ಬೆಂಗಳೂರು ಚಿತ್ರೋತ್ಸವದಲ್ಲಿ ನಾನು ನೋಡಿದ ರಾಜಕೀಯ ಫಿಲಂಗಳು – 1: ‘ದೆರ್ ಇಸ್ ನೋ ಇವಿಲ್’

ವಸಂತರಾಜ ಎನ್.ಕೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಾನು ನೋಡಿದ 12 ಫಿಲಂಗಳಲ್ಲಿ 6 ರಾಜಕೀಯ ಫಿಲಂಗಳು ಎನ್ನಬಹುದು. ಹೆಚ್ಚಿನ ಉತ್ಕೃಷ್ಟ ಫಿಲಂಗಳಲ್ಲಿ ಹಲವು ಪದರಗಳು ಆಯಾಮಗಳು ಇರುವುದು ಸಾಮಾನ್ಯ. ಹಲವು ಫಿಲಂಗಳಲ್ಲಿ ರಾಜಕೀಯ ಪದರ/ಆಯಾಮಗಳಿರುವುದು ಅಷ್ಟೇ ಸಹಜವಾದದ್ದು. ಏಕೆಂದರೆ ರಾಜಕೀಯ ಸಮಾಜದಿಂದ ಹೊರತಾದ್ದಲ್ಲ. ಮುನುಷ್ಯನ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ.  ಯಾವುದೇ ಸಾಹಿತ್ಯ, ನಾಟಕ, ಫಿಲಂ ರಾಜಕೀಯ-ರಹಿತ (ಅಪೊಲಿಟಿಕಲ್) ಆಗಿರಬೇಕು ಎಂಬುದು ‘ಕಲೆಗಾಗಿ ಕಲೆ’ ಎನ್ನುವ ಕಲಾ ಪಂಥದ ಸ್ವಯಂ-ವಿದಿತ ಅಸಹಜ ಕಟ್ಟುಪಾಡು ಅಷ್ಟೇ. ಇಲ್ಲಿ ನಾನು ನೋಡಿದ 6 ರಾಜಕೀಯ ಫಿಲಂಗಳ – “ದೆರ್ ಸಿ ನೋ ಇವಿಲ್”, “ಅಹದ್’ ಸ್ ನೀ”, “ಬ್ರದರ್ಸ್ ಕೀಪರ್”, “ಬ್ಯಾಡ್ ಲಕ್ ಬ್ಯಾಂಗಿಂಗ್”, “ಪ್ಯಾರಲಲ್ ಮದರ್ಸ್”, “ಮೆಮೊರಿಯ” – ಕುರಿತು ಕೆಲವು ಮಾತುಗಳು ಅದನ್ನು ಸ್ಪಷ್ಟಪಡಿಸಬಹುದು.

ಸತ್ಯಜಿತ್ ರಾಯ್ ಅವರ ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆಯ ಕುರಿತು ಗಿರೀಶ್ ಕಾಸರವಳ್ಳಿ ‘ಸತ್ಯಜಿತ್ ರೇ ಫಿಲಂಗಳ ಹೊರಳು ನೋಟ’ ಸರಣಿಯನ್ನು ಉದ್ಘಾಟಿಸುತ್ತಾ ವಿಸ್ತಾರವಾಗಿ ಮಾತನಾಡಿದ್ದರು. ರಾಯ್ ಅವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಸಮುದಾಯ ಮತ್ತಿತರ ಸಂಘಟನೆಗಳು ತಿಂಗಳಿಗೆ ಒಂದು ಸಂವಾದರಂತೆ ಈ ಸಂವಾದ ಸರಣಿಯನ್ನು ಏರ್ಪಡಿಸುತ್ತಿವೆ. ಈ ವರೆಗೆ 7 ಸಂವಾದಗಳು ನಡೆದಿವೆ. ಫಿಲಂಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ನಿರ್ವಚಿಸುತ್ತಾ ಅದು ಮೂರು ರೂಪಗಳಲ್ಲಿ ಇರಬಹುದು ಎಂದು ಕಾಸರವಳ್ಳಿ ಅವರು ಗುರುತಿಸಿದರು. ಮೊದಲನೆಯದಾಗಿ ಶಕ್ತಿ ರಾಜಕಾರಣದ ಅನಾವರಣದ ರೂಪದಲ್ಲಿ ಇರಬಹುದು. ಇದು ಪ್ರಭುತ್ವ ಮಾತ್ರವಲ್ಲದೆ ಯಜಮಾನಿಕೆ ಇರುವ ವರ್ಗ, ಸಮುದಾಯ, ಮತಧರ್ಮ, ಕುಲ/ಜನಾಂಗ (ರೇಸ್) – ಇವುಗಳ ಶಕ್ತಿ ರಾಜಕಾರಣ ಸಹ ಆಗಿರಬಹುದು. ಎರಡನೆಯದಾಗಿ ಅದು ಸೈದ್ಧಾಂತಿಕ ರಾಜಕಾರಣದ ರೂಪ ತಳೆಯಬಹುದು. ಫಿಲಂಗಳಲ್ಲಿ ಕಥನ ನಿರ್ವಹಣೆಗೆ ಅಥವಾ ಒಂದು ಪರಿಸ್ಥಿತಿಯ ವ್ಯಾಖ್ಯಾನ ಮಾಡಲು ಸಿದ್ಧಾಂತವನ್ನು ಬಳಸಬಹುದು. ಇಲ್ಲಿ ಸಿದ್ಧಾಂತ ಎಂದರೆ ಎಡ, ಬಲ ಅಲ್ಲದೆ, ಮಹಿಳಾವಾದ, ಪರಿಸರವಾದ, ಜಾತಿ-ವಿನಾಶ, ಜನಾಂಗವಾದ-ವಿರೋಧಿ ಇತ್ಯಾದಿಗಳಲ್ಲಿ ಯಾವುದೂ ಇರಬಹುದು. ಮೂರನೆಯದು ವಿವಿಧ ವ್ಯಕ್ತಿಗಳು ತಮ್ಮ ಅನುದಿನದ ವ್ಯವಹಾರ, ಕ್ರಿಯೆಗಳ ಭಾಗವಾಗಿ ಆಡುವ ಮಾತುಗಳಲ್ಲಿ ತೆಗೆದುಕೊಳ್ಳುವ ನಿಲುವುಗಳಲ್ಲಿ ಅವರಿಗೆ ಅರಿವಿಲ್ಲದೆಯೇ ರಾಜಕಾರಣದ ಧ್ವನಿ ಮೂಡುತ್ತವೆ. ಇದು ವ್ಯಕ್ತ ನೆಲೆಯಲ್ಲಿ ಇರುವುದಿಲ್ಲ. ಆದರೆ ಅದರ ಸೂಚ್ಯ ಮೆಲುದನಿ ಇರುತ್ತದೆ. ಈ ಮೂರನೆಯ ರೀತಿಯಲ್ಲಿ ರಾಜಕೀಯ ಪ್ರಜ್ಞೆ ಸತ್ಯಜಿತ್ ರಾಯ್ ಅವರ ಫಿಲಂ ಗಳಲ್ಲಿ ಹೆಚ್ಚಾಗಿ ವ್ಯಕ್ತವಾಗುತ್ತದೆ ಎಂದರು.

ಆರು ರಾಜಕೀಯ ಫಿಲಂಗಳು

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಾನು ನೋಡಿದ 12 ಫಿಲಂಗಳಲ್ಲಿ 6 ಫಿಲಂಗಳು ಈ ಅರ್ಥದಲ್ಲಿ ರಾಜಕೀಯ ಫಿಲಂಗಳು ಎನ್ನಬಹುದು. ಈ ಮೇಲಿನ ಮೂರು ರೀತಿಗಳು, ಅವುಗಳ ಮಿಶ್ರಣಗಳಲ್ಲದೆ  ತಮ್ಮದೇ ಆದ ರೀತಿಯಲ್ಲಿ ರಾಜಕೀಯ ಪ್ರಜ್ಞೆ ಅಭಿವ್ಯಕ್ತಿಸಿದವು ಇದ್ದವು. ಹೆಚ್ಚಿನ ಉತ್ಕೃಷ್ಟ ಫಿಲಂಗಳಲ್ಲಿ ಹಲವು ಪದರಗಳು ಆಯಾಮಗಳು ಇರುವುದು ಸಾಮಾನ್ಯ. ಹಲವು ಫಿಲಂಗಳಲ್ಲಿ ರಾಜಕೀಯ ಪದರ/ಆಯಾಮಗಳಿರುವುದು ಅಷ್ಟೇ ಸಹಜವಾದದ್ದು. ಏಕೆಂದರೆ ರಾಜಕೀಯ ಸಮಾಜದಿಂದ ಹೊರತಾದ್ದಲ್ಲ. ಮುನುಷ್ಯನ ಸಾಮಾಜಿಕ ಜೀವನದ ಅವಿಭಾಜ್ಯ ಅಂಗ.  ಯಾವುದೇ ಸಾಹಿತ್ಯ, ನಾಟಕ, ಫಿಲಂ ರಾಜಕೀಯ-ರಹಿತ (ಅಪೊಲಿಟಿಕಲ್) ಆಗಿರಬೇಕು ಎಂಬುದು ‘ಕಲೆಗಾಗಿ ಕಲೆ’ ಎನ್ನುವ ಕಲಾ ಪಂಥದ ತಾವೇ ವಿಧಿಸಿಕೊಂಡ ಅಸಹಜ ಕಟ್ಟುಪಾಡು ಅಷ್ಟೇ. ಇಲ್ಲಿ ನಾನು ನೋಡಿದ 6 ಫಿಲಂಗಳ – “ದೆರ್ ಸಿ ನೋ ಇವಿಲ್”, “ಅಹದ್’ ಸ್ ನೀ”, “ಬ್ರದರ್ಸ್ ಕೀಪರ್”, “ಬ್ಯಾಡ್ ಲಕ್ ಬ್ಯಾಂಗಿಂಗ್”, “ಪ್ಯಾರಲಲ್ ಮದರ್ಸ್”, “ಮೆಮೊರಿಯ” ಕುರಿತು ಕೆಲವು ಮಾತುಗಳು ಅದನ್ನು ಸ್ಪಷ್ಟ ಪಡಿಸಬಹುದು.

ಪ್ರಸಿದ್ಧ ಇರಾನಿಯನ್ ನಿರ್ದೇಶಕ ಮಹಮ್ಮದ್ ರಸೌಲಫ್ ಅವರ ‘ದೆರ್ ಇಸ್ ನೋ ಇವಿಲ್’ ಪ್ರಭುತ್ವ ಹಿಂಸೆಯ ಸಂದರ್ಭದಲ್ಲಿ ಒಡ್ಡುವ ನೈತಿಕ ಇಕ್ಕಟ್ಟುಗಳು, ಸವಾಲುಗಳು, ಮಾನವೀಯ ಸಂಬಂಧಗಳ ಮೇಲೆ ಪರಿಣಾಮಗಳ ಕುರಿತ ಫಿಲಂ. ಇಸ್ರೇಲಿ ನಿರ್ದೇಶಕ ನದವ್ ಲಪಿದ್ ಅವರ ‘‘ಅಹದ್ ಸ್ ನೀ’ ಸಹ ಪ್ರಭುತ್ವ ದಮನದ ಕುರಿತ ಫಿಲಂ.  ಟರ್ಕಿಯ ಫೆರಿಟ್ ಕರಹನ್ ಅವರ “ಬ್ರದರ್ಸ್ ಕೀಪರ್” ಒಂದು ಹುಡುಗರ ಬೋರ್ಡಿಂಗ್ ಸ್ಕೂಲ್ ನ ಕ್ರೂರ ವ್ಯವಸ್ಥೆಯನ್ನು ಸಶಕ್ತವಾಗಿ ನಿರೂಪಿಸುತ್ತಲೇ ಶಕ್ತಿ ರಾಜಕಾರಣವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುವ ಚಿತ್ರ. ರಾದು ಜೂದ್ ಅವರ ‘ಬ್ಯಾಡ್ ಲಕ್ ಬ್ಯಾಂಗಿಂಗ್’ ಎಂಬ ರೊಮೇನಿಯನ್ ಫಿಲಂ ಲೈಂಗಿಕತೆ ಮತ್ತು ರಾಜಕೀಯ ಸೇರಿದಂತೆ ಇತರ ಹಲವು ವಿಷಯಗಳ ಕುರಿತು ಮಡಿವಂತಿಕೆ ಗೋಸುಂಬೆತನ ಹಾಗೂ ತಪ್ಪು ತಿಳಿವಳಿಕೆಗಳನ್ನು ಬಯಲುಗೊಳಿಸುವ ವಿಡಂಬನಾ ಶೈಲಿಯ ಫಿಲಂ. ಪ್ರೇಮ, ಕಾಮ, ಒಂಟಿ ತಾಯಂದಿರ ಧೈರ್ಯ-ಬವಣೆಗಳ ವೈಯಕ್ತಿಕ ನೆಲೆ ಮತ್ತು ಸ್ಪೈನಿನ ಐದು ದಶಕಗಳ ಫ್ಯಾಸಿಸ್ಟ್ ಕ್ರೌರ್ಯದ ಚರಿತ್ರೆ ವರ್ತಮಾನಕ್ಕೂ ಚಾಚಿಕೊಂಡಿರುವುದನ್ನು ಒಂದೇ ಕಥನದಲ್ಲಿ ಹೆಣೆಯುವ “ಪ್ರಾರಲಲ್ ಮದರ್ಸ್’ ಪ್ರಸಿದ್ಧ ಸ್ಪಾನಿಷ್ ನಿರ್ದೇಶಕ ಪೆದ್ರೊ ಅಲ್ಮದೊವರ್ ಅವರ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ. ಪ್ರಸಿದ್ಧ ಥಾಯ್ ನಿರ್ದೇಶಕ ಅಪಿಚಾಟ್ಪೊಂಗ್ ವೀರಸೆತುಕಲ್ ಅವರ ‘ಮೆಮೊರಿಯ’ ಎಂಬ ಇಂಗ್ಲಿಷ್/ಸ್ಪಾನಿಷ್ ಚಿತ್ರ ಸುಲಭ ವರ್ಗೀಕರಣಕ್ಕೆ ನಿಲುಕುವ ಚಿತ್ರವಲ್ಲ. ಆದರೂ ಅದರಲ್ಲೂ ಸ್ಪಷ್ಟ ರಾಜಕೀಯ ಧ್ವನಿಗಳಿವೆ.

ಇಲ್ಲಿ ಯಾವುದೇ ಕೆಡುಕು ಇಲ್ಲ?

‘ದೆರ್ ಇಸ್ ನೋ ಇವಿಲ್’ ಇರಾನ್ ನಲ್ಲಿ ವ್ಯಾಪಕವಾಗಿರುವ ಮರಣದಂಡನೆಯನ್ನು ಕೊಡುವ ವ್ಯಕ್ತಿಗಳ ತಾಕಲಾಟಗಳು, ಅವರು ಮಾಡುವ ಆಯ್ಕೆ ತಮ್ಮ ಮೇಲೂ, ತಮ್ಮ ಹತ್ತಿರದವರ ಮೇಲೂ ಬೀರುವ ಪರಿಣಾಮಗಳ ನಾಲ್ಕು ಬಿಡಿ ಕಥನಗಳ ಸಂಕಲನ. ಇರಾನ್ ಮರಣದಂಡನೆ ವ್ಯಾಪಕವಾಗಿರುವ (2017ರಲ್ಲಿ ಜಗತ್ತಿನ ಒಟ್ಟು ಮರಣ ದಂಡನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇರಾನಿನಲ್ಲಿ ಆಯಿತಂತೆ) ದೇಶವಾದ್ದರಿಂದ ಅದನ್ನು ಪೋಲಿಸ್/ಸೈನ್ಯದ ಶಾಶ್ವತ ಸಿಬ್ಬಂದಿಗಿಂತ ಹೆಚ್ಚಾಗಿ ಕಡ್ಡಾಯ ಮಿಲಿಟರಿ ಸೇವೆಯಲ್ಲಿರುವ ಯುವಕರಿಂದ ಮಾಡಿಸಲಾಗುತ್ತದೆ. ನಿಗದಿತ ವರ್ಷಗಳ ಕಡ್ಡಾಯ ಮಿಲಿಟರಿ ಸೇವೆ ಮಾಡದವರಿಗೆ ಪಾಸ್ ಪೋರ್ಟ್ ಸಿಗುವುದಿಲ್ಲ. ಉನ್ನತ ಶಿಕ್ಷಣ, ವ್ಯಾಪಾರ-ವಹಿವಾಟು ಲೈಸೆನ್ಸ್ ಯಾವುದೂ ಸಿಗುವುದಿಲ್ಲ. ಮರಣದಂಡನೆ ನಿಭಾಯಿಸುವುದನ್ನು ಅಥವಾ ಇತರ ಯಾವುದೇ ವಿಧಿಸಿದ ಕರ್ತವ್ಯವನ್ನು ನಿರಾಕರಿಸಿದರೆ ಕಡ್ಡಾಯ ಮಿಲಿಟರಿ ಸೇವೆಯ ಅವಧಿಯ ವಿಸ್ತರಣೆ ಅಥವಾ ಇನ್ನೂ ತೀವ್ರ ಶಿಕ್ಷೆಗೆ ಗುರಿಯಾಗುವ ಅಪಾಯವಿರುತ್ತದೆ. ಅಪರಾಧವೇನೆಂದು ಗೊತ್ತಿಲ್ಲದ, ಪರಿಚಯವಿಲ್ಲದ ನೇಣುಗಂಬದಲ್ಲಿ ನಿಂತ ವ್ಯಕ್ತಿಯ ‘ಕಾಲಡಿಯಿಂದ ಸ್ಟೂಲ್ ಎಳೆಯುವ ಕರ್ತವ್ಯ’ವನ್ನು ನಿಭಾಯಿಸುವುದು ಯಾರಿಗೂ ಸುಲಭವಲ್ಲ.  ಇದನ್ನು ಬೇರೆ ಬೇರೆ ರೀತಿಯಲ್ಲಿ ನಿಭಾಯಿಸಿದ ನಾಲ್ವರ ಮತ್ತು ಅವರ ಹತ್ತಿರದವರ ಮೇಲೆ ತಕ್ಷಣದ ಮತ್ತು ದೂರಗಾಮಿ ಪರಿಣಾಮಗಳು ಏನಾದವು ಎಂಬುದು ಈ ಫಿಲಂ ನ ಕಥನದ ಸಾರ.

ತನ್ನ ಕೆಲಸದಲ್ಲಿ ‘ಯಾವುದೇ ಕೆಡಕು ಇಲ್ಲ’ ಎಂದು ಬಗೆದು ಅದನ್ನು ಬೇರೆ ದೈನಂದಿನ ಕರ್ತವ್ಯದ ಭಾಗವಾಗಿ ಮಾಡುವ ಮೊದಲ ಕಥಾ ನಾಯಕ ಸಹ ತನ್ನ ಈ ಕರ್ತವ್ಯದ ರಾತ್ರಿ ಪಾಳಿ ಹತ್ತಿರ ಬಂದಂತೆ ವಿಹ್ವಲನಾಗುತ್ತಾನೆ. ‘ತಾನು ಇದನ್ನು ಖಂಡಿತ ಮಾಡಲಾರೆ’ ಎಂದು ತನ್ನ ನೈತಿಕ ತಾಕಲಾಟಗಳನ್ನು  ಸಂಗಾತಿಗಳೊಂದಿಗೆ ತೋಡಿಕೊಂಡು ಚರ್ಚೆಗೆ ಇಳಿಯುವ, ಈ ಕರ್ತವ್ಯ ದಿಂದ ತಪ್ಪಿಸಿಕೊಳ್ಳಲು ಬೇರೆ ಕಡೆಗೆ ವರ್ಗಾವಣೆ ಮುಂತಾದ ಹಲವು ಪ್ರಯತ್ನಗಳನ್ನು ಮಾಡುವ ‘ನೀನು ಮಾಡಬಲ್ಲೆ ಎಂದು ಅವಳು ಹೇಳಿದಳು’ ಎಂಬ ಎರಡನೆಯ ಕಥನದ ನಾಯಕ ಕೊನೆಗೂ ತನ್ನ ಪ್ರೇಯಸಿ ಜತೆ ಸೇರಿ ಓಡಿ ಹೋಗುತ್ತಾನೆ. ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ 3 ದಿನದ ರಜೆ ಗಾಗಿ ‘ಕರ್ತವ್ಯ’ವನ್ನು ಮಾಡಿ ಬಂದಿರುವ ‘ಹುಟ್ಟುಹಬ್ಬ’ ಎಂಬ ಮೂರನೇಯ ಕಥನದ ನಾಯಕ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತಾನು ಸ್ಟೂಲ್ ಎಳೆದು ಕೊಂದಿರುವ ಯುವಕ ‘ಅಪರಾಧಿ’ಯಲ್ಲ. ತನ್ನ ಪ್ರೇಯಸಿ ಮಾತ್ರವಲ್ಲ ಆಕೆಯ ಇಡೀ ಕುಟುಂಬ ಮತ್ತು ಸುತ್ತಲಿನ ಸಮುದಾಯ ಗೌರವಿಸುವ ರಾಜಕೀಯ ನಾಯಕ ಎಂದು ತಿಳಿದಾಗ ಖಿನ್ನನಾಗುತ್ತಾನೆ. ಆದರೂ ಆತ ಪ್ರೇಯಸಿಗೆ ಮಾಡುವ ಪ್ರೇಮ ನಿವೇದನೆಯು ವ್ಯರ್ಥವಾಗಿ ಆಕೆಯ ಪ್ರೇಮವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ.

ಈ ಪರಿಸ್ಥಿತಿಯಲ್ಲಿ ನೀವೇನು ಮಾಡುತ್ತೀರಿ?

ಜರ್ಮನಿಯಲ್ಲಿ ‘ಅಪ್ಪ’ನ ಜತೆ ನೆಲೆಸಿ ವೈದ್ಯಕೀಯ ಓದುತ್ತಿರುವ ಮಗಳು ಇರಾನಿನ ದುರ್ಗಮ ಪ್ರದೇಶವೊಂದರಲ್ಲಿ ವಾಸಿಸುತ್ತಿರುವ ‘ಚಿಕ್ಕಪ್ಪ’ನನ್ನು ಭೇಟಿ ಮಾಡಲು ಬರುವುದರೊಂದಿಗೆ ನಾಲ್ಕನೆಯ ಕಥನ ‘ಕಿಸ್ ಮಿ’ ಆರಂಭವಾಗುತ್ತದೆ. ಆ ಪ್ರದೇಶದ ಜನ ಡಾಕ್ಟರ್ ಎಂದು ಕರೆಯುವ, ಜೇನು ಸಾಕಣೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ, ಈಗ ಸಾವು ಸನ್ನಿಹಿತವಾಗಿರುವ ನಿಗೂಢ ‘ಚಿಕ್ಕಪ್ಪ’ ತನ್ನ ‘ಅಪ್ಪ’.  ಇದಕ್ಕೆ ಕಾರಣ ‘ಅಪ್ಪ’ ಕಡ್ಡಾಯ ಮಿಲಿಟರಿ ಸೇವೆಯಲ್ಲಿ ‘ಸ್ಟೂಲ್ ಎಳೆದು’ ಮರಣದಂಡನೆ ಕೊಡುವ ಕರ್ತವ್ಯವನ್ನು ನಿರಾಕರಿಸಿ ಓಡಿ ಬಂದು ದೂರದ ದುರ್ಗಮ ಪ್ರದೇಶದಲ್ಲಿ ನೆಲೆಸಿದ್ದು. ಮಡದಿಯನ್ನು (ಆಕೆ ಗರ್ಭಿಣಿ ಅಂತ ಗೊತ್ತಿಲ್ಲದೆ) ಆಕೆಯ ಸೋದರನೊಂದಿಗೆ ಜರ್ಮನಿಗೆ ಕಳಿಸಿದ್ದು, ಆಕೆ ತನಗೆ ಜನ್ಮ ನೀಡಿ ಸಾಯುತ್ತಾಳೆ. ಈ ಗುಟ್ಟನ್ನು ತಿಳಿದ ಮಗಳು ಅದನ್ನು ಸಹಜವಾಗಿ ಸ್ವೀಕರಿಸದೆ  ‘ಅಪ್ಪ’ನ ಜತೆ ಮಾತನಾಡಲು ಸಹ ನಿರಾಕರಿಸುತ್ತಾಳೆ. ತೋಳಗಳ ಬೇಟೆಗೆ ಹೋದಾಗ ಅದಕ್ಕೆ ಗುಂಡು ಹೊಡೆಯಲು ‘ನನಗೆ ತೊಂದರೆ ಮಾಡದವರನ್ನು ನಾನು ಕೊಲ್ಲಲಾರೆ’ ಎಂದು  ನಿರಾಕರಿಸುವ ಅವಳು, ಅಪ್ಪ ನ ನೈತಿಕ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ. ಯಾರೋ ಗೊತ್ತಿಲ್ಲದವರನ್ನು ಕೊಲ್ಲಲು ನಿರಾಕರಿಸಿ, ತನ್ನ ಜೀವನದ ಮತ್ತು ತಾಯಿಯ ‘ಕೊಲೆ’ ಮಾಡುವುದು ನ್ಯಾಯವಲ್ಲ ಎನ್ನುತ್ತಾಳೆ.

ಪ್ರಭುತ್ವ ತನ್ನ ವಿರೋಧಿಗಳ ಕೊಲೆಯನ್ನು ಸಾಂಸ್ಥೀಕರಿಸಿದಾಗ ಅದನ್ನು ನಿಭಾಯಿಸಬೇಕಾದ ವ್ಯಕ್ತಿಗಳ ನೈತಿಕ ತಾಕಲಾಟಗಳ, ಆಯ್ಕೆಗಳ ಮತ್ತು ಅದರ ಪರಿಣಾಮಗಳ ಮೇಲೆ ಇಡಿಯ ಫಿಲಂ ಕಥನ ಹೆಣೆದು, ಯಾವುದೇ ನಿರ್ಣಯಗಳನ್ನು ಹೇರದೆ ಈ ಪರಿಸ್ಥಿತಿಯಲ್ಲಿ ‘ನೀವೇನು ಮಾಡುತ್ತೀರಿ’ ಎಂದು ನೋಡುಗರನ್ನು ರಸೌಲಫ್ ಪ್ರಶ್ನಿಸುವಂತಿದೆ.  ಈ ನೈತಿಕ ತಾಕಲಾಟ ಇರಾನಿಗೆ ಸೀಮಿತವಾದದ್ದೂ ಅಲ್ಲ. ಪ್ರಭುತ್ವ ಕೊಲೆಗಳ, ಹಿಂಸಾಚಾರಗಳ ಸಂದರ್ಭದಲ್ಲಿ ಇದರಲ್ಲಿ ಭಾಗಿ ಅಥವಾ ಶಾಮೀಲು ಆಗಬೇಕಾದವರಿಗೆ ಎಲ್ಲ ಕಡೆ ಅನ್ವಯವಾಗುವಂಥದು. ಆದ್ದರಿಂದ ಈ ಫಿಲಂಗೆ ವಿಶೇಷ ಬಗೆಯ ಸಾರ್ವತ್ರಿಕತೆ ಬರುತ್ತದೆ. ನಿಧಾನ ಗತಿಯ ದೈನಂದಿನ ಜೀವನದ ವಾಸ್ತವ ಚಿತ್ರಣ ದಂಗು ಬಡಿಸುವ ಕೊನೆಯ ದೃಶ್ಯದಲ್ಲಿ ಕೊನೆಗೊಳ್ಳುವ ಮೊದಲ ಕಥನ, ಉಸಿರುಟ್ಟಿಸುವ ವೇಗದಲ್ಲಿ ಸಾಗುವ ತೀವ್ರ ಟೆನ್ಶನ್, ಸ್ಸಪೆನ್ಸ್ ಸಾಹಸಗಳಿಂದ ತುಂಬಿದ ಎರಡನೆಯ ಕಥನ; ಗೀತಾತ್ಮಕ ಪ್ರೇಮಕಥನದಿಂದ ಆರಂಭವಾಗಿ ದುಃಖಾಂತವಾಗುವ ಮೂರನೆಯ ತೀವ್ರ ಭಾವನಾತ್ಮಕ ಕಥನ, ಮತ್ತೆ ನಿಧಾನ ಗತಿಯ ದೈನಂದಿನ ಜೀವನದ ವಾಸ್ತವ ಚಿತ್ರಣದೊಂದಿಗೆ ಸಾಗಿ ಭಾವನಾತ್ಮಕ ಕೊನೆಯ ಮತ್ತು ಎಲ್ಲ ಕಥನಗಳ ಆಶಯವನ್ನು ಸಮಗ್ರೀಕರಿಸುವ ಕೊನೆಯ ಕಥನ – ಈ ನಾಲ್ಕು ‘ಬಿಡಿ’ ಕಥನಗಳಲ್ಲಿ ನಿರ್ದೇಶಕ ಬಳಸಿರುವ ವಿವಿಧ ಕಥನ ಶೈಲಿ, ರಸಾಭಿವ್ಯಕ್ತಿ ಗಳು ಫಿಲಂ ಗೆ ಅದರ ವಿಶೇಷ ಶಕ್ತಿಯನ್ನು ಕೊಡುತ್ತವೆ. ರಸೌಲಫ್ ಅವರು ‘ವಿವಾದಾಸ್ಪದ, ಅಪಾಯಕಾರಿ’ ವಿಷಯಗಳನ್ನು ತಮ್ಮ ಫಿಲಂಗಳಿಗೆ ಎತ್ತಿಕೊಳ್ಳುವುದಕ್ಕೆ ಹೆಸರಾಗಿದ್ದಾರೆ. ಅವರು ಅದಕ್ಕಾಗಿ ಜೈಲುವಾಸವನ್ನು ಕಂಡಿದ್ದು, ಈಗ ಯಾವುದೇ ಫಿಲಂ ಮಾಡದಂತೆ ಇರಾನಿ ಸರಕಾರ ಅವರ ಮೇಲೆ ಇರುವ ನಿಷೇಧವನ್ನು ಧಿಕ್ಕರಿಸಿ ಈ ಫಿಲಂ ಮಾಡಿದ್ದಾರೆ.  ನುಡಿ-ನಡೆ, ಕಲೆ-ಬದುಕು ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದ  ರಸೌಲಫ್ ಅವರ ‘ದೆರ್ ಇಸ್ ನೋ ಇವಿಲ್’ ಬಹುಕಾಲ (ಪ್ರಭುತ್ವ ಕೊಲೆ, ಹಿಂಸಾಚಾರ ಗಳು ಜಗತ್ತಿನಲ್ಲಿ ಎಲ್ಲಾದರೂ ಇರುವವರೆಗಂತೂ) ಕಾಡುವ ಸಶಕ್ತ ಪ್ರಾಮಾಣಿಕ ರಾಜಕೀಯ ಫಿಲಂ.

Donate Janashakthi Media

Leave a Reply

Your email address will not be published. Required fields are marked *