ಹಾರೋಹಳ್ಳಿ ರವೀಂದ್ರ
ಹೋಳಿ ಸಂಸ್ಕೃತಿಯು ಇತ್ತೀಚಿನ ತಲೆಮಾರಿಗೆ ಅದೊಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಹಾಗೆಯೇ ಅನೈತಿಕವಾಗಿ ಕೊಂದು ಈ ದೇಶದ ನೆಲಮೂಲ ರಾಜರ ಆಳ್ವಿಕೆಯನ್ನು ಕಿತ್ತುಕೊಂಡ ವೈದಿಕರ ಕುತಂತ್ರದ ದಿನಗಳು ಕೂಡ ಈ ದೇಶದ ಸಂಸ್ಕೃತಿಯ ಒಂದು ಭಾಗವಾಗಿಯೇ ಉಳಿದುಕೊಂಡಿವೆ. ಇವೆಲ್ಲವೂ ನಮಗೆ ಅರ್ಥವಾಗಬೇಕೆಂದರೆ ಭಾರತದ ವೈದಿಕ ಮತ್ತು ಶೂದ್ರ ಸಂಸ್ಕೃತಿಗಳನ್ನು ಸೀಳಿ ನೋಡಬೇಕು. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಯನವೂ ಕೂಡ ಅಷ್ಟೇ ಮುಖ್ಯ. ಬಾಬಾಸಾಹೆಬ್ ಅಂಬೇಡ್ಕರ್ ಅವರೊಬ್ಬರು ನಮಗೆ ಸಿಗಲಿಲ್ಲವಾಗಿದ್ದರೆ, ಹಿರಣ್ಯ ಕಶಿಪು ಯಾರು? ಬಲಿಯನ್ನು ಯಾರು ಕೊಂದರು? ಅದರ ಆಚರಣೆಯ ಹಿನ್ನೆಲೆ ಏನು? ದೈತ್ಯರು, ಅಸುರರು, ರಾಕ್ಷಸರು, ನಾಗಕುಲ ಹೀಗೆ ಮುಂತಾದ ದ್ರಾವಿಡ ಪರಂಪರೆ ನಮ್ಮ ಕೈಗೆ ಸಿಗುತ್ತಲೇ ಇರಲಿಲ್ಲ.
ಇದನ್ನು ಓದಿ: ಎಸೆದು ಬಿಡು ನಿನ್ನ ಹಾಡುಗಳನೆಲ್ಲ ದೂರ – ಮಹಿಳೆ: ದುಡಿಮೆ ಮತ್ತು ಸ್ವಾತಂತ್ರ್ಯಹೀನತೆ
ಹಿರಣ್ಯ ಕಶಿಪುವಿನ ಆಳ್ವಿಕೆಯ ಪ್ರಾಂತ್ಯ ಮಹಾರಾಷ್ಟ್ರದಿಂದ ಅಯೋಧ್ಯೆಯವರೆವಿಗೂ ವ್ಯಾಪಿಸಿತ್ತು. ಇವರ ವಂಶವೃಕ್ಷವನ್ನು ಒಮ್ಮೆ ಇಣುಕಿ ನೋಡಿದರೆ, ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದ, ಪ್ರಹ್ಲಾದನ ಮಗ ವಿರೋಚನ, ವಿರೋಚನನ ಮಗ ಬಲಿ. ಇವರ ಈ ವಂಶವೃಕ್ಷದಲ್ಲಿ ಹೋಳಿಕಾ ಎಂಬ ಹೆಣ್ಣು ಮಗಳು ಬರುತ್ತಾರೆ. ಆಕೆ ಹಿರಣ್ಯ ಕಶಿಪುವಿನ ತಂಗಿ. ಇಷ್ಟು ಅವರ ವಂಶವೃಕ್ಷದ ಪಟ್ಟಿ. ಬಹುಶಃ ಇನ್ನೂ ಹೆಚ್ಚಿರಬಹುದು. ಆದರೆ ಅವು ನಮ್ಮ ಜಪ್ತಿಗೆ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಕೈಗೆ ಸಿಕ್ಕಿರುವುದನ್ನು ಮಾತಾಡೊಣ.
ಹೊಳಿ ಪರಂಪರೆ ಇಂದಿಗೂ ಭಾರತದಲ್ಲಿ ಜೀವಂತಿಕೆಯಾಗಿದೆ. ಅದೊಂದು ಅತ್ಯಾಚಾರದ ಐಡೆಂಟಿಟಿ. ಅದರ ಬಗ್ಗೆ ಮಾತನಾಡುವ ಮುನ್ನ ಬಲಿ ಆಳ್ವಿಕೆಯ ಬಗ್ಗೆ ಮಾತನಾಡಿ ಅನಂತರ ಹೋಳಿಕಾಳ ಚರಿತ್ರೆಗೆ ಮತ್ತೆ ಬರೊಣ. ಪ್ರಹ್ಲಾದನ ಮೊಮ್ಮಗ ಬಲಿ ಒಳ್ಳೆಯ ಆಡಳಿತಗಾರ. ಅವರ ಆಡಳಿತವನ್ನು ಕಸಿದುಕೊಳ್ಳಲು ವಾಮನನು ಬಲಿ ರಾಜ್ಯದ ಮೇಲೆ ಆಕಸ್ಮಿಕ ಆಕ್ರಮಣ ಮಾಡುತ್ತಾನೆ. ವಾಮನ ತನ್ನ ಸೇನೆಯೊಡನೆ ಬಲಿರಾಜ್ಯಕ್ಕೆ ನುಗ್ಗಿ ರಾಜಧಾನಿಯ ಹತ್ತಿರ ಬೀಡುಬಿಡುತ್ತಾನೆ. ಆದರೆ ಬಲಿಗೆ ವಾಮನನ ಅನಿರೀಕ್ಷಿತ ಆಕ್ರಮಣದ ಬಗ್ಗೆ ಗೊತ್ತಿಲ್ಲವಾದ್ದರಿಂದ ಹೆಚ್ಚು ಸೈನ್ಯವನ್ನು ಕರೆಯಿಸಲು ಸಾಧ್ಯವಾಗಲಿಲ್ಲ. ರಣರಂಗದಲ್ಲೆ ಬಲಿ ಮಡಿಯುತ್ತಾನೆ. ಆದರೆ ಬಲಿಯ ಬಲಗೈ ಭಂಟ ಬಾಣಾಸುರ ವಾಮನನ್ನು ಸೋಲಿಸಲು ಸಾಕಷ್ಟು ಹೆಣಗಾಡುತ್ತಾನೆ. ಆದರೂ ಆತನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಾತ್ರೋ ರಾತ್ರಿ ಸೈನ್ಯ ಕರೆದುಕೊಂಡು ಓಡಿ ಹೋಗುತ್ತಾನೆ. ಓಡಿ ಹೋದವನು ಮತ್ತೆ ಬಲಿರಾಜ್ಯಕ್ಕೆ ಮತ್ತೆ ಮರಳಿ ಬರುತ್ತಾನೆ. ಅಷ್ಟೊತ್ತಿಗೆ ಎರಡನೇ ಬಲಿಗೆ ಪಟ್ಟಾಬಿಷೇಕ ಮಾಡಿ ದ್ವಿಜರ ರಾಜ್ಯ ಹೋಗಬೇಕು. ಮತ್ತೆ ಬಲಿರಾಜ್ಯ ಬರಬೇಕು ಎಂದು ಅಲ್ಲಿನ ಜನರು ಘೊಷಣೆ ಹಾಕುತ್ತಿರುತ್ತಾರೆ.
ನಮ್ಮಲ್ಲಿ ಇಂದಿಗೂ ಕೂಡ ದೀಪಾವಳಿಯ ಹಬ್ಬ ನಡೆಯುತ್ತದೆ. ಅದನ್ನೊಮ್ಮೆ ನೆನಪಿಸಿಕೊಳ್ಳಿ. ವೈದಿಕರು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರ್ರಮಿಸುತ್ತಾರೆ. ಇತ್ತೀಚಿಗೆ ಶೂದ್ರರು ಕೂಡ ಪಟಾಕಿ ಸಿಡಿಸುವುದನ್ನು ರೂಢಿಮಾಡಿಕೊಂಡಿದ್ದಾರೆ. ಆದರೆ ಮೂಲದಲ್ಲಿ ಶೂದ್ರರು ಪಟಾಕಿ ಸಿಡಿಸುತ್ತಿರಲಿಲ್ಲ. ಅದರ ಬದಲಾಗಿ ಅವರು ಮನೆಯಲ್ಲಿ ದೀಪ ಬೆಳಗಿಸುತ್ತಿದ್ದರು. ಅಂದರೆ ಬಲಿ ರಾಜ್ಯ ಮತ್ತೆ ಬರಲಿ ಮತ್ತೆ ಈ ರಾಜ್ಯ ಬೆಳಕು ಕಾಣಲಿ ಎಂಬ ಆಶಾಭಾವನೆಯೊಂದಿಗೆ ದೀಪ ಹಚ್ಚುತ್ತಿದ್ದರು. ಆದರೆ ಜನರಿಗೆ ಬಲಿ ಒಬ್ಬ ದುಷ್ಟ. ಧರ್ಮ ಸಂಸ್ಥಾಪನೆಗೆ ಬಲಿಯನ್ನು ಕೊಲ್ಲಲಾಗಿದೆ ಎಂದು ದೇಶದಾಧ್ಯಂತ ಬಲಿ ರಾಜ್ಯ ಮತ್ತು ಬಲಿ ಆಳ್ವಿಕೆಯನ್ನು ವಿರೂಪಗೊಳಿಸಲಾಗಿದೆ. ಆ ಮೂಲಕ ಶೂದ್ರ ದೊರೆಯ ಸಾವನ್ನು ಶೂದ್ರರೆ ಸಂಭ್ರಮಿಸುವಂತೆ ಪುರಾಣಗಳಲ್ಲಿ ತಮಗೆ ಬೇಕಾದಂತೆ ತಿರುಚಿಕೊಳ್ಳಲಾಗಿದೆ.
ಬಲಿ ರಾಜನ ಆಳ್ವಿಕೆಯಲ್ಲಿ ಯಾರಿಗೂ ದುಖಃವಿರಲಿಲ್ಲ. ಯಾವ ಪ್ರಜೆಗೂ ಯಾವ ಚಿಂತೆಯೂ ಇರಲಿಲ್ಲ. ಅಲ್ಲಿ ಗೂಂಡಾಗಿರಿ ಮುಂತಾದ ಯಾವುದೇ ಸಮಾಜಘಾತುಕ ಕೆಲಸಗಳು ನಡೆಯುತ್ತಿರಲಿಲ್ಲ. ಸುಖಾ ಸುಮ್ಮನೆ ಯಾರಿಗೂ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಎಲ್ಲರಿಗೂ ಸಮಾನತೆ, ಸಮಾನ ನ್ಯಾಯ ಸಿಗುತ್ತಿತ್ತು. ಇಷ್ಟೆಲ್ಲಾ ಒಳ್ಳೆಯ ಆಡಳಿತ ನಿಡಿದರೂ ಬಲಿಯನ್ನು ಯಾಕೆ ಕೊಂದರು ಗೊತ್ತೆ. ಆತನೊಬ್ಬ ಅಸುರ ರಾಜ. ಅಂದರೆ ಆತನೊಬ್ಬ ಶೂದ್ರ ಎಂಬ ಕಾರಣಕ್ಕೆ. ಶೂದ್ರರ ಆಳ್ವಿಕೆಯನ್ನು ಸಹಿಸದ ಪುರೋಹಿತಶಾಹಿ ವರ್ಗ ಆತನನ್ನು ಮೊಸದಿಂದ ಕೊಂದರು. ಇಷ್ಟೊಂದು ನೈಜ ಇತಿಹಾಸವಿರುವ ಇದಕ್ಕೆ ವಿಷ್ಣು ಮೂರು ಪಾದ ಕೇಳಿ ಪಾತಾಳಕ್ಕೆ ತಳ್ಳಿದ ಎಂದು ಕಟ್ಟು ಕಥೆ ಕಟ್ಟಿ ಅದೊಂದು ಧಾರ್ಮಿಕ ಆಚರಣೆಯನ್ನಾಗಿ ಮಾಡಿ ಇಡೀ ದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ.
ಇದನ್ನು ಓದಿ: ಮಹಿಳೆ: ನೆತ್ತಿಯ ಮೇಲೆ ಎಷ್ಟೊಂದು ನಿರ್ಬಂಧಗಳು
ಬಲಿಯನ್ನು ಕೊಂದು ನಮ್ಮ ಕೈಯಲ್ಲೆ ದೀಪಾವಳಿ ಆಚರಿಸುತ್ತಿರುವುದು ಒಂದು ಕಡೆಯಾದರೆ, ಹೋಳಿ ಆಚರಿಸುವ ಮೂಲಕ ನಮ್ಮ ಕೈಯಲ್ಲೆ ಅತ್ಯಾಚಾರವನ್ನು ಬೆಂಬಲಿಸುವಂತೆ ಮಾಡುತ್ತಿರುವುದು ಮತ್ತೊಂದು ಮಾದರಿಯಾಗಿದೆ. ಬಹುತೇಕವಾಗಿ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್, ಐಐಟಿ ಕ್ಯಾಂಪಸ್, ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಇನ್ನಿತರ ಕಾಲೇಜು ಕ್ಯಾಂಪಸ್ ಗಳಲ್ಲಿ ಹೋಳಿ ಆಚರಿಸುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಎಷ್ಟೊ ಹುಡುಗರು ಈ ಬಾರಿ ಹೋಳಿ ಬಂತು ನಾವು ಯಾವೊಬ್ಬ ಹೆಣ್ಣು ಮಗಳಿಗೂ ಬಣ್ಣ ಬಳಿಯಲಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದುಂಟು. ಹಾಗೆಯೇ ಹೆಣ್ಣು ಮಕ್ಕಳು ಸಹಿತ ಈ ಸಲ ಹೋಳಿಯಲ್ಲಿ ಯಾವ ಹುಡುಗನು ಸಿಗಲಿಲ್ಲ ಎಂದು ವೇದನೆ ಪಡುವುದುಂಟು. ಆದರೆ ವಾಸ್ತವವಾಗಿ ಹೋಳಿ ಆಚರಿಸಿದರೆ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ಬೆಂಬಲಿಸಿದಂತೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು.
ಆಗಲೇ ಹೇಳಿದಂತೆ ಪ್ರಹ್ಮಾದನ ಮೊಮ್ಮಗ ಬಲಿ. ಪ್ರಹ್ಮಾದನ ತಂದೆ ಹಿರಣ್ಯ ಕಶಿಪು. ಈ ಹಿರಣ್ಯ ಕಶಿಪುವಿನ ತಂಗಿಯೇ ಹೋಳಿಕಾ. ಇಂದು ನಡೆಯುತ್ತಿರುವ ಹೋಳಿ ಹಬ್ಬ ಈಕೆಯ ಅತ್ಯಾಚಾರದ ಚರಿತ್ರೆಯಾಗಿದೆ. ಹಿರಣ್ಯ ಕಶಿಪುವಿನ ಆಡಳಿತದ ಅವಧಿಯಲ್ಲಿ ವೈದಿಕರು ದಿವಾಳಿಯಂಚಿಗೆ ತಲುಪಿದ್ದರು. ವಿಷ್ಣುವಿಗೆ ಸಲ್ಲುತ್ತಿದ್ದ ಕನಿಷ್ಠ ದೈವಾರಾಧನೆಗೂ ಅವಕಾಶವಿರಲಿಲ್ಲ. ವೈದಿಕರು ಮೂಲದಲ್ಲಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಹಾಳು ಮಾಡುವವರು. ಜೊತೆಗೆ ಆದಿಮ ಸಂಸ್ಕೃತಿಯನ್ನು ನಾಶ ಮಾಡುವತ್ತ ಇವರ ಚಲನೆ ನಡೆಯುತ್ತಿತ್ತು.
ವೈದಿಕರು ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಹಾಗೂ ನಾಶ ಮಾಡುವ ಧ್ವಂಸಕರಾಗಿದ್ದರಿಂದ. ಗಿಡಮೂಲಿಕೆಯ ಸಂಪತ್ತು ಎಲ್ಲಿ ನಾಶವಾಗುವುದೋ ಎಂದು ಅರಣ್ಯ ಪ್ರಿಯರಾಗಿದ್ದ ಹಿರಣ್ಯ ಕಶಿಪು ಅರಣ್ಯದಲ್ಲಿ ಯಾವುದೇ ಗಿಡಮೂಲಿಕೆ ವಸ್ತುಗಳನ್ನು ನಾಶಮಾಡುವಂತಿಲ್ಲ ಎಂದು ರಾಜಾಜ್ಞೆ ಹೊರಡಿಸಿದರು. ಇದರಿಂದ ಕೆಂಡಾಮಂಡಲವಾದ ವೈದಿಕರು ಹಿರಣ್ಯ ಕಶಿಪುವಿನ ಮಗ ಪ್ರಹ್ಮಾದನನ್ನು ತಮ್ಮತ್ತ ಸೆಳೆದುಕೊಂಡು ಸ್ವತಹ ತಂದೆಯ ವಿರುದ್ಧವೇ ಮಗ ತಿರುಗಿ ಬೀಳುವಂತಹ ಸನ್ನಿವೇಶ ಸೃಷ್ಟಿಮಾಡ ತೊಡಗಿದರು. ಬೇಕೆಂದೆ ಪ್ರಹ್ಮಾದನ ತಲೆಕೆಡಿಸಿ ಅಪ್ಪನ ವಿರೋಧಿಯಾಗಿ ಮಾರ್ಪಾಡು ಮಾಡಿದರು. ಆತನಿಗೆ ಯಂಡ ಕುಡಿಸುವುದು, ಜೂಜು ಹಾಡಿಸುವುದು ಮುಂತಾದ ದುಶ್ಚಟಗಳಿಗೆ ತಳ್ಳಿ ತಮ್ಮ ಕೈವಶ ಮಾಡಿಕೊಂಡು ಹಿರಣ್ಯ ಕಶಿಪುವಿನ ವಿರುದ್ಧ ತಿರುಗಿ ಬಿಳುವಂತೆ ಮಾಡಿದರು. ಇದರಿಂದ ಕುಪಿತಗೊಂಡ ಹಿರಣ್ಯ ಕಶಿಪು ಮಗನನ್ನು ಆಸ್ಥಾನದಿಂದ ಹೊರಹಾಕಿದ. ಮನೆಯಿಂದ ಹೊರ ಹೋದ ಮಗ ವೈದಿಕರ ಜೊತೆ ಸೇರಿ ಇಲ್ಲದ ಚಟಗಳನ್ನೆಲ್ಲಾ ಕಲಿತು ಅವಿವೇಕಿಯಾಗಿ ವೈದಿಕರ ಜೊತೆ ಕಾಡಿನಲ್ಲಿಯೇ ಕಾಲ ಕಳೆಯಲು ಪ್ರಾರಂಭಿಸಿದ.
ಹೋಳಿಕಾ ಎಂಬ ಹೆಣ್ಣು ಮಗಳು ಹಿರಣ್ಯ ಕಶಿಪುವಿನ ತಂಗಿ, ಅಂದರೆ ಪ್ರಹ್ಲಾದನ ಅತ್ತೆ. ಅವಳಿಗೆ ಮೊದಲಿನಿಂದಲೂ ಪ್ರಹ್ಲಾದನೆಂದರೆ ಪ್ರಾಣ. ಆ ಕಾರಣಕ್ಕಾಗಿಯೇ ಅವನನ್ನು ಬಿಟ್ಟಿರಲಾರದೆ, ಕದ್ದು ಮುಚ್ಚಿ ಪ್ರಹ್ಲಾದನಿಗೆ ಊಟ ತಂದು ಕೊಡುತ್ತಿದ್ದಳು. ಒಂದು ದಿನ ಹೋಳಿಕಾ ಕಾಡಿನ ನಡುವೆ ನಡೆದು ಪ್ರಹ್ಲಾದನಿಗೆಂದು ಊಟ ತರುತ್ತಿರುವಾಗ ವೈದಿಕರ ಗುಂಪು ಅಡ್ಡ ಹಾಕಿ ಆಕೆಯನ್ನು ಅದೇ ಕಾಡಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ, ಅಲ್ಲೆ ಇದ್ದ ಸೌಧೆ ಕಟ್ಟಿಗೆಗಳಿಂದ ಸುಟ್ಟು ಬಿಡುತ್ತಾರೆ. ಆಕೆ ಶವವಾಗಿ ಕಾಡಿನಲ್ಲಿ ಬೇಯುವಾಗ ಅದರ ಸುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ. ಅದನ್ನೆ ನಾವು ಇಂದಿಗೂ ಹೋಳಿ ಹಬ್ಬ ಎಂದು ಆಚರಿಸುತ್ತಿರುವುದು. ಈ ನೆಲದ ಹೆಣ್ಣು ಮಗಳೊಬ್ಬಳನ್ನು ಅತ್ಯಾಚಾರ ಮಾಡಿದ ದಿನ ಶೋಕದ ದಿನವಾಗಬೇಕಿತ್ತು. ಆದರೆ ದುರಂತವೆಂದರೆ ಅರಿವಿನ ಕೊರತೆಯಿಂದ ಇದು ಸಂಭ್ರಮದ ದಿನವಾಗಿದೆ. ಕಾರಣ ಇದನ್ನು ಸನಾತನಿ ವರ್ಗ ಸಾಂಸ್ಕೃತಿಕ ಐಡೆಂಟಿಟಿಯಾಗಿ ಮಾರ್ಪಾಡು ಮಾಡಿಕೊಂಡಿದೆ. ಆದರೆ ನಾವು ಇನ್ನು ಮುಂದೆ ಇದನ್ನು ಅತ್ಯಾಚಾರ ಹಾಗೂ ದೌರ್ಜನ್ಯದ ಐಡೆಂಟಿಟಿಯನ್ನಾಗಿ ಜನರಿಗೆ ಮನವರಿಕೆ ಮಾಡುವತ್ತ. ಈ ಜನರನ್ನು ವಿಮೊಚನೆಗೊಳಿಸಬೇಕಿದೆ.
ಬಲಿ ಯನ್ನು ಕೊಂದರು. ಯಾಕೆ ಬಲಿಯನ್ನು ಕೊಂದದ್ದು ಎಂದು ಕೇಳಿದರೆ ಅವನೊಬ್ಬ ದುಷ್ಟ ಎಂದು ಬಿಂಬಿಸಿ ದೀಪಾವಳಿ ಆಚರಿಸುತ್ತಾರೆ. ಹಾಗೆಯೇ ಹೋಳಿಯ ಬಗ್ಗೆ ಕೇಳಿದರೆ ಅದು ಕಾಮ ದಹನ, ರಾಧ ಕೃಷ್ಟೆಯ ಆಟ ಎಂದು ಹೇಳುವ ಮೂಲಕ ಈ ದೇಶದ 90 ರಷ್ಟು ಜನರನ್ನು ವಂಚಿಸಿದ್ದಾರೆ. ಇನ್ನು ಮುಂದಾದರು ಇತಿಹಾಸ, ಪುರಾಣ ಹಾಗೂ ಸಂಸ್ಕೃತಿಗಳನ್ನು ಅರಿತು ಇಂತಹ ಆಚರಣೆಗಳನ್ನು ಲೋಕರೂಢಿಯಿಂದ ಹೊರಗಿಡಬೇಕಾದುದ್ದು ನಮ್ಮೆಲ್ಲರ ಜವಾಬ್ದಾರಿ. ಇಲ್ಲವಾದರೆ ಹೋಳಿಯನ್ನು ಬೆಂಬಲಿಸುವ, ಹೋಳಿಯಾಟ ಆಡುವ ಪ್ರತಿಯೊಬ್ಬರು ಮಹಿಳೆಯ ಮೇಲೆ ನಡೆಯುವ ಅತ್ಯಾಚಾರವನ್ನು ಹಾಗೂ ದೌರ್ಜನ್ಯವನ್ನು ಬೆಂಬಲಿಸಿದಂತೆ.