ಬೆಂಗಳೂರು: ರಾಜ್ಯ ಸರ್ಕಾರದ 40% ಕಮಿಷನ್ ವ್ಯವಹಾರದ ಬಗ್ಗೆ ನಿಯಮ 60ರಡಿ ಚರ್ಚೆಗೆ ಅವಕಾಶ ನಿರಾಕರಿಸಿರುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು 40% ಕಮಿಷನ್ ಕುರಿತಾಗಿ ಚರ್ಚಿಸಲು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 60 ರ ಅಡಿಯಲ್ಲಿ ನಿಲುವಳಿ ಸೂಚನೆಯನ್ನು ನೀಡಿದ್ದೆವು. ಆದರೆ, ಮಾನ್ಯ ಸಭಾಧ್ಯಕ್ಷರು 40% ಕಮಿಷನ್ ಮತ್ತು ಭ್ರಷ್ಟಾಚಾರದ ಕುರಿತು ನಮ್ಮ ಪ್ರಾಥಮಿಕ ಸಲ್ಲಿಕೆಗೂ ಅವಕಾಶ ನೀಡದೆ ನಮ್ಮ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಸಚಿವರು ಮತ್ತು ಕೆಲವು ಇಲಾಖೆಗಳ ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಗುತ್ತಿದಾರರ ಸಂಘದ ಅಧ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆದಿದ್ದರು, ಕಳೆದ ವರ್ಷದ ನವೆಂಬರ್ನಲ್ಲಿ ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಸಾರವಾಗಿತ್ತು. ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ಅವಕಾಶ ಕೇಳಿದ್ದೆ, ಆಗ ಚರ್ಚೆಗೆ ಬರಲಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯ ಸಂದರ್ಭದಲ್ಲಿ ನಾವು ಧರಣಿ ಮಾಡಿದ್ದರಿಂದ ಚರ್ಚೆ ಸಾಧ್ಯವಾಗಿಲ್ಲ. ಈಗ ನಿಮಯ 60 ರಡಿ ಚರ್ಚೆಗೆ ಅವಕಾಶ ಕೇಳಿದ್ದೇನೆ. ಇದು ನಿಮಯ 60 ರಡಿ ಚರ್ಚೆ ಕೈಗೆತ್ತಿಕೊಳ್ಳಲು ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ವಿಷಯವಾಗಿದೆ.
ಮೊನ್ನೆ ಮಾರ್ಚ್ ತಿಂಗಳಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಹೊಟೇಲ್ ಮೆನು ಕಾರ್ಡಿನ ರೀತಿ ದರ ನಿಗದಿ ಮಾಡಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆರೋಗ್ಯ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ವರದಿ ಬಂದಿದೆ. ದಿನಾ ಒಂದೊಂದು ಇಲಾಖೆಯ ಭ್ರಷ್ಟಾಚಾರದ ವರದಿ ಬರ್ತಿದೆ. ಇವೆಲ್ಲವೂ ಇತ್ತೀಚಿನ ಘಟನೆಗಳು. ಇಷ್ಟೆಲ್ಲಾ ನಡೆಯುತ್ತಿದ್ದರು ವಿರೋಧ ಪಕ್ಷದವರು ಸುಮ್ಮನಿರೋಕಾಗುತ್ತಾ?
ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ಸುಮ್ಮನೆ ಕೂರಲಿಲ್ಲ, ಮಾಧ್ಯಮಗಳೆದುರು ಹೋಗಿದ್ದಾರೆ. ಹೋರಾದ ಎಚ್ಚರಿಕೆಯನ್ನು ನೀಡಿದ್ದಾರೆ. ಅವರ ಪತ್ರ ಬಂದಮೇಲೆ ಪ್ರಧಾನ ಮಂತ್ರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೋದಿ ಅವರು ತಮ್ಮನ್ನು ಚೌಕಿದಾರ್ ಎಂದು ಹೇಳಿಕೊಳ್ತಾರೆ. ನಾ ಖಾವೂಂಗಾ, ನಾ ಖಾನೆದೂಂಗ ಎಂದರೆ ಇದೆನಾ?
ಗುತ್ತಿದಾರರು 40% ಸರ್ಕಾರಕ್ಕೆ ಕಮಿಷನ್ ಕೊಟ್ಟು, 15% ಜಿಎಸ್ಟಿ ಕಟ್ಟಿ, 20% ಲಾಭ ಇಟ್ಟಕೊಂಡರೆ ಉಳಿಯೋದು ಎಷ್ಟು? ಜನರ ಬೆವರಿನ ಹಣ ಹೀಗೆ ಪೋಲಾಗುತ್ತಿದೆ, ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ ಎಂದರೆ ಹೇಗೆ? ಸಾರ್ವಜನಿಕವಾಗಿ ಅತ್ಯಂತ ಮಹತ್ವವುಳ್ಳ ಸಂವಿಧಾನ ಮತ್ತು ಕಾನೂನಿನಲ್ಲಿ ನಿರ್ದೇಶಿಸಲಾಗಿರುವ ಕರ್ತವ್ಯಗಳನ್ನು ಜಾರಿಗೊಳಿಸಲು, ಸರ್ಕಾರದ ವೈಫಲ್ಯತೆ ಕಂಡು ಬಂದಲ್ಲಿ ಅಂತಹ ಒಂದು ನಿರ್ಧಿಷ್ಟ ವಿಷಯದ ಮೇಲೆ ಚರ್ಚಿಸುವ ಉದ್ದೇಶಕ್ಕಾಗಿ ನಿಲುವಳಿ ಸೂಚನೆ ನೀಡಬಹುದು’ ಎಂದು ನಿಯಮ 60 ಹೇಳುತ್ತದೆ. ಇತ್ತೀಚೆಗೆ ನಡೆದ ಘಟನೆ ಇದು. ನಿಯಮ 60ರ ಕ್ಲಾಸ್ 5 ರಂತೆ ಇದೇ ಅಧಿವೇಶನದಲ್ಲಿ ಚರ್ಚೆಯಾದ ವಿಷಯ ಮತ್ತೆ ಚರ್ಚೆಗೆ ಬರಬಾರದು ಎಂದು ಹೇಳುತ್ತೆ. ಬೆಳಗಾವಿ ಅಧಿವೇಶನದಲ್ಲಿ ಇದೇ ನಿಯಮದಡಿ ಚರ್ಚೆಗೆ ಅವಕಾಶ ಕೇಳಿದ್ದೆ, ಆದ್ರೆ ಚರ್ಚೆಗೆ ಬರಲೇ ಇಲ್ಲ.
ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆಯಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತೆ ಎಂದು ಹೇಳಿಲ್ಲವೇ? ವಿಶ್ವನಾಥ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ. 20,000 ಕೋಟಿ ಟೆಂಡರ್ ಕರೆದಿದ್ದಾರೆ, ಇದರಲ್ಲಿ 10% ಕಮಿಷನ್ ತೆಗೆದುಕೊಳ್ತಾರೆ ಎಂದು ತಮ್ಮ ಸರ್ಕಾರದ ವಿರುದ್ಧವೇ ಆರೋಪ ಮಾಡಿಲ್ಲವೇ? ನಮ್ಮ ಮಾತು ಬಿಡಿ ಅವರ ಪಕ್ಷದವರೇ ಈ ರೀತಿ ಹಲವು ಮಂದಿ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಈ ತರ ಲೂಟಿ ನಡೀತಿದೆ, ಇದು ತಪ್ಪಬೇಕ ಬೇಡ್ವ? ವಿರೋಧ ಪಕ್ಷವಾಗಿ ಇದನ್ನು ತಡೆಯುವುದು ನಮ್ಮ ಕರ್ತವ್ಯವಲ್ಲವೇ? ಬಿಜೆಪಿಯವರು ಭ್ರಷ್ಟರು, ಭಂಡರು. ತಮ್ಮ ಹುಳುಕು ಗೊತ್ತಾಗುತ್ತೆ ಎಂದು ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ.
ನಿಯಮ 60 ರಡಿ ಚರ್ಚೆಗೆ ಅವಕಾಶ ಕೇಳಿದಾಗ ಪ್ರಾಥಮಿಕ ಸಲ್ಲಿಕೆಗೆ ಮೊದಲು ನನಗೆ ಅವಕಾಶ ಕೊಡಬೇಕು. ನನ್ನ ಮಾತುಗಳು ಸಂತೃಪ್ತಿಯಾದರೆ ಚರ್ಚೆಗೆ ಅವಕಾಶ ನೀಡಬೇಕು. ಅವಕಾಶ ಕೇಳಿದ ಕೂಡಲೇ ಅದನ್ನು ಸ್ವಯಂ ಪ್ರೇರಿತರಾಗಿ ನಿರ್ಧರಿಸಿ ತಿರಸ್ಕಾರ ಮಾಡಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಬಿಜೆಪಿಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಹಿಂದಿನ ಸರ್ಕಾರ ಮಾಡಿಲ್ವ ಎಂದು ಪ್ರಶ್ನೆ ಕೇಳ್ತಾರೆ. ಈಗ ಇರೋದು ಬಿಜೆಪಿ ಸರ್ಕಾರ, ಎಲ್ಲವನ್ನೂ ತನಿಖೆ ಮಾಡಿಸಲಿ ಎಂದರು.
ಸರ್ಕಾರದ ಹುಳುಕು ರಾಜ್ಯದ ಜನರಿಗೆ ಗೊತ್ತಾಗಿ, ಭ್ರಷ್ಟಾಚಾರ ಬಯಲಾಗುತ್ತೆ ಎಂದು ಹೆದರಿಕೊಂಡು ಸ್ಪೀಕರ್ ಅವರ ಮೂಲಕ ತಿರಸ್ಕಾರ ಮಾಡಿಸಿದ್ದಾರೆ. ಮಧ್ಯಾಹ್ನ ಭೋಜನ ವಿರಾಮಕ್ಕೆ ಹೋಗುವಾಗ ನಿಲುವಳಿ ಸೂಚನೆಯ ಮನವಿ ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿ ಹೋಗಿದ್ರು, ಅದಕ್ಕೆ ಮತ್ತೆ ನಾನು 3 ಗಂಟೆಗೆ ಬಂದು ಭ್ರಷ್ಟಾಚಾರದ ಸಂಗತಿಯು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುತ್ತೆ, ಆದ್ದರಿಂದ ನಿಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಿ ಚರ್ಚೆಗೆ ಅವಕಾಶ ಮಾಡಬೇಕೆಂದು ವಿನಂತಿಸಿದರೂ ಸಭಾಧ್ಯಕ್ಷರು ಅದನ್ನು ತಿರಸ್ಕಾರ ಮಾಡಿದ್ದಾರೆ. ಪಕ್ಷದ ಪರವಾಗಿ ಇದನ್ನು ತೀವ್ರವಾಗಿ ವಿರೋಧ ಮಾಡ್ತೇವೆ, ಜನರ ಬಳಿಗೆ ಈ ವಿಷಯವನ್ನು ಕೊಂಡೊಯ್ಯುತ್ತೇವೆ. ಇಲಾಖೆಗಳ ವಿಷಯದ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪ ಮಾಡಿದರೆ ಮುಖ್ಯಮಂತ್ರಿಗಳು, ಸಚಿವರು ಉತ್ತರ ಕೊಡಲೇ ಬೇಕೆಂದಿಲ್ಲ. ನಿಯಮ 60 ರಡಿ ಚರ್ಚೆ ಮಾಡಿದ್ರೆ ಸರ್ಕಾರ ಉತ್ತರ ಕೊಡಲೇಬೇಕಾಗುತ್ತೆ. ಇದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆ.
ಸಚಿವ ಸುಧಾಕರ್ ಯಾವ ಕೇಸ್ ಆದರೂ ಹಾಕಲಿ ನಾವದನ್ನು ಎದುರಿಸಲು ತಯಾರಾಗಿದ್ದೇವೆ. ಕೇಸ್ ಹಾಕ್ತೇನೆ ಎಂದು ಹೆದರಿಸಿ ನಮ್ಮನ್ನು ಸುಮ್ಮನಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಒಬ್ಬ ಲಾಯರ್. ಮಾನನಷ್ಟ ಮೊಕದ್ದಮೆ ಎಂದರೆ ಏನಂತ ನನಗೂ ಗೊತ್ತು. ಒಂದು ವೇಳೆ ಕೇಸ್ ಹಾಕಿದರೆ ಇನ್ನೂ ಒಳ್ಳೆಯದು. ನ್ಯಾಯಾಲಯದಲ್ಲೇ ಅವರ ಬಣ್ಣ ಬಯಲು ಮಾಡಬಹುದು. ಸುಧಾಕರ್ ಕೇಸ್ ಹಾಕಲಿ ಎಂದು ನಾನು ಕಾಯುತ್ತಾ ಇರ್ತೇನೆ. ಕೆಲವರು ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಕೇಸ್ ಹಾಕೋದೆ ಇಲ್ಲ. ಸುಧಾಕರ್ ಕೇಸ್ ದಾಖಲಿಸಿದ್ರೆ ಅದನ್ನು ಸತ್ಯ ಹೊರತರಲು ಸಿಕ್ಕ ಒಳ್ಳೆ ಅವಕಾಶ ಎಂದುಕೊಳ್ತೇನೆ.
ಕೆಂಪಣ್ಣನವರು ಪ್ರಧಾನಿಗೆ ಪತ್ರ ಬರೆದಿದ್ದು 2021ರ ಜುಲೈ 06ರಲ್ಲಿ, ನವೆಂಬರ್ನಲ್ಲಿ ಪತ್ರಿಕೆಗಳಲ್ಲಿ ವರದಿ ಆದ ಮೇಲೆ ಈ ಬಗ್ಗೆ ನನಗೆ ಗೊತ್ತಾಗಿದ್ದು. ಇವತ್ತಿನ ವರೆಗೆ ಯಾವ ಗುತ್ತಿದಾರರ ಸಂಘದವರು ಈ ರೀತಿ ಪ್ರಧಾನಿಗಳಿಗೆ ಪತ್ರ ಬರೆದಿರಲಿಲ್ಲ. ಚುನಾವಣೆ ವೇಳೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ ಅವರದ್ದು 10% ಸರ್ಕಾರ ಅಂದಿದ್ದರು, ಅವರ ಬಳಿ ಏನು ದಾಖಲೆ ಇತ್ತು? ಚಪ್ಪಾಳೆಗಾಗಿ ಭಾಷಣ ಮಾಡಿದ್ರಲ್ಲ ಈಗೇನಂತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಕರ್ನಾಟಕ ಗುತ್ತಿಗೆದಾರರ ಸಂಘದವರು ಇದೇ ಮೊದಲ ಬಾರಿ ಈ ರೀತಿ ಪತ್ರ ಬರೆದಿರುವುದು ಎಂದು ಹೇಳಿದರು.