ಹಿಜಾಬ್-ಕೇಸರಿ ಶಾಲು ವಿವಾದ: ಪ್ರೀತಿಯ ವಿದ್ಯಾರ್ಥಿಗಳಿಗೊಂದು ಚರಿತ್ರೆಯೊಂದಿಗೆ ವಸ್ತುನಿಷ್ಠವಾದ ಕಿವಿಮಾತು

ಎನ್. ಚಿನ್ನಸ್ವಾಮಿ ಸೋಸಲೆ

“ಭಾರತ ಬಹುಸಂಸ್ಕೃತಿಯ ನಾಡು ಹಾಗೆ ಸರ್ವಧರ್ಮವನ್ನು ಸಮಾನವಾಗಿ ಕಾಣುವ ಸಂಸ್ಕೃತಿಯ ಬೀಡು” ಎಂದು ಬೊಗಳೆ ಬಿಡುತ್ತಾ  ಶತಶತಮಾನಗಳಿಂದ ಈ ರಾಷ್ಟ್ರವನ್ನು ಜನಾಂಗೀಯವಾಗಿ ಪ್ರಪಂಚದ ಸಾಮಾಜಿಕ ವ್ಯವಸ್ಥೆಯೇ ದಿಗ್ಭ್ರಮೆಗೊಳಿಸುವಂತಹ ಬಹುಸಂಖ್ಯಾತ ಮಾನವರ ಮೂಲಭೂತ ಹಕ್ಕುಗಳನ್ನು ಹರಣ ಮಾಡಿ, ಒಡೆದು ಆಳ್ವಿಕೆ ಮಾಡಿದವರು ಹೇಳಿಕೊಂಡು ಬಂದ ಮುತ್ತಿನಂತಹ ಮಾತುಗಳು. ಈ ಅವೈಜ್ಞಾನಿಕ ಚರಿತ್ರೆಯ ಮಾತುಗಳು ಇಂದು  ವೈಭವವಾಗಿ ನಮ್ಮ ಚರಿತ್ರೆಯ ಪುಟಗಳಲ್ಲಿ ಮೆರೆದಿರುವುದು ನಡುವಿನ ದೊಡ್ಡ ದುರಂತ. ಮನೆಯಲ್ಲಿ ಒಂದೇ ತಾಯಿಯ ಮಕ್ಕಳು ಸುಳ್ಳು ಮತ್ತು ಸತ್ಯ. ಸತ್ಯ ಎಂಬುವನು ತುಂಬಾ ಮೃದು ಹಾಗೆಯೇ ನಿರ್ಧಾರದಲ್ಲಿ ಬಹಳ ಕಠಿಣ – ಆದರೆ ಸುಳ್ಳು ಎಂಬುವನು ಪುಂಡ ಹಾಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದ ವ್ಯಕ್ತಿ. ಆದರೆ ಬಹುದೊಡ್ಡ ವ್ಯತ್ಯಾಸವೆಂದರೆ ಸತ್ಯ ಎಂಬ ಮಗ ಮನೆಯಿಂದ ಹೊರಗೆ ಬರುವ ಮುಂಚೆ ಸುಳ್ಳು ಎಂಬ ಮಗ ಊರೆಲ್ಲ ಸುತ್ತಿಕೊಂಡು ಮನೆಗೆ ಬಂದಿರುತ್ತಾನೆ. ನಂತರ ಸತ್ಯ ಎಂಬ ಮಗ ಹೋಗಿ ಅದನ್ನು ಸುಳ್ಳು ಹೇಳಿದರೂ ನಂಬಿದ ಜನ ಭಾರತದ ಬಹುಸಂಖ್ಯಾತ ಜನವರ್ಗ ಆದರು. ಇದೇ ಇಂದಿನ ನಮ್ಮ ಭಾರತದ ಚರಿತ್ರೆಯ ಜೀವಾಳ. ಇಲ್ಲಿ ಜನರನ್ನು ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ತಮ್ಮದೇ ತೀರ್ಥದ ಸ್ವರೂಪದ ಕಟ್ಟುಪಾಡುಗಳಿಂದ ದುಡಿಮೆಯ ಜನರ ಮುಗ್ಧತೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಅಗ್ರಹಾರ – ಘಟಿಕಾಲಯ- ಗುರುಕುಲ – ಪುರದ ವಾಸಿಗಳಾಗಿ ಮೆರೆದವರು ಹಾಗೂ ತಮ್ಮ ರಕ್ಷಣೆಗೆ “ದೇಶ-ರಾಷ್ಟ್ರೀಯ ರಕ್ಷಣೆಯ” ಮಹತ್ವವನ್ನು ದೊರಕಿಸಿ ತಾವೇ ಸೃಷ್ಟಿಮಾಡಿದ ಕ್ಷತ್ರಿಯ ವರ್ಗದವರನ್ನು ಸೃಷ್ಟಿಸಿ, ಆ ಮೂಲಕ ಕ್ಷತ್ರಿಯರಾಗಿ ಆಳ್ವಿಕೆ ಮಾಡಿದವರೆಲ್ಲರೂ ಸಹ ವೈಭವದಿಂದ ಇದ್ದಾರೆ.

ಆದರೆ, ಬಹುಮುಖ್ಯವಾಗಿ ಇವರ ಅಸಂವಿಧಾನಾತ್ಮಕ ಅಲಿಖಿತ ಕಾನೂನುಗಳಿಗೆ ತಲೆಬಾಗಿ ಮಾನವನ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಬೆವರಿನ ಮೂಲಕ ರಾಷ್ಟ್ರ ಕಟ್ಟಿದ ಜನರೇ ಇಲ್ಲ. ಚರಿತ್ರೆ ಉದ್ದಕ್ಕೂ ಈ ಜನವರ್ಗ – ಚರಿತ್ರೆ ರಚನೆ ಮಾಡಿದ ಮೂಲಭೂತವಾದಿಗಳಿಗೆ ಮುಖ್ಯ ಆಕಾರವೇ ಆಗದಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ.

ಭಾರತದ ಪ್ರಪ್ರಥಮ ಸಬಾಲ್ಟ್ರನ್ ಚರಿತ್ರೆಗಾರರು ಎಂದು ಗುರುತಿಸಲೇ ಬೇಕಾದ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು ಈ ಮಹತ್ವದ ಬಹುಸೂಕ್ಷ್ಮ ವಿಷಯವನ್ನು ಚಾರಿತ್ರಿಕವಾಗಿ ಗ್ರಹಿಸಿದ್ದರು. ಶತಶತಮಾನಗಳಿಂದ ಭಾರತದಲ್ಲಿ ಜಾರಿಯಲ್ಲಿದ್ದ ಧಾರ್ಮಿಕ ಅಂಧಕಾರದ ಅಲಿಖಿತ ಸಂವಿಧಾನಕ್ಕೆ ಪ್ರತಿ ಉತ್ತರವಾಗಿ ಬಾಬಾಸಾಹೇಬರು ರಚಿಸಿದ ಬೃಹತ್ ಲಿಖಿತ ಸಂವಿಧಾನ ನಮ್ಮ ದೇಶದ ಸಮ ಸಂಸ್ಕೃತಿಯನ್ನು ಪ್ರತಿಪಾದನೆ ಮಾಡುವ ಹಿನ್ನೆಲೆಯಲ್ಲಿ ಸಂವಿಧಾನವು ಭಾರತದ “ಭೂಪಟದ” ಸಂವಿಧಾನ ವಲ್ಲ – ಬದಲಿಗೆ ಬಹುಮುಖ್ಯವಾಗಿ ಇದು ಭಾರತದ ಸಮಗ್ರ “ಭೂಪ್ರದೇಶದ” ಸಂವಿಧಾನ ಎಂಬುದನ್ನು ರಚಿಸಿ ನಮ್ಮೆಲ್ಲರ ದಾರಿ ಉಜ್ವಲವಾಗಿ ಉರಿಯುತ್ತಿರುವ ದೀಪದ ಕಡೆಗೆ ಪ್ರಯಾಣಿಸಲು  ತೋರಿಸಿಕೊಟ್ಟರು.

ಭಾರತದ ಧಾರ್ಮಿಕ ಹಿನ್ನೆಲೆಯ ಸಂವಿಧಾನದ ಧ್ಯೇಯವಾಕ್ಯ ಅಸಮಾನತೆಯನ್ನು ದೇವರು ಮತ್ತು ಧರ್ಮದ ಮೂಲಕ ರಕ್ಷಿಸುವುದು – ಮುಂದಿನ ಪೀಳಿಗೆಗೂ ಇದನ್ನು ಯಥಾವತ್ತಾಗಿ ಕೊಂಡೊಯ್ಯುವುದು ಅದಕ್ಕಾಗಿ ಸಂರಕ್ಷಣೆ ಮಾಡುವುದು –  ಕಾಪಾಡುವುದು.

ಆದರೆ, ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬುವುದು ಇದರ ಧ್ಯೇಯವಾಕ್ಯ .

ಎರಡು ಸಾವಿರ ವರ್ಷಗಳ ಚರಿತ್ರೆಯನ್ನು ಹೊಂದಿರುವ ಭಾರತದ ಅಸಮಾನತೆಯ ಸಂವಿಧಾನದ ಮಣ್ಣಿನಲ್ಲಿ – 75 ವರ್ಷದ ಪ್ರಾಯದ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಮ ಸಂಸ್ಕೃತಿಯ ಸಂವಿಧಾನ  ಎಂಬ 2 (ಒಂದು ಅವೈಜ್ಞಾನಿಕ ಇನ್ನೊಂದು ವೈಜ್ಞಾನಿಕ) ಸಂವಿಧಾನಗಳು ಸಹ ಒಂದು ಮುಖ ಉತ್ತರಕ್ಕೆ-  ಇನ್ನೊಂದು ಮುಖ ದಕ್ಷಿಣಕ್ಕೆ ತಿರುಗಿಸಿ ನಿಂತಿರುವುದಕ್ಕೆ ಜ್ವಲಂತ ನಿದರ್ಶನಗಳಿವೆ.

ಇಷ್ಟೆಲ್ಲದರ ನಡುವೆಯೂ “ಅಮಾನವೀಯ” ಮತ್ತೊಂದು “ಮಾನವೀಯ” ಎರಡು ಸಂವಿಧಾನಗಳನ್ನು ಸೌಹಾರ್ದದಿಂದ ಒಂದು ಮಾಡಿ ಸುಭದ್ರ ರಾಷ್ಟ್ರ ಕಟ್ಟಲು ಮುಂದಾದ ಬುದ್ಧ-ಬಸವ ರಿಂದ ಆರಂಭಗೊಂಡು ಸಮಕಾಲೀನ ಸಂದರ್ಭದವರೆಗೂ ಅನೇಕ ಸಾಮಾಜಿಕ ಚಳುವಳಿಯ ಸುಧಾರಕರು ತಮ್ಮದೇ ಮಹತ್ವದ ಕಾರ್ಯಗಳನ್ನು ಸಾಧಿಸಿ ಕೊನೆಗೆ ಧಾರ್ಮಿಕ ಅಸಮಾನತೆಯ ಸಂಕೋಲೆಗೆ ಸಿಲುಕಿ  ಮೂಲೆಗುಂಪಾದರು. ಮುಂದುವರೆದು ಅವರು ರಾಷ್ಟ್ರ ಹಾಗೂ ಧರ್ಮದ್ರೋಹಿಗಳು ಎಂದು ಕರೆಸಿಕೊಂಡರು.

ಇದನ್ನೂ ಓದಿ : ಮೌಖಿಕ ಕಥನದೊಳಗೆ ಅಂಬೇಡ್ಕರ್ ಅವರ ಜೀವನ ಗಾಥೆ : ವಸ್ತುನಿಷ್ಠ ನೋಟ

ಆದರೆ, ಈ ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಮಾನವೀಯತೆಯನ್ನು ಪ್ರತಿಪಾದನೆ ಮಾಡಲು ಮುಂದಾದ ಧಾರ್ಮಿಕ ನಾಯಕರು ಮಾತ್ರ ರಾಷ್ಟ್ರದ ಮುಂಚೂಣಿಯ ಸಾಂಸ್ಕೃತಿಕ ನಾಯಕರಾಗಿ- ದಾರ್ಶನಿಕರಾಗಿ- ತತ್ವಜ್ಞಾನಿಗಳಾಗಿ  ಕಂಗೊಳಿಸಿದರು. ಮಾನವನಿರ್ಮಿತ  ಉತ್ತರ-ದಕ್ಷಿಣಗಳನ್ನು ಒಂದು ಮಾಡಲು ಅನೇಕ ಸಮಾಜ ಸುಧಾರಕರು ಈ ನಾಡಿನಲ್ಲಿ ಉದಯಿಸಿದರು.

ಆದರೆ, 2000 ವರ್ಷಗಳು ಆಳ್ವಿಕೆ ಮಾಡಿದ ಅಲಿಖಿತ ಸಂವಿಧಾನದ ಮುಂದೆ 75 ವರ್ಷದ ನಮ್ಮ ಲಿಖಿತ ಸಂವಿಧಾನ ಸೋಲನ್ನು ಕಾಣುತ್ತಿದೆ ಎಂದು ಹೇಳಿದರೆ ತಪ್ಪಾಗದು. ಅದರಲ್ಲೂ ನೆಲ ಸಂಸ್ಕೃತಿಯ ಜನ ಹಾಗೂ ಅವರ ಬದುಕನ್ನು ಹಸನು ಮಾಡಲು ಶ್ರಮಿಸಿದ   ಬಾಬಾಸಾಹೇಬ ಅಂಬೇಡ್ಕರ್ ಅವರ  ಸಂವಿಧಾನವನ್ನು ಎರಡು ಸಾವಿರ ವರ್ಷಗಳಿಂದ ಅಲಿಖಿತ ಸಂವಿಧಾನದಡಿಯಲ್ಲಿ ತಮ್ಮ ಬದುಕನ್ನು ಬಹುಸಂಖ್ಯಾತ ಜನರ ಬೆವರಿನಿಂದ ಹಸನು ಮಾಡಿಕೊಂಡಿದ್ದವರು, ಇವರು ಈ ವೈಭವದ ಬದುಕಿತ್ತು ಕುತ್ತು ತಂದಂತಹ “ಲಿಖಿತ” ಸಂವಿಧಾನವನ್ನು ಗೌರವಿಸಲು ಸಾಧ್ಯವೇ…?

ಒಂದು ಮಾತನ್ನು ಮನನೊಂದು ಹೇಳುತ್ತೇನೆ… 2000 ವರ್ಷದ ಅಮಾನವೀಯ – ಏಕಮುಖವಾದ ಚರಿತ್ರೆಯನ್ನೇ ರಾಷ್ಟ್ರೀಯ ಚರಿತ್ರೆ ಎಂದು ಸ್ವಪೋಷಣೆ ಮಾಡಿಕೊಂಡವರ ಮುಂದೆ, 75 ವರ್ಷದ ಸಮ ಸಂಸ್ಕೃತಿಯನ್ನು ಪ್ರತಿಪಾದನೆ ಮಾಡುವ ಸಂವಿಧಾನವನ್ನು ಹೀಗೆಲ್ಲ ಬಳಸಿಕೊಳ್ಳಬೇಕು –  ಯಾವ್ಯಾವ ಸಂದರ್ಭದಲ್ಲಿ ಹೇಗೆಲ್ಲ ಬದಲಾಯಿಸಬೇಕು ಎಂಬ ಅರಿವು ಚೆನ್ನಾಗಿ ಗೊತ್ತಿದೆ.  ಆದರೆ 75 ವರ್ಷದಲ್ಲಿ 25 ವರ್ಷ ಮಾತ್ರ ಸಂವಿಧಾನವನ್ನು ಒಂದಷ್ಟು ಗಮನಿಸುತ್ತಿರುವ ರಾಷ್ಟ್ರ ಮೂಲನಿವಾಸಿಗಳಿಗೆ ಬಾಬಾಸಾಹೇಬರು ನಮಗಾಗಿ ರಚನೆ ಮಾಡಿಕೊಟ್ಟ ಸಮ ಸಂಸ್ಕೃತಿಯ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವ ವಿಧಾನವೂ ತಿಳಿಯದಿರುವುದು, ಅಥವಾ ಇವರಿಗೆ ತಿಳಿಯದಂತೆ ಮಾಡುತ್ತಿರುವುದು ದುರಂತವೇ ಸರಿ.

ಇದಕ್ಕೆ ನಾನು ಮೇಲೆ ಉಲ್ಲೇಖಿಸಿದವರು ಒಂದಾಗಿ – ಒಗ್ಗಟ್ಟಾಗಿ – ಶಿಕ್ಷಣವಂತರಾಗಿ – ಲಿಖಿತ ಸಂವಿಧಾನದ ಆಶಯದಂತೆ ಸತ್ಪ್ರಜೆಗಳಾಗಿ ಬದುಕಲು ಈ ನೆಲದ ಶ್ರಮಜೀವಿಗಳಾದ ಮೂಲನಿವಾಸಿಗಳನ್ನು ಒಂದಾಗಲು ಬಿಟ್ಟು ಕೊಟ್ಟಿರೇತ್ತಾನೆ… ಎರಡು ಸಾವಿರ ವರ್ಷಗಳಿಂದ ಧಾರ್ಮಿಕ ಮತ್ತು ದೇವರ ಹೆಸರಿನಲ್ಲಿಯೇ ಸಕಲವನ್ನೂ ಪಡೆದ, ಅದನ್ನು ಸಾಧ್ಯವಾಗಿಸಲು  ಶತಶತಮಾನಗಳ ಅಜೆಂಡವಾಗಿರುವ ಡಿವೈಡ್ ಅಂಡ್ ರೂಲ್ಸ್ ಪಾಲಿಸಿ ತತ್ವಕ್ಕೆ ಬಲಿಯಾಗಿ ಸಮ ಸಂಸ್ಕೃತಿಯ 75 ವರ್ಷದ ಬಾಬಾಸಾಹೇಬರ ಬೆವರಿನ ಸಂವಿಧಾನವನ್ನು ತೀರ್ಥ ದವರ ಮಾತನ್ನು ಕೇಳಿ  ಮೂಲೆಗುಂಪು ಮಾಡುವಲ್ಲಿ ನಾವೇ ಮುಂದಾಗುತ್ತಿರುವುದು ದುರಂತವೇ ಸರಿ. ನಮ್ಮ ಅಪಾರ ಬೌದ್ಧಿಕ ಹಾಗೂ ಭೌತಿಕ ಶಕ್ತಿಯನ್ನು ಅಯ್ಯಪ್ಪನ ಮಾಲೆ – ಹನುಮನ ಮಾಲೆ- ತಿಮ್ಮಪ್ಪನ ಮಾಲೆ – ರಾಮಲಕ್ಷ್ಮಣರ ಮಾಲೆ – ಮಾದೇಶ್ವರ ಮಂಟೇಸ್ವಾಮಿಯ ಮಾಲೆ – ಬಿಳಿಗಿರಿ ರಂಗನಾಥನ ಮಾಲೆ – ಎಲ್ಲಮ್ಮ, ಹುಲಿಗಮ್ಮ, ಗಾಳಮ್ಮನ  ಹರಕೆ  – ಗಳಿಗೆ ಮೀಸಲಿರಿಸಿ (ಇದೇ ನಿಮ್ಮ ಪಾರಂಪರಿಕ ಮೀಸಲಾತಿ ಎಂದು ಹೇಳಿ) ತಮ್ಮ ಸ್ವಪ್ರೇರಿತ ಮೀಸಲಾತಿಯ ಮೂಲಕ ಯಾರೋ ಪ್ರಶ್ನೆ ಮಾಡದ ಹಾಗೆ ಸಕಲವನ್ನು ತಮ್ಮ ಕಾಲಬುಡಕ್ಕೆ ಪಡೆದುಕೊಂಡು ಸಮೃದ್ಧಿಯಾದರು.

ಆದರೆ ಭಾರತದ ಪ್ರಸ್ತುತ “ಧಾರ್ಮಿಕ” ವ್ಯವಸ್ಥೆ ಧರ್ಮದ ಹೆಸರಿನಲ್ಲಿ ಸಾಮಾಜಿಕವಾಗಿ ಸಂಪೂರ್ಣ ಅಸ್ತ ವ್ಯವಸ್ಥೆಗೇ ಒಳಗಾಗಿರುವುದು ದುರಂತವೇ ಸರಿ.

ಈ  ಸಂದರ್ಭದಲ್ಲಿ ಪ್ರಪಂಚಕ್ಕೆ ಮಾದರಿಯಾದ – ಭಾರತದ ಭೂ ಪ್ರದೇಶವನ್ನು ಸಮಗ್ರವಾಗಿ ಅರ್ಥಮಾಡಿಕೊಂಡು ಸಮ ಸಂಸ್ಕೃತಿಯ ಆಧಾರದ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿದ ಸಂವಿಧಾನದ ನಮ್ಮೊಂದಿಗೆ ನಿರಂತರವಾಗಿ ಮಾತನಾಡುವ- ಮಾತನಾಡಬೇಕಾದ – ಹಾಗೂ – ಮಾತನಾಡಿಸುತ್ತಲೇ ಇರಬೇಕಾಗಿತ್ತು. ಆದರೆ ಈ ಸಮ ಸಂಸ್ಕೃತಿಯ ತತ್ವ-ಸಿದ್ಧಾಂತಗಳು ಭಾರತಕ್ಕೆ ಆಗಮನ ಮಾಡಿದ ಆರ್ಯರು (ವೈದಿಕರು) ಭಾರತಕ್ಕೆ ದಾಳಿ ಮಾಡಿದ ಇಸ್ಲಾಮ್ರು (ಮುಸ್ಲಿಮರು) ಭಾರತಕ್ಕೆ ಪ್ರವೇಶ ಮಾಡಿದ (ಕ್ರಿಶ್ಚಿಯನ್ನರು -ಬ್ರಿಟಿಷರು) ಎಂಬ ಧರ್ಮಾಂಧರ ಆಂತರಿಕ ಹಾಗೂ ಬಾಹ್ಯ ಎಂಬ ಧಾರ್ಮಿಕ ಹಿನ್ನೆಲೆಯ ಎರಡು ನೆಲೆಯಲ್ಲಿಯೂ ಇಕ್ಕಟ್ಟಿಗೆ ಸಿಲುಕಿ ಮುಂಜಾನೆ ಹುಟ್ಟಿ ಸಂಜೆ ಸಾಯುವ ಹಂತಕ್ಕೆ ಬಂದು ತಲುಪಿರುವುದು ದುರಂತವೇ ಸರಿ. ಆದರೆ ಈ ಭಾರತದ ಮೂಲನಿವಾಸಿ ಜನವರ್ಗದವರು ಬಸವಣ್ಣ ಹೇಳಿದಂತೆ “ದಯವೇ ಧರ್ಮದ ಮೂಲವಯ್ಯ” ಎಂಬ ತತ್ವ ಸಿದ್ಧಾಂತದ ಅಡಿಯಲ್ಲಿ “ಕಾಯಕವೇ ಕೈಲಾಸ ” ಎಂಬ ಮೂಲನಿವಾಸಿ ತತ್ವದ ಆಧಾರದಲ್ಲಿ ಧರ್ಮವನ್ನು ಕಟ್ಟಿ ಬೆಳೆಸಲು ಮುಂದಾಗುತ್ತಿದ್ದಾರೆ… ಆದರೆ ಅಧರ್ಮವೇ ಧರ್ಮದ ಮುಖ್ಯ ಧ್ಯೇಯವಾಕ್ಯವಾಗಿ ಇವತ್ತು ಕಂಗೊಳಿಸಲು ಮುಂದಾಗುತ್ತಿರುವುದು ಪ್ರಪಂಚಕ್ಕೆ ಮಾದರಿಯಾದ ಬೃಹತ್ ಲಿಖಿತ ಸಂವಿಧಾನದ   ಭಾರತದಲ್ಲಿ ದುರಂತವಾಗಿದೆ.

ಇಂದು ವಸ್ತ್ರ ಸಹಿಷ್ಣುತೆಯ ಹೆಸರಿನಲ್ಲಿ ಎಳೆಯ ಮನಸ್ಸಿನ ಅಥವಾ ಭಾರತದ ಭವಿಷ್ಯದ ರುವಾರಿಗಳು ಎನಿಸಿಕೊಳ್ಳುವ ವಿದ್ಯಾರ್ಥಿ – ವಿದ್ಯಾರ್ಥಿನಿಯರಲ್ಲಿ ಕೋಮುಭಾವನೆಯನ್ನು ಹುಟ್ಟುಹಾಕಿ ದೇಶವನ್ನು ಗಟ್ಟಿಯಾಗಿ ಕಟ್ಟಬೇಕಾದ ಯುವಕರಿಂದ ಆರಂಭಿಕ ಶಿಕ್ಷಣದ ಹಂತದಲ್ಲಿಯೇ ದೇಶವನ್ನು ಒಡೆದಾಳುವ – ಬಿಚ್ಚುವ ಕೆಲಸವನ್ನು ಮಾಡಿಸಲು ಮುಂದಾಗುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ. ಈ ಹಂತದಲ್ಲಿ ಒಂದು ಮಹತ್ವದ ವಿಷಯವನ್ನು ನಿಮ್ಮೊಂದಿಗೆ ಚರ್ಚೆ ಮಾಡಲೇಬೇಕು. ಅದೇನೆಂದರೆ…. ಭಾರತದಲ್ಲಿರುವ ಅನೇಕ ತಳಸಮುದಾಯದ ಜನವರ್ಗ ಅಂದರೆ, ಊರಿಂದ ಆಚೆ ಕೇರಿಯಲ್ಲಿ ಪಾರಂಪರಿಕವಾಗಿ ವಾಸಮಾಡುತ್ತಾ ಈ ರಾಷ್ಟ್ರವನ್ನು ತಮ್ಮ ದುಡಿಮೆ ಹಾಗೂ ಶ್ರಮದ ಬೆವರಿನ ಮೂಲಕ ಕಟ್ಟಿದ:- ಕಟ್ಟುವ ಹಾಗೂ ಕಟ್ಟುತ್ತಲೇ ಇರುವ ದಲಿತ ಸಮುದಾಯ – ಶೂದ್ರ ಎಂದು ಕರೆಸಿಕೊಳ್ಳುವ ಸಮುದಾಯ – ವೃತ್ತಿ ಆಧಾರದ ಮೇಲೆ ನಿರ್ಮಾಣಗೊಂಡಿರುವ ಭಾರತದ ನೂರಾರು ಜಾತಿಯ ಮೂಲನಿವಾಸಿಗಳ ಸಮುದಾಯ – ಬುಡಕಟ್ಟು ಸಮುದಾಯ ಇತ್ಯಾದಿ ಇತ್ಯಾದಿಯಾಗಿ ಇನ್ಯಾವ ಈ ರಾಷ್ಟ್ರದ ಮೂಲನಿವಾಸಿ ಸಮುದಾಯಗಳಿಗೂ ಕಿಂಚಿತ್ತು ಅರಿಯದೆ ಇರುವ  ಇಂದಿನ ರಾಷ್ಟ್ರೀಯ ವಿವಾದ ವಾಗಿಸಿರುವ “ಹಿಜಾಬ್ ಹಾಗೂ ಕೇಸರಿ ಶಾಲುʼʼ ಎಂಬ ಬೂಟಾಟಿಕೆ ವಿವಾದ ಯಾರಿಂದ – ಯಾರಿಗಾಗಿ –  ಯಾರಿಗೋಸ್ಕರ ಉದಯಿಸಿತು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಇದಕ್ಕೆ ಉತ್ತರ ಪ್ರತಿಯೊಬ್ಬ ಪ್ರಜ್ಞಾವಂತರಿಗೂ ತಕ್ಷಣಕ್ಕೆ ಗೊತ್ತಿರುವುದೇ ಆಗಿದೆ. ಅಂದರೆ, ರಾಜಕೀಯದೊಳಗೆ ಧರ್ಮ ಅಥವಾ ಧರ್ಮದೊಳಗೆ ರಾಜಕೀಯ ಬೆರೆತಾಗ ಇಂತಹ ಅನಾಹುತಗಳು ಲೀಲಾಜಾಲವಾಗಿ ಸಂಭವಿಸುತ್ತವೆ. ಈ ರಾಜಕೀಯ ಹಾಗೂ ಧರ್ಮದ ಆಟದಲ್ಲಿ ಧರ್ಮ ಹಾಗೂ ರಾಜಕೀಯದಿಂದ ಹೊರಗುಳಿದು ಕೇವಲ ಶ್ರಮದ ಮೂಲಕ ರಾಷ್ಟ್ರ ಕಟ್ಟುತ್ತಿರುವ ಜನವರ್ಗದ  ವ್ಯಕ್ತಿಗಳೇ ಬಲಿಯಾಗುತ್ತಿರುವುದು ಮಾತ್ರ ನಮ್ಮ ನಡುವಿನ ಬಹುದೊಡ್ಡ ದುರಂತ. ಈ ವರ್ಗ ಬಹುಮುಖ್ಯವಾಗಿ ಹೆಚ್ಚು ಹೆಚ್ಚು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ತನು ಮನ ಎಲ್ಲವನ್ನು ಸಮರ್ಪಣೆ ಮಾಡಿ ನಮಗಾಗಿ  ರಚಿಸಿಕೊಟ್ಟ  ಸಂವಿಧಾನವನ್ನು ತಿಳಿದುಕೊಳ್ಳಬೇಕೇ ಹೊರತು, ತಮ್ಮ ಸ್ವಾರ್ಥ ಸಾಧನೆಗಾಗಿ ಹೇಳಿಕೊಟ್ಟ ಧರ್ಮವನ್ನಲ್ಲ ಎಂಬುದು ನನ್ನ ಕಳಕಳಿಯ ಮನವಿ.

ಯಾರಿಗೂ ಅನ್ಯಾಯ ಮಾಡದೆ- ಯಾರಿಗೂ ಅತ್ಯಾಚಾರ ಮಾಡದೆ – ಯಾರ ಆಸ್ತಿಯನ್ನು ದೋಚಿಕೊಳ್ಳದೆ – ತಮ್ಮ ಜೀತ ಮಾಡಿದರೂ ತಮ್ಮ ಶ್ರಮದ ಮೂಲಕ ಈ ರಾಷ್ಟ್ರವನ್ನು ಕಟ್ಟಿದ, ಆಸೆಯೇ ದುಃಖಕ್ಕೆ ಮೂಲ, ಕಾಯಕವೇ ಕೈಲಾಸ, ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ಎಂಬ ನಿತ್ಯ – ಸತ್ಯ – ಸಾಕ್ಷಾತ್ಕಾರದ ಧರ್ಮದ ಆಧಾರದ ಮೇಲೆ ಈ ರಾಷ್ಟ್ರವನ್ನು ಕಟ್ಟಿದ  ವಂಶಸ್ಥರಾದ ನಾವೇ ರಾಷ್ಟ್ರದ ಮೂಲಧರ್ಮ ಪ್ರತಿಪಾದಕರು ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಮನಗಾಣಬೇಕಾಗಿದೆ. ಅಂದರೆ ಈಗ ಧರ್ಮ ಪ್ರತಿಪಾದನೆ ಮಾಡುತ್ತಿರುವವರು ಕೇವಲ ರಾಜಕೀಯ ಹಾಗೂ ರಾಜಕೀಯದ ಒಳಗೆ ಧರ್ಮದ ಬೇಳೆ ಬೇಯಿಸಲು ಹೊರತು ಬೇರೆ ಯಾವ ಸತ್ಯ –  ಸಾಕ್ಷಾತ್ಕಾರದ ಕೆಲಸಕ್ಕಲ್ಲ ಎನ್ನುವುದನ್ನು ತಿಳಿಯದಿರುವುದು ದೊಡ್ಡ ನೋವಿನ ಸಂಗತಿ. ಇದನ್ನು ನಿವಾರಿಸಿಕೊಳ್ಳಲು ಎಂದೇ  ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ – ಸಂಘಟನೆ – ಹೋರಾಟ ಎಂಬ ಮೂರು ಪ್ರಬಲ ಅಸ್ತ್ರಗಳ ಮೂಲಕ ಸಂವಿಧಾನವನ್ನು ಉಳಿಸಿಕೊಳ್ಳಲು ಪ್ರತಿಪಾದನೆ ಮಾಡಿದ್ದರು. ಆದರೆ ನಾವು ಏನು ಮಾಡುತ್ತಿದ್ದೇವೆ…???

ಮೇಲೆ ಹೇಳಿದಂತೆ ನಿಜಾರ್ಥದಲ್ಲಿ ಧರ್ಮದ ತಿರುಳು ತಿಳಿಯದವರು ಮಾಡುವ ಹುನ್ನಾರವೇ ಯಾವುದೇ ತತ್ವ ಸಿದ್ಧಾಂತಗಳಿಗೂ ಒಳಪಡದ  ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ. ನಿಜ ಅರ್ಥದಲ್ಲಿ ಈ ಒಂದು ಅಂಶ  ವಿವಾದವೇ ಆಗಬಾರದಿತ್ತು. ಅದರಲ್ಲೂ ಬಹುಮುಖ್ಯವಾಗಿ  ಈ ವಿವಾದಕ್ಕೆ ಹದಿಹರೆಯದ ಮಕ್ಕಳನ್ನು ಬಳಸಿಕೊಂಡ ಪರಿ ಅಮಾನವೀಯವಾದದ್ದು. ಜೊತೆಗೆ ಅಸಂವಿಧಾನಾತ್ಮಕವಾದದ್ದು. ಮುಂದುವರೆದು ಹೇಳುವುದಾದರೆ ಈ ದೇಶವನ್ನು ಶ್ರಮ ಹಾಗೂ ಸಮ ಸಂಸ್ಕೃತಿಯ ಆಧಾರದ ಮೇಲೆ ಉಳಿಸಬೇಕಾದ ಹಿರಿಯರು ಇದು ತಾವು ಬದುಕಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಧರ್ಮದೊಳಗೆ ರಾಜಕೀಯವನ್ನು ನೇರವಾಗಿ ಬೆರೆಸಿ ಈ ತತ್ವರಹಿತ  ಅಂಶಗಳನ್ನು ಜಾರಿಗೆ ತರಲು ಮುಂದೆ ದೇಶವನ್ನು ಕಟ್ಟಬೇಕಾದ ಹದಿಹರೆಯದ ಯುವಕರನ್ನು ಬಳಸಿಕೊಂಡು ಅವರ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನು ಹಾಳು ಮಾಡುವ ನೇರವಾದ ಕುತಂತ್ರ. ‘ಧರ್ಮ’ ರಾಜಕೀಯದೊಳಗೆ ಪ್ರವೇಶ ಮಾಡಿದಾಗ ಧರ್ಮ ರಾಜಕಾರಣದ ಒಳಗಡೆ ತಮಗರಿವಿಲ್ಲದೆ ಬಲಿಪಶು ಆಗುತ್ತಿರುವವರು ಮಾತ್ರ ಸಾಮಾನ್ಯ ಜನತೆ… ಎನ್ನುವುದಕ್ಕಿಂತಲೂ, ದುಡಿದು ಶ್ರಮದ ಮೂಲಕ ಈ ರಾಷ್ಟ್ರವನ್ನು ಯಾವುದೇ ಧರ್ಮದ ಸಂಕೋಲೆಗೆ ಒಳಗಾಗದೇ ದುಡಿದು ಜೀವಿಸುತ್ತಿರುವ ವರ್ಗದ ಮಕ್ಕಳು ಎಂಬುದನ್ನು ಗಂಭೀರವಾಗಿ  ಅರಿಯಬೇಕಾಗಿದೆ. ಇದಕ್ಕೆ ಎರಡು ಸಾವಿರ ವರ್ಷಗಳ ಏಕಮುಖವಾದಂತಹ  ಚರಿತ್ರೆಯನ್ನು ಹೊಂದಿರುವವರು ಮಾಡುತ್ತಿರುವ ಎಪ್ಪತ್ತೈದು ವರ್ಷಗಳ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲಿನ ದಾಳಿ ಎಂದು ಹೇಳಿದರೆ ತಪ್ಪಾಗದು.

ಹಿಜಾಬ್ ಎಂಬುವುದು ಕೇವಲ ಇಸ್ಲಾಂ ವರ್ಗದ ಹೆಣ್ಣುಮಕ್ಕಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುವುದನ್ನು ಮೊದಲು ನಾವು ಅರಿಯಬೇಕಾಗಿದೆ. ಭಾರತೀಯ ಶ್ರಮ ಸಂಸ್ಕೃತಿಯಲ್ಲಿ ತಲೆ ಮೇಲೆ ಸಂಪೂರ್ಣ ಸೆರಗನ್ನು ಮುಚ್ಚಿಕೊಳ್ಳುವುದು ಸರ್ವ ಸಾಮಾನ್ಯವಾಗಿದೆ. ಭಾರತೀಯ ಪ್ರಾಚೀನ ಧರ್ಮವಾಗಿರುವ ಜೈನ ಧರ್ಮದ ನಮ್ಮ ಮಹಿಳಾ ಬಂಧುಗಳು ಈ ಸಂಪ್ರದಾಯವನ್ನು ಧಾರ್ಮಿಕ ಹಿನ್ನೆಲೆಯಿಂದಲೇ ಆಚರಿಸುತ್ತಾರೆ. ಸಂಸ್ಕೃತಿಯ ಸೃಷ್ಟಿಕರ್ತರು ಎಂದು ಹೇಳಿಕೊಳ್ಳುವ ಪಾರಂಪರಿಕ ವೈದಿಕರ  ಹಿರಿಯ ಮಹಿಳೆಯರು ಈ ಸಂಪ್ರದಾಯವನ್ನು ಕಟಿಬದ್ಧವಾಗಿ ಸಂಪ್ರದಾಯದ ರೀತಿ ಪಾಲಿಸುವುದಕ್ಕೆ ಅನೇಕ ನಿದರ್ಶನಗಳಿವೆ. ಉದಾಹರಣೆಗೆ: ಪಣಿಯಮ್ಮ ಕಥೆಯಲ್ಲಿ ಬರುವಂತಹ ಸಂಪ್ರದಾಯಸ್ಥ ಮಹಿಳೆಯ ಪಾತ್ರ. ಸಾಂಪ್ರದಾಯಿಕ ವಿಧವೆಯರು ಎಂದು ತಕ್ಷಣ ಅಲ್ಲೂ ಸಹ ವಸ್ತ್ರ ಸಹಿಷ್ಣತೆ ಎದ್ದುಕಾಣುತ್ತದೆ.

ನಮ್ಮ ಭಾರತದ ಅನೇಕ ವೀರ ಮಹಿಳೆಯರ ಕಾಲ್ಪನಿಕ ಚಿತ್ರಗಳ ರಚನೆ ಉದಾಹರಣೆಗೆ…. ಕತ್ತಿಯನ್ನು ಬಿಚ್ಚಿ ರಣಚಂಡಿ ಅವತಾರವನ್ನು ತಾಳಿ ಯುದ್ಧವನ್ನು ಮಾಡುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮನ ವಿಗ್ರಹದಲ್ಲಿ ತಲೆ ಮೇಲೆ ಸೇರಿದನು ಮಾತ್ರ ನಾವು ಹಾಕಿದ್ದೇವೆ. ಒನಕೆ ಓಬವ್ವಳ ಸಿಲ್ಪಕು ತಲೆಯ ಮೇಲೆ ಸೀರೆಯ ಸೆರಗನ್ನು ಮಾತ್ರ ನೀಟಾಗಿ ಹಾಕಿದ್ದೇವೆ. ಕಸ್ತೂರಿಬಾ ಚಿತ್ರವಾಗಲಿ ರಮಾಬಾಯಿ ಅಂಬೇಡ್ಕರ್ ಅವರ ಚಿತ್ರವಾಗಲಿ ಸಾವಿತ್ರಿ ಪುಲೆಯವರ ಚಿತ್ರವಾಗಲಿ ಇತ್ಯಾದಿ ಇತ್ಯಾದಿ ಎಲ್ಲಾ ಮಹಿಳೆಯರ ಚಿತ್ರದಲ್ಲಿಯೂ ನಾವು ಭಾರತದ ಸಂಪ್ರದಾಯದಂತೆ ಸೀರೆಯ ಸೆರಗನ್ನು ತಲೆಯ ಮೇಲೆ ಹಾಕಿಕೊಂಡಿರುವುದನ್ನು ಕಾಣುತ್ತೇವೆ. ಒಂದರ್ಥದಲ್ಲಿ ಇದು ನಮ್ಮ ಭಾರತದ ಮಹಿಳಾ ಸಂಪ್ರದಾಯದ ಡ್ರೆಸ್ಕೋಡ್ ಎಂದೇ ಪ್ರಸಿದ್ಧಿಯಾಗಿದೆ. ಸಮಕಾಲೀನ ಸಂದರ್ಭದ ಪ್ರಸಿದ್ಧ ಮಹಿಳಾ ರಾಜಕಾರಣಿಗಳ  ಭಾವಚಿತ್ರಗಳಲಿ ವ್ಯಕ್ತಪಡಿಸುವುದು ಸಹ ತಲೆಯ ಮೇಲೆ ಭಾರತೀಯ ಸಂಪ್ರದಾಯದಂತೆ ಸೀರೆಯ ಸೆರಗನ್ನು ಹೊಂದಿಕೊಂಡಿರುವಂತೆ ಚಿತ್ರಗಳನ್ನು ತೋರಿಸುವ ಮೂಲಕ ಭಾರತೀಯತೆಯನ್ನು – ಭಾರತೀಯ ಮಹಿಳೆಯ ಸಂಪ್ರದಾಯವನ್ನು ವ್ಯಕ್ತಪಡಿಸುವ ಪವಿತ್ರತೆ ಎಂಬ ಹಿನ್ನಲೆಯಲ್ಲಿ ತೋರ್ಪಡಿಸುತ್ತವೆ. ಇದು ನಮ್ಮ ಸಾಂಪ್ರದಾಯಿಕ ಡ್ರೆಸ್ ಕೋಡ್ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆ ಮೂಲಕ ನಾವು ವಿಶ್ವದಲ್ಲಿ ಭಾರತೀಯ ಮಹಿಳೆಯನ್ನು ಸಾಂಸ್ಕೃತಿಕವಾಗಿ ಪ್ರತಿನಿಧಿಸಲು ಹಂಬಲಿಸುತ್ತೇವೆ. ಇದು ಒಂದು ಸಾಂಪ್ರದಾಯಿಕ ಧರ್ಮ ಕಲ್ಪನೆಯ ಜನರ ಭಾವನೆ ಆದರೆ…. ಇದೇ ಮಾದರಿಯಲ್ಲಿ ಇನ್ನೊಂದು ಸಾಂಪ್ರದಾಯಿಕ ಧರ್ಮ ಕಲ್ಪನೆಯ ಜನವರ್ಗ ತಮ್ಮ ಹೆಣ್ಣುಮಕ್ಕಳಿಗೆ ಹಿಜಾಬ್ ಪದ್ಧತಿಯನ್ನು ಅಳವಡಿಸಲು ಹಂಬಲಿಸುತ್ತದೆ. ಈ ರೀತಿ ಮಹಿಳೆಯರ ಡ್ರೆಸ್ ಕೋಡ್ ಗಳ ನಿರ್ಬಂಧ ಹೇರಲು ಧರ್ಮದ ಚೌಕಟ್ಟನ್ನು ಹಾಕುತ್ತಿರುವ ಇಬ್ಬರೂ ಸಹ ಭಾರತದ ಭೂಮಿಗೆ ಮಧ್ಯಪ್ರಾಚ್ಯದಿಂದ ಬಂದವರೇ ಆಗಿರುವುದು ನಮ್ಮ ನಡುವಿನ ಸಾಂಸ್ಕೃತಿಕ  ದುರಂತವೇ ಆಗಿದೆ.

ಆದರೆ, ಬಹು ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಕಾಯಕದ ಮೂಲಕ ರಾಷ್ಟ್ರವನ್ನು ಕಟ್ಟಲು ಮುಂದಾಗಿರುವ ಭಾರತ ಮೂಲನಿವಾಸಿಗಳಿಗೆ ಈ ಯಾವ ನಿರ್ಬಂಧನೆಗಳು ಇಲ್ಲದಿರುವುದು ವಿಶೇಷ. ಭಾರತಕ್ಕೆ ಈ ರೀತಿಯ ಧಾರ್ಮಿಕ ಅಂದಕಾರದ – ಶ್ರಮ ವಹಿಸದ – ಧರ್ಮ ಮತ್ತು ದೇವರ ಹೆಸರಿನಲ್ಲಿ ದುಡಿಯದೇ ತಿನ್ನಬೇಕು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಅಮಾನವೀಯ ಬದುಕಿನ ಅರ್ಥವಿಲ್ಲದ ಸಿದ್ಧಾಂತವನ್ನಾಗಿಸಿಕೊಂಡು, ಅದಕ್ಕೆ ಧರ್ಮದ ಲೇಪನವನ್ನು ಹಚ್ಚಿ ಬಹುದೊಡ್ಡ ಸಾಂಸ್ಕೃತಿಕ  ಚೌಕಟ್ಟಿನೊಳಗೆ ದಾಳಿ ಮಾಡಿದ ಇಬ್ಬರು ಧರ್ಮಾಂಧರಿಂದ ಭಾರತ ಇಂದು “ಧರ್ಮದ ಅಂಧಕಾರದಲ್ಲಿ” ಸಿಲುಕಿ ಒದ್ದಾಡುತ್ತಿರುವುದು ದುರಂತ.

ನಾನು ಮುಖ್ಯವಾಗಿ ಹೇಳಬಯಸುವ ವಿಷಯವೆಂದರೆ… ನಿಮ್ಮ ಧರ್ಮದ ಹಿಜಾಬ್‌ ಪದ್ಧತಿಯನ್ನು ನಿಮ್ಮ ಮನೆಯಲ್ಲಿ – ಹಾಗೂ ಸಾರ್ವಜನಿಕವಾಗಿ(ಶಾಲಾ ಕಾಲೇಜುಗಳನ್ನು ಹೊರತುಪಡಿಸಿ) ದಯವಿಟ್ಟು ಪಾಲಿಸಿ, ಕೇಸರಿ ಶಾಲನ್ನು ಹಾಕಿಕೊಳ್ಳುವ ಯುವಕರು ತಮ್ಮ ತಮ್ಮ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಬಳಸಿ. ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಎಲ್ಲರೂ ಯಾವುದೇ ಭೇದಭಾವಗಳಿಲ್ಲದೆ ಭಾರತೀಯ ಸತ್ಪ್ರಜೆಗಳಾಗಿ – ಸಮನಾಗಿ ಇರಬೇಕಾದ ಯುನಿಫಾರ್ಮ್ ಪದ್ಧತಿಯಲ್ಲಿ ಓದಬೇಕಾದ ಶಿಕ್ಷಣದ ಗುರುಕುಲದಲ್ಲಿ ಈ ಪದ್ಧತಿಗಳು ಬೇಡ. ಹಿಜಾಬ್  ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕಾಗಿ ಪರೀಕ್ಷೆಯಿಂದಲೇ ಹೊರಗಿರುವುದು ನಿಮ್ಮ ಭವಿಷ್ಯ ಹಾಗು ಶೈಕ್ಷಣಿಕ ಪತನವೇ ಹೊರತು ಬೇರೇನೂ ಅಲ್ಲ. ಕೇಸರಿ ಶಾಲನ್ನು ಹಾಕಿಕೊಳ್ಳುವುದರಿಂದ ರಾಷ್ಟ್ರ ಕಟ್ಟಲು ಸಾಧ್ಯವಾಗುವುದಿಲ್ಲ ಎಂಬುದನ್ನು ನನ್ನ ಬಂಧುಗಳು ಸಹ ಮರೆಯಬಾರದು. ನಾನು ಮೇಲೆ ಹೇಳಿದಂತೆ ಇವೆಲ್ಲವೂ ದೈಹಿಕವಾದದ್ದು. ತೋರ್ಪಡಿಸಿಕೊಳ್ಳುವ ಪ್ರಕ್ರಿಯೆಗೆ ಸೇರಿದ್ದು. ಆದರೆ ತೋರ್ಪಡಿಸಿಕೊಳ್ಳದೆ ಮನಸ್ಸಿನಲ್ಲಿ ಗಾಢವಾಗಿ ಯೋಚಿಸಿ – ಓದಿ ಚಿಂತಿಸಿ ಜೀವನದುದ್ದಕ್ಕು ಅಳವಡಿಸಿಕೊಳ್ಳಬೇಕಾದುದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು. ಆ ಆಧಾರದ ಮೇಲೆ ಭಾರತವನ್ನು ಕಟ್ಟುವ –  ಬಲಿಷ್ಠಗೊಳಿಸುವ ತಂತ್ರಜ್ಞಾನವನ್ನು.

ಆದರೇನು ಮಾಡುವುದು… ಪ್ರಾಚೀನ ಕಾಲದುದ್ದಕ್ಕೂ ಶ್ರಮ ಜೀವಿಗಳ ತತ್ವ-ಸಿದ್ಧಾಂತದಲ್ಲಿ ರಚನೆಗೊಂಡಿದ ನಮ್ಮ ಭಾರತ ದೇಶ ಇಂದು ಒಂದಷ್ಟು ಈ ತತ್ವ ಸಿದ್ದಾಂತ ರಹಿತ ಜನವರ್ಗದಿಂದ ಅಪಾರವಾಗಿ ಅವನತಿಯತ್ತ ಸಾಗುತ್ತಿದೆ ಎಂದು  ಹೇಳಲು ನನಗೆ ಆತಂಕ ಹಾಗೂ  ಬೇಸರವಾಗುತ್ತದೆ.

ಇಂತಹ ಘಟನೆಗಳು ಮರುಕಳಿಸಬಾರದು. ಧರ್ಮ ರಕ್ಷಣೆ ಹೆಸರಿನಲ್ಲಿ ಅಸಂವಿಧಾನಾತ್ಮಕ ಕೋಮು – ಜಾತಿ-ಜಾತಿಗಳ ನಡುವಿನ ಉದ್ವೇಗದ ಹೆಸರುಗಳಲ್ಲಿ ಬದುಕಿ ರಾಷ್ಟ್ರವನ್ನು ಒಡೆದು ಆಳುವ ನೀತಿಯನ್ನು ಅನುಸರಿಸಬಾರದು. ಸಾಮರಸ್ಯದಿಂದ ಸಂವಿಧಾನದ ನೀತಿ ನಿಯಮದಂತೆ ಕಟ್ಟುವ ನೀತಿಯನ್ನು ಅನುಸರಿಸಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಧ್ಯೇಯ ವಾಕ್ಯಗೆ  ಅನ್ವಯಿಸುವಂತೆ  ಇಂದಿನ ಮಕ್ಕಳಲ್ಲಿ ಸಂವಿಧಾನದ ಅರಿವನ್ನು ಮೂಡಿಸಿ ಸಾಮರಸ್ಯದ ಬದುಕನ್ನು ಕಟ್ಟಿಕೊಡುವ ಅಂಶವನ್ನು ತಿಳಿಸಬೇಕಾಗಿದೆ.

ಆಸಂವಿಧಾನಾತ್ಮಕವಾಗಿ ಪ್ರಚೋದನೆ ನೀಡಿ ವಿದ್ಯಾರ್ಥಿಗಳ ಹಾಗೂ ಯುವಕ-ಯುವತಿಯರ ಪ್ರಾಣ ಹಾನಿ ಮಾಡಬಾರದು. ಮುಂದುವರೆದು ಹೇಳುವುದಾದರೆ ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ನನ್ನದು ಒಂದು ಕಲ್ಲು ಎಂದು ಹಾಕಬಾರದು.

ಬಾಬಾಸಾಹೇಬ್ ಅವರ ಸಂವಿಧಾನದ ಆಶಯದಂತೆ ನಾವೆಲ್ಲರೂ ಒಂದಾಗಿ – ಒಗ್ಗಟ್ಟಾಗಿ ಈ ಪವಿತ್ರ ಭಾರತ ಭೂಮಿಯ ಸತ್ಪ್ರಜೆಗಳಾಗಿ ಕಾಯಕ – ತ್ಯಾಗ – ನಿಷ್ಠೆಯಿಂದ  ಬದುಕಿದರೆ ಪ್ರಪಂಚಕ್ಕೆ ನಮ್ಮ ರಾಷ್ಟ್ರ ಸರ್ವ ವಿಧದಲ್ಲಿಯೂ ಮಾದರಿ ಆಗುವುದರಲ್ಲಿ ಎರಡು ಮಾತಿಲ್ಲ. ಪ್ರಪಂಚದಲ್ಲಿ ಅತಿ ಹೆಚ್ಚು ಮಾನವ ಸಂಪತ್ತನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿರುವ ನಾವು ಜಾತಿ ಧರ್ಮದ ಹಿನ್ನೆಲೆಯಲ್ಲಿ ಅಲ್ಪಜ್ಞಾನಿಗಳಾಗಿ ಧಾರ್ಮಿಕ ಹಾಗೂ ಸಾಮಾಜಿಕ ಅಂಧಕಾರದಲ್ಲಿ ಬದುಕುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದಾಗಬಾರದು. ನಮ್ಮಲ್ಲಿರುವ ಒಂದಷ್ಟು ಅಲಿಖಿತ – ಅಸಾಂಪ್ರದಾಯಿಕ – ಅವೈಜ್ಞಾನಿಕ ಕಾನೂನುಗಳನು ಬದಿಗೊತ್ತಿ…. ಸಮ ಸಂಸ್ಕೃತಿಯ ಪ್ರತಿಪಾದನೆ ಮಾಡುವ ಲಿಖಿತ ಸಂವಿಧಾನದ ಕಡೆಗೆ ಹೆಚ್ಚು ಹೆಚ್ಚು ನಾವು ಮುಖ ಮಾಡೋಣ. ಆ ಮೂಲಕ ನಾವು ಪ್ರಜ್ಞಾವಂತರಾಗಿ ಮಾತನಾಡೋಣ… ಪ್ರಪಂಚಕ್ಕೇ ಭಾರತವನ್ನು ಪ್ರಜ್ಞಾವಂತರಾಗಿ ಕಟ್ಟೋಣ.

ನೆರೆಯ ದೇಶದ ಶತ್ರುಗಳು ಭಾರತ ಮೇಲೆ ಬೌದ್ಧಿಕವಾಗಿ ಹಾಗೂ ಬೌದ್ಧಿಕವಾಗಿ ಆಕ್ರಮಣ ಮಾಡಬಹುದು… ಅದನ್ನು ನಾವು ಖಂಡಿತವಾಗಿ ಒಕ್ಕೊರಳಿನಿಂದ ಏಕ ವ್ಯಕ್ತಿಯ ರೂಪದಲ್ಲಿ ಎದುರಿಸುತ್ತೇವೆ, ಅ ಶಕ್ತಿ ನಮಗಿದೆ. ಏಕೆಂದರೆ, ಅದು ನಮ್ಮ ದೇಹಕ್ಕೆ ಅಂಟಿರುವ ಕಾಯಿಲೆ  ಅದಕ್ಕೆ ಮುಲಾಮ್ ಹಾಕಿಕೊಂಡು ವಾಸಿ ಮಾಡಿಕೊಳ್ಳಬಹುದು ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಗುಣಪಡಿಸಿಕೊಳ್ಳಬಹುದು. ಇದು ಬೇರೆಬೇರೆ ವಿಧಾನದ ಮೂಲಕ  ಕಣ್ಣಿಗೆ ಕಾಣುವ ಕಾಯಿಲೆ.

ಆದರೆ….. ಧರ್ಮ ಮತ್ತು ಸಮಾಜದ ಹೆಸರಿನಲ್ಲಿ ದೇಶದೊಳಗೆ ಆಗುತ್ತಿರುವಂತೆ ಆಂತರಿಕ ಯುದ್ಧವನ್ನು ತಡೆಯುವ ಬಿಡಿಸಂ ಇನ್ನೂ ಸಹ ದೊರಕದಿರುವುದು ದುರಂತವೇ ಸರಿ. ಈ ಕಾಯಿಲೆ ದೇಹದ ಮೇಲಿಲ್ಲ ದೇಹದೊಳಗಿನ ಮನಸ್ಸಿನಲ್ಲಿದೆ. ಈ ಮನಸ್ಸಿಗೆ ಚಿಕಿತ್ಸೆಯನ್ನು ನೀಡುವುದು ಮಾತ್ರ ಬಹು ಕಠಿಣ ಸವಾಲಾಗಿದೆ. ಇದೆಲ್ಲದಕ್ಕೂ ಸಹ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಉತ್ತರವಿದೆ. ಆದರೆ, ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಹಂಬಲಿಸದಿರುವ ಕಾರಣ ನಾವೇ ಆಂತರಿಕವಾಗಿ ಅನೇಕ ಇಕ್ಕಟ್ಟು ಬಿಕ್ಕಟ್ಟುಗಳಿಗೆ  ದಾರಿ ಮಾಡಿಕೊಂಡಿದ್ದೇವೆ.

“ಎದುರುಗಡೆ ಇರುವ ಮುಳ್ಳನ್ನು ನೋಡಿ ದಾಟಿಕೊಂಡು ಹೋಗಬಹುದು (ನೆರೆಯ ರಾಷ್ಟ್ರಗಳು)- ಆದರೆ ನಾವು ದಿನನಿತ್ಯ ತೊಡುವ ಶೂ ಅಥವಾ ಚಪ್ಪಲಿಯ ಒಳಗಡೆಯೇ ಮುಳ್ಳುಗಳಿದ್ದರೆ ಹೇಗೆತಾನೆ ದಾಟಿಕೊಂಡು ಹೋಗಲು ಸಾಧ್ಯ” ವಿಧಿ ಇಲ್ಲದೆ ಚುಚ್ಚಿಸಿಕೊಳ್ಳಲೇ ಬೇಕಾಗುತ್ತದೆ. ಇದೇ ಮಾದರಿಯಲ್ಲಿ ಇಂದು ನಮ್ಮ ರಾಷ್ಟ್ರದ ಧಾರ್ಮಿಕ ಹಾಗೂ ಸಾಮಾಜಿಕ ರಾಜಕಾರಣವೂ ನಡೆದಿರುವುದು ದುರಂತವಾಗಿದೆ.

ಇದಾಗಬಾರದು… ಯುವಕರು ಪ್ರಜ್ಞಾವಂತರಾಗಿ ಹೆಚ್ಚೆಚ್ಚು ಪ್ರಜ್ಞಾವಂತರಾಗಿ. ಧಾರ್ಮಿಕ ಹಾಗೂ ಸಾಮಾಜಿಕ ಅಂಧಃಕಾರದಿಂದ ಹೊರಬನ್ನಿ. ನಿಮ್ಮ ನಿಮ್ಮ ಗ್ರಾಮದ – ದುಡಿಯುವ ವರ್ಗದವರ – ನಿಮ್ಮ ತಂದೆ-ತಾಯಿಗಳ – ಪೂರ್ವಿಕರ ಚರಿತೆಯನ್ನು ಅರಿತು ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ “ಇತಿಹಾಸವನ್ನು ಮರೆತವರು – ಇತಿಹಾಸವನ್ನು ಸೃಷ್ಟಿಸಲಾರರು”  ಎಂಬ ಎಂದೆಂದಿಗೂ ಬಹುಮುಖ್ಯವಾದ ಧ್ಯೇಯವಾಕ್ಯದ ಆಧಾರದ ಮೇಲೆ ರಾಷ್ಟ್ರವನ್ನು ಕಟ್ಟಿ. ಆಗ ನೋಡಿ ನೀವು ಮಾತನಾಡುತ್ತೀರಿ, ನಮ್ಮ ದೇಶವು ಪ್ರಪಂಚದಲ್ಲಿ ಏಕತೆಯಿಂದ ಒಂದಾಗಿ-ಸಾಂಸ್ಕೃತಿಕವಾಗಿ ಬಲಿಷ್ಠವಾಗಿ  ಮಾತನಾಡುತ್ತದೆ.

Donate Janashakthi Media

Leave a Reply

Your email address will not be published. Required fields are marked *