ಸುಭಾಷಿಣಿ ಅಲಿ
“ಎಲ್ಲ ರೀತಿಯ ಕೋಮುವಾದಗಳಿಗೆ ಮತ್ತು ಧಾರ್ಮಿಕ ಮತಾಂಧತೆಗಳಿಗೂ ನೇತಾಜಿ ಅವರ ತೀವ್ರ ವಿರೋಧವಿತ್ತು ಎಂಬ ವಾಸ್ತವವನ್ನು, ಅವರ ಈ ಮೂರ್ತಿಗೆ ಸಹ ಮರೆಮಾಚಲು ಆಗಲಿಕ್ಕಿಲ್ಲ. ಈ ಮೂರ್ತಿ, ಬಿಜೆಪಿ ಮತ್ತು ಮೋದಿ ಗಳಿಗೆ ಅವರು ಹತಾಶೆಯಿಂದ ನಿರೀಕ್ಷಿಸುತ್ತಿರುವ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಸಹ ಯಾವುದೇ ರೀತಿಯಲ್ಲಿ ಕೊಡಲಿಕ್ಕಿಲ್ಲ. ಐ.ಎನ್.ಎ. ಯ ಹಲವು ಅಧಿಕಾರಿಗಳು ಮುಸ್ಲಿಮರಾಗಿದ್ದರು. ಅವರ ಮೇಲೆ ನೇತಾಜಿ ಪೂರ್ಣವಾಗಿ ಭರವಸೆಯಿಟ್ಟಿದ್ದರು. ಅವರೂ ತಮ್ಮ ಪ್ರಾಣವನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಣವಾಗಿಟ್ಟು ಆ ಭರವಸೆಗೆ ಸ್ಪಂದಿಸಿದ್ದರು ಎಂಬ ವಾಸ್ತವವನ್ನು ಬಿಜೆಪಿ-ಮೋದಿ ಹೇಗೆ ಅರಗಿಸಿಕೊಳ್ಳಲು ಸಾಧ್ಯ? ಜಾತಿ-ವರ್ಗ-ಧರ್ಮ-ಲಿಂಗ ಬೇಧ ಮರೆತ ಅಮೋಘ ಐಕ್ಯತೆಯನ್ನು ಸುಭಾಸ್ ಐ.ಎನ್.ಎ. ಯಲ್ಲಿ ಸಾಧಿಸಿದರು –ಎಂಬ ವಾಸ್ತವವನ್ನು ಬಿಜೆಪಿ-ಮೋದಿ ಹೇಗೆ ತಮ್ಮ ಪರಂಪರೆಯೆಂದು ಹೇಳಿಕೊಳ್ಳುವುದು ಅಥವಾ ಬಚ್ಚಿಡುವುದು ಸಾಧ್ಯ?” ಎನ್ನುತ್ತಾರೆ ಸುಭಾಷಿಣಿ ಅಲಿ – ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರು ಮತ್ತು ಐ.ಎನ್.ಎ ಯಲ್ಲಿ ನೇತಾಜಿ ಜತೆ ಕೆಲಸ ಮಾಡಿ ರಾಣಿ ಝಾನ್ಸಿ ರೆಜಿಮೆಂಟ್ ನಾಯಕತ್ವ ವಹಿಸಿದ್ದ ಕ್ಯಾಪ್ಟನ್ ಲಕ್ಷ್ಮಿ ಅವರ ಪುತ್ರಿ
ನವೆದಹಲಿಯಲ್ಲಿರುವ ಇಂಡಿಯಾ ಗೇಟ್ ಬ್ರಿಟಿಷ್ ಸರಕಾರ ಕಟ್ಟಿದ ಸಾಮ್ರಾಜ್ಯದ ಪ್ರಮುಖ ಸ್ಮಾರಕಗಳಲ್ಲೊಂದು. ಮೊದಲ ಮಹಾಯುದ್ಧದಲ್ಲಿ (1914-18) ಮಾತೃಭೂಮಿಯಿಂದ ದೂರದ ಫ್ಲಾಂಡರ್ಸ್, ಗಲ್ಲಿಪೊಲಿ, ಇರಾನ್ ಮತ್ತು ಇತರೆಡೆ ಮಡಿದ ಬ್ರಿಟಿಷ್ ಇಂಡಿಯಾದ ಸೈನ್ಯದ ಭಾರತೀಯ ಸೈನಿಕರ ನೆನಪಿನ ಸ್ಮಾರಕವಿದು. ಬ್ರಿಟಿಷರು ನಡೆಸಿದ ಅಫ್ಘಾನ್ ಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರ ಹೆಸರುಗಳನ್ನೂ ಅಲ್ಲಿ ದಾಖಲಿಸಲಾಗಿದೆ. ಈ ಯುದ್ಧ ಸ್ಮಾರಕದ ಮಧ್ಯಭಾಗದಲ್ಲಿರುವ ಛಾವಣಿಯ ಕೆಳಗೆ ಐದನೆಯ ಜಾರ್ಜ್ ರಾಜನ ಮೂರ್ತಿಯನ್ನು ಆ ಮೇಲೆ ಸ್ಥಾಪಿಸಲಾಯಿತು. ಸ್ವಾತಂತ್ರ‍್ಯದ ಕೆಲವು ವರ್ಷಗಳ ನಂತರ ಯಾವುದೇ ಸದ್ದುಗದ್ದಲವಿಲ್ಲದೆ ರಾಜನ ಮೂರ್ತಿಯನ್ನು ತೆಗೆಯಲಾಯಿತು. ಅಲ್ಲಿ ಯಾರ ಮೂರ್ತಿಯನ್ನು ಸ್ಥಾಪಿಸಬೇಕು ಎಂಬುದರ ಬಗೆಗೆ ಹಲವು ಸಲಹೆಗಳು ಬಂದಿದ್ದರಿಂದ, ಯಾವುದೇ ಮೂರ್ತಿಯನ್ನು ಸ್ಥಾಪಿಸಲಾಗಲಿಲ್ಲ.
ಕೆಲವು ದಿನಗಳ ಹಿಂದೆ, ಕೇಂದ್ರ ಸರಕಾರ ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಥಟ್ಟನೆ ಘೋಷಿಸಿತು. ಆ ಮೂರ್ತಿಯನ್ನು ಸ್ಥಾಪಿಸುವವರೆಗೆ, ಈ ವರ್ಷದ ನೇತಾಜಿ ಅವರ 125 ನೆ ಜನ್ಮದಿನ ಜನವರಿ 23ರಂದು ಅಲ್ಲಿ ಅವರ ಹೊಲೊಗ್ರಾಂ ಎಲ್ಲರಿಗೂ ಕಾಣಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದೂ ಘೋಷಿಸಲಾಯಿತು.
ನೇತಾಜಿ ಅವರ ಮೂರ್ತಿ ಸ್ಥಾಪಿಸಬೇಕೇಂಬ ಈ ನಿರ್ಧಾರ ಥಟ್ಟನೆ ಮಾಡಿದ್ದೆಂಬುದು ಮೊದಲ ನೋಟಕ್ಕೆ ಕಾಣಿಸುತ್ತದೆ. ಪೂರ್ವನಿರ್ಧಾರಿತವಾದರೆ ಮೂರ್ತಿ ರಚನೆಯ ಕೆಲಸವಾದರೂ ಪ್ರಾರಂಭಿಸಿದ ಸೂಚನೆಗಳಿರುತ್ತಿದ್ದವು. ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋದಿ, ನೇತಾಜಿ ಅವರ ಸ್ಮರಣೆ ಮಾಡುವಾಗಲೆಲ್ಲ, ಅವರ ಮನಸ್ಸಿನಲ್ಲಿರುವ ಗೊಂದಲ ಸ್ಪಷ್ಟವಾಗಿ ಕಾಣಿಸುತ್ತದೆ. ನೇತಾಜಿ ಅವರ ಪರಂಪರೆಯ ಬಗೆಗೆನೇ, ಅವರ ಪರಂಪರೆಯ ಹಲವು ಆಯಾಮಗಳ ಕುರಿತು ತಮ್ಮ ಧೋರಣೆ ಏನಿರಬೇಕು, ಯಾವ ಆಯಾಮವನ್ನು ಎತ್ತಿ ಹೇಳಬೇಕು ಎಂಬುದರ ಬಗ್ಗೆ ಅನಿಶ್ಚಿತತೆ, ಅವರ ಪರಂಪರೆಯನ್ನು ತಾವು ಗೌರವಿಸುವುದರಲ್ಲಿ ಅಡಕವಾಗಿರುವ ವೈರುಧ್ಯಗಳು – ಹೀಗೆ ಹಲವು ಗೊಂದಲಗಳು ಬಿಜೆಪಿ-ಮೋದಿ ಯನ್ನು ಕಾಡುತ್ತಿರುತ್ತವೆ.
ನೇತಾಜಿ ಅವರ ವಿಚಾರಗಳ, ಕೆಲಸಗಳ ಅಭಿಮಾನಿಗಳು ಎಂದು ತೋರಿಸಿಕೊಳ್ಳುವುದು, ಬಿಜೆಪಿ-ಮೋದಿ ಯ ತಕ್ಷಣದ ಕ್ಷುಲ್ಲಕ ರಾಜಕೀಯ ಕಾರಣಗಳಿಂದ ಪ್ರೇರಿತವಾದವುಗಳು. ಒಂದು ಕಡೆ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರ ಕೊಡುಗೆಗಳನ್ನು ಕಡೆಗಣಿಸಲು ನೆಹರೂ ಸರ್ವಪ್ರಯತ್ನಗಳನ್ನು ಮಾಡಿದರು ಎಂದು ಅವರಿಗೆ ತೋರಿಸಬೇಕಾಗಿದೆ. ನೆಹರೂ ಕೆಂಪು ಕೋಟೆಯಿಂದ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ನೇತಾಜಿ ಈ ಸಂದರ್ಭದಲ್ಲಿ ಇಲ್ಲಿರಬೇಕಾಗಿತ್ತು ಎಂದು ಭಾವಪೂರ್ಣವಾಗಿ ನೆನಪಿಸಿಕೊಂಡರು ಎಂಬ ಮತ್ತು ಇತರ ವಾಸ್ತವಗಳನ್ನು ಮರೆಸುವುದು ಅವರಿಗೆ ಬೇಕಾಗಿದೆ.
ಇನ್ನೊಂದು ಕಡೆ, ಬಿಜೆಪಿ ಮತ್ತು ಪ್ರಧಾನಿ, ತಾವು ನೇತಾಜಿ ಅವರ ನಿಜವಾದ ಅಭಿಮಾನಿಗಳು, ಎಂದು ತೋರಿಸಿಕೊಳ್ಳಲು ಹತಾಶರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರೆಂದು ಹೆಮ್ಮಯಿಂದ ಹೇಳಿಕೊಳ್ಳಬಹುದಾದ ಯಾವುದೇ ಒಬ್ಬ ವ್ಯಕ್ತಿಯೂ, ತಮ್ಮ ಆರೆಸ್ಸೆಸ್ ಮತ್ತು ಪೂರ್ವಜ ಸಂಸ್ಥೆ ಹಿಂದೂ ಮಹಾಸಭಾ ಗಳಲ್ಲಿ, ಇಲ್ಲವೆಂಬುದೇ ಅವರ ಹತಾಶೆಗೆ ಕಾರಣ. (ʻವೀರ ಸಾವರ್ಕರ್ʼ ರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರನೆಂದು ತೋರಿಸುವ ಪ್ರಯತ್ನಗಳು, ಅವರು ತಮ್ಮ ಬಿಡುಗಡೆಗೆ ಸಲ್ಲಿಸಿದ ತಪ್ಪೊಪ್ಪಿಗೆ ಪತ್ರದಿಂದಾಗಿ, ಅವರು ಸ್ವಾತಂತ್ರ್ಯ ಹೋರಾಟದಿಂದ ಓಡಿ ಹೋದ ‘ಹೇಡಿ’ ಎಂದು ಬಯಲಾಗಿ ವಿಫಲವಾಗಿವೆ) ಅವರ ಹತಾಶೆಗಳು ಹಲವೊಮ್ಮೆ ಹಾಸ್ಯಾಸ್ಪದವಾಗುತ್ತವೆ. ನೇತಾಜಿ ಆಜಾದ್ ಹಿಂದ್ ತಾತ್ಕಾಲಿಕ ಸರಕಾರ ಸ್ಥಾಪನೆಯ ದಿನಾಚರಣೆಯ (ಅಕ್ಟೋಬರ್ 22, 2020) ಸಂದರ್ಭದಲ್ಲಿ ನೇತಾಜಿ ಮತ್ತು ಐಎನ್.ಎ. ಸೈನಿಕರು ಹಾಕುತ್ತಿದ್ದ ಮಿಲಿಟರಿ ಟೋಪಿಯನ್ನು ಹಾಕಿಕೊಂಡು ಪ್ರಧಾನಿಗಳು ಮಾತನಾಡಿದರು!
ಚುನಾವಣೆಗಾಗಿ ವರ್ಷಪೂರ್ತಿ ಆಚರಣೆ ಘೋಷಣೆ ಪರಾಭವದ ನಂತರ ಕಸದ ಬುಟ್ಟಿಗೆ
ತಾವು ನೇತಾಜಿಯ ನಿಜವಾದ ಅನುಯಾಯಿಯೆಂದು ಸಿದ್ಧಪಡಿಸುವ ಮತ್ತೊಂದು ಪ್ರಯತ್ನವಾಗಿ, ಜನವರಿ 23, 2021ರಂದು, ನೇತಾಜಿ ಅವರ 125ನೆಯ ಹುಟ್ಟು ಹಬ್ಬದ ವರ್ಷಪೂರ್ತಿ ಆಚರಣೆಗೆ, ಸರಕಾರ ಒಂದು ಸಮಿತಿಯನ್ನು ರಚಿಸುವ ಘೋಷಣೆಯನ್ನು ಮಾಡಿದರು. ಈ ವರ್ಷಪೂರ್ತಿಯ ವಿವಿಧ ಆಚರಣೆಗಳು ಈ ವರ್ಷ ಅಂದರೆ ಜನವರಿ 23, 2022ರಂದು ಕೊನೆಗೊಳ್ಳುವುದಿತ್ತು. ಆದರೆ ಸಮಿತಿಯ ಒಂದು ಸಭೆಯೂ ನಡೆಯಲಿಲ್ಲ, ವರ್ಷದುದ್ದಕ್ಕೂ ಯಾವ ಆಚರಣೆಯೂ ನಡೆಯಲಿಲ್ಲ. ಇದು ಆಶ್ಚರ್ಯದ ಸಂಗತಿಯೇನಲ್ಲ. ಯಾಕೆಂದರೆ ನೇತಾಜಿ ಅವರ ಜೀವನ, ವಿಚಾರಗಳಿಗೆ ಅಥವಾ ಕಾರ್ಯಾಚರಣೆಗಳಿಗೆ ಸಂಬಂಧಿಸಿರುವ ಯಾವುದನ್ನೂ ಬಿಜೆಪಿ-ಮೋದಿ ಸಂಭ್ರಮಿಸುವುದು ಸಾಧ್ಯವಿಲ್ಲ.
ಸಮಿತಿಯ ಘೋಷಣೆಯಾದಾಗ, ಬಿಜೆಪಿ ಮತ್ತು ಮೋದಿ ಈ ಘೋಷಣೆ ತಮಗೆ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲು ಸಹಾಯ ಮಾಡಬಹುದು ಎಂದು ನಂಬಿದ್ದಾರೆಂದು ಹಲವರು ಅರ್ಥೈಸಿದರು. ಆದ್ದರಿಂದಲೋ ಏನೋ, ಚುನಾವಣೆಯಲ್ಲಿ ಅವಮಾನಕಾರಿ ಸೋಲು ಅನುಭವಿಸಿದಾಗ, ಸಮಿತಿ ಮತ್ತು ಆಚರಣೆ ಎರಡನ್ನೂ ಕಸದ ಬುಟ್ಟಿಗೆ ಎಸೆದರು. ನೇತಾಜಿ ಅವರ ಪರಂಪರೆಯನ್ನು ಕಸಿಯಲು ಪ್ರಯತ್ನಿಸಿದಾಗಲೆಲ್ಲ, ಬಿಜೆಪಿ ಮತ್ತು ಮೋದಿಗೆ ಬರುವ ಕಷ್ಟಗಳು ಸ್ಪಷ್ಟವಾಗಿ ಕಾಣುತ್ತಿದ್ದವು.
ಐದನೆಯ ಜಾರ್ಜ್ ರಾಜನ ಸ್ಥಳದಲ್ಲಿ ನೇತಾಜಿ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ ಎಂಬ ಘೋಷಣೆ ಈ ನಿಟ್ಟಿನಲ್ಲಿ ಅವರ ಕೊನೆಯ ಪ್ರಯತ್ನ ಅಂತ ಕಾಣುತ್ತದೆ. ಸರಕಾರದ ನೀತಿಗಳಿಗೆ ತೀವ್ರ ವಿರೋಧ ಹೆಚ್ಚುತ್ತಿರುವ ಸಮಯದಲ್ಲಿ ಬರುತ್ತಿದೆ. ಬ್ರಿಟಿಷ್ ಸಾಮ್ರಾಟನನ್ನು ಓಡಿಸಲು ಶಸ್ತ್ರಗಳನ್ನು ಎತ್ತಿಕೊಂಡ ವ್ಯಕ್ತಿಯ ಮೂರ್ತಿ, ಸಾಮ್ರಾಟನ ಮೂರ್ತಿಯ ಜಾಗದಲ್ಲಿ ಸ್ಥಾಪಿಸುವುದು ಸರಿಯಾದ ಆಯ್ಕೆಯೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಬಿಜೆಪಿ ಮತ್ತು ಪ್ರಧಾನಿಯ ನಿಜವಾದ ಉದ್ದೇಶ ನೇತಾಜಿ ಅವರ ಪರಂಪರೆಯನ್ನು ಕಸಿಯುವುದು ಮತ್ತು ಅದು ಮತ್ತೆ ವಿಫಲವಾಗುವುದು ಎಂಬುದರ ಬಗೆಗೂ ಯಾರಿಗೂ ಸಂದೇಹವಿಲ್ಲ.
ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗೆ ಮಾತ್ರವಲ್ಲ, ಸುಭಾಸ್ ಅವರ ಆಳವಾದ ಮತ್ತು ನಿರಂತರವಾಗಿ ವ್ಯಕ್ತವಾಗುತ್ತಿದ್ದ ಜಾತ್ಯತೀತತೆಗೆ ಬದ್ಧತೆಗಳಿಗೆ, ಬಿಜೆಪಿಯ ಮತ್ತು ಅದರ ಪೂರ್ವಜರು ವಿರೋಧಿಗಳಾಗಿದ್ದರು. ಎಲ್ಲ ರೀತಿಯ ಕೋಮುವಾದಗಳಿಗೆ ಮತ್ತು ಧಾರ್ಮಿಕ ಮತಾಂಧತೆಗಳಿಗೂ ನೇತಾಜಿ ಅವರ ತೀವ್ರ ವಿರೋಧವಿತ್ತು ಎಂಬ ವಾಸ್ತವವನ್ನು, ಅವರ ಈ ಮೂರ್ತಿಗೆ ಸಹ ಮರೆಮಾಚಲು ಆಗಲಿಕ್ಕಿಲ್ಲ.
ನೇತಾಜಿ ಮೂರ್ತಿ ಸ್ಥಾಪಿಸಬಹುದು, ಆದರೆ ಐ.ಎನ್.ಎ. ಧ್ಯೇಯವಾಕ್ಯ ಕೆತ್ತಲಾರರು
ನೇತಾಜಿ ಅವರ ಈ ಮೂರ್ತಿ, ಬಿಜೆಪಿ ಮತ್ತು ಮೋದಿ ಗಳಿಗೆ ಅವರು ಹತಾಶೆಯಿಂದ ನಿರೀಕ್ಷಿಸುತ್ತಿರುವ ದೇಶಭಕ್ತಿಯ ಸರ್ಟಿಫಿಕೇಟುಗಳನ್ನು ಸಹ ಯಾವುದೇ ರೀತಿಯಲ್ಲಿ ಕೊಡಲಿಕ್ಕಿಲ್ಲ. ನೇತಾಜಿ ಸಿಂಗಾಪುರ್ ನಲ್ಲಿ ಐ.ಎನ್.ಎ ನಾಯಕತ್ವ ವಹಿಸಿಕೊಂಡು ಅವರು, ಅನಿವಾಸಿ ಭಾರತೀಯ ಮಹಿಳೆಯರನ್ನು ರಾಣಿ ಝಾನ್ಸಿ ರೆಜಿಮೆಂಟಿಗೆ ಸೇರಿಸಿಕೊಳ್ಳುತ್ತಿದ್ದಾಗ, ಐ.ಎನ್.ಎ ಯ ವೀರ ಸೈನಿಕರು ಬ್ಟಿಟಿಷರ ವಿರುದ್ಧ ಧೀರೋದ್ದಾತ್ತ ಹೋರಾಟ ನಡೆಸುತ್ತಿದ್ದಾಗ, ಬಿಜೆಪಿ-ಮೋದಿಯ ‘ಹೀರೊ’ ಸಾವರ್ಕರ್ ಬ್ರಿಟಿಷ್ ಸೈನ್ಯಕ್ಕೆ ಭಾರತೀಯರನ್ನು ಸೇರಿಸುವ ಪ್ರಯತ್ನ ಮಾಡುತ್ತಿದ್ದ. ಅವರನ್ನು ತಮ್ಮ ಬ್ರಿಟಿಷ್ ಮಾಲಕರನ್ನು ರಕ್ಷಿಸಲು ಸುಭಾಸ್ ಮತ್ತು ಅವರ ಐ.ಎನ್.ಎ ವೀರ ಸೈನಿಕರ ಹತ್ಯೆ ಮಾಡಲು ಪ್ರಚೋದಿಸುತ್ತಿದ್ದ ಎಂಬ ವಾಸ್ತವವನ್ನು ಅಳಿಸಿ ಹಾಕಲು ನೇತಾಜಿ ಅವರ ಮೂರ್ತಿಯ ಸ್ಥಾಪನೆಯಿಂದಲೂ ಸಾಧ‍್ಯವಾಗಲಿಕ್ಕಿಲ್ಲ.
ಬಿಜೆಪಿ ಮತ್ತು ಮೋದಿ ಸ್ಥಾಪಿಸುವ ನೇತಾಜಿ ಅವರ ಸ್ಮಾರಕವು, ಭಾರತದ ಐಕ್ಯತೆ ಮತ್ತು ಪ್ರಗತಿಗೆ ಜಾತ್ಯತೀತತೆ ಅತ್ಯಗತ್ಯ ವೆಂಬ ನೇತಾಜಿ ಅವರ ಒತ್ತಾಯದ ವಾಸ್ತವವನ್ನು ಮರೆಮಾಚಲು ಸಹಾಯವಾಗಲಿಕ್ಕಿಲ್ಲ. ಐ.ಎನ್.ಎ ಯ ಹಲವು ಅಧಿಕಾರಿಗಳು ಮುಸ್ಲಿಮರಾಗಿದ್ದರು. ಅವರ ಮೇಲೆ ನೇತಾಜಿ ಪೂರ್ಣವಾಗಿ ಭರವಸೆಯಿಟ್ಟಿದ್ದರು. ಅವರೂ ತಮ್ಮ ಪ್ರಾಣವನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಣವಾಗಿಟ್ಟು ಆ ಭರವಸೆಗೆ ಸ್ಪಂದಿಸಿದ್ದರು ಎಂಬ ವಾಸ್ತವವನ್ನು ಬಿಜೆಪಿ-ಮೋದಿ ಹೇಗೆ ಅರಗಿಸಿಕೊಳ್ಳಲು ಸಾಧ್ಯ?
ಐ.ಎನ್.ಎ. ಯಲ್ಲಿ ಗಂಡಸರು ಮತ್ತು ಹೆಂಗಸರು ಸೋದರ-ಸೋದರಿಯರಂತೆ ಒಟ್ಟಿಗೆ ಉಂಡು ಬಾಳಿದರು. ಇಂತಹ ಜಾತಿ-ವರ್ಗ-ಧರ್ಮ-ಲಿಂಗ ಬೇಧ ಮರೆತ ಅಮೋಘ ಐಕ್ಯತೆಯನ್ನು ಸುಭಾಸ್ ಐ.ಎನ್.ಎ ಯಲ್ಲಿ ಸಾಧಿಸಿದರು –ಇವೆಲ್ಲ ವಾಸ್ತವವನ್ನು ಹೇಗೆ ಬಿಜೆಪಿ-ಮೋದಿ ತಮ್ಮ ಪರಂಪರೆಯೆಂದು ಹೇಳಿಕೊಳ್ಳುವುದು ಅಥವಾ ಬಚ್ಚಿಡುವುದು ಸಾಧ್ಯ? ಯಾಕೆಂದರೆ ತಲಾ ಒಬ್ಬ ಹಿಂದೂ, ಒಬ್ಬ ಮುಸ್ಲಿಂ, ಒಬ್ಬ ಸಿಖ್ ಐ.ಎನ್.ಎ ಅಧಿಕಾರಿಯನ್ನು ಬ್ರಿಟಿಷರು ಕೆಂಪು ಕೋಟೆಯಲ್ಲಿ ಬಂಧಿಸಿಟ್ಟು ದೇಶದ್ರೋಹದ ವಿಚಾರಣೆಗೆ ಒಳಪಡಿಸಿದ್ದನ್ನು,. (ಅವರ ಬೆಂಬಲಕ್ಕೆ ಇಡೀ ದೇಶ ಧಾವಿಸಿತ್ತು. ನೆಹರೂ ಸೇರಿದಂತೆ ವಕೀಲಿ ಬಿಟ್ಟುಕೊಟ್ಟಿದ್ದ ಹಲವು ದೇಶಭಕ್ತ ಹೋರಾಟಗಾರ ನಾಯಕರು ಅವರ ರಕ್ಷಣೆಯ ವಕಾಲತ್ತು ವಹಿಸಲು ಮತ್ತೆ ಕರಿಕೋಟು ತೊಟ್ಟು ಧಾವಿಸಿದ್ದರು.) ಸುಭಾಸ್ ಸಾಧಿಸಿದ್ದ ಅಮೋಘ ಐಕ್ಯತೆಯನ್ನು ಕಂಡು ಇಡೀ ದೇಶವೇ ಬೆರಗಾಗಿತ್ತು.
ಐ.ಎನ್.ಯ ಟೋಪಿ ಮೋದಿ ಅವರನ್ನು ಐ.ಎನ್.ಎ ಹೋರಾಟಗಾರ ಮಾಡಲಾರದು. ಸುಭಾಸ್ ಅವರ ಮೂರ್ತಿಯನ್ನು ಕಟ್ಟಿ ಸ್ಥಾಪಿಸುವುದು, ಮೋದಿಯನ್ನು ಅಮೋಘ ರಾಷ್ಟ್ರೀಯ ಚಳುವಳಿಯ ಪರಂಪರೆಯ ವಾರಸುದಾರನನ್ನಾಗಿ ಮಾಡುವುದಿಲ್ಲ.
ಮೋದಿ ಸುಭಾಸ್ ಅವರ ಮೂರ್ತಿಯನ್ನು ರಚಿಸಿ ಸ್ಥಾಪಿಸಬಹುದು. ಆದರೆ ಅದರಲ್ಲಿ ಐ.ಎನ್.ಎ ಯ ಧ್ಯೇಯ ವಾಕ್ಯ [“ ‘ಐತ್ಮದ್ (ನಂಬಿಕೆ), ಇತ್ತಿಹದ್ (ಐಕ್ಯತೆ), ಕುರ್ಬಾನಿ (ಬಲಿದಾನ)”] ವನ್ನು ಅವರು ಕೆತ್ತಿಸಲಾರರು.