ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಈವರೆಗಿನ ಸಮಗ್ರ ಸಾಹಿತ್ಯದ ಕುರಿತಾದ ‘ಬೆವರು ನನ್ನ ದೇವರು’ ಎಂಬ 14 ಸಂಪುಟಗಳ ಲೋಕಾರ್ಪಣೆ
ಬೆಂಗಳೂರು : ಬರಗೂರು ರಾಮಚಂದ್ರಪ್ಪನವರ ಸಾಹಿತ್ಯ ಮತ್ತು ಸಿನಿಮಾದಿಂದ ಈ ಸಮಾಜದಲ್ಲಿ ಒಂದಷ್ಟು ಬದಲಾವಣೆಗಳು ಸಾಧ್ಯವಾಗಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನ ಅಭಿರುಚಿ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡ ಬರಗೂರು ರಾಮಚಂದ್ರಪ್ಪ ಅವರ ‘ಬೆವರು ನನ್ನ ದೇವರು’ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಕಷ್ಟದ ಪರಿಸ್ಥಿತಿಗೆ ಬಂದಿದೆ. ಕೋಮುವಾದ ಗೆಲ್ಲುತ್ತಿದೆ. ಅಲ್ಪಸಂಖ್ಯಾತ, ದಲಿತರ ವಿರುದ್ಧ ಪಿತೂರಿ ನಡೆಸುವವರು ದೇಶವನ್ನು ಆಳುತ್ತಿದ್ದಾರೆ. ಇದನ್ನು ಖಂಡಿಸಿ ಪರ್ಯಾಯ ಭಾರತ ನಿರ್ಮಾಣಕ್ಕಾಗಿ ಬರಹಗಾರರು ಸೇರಿದಂತೆ ನ್ಯಾಯವಾದಿಗಳು ಮುನ್ನುಡಿಯನ್ನು ಬರೆಯಬೇಕಾಗಿದೆ. ಈ ನಾಡಿನಲ್ಲಿ ಸಾಕಷ್ಟು ಕಾಂತ್ರಿಗಳು ನಡೆದಿವೆ. ಪ್ರತಿಯೊಂದು ಕ್ರಾಂತಿಯೂ ಒಂದಲ್ಲ ಒಂದು ರೀತಿಯ ಬದಲಾವಣೆ ತಂದಿದೆ. ಅಂತಹದ್ದೆ ಬದಲಾವಣೆ ತರುವ ಶಕ್ತಿ ಬರಗೂರು ರಾಮಚಂದ್ರಪ್ಪನವರ ಸಾಹಿತ್ಯಕ್ಕೆ ಇದೆ ಎಂದು ಹೇಳಿದರು.
ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಮಾತನಾಡಿ, ವರ್ಣ ಪ್ರಜ್ಞೆಗೆ ಆಧ್ಯತೆ ನೀಡಿ ವರ್ಗ ಪ್ರಜ್ಞೆಯನ್ನು ಹಿಂದಕ್ಕಿಟ್ಟಿರುವುದು ದುರಂತ, ಹಾಗಾಗಿ ವರ್ಗಗಳ ನಡುವಿನ ಕಂದಕ ಹೆಚ್ಚಾಗುತ್ತಲಿದೆ ಎಂದರು. ಇಂದಿನ ಯುವಜನತೆ ಪುಸ್ತಕ ಓದುವ ಆಸಕ್ತಿ ಬೆಳಸಿಕೊಳ್ಳುತ್ತಿಲ್ಲ. ಫೇಸ್‌ಬುಕ್‌ಗಳಲ್ಲಿ ಲೈಕ್ ನೀಡುವ ಉತ್ಸಾಹ, ಪುಸ್ತಕಗಳನ್ನು ಓದುವುದರಲ್ಲಿ ಇಲ್ಲ ಇದು ಬದಲಾಗಬೇಕಿದೆ. ಬರಗೂರು ಅವರು ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇದೇ ವೇಳೆ ಹೊಸತನಕ್ಕೆ ತೆರೆದುಕೊಂಡಿದ್ದಾರೆ. ವೈಚಾರಿಕತೆ ಮತ್ತು ಭಾವುಕತೆಯನ್ನು ಅವರಲ್ಲಿ ಕಾಣಬಹುದು’ ಎಂದರು
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕಾಯಕವು ಬೆವರಿನ ಸಂಸ್ಕೃತಿ. ಆರೋಗ್ಯಕರ ಸಮಾಜ ನಿರ್ಮಾಣವಾಗುವುದು ದುಡಿಮೆಯ ಪ್ರತೀಕವಾದ ಈ ಬೆವರಿನಿಂದಲೇ. ಆದ್ದರಿಂದ, ದುಡಿಮೆಯೇ ಬೆವರು. ಬೆವರೇ ದೇವರು ಎಂದು ಹೇಳಿದರು.
ಸಮಾಜವನ್ನು ಕಟ್ಟಿದ್ದು ಈ ಬೆವರು, ಸಂಸ್ಕೃತಿಯನ್ನೂ ಕಟ್ಟಿದೆ. ಬೆವರಿನಿಂದಲೇ ಸಮಾಜ ಸಂಸ್ಕೃತಿ ರೂಪೂಗೊಳ್ಳಲು ಸಾಧ್ಯ.ಯಾವ ಬೆವರು ಸಮಾಜ ಹಾಗೂ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೋ ಆ ಬೇವರೇ ನನ್ನ ದೇವರು ಎಂದರು.
‘ಬೆವರು ನನ್ನ ದೇವರು’ ಸಮಗ್ರ ಸಾಹಿತ್ಯ ಸಂಪುಟ ಕೃತಿಯು ಬೆವರಿನ ಕುರಿತ ವಿಚಾರಗಳನ್ನು ಕಟ್ಟಿಕೊಡುತ್ತದೆ. ಮೊದಲು ಜನಗಳಿಗೆ ಜವಾಬ್ದಾರರಾಗಿರಬೇಕು. ಜನರ ಮಧ್ಯೆ ನಿಂತು ಸಮಾಜವನ್ನು, ಸಂಸ್ಕೃತಿಯನ್ನು ನೋಡಿದರೆ ನಮ್ಮ ದೃಷ್ಟಿ ಬದಲಾಗುತ್ತೆ. ಅದಕ್ಕೆ ನಾನು ಬೆವರು ನನ್ನ ದೇವರೆಂದು ನನ್ನ ಕೃತಿಗೆ ಹೆಸರಿಟ್ಟೆ’ ಎಂದು ಹೇಳಿದರು.
ಸಂಶೋಧಕ ಡಾ. ಬಸವರಾಜ ಕಲ್ಗುಡಿ, ಬಹುಭಾಷಾ ನಟಿ ಹರಿಪ್ರಿಯಾ, ನಟಿ ರೇಖಾ ಹಾಗೂ ಶಮಿತಾ ಮಲ್ನಾಡ್, ಕುಮಾರ್ ಗೋವಿಂದ್, ಅಭಿರುಚಿ ಗಣೇಶ್, ಸ್ವಾನ್ ಪ್ರಿಂಟರ್ಸ್‌ನ ಕೃಷ್ಣಮೂರ್ತಿ ಸೇರಿದಂತೆ ಸಾಹಿತ್ಯಾಸಕ್ತರಿದ್ದರು.
ದಿನವಿಡೀ ಕಾರ್ಯಕ್ರಮ ಸಂಪುಟಗಳ ಲೋಕಾರ್ಪಣೆ ನಂತರ ಮಹಿಳಾ ಕವಿಗೋಷ್ಠಿ ನಡೆಯಿತು. ಬಳಿಕ ಎಚ್. ಟಿ. ಪೋತೆ ಮತ್ತು ಕೆ. ಕೇಶವ ಶರ್ಮ ಹಾಗೂ ಮಲ್ಲಿಕಾರ್ಜುನ ಹಿರೇಮಠ ಅವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ಯನ್ನು ಪ್ರದಾನ ಸೇರಿದಂತೆ ಇಡೀ ದಿನ ಕಾರ್ಯಕ್ರಮ ಹಲವು ನಡೆಯಿತು.