ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳವನ್ನು ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷದ ನಾಯಕರು ತೀವ್ರ ಗದ್ದಲ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದರಿಂದಾಗಿ ರಾಜ್ಯಸಭೆ ಕಲಾಪವನ್ನು ಇಂದು(ಮಾ.22) ಕೆಲ ಹೊತ್ತಿನವರೆಗೆ ಮುಂದೂಡಲಾಯಿತು.
ಟಿಎಂಸಿ ಸದಸ್ಯರು ಬೆಲೆ ಏರಿಕೆಗೆ ಸಂಬಂಧಿಸಿದ ಫಲಕಗಳನ್ನು ಹಿಡಿದು ಸದನದ ಬಾವಿಗೆ ನುಗ್ಗಿದರೆ, ಕಾಂಗ್ರೆಸ್, ಎಡಪಕ್ಷಗಳು, ಸಮಾಜವಾದಿ ಪಕ್ಷ ಮತ್ತು ಶಿವಸೇನೆ ಸಂಸದರು ಎದ್ದು ನಿಂತು ವಿರೋಧ ವ್ಯಕ್ತಪಡಿಸಿದರು. ಹಲವರು ಘೋಷಣೆ ಕೂಗಿದರು.
267ನೇ ನಿಯಮದ ಅಡಿಯಲ್ಲಿ ಶಕ್ತಿಸಿನ್ಹ್ ಗೋಹಿಲ್(ಕಾಂಗ್ರೆಸ್), ಡೋಲಾ ಸೇನ್(ಟಿಎಂಸಿ), ವಿ ಶಿವದಾಸನ್, ಎಲಮರಮ್ ಕರೀಂ ಮತ್ತು ಜಾನ್ ಬ್ರಿಟ್ಟಾಸ್ (ಸಿಪಿಐ(ಎಂ)) ಅವರು ನೀಡಿದ ನೋಟಿಸ್ಗಳನ್ನು ಸ್ವೀಕರಿಸಿಲ್ಲ ಎಂದು ಸಭಾಪತಿ ಎಂ ವೆಂಕಯ್ಯ ನಾಯ್ಡು ಹೇಳಿದ ನಂತರ, ಪಟ್ಟಿ ಮಾಡಲಾದ ಕಾರ್ಯಸೂಚಿಯನ್ನು ಬದಿಗಿಡಲಾಯಿತು.
ಸಂಬಂಧಪಟ್ಟ ಸಚಿವಾಲಯಗಳ ಅನುದಾನದ ಬೇಡಿಕೆಗಳ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಚರ್ಚಿಸಬಹುದು ಎಂದು ಸಭಾಪತಿಗಳು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಗೃಹಬಳಕೆಯ ಅಡುಗೆ ಅನಿಲ ಎಲ್ಪಿಜಿ ದರ ಪ್ರತಿ ಸಿಲಿಂಡರ್ಗೆ 50 ರೂಪಾಯಿ ಹೆಚ್ಚಿಸಲಾಗಿದೆ.
ಒಂದು ಕಡೆ, ಪೆಟ್ರೋಲಿಯಂ ಸಚಿವಾಲಯವು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಬೆಲೆ ಏರಿಕೆಯನ್ನು ಸಮರ್ಥಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಅತ್ಯಂತ ರಿಯಾಯಿತಿ ದರದಲ್ಲಿ ತ್ವರಿತ ಒಪ್ಪಂದವನ್ನು ಸರ್ಕಾರ ಮಾಡಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಎಲ್ಪಿಜಿ ದರವನ್ನು ಕೇಂದ್ರ ಸರ್ಕಾರ ಕೊನೆಯ ಬಾರಿಗೆ ಅಕ್ಟೋಬರ್ 6, 2021ರಂದು ಪರಿಷ್ಕರಿಸಿತ್ತು. ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 4 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದವು.
ಜುಲೈ ಮತ್ತು ಅಕ್ಟೋಬರ್ 6, 2021ರ ನಡುವೆ ಎಲ್ಪಿಜಿ ಬೆಲೆಗಳು ಪ್ರತಿ ಸಿಲಿಂಡರ್ಗೆ ರೂ 100 ರಷ್ಟು ಏರಿಕೆಯಾಗಿದ್ದವು.