ಶಿಕ್ಷಣದಲ್ಲಿ ಮೀಸಲಾತಿ ನೀತಿ ಮತ್ತು ಮೋದಿ ಸರ್ಕಾರದ ವಂಚಕತನ

ಎಸ್.ಆರ್. ರಾಮನ್

ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿ ಕೊನೆಗೂ ಬಂದಿರುವುದು ಮದ್ರಾಸ್ ಹೈಕೋರ್ಟಿನ ಆದೇಶ ಮತ್ತು ‘ಯೋಗ್ಯತೆಗೆ ಎದುರಾಗಿ ಮೀಸಲಾತಿ’ ಎಂಬ ಹುಸಿ ಚರ್ಚೆಯನ್ನು ನಿರ್ಣಾಯಕವಾಗಿ ಹೊಡೆದು ಹಾಕಿದ ಸುಪ್ರಿಂ ಕೋರ್ಟಿನ ತೀರ್ಪಿನ ನಂತರವೇ ಆದರೂ, ಇದನ್ನು ತಂದಿರುವುದು ತನ್ನ “ಹಿಂದುಳಿದವರ ಪರ”ವಾಗಿರುವ ನೀತಿಯಿಂದಾಗಿ ಎಂದು ಪ್ರಚಾರ ಮಾಡುವಾಗಲೇ, ಮೋದಿ ಸರ್ಕಾರವು ಇಡಬ್ಲ್ಯೂಎಸ್ ಮೀಸಲಾತಿ ಮೂಲಕ ಮೇಲ್ಜಾತಿ ಜನರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ ಎಂದೂ ಹೇಳುತ್ತಿದೆ. ಈ ನಡುವೆ ನಾಯಿ ಕೊಡೆಗಳಂತೆ ಖಾಸಗಿ ಕಾಲೇಜುಗಳು ಆರಂಭವಾಗುವುದಕ್ಕೆ ಉತ್ತೇಜನ ನೀಡಿದ್ದರಿಂದಾಗಿ, ಮೀಸಲಾತಿ ಅನ್ವಯವಾಗುವ ಸೀಟುಗಳ ಅನುಪಾತವು ಒಂದೇ ಸಮನಾಗಿ ಇಳಿಯುತ್ತಿದೆ ಎಂಬುದರ ಬಗ್ಗೆಯಾಗಲೀ, ತಮ್ಮ ಸವಲತ್ತುಗಳನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂದೇ ಸಂಕಲ್ಪ ಮಾಡಿಕೊಂಡಿರುವವರು ಹೀಗೆ ಕಡಿಮೆಯಾಗುತ್ತಿರುವ ಸೀಟುಗಳ ಪಾಲಿನ ಒಂದು ಸಣ್ಣ ಅಂಶ ಕೂಡ ಜಾತಿಯಾಧಾರದಲ್ಲಿ ಚಾರಿತ್ರಿಕವಾಗಿ ವಂಚಿತರಾದ ಹಾಗೂ ತಾರತಮ್ಯಕ್ಕೆ ಒಳಗಾದ ವಿಭಾಗಗಳಿಗೆ ಹೋಗುವುದನ್ನು ಒಪ್ಪದಿರುವುದರ ಬಗ್ಗೆಯಾಗಲೀ ಚಕಾರ ಎತ್ತುವುದಿಲ್ಲ. ಮೋದಿ ಸರ್ಕಾರದ ಈ ವಂಚಕತನ ಅದು ನಡೆದು ಬಂದ ದಾರಿಗೆ ತಕ್ಕುದಾಗಿಯೇ ಇದೆ.

ಈ ವರ್ಷದ ಜನವರಿ 7ರಂದು, ಸುಪ್ರೀಂ ಕೋರ್ಟು ಶೇಕಡಾ 27 ಮೀಸಲಾತಿ ಕುರಿತ ತೀರ್ಪನ್ನು ನೀಡಿತು; ವೈದ್ಯಕೀಯ ಕಾಲೇಜುಗಳಲ್ಲಿ ಅಖಿಲ ಭಾರತ ಕೋಟಾದಲ್ಲಿ ಮೀಸಲಾತಿ ನೀಡಿದ್ದು ಅಸಂವಿಧಾನಿಕವಲ್ಲ ಎಂದು ಆದೇಶಿಸಿತು; ಈ ಮೂಲಕ 2021-22 ರ ಶೈಕ್ಷಣಿಕ ವರ್ಷದಿಂದ ಅಂತಹ ಮೀಸಲಾತಿಯನ್ನು ನೀಡಬಹುದಾಗಿದೆ. ಸರಿಸುಮಾರು ಎರಡು ವಾರಗಳ ನಂತರ, ಜನವರಿ 20ರಂದು ಆ ತೀರ್ಮಾನಕ್ಕೆ ಬರಲು ಕಾರಣವೇನೆಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಆದರೆ, ಅಂತಹ ಒಂದು ತೀರ್ಪಿನ ಅಗತ್ಯವಾದರೂ ಏಕುಂಟಾಯಿತು ಮತ್ತು ಅದರ ಹಿಂದಿರುವ ತರ್ಕ ಎಲ್ಲಾ ವಿವೇಕಯುತ ಜನರಿಗೆ ಹೊಳೆದಿಲ್ಲ ಎಂಬ ವಿದ್ಯಮಾನವೇ ಮೇಲ್ಜಾತಿ ಜನಗಳ ಹಿತಾಸಕ್ತಿ ಎಷ್ಟರ ಮಟ್ಟಿಗೆ ಭದ್ರವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ಮೇಲ್ಜಾತಿ ಜನಗಳು ತಮ್ಮ ಸವಲತ್ತುಗಳನ್ನು ಕಾಯ್ದುಕೊಳ್ಳಲು ಯಾವ ರೀತಿ ಹೋರಾಡುತ್ತಾರೆ ಎನ್ನುವುದು ಸಾಬೀತಾಯಿತು. ಸಾಮಾಜಿಕ ನ್ಯಾಯದ ಪರವಾಗಿ ಬಾಯುಪಚಾರದ ಮಾತನ್ನಾಡುವ ಕೇಂದ್ರದಲ್ಲಿನ ಸರ್ಕಾರಗಳು ಈ ಕಾರ್ಯಸೂಚಿಗೆ ಯಾವುದೇ ಆಕ್ಷೇಪಗಳನ್ನು ಎತ್ತದೆ ಎಷ್ಟರ ಮಟ್ಟಿಗೆ ಒಪಿಕೊಳ್ಳುತ್ತವೆ ಎನ್ನುವುದಕ್ಕೆ ಕೂಡ ಸಾಕ್ಷಿ.

ಮೊದಲು, ಈ ತೀರ್ಪಿನ ಹಿನ್ನೆಲೆಯನ್ನು ನಾವು ಪರಿಶೀಲಿಸೋಣ. ವೈದ್ಯಕೀಯ ಶಿಕ್ಷಣದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅಖಿಲ ಭಾರತ ಕೋಟಾವನ್ನು ಸೃಷ್ಟಿಸಿದ್ದು 1986ರ ಸುಪ್ರೀಂ ಕೋರ್ಟಿನ ತೀರ್ಪು. ವೈದ್ಯಕೀಯ ಕಾಲೇಜುಗಳಲ್ಲಿ ಕೊನೇಪಕ್ಷ ಒಂದು ವಿಭಾಗದ ಸೀಟುಗಳನ್ನಾದರೂ ಅಭ್ಯರ್ಥಿಗಳ ವಾಸದ ಸ್ಥಾನಮಾನವನ್ನು ಪರಿಗಣಿಸದೆಯೇ ಹಂಚಿಕೆ ಮಾಡಬಾರದು ಎನ್ನುವುದು ಅಖಿಲ ಭಾರತ ಕೋಟಾದ ಹಿಂದಿನ ಆಲೋಚನೆಯಾಗಿತ್ತು. ವೈದ್ಯಕೀಯ ಕಾಲೇಜುಗಳ ಅತಿ ಅಸಮಾನ ಹರಡಿಕೆಯ ಹಿನ್ನೆಲೆಯಲ್ಲಿ, ಬಹಳ ಕಡಿಮೆ ಕಾಲೇಜುಗಳನ್ನು ಹೊಂದಿರುವ ರಾಜ್ಯಗಳ ಅಭ್ಯರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅಖಿಲ ಭಾರತ ಕೋಟಾ ಸಹಾಯವಾಗುತ್ತದೆ ಎಂಬುದು ಕೋರ್ಟಿನ ಅಭಿಪ್ರಾಯವಾಗಿತ್ತು. ಕಳೆದ ಮೂರೂವರೆ ದಶಕಗಳಲ್ಲಿ ಅಖಿಲ ಭಾರತ ಕೋಟಾ ಯೋಜನೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ, ಆದರೆ ಈಗ, ಎಂಬಿಬಿಎಸ್ ಸೀಟುಗಳ ಶೇಕಡಾ 15 ರಷ್ಟನ್ನು ಮತ್ತು ಸ್ನಾತಕೋತ್ತರ ಪದವಿ ಸೀಟುಗಳ ಶೇಕಡಾ 50ರಷ್ಟನ್ನು ಸರ್ಕಾರಿ ಒಡೆತನದ ವೈದ್ಯಕೀಯ ಕಾಲೇಜುಗಳಲ್ಲಿ ಅಖಿಲ ಭಾರತ ಕೋಟಾಕ್ಕೆ ಮೀಸಲಿಡಬೇಕಾಗಿದೆ.

1986 ರಲ್ಲೇ ಅಖಿಲ ಭಾರತ ಕೋಟಾವನ್ನು ಆರಂಭಿಸಿದ್ದಾಗ್ಯೂ, ನಂತರದ ಎರಡು ದಶಕಗಳ ಕಾಲ ಈ ಸೀಟುಗಳಿಗೆ ಮೀಸಲಾತಿಗಳು ಇರಲಿಲ್ಲ. 2007-08 ಶೈಕ್ಷಣಿಕ ವರ್ಷದಲ್ಲಿ ಮಾತ್ರವೇ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ವರ್ಗ (ಎಸ್.ಟಿ.)ಕ್ಕೆ ಮೀಸಲಾತಿಯನ್ನು ಜಾರಿ ಮಾಡಲಾಯಿತು. ಇತರೆ ಹಿಂದುಳಿದ ಜಾತಿ (ಒಬಿಸಿ) ಗಳಿಗೆ ಮೀಸಲಾತಿ ಜಾರಿಯಾಗದೆ ಹಾಗೆಯೇ ಉಳಿದುಬಿಟ್ಟಿತು. ಕೇಂದ್ರ ಶಿಕ್ಷಣ ಸಂಸ್ಥೆಗಳ (ಪ್ರವೇಶಾತಿಯಲ್ಲಿ ಮೀಸಲಾತಿ) ಕಾಯಿದೆ 2007 ಜಾರಿಗೆ ಬರುವುದರೊಂದಿಗೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಅಥವಾ ಜವಾಹರ ಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಪಿಎಂಇಆರ್) ನಂತಹ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ 2009-10 ರಿಂದ ಶೇಕಡಾ 27 ರಷ್ಟು ಮೀಸಲಾತಿಯನ್ನು ಒಬಿಸಿಗಳಿಗೆ ಜಾರಿ ಮಾಡಲಾಯಿತು. ಆದರೆ ಈ ಮೀಸಲಾತಿಯನ್ನು ಅಖಿಲ ಭಾರತ ಕೋಟಾ ಸೀಟುಗಳಿಗೆ ವಿಸ್ತರಿಸಲಿಲ್ಲ. ಇಂತಹ ಮೀಸಲಾತಿ ಆರಂಭಿಸಲು ಒಂದು ಯೋಜನೆಯನ್ನು ರೂಪಿಸಿ ಎಂದು ಆರೋಗ್ಯ ಸಚಿವಾಲಯದ ವೈದ್ಯಕೀಯ ಶಿಕ್ಷಣ ಇಲಾಖೆಯು ಕೇಳಿಕೊಂಡಾಗಲೂ ಅದು ವಿಸ್ತರಣೆಯಾಗಲಿಲ್ಲ.

2020 ರ ಜೂನ್ 17 ರಂದು, ಹಿಂದುಳಿದ ವರ್ಗಗಳ, ಎಸ್.ಸಿ., ಎಸ್.ಟಿ. ಮತ್ತು ಅಲ್ಪಸಂಖ್ಯಾತರ ರಾಷ್ಟ್ರೀಯ ಸಂಘಟನೆ (ಎನ್‌ಯುಬಿಸಿ) ಯು ದೆಹಲಿ ಹೈಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಒಬಿಸಿ ಮೀಸಲಾತಿಯನ್ನು ನೀಡಬೇಕು ಎಂದು ಆರೋಗ್ಯ ಸಚಿವಾಲಯಕ್ಕೆ ಆದೇಶ ನೀಡಬೇಕೆಂದು ಕೋರಿತು. ಕೋಟಾವನ್ನು ಜಾರಿಮಾಡದೆ ಒಬಿಸಿಯವರಿಗೆ ಸಾವಿರಾರು ಸೀಟುಗಳನ್ನು ವಂಚಿಸಲಾಗಿದೆ ಎಂದು ಆ ಅರ್ಜಿಯಲ್ಲಿ ಎತ್ತಿ ಹೇಳಲಾಯಿತು. ಮದ್ರಾಸ್ ಹೈಕೋರ್ಟಿನಲ್ಲಿ ಹಲವಾರು ತಮಿಳು ನಾಡಿನ ರಾಜಕೀಯ ಪಕ್ಷಗಳು ಅನೇಕ ಅರ್ಜಿಗಳನ್ನು ಸಲ್ಲಿಸಿ ಕೇಂದ್ರದ ಸಂಚಯ (ಪೂಲ್) ಕ್ಕೆ ತಮಿಳುನಾಡಿನಿಂದ ಕೊಡಮಾಡುವ ಸೀಟುಗಳ ಮೇಲೆ ಒಬಿಸಿ ಕೋಟಾ ಜಾರಿ ಮಾಡಬೇಕೆಂದು ಕೋರಿದವು. 2020ರ ಜುಲೈ 27ರಂದು ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಒಬಿಸಿ ಮೀಸಲಾತಿಗೆ ಕಾನೂನಿನ ತೊಡಕು ಇಲ್ಲ ಎಂದು ಹೇಳಿತು, ಮತ್ತು ರಾಜ್ಯದಿಂದ ರಾಜ್ಯಕ್ಕೆ ಈ ನೀತಿಗಳು ಬೇರೆ ಬೇರೆ ಇರುವುದರಿಂದ ಕೋಟಾಗಳಿಗೆ ವಿಧಾನಗಳನ್ನು ರೂಪಿಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕೆಂದು ಸಲಹೆ ನೀಡಿತು. 2021ರ ಮಾರ್ಚ್‌ನಲ್ಲಿ ಡಿಎಂಕೆ ಪಕ್ಷವು ಮದ್ರಾಸ್ ಹೈಕೋರ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಅಖಿಲ ಭಾರತ ಕೋಟಾದಲ್ಲಿನ ಒಬಿಸಿ ಮೀಸಲಾತಿ ನೀಡಬೇಕೆಂಬ ಜುಲೈ 27, 2020ರ ಮದ್ರಾಸ್ ಹೈಕೋರ್ಟಿನ ಆದೇಶವನ್ನು ಜಾರಿ ಮಾಡಿಲ್ಲ ಎಂದು ತಿಳಿಸಿತು. 2021ರ ಜೂನ್ 20ರಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿ ಒಬಿಸಿ ಕೋಟಾವನ್ನು ಜಾರಿ ಮಾಡದೆ ವೈದ್ಯಕೀಯ ಪ್ರವೇಶಾತಿಯನ್ನು ಮಾಡುವಂತಿಲ್ಲ ಎಂದು ಆದೇಶಿಸಿತು.
ಹೀಗೆ ಅಂತಿಮವಾಗಿ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಒಬಿಸಿ ಕೋಟಾವನ್ನು ತರಲಾಯಿತು. ಕೋರ್ಟಿನ ನಿರ್ದೇಶನವನ್ನು ಉಲ್ಲೇಖಿಸದೇ, “ಬಹಳ ಕಾಲದಿಂದ ಬಾಕಿ ಉಳಿದಿದ್ದ ಸಮಸ್ಯೆಗೆ ಉತ್ತರವಾಗಿ” ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ದವರಿಗೆ ಶೇಕಡಾ 10ರಷ್ಟು ಮೀಸಲಾತಿಯನ್ನು “ಐತಿಹಾಸಿಕ ಹಾಗೂ ಯುಗಪ್ರವರ್ತಕ ನಿರ್ಧಾರ”ದ ಮೂಲಕ ಜಾರಿಮಾಡಲು ತೀರ್ಮಾನಿಸಿದೆ ಎಂದು ಜುಲೈ 19, 2021ರಂದು ಕೇಂದ್ರ ಸರ್ಕಾರವು ಪ್ರಕಟಿಸಿತು. ಈ ನಿರ್ಧಾರದಿಂದಾಗಿ ಎಂಬಿಬಿಎಸ್‌ನಲ್ಲಿ 1,500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಾತಿಗೆ 2,500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಅದೇ ಸಮಯದಲ್ಲಿ 550 ಇಡಬ್ಲ್ಯೂಎಸ್ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟುಗಳನ್ನು ಪಡೆಯುತ್ತಾರೆ ಹಾಗೂ ಸ್ನಾತಕೋತ್ತರ ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರತಿವರ್ಷ 1,000 ವಿದ್ಯಾರ್ಥಿಗಳು ಪ್ರವೇಶದ ಪ್ರಯೋಜನ ಪಡೆಯುತ್ತಾರೆ ಎಂದು ಸರ್ಕಾರ ವಿಶದಪಡಿಸಿತು.

2014ರಲ್ಲಿ ದೇಶದಲ್ಲಿದ್ದ 54,348 ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆಯು 2020 ರ ಹೊತ್ತಿಗೆ 84,649 ರಷ್ಟು ಹೆಚ್ಚಾಯಿತು ಮತ್ತು ಅದೇ ಅವಧಿಯಲ್ಲಿ ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆಯು 30,191 ರಿಂದ 54,275 ಕ್ಕೆ ಏರಿದೆ ಎಂದು ಸರ್ಕಾರವು ತನ್ನ ಹೇಳಿಕೆಯಲ್ಲಿ ತಾನೇನೋ ದೊಡ್ಡ ಸಾಧನೆ ಮಾಡಿದ್ದಾಗಿ ಕೊಚ್ಚಿಕೊಂಡಿತು. ಆದರೆ ಆ ಹೇಳಿಕೆಯಲ್ಲಿ ಸರ್ಕಾರ ಹೇಳದೇ ಇದ್ದ ವಿಷಯವೇನೆಂದರೆ ಈ ಬಹುತೇಕ ಸೀಟುಗಳು ಈಗ ಖಾಸಗಿ ಕಾಲೇಜುಗಳಲ್ಲಿ ಇದ್ದು ಅಖಿಲ ಭಾರತ ಕೋಟಾ ವ್ಯಾಪ್ತಿಯ ಹೊರಗಿವೆ ಎಂಬ ವಾಸ್ತವ ಸತ್ಯವನ್ನು. ಇದರ ಫಲವಾಗಿ, ಅಖಿಲ ಭಾರತ ಕೋಟಾ ಕೇವಲ 5,500 ಎಂಬಿಬಿಎಸ್ ಸೀಟುಗಳು ಹಾಗೂ 2,000 ಸ್ನಾತಕೋತ್ತರ ಸೀಟುಗಳು ಮಾತ್ರವೇ ಇರುವುದು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದ ಎಲ್ಲಾ ಸರ್ಕಾರಗಳು ನಾಯಿ ಕೊಡೆಗಳಂತೆ ಖಾಸಗಿ ಕಾಲೇಜುಗಳು ಆರಂಭವಾಗುವುದಕ್ಕೆ ಉತ್ತೇಜನ ನೀಡಿದ್ದರಿಂದಾಗಿ, ಮೀಸಲಾತಿ ಅನ್ವಯವಾಗುವ ಸೀಟುಗಳ ಅನುಪಾತವು ಒಂದೇ ಸಮನಾಗಿ ಇಳಿಯುತ್ತಿದೆ.

ಆದರೆ, ತಮ್ಮ ಸವಲತ್ತುಗಳನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂದೇ ಸಂಕಲ್ಪ ಮಾಡಿಕೊಂಡಿರುವವರು ಹೀಗೆ ಕಡಿಮೆಯಾಗುತ್ತಿರುವ ಸೀಟುಗಳ ಪಾಲಿನ ಒಂದು ಸಣ್ಣ ಅಂಶ ಕೂಡ ಜಾತಿಯಾಧಾರದಲ್ಲಿ ಚಾರಿತ್ರಿಕವಾಗಿ ವಂಚಿತರಾದ ಹಾಗೂ ತಾರತಮ್ಯಕ್ಕೆ ಒಳಗಾದ ವಿಭಾಗಗಳಿಗೆ ಹೋಗುವುದನ್ನು ಒಪ್ಪದಿರುವವರು. ಆದಕಾರಣವೇ, ಸರ್ಕಾರದ ಜುಲೈ 2021 ರ ಪ್ರಕಟಣೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿರುವುದು. ಕೋರ್ಟು ತನ್ನ ಆದೇಶದಲ್ಲಿ ‘ಯೋಗ್ಯತೆಗೆ ಎದುರಾಗಿ ಮೀಸಲಾತಿ’ ಎಂಬ ಹುಸಿ ಚರ್ಚೆಯನ್ನು ನಿರ್ಣಾಯಕವಾಗಿ ಹೊಡೆದು ಹಾಕಿತು. ಆ ತೀರ್ಪಿನ ಸಂಬಂಧಪಟ್ಟ ಭಾಗವನ್ನು ಪುನರುಚ್ಚರಿಸಬೇಕಾಗುತ್ತದೆ, ಮಾಡಬೇಕಿದೆ. ಯೋಗ್ಯತೆ ಮತ್ತು ಮೀಸಲಾತಿ ಎಂಬ ದ್ವಂದ್ವವನ್ನು ಈ ಹಿಂದೆ ಸಮ್ಮತಿಸಿದ್ದನ್ನು ಒಪ್ಪಿಕೊಳ್ಳುತ್ತಾ, ಸುಪ್ರೀಂ ಕೋರ್ಟು ಹೀಗೆ ಹೇಳಿದೆ:

“ಒಂದು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಲ್ಲರಿಗೂ ಭಾಗವಹಿಸುವ ಸಮಾನ ಅವಕಾಶವಿದ್ದಾಗ ಅದು ತರ್ಕಸಮ್ಮತವಾದ ಸಮಾನತೆಯನ್ನು ಖಾತ್ರಿಪಡಿಸಬಹುದು. ಆದರೆ, ಶೈಕ್ಷಣಿಕ ಸೌಲಭ್ಯಗಳ ಲಭ್ಯತೆ ಹಾಗೂ ಅವಕಾಶಗಳಲ್ಲಿ ವ್ಯಾಪಕ ಅಸಮಾನತೆಗಳು ಇರುವಾಗ ಅದು ಕೆಲವು ವರ್ಗಗಳ ಜನರಿಗೆ ಅವಕಾಶಗಳನ್ನು ಇಲ್ಲದಂತೆ ಮಾಡುವುದರಿಂದ ಅಂತಹ ವ್ಯವಸ್ಥೆಯಲ್ಲಿ ಅವರು ಪರಿಣಾಮಕಾರಿಯಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಅಸಮರ್ಥರಾಗುತ್ತಾರೆ. ಆಗ ಅಂತಹ ವಂಚಿತ ವಿಭಾಗಗಳು ಮುಂದುವರಿದ ವರ್ಗಗಳೊಂದಿಗೆ ಸ್ಪರ್ಧೆ ಮಾಡುವಾಗ ಎದುರಿಸುವ ಅಡೆತಡೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಲು (ಮೀಸಲಾತಿಯಂತಹ) ವಿಶೇಷ ವ್ಯವಸ್ಥೆಯು ವಾಸ್ತವಿಕ ಸಮಾನತೆಯನ್ನು ಖಾತ್ರಿಪಡಿಸುತ್ತದೆ. ಮುಂದುವರಿದ ವರ್ಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಗುಣಮಟ್ಟದ ಶಾಲಾಶಿಕ್ಷಣ, ಟ್ಯುಟೋರಿಯಲ್‌ಗಳು ಹಾಗೂ ಕೋಚಿಂಗ್ ಸೆಂಟರ್‌ಗಳಂತಹ ಸವಲತ್ತುಗಳಷ್ಟೇ ಅಲ್ಲ, ಅವರ ಕುಟುಂಬಗಳಿಂದ ಪರಂಪರಾಗತವಾಗಿ ಬಂದ ಸಾಮಾಜಿಕ ಸಂಪರ್ಕ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಬಂಡವಾಳ (ಸಂವಹನ ಕೌಶಲ್ಯ, ಉಚ್ಚಾರ, ಪುಸ್ತಕಗಳು ಅಥವಾ ಶೈಕ್ಷಣಿಕ ನೈಪುಣ್ಯತೆ) ಗಳೂ ಸಿಗುತ್ತವೆ. ಸಾಂಸ್ಕೃತಿಕ ಬಂಡವಾಳವು ಕೌಟುಂಬಿಕ ವಾತಾವರಣದ ಮೂಲಕ ಮಗುವು ಅಪ್ರಜ್ಞಾಪೂರ್ವಕವಾದ ತರಬೇತಿ ಪಡೆಯುವುದನ್ನು ಖಾತ್ರಿಪಡಿಸುತ್ತದೆ ಮತ್ತು ಕೌಟುಂಬಿಕ ಸ್ಥಾನಮಾನಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಅಥವಾ ಉನ್ನತ ಹುದ್ದೆಗಳನ್ನು ಗಳಿಸಲು ಉತ್ತೇಜನ ನೀಡುತ್ತದೆ. ಮೊದಲ ಬಾರಿಗೆ ಶಿಕ್ಷಣ ಪಡೆದವರಿಗೆ ಮತ್ತು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತಮವಾಗಿ ಎದುರಿಸಲು ಅಗತ್ಯವಾದ ನೈಪುಣ್ಯತೆಯನ್ನು ಅವರ ಪಾರಂಪರಿಕ ವೃತ್ತಿಗಳು ಕಲಿಸದಿದ್ದವರಿಗೆ ಅದು ಅನಾನುಕೂಲವಾಗಿ ಪರಿಣಮಿಸುತ್ತದೆ.”

ಮೀಸಲಾತಿಗೆ ವಿರೋಧವಿರುವ ಮೇಲ್ಜಾತಿಯ ಜನರು ಅನೇಕ ವೇಳೆ ಎತ್ತುವ ಪ್ರಶ್ನೆಗೆ – ನಮ್ಮ ಹಿರಿಯರು ನಿಮ್ಮ ವಿರುದ್ಧ ತಾರತಮ್ಯ ಎಸಗಿದರು ಎಂಬುದನ್ನು ಒಪ್ಪೋಣ, ಆದರೆ ಈಗ ಇವತ್ತು ನಾವು ಅದಕ್ಕೆ ಬೆಲೆ ತೆರಬೇಕೆ? ಎಂಬ ಪ್ರಶ್ನೆಗೆ – ಈ ವಾದವು ಉತ್ತರ ನೀಡುತ್ತದೆ. ಈ ಕೋಟಾಗಳು ಅಥವಾ ತಪ್ಪನ್ನು ಸರಿಮಾಡುವ ಕ್ರಿಯೆಯು ಹಿಂದಿನವರು ಎಸಗಿದ ತಪ್ಪುಗಳಿಗೆ ಪ್ರತೀಕಾರ ಮಾಡುವ ಕ್ರಿಯೆಗಳಲ್ಲ. ಚಾರಿತ್ರಿಕ ಕಾರಣಗಳಿಂದಾಗಿ ತೀರಾ ಅಸಮಾನವಾಗಿದ್ದ ಸಾಮಾಜಿಕ ರಂಗವನ್ನು ಮಟ್ಟಸಗೊಳಿಸುವುದಾಗಿದೆ. ಕೋಟಾಗಳು, ನಿಸ್ಸಂದೇಹವಾಗಿ, ಅಸಮಾನತೆಯ ಸಮಸ್ಯೆಗೆ ಸೀಮಿತವಾದ ಪರಿಹಾರವಷ್ಟೆ, ಆದರೆ ಈ ಮಧ್ಯಂತರದಲ್ಲಿ ಅಸಮಾನತೆಯನ್ನು ಶಾಶ್ವತಗೊಳಿಸುವ ಮೂಲಭೂತ ಅಂಶಗಳನ್ನು ತೊಡೆದುಹಾಕಲು ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದನ್ನು ಮಾಡುವುದು ಬಿಟ್ಟು, ನವ-ಉದಾರವಾದಿ ಯುಗವು ಪ್ರಭುತ್ವವು ಮಧ್ಯಪ್ರವೇಶಿಸುವ ಸಾಮರ್ಥ್ಯವನ್ನು ಕುಂದಿಸುವ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಮಾಡುವತ್ತ ಭಾರತದಲ್ಲಿನ ಸರ್ಕಾರಗಳನ್ನು ನೂಕಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ವಿಭಾಗದ ಫಲಾನುಭವಿಗಳನ್ನು ನಿರ್ಧರಿಸಲು ವಾರ್ಷಿಕ ಆದಾಯವನ್ನು ಎಂಟು ಲಕ್ಷಗಳಿಗೆ ನಿಗದಿ ಮಾಡಿರುವ ಸರ್ಕಾರದ ಜುಲೈ 2021 ರ ಪ್ರಕಟಣೆಯು ಸ್ವೇಚ್ಛಾನುಸಾರವಾದುದು ಎಂದು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಕುರಿತು ಕೋರ್ಟ್ ಇನ್ನೂ ತನ್ನ ತೀರ್ಪು ಪ್ರಕಟಿಸಬೇಕಾಗಿದೆ, ಆದರೆ ಒಬಿಸಿ ಕೋಟಾವನ್ನು ನಿರ್ಧರಿಸಲು ಬಳಸಿದ “ಕೆನೆ ಪದರ” ಎಂಬ ಸಾಮಾನ್ಯ ಸೂತ್ರದಡಿ ಹೊರತುಪಡಿಸಲು ನಿಗದಿ ಮಾಡಿದ ಆದಾಯ ಮಿತಿಯನ್ನು ಈ ಆರ್ಥಿಕ ಮಾನದಂಡ ಬಳಸಿ ನೀಡುವ ಫಲಾನುಭವಿಗಳನ್ನು ಒಳಗೊಳ್ಳಲು ಸರ್ಕಾರ ನಿಗದಿ ಮಾಡಿರುವುದು ಸರಿಯೇ ಎನ್ನುವ ಪ್ರಶ್ನೆ ಇದಾಗಿದೆ. ವಾರ್ಷಿಕ ಕೇವಲ ಒಂದು ಲಕ್ಷ ರೂಪಾಯಿ ತಲಾದಾಯ ಹೊಂದಿರುವ ಈ ನಮ್ಮ ದೇಶದಲ್ಲಿ, ಸರಾಸರಿಗಿಂತ ಹೆಚ್ಚಾಗಿ ಗಳಿಸುವ ಕುಟುಂಬವನ್ನು “ಆರ್ಥಿಕವಾಗಿ ದುರ್ಬಲ” ಎಂದು ಪರಿಗಣಿಸಬಹುದೆ? ಈ ಮಿತಿಯನ್ನು ನಿಗದಿಪಡಿಸಿರುವುರ ಹಿಂದೆ ಒಂದು ಹಂಚಿಕೆ ಇರುವುದು ಸುಸ್ಪಷ್ಟ. ಇಡಬ್ಲ್ಯೂಎಸ್ ಗುಂಪಿಗೆ ಶೇಕಡಾ 10 ರಷ್ಟು ಮೀಸಲಾತಿ ನಿಗದಿ ಮಾಡುವ ಹಿಂದೆ ಮೇಲ್ಜಾತಿಯರವನ್ನು ಓಲೈಸುವ ಮೋದಿ ಸರ್ಕಾರದ ತಂತ್ರವಿದೆ. ಒಬಿಸಿಗೆ ಅನ್ವಯವಾಗುವ ಅದೇ ಮಿತಿಯನ್ನು (ಅಲ್ಲಲ್ಲಿ ಸ್ವಲ್ಪ ಆದಾಯಗಳನ್ನು ಸೇರಿಸುವ ಅಥವಾ ಕಡಿಮೆ ಮಾಡುವಲ್ಲಿ ಕೆಲವು ವ್ಯತ್ಯಾಸಗಳಿವೆ) ಉಳಿಸಿಕೊಂಡಿರುವುದು ಅವರನ್ನು ಇವರ ಸಮಕ್ಕೆ ತರುವ ಮೋದಿಯವರ ಹಂಚಿಕೆ ಎಂಬುದು ಸ್ಪಷ್ಟ ಸಂಕೇತವಾಗಿದೆ. ಹಾಗಾಗಿ, ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿ ತಂದಿರುವುದು “ಹಿಂದುಳಿದವರ ಪರ”ವಾಗಿರುವ ನೀತಿ (ಕೋರ್ಟುಗಳು ಮೋದಿ ಸರ್ಕಾರದ ಕೈ ಕಟ್ಟಿಹಾಕಿದ್ದರೂ ಸಹ) ಎಂದು ಪ್ರಚಾರ ಮಾಡುವಾಗಲೇ, ಸರ್ಕಾರವು ಮೇಲ್ಜಾತಿ ಜನರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ ಎಂದೂ ಸಮರ್ಥಿಸುತ್ತಿದೆ. ಸರ್ಕಾರದ ಈ ವಂಚಕತನ ಅದು ನಡೆದು ಬಂದ ದಾರಿಗೆ ತಕ್ಕುದಾಗಿಯೇ ಇದೆ.

ಅನು: ಟಿ. ಸುರೇಂದ್ರ ರಾವ್ (ಕೃಪೆ: ಪೀಪಲ್ಸ್ ಡೆಮಾಕ್ರಸಿ, ಜನವರಿ 30, 2022)

Donate Janashakthi Media

Leave a Reply

Your email address will not be published. Required fields are marked *