ಎಡಪಂಥೀಯರು ಕಿಸಾನ್ ಚಳುವಳಿಯನ್ನು ಬಡ ರೈತರ ಹಾಗೂ ಕೃಷಿ ಕೂಲಿಕಾರರ ಸಮಸ್ಯೆಗಳತ್ತ ತಿರುಗಿಸಬೇಕು: ಪ್ರಕಾಶ್ ಕಾರಟ್

ಬೆಂಗಳೂರಿನ ಫೌಂಡೇಷನ್ ಫಾರ್ ಅಗ್ರೇರಿಯನ್ ಸ್ಟಡೀಸ್ ಸಂಘಟಿಸಿದ್ದ ಆನ್‌ಲೈನ್ ಬಹಿರಂಗ ಉಪನ್ಯಾಸದಲ್ಲಿ “2020-21 ರ ರೈತ ಚಳುವಳಿಯ ರಾಜಕೀಯ ಪರಿಣಾಮಗಳು” ಕುರಿತು ಸಿಪಿಐ(ಎಂ) ಪೋಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಮಾತನಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಕಾಶ್‌ ಕಾರಟ್‌ ಆವರು, ಮೂರು ಕೃಷಿ ಕಾನೂನುಗಳ ವಿರುದ್ಧದ ಚಳುವಳಿಗಳು ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಯಿತು. ಆ ಪ್ರದೇಶಗಳು ಕಾರ್ಷಿಕವಾಗಿ ಅಭಿವೃದ್ಧಿಯಾಗಿವೆ ಮತ್ತು ಅಲ್ಲಿಯ ರೈತರು ಚಾರಿತ್ರಿಕವಾಗಿ ಸರ್ಕಾರದ ಬೆಂಬಲ ಪಡೆದಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ನೇರವಾಗಿ ತೊಂದರೆಗೊಳಗಾದ ರೈತರು ಆ ಕೃಷಿ ಕಾನೂನುಗಳ ವಿರುದ್ಧ ತಿರುಗಿಬಿದ್ದರು. ಅದಲ್ಲದೇ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯನ್ನು ಕೊನೆಗಾಣಿಸುವ ಮೊದಲ ಹೆಜ್ಜೆ ಇದು ಎಂದು ಕಳವಳಕ್ಕೊಳಗಾದ ರೈತರು ಕೂಡ ಈ ಕೃಷಿ ಕಾನೂನುಗಳ ವಿರುದ್ಧ ಕಿಡಿ ಕಾರಿದರು. ಭಾರತದ ಇತರ ಪ್ರದೇಶಗಳ ರೈತರು ಕೂಡ ಎಂಎಸ್‌ಪಿಯನ್ನು ತಮ್ಮ ಆದಾಯದ ಕುಸಿತಕ್ಕೆ ಅತ್ಯಗತ್ಯವಾದ ರಕ್ಷಣೆ ಎಂದು ತಿಳಿದಿದರು.

ಕಳೆದ ಕೆಲವು ದಶಕಗಳಲ್ಲಿನ ಕಾರ್ಷಿಕ ಬಿಕ್ಕಟ್ಟು ಇನ್ನೂ ತೀವ್ರವಾಗುತ್ತಿರುವ ಕಾರಣ ಸ್ಥಳೀಯ ಮಟ್ಟದಲ್ಲಿ ಅದಾಗಲೇ ಹೋರಾಟಗಳು ನಡೆಯುತ್ತಿವೆ. ನವಂಬರ್ 2020 ರಲ್ಲಿ ಆರಂಭವಾದ ಐತಿಹಾಸಿಕ ಪ್ರತಿಭಟನೆಗಳಿಗೆ ಮುಂಚೆಯೇ ರಾಷ್ಟ್ರ ಮಟ್ಟದಲ್ಲಿ ಕಾರ್ಷಿಕ ಚಳುವಳಿಯನ್ನು ಆರಂಭಿಸಲು ಪ್ರಯತ್ನಗಳು ನಡೆದಿದ್ದವು ಎಂದು ಪ್ರಕಾಶ್ ಕಾರಟ್ ಗಮನ ಸೆಳೆದರು.

ಈ ಆವೇಗ ಮತ್ತು ಪಂಜಾಬ್, ಹರಿಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶ ರೈತರ ವಿವಿಧ ವಿಭಾಗಗಳು ಒಗ್ಗೂಡಿದ ಕಾರಣದಿಂದಾಗಿ ಹಿಂದೆಂದೂ ಕಾಣದ ಹಾಗೂ ದೀರ್ಘಕಾಲದ ಚಳುವಳಿಯಾಗಿ ಅದು ದೆಹಲಿಯ ಗಡಿಗಳಲ್ಲಿ ಕಾಣಿಸಿಕೊಂಡಿತು. ಈ ಚಳುವಳಿಯು ದೇಶಾದ್ಯಂತ ಎಲ್ಲಾ ಕಡೆಗಳಿಂದಲೂ ಸೌಹಾರ್ದ ಬೆಂಬಲ ಪಡೆಯಿತಾದರೂ ಅದರ ಪ್ರಭಾವ ಒಂದೇ ರೀತಿ ಇರಲಿಲ್ಲ. ಕಾರ್ಮಿಕ ಸಂಘಗಳ ಬೆಂಬಲದಿಂದಾಗಿ ಚಳುವಳಿಯ ಕಾವು ಇನ್ನೂ ಹೆಚ್ಚಾಯಿತು. ರೈತರ ಪ್ರತಿರೋಧವನ್ನು ಸುಸ್ಥಿರಗೊಳಿಸುವಲ್ಲಿ ಮತ್ತು ಕಾರ್ಮಿಕ ವರ್ಗ ಹಾಗೂ ರೈತ ಚಳುವಳಿಯನ್ನು ಒಗ್ಗೂಡಿಸುವಲ್ಲಿ ಎಡಪಂಥೀಯರು ಪ್ರಮುಖ ಪಾತ್ರ ವಹಿಸಿದರು. ರೈತರ ಕುಟುಂಬಗಳಿಂದ ಮಹಿಳೆಯರೂ ಗಮನಾರ್ಹ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೊಟ್ಟ ಮೊದಲ ಬಾರಿಗೆ ಮಹಿಳೆಯರನ್ನು ರೈತರನ್ನಾಗಿ ಪರಿಗಣಿಸಲಾಯಿತು. ಈ ಐಕ್ಯತೆಗೆ ಭಂಗ ತರಲು ಆಳುವ ವರ್ಗವು ಮಾಡಿದ ಎಲ್ಲಾ ನಿರಂತರ ಪ್ರಯತ್ನಗಳನ್ನು ಧೈರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿತು ಆ ರೈತ ಚಳುವಳಿ. ಆದರೆ, ಇದನ್ನು ಸಾಧಿಸಲು ರೈತ ಬಂಧುಗಳು ದುಬಾರಿಯಾದ ತ್ಯಾಗ ಬಲಿದಾನಗಳನ್ನು ಮಾಡಬೇಕಾಯಿತು, 715 ರೈತರು ಹುತಾತ್ಮರಾದರು ಎಂದು ತಿಳಿಸಿದರು.

ಆ ನಂತರ ಪ್ರಕಾಶ್ ಕಾರಟ್ ಅವರು, ಈ ಚಳುವಳಿಯ ಪ್ರಮುಖ ರಾಜಕೀಯ ಪರಿಣಾಮಗಳ ಬಗ್ಗೆ ಮಾತನಾಡಿದರು. ನವ-ಉದಾರವಾದ ಮತ್ತು ಭಾರತೀಯ ಆರ್ಥಿಕತೆಯನ್ನು ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸುವ ಯತ್ನಗಳ ವಿರುದ್ಧ ಈ ಚಳುವಳಿಯು ಒಂದು ಐಕ್ಯ ಹೋರಾಟವನ್ನು ಕಟ್ಟುವಲ್ಲಿ ಯಶಸ್ವಿಯಾಯಿತು. ಹೆಚ್ಚಾಗುತ್ತಿರುವ ಆರ್ಥಿಕತೆಯ ಖಾಸಗೀಕರಣವನ್ನು ಬೆಂಬಲಿಸುತ್ತಿದ್ದ ಹಲವು ರಾಜಕೀಯ ಪಕ್ಷಗಳು ಅಥವಾ ಅಡ್ಡ ಗೋಡೆಯ ಮೇಲೆ ದೀಪ ಇಡುವ ಜನರು ಬೆಳೆಯುತ್ತಿರುವ ಚಳುವಳಿಯ ಕಾವಿನಿಂದಾಗಿ ತಮ್ಮ ನಿಲುವನ್ನು ಬದಲಾಯಿಸಬೇಕಾಯಿತು. ಈ ಚಳುವಳಿಯು ಬಹು ಮುಖ್ಯವಾಗಿ ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಮೂಲೆಗುಂಪು ಮಾಡುವಲ್ಲೂ ಯಶಸ್ವಿಯಾಯಿತು. ಪ್ರತಿಭಟನೆಯ ಭೌಗೋಳಿಕ ಪ್ರದೇಶ ಕೂಡ ರಾಜಕೀಯ ಮಹತ್ವವನ್ನು ಪಡೆಯಿತು. ರಾಜಧಾನಿಯ ಸುತ್ತ ಎದ್ದುಬಂದ ಭಾರಿ ಜನ ಸಮೂಹವನ್ನು ಕಡೆಗಣಿಸಲು ಕೇಂದ್ರದ ಆಡಳಿತ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಈ ಸಂಘರ್ಷವು ರೈತಾಪಿ ವರ್ಗ ಹಾಗೂ ಕಾರ್ಪೊರೇಟ್‌ಗಳ ನಡುವಿನ ತಿಕ್ಕಾಟವನ್ನು ಇನ್ನೂ ಹರಿತಗೊಳಿಸಿತು ಮತ್ತು ಕಾರ್ಮಿಕರು ಹಾಗೂ ರೈತರ ನಡುವಿನ ವಿಶಾಲ ಐಕ್ಯತೆಯ ಸಾಧ್ಯತೆಯನ್ನು ಹೆಚ್ಚಿಸಿತು.

ಬಹಳ ಮುಖ್ಯವಾಗಿ ಪಶ್ಚಿಮ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ 2013 ರ ಮುಜಾಫರ್‌ನಗರದ ಗಲಭೆಗಳ ನಂತರ ಆ ಪ್ರದೇಶದ ಹಳ್ಳಿಗಳಲ್ಲಿ ಬೆಳೆಯುತ್ತಿದ್ದ ಕೋಮುವಾದೀಕರಣವನ್ನು ಈ ಐಕ್ಯತೆಯು ಹಿಮ್ಮೆಟ್ಟಿಸಿತು. ಆದರೆ, ಇಂತಹ ಐಕ್ಯತೆಯನ್ನು, ಆ ಪ್ರದೇಶಗಳಲ್ಲಿ ಹಿಂದುತ್ವ ಸಿದ್ಧಾಂತದ ತೀವ್ರತರದ ನುಸುಳುವಿಕೆಯಿಂದಾಗಿ ನಿಜವೆಂದು ನಂಬಲಾಗುವುದಿಲ್ಲ ಎಂದು ಎಚ್ಚರಿಸಿದರು. ಆದಕಾರಣ ನಿರಂತರ ರಾಜಕೀಯ ಹಾಗೂ ಸೈದ್ಧಾಂತಿಕ ಹೋರಾಟಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಗ್ರಾಮೀಣ ಬಾರತದಲ್ಲಿನ ವರ್ಗ ರಾಜಕೀಯದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತಾ ಈ ಚಳುವಳಿಯ ಯಶಸ್ಸು ಭಾರತೀಯ ಹಳ್ಳಿಗಳಲ್ಲಿನ ಉತ್ಪಾದನಾ ಸಂಬಂಧಗಳ ಸಂರಚನೆಯನ್ನು ಬದಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘಟಿತ ಕಿಸಾನ್ ಚಳುವಳಿಯ ಬೆಳೆಯುತ್ತಿರುವ ಶಕ್ತಿಯ ಹೊರತಾಗಿಯೂ, ಅದು ಬಹುಪಾಲು ಜಮೀನು ಇರುವ ರೈತರ ಹಿತಾಸಕ್ತಿಗೆ ಸೀಮಿತವಾಗಿದೆ. ಆದ್ದರಿಂದ ಬಡ ರೈತರ ಹಾಗೂ ಕೃಷಿ ಕೂಲಿಕಾರರ ಪ್ರಶ್ನೆಗಳ ಆಧಾರದಲ್ಲಿ ಎಡಪಕ್ಷಗಳು ರೈತರ ಚಳುವಳಿಯನ್ನು ನಡೆಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *