ಬೆಂಗಳೂರು: ಪ್ರಸ್ತುತ ಕೋವಿಡ್ 3ನೇ ಅಲೆ ಎದುರಾಗಿದ್ದು, ಎಲ್ಲರ ಆರೋಗ್ಯದ ಹಿತಕ್ಕಾಗಿ ಪ್ರತಿಯೊಬ್ಬರೂ ಭೌತಿಕ ಅಂತರ, ಮುಖ ಗವಸು ಹಾಗೂ ಸಾನಿಟೈಸರ್ ಬಳಕೆಯ(ಎಸ್ಎಂಎಸ್) ಎಂಬ ಮೂರು ಮಂತ್ರಗಳನ್ನು ಪಾಲಿಸಬೇಕೆಂದು ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣ, ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಒಳಗಾದ ಜನರಿಗೆ ಸರ್ಕಾರದ ನೆರವು, ಕರ್ನಾಟಕ ಸರ್ಕಾರದ ಅಮೃತ ಯೋಜನೆಗಳು, ಕೊರೊನಾ ಲಸಿಕೆ ಹಾಗೂ ವಾರಿಯರ್ಸ್ ಗಳ ಸೇವೆ, ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ ಅನಾವೃಷ್ಟಿ ಇತ್ಯಾದಿ ವಿಚಾರಗಳ ಬಗ್ಗೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಭಾಷಣ ಮಾಡಿದ್ದಾರೆ.
ದೇಶದ 73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ 16 ಪುಟಗಳ ಭಾಷಣದಲ್ಲಿ ಯಾವುದೇ ಹೊಸ ಕೊಡುಗೆಗಳಾಗಿ ಅಥವಾ ಯೋಜನೆಯನ್ನು ಯೋಚನೆ ಮಾಡದೆ ಕೇವಲ ಸರ್ಕಾರ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು, ಜನತೆಗೆ ನೀಡಿರುವ ಕಾರ್ಯಕ್ರಮಗಳು, ಯೋಜನೆಗಳನ್ನು ಮಾತ್ರ ವಿವರಿಸಿದರು.
ಕೊರನಾ ನಿಯಂತ್ರಿಸಲು ವೈದ್ಯರು, ನರ್ಸ್ಗಳು ಅವಿರತ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಉಂಟಾದ ಅತಿವೃಷ್ಟಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅಮೃತ ಮಹೋತ್ಸವ ಸಂದರ್ಭದಲ್ಲಿ ಹಲವು ಯೋಜನೆ, ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಅಮೃತ ಗ್ರಾಮಪಂಚಾಯತಿಗಳ ಅಮೃತ ರೈತ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಶಾಲಾ ಮೂಲಸೌಕರ್ಯ ಕಾರ್ಯಕ್ರಮ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ನಗರೋತ್ಥಾನ, ಒಟ್ಟು 14 ಅಮೃತ ಮಹೋತ್ಸವ ಕಾರ್ಯಕ್ರಮ ಘೋಷಿಸಿದೆ ಎಂದು ಸರ್ಕಾರ ಹಾಗೂ ನಾಡಿನ ಜನರ ಬಗ್ಗೆ ರಾಜ್ಯಪಾಲರು ಮೆಚ್ಚುಗೆಯ ನುಡಿಗಳನ್ನು ಆಡಿದರು.
2020-21ರಲ್ಲಿ ಜಗತ್ತು ಕೋವಿಡ್ ಸವಾಲನ್ನು ನಿಭಾಯಿಸಲು ಹೆಣಗಾಡಿತು. ಆದರೆ ನಮ್ಮ ಸರ್ಕಾರ ಇದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಕೋವಿಡ್ ಪರಿಣಾಮವನ್ನು ತಗ್ಗಿಸಲು ಹಗಲಿರುಳು ಶ್ರಮಿಸಿದೆ. ಹೆಚ್ಚುವರಿ ಆರೋಗ್ಯ, ಮೂಲಸೌಕರ್ಯವನ್ನು ಸೃಷ್ಟಿಸಿ ಆಕ್ಷಿಜನ್ ಸಿಲಿಂಡರ್ಗಳು, ವೆಂಟಿಲೇಟರ್ಗಳ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದೇಶವು ಎರಡು ಲಸಿಕೆಗಳನ್ನು ಉತ್ಪಾದಿಸಿ ವಿದೇಶಗಳಿಗೂ ಸಹ ರಫ್ತು ಮಾಡಿತ್ತು. ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಲು ಕೇಂದ್ರದ ಜೊತೆ ನಾವು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ
ಕೃಷಿ ವಲಯದಲ್ಲಿ ಬದಲಾವಣೆ ತರಲು ಸರ್ಕಾರ ಜಲಾನಯನ ಅಭಿವೃದ್ಧಿಗೆ ಗಮನಹರಿಸಿದೆ. 2021-22ನೇ ಸಾಲಿನಲ್ಲಿ 1472 ಕೋಟಿ ಮೊತ್ತದ ಜಲಾನಯನ ಅಭಿವೃದ್ದಿ ಕಾಮಗಾರಿಗೆ ಅನುಮೋದನೆ ನೀಡಿದೆ. ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆಯನ್ನು ಗ್ರಾಮ ಮಟ್ಟದ ಸ್ಥಳೀಯ ಯುವಕರ ಮೂಲಕ ಅನುಷ್ಠಾನಗೊಳಿಸಲಾಗಿದೆ. 2022-23ನೇ ಸಾಲಿನಲ್ಲಿ 12,76,868 ರೈತರು ಬೆಳೆ ಸಮೀಕ್ಷೆಯಡಿ ಹೆಸರು ನೊಂದಾಯಿಸಿಕೊಂಡಿದ್ದಾರೆ. 256.95 ಲಕ್ಷ ಪ್ರದೇಶವನ್ನು ಸಮೀಕ್ಷೆಯಡಿ ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು 4.41 ಕೋಟಿ ಹಣವನ್ನು 16,176 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿದರು.
ಕಾರ್ಮಿಕರ ಹಿತಾಸಕ್ತಿಗೆ ಒತ್ತು
ಖಾಲಿ ಇರುವ ವೈದ್ಯಾಧಿಕಾರಿಗಳು, ತಂತ್ರಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಸಮಿತಿ ರಚಿಸಲಾಗಿದೆ. 6 ತಿಂಗಳ ಅವಧಿಯಲ್ಲಿ 746 ತಂತ್ರಜ್ಞರು, 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ನೇಮಿಸಲಾಗಿದೆ. ವಿವಿಧ ಕಾರ್ಮಿಕ ಅಧಿನಿಯಮಗಳ ಅಡಿ 12,946 ತಪಾಸಣೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ 2,018 ಕೇಸ್ ದಾಖಲಿಸಲಾಗಿದೆ. 2,033 ಪ್ರಕರಣಗಳಲ್ಲಿ 21,19,309 ರೂ. ದಂಡ ಸಂಗ್ರಹ ಮಾಡಲಾಗಿದೆ. ವಲಸೆ ಕಾರ್ಮಿಕರು, ಇತರ ಕಾರ್ಮಿಕರ ಹಿತಾಸಕ್ತಿಗೆ ಒತ್ತು ಕೊಡಲಾಗಿದೆ ಎಂದು ಹೇಳಿದರು.
2ನೇ ಅಲೆಯ ಲಾಕ್ಡೌನ್ ಸಂದರ್ಭದಲ್ಲಿ 11,82,307 ಲಕ್ಷ ಕಾರ್ಮಿಕರಿಗೆ ತಲಾ ಎರಡು ಸಾವಿರ ರೂಗಳಂತೆ 236.46 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯು 14,727 ಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ 628.18 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು.
ಹುಲಿ, ಆನೆ ಹೆಚ್ಚಿರುವ ರಾಜ್ಯ ಕರ್ನಾಟಕ
ಅರಣ್ಯ ಇಲಾಖೆಯಿಂದ 2.39 ಕೋಟಿ ಗಿಡ ನೆಡಲಾಗಿದೆ. 1.87 ಕೋಟಿ ಸಸಿ ಸಾರ್ವಜನಿಕರಿಗೆ ವಿತರಿಸಲಾಗಿದೆ. ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ಆಗಿದೆ. 524 ಹುಲಿ ಹೊಂದಿರುವ ಕರ್ನಾಟಕ 2ನೇ ಸ್ಥಾನದಲ್ಲಿದೆ. 2017ರ ಗಣತಿಯಂತೆ ರಾಜ್ಯದಲ್ಲಿ 6,049 ಆನೆಗಳಿವೆ. ಇದು ಭಾರತದಲ್ಲಿನ ಆನೆಗಳಲ್ಲಿ ಶೇ.25ರಷ್ಟು ರಾಜ್ಯದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ಹಾಲು, ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ ಮುಂದೆ
ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರದಿಂದ 577.71 ಕೋಟಿ, ರಾಜ್ಯ ಸರ್ಕಾರ ₹1469.26 ಕೋಟಿ ಬಿಡುಗಡೆ ಮಾಡಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಮಾಂಸ ಉತ್ಪಾದನೆಯಲ್ಲಿ 103ನೇ ಸ್ಥಾನ ಪಡೆದಿದೆ. ಎಪಿಎಂಸಿಗಳಲ್ಲಿ ಶುಲ್ಕದಿಂದ ರೈತರಿಗೆ ಹೊರೆಯಾಗುತ್ತಿತ್ತು. ಹೀಗಾಗಿ ಮಾರುಕಟ್ಟೆ ಶುಲ್ಕ ಶೇ.0.6ರಷ್ಟು ತಗ್ಗಿಸಲಾಗಿದೆ. ರಾಜ್ಯದ 54 ಕೇಂದ್ರಗಳಲ್ಲಿ ಉಗ್ರಾಣ ನಿರ್ಮಾಣ ಕಾರ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಲಬುರಗಿ, ಶಿವಮೊಗ್ಗ, ವಿಜಯಪುರ, ಬಳ್ಳಾರಿ, ಹಾಸನ, ಕಾರವಾರ ಮತ್ತು ರಾಯಚೂರು ನಗರದ ಹೊರವಲಯಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಜಮೀನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಗಳ ವಿವಿಧ ಘಟಕಗಳಿಗೆ ಶಸ್ತ್ರಾಸ್ತ್ರಗಳು, ವಾಹನಗಳು ಮತ್ತು ವೈಜ್ಞಾನಿಕ ಉಪಕರಣಗಳು ಮುಂತಾದ ಖರೀದಿಗಾಗಿ ಕೇಂದ್ರ ಸರ್ಕಾರದ 14.23 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 13.39 ಕೋಟಿ ಬಿಡುಗಡೆ ಮಾಡಲಾಗಿದೆ.
ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮತ್ತು ವಿವಿಧ ಇಲಾಖೆಗಳ ಸೇವೆಗಳಲ್ಲಿನ ಲೋಪದೋಷಗಳ ಬಗ್ಗೆ ದೂರುಗಳನ್ನು ದಾಖಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸೇವಾ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರತಿಯೊಂದು ಇಲಾಖೆಗಳ ಯೋಜನೆ ಮತ್ತು ಸ್ಕೀಮ್ಗಳನ್ನು ಒಂದೇ ಸೂರಿನಡಿ ತಂದು ಅವುಗಳ ಅನುಷ್ಠಾನಕ್ಕಾಗಿ ಖಚಿತಪಡಿಸಲು ಅರ್ಜಿಗಳನ್ನು ಸಲ್ಲಿಕೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುವಿದಾ ವೆಬ್ ತಾಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರವು ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜೀವನದ ಆರ್ಥಿಕತೆ ಸುಧಾರಿಸಲು ಹಾಗೂ ನ್ಯಾಯಬದ್ದ ಹಕ್ಕುಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ. 2020-21ರಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳ ಕಾರ್ಯಕ್ರಮಗಳಡಿ 26 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಈಗಾಗಲೇ ಇದರಲ್ಲಿ 11 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ.
ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗಾಗಿ ಕರಾಟೆ, ಜುಡೊ, ಟೆಕ್ವಾಂಡೋ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಬ್ಯಾಂಕ್ ಖಾತೆಗಳಿಗೆ 5000 ರೂ.ಗಳನ್ನು ಜಮೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಆದ್ಯತೆ
ಬೆಂಗಳೂರಿನಲ್ಲಿ 42.3 ಕಿ.ಮೀ.ಮೆಟ್ರೋ ಮಾರ್ಗವಿದೆ. ನಗರದಲ್ಲಿ 40 ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. 3.18 ಲಕ್ಷ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 397 ನಗರಗಳನ್ನು ಓಡಿಎಫ್ ಮಾಡಲಾಗಿದೆ. ಕಸಮುಕ್ತ ನಗರಗಳ ಪೈಕಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಘನತ್ಯಾಜ್ಯ ವಿಲೇವಾರಿಯಲ್ಲಿ ಬೆಂಗಳೂರಿಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಸುಸ್ಥಿರ ವಾಸಯೋಗ್ಯ ನಗರ ಪ್ರಶಸ್ತಿ ಲಭ್ಯವಾಗಿದೆ.