ 05, 2017 ರಂದು ತನ್ನ ಸಾರ್ವಜನಿಕ ನೋಟಿಸ್‌ಗಳ ಮೂಲಕ ಈ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದೆ. ಬಿಟ್ಕಾಯಿನ್‌ಗಳು ಸೇರಿದಂತೆ ವರ್ಚುವಲ್ ಕರೆನ್ಸಿಗಳ (ವಿಸಿಗಳು) ಬಳಕೆದಾರರು, ಹೊಂದಿರುವವರು ಮತ್ತು ವ್ಯಾಪಾರಿಗಳಿಂದ ಅಂತಹ ವರ್ಚುವಲ್ ಕರೆನ್ಸಿಗಳ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಅಪಾಯಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ತಕ್ಷಣದಿಂದ ಜಾರಿಗೆ ಬರುವಂತೆ, ಆರ್‌ಬಿಐ ನಿಯಂತ್ರಿಸುವ ಘಟಕಗಳು ಅಥವಾ ಈ ಕರೆನ್ಸಿಯಲ್ಲಿ ವ್ಯವಹರಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಅನುಕೂಲಮಾಡಿಕೊಡುವ ಸೇವೆಗಳನ್ನು ಒದಗಿಸಬಾರದು ಎಂದು ನಿರ್ಧರಿಸಲಾಗಿದೆ. ಅಂತಹ ಸೇವೆಗಳಲ್ಲಿ ಖಾತೆಗಳನ್ನು ನಿರ್ವಹಿಸುವುದು, ನೋಂದಾಯಿಸುವುದು, ವ್ಯಾಪಾರ ಮಾಡುವುದು, ಇತ್ಯರ್ಥಪಡಿಸುವುದು, ತೆರವುಗೊಳಿಸುವುದು, ವರ್ಚುವಲ್ ಕರೆನ್ಸಿಗಳ ವಿರುದ್ಧ ಸಾಲಗಳನ್ನು ನೀಡುವುದು, ಅವುಗಳನ್ನು ಮೇಲಾಧಾರವಾಗಿ ಸ್ವೀಕರಿಸುವುದು, ಅವುಗಳೊಂದಿಗೆ ವ್ಯವಹರಿಸುವ ವಿನಿಮಯಗಳ ಖಾತೆಗಳನ್ನು ತೆರೆಯುವುದು ಮತ್ತು ವಿಸಿಗಳ ಖರೀದಿ/ಮಾರಾಟಕ್ಕೆ ಸಂಬಂಧಿಸಿದ ಖಾತೆಗಳಲ್ಲಿ ಹಣವನ್ನು ವರ್ಗಾಯಿಸುವುದು / ಸ್ವೀಕರಿಸುವುದು ಸೇರಿವೆ.” ಎಂದು ಹೇಳುವ ಮೂಲಕ ಈ ಸುತ್ತೋಲೆಯು ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯ ಬಳಕೆಯನ್ನು ನಿಷೇಧಿಸಿತು.

2018 ರಲ್ಲಿ, ವರ್ಚುವಲ್ ಕರೆನ್ಸಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಒಂದು ಕರಡು ಮಸೂದೆಯನ್ನು ರಚಿಸಿತ್ತು. 2019ರಲ್ಲಿ ವಿಸಿಗಳನ್ನು ನಿಷೇಧಿಸಲು ಭಾರತ ಸರ್ಕಾರವು ಮತ್ತೊಂದು ಮಸೂದೆಯನ್ನು ರಚಿಸಿತು.ಆದರೆ, ಇವು ಪಾರ್ಲಿಮೆಂಟಿನಲ್ಲಿ ಮಂಡನೆಯಾಗಿಲ್ಲ.

ಮಾರ್ಚ್ 4, 2020 ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ಅನುಪಾತದ ಆಧಾರದ ಮೇಲೆ ಏಪ್ರಿಲ್ 6, 2018 ರಂದು ಆರ್‌ಬಿಐ ಸುತ್ತೋಲೆಯನ್ನು ರದ್ದುಗೊಳಿಸಿತು. ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಅಸಂಗತ ನಿಲುವನ್ನು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತೀವ್ರವಾಗಿ ಟೀಕಿಸಿದೆ. “ಕಳೆದ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಲ್ಲಿ ವಿಸಿ ವಿನಿಮಯ ಚಟುವಟಿಕೆಗಳು ವಾಸ್ತವವಾಗಿ ಪ್ರತಿಕೂಲ ಪರಿಣಾಮ ಬೀರಿವೆಯೇ ಎಂಬುದನ್ನು ಆರ್‌ಬಿಐ ಇಲ್ಲಿಯವರೆಗೂ ಪತ್ತೆ ಮಾಡಿಲ್ಲ….. ಇಲ್ಲಿಯವರೆಗೆ, ಆರ್‌ಬಿಐ ಯಾವುದೇ ಘಟಕಗಳು ಅಂದರೆ, ರಾಷ್ಟ್ರೀಕೃತ ಬ್ಯಾಂಕುಗಳು/ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು/ ಸಹಕಾರಿಬ್ಯಾಂಕುಗಳು/ ಎನ್‌ಬಿಎಫ್‌ಸಿಗಳು ವಿಸಿ ವಿನಿಮಯ ಕೇಂದ್ರಗಳು ತಮ್ಮೊಂದಿಗೆ ಹೊಂದಿದ್ದ ಇಂಟರ್ಫೇಸ್ ಕಾರಣದಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ನಷ್ಟ ಅಥವಾ ಪ್ರತಿಕೂಲ ಪರಿಣಾಮವನ್ನುಅನುಭವಿಸಿವೆಯೇ ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟತೆ ಹೊಂದಿಲ್ಲ”

ನವೆಂಬರ್ 2021 ರಲ್ಲಿ, ಕೇಂದ್ರ ಸರ್ಕಾರವು ಮತ್ತೊಂದು ಮಸೂದೆಯನ್ನು ರಚಿಸಿತು – “ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ, ಮಸೂದೆ, 2021.” ಆರ್‌ಬಿಐ ಬಿಡುಗಡೆ ಮಾಡಬೇಕಾದ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಅನುಕೂಲಕರ ಚೌಕಟ್ಟನ್ನು ರಚಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಭಾರತದ ಎಲ್ಲಾ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವಾಗಲೇ, ಕ್ರಿಪ್ಟೋ ಕರೆನ್ಸಿಯ ಮೂಲ-ತಂತ್ರಜ್ಞಾನ ಮತ್ತುಅದರ ಬಳಕೆಗಳನ್ನುಉತ್ತೇಜಿಸಲು ಕೆಲವು ವಿನಾಯಿತಿಗಳಿಗೆ ಈ ಮಸೂದೆಯು ಅವಕಾಶ ನೀಡುತ್ತದೆ. ಆದರೆ, ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲಾಗಿಲ್ಲ.

“ ಈ ಬದಿ ಕಾನೂನುಬದ್ಧ

 

ಕ್ರಿಪ್ಟೊ ಮೇಲೆ ತೆರಿಗೆಆದರೆ ಕಾನೂನುಬದ್ಧಗೊಳಿಸಿಲ್ಲ
ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ವಿರೋಧಾಭಾಸದ ನಡೆ

ಫೆಬ್ರವರಿ 1, 2022 ರಂದು, ಬಜೆಟ್ ಭಾಷಣದ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಎರಡು ಪ್ರಸ್ತಾಪಗಳನ್ನು ಮಾಡಿದ್ದಾರೆ:

  1. “ವರ್ಚುವಲ್, ಡಿಜಿಟಲ್ ಸ್ವತ್ತುಗಳ ವಹಿವಾಟುಗಳಲ್ಲಿ ಅಸಾಧಾರಣ ಹೆಚ್ಚಳವಾಗಿದೆ. ಈ ವಹಿವಾಟುಗಳ ಪ್ರಮಾಣ ಮತ್ತು ಆವರ್ತನವು ಇವುಗಳನ್ನು ನಿರ್ದಿಷ್ಟ ತೆರಿಗೆ ವ್ಯಾಪ್ತಿಯೊಳಗೆ ತರುವುದನ್ನು ಅವಶ್ಯಕಗೊಳಿಸಿದೆ. ಅದರಂತೆ, “ವರ್ಚುವಲ್, ಡಿಜಿಟಲ್ ತೆರಿಗೆಯಾಗಿ, ಯಾವುದೇ . “ವರ್ಚುವಲ್, ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇಕಡಾ 30ರ ದರದಲ್ಲಿ ತೆರಿಗೆ ವಿಧಿಸಲಾಗುವುದು ಎಂದು ನಾನು ಪ್ರಸ್ತಾಪಿಸುತ್ತೇನೆ.”
  2. “ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ (ಸಿಬಿಡಿಸಿ) ಪರಿಚಯವು ಡಿಜಿಟಲ್ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ. ಡಿಜಿಟಲ್ ಕರೆನ್ಸಿಯು ಹೆಚ್ಚು ಪರಿಣಾಮಕಾರಿಯೂ ಮತ್ತು ಕರೆನ್ಸಿ ನಿರ್ವಹಣಾ ವ್ಯವಸ್ಥೆಯ ಖರ್ಚು ಕಡಿಮೆಯೂ ಆಗುತ್ತದೆ. ಆದ್ದರಿಂದ, 2022-23 ರಿಂದ ಭಾರತೀಯ ರಿಸರ್ವ್ ಬ್ಯಾಂಕ್, ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ.

ಕೇಂದ್ರ ಸರ್ಕಾರದ ಈ ವಿರೋಧಾಭಾಸದ ನಡೆಯಿಂದ ಕ್ರಿಪ್ಟೋ ಕರೆನ್ಸಿಯು ಕಾನೂನು ಬದ್ಧವೇ ಅಥವಾ ಕಾನೂನು ಬಾಹಿರವೇ ಎನ್ನುವ ವಿಷಯವು ಇನ್ನಷ್ಟು ಗೊಂದಲಕ್ಕೆ ಈಡಾಗಿದೆ.ಕ್ರಿಪ್ಟೋ ಕರೆನ್ಸಿಯ ಮೇಲೆ ವ್ಯವಹರಿಸುವುದನ್ನು ನಿಷೇಧಿಸುವ ಆರ್‌ಬಿಐನ ಸುತ್ತೋಲೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದರೂ, ಇದನ್ನು ನಿಭಾಯಿಸಲು ಯಾವುದೇ ದೃಢ ಪ್ರಸ್ತಾಪವು ಸರ್ಕಾರ/ಆರ್‌ಬಿಐ ಬಳಿ ಇಲ್ಲ. ಭಾರತದಲ್ಲಿ ಕಾರ್ಯ-ನಿರ್ವಹಿಸುತ್ತಿರುವ ಖಾಸಗಿ ಕ್ರಿಪ್ಟೋ ಕರೆನ್ಸಿ ವಿನಿಮಯಗಳ ಸಂಖ್ಯೆಯು ಹೆಚ್ಚುತ್ತಿರುವಾಗ, ಕೇಂದ್ರ ಸರ್ಕಾರದ ಬಳಿಯಾವುದೇ ಅಧಿಕೃತ ದತ್ತಾಂಶವಿಲ್ಲ. ಈ ವಿನಿಮಯಗಳಿಗೆ ಸಂಬಂಧಿಸಿದ ಹೂಡಿಕೆದಾರರ ಸಂಖ್ಯೆಯ ಬಗ್ಗೆ ಸರ್ಕಾರದ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಪ್ಟೋ ಕರೆನ್ಸಿ ವಿನಿಮಯಗಳ ಸಂಖ್ಯೆ ಮತ್ತುಅವುಗಳೊಂದಿಗೆ ಸಂಪರ್ಕ ಹೊಂದಿರುವ ಹೂಡಿಕೆದಾರರ ಸಂಖ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜುಲೈ 27, 2021 ರಂದು ರಾಜ್ಯ ಸಭೆಯಲ್ಲಿ ಮಂಡಿಸಲಾದ ಲಿಖಿತ ಉತ್ತರದಲ್ಲಿ : “ಈ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುವುದಿಲ್ಲ”. ಎಂಬ ಜಾರಿಕೆಯ ಉತ್ತರ ನೀಡಿರುತ್ತಾರೆ.

ಗಂಭೀರ ಪ್ರಶ್ನೆಗಳು

ಕ್ರಿಪ್ಟೋ ಕರೆನ್ಸಿ ವಿನಿಮಯ ಮತ್ತು ಭಾರತದಲ್ಲಿ ಹೂಡಿಕೆದಾರರ ಸಂಖ್ಯೆಯ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲದಿದ್ದಾಗ, ಆ ವ್ಯವಹಾರಗಳ ಲಾಭಗಳ ಮೇಲೆ ಶೇಕಡಾ 30%ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವು ಕೇವಲ ಕಾಗದದ ಮೇಲೆ ಉಳಿದಂತಾಗುವುದಿಲ್ಲವೇ? ಕಳೆದ ಚಳಿಗಾಲದ ಅಧಿವೇಶನದವರೆಗೂ ನಿಷೇಧಿಸಲು ಉದ್ದೇಶಿಸಿದ್ದ ವರ್ಚುವಲ್ ಕರೆನ್ಸಿಯನ್ನು ಈ ತೆರಿಗೆ ಪ್ರಸ್ತಾಪದಿಂದ ಕಾನೂನುಬದ್ಧಗೊಳಿಸಿದಂತಾಗುವುದಿಲ್ಲವೇ? ಖಾಸಗಿ ಆಟಗಾರರು ಬಳಸುವ “ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತು ಇತರ ತಂತ್ರಜ್ಞಾನಗಳನ್ನು” ಬಳಸಿಕೊಂಡು ಆರ್‌ಬಿಐ ಡಿಜಿಟಲ್ ರೂಪಾಯಿಯನ್ನು ಪರಿಚಯಿಸುವುದಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಅಸ್ಪಷ್ಟ ಉದ್ದೇಶದ ಹೇಳಿಕೆಯು ಡಿಜಿಟಲ್ ರೂಪಾಯಿಯ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಮೂಡಿಸುತ್ತದೆ. ಮಾತ್ರವಲ್ಲ, ಕಾನೂನು-ಬಾಹಿರ ಚಟುವಟಿಕೆಗಳಿಗೆ ಇದು ಬಳಕೆ ಆಗುವುದಿಲ್ಲವೆಂಬ ಖಾತ್ರಿ ಎಲ್ಲಿದೆ? ವಂಚನೆಗೆ ಒಳಗಾಗದಂತೆ ರಕ್ಷಣೆ ನೀಡುವ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯೇ ಎಂಬ ಗಂಭೀರ ಪ್ರಶ್ನೆಗಳಿಗೆ ಎಡೆ ಮಾಡಿಕೊಡುತ್ತದೆ.

ಕಳೆದ ವರ್ಷ, ಕ್ರಿಪ್ಟೋ ಕರೆನ್ಸಿಯನ್ನು ಚೀನಾ ನಿಷೇಧಿಸಿತು. ವಿವಿಧ ಹಂತಗಳಲ್ಲಿ ಈ ನಿಷೇಧವನ್ನು ಜಾರಿಗೊಳಿಸಿತು. ಮೊದಲನೆಯದಾಗಿ, ಮೇ ತಿಂಗಳಲ್ಲಿ ಹಣಕಾಸು ಸಂಸ್ಥೆಗಳು ಯಾವುದೇ ಕ್ರಿಪ್ಟೋ ವಹಿವಾಟುಗಳಲ್ಲಿ ತೊಡಗುವುದನ್ನು ನಿಷೇಧಿಸಿತು. ನಂತರ, ಅದು ಜೂನ್‌ನಲ್ಲಿ ಎಲ್ಲಾ ದೇಶೀಯ ಕ್ರಿಪ್ಟೋ ವ್ಯವಹಾರಗಳನ್ನು ನಿಷೇಧಿಸಿತು ಮತ್ತು ಅಂತಿಮವಾಗಿ ಸೆಪ್ಟೆಂಬರ್ 2021ರಲ್ಲಿ,  ಕ್ರಿಪ್ಟೋ ಕರೆನ್ಸಿಗಳನ್ನು ಸಾರಾಸಗಟಾಗಿ ನಿಷೇಧಿಸಿತು. ಪರ್ಯಾಯವಾಗಿ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ಡಿಜಿಟಲ್ ಯುವಾನ್ ಹೆಸರಿನಲ್ಲಿ ವರ್ಚುವಲ್ ಕರೆನ್ಸಿಯನ್ನು ಬಿಡುಗಡೆ ಮಾಡಿತು. ಚೀನಾ ಮಾತ್ರವಲ್ಲದೆ, ಇತರ ಎಂಟು ದೇಶಗಳು – ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇರಾಕ್, ಮೊರೊಕ್ಕೊ, ನೇಪಾಳ, ಕತಾರ್ ಮತ್ತು ಟುನೀಷಿಯಾ ದೇಶಗಳು ಈ ಡಿಜಿಟಲ್ ಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್, ಟಿ. ರಬಿಶಂಕರ್ ಅವರು, ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧಕ್ಕೆ ಕರೆ ನೀಡಿದ್ದಾರೆ. “ಕ್ರಿಪ್ಟೋ ಕರೆನ್ಸಿಗಳನ್ನು ಕರೆನ್ಸಿ, ಆಸ್ತಿ ಅಥವಾ ಸರಕು ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಅವುಗಳಿಗೆ ಯಾವುದೇ ಆಂತರಿಕ ಮೌಲ್ಯವಿಲ್ಲ; ಅವು ಪೊಂಜಿ(ಚೀಟಿ ವ್ಯವಹಾರ) ಯೋಜನೆಗಳಿಗೆ ಹೋಲುತ್ತವೆ ಮತ್ತು ಬಹುಶಃ ಇನ್ನೂ ಕೆಟ್ಟದಾಗಿರಬಹುದು” ಎಂದು ಟಿ. ರಬಿಶಂಕರ್ ಅವರು ಫೆಬ್ರವರಿ 14, 2022ರಂದು ಭಾರತೀಯ ಬ್ಯಾಂಕುಗಳ ಸಂಘವು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು. “ಕ್ರಿಪ್ಟೋ-ತಂತ್ರ ಜ್ಞಾನವು ಸರ್ಕಾರದ ನಿಯಂತ್ರಣಗಳನ್ನು ತಪ್ಪಿಸುವ ತತ್ವಾಧಾರಿತವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ನಿಯಂತ್ರಿತ ಹಣಕಾಸು ವ್ಯವಸ್ಥೆಯನ್ನು ಕಡೆಗಣನೆ ಮಾಡಲು ಕ್ರಿಪ್ಟೋ ಕರೆನ್ಸಿಗಳನ್ನು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಅದು ಕರೆನ್ಸಿ ವ್ಯವಸ್ಥೆ, ವಿತ್ತೀಯ ಪ್ರಾಧಿಕಾರ, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಆರ್ಥಿಕತೆಯನ್ನು ನಿಯಂತ್ರಿಸುವ ಸರ್ಕಾರದ ಸಾಮರ್ಥ್ಯವನ್ನು ಹಾಳುಮಾಡಬಹುದು. 2021 ರಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಬಳಕೆಮಾಡಿಕೊಂಡು ಎಸಗಿದ ಅಪರಾಧಗಳ ಒಟ್ಟು ಮೌಲ್ಯವು 14 ಬಿಲಿಯನ್ ಡಾಲರುಗಳು ಎಂದು ಅಂದಾಜಿಸಲಾಗಿದೆ” ಎಂಬುದನ್ನು ಜನವರಿ 6, 2022ರ ವಾಲ್‌ಸ್ಟ್ರೀಟ್ ಜರ್ನಲ್ ಅನ್ನು ಉಲ್ಲೇಖಿಸಿ, ರಬಿ ಶಂಕರ್ ಹೇಳಿದ್ದಾರೆ.

ಕ್ರಿಪ್ಟೋ ಕರೆನ್ಸಿಗಳನ್ನು ನಿಭಾಯಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ಇದುವರೆಗಿನ ನಿಲುಮೆಗಳು ಯಾವ ಭರವಸೆಯನ್ನೂ ಮೂಡಿಸಿಲ್ಲ. ಚುನಾವಣಾ ಬಾಂಡ್‌ನಂಥಹ ಪಾರದರ್ಶಕವಲ್ಲದ ಚುನಾವಣಾ ದೇಣಿಗೆ ವಿಧಾನದ ಪೂರ್ಣ ಫಲಾನುಭವಿ ಬಿಜೆಪಿ ಸರ್ಕಾರದಿಂದ ಸುರಕ್ಷಿತ ಮತ್ತು ಕಾಲ ಪರೀಕ್ಷಿತ ತಂತ್ರಜ್ಞಾನವನ್ನು ಬಳಸಿಕೊಂಡು ಆರ್‌ಬಿಐ ಮೂಲಕ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಿ, ಎಲ್ಲಾ ಖಾಸಗಿ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸುವ ದೃಢವಾದ ನಿಲುವನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?

Donate Janashakthi Media

Leave a Reply

Your email address will not be published. Required fields are marked *