ಇಜಾಜ್ ಅಹ್ಮದ್ (1941 – 2022)
ಟಿ.ಎಲ್.ಕೃಷ್ಣೇಗೌಡ
ತಮ್ಮ ಜೀವನದ ಕೊನೆ ದಿನಗಳಲ್ಲಿ ಸುಧನ್ವಾ ದೇಶಪಾಂಡೆ, ಮಾಲಾ ಹಶ್ಮಿ ಮತ್ತು ವಿಜಯ್ ಪ್ರಸಾದ್ ರವರಿಗೆ ಕೊಟ್ಟ ಸಂದರ್ಶನದಲ್ಲಿ ಇಜಾಜ್ ಅಹ್ಮದ್ ಹೇಳಿದ ಮಾತುಗಳು ಇವು. ಇಜಾಜ್ ಹಾಗೆಯೇ ಬದುಕಿದರು.. ಬದುಕಿನುದ್ದಕ್ಕೂ ಕ್ರಾಂತಿಕಾರಿ ತತ್ವಜ್ಞಾನಿಯಾಗಿ, ರಾಜಕೀಯ ವಿಶ್ಲೇಷಕನಾಗಿ ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಕ್ಸ್‌ವಾದದ ಮೇಲಿನ ಎಲ್ಲಾ ದಾಳಿಗಳನ್ನು ರಣರಂಗದ ಕಲಿಯಂತೆ ಎದುರಿಸಿ, ತುಂಡರಿಸಿ ಮಾರ್ಕ್ಸ್‌ವಾದದ ಪ್ರಭೆಯನ್ನು ಪ್ರಜ್ವಲಿಸುವಂತೆ ಬೆಳಗಿದ ಅಪರೂಪದ ಚಿಂತಕ ಇಜಾಜ್ ಅಹ್ಮದ್…
ಬ್ರಿಟಿಷ್ ಭಾರತದ, ಈಗಿನ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ 1941 ರಲ್ಲಿ ಜನಿಸಿದ ಇಜಾಜ್ ಅಹ್ಮದ್ ಹುಟ್ಟಿ ಬೆಳೆದ ವಾತಾವರಣ ಶ್ರೀಮಂತವಾದುದು. ದೇಶ ಇಬ್ಬಾಗವಾದಾಗ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ತೆರಳಿದರು. ತಂದೆಯಿಂದ ಪಡೆದ ಕೆಲವು ಪ್ರಗತಿಪರ ಪುಸ್ತಕಗಳನ್ನು ಅಧ್ಯಯನ ಮಾಡಿದ ಇಜಾಜ್, ಅದರಿಂದ ಜಗತ್ತಿನ ಬಗ್ಗೆ ಬಂಡವಾಳಶಾಹಿ ವ್ಯವಸ್ಥೆಗೂ ಆಚಿನ ಪರ್ಯಾಯ ಸಾಮಾಜಿಕ ಬದುಕಿನ ಬಗ್ಗೆ ಅರಿತುಕೊಂಡರು. ಎಳೆವೆಯಿಂದಲೇ ಅಂತರರಾಷ್ಟ್ರೀಯತೆಯ, ಸಮಾಜವಾದದ ಕನಸು ಕಂಡರು.
ದೇಶ ವಿಭಜನೆಯ ನಂತರ ಇಜಾಜ್ ರವರ ಕುಟುಂಬ ಲಾಹೋರಿನಲ್ಲಿ ನೆಲೆಸಿದ ಕಾರಣದಿಂದ ಇಜಾಜ್ ರವರು ಅಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ತರಗತಿಯ ಕೋಣೆಯಲ್ಲಿ ಕಲಿತದ್ದಕ್ಕಿಂದ ಚಹಾ ಅಂಗಡಿಯ ಮೂಲೆಗಳಲ್ಲಿ, ರಾಜಕೀಯ ಸಂಘಟನೆಯ ಅಖಾಡಗಳಲ್ಲಿ ಕಲಿತದ್ದೇ ಹೆಚ್ಚು. ಚಹಾ ಅಂಗಡಿಗಳಲ್ಲಿ ಉರ್ದು ಸಾಹಿತ್ಯದ ಮೇರು ವ್ಯಕ್ತಿಗಳನ್ನು ಸಂದಿಸಿದ ಇಜಾಜ್ ಅವರಿಂದ ಸಾಹಿತ್ಯ ಲಾಲಿತ್ಯ ಮತ್ತು ರಾಜಕೀಯದ ಒಳನೋಟಗಳನ್ನು ಕಲಿತರು. ರಾಜಕೀಯ ಪಡಸಾಲೆಗಳಲ್ಲಿ ಮಾರ್ಕ್ಸ್‌ವಾದದ ಆಳವನ್ನು, ಜಗತ್ತನ್ನು ಸೀಮಾತೀತವಾಗಿ ನೋಡುವ ವಿಶ್ವದೃಷ್ಟಿಯನ್ನು ರೂಢಿಸಿಕೊಂಡರು. ಈ ತಿಳುವಳಿಕೆ ಅವರ ಇಡೀ ಬದುಕನ್ನು ಆವರಿಸಿತು. ಎಡ ರಾಜಕೀಯದಲ್ಲಿ ಮುಳುಗಿಹೋದ ಇಜಾಜ್ ಪಾಕಿಸ್ತಾನದ ಆಳುವವರ ಕೆಂಗಣ್ಣಿಗೆ ಗುರಿಯಾದರು. ಆ ಕಾರಣದಿಂದಲೇ ಪಾಕಿಸ್ತಾನವನ್ನು ತೊರೆದು ಅಮೆರಿಕದ ನ್ಯೂಯಾರ್ಕ್ ವಾಸಿಯಾದರು.
‘ಕಾವ್ಯ ಮತ್ತು ರಾಜಕಾರಣ’ ಇಜಾಜ್ ಅಹ್ಮದ್ ರವರ ಎರಡು ಹುಚ್ಚುಗಳು. ಆ ಹುಚ್ಚುಗಳು ನ್ಯೂಯಾರ್ಕ್ ನಗರದಲ್ಲಿ ಅರಳಿ, ಹೂಬಿಟ್ಟವು. ತಮಗಿದ್ದ ಉರ್ದು ಕವಿತೆಗಳೆಡಗಿನ ರಮ್ಯತೆಯನ್ನು ತನ್ನ ಕಾಲದ ಪ್ರಸಿದ್ಧ ಕವಿಗಳಿಗೆ ಉಣ ಬಡಿಸಿದರು. ಉರ್ದು ಗಾಲಿಬ್‌ಗಳನ್ನು ಅವರಿಗೆ ಪಠಿಸಿ, ಆ ಗಾಲಿಬ್‌ಗಳ ಮೇಲಿನ ತಮ್ಮ ವಿಶ್ಲೇಷಣೆಯನ್ನು ಕೇಳಿಸಿ ಅವರನ್ನು ಚಿಂತನೆಗೂ, ರೋಮಾಂಚನಕ್ಕೂ ಹಚ್ಚಿ ಬೆರಗುಗೊಳಿಸಿದರು. ಈ ಸೃಜನಶೀಲ ಪ್ರಯತ್ನಗಳ ಫಲವೇ 1971 ರಲ್ಲಿ ಹೊರಬಂದ ಅವರ ಮೊದಲ ಕೃತಿ ” ಗಾಲಿಬನ ಗಝಲ್‌ಗಳು”.
1980 ರಲ್ಲಿ ಇಜಾಜ್ ಅಹ್ಮದ್ ಭಾರತಕ್ಕೆ ಮರಳಿದರು. ದೆಹಲಿಯಲ್ಲಿ ನೆಲೆ ನಿಂತು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ಸೇರಿದಂತೆ ದೆಹಲಿಯ ಅನೇಕ ಕಾಲೇಜುಗಳಲ್ಲಿ ಪಾಠ ಮಾಡಿದರು. ಈ ಅವಧಿಯಲ್ಲಿ ಆಧುನಿಕೋತ್ತರ ವಾದ, ವಸಾಹತೋತ್ತರ ವಾದ, ಹಿಂದುತ್ವ ಮತ್ತು ಉದಾರವಾದ ಹಾಗೂ ಅಮೆರಿಕ ಮತ್ತು ಅಮೆರಿಕ ಮುಂದೊತ್ತುತ್ತಿರುವ ಜಾಗತೀಕರಣವನ್ನು ಕೇಂದ್ರೀಕರಿಸಿದ ಹೊಸ ಜಾಗತಿಕ ವ್ಯವಸ್ಥೆಯನ್ನು ವಿಮರ್ಶಿಸುವ ಅಪಾರ ಕೆಲಸ ಮಾಡಿದರು.
ಸಂಸ್ಕೃತಿ ಮತ್ತು ಸಾಹಿತ್ಯದ ಮೇಲೆ ತಮಗಿದ್ದ ಅಪಾರ ಪ್ರೀತಿಯಿಂದಾಗಿ, ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳು ಮೂರನೇ ಜಗತ್ತಿನ ಸಂಸ್ಕೃತಿಯನ್ನು ಹೇಗೆ ಉದಾಸೀನ ಮನಸ್ಥಿತಿಯಿಂದ ನೋಡುತ್ತವೆ ಎಂಬುದನ್ನು ಅತ್ಯಂತ ಶಕ್ತಿಶಾಲಿಯಾಗಿ ವಿಶ್ಲೇಷಣೆ ಮಾಡಿದರು. ಇದು ಆಧುನಿಕೋತ್ತರ ವಾದ ಮತ್ತು ವಸಾಹತೋತ್ತರ ವಾದಗಳನ್ನು ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಸಹಾಯ ಮಾಡಿತು.
ಮಾರ್ಕ್ಸ್‌ವಾದದ ಪ್ರಸ್ತುತತೆಯನ್ನು ಅಲ್ಲಗಳೆಯುವ ಆಧುನಿಕೋತ್ತರ ವಾದ ಮತ್ತು ವಸಾಹತೋತ್ತರ ವಾದಗಳನ್ನು ಮಾರ್ಕ್ಸ್‌ವಾದೋತ್ತರ ವಾದಗಳಲ್ಲ, ಬದಲಾಗಿ ಈ ವಾದಗಳು “ಮಾರ್ಕ್ಸ್‌ವಾದಕ್ಕಿಂತ ಮುಂಚಿನ ವಾದಗಳಿಗೆ ಸಮಾನವಾದ, ಮಾರ್ಕ್ಸ್‌ರವರು ಮೀರಿ ಆಚೆ ನಿಂತ ‘ಆದರ್ಶವಾದಕ್ಕೆ’ ಸಮವಾದವು ಎಂದು ತೀಕ್ಷ್ಣವಾಗಿ ವಿಮರ್ಶೆ ಮಾಡಿದರು ಇಜಾಜ್ ಅಹ್ಮದ್.
ಇವುಗಳಿಗೆ ಉತ್ತರ ಕಂಡುಕೊಳ್ಳುವ ಮತ್ತು ಮಾರ್ಕ್ಸ್‌ವಾದವನ್ನು ಅಲ್ಲಗಳೆಯುವ ಚಿಂತಕರಿಗೆ ಉತ್ತರ ನೀಡುವಂತೆ ಆಂಟೋನಿಯೋ ಗ್ರಾಮ್ ಸ್ಕಿ ಯವರ ಬರಹಗಳನ್ನು ಆಳವಾಗಿ ಅಭ್ಯಾಸ ಮಾಡಿದ ಇಜಾಜ್ “ಸಿದ್ದಾಂತ: ವರ್ಗಗಳು, ರಾಷ್ಟ್ರಗಳು, ಸಾಹಿತ್ಯ” ಎಂಬ ಮಹೋನ್ನತ ಕೃತಿ ರಚನೆ ಮಾಡಿದರು. ಜಗತ್ತಿನ ಚಿಂತಕರ ಮೇಲೆ ಅಪಾರ ಪ್ರಭಾವ ಉಂಟುಮಾಡಿದ ಈ ಪುಸ್ತಕದ ಮಹತ್ವದ ಬಗ್ಗೆಯೇ ಪ್ರತ್ಯೇಕ ಬರಹವೊಂದನ್ನು ಬರೆಯಬೇಕು.
ಮಾರ್ಕ್ಸ್‌ವಾದದ ಮೇಲೆ ದಾಳಿ ನಡೆದ ಎಲ್ಲಾ ಸಂದರ್ಭಗಳಲ್ಲಿ ವೀರ ಸೇನಾನಿಯಂತೆ ಅಂತಹ ದಾಳಿಗಳ ವಿರುದ್ಧ ಹೋರಾಡಿದ ಇಜಾಜ್, ಮಾರ್ಕ್ಸ್‌ವಾದದ ಪ್ರಸ್ತುತತೆ ಮಾತ್ರವಲ್ಲದೆ ಮಾರ್ಕ್ಸ್‌ವಾದದ ಅಗತ್ಯದ ಬಗ್ಗೆ ಹೇಳಿದ ಕೆಲವೇ ಚಿಂತಕರಲ್ಲಿ ಇಜಾಜ್ ಪ್ರಮುಖರು. ಬೇರೆಲ್ಲ ವಿಷಯಗಳಂತೆ “ವಸಾಹತೋತ್ತರ ವಾದ ಕೂಡ ಒಂದು ವರ್ಗ ಪ್ರಶ್ನೆಯೇ ಹೊರತು ಬೇರೇನೂ ಅಲ್ಲ”. ಎಂದು ಬಲವಾಗಿ ಪ್ರತಿಪಾದಿಸಿ ಪ್ರಖರ ಬರಹಗಳನ್ನು ಬರೆದರು.
ಫ್ಯಾಸಿಸಮ್ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಬರೆದ ಇಜಾಜ್ 1991 ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಗ್ರಾಮ್ ಸ್ಕಿ ಯವರ ಬರಹಗಳನ್ನು ಆಳವಾಗಿ ಅಧ್ಯಯನ ಮಾಡಿ ಹಿಂದುತ್ವದ ಬೆಳವಣಿಗೆಯನ್ನು ಸರಿಯಾಗಿ ಗ್ರಹಿಸಿದರು. ತಮ್ಮ ಬರಹವೊಂದರಲ್ಲಿ ‘ಪ್ರತಿಯೊಂದು ರಾಷ್ಟ್ರವು ತನ್ನ ಯೋಗ್ಯತೆಗೆ ತಕ್ಕಂತೆ ಫ್ಯಾಸಿಸಮ್ ಆಡಳಿತಕ್ಕೆ ಒಳಪಡುತ್ತದೆ’ ಎಂದು ಬರೆದರು. ಹಿಂದುತ್ವ ಮತ್ತು ಉದಾರವಾದ ಹೇಗೆ ಅಂತರ್ಸಂಬಂಧ ಹೊಂದಿವೆ, ಹೇಗೆ ಇವು ಒರಟು ಬಲಪಂಥೀಯ ಶಕ್ತಿಗಳ ಮೂಲಕ ಹೊರ ಹೊಮ್ಮುತ್ತವೆ ಎಂಬುದನ್ನು ಸ್ಪಷ್ಟವಾಗಿ ಸಿದ್ದಾಂತೀಕರಿಸಿದರು.
ಸದಾ ಎಡ ಪಕ್ಷಗಳು ಅದರಲ್ಲೂ ಸಿಪಿಐ(ಎಂ) ಜೊತೆ ಗುರುತಿಸಿಕೊಂಡಿದ್ದ ಇಜಾಜ್ ಅಹ್ಮದ್ ಎಡಪಂಥೀಯ ಸಂಘಟನೆಗಳ ಯಾವ ಆಹ್ವಾನವನ್ನು ನಿರಾಕರಿಸದೆ ಅತಿಥಿಯಾಗಿ ಪಾಲ್ಗೊಂಡು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು. ಎಡ ಪ್ರಕಾಶನ ಸಂಸ್ಥೆಗಳ ಕೊರತೆ ನೀಗಿಸಲು 1999 ರಲ್ಲಿ ಲೆಫ್ಟ್‌ವರ್ಡ್ ಆರಂಬಿಸಿದಾಗ ಆರಂಭದಿಂದಲೂ ಆ ಸಂಸ್ಥೆಯ ಜೊತೆ ಕೈಜೋಡಿಸಿ ನಿರಂತರವಾಗಿ ಬರಹಗಳನ್ನು ನೀಡಿದರು. ಸಿಪಿಐ-ಎಂ ನ ಸೈದ್ದಾಂತಿಕ ಪತ್ರಿಕೆ ಮಾರ್ಕ್ಸಿಸ್ಟ್ ಮತ್ತು ಪೀಪಲ್ಸ್ ಡೆಮಾಕ್ರಸಿ ಪತ್ರಿಕೆಗಳಿಗೆ ತಪ್ಪದೆ ಲೇಖನಗಳನ್ನು ಬರೆದು ಕೊಡುತ್ತಿದ್ದರು.
2009 ರಲ್ಲಿ ಪ್ರಭೀರ್ ಪುರಕಾಯ್ಸಥ ಆರಂಭಿಸಿದ ವೆಬ್ ಆಧಾರಿತ ಸುದ್ದಿ ವಾಹಿನಿಗೆ ಆರಂಭದ ಅತಿಥಿಗಳಲ್ಲಿ ಇಜಾಜ್ ಪ್ರಮುಖರು. ಆ ಸುದ್ದಿ ವಾಹಿನಿಗೆ ಪಶ್ಚಿಮ ಏಷ್ಯಾ, ಅಮೆರಿಕ, ಉತ್ತರ ಆಫ್ರಿಕಾ ಒಳಗೊಂಡಂತೆ ಜಗತ್ತಿನ ಬೆಳವಣಿಗಳ ಬಗ್ಗೆ ಮಾತನಾಡಿ ತಮ್ಮ ಚಿಂತನೆ ಹಂಚಿಕೊಳ್ಳುತ್ತಿದ್ದರು. ಅವರ ಒಂದೊಂದು ಸಂದರ್ಶನ ಕೂಡ ಒಂದೊಂದು ಉಪನ್ಯಾಸದಂತೆ ಆಳ ಚಿಂತನೆಗೆ ಹಚ್ಚುತ್ತಿದ್ದವು. ಕನ್ನಡದಲ್ಲೂ ಅವರ ಎರಡು ಕೃತಿಗಳು ಬಂದಿದ್ದು ಡಾ. ಕೆ. ಪ್ರಕಾಶ್ ಅನುವಾದಿಸಿರುವ “ಆಧುನಿಕೋತ್ತರವಾದ” ಪ್ರಮುಖವಾದುದು. ಇನ್ನೊಂದು “ಫ್ಯಾಸಿಸಂ, ಹಿಂದುತ್ವ ಮತ್ತು ಭಾರತದ ಪ್ರಜಾಪ್ರಭುತ್ವ” ಬಿ.ಶ್ರೀಪಾದ ಭಟ್ ಅನುವಾದಿಸಿದ ಫ್ರಂಟ್ ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ದೀರ್ಘ ಸಂದರ್ಶನ ಆಧಾರಿತ ಕಿರುಪುಸ್ತಕ. ಡಾ. ಕೆ. ಪ್ರಕಾಶ್ ಅವರೇ ಅನುವಾದಿಸಿರುವ ಅವರ ಐದು ಪ್ರಮುಖ ಬರಹಗಳ ಸಂಕಲನ ಕ್ರಿಯಾ ಮಾಧ್ಯಮ ಪ್ರಕಟಿಸುತ್ತಿರುವ ‘ಬೆಳಕಿನ ಬೆಳೆ’ ಚಿಂತಕರ ಮಾಲೆಯಲ್ಲಿ ಸದಸ್ಯದಲ್ಲೇ ಪ್ರಕಟವಾಗಲಿದೆ.
ಜಗತ್ತಿನ ಅತ್ಯಂತ ಮುಂದುವರಿದ ದೇಶಗಳಲ್ಲಿ ಬದುಕಿದರೂ, ಶ್ರೇಷ್ಠ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿದರೂ ತಮ್ಮ ಬದುಕನ್ನು ಭಾರತದಲ್ಲೇ ಕಳೆಯಲು ಬಯಸಿದ್ದ ಇಜಾಜ್ ಈಗಿನ ಸರ್ಕಾರ ಸೃಷ್ಟಿಸಿದ ವೀಸಾ ಸಮಸ್ಯೆಯಿಂದಾಗಿ ಭಾರತದಲ್ಲಿ ಉಳಿಯಲು ಆಗಲಿಲ್ಲ. ಸದಾ ಹಸನ್ಮುಖಿಯೂ, ಹಾಸ್ಯ ಪ್ರಜ್ಞೆಯ ಸಂಗಾತಿಯೂ ಆಗಿದ್ದ ಕಾಮ್ರೇಡ್ ಇಜಾಜ್ ತಮ್ಮ ವಿದ್ವತ್ತನ್ನು ಮೀರಿ ಎಲ್ಲರೊಂದಿಗೆ ಬೆರೆಯುವ ನಿಜ ಸಂಗಾತಿಯಾಗಿದ್ದರು. ಉತ್ತಮ ಊಟ ಮತ್ತು ಸಂಗೀತದ ಆರಾಧಕರಾಗಿದ್ದ ಇಜಾಜ್ ಎಂದೂ ಅಳಿಸಿ ಹೋಗದ ವೈಚಾರಿಕ ವಿದ್ವತ್ತನ್ನು ಉಳಿಸಿ ಹೋಗಿದ್ದಾರೆ. ಮಾರ್ಕ್ಸ್‌ವಾದನ್ನು ಸೀಮಾತೀತ ಎಂದು ಕರೆದ ಸಂಗಾತಿ ಇಜಾಜ್ ಅವರ ಚಿಂತನೆಗಳೂ ಕೂಡ ಸೀಮಾತೀತ. ಆ ಚಿಂತನೆಗಳ ಸಿಂಚನದ ರೋಮಾಂಚನ ನಮ್ಮದಾಗಲಿ… ಹೋಗಿ ಬನ್ನಿ ಸಂಗಾತಿ…
ಇಜಾಜ್ ಅಹ್ಮದ್ ಅವರ ಪ್ರಮುಖ ಕೃತಿಗಳು
- In Theory: Classes, Nations, Literatures– Verso, 1992.
- Lineages of the Present: Ideological and Political Genealogies of Contemporary South Asia– Verso, 2001.
- On Communalism and Globalization: Offensives of the Far Right– Three Essays Collective, New Delhi, 2002.
- Iraq, Afghanistan and the Imperialism of Our Time- LeftWord Books, New Delhi, 2004.
- In Our Time: Empire, Politics, Culture – Verso, 2007
- Ghazals of Ghalib – Oxford India, 1995.
ಕನ್ನಡಕ್ಕೆ ಅನುವಾದವಾದ ಕೃತಿಗಳು
- ಆಧುನಿಕೋತ್ತರವಾದ – ಅನು: ಡಾ.ಕೆ.ಪ್ರಕಾಶ್
- ಫ್ಯಾಸಿಸಂ, ಹಿಂದುತ್ವ ಮತ್ತು ಭಾರತದ ಪ್ರಜಾಪ್ರಭುತ್ವ – ಅನು: ಬಿ.ಶ್ರೀಪಾದ ಭಟ್
- ಇಜಾಝ್ ಅಹಮದ್ – ಆಯ್ದ ಬರಹಗಳು (‘ಬೆಳಕಿನ ಬೆಳೆ’ – ಭಾರತೀಯ ಚಿಂತಕರ ಮಾಲಿಕೆ) – ಅನು: ಡಾ.ಕೆ.ಪ್ರಕಾಶ್ (ಸದ್ಯದಲ್ಲೇ ಪ್ರಕಟಣೆಯಾಗಲಿದೆ)