ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವ ವಿರೋಧಿಸುವವರು ಸಂವಿಧಾನ ವಿರೋಧಿಗಳು

ಸಿದ್ಧರಾಮಯ್ಯ

ಗಣರಾಜ್ಯದ ದಿನ ನಾವು ಎರಡು ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಸುಸೂತ್ರವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು. ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು. ದೇಶ ನಿಜಕ್ಕೂ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ.

ನಾಡಬಾಂಧವರೆಲ್ಲರಿಗೂ 73ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು…

ಭಾರತ ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2022ರ ಜನವರಿ 26 ಕ್ಕೆ 72 ವರ್ಷಗಳು ತುಂಬುತ್ತಿದೆ. ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಸೇರುವುದು 1947ರ ಡಿಸೆಂಬರ್ 9 ರಂದು. ಭಾರತದ ಸಂವಿಧಾನದ ಕರಡನ್ನು 1947ರ ನವೆಂಬರ್ 4 ರಂದು ಸಲ್ಲಿಸಲಾಗುತ್ತದೆ.. ಅಲ್ಲಿಂದ 166 ದಿನಗಳ ಕಾಲ ಅದನ್ನು ಸಾರ್ವಜನಿಕ ಚರ್ಚೆಗೆ ಇಡಲಾಗುತ್ತದೆ. ಒಟ್ಟು 2 ವರ್ಷ 11 ತಿಂಗಳು 18 ದಿನಗಳಲ್ಲಿ ಐದು ಬಾರಿ ನಡೆದ ಅಧಿವೇಶನಗಳಲ್ಲಿ ನಡೆದ ಸುದೀರ್ಘ ಚರ್ಚೆಗಳ ಫಲವಾಗಿ ಅಂತಿಮವಾಗಿ 1950ರ ಜನವರಿ 24ರಂದು ನಮ್ಮ ಸಂವಿಧಾನದ ಅಂತಿಮ ಪ್ರತಿಗೆ 308 ಸದಸ್ಯರು ಸಹಿ ಹಾಕಿದರು. ಇದಾದ 2 ದಿನದಲ್ಲಿ ಅಂದರೆ ಜನವರಿ 26ಕ್ಕೆ ಭಾರತದ ಸಂವಿಧಾನ ದೇಶದಾದ್ಯಂತ ಜಾರಿಗೆ ಬಂತು.

ಸಂವಿಧಾನದ ಜಾರಿಗೆ ಜನವರಿ 26ನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನೆಂದರೆ ಇದೇ ದಿನ 1930ರಲ್ಲಿ (ಜ.26.1930) ರಾಷ್ಟ್ರೀಯ ಚಳವಳಿಯ ನೇತಾರರು ಕಾಂಗ್ರೆಸ್ ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಘೋಷಣೆ ಮಾಡಿದ್ದರು. ಮಾತ್ರವಲ್ಲ ಅಂದಿನಿಂದ ಬ್ರಿಟಿಷರು ತೊಲಗುವ ವರೆಗೂ ಕಾಂಗ್ರೆಸ್ ಜನವರಿ 26ನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಿಕೊಂಡೇ ಬಂದಿತ್ತು.

‘’ನಮ್ಮ ಸ್ವರಾಜ್ಯ ಬ್ರಿಟಿಷ್ ಸಂಸತ್ತಿನ ಉಡುಗೊರೆಯಾಗಿರುವುದಿಲ್ಲ, ಅದು ಭಾರತದ ಸಂಪೂರ್ಣ ಅಭಿವ್ಯಕ್ತಿಯ ಘೋಷಣೆ ಆಗಿರುತ್ತದೆ. ಅದು ನಮ್ಮ ದೇಶದ ಉತ್ಕೃಷ್ಟ ರಕ್ತದಿಂದ ಪಡೆದ ನಿಧಿಯಾಗಿರುತ್ತದೆ” ಎಂದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯಪೂರ್ವದಲ್ಲಿ ಭವಿಷ್ಯ ನುಡಿದಿದ್ದರು. ಆ ನಿಧಿ ನಮಗೆ ಸಿಕ್ಕಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ.

ನಮ್ಮಲ್ಲಿ ದೇಶದ ಅರಿವನ್ನೂ ದೇಶಾಭಿಮಾನದ ಕಿಚ್ಚನ್ನೂ ಹೊತ್ತಿಸಿದ್ದು ರಾಷ್ಟ್ರೀಯ ಚಳವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳವಳಿಯ ಭದ್ರ ಬುನಾದಿಯ ಮೇಲೆ ರೂಪುಗೊಂಡಿದ್ದೇ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿ ನಡೆದುಕೊಂಡು ಬರುತ್ತಿರುವ ಭಾರತದ ಪ್ರಜಾಪ್ರಭುತ್ವ. ಗಣರಾಜ್ಯೋತ್ಸವದ ಶುಭ ದಿನವಾದ ಇಂದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದಿಷ್ಟು ಚಿಂತನೆಗಳನ್ನು ನನ್ನ ನಾಡಿನ ಜನತೆಯಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.ಸಂವಿಧಾನದ ಈ ಮೂಲ ಆಶಯಗಳಿಗೆ ನಾವೆಷ್ಟು ಬದ್ದರಾಗಿದ್ದೇವೆ ಎನ್ನುವುದನ್ನು ಗಣರಾಜ್ಯೋತ್ಸವದ ದಿನ ನಾವೆಲ್ಲರೂ ಆತ್ಮಾವಲೋಕನ ಮಾಡಬೇಕಾಗಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 1950ರ ಜನವರಿ 26ರಂದು ಸಂವಿಧಾನ ಜಾರಿಯಾಗುವಾಗ ನಾವೆಲ್ಲರೂ ಸದಾ ನೆನಪಿಡುವಂತಹ ಮತ್ತು ನಮ್ಮನ್ನೆಲ್ಲ ಚಿಂತನೆಗೆ ಹಚ್ಚುವ ಒಂದು ಮಾತನ್ನು ಹೇಳಿದ್ದರು. “On 26th January 1950, we are going to enter into a life of contradictions. In politics, we will have equality and in social and economic structure, continue to deny the principle of one man one value” ಎಂದು. ಇದು ಬಹಳ ಮುಖ್ಯವಾದ ಮಾತು. ಅದರರ್ಥ, ಈ ದಿನ ಭಾರತೀಯರಾದ ನಾವು ಒಂದು ವೈರುಧ್ಯಗಳ ಘಟ್ಟಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ರಾಜಕೀಯವಾಗಿ ಸಮಾನತೆಯನ್ನು ಪ್ರತಿಪಾದಿಸುತ್ತಾ ಹೋಗುತ್ತಿರುತ್ತೇವೆ. ಆದರೆ ಅದೇ ವೇಳೆಗೆ ಸಾಮಾಜಿಕ ಮತ್ತು ಆರ್ಥಿಕ ರಚನೆಗಳಲ್ಲಿ ಒಬ್ಬ ಮನುಷ್ಯ ಒಂದು ಮೌಲ್ಯ ಎಂಬುದರ ನಿರಾಕರಣೆ ಮುಂದುವರಿದುಕೊಂಡು ಹೋಗುತ್ತಾ ಇರುತ್ತದೆ.

ಇಂತಹ ವೈರುಧ್ಯದ ಬದುಕನ್ನು ನಾವು ಎಲ್ಲಿಯವರೆಗೆ ಮುಂದುವರಿಸುತ್ತಿರುತ್ತೇವೆ? ಸಾಮಾಜಿಕ, ಆರ್ಥಿಕ ಬದುಕಿನಲ್ಲಿ ಸಮಾನತೆಯನ್ನು ಎಷ್ಟು ದಿನ ಹೀಗೇ ನಿರಾಕರಿಸುತ್ತೇವೆ? ಒಂದು ವೇಳೆ ಹೀಗೇ ಮುಂದುವರಿಯಿತು ಅಂದರೆ ನಾವು ಇಷ್ಟು ಶ್ರಮಪಟ್ಟು ಕಟ್ಟಿದ ಪ್ರಜಾಪ್ರಭುತ್ವದ ಸೌಧವನ್ನೇ ಅಪಾಯಕ್ಕೆ ಒಡ್ಡುತ್ತೇವೆ. ನಾವು ಆದಷ್ಟು ಬೇಗ ಸಮಾನತೆ ಸಾಧಿಸದಿದ್ದರೆ ಅಸಮಾನತೆಯಿಂದ ಬಾಧಿತರಾಗುವ ಶೋಷಿತರು ಈ ಪ್ರಜಾಪ್ರಭುತ್ವವನ್ನು ಪುಡಿ ಮಾಡುತ್ತಾರೆ ಎಂಬ ಎಚ್ಚರಿಕೆಯನ್ನೂ ಅಂಬೇಡ್ಕರ್ ನೀಡಿದ್ದರು.

ಗಣರಾಜ್ಯದ ದಿನ ನಾವು ಎರಡು ಜವಾಬ್ದಾರಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದು ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಸುಸೂತ್ರವಾಗಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು. ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುತ್ತಾ ಹೋಗುವುದು. ದೇಶ ನಿಜಕ್ಕೂ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ. ಇದನ್ನು ಸಾಧಿಸಬೇಕೆಂದರೆ ಸಾವಿರಾರು ಜಾತಿಗಳಾಗಿ, ಮೇಲು ಕೀಳು ಎಂಬ ತಾರತಮ್ಯಗಳಲ್ಲಿ ಛಿದ್ರವಾಗಿರುವ ಈ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ ದೇಶವನ್ನು ನಿಜವಾದ ಅರ್ಥದಲ್ಲಿ ಸದೃಢಗೊಳಿಸುವುದು. ಈ ಮೂಲಕ ಒಳಗಿನಿಂದ ದೇಶವನ್ನು ಬಲಿಷ್ಠಗೊಳಿಸಲು ಸಾಧ್ಯವಾಗುತ್ತದೆ. ಇದನ್ನು ಹೊರತು ಪಡಿಸಿ ನಮ್ಮ ದೇಶವನ್ನು, ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮಗೆ ಅಡ್ಡದಾರಿಗಳಿಲ್ಲ.

ಈ ದಾರಿಯನ್ನು ಹೊರತು ಪಡಿಸಿ ಒಂದು ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶವನ್ನು ಕಟ್ಟುವ ಮಾತುಗಳನ್ನು ನಾವು ಬ್ರಿಟಿಷರ ಕಾಲದಿಂದಲೂ ಕೇಳುತ್ತಿದ್ದೇವೆ. ಹೀಗೆ ಹೇಳುವ ಜನ ಈ ದೇಶದಲ್ಲಿ ರಾಷ್ಟ್ರೀಯ ಭಾವನೆಗಳನ್ನು ಬಡಿದೆಬ್ಬಿಸಿದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲೇ ಇಲ್ಲ. ಧರ್ಮದ ಮೇಲೆ ದೇಶವನ್ನು ಕಟ್ಟಲು ಹೋದರೆ ದೇಶ ಮತ್ತಷ್ಟು ದುರ್ಬಲವಾಗುತ್ತದೆ.

ಸ್ವಾತಂತ್ರ್ಯಾನಂತರದ ದೇಶವನ್ನಾಳಿದ ಕಾಂಗ್ರೆಸ್ ನಾಯಕರಾದ ಪಂಡಿತ ಜವಾಹರಲಾಲ ನೆಹರೂ ಅವರಿಂದ ಹಿಡಿದು ಲಾಲ್ ಬಹದ್ದೂರ್ ಶಾಸ್ತ್ರಿ, ಶ್ರೀಮತಿ ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ವರೆಗಿನ ಕಾಂಗ್ರೆಸ್ ನಾಯಕರ ವರೆಗೆ ಎಲ್ಲ ಮಹನೀಯರು ದೇಶದ ಸಾರ್ವಭೌಮತೆಯ ರಕ್ಷಣೆಯ ಜೊತೆ ಭಾರತವನ್ನು ಆರ್ಥಿಕ ಪ್ರಜಾಪ್ರಭುತ್ವವನ್ನಾಗಿಸುವ ಪ್ರಯತ್ನಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇದಕ್ಕೆ ಇತಿಹಾಸದ ಪುಟಗಳು ಸಾಕ್ಷಿ.

ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಜಕೀಯ ಪಕ್ಷಗಳು ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶವನ್ನು ಕಟ್ಟುವ ಮಾತುಗಳನ್ನು ಆಡುತ್ತಿದ್ದಾರೆ. ಈ ಒಡೆದು ಆಳುವ ನೀತಿಯನ್ನು ನಾವು ಬ್ರಿಟಿಷರ ಕಾಲದಿಂದಲೂ ಕೇಳುತ್ತಿದ್ದೇವೆ. ಇದು ಬಹುಧರ್ಮ,ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯ ಇಲ್ಲ.

ದೇಶದಲ್ಲಿ ಪ್ರಗತಿ ಸಾಧನೆಯಾಗುವುದು ಯಾವುದರಿಂದ? ಕೇವಲ ರಾಜಕೀಯದಿಂದಾಗಲೀ ಮತಧರ್ಮದ ಚಿಂತನೆಗಳಿಂದಾಗಲೀ ದೇಶ ಅಭಿವೃದ್ಧಿ ಹೊಂದುವುದಿಲ್ಲ. ನಿಜವಾಗಿಯೂ ದೇಶ ಅಭಿವೃದ್ಧಿ ಹೊಂದುವುದು ವೈಜ್ಞಾನಿಕ ಪ್ರಗತಿ, ತಂತ್ರಜ್ಞಾನದ ಪ್ರಗತಿ ಮತ್ತು ವೈಜ್ಞಾನಿಕ ಚಿಂತನೆಯಿಂದ. ಸಂವಿಧಾನ ಹೇಳುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಶಯಗಳಿಗೆ ಪ್ರತಿಯೊಬ್ಬ ಪ್ರಜೆ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿರುವ ಪಕ್ಷ, ಸಂಘಟನೆಗಳು ಕೂಡಾ ಬದ್ದವಾಗಿರಬೇಕು. ಈ ಬದ್ದತೆಯ ಆಧಾರದಲ್ಲಿಯೇ ವ್ಯಕ್ತಿ,ಪಕ್ಷ, ಸಂಘಟನೆಗಳು ಜನಪರವೋ, ಜನವಿರೋಧಿಯೋ ಎಂದು ನಿರ್ಧಾರವಾಗಬೇಕು.

ಯಾರು ಸಾಮಾಜಿಕ ಸಮಾನತೆಯನ್ನು ಸಾರುವ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಾರೋ, ಯಾರು ಅನ್ಯಧರ್ಮವನ್ನು ದ್ವೇಷಿಸುತ್ತಾರೋ ಮತ್ತು ಅದರ ವಿರುದ್ದ ತಮ್ಮ ಧರ್ಮವನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಾರೋ, ಯಾರು ದಮನಕಾರಿ ನೀತಿ ಮತ್ತು ಕ್ರಮಗಳ ಮೂಲಕ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೋ, ಯಾರು ಮತ್ತೊಂದು ಧರ್ಮದ ನಂಬಿಕೆ ಮತ್ತು ಆಚರಣೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೋ, ಯಾರು ಪರಸ್ಪರ ಭಾತೃತ್ವವನ್ನು ಕೆಡಿಸಿ ಪರಸ್ಪರ ಶತ್ರುತ್ವವನ್ನು ಬೆಳೆಸುತ್ತಾರೋ…ಇಂತಹ ವ್ಯಕ್ತಿಗಳು ಮತ್ತು ಪಕ್ಷಗಳು ಸಂವಿಧಾನ ವಿರೋಧಿಯಾಗಿರುತ್ತದೆ.

ಇಂತಹ ವ್ಯಕ್ತಿಗಳು ಯಾರು ಮತ್ತು ಇಂತಹ ಪಕ್ಷ-ಸಂಘಟನೆಗಳು ಯಾವುವು ಎನ್ನುವುದನ್ನು ನಾನು ಬಿಡಿಸಿ ಹೇಳಬೇಕಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಸುತ್ತಮುತ್ತ ನಿತ್ಯ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ಓದಿದರೆ ಇಂತಹ ವ್ಯಕ್ತಿ,ಪಕ್ಷ,ಸಂಘಟನೆಗಳನ್ನು ಗುರುತಿಸುವುದು ಯಾರಿಗೂ ಕಷ್ಟವಾಗದು.

ಯಾರು ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವವನ್ನು ವಿರೋಧಿಸುತ್ತಾರೋ ಅವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಗೊಂಡಿರುವ ಸಂವಿಧಾನವನ್ನೂ ವಿರೋಧಿಸುತ್ತಾರೆ. ಬಹಿರಂಗ ಭಾಷಣ-ಘೋಷಣೆ, ಸಾರ್ವಜನಿಕವಾದ ಆಚರಣೆ-ಸಂಭ್ರಮಗಳೇನೆ ಇರಲಿ ಈ ಪಕ್ಷ,ಸಂಘಟನೆ ಮತ್ತು ವ್ಯಕ್ತಿಗಳು ಅಂತರಂಗದಲ್ಲಿ ಸಂವಿಧಾನವನ್ನು ವಿರೋಧಿಸುತ್ತಾರೆ. ಇವರೆಲ್ಲರೂ ಕೂಡಿ ಸಂವಿಧಾನದ ಆಶಯಗಳ ಬಗ್ಗೆ ವಿವಾದವನ್ನು ಸೃಷ್ಟಿಸುತ್ತಾರೆ. ಉದಾಹರಣೆಗೆ ಮೀಸಲಾತಿ, ಭೂ ಸುಧಾರಣಾ ಕಾನೂನುಗಳು, ಮತಾಂತರ ನಿಷೇಧ, ಗೋಹತ್ಯೆ, ಪೂಜಾ ಸ್ಥಳಗಳ ನಾಶ… ಹೀಗೆ ಸಾಲು ಸಾಲು ಸಂವಿಧಾನ ವಿರೋಧಿ ವಿವಾದಗಳನ್ನು ಸೃಷ್ಟಿಸುತ್ತಾ ನಿಧಾನವಾಗಿ ಸಂವಿಧಾನವನ್ನು ತಿದ್ದುಪಡಿಗಳ ಮೂಲಕ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಾರೆ.

ಈ ದೇಶವನ್ನು, ಇಲ್ಲಿನ ಜನರನ್ನು, ಇಲ್ಲಿನ ನೆಲ, ಜಲ ಮತ್ತು ಸಂಸ್ಕೃತಿಯನ್ನು ಪ್ರೀತಿಸುವವರೆಲ್ಲರೂ ಈ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಇಂತಹವರನ್ನು ರಾಜಕೀಯವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಸೋಲಿಸುವ ಪ್ರಯತ್ನ ನಡೆಸಬೇಕು.

ಹೌದು, ಇದು ದೇಶ ಉಳಿಸುವ ಎರಡನೇ ಸ್ವಾತಂತ್ರ್ಯ ಹೋರಾಟ. ಇದು ನಮ್ಮೆಲ್ಲರ ಅಳಿವು ಉಳಿವಿನ ಹೋರಾಟ, ಇದು ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಉಳಿಸುವ ಹೋರಾಟ.ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನ್ಯಾಯ, ನಂಬಿಕೆ, ಅಭಿವ್ಯಕ್ತಿ, ಆರಾಧನೆಗಳ ಸ್ವಾತಂತ್ರ್ಯ, ಸ್ವಾತಂತ್ರ್ಯ ಮತ್ತು ಅವಕಾಶಗಳಲ್ಲಿ ಸಮಾನತೆ, ಮನುಷ್ಯನ ಘನತೆಯನ್ನು ಕಾಪಾಡಿಕೊಳ್ಳುವ ಭರವಸೆ ನೀಡುವ ಸೋದರತ್ವ ಮತ್ತು ದೇಶದ ಏಕತೆ. ಈ ಆಶಯಗಳನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಕರ್ತವ್ಯ. ನಾವು-ನೀವೆಲ್ಲರೂ ಈ ಕರ್ತವ್ಯ ,ಬದ್ದತೆ ಮತ್ತು ಜವಾಬ್ದಾರಿಗೆ ನಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ ಗಣರಾಜ್ಯೋತ್ಸವದ ಆಚರಣೆಯನ್ನು ಸಂಭ್ರಮಿಸೋಣ. ಜೈ ಹಿಂದ್, ಜೈ ಕರ್ನಾಟಕ

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ, ನಿಕಟಪೂರ್ವ ಮುಖ್ಯಮಂತ್ರಿ (ಅವರ ಫೇಸ್ ಬುಕ್ ನಿಂದ)

Donate Janashakthi Media

Leave a Reply

Your email address will not be published. Required fields are marked *