ಬಜೆಟ್ 2022-23: ಅಲ್ಲಿಗೂ ಸಲ್ಲದು ಇಲ್ಲಿಗೂ ಸಲ್ಲದು

ಡಾ. ಸಿ ಪಿ ಚಂದ್ರಶೇಖರ್

ಕೋವಿಡ್-19ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಅಥವಾ ಹೆಚ್ಚುವರಿ ಖರ್ಚುವೆಚ್ಚಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದಂತೆ ತೋರುತ್ತದೆ. ತೊಂದರೆಗೀಡಾದ ಬಹುಸಂಖ್ಯಾತ ನಾಗರಿಕರ ನೆರವಿಗೆ ಹಣಕಾಸು ಮಧ್ಯಪ್ರವೇಶದ ಕ್ರಮಗಳು ನಿರ್ಣಾಯಕವಾಗುತ್ತವೆ ಎಂಬುದು ಈ ಸರಕಾರಕ್ಕೆ ಬೇಕಿಲ್ಲ. ಬೆರಳೆಣಿಕೆಯ ಮೇಲ್ವರ್ಗಗಳವರಿಗೆ ಅನುಕೂಲಗಳು ಮತ್ತು ಸಂಪತ್ತು-ವರಮಾನಗಳ ಅಸಮತೆಗಳ ಸೃಷ್ಟಿಯಿಂದಾಗಿ ಹದಗೆಡುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ನಿರ್ದಯ ನಿರ್ಲಕ್ಷ್ಯದಿಂದಾಗಿ ಜನರಲ್ಲಿ ಉಂಟಾಗುವ ಭಾವನೆಗಳ ಪರಿಣಾಮವನ್ನು ತಟಸ್ಥಗೊಳಿಸಲು ಒಂದು ಧ್ರುವೀಕರಣದ ಅಜೆಂಡಾ ಮಾತ್ರವೇ ಸಾಕಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.

ಒಂದು ಅಸಾಧಾರಣ ಸನ್ನಿವೇಶದಲ್ಲಿ ಈ ಬಜೆಟ್ ಮಂಡನೆಯಾಗಿದೆ. ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಮತ್ತು ವಿಶೇಷವಾಗಿ 2021ರ ಮಧ್ಯಭಾಗದಲ್ಲಿ ಅನಾವರಣಗೊಂಡ ಅದರ ಅಪಾಯಕಾರಿ ಅವತಾರದ ಉಪಟಳಗಳನ್ನು ಅನುಭವಿಸಿದ ನಂತರ ಉಂಟಾದ ಆರ್ಥಿಕ ನಷ್ಟವನ್ನು ಸರಿಪಡಿಸಿಕೊಳ್ಳುವ ಮತ್ತು ಲಾಕ್‌ಡೌನ್‌ಗಳಿಂದಾಗಿ ಅಪಾರ ಹಾನಿಗೊಳಗಾದವರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಸಹಾಯ ಮಾಡಬೇಕಾದ ಸಮಯವಿದು.

ಈಗ ದೇಶವನ್ನು ಕಾಡುತ್ತಿರುವ ಎರಡು ಗಂಭೀರ ಸಮಸ್ಯೆಗಳಾದ ನಿರುದ್ಯೋಗ ಮತ್ತು ಬಿಕ್ಕಟ್ಟಿಗೊಳಗಾದ ಕೃಷಿ ಮತ್ತು ಅನೌಪಚಾರಿಕ ವಲಯಗಳ ಮೇಲೆ ಸರ್ಕಾರವು ಗಮನ ಹರಿಸಬೇಕಿದೆ.

ಆದರೆ, ಈ ಉದ್ದೇಶಕ್ಕೆ ಅಗತ್ಯವಾದ ವಿತ್ತೀಯ ನೀತಿಯನ್ನು ಸರ್ಕಾರ ಕಡೆಗಣಿಸುತ್ತಿದೆ ಎಂಬುದನ್ನು ಅದರ ಖರ್ಚು-ವೆಚ್ಚಗಳಿಗೆ ಸಂಬಂಧಿಸಿದ ಅಂಕಿಸಂಖ್ಯೆಗಳು ಹೇಳುತ್ತವೆ.

2022-23ರಲ್ಲಿ ಸರ್ಕಾರದ ಒಟ್ಟು ವೆಚ್ಚವು (ಇಂದಿನ ಬೆಲೆಗಳ ಮಟ್ಟದಲ್ಲಿ) ಶೇ.4.6ರಷ್ಟು ಹೆಚ್ಚಳವಾಗಿ 39, 44,909 ಕೋಟಿ ರೂ.ಗಳಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಹಣದುಬ್ಬರಕ್ಕೆ ಹೊಂದಿಸಿದಾಗ ಇದು ಬಹುತೇಕ ಸ್ಥಗಿತತೆಯನ್ನು ಸೂಚಿಸುತ್ತದೆ.

ತಮ್ಮ ತಮ್ಮ ಊರುಗಳಿಗೆ ಮರಳಿದ ಲಕ್ಷ ಲಕ್ಷ ವಲಸೆ ಕಾರ್ಮಿಕರ ಜೀವ ಉಳಿಸಿದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ನಿಗದಿಪಡಿಸಿದ ಮೊತ್ತವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. 2022-23ರಲ್ಲಿ ಅದನ್ನು 73,000 ಕೋಟಿ ರೂಗಳಿಗೆ ಇಳಿಸಲಾಗಿದೆ. 2021-22 ರಲ್ಲಿ 98,000 ಕೋಟಿ ರೂ. ಮತ್ತು 2020-21 ರಲ್ಲಿ 1,11,170 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಹಾಗಾಗಿ, ನಿರುದ್ಯೋಗವು ವ್ಯಾಪಕವಾಗಿರುವ ಇಂದಿನ ಸಂದರ್ಭದಲ್ಲಿ, ಈ ಬಾಬ್ತು ನಿಗದಿಪಡಿಸಿರುವ ಮೊತ್ತವು ಅತ್ಯಲ್ಪವೇ.

ಆಹಾರ ಸಬ್ಸಿಡಿಗಳನ್ನೂ ಕಡಿತಮಾಡಲಾಗಿದೆ. 2020-21ರಲ್ಲಿ 4, 62,789 ಕೋಟಿ ರೂ.ಗಳಿದ್ದ ಆಹಾರ ಸಬ್ಸಿಡಿಗಳು 2022-23ರಲ್ಲಿ 1, 45,920 ಕೋಟಿ ರೂ.ಗಳಿಗೆ ತೀವ್ರವಾಗಿ ಇಳಿದಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯಗಳ ವಿಕೇಂದ್ರೀಕೃತ ಸಂಗ್ರಹಣೆಗಾಗಿ ಒದಗಿಸುವ ಸಬ್ಸಿಡಿಗಳನ್ನು ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಲಾಗುತ್ತಿದೆ – 2020-21ರಲ್ಲಿ 78,338 ಕೋಟಿ ರೂ.ಗಳಿಂದ 2021-22ರಲ್ಲಿ 75,290 ಕೋಟಿ ರೂ.ಗಳಿಗೆ ಮತ್ತು ಈಗ ಅದನ್ನು ಮತ್ತಷ್ಟು ಕಡಿತಗೊಳಿಸಿ 2022-23ನೇ ವರ್ಷದಲ್ಲಿ 60,651 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ಕೊರೊನಾ ಇನ್ನೂ ತೊಲಗಿಲ್ಲವಾದರೂ, ಜನರ ಆರೋಗ್ಯ ರಕ್ಷಣೆಗೆ ಅವಶ್ಯವಾದ ಆರೋಗ್ಯ ವಲಯದ ಮೇಲಿನ ವೆಚ್ಚವನ್ನು 2021-22ರ ವರ್ಷಕ್ಕೆ ಪರಿಷ್ಕೃತ ಅಂದಾಜು ಪ್ರಕಾರ ನಿಗದಿಪಡಿಸಿದ 1,24,345 ಕೋಟಿ ರೂ.ಗಳಿಂದ ಅದನ್ನು 2022-23ರ ಸಾಲಿಗೆ 1,13,458 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ಜನಸಂಖ್ಯೆಯ ಬಹು ದೊಡ್ಡ ವಿಭಾಗವು ಕೊರೊನಾ ಉಂಟುಮಾಡಿದ ದುಷ್ಪರಿಣಾಮಗಳಿಂದ ಇನ್ನೂ ತತ್ತರಿಸುತ್ತಿದ್ದರೂ ಸಹ, ಬಜೆಟ್‌ನಲ್ಲಿ ಮಾಡಿರುವ ಈ ರೀತಿಯ ಹಂಚಿಕೆಗಳಲ್ಲಿನ ಇಳಿಕೆಗಳಿಂದಾಗಿ, ಕೋವಿಡ್-19ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಅಥವಾ ಹೆಚ್ಚುವರಿ ಖರ್ಚುವೆಚ್ಚಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದಂತೆ ತೋರುತ್ತದೆ.

ಕೊರೊನಾದ ಪರಿಣಾಮಗಳನ್ನು ಎದುರಿಸಲು ಕೈಗೊಂಡ ಕೆಲವು ಸೀಮಿತ ಪ್ರಯತ್ನಗಳಿಂದಲೂ ಸರ್ಕಾರವು ಹಿಂದೆ ಸರಿಯುವ ಈ ಹುಡುಗಾಟಿಕೆಯು ಇಂತಹ ಉದ್ದೇಶಗಳಿಗೂ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಮನಸ್ಸು ಅದಕ್ಕಿಲ್ಲ ಎಂಬುದನ್ನು ಬಯಲು ಮಾಡುತ್ತದೆ. ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸಬಹುದಿತ್ತು. ಆದರೆ, ಕೊನೆಯ ಪಕ್ಷ, ಇತ್ತೀಚಿನ ವರ್ಷಗಳಲ್ಲಿ ಕಾರ್ಪೊರೇಟ್ ವಲಯಕ್ಕೆ ನೀಡಲಾದ ಅನೇಕ ನೇರ ತೆರಿಗೆ ರಿಯಾಯಿತಿಗಳನ್ನು ಈ ಉದ್ದೇಶಕ್ಕಾದರೂ ಹಿಂಪಡೆಯಲಾರದ ಈ ಸರ್ಕಾರವು ಇನ್ನು ಕಾರ್ಪೊರೇಟ್ ತೆರಿಗೆಗಳನ್ನು ಹೆಚ್ಚಿಸುವುದುಂಟೆ?

ಸಾರ್ವಜನಿಕ ಆಸ್ತಿಗಳ ಮಾರಾಟದಿಂದ 2021-22ರಲ್ಲಿ 1,75,000 ಕೋಟಿ ರೂ.ಗಳನ್ನು ಹಿಂಪಡೆಯುವ (ಬಜೆಟ್ ಸ್ವೀಕೃತಿಗಳು) ಬಜೆಟ್ ಅಂದಾಜಿಗೆ ಹೋಲಿಸಿದರೆ, ಪರಿಷ್ಕೃತ ಅಂದಾಜುಗಳು ಅದನ್ನು 78,000 ಕೋಟಿ ರೂ.ಗಳೆಂದು ಹೇಳುತ್ತವೆ. ಹಾಗಾಗಿ, ಈ ಬಾಬ್ತು ಸುಮಾರು 1,00,000 ಕೋಟಿ ರೂ.ಗಳ ಕೊರತೆಯಾಗುತ್ತದೆ.

ಈ ಕಠಿಣ ಪರಿಸ್ಥಿತಿಯಿಂದ ಬಚಾವಾಗಲು, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಸುಂಕಗಳು ಮತ್ತು ಸೆಸ್‌ಗಳನ್ನು ಹೇರುತ್ತದೆ. ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ.

ಬಂಡವಾಳ ವೆಚ್ಚಗಳ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುವ ಹಣಕಾಸು ಸಚಿವರು ಅದರ ಸಂಗ್ರಹಣೆಯ ಒಂದು ದೊಡ್ಡ ಭಾಗವನ್ನೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಮೂಲಕವೇ ಹೊಂದಿಸಿಕೊಳ್ಳುತ್ತಾರೆ. ಇದು ಜನ ಸಾಮಾನ್ಯರಿಗೆ ಹೊರಲಾರದ ಭಾರ ಮಾತ್ರವಲ್ಲ, ಹಣದುಬ್ಬರವನ್ನು ತೀವ್ರಗೊಳಿಸುತ್ತದೆ.

ಹಣ ಹೊಂದಿಸಿಕೊಳ್ಳಲು ಪೆಟ್ರೋಲ್ ಮತ್ತು ಡೀಸೆಲ್ ಮಾರ್ಗದ ಪರೋಕ್ಷ ತೆರಿಗೆಗಳ ಮೇಲಿನ ಈ ಅವಲಂಬನೆಯು ಬೆಳವಣಿಗೆಯ ವೇಗ ಮತ್ತು ಮಾದರಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಮಾಡಿರುವ ಅಂದಾಜುಗಳ ಪ್ರಕಾರ, ಖಾಸಗಿ ಬಳಕೆ-ವೆಚ್ಚವು ಈಗಾಗಲೇ ತಗ್ಗಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಗಳ ಏರಿಕೆಯು ಹಣದುಬ್ಬರವನ್ನು ಉತ್ತೇಜಿಸುವುದು ಮಾತ್ರವಲ್ಲ, ಜನರ ಬಳಕೆ-ವೆಚ್ಚಗಳು ಮತ್ತಷ್ಟು ಸಂಕುಚಿತಗೊಳಿಸುತ್ತದೆ.

ಈ ರೀತಿಯಲ್ಲಿ ತಗ್ಗಿದ ಬಳಕೆಯ ವೆಚ್ಚಗಳು ಮತ್ತು ಅದರೊಟ್ಟಿಗೇ ತಗ್ಗಿದ ಕೇಂದ್ರ ಸರ್ಕಾರದ ಒಟ್ಟು ನಿಜ ವೆಚ್ಚಗಳೂ ಒಟ್ಟಾಗುವ ಪರಿಣಾಮವಾಗಿ ಬರುವ ವರ್ಷದಲ್ಲಿ ಸಾಂಕ್ರಾಮಿಕ-ಪೂರ್ವ ಆರ್ಥಿಕ ಬೆಳವಣಿಗೆಯ ಮಟ್ಟ ತಲುಪುವುದು ಸಾಧ್ಯವಾಗುವುದಿಲ್ಲ ಮತ್ತು ಅದು ಸ್ಥಗಿತತೆಗೂ ಕಾರಣವಾಗುತ್ತದೆ. ಹಣದುಬ್ಬರ-ಮೂಲ ತೆರಿಗೆಗಳಿಂದ ಖಚಿತವಾಗಿ ಉಲ್ಬಣಗೊಳ್ಳಲಿರುವ ಹಣದುಬ್ಬರ ಸನ್ನಿವೇಶದಲ್ಲಿ, ಈ ಬಜೆಟ್ ಸ್ಥಗಿತತೆ ಆವರಿಸಿದ ಹಣದುಬ್ಬರಕ್ಕೆ (ಸ್ಟ್ಯಾಗ್‌ಫ್ಲೇಶನ್’ಗೆ) ದಾರಿ ಮಾಡಿಕೊಡುತ್ತದೆ.

ಚುನಾವಣಾ ವರ್ಷದಲ್ಲಿ, ಸರ್ಕಾರವು ಈ ತಿರೋಗಾಮಿ ಮತ್ತು ಸಂಪ್ರದಾಯಶರಣ ವಿತ್ತ ನಿಲುವಿಗೆ ಅಂಟಿಕೊಳ್ಳುವ ಆಯ್ಕೆಯನ್ನು ಮಾಡಿಕೊಂಡಿರುವುದು ಒಂದು ಸ್ಪಷ್ಟ ಸಂದೇಶವನ್ನು ಕೊಡುತ್ತಿದೆ. ಈ ಸರಕಾರಕ್ಕೆ ಹಣಕಾಸು ನೀತಿ ಮತ್ತು ಬಜೆಟ್, ತನ್ನ ರಾಜಕೀಯ ಭವಿಷ್ಯವನ್ನು ಉತ್ತಮಗೊಳಿಸುವ ಸಾಧನಗಳಲ್ಲ ಎಂಬ ಸಂದೇಶವದು. ಬದಲಿಗೆ, ತನ್ನ ‘ನವ ಭಾರತ’ಕ್ಕೆ ಸೂಕ್ತವಾದ ರಾಷ್ಟ್ರೀಯವಾದ ಎಂಬ ವೇಷಧರಿಸಿದ, ಕೋಮು-ಧ್ರುವೀಕರಣದ ಕಾರ್ಯಸೂಚಿಯೊಂದಿಗೆ ಸಾಧ್ಯವಿರುವ ಎಲ್ಲ ಪಟ್ಟುಗಳನ್ನೂ ಹಾಕಲಾಗುವುದು!

ಇದರ ಫಲಿತಾಂಶವೆಂದರೆ, ತೊಂದರೆಗೀಡಾದ ಬಹುಸಂಖ್ಯಾತ ನಾಗರಿಕರ ನೆರವಿಗೆ ಹಣಕಾಸು ಮಧ್ಯಪ್ರವೇಶದ ಕ್ರಮಗಳು ನಿರ್ಣಾಯಕವಾಗುತ್ತವೆ ಎಂಬುದು ಈ ಸರಕಾರಕ್ಕೆ ಬೇಕಿಲ್ಲ. ಬೆರಳೆಣಿಕೆಯ ಮೇಲ್ವರ್ಗಗಳವರಿಗೆ ಅನುಕೂಲಗಳು ಮತ್ತು ಸಂಪತ್ತು-ವರಮಾನಗಳ ಅಸಮತೆಗಳ ಸೃಷ್ಟಿಯಿಂದಾಗಿ ಹದಗೆಡುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ನಿರ್ದಯ ನಿರ್ಲಕ್ಷ್ಯದಿಂದಾಗಿ ಜನರಲ್ಲಿ ಉಂಟಾಗುವ ಭಾವನೆಗಳ ಪರಿಣಾಮವನ್ನು ತಟಸ್ಥಗೊಳಿಸಲು ಒಂದು ಧ್ರುವೀಕರಣದ ಅಜೆಂಡಾ ಮಾತ್ರವೇ ಸಾಕಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.

ಕೃಪೆ: The Wire 02 02 2022
ಅನು: ಕೆ.ಎಂ.ನಾಗರಾಜ್

ಭೂತಕಾಲ                     ವರ್ತಮಾನ                    ಭವಿಷ್ಯತ್
650ವರ್ಷಗಳ ಹಿಂದೆ…         (ಮೌನ)               25 ವರ್ಷಗಳ ನಂತರ

ವ್ಯಂಗ್ಯಚಿತ್ರಕೃಪೆ: ಮಂಜುಲ್, ನ್ಯೂಸ್‍9

Donate Janashakthi Media

Leave a Reply

Your email address will not be published. Required fields are marked *