‘ಹಿರಿಯರಾದ ಚನ್ನವೀರ ಕಣವಿಯವರ ಕಾವ್ಯವನ್ನು ನಾವು ಮತ್ತೆ ಮತ್ತೆ ಓದುವುದರ ಮೂಲಕ ನಾವಿವತ್ತು ಆ ಹಿರಿಯ ಜೀವವನ್ನು ಜೀವಂತವಾಗಿಡಬೇಕಾಗಿದೆ. ಅವರ ಸಜ್ಜನತೆ ಸದ್ಗುಣ ಸಾತ್ವಿಕ ಮತ್ತು ವಿನಯಶೀಲ ಗುಣಗಳನ್ನು ಇಂದಿನ ಹೊಸ ಬರಹಗಾರರು ತಮ್ಮೊಳಗೆ ಅಳವಡಿಸಿಕೊಳ್ಳಬೇಕಾಗಿದೆ’ ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ ಇಲ್ಲಿಯ ‘ನಾಗಸುಧೆ ಜಗಲಿ’ಯಲ್ಲಿ ಹಮ್ಮಿಕೊಂಡ ಡಾ. ಚನ್ನವೀರ ಕಣವಿ ಸ್ಮರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಹಿರೇಮಠ ಈ ಮೇಲಿನಂತೆ ಅಭಿಪ್ರಾಯಪಟ್ಟರು.
ಕಣವಿಯವರು ನಮ್ಮ ಹಿರಿಯ ತಲೆಮಾರಿನ ಸಾಹಿತಿಗಳ ಕೊಂಡಿಯಾಗಿದ್ದರು, ಅವರನ್ನು ಕಳೆದುಕೊಂಡು ನಮ್ಮ ಸಾಹಿತ್ಯ ಕ್ಷೇತ್ರ ನಿಜಕ್ಕೂ ನಷ್ಟ ಅನುಭವಿಸುತ್ತಿದೆ ಅಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಬಿ ಅಡ್ನೂರ ಅವರು ‘ಕಣವಿಯವರ ಬಹಳಷ್ಟು ಕವಿತೆಗಳು ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿದ್ದುದರಿಂದ ಜನಸಾಮಾನ್ಯರಿಗೂ ಕಣವಿಯವರ ಹೆಸರು ಗೊತ್ತಿತ್ತು, ಅವರ ಕವಿತೆಗಳು ಎಲ್ಲಿಯೂ ತಮ್ಮ ಅದ್ಭುತ ಲಯವನ್ನು ಬಿಟ್ಟುಕೊಡದೇ ಭಾವಪೂರ್ಣವಾಗಿ ಮೂಡಿಬರುತ್ತಿದ್ದವು’ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾದ ಹುಬ್ಬಳ್ಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗುರುಸಿದ್ಧಪ್ಪ ಬಡಗೇರ ಮಾತನಾಡಿ ‘ಕಣವಿಯವರು ಧಾರವಾಡಕ್ಕೇ ಒಂದು ಕಳಶದಂತೆ ಇದ್ದರು, ಇಡೀ ಕನ್ನಡ ಕಾವ್ಯ ಲೋಕದಲ್ಲಿ ಅವರು ನೀಡಿದ ಕೊಡುಗೆ ಅಪಾರವಾದುದು’ ಎಂದರು.
ಇನ್ನೊಬ್ಬ ಅತಿಥಿ ಜಗದೀಶ ಶೆಟ್ಟಿಯವರು ಕಣವಿಯವರ ಒಂದು ಕವಿತೆಯನ್ನು ಓದುವ ಮೂಲಕ ತಮ್ಮ ಕಾವ್ಯ ನಮನ ಸಲ್ಲಿಸಿದರು.
ಪ್ರಕಾಶ ಕಡಮೆ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತ, ಕಣವಿಯವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಅಂದರು. ಮಹಂತಪ್ಪ ನಂದೂರ ಅವರು ‘ನನ್ನ ಸುನೀತಗಳಿಗೆ ಕಣವಿಯವರೇ ಸ್ಪೂರ್ತಿ’ ಎಂದು ನೆನೆದರು. ಬಸು ಬೇವಿನಗಿಡದ ಮತ್ತು ಚನ್ನಪ್ಪ ಅಂಗಡಿಯವರು ಕಣವಿಯವರ ಜೊತೆಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ನೆನಪಿಸಿಕೊಂಡರು.
ಸಿ.ಎಂ ಮುನಿಸ್ವಾಮಿ, ವ್ಯಾಸ ದೇಶಪಾಂಡೆ, ಎಸ್.ಆರ್ ಆಶಿ, ವೆಂಕಟೇಶ ಮರೇಗುದ್ದಿ, ಎಸ್.ರಶ್ಮಿ, ರವಿಶಂಕರ ಗಡಿಯಪ್ಪನವರ ಮತ್ತು ಅರುಂಧತಿ ದೇಶಪಾಂಡೆ ಕಣವಿಯವರ ಒಂದೊಂದು ಕವಿತೆಯನ್ನು ಓದುವುದರ ಮೂಲಕ ನೆನಪಿಸಿಕೊಂಡರು. ಸುನಂದಾ ಕಡಮೆ ಕಣವಿ ದಂಪತಿಗಳ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಳ್ಳುತ್ತ ಎಲ್ಲರನ್ನೂ ವಂದಿಸಿದರು.
ಒಂದು ನಿಮಿಷದ ಮೌನವನ್ನು ಆಚರಿಸುವ ಮೂಲಕ ಅಗಲಿದ ತಮ್ಮ ಪ್ರೀತಿಯ ಕವಿ ಕಣವಿಯವರಿಗೆ ಭಾವಪೂರ್ಣ ಗೌರವವನ್ನು ಸಲ್ಲಿಸಲಾಯಿತು.