ನವದೆಹಲಿ: ಯಾವುದೇ ವಿಲ್ ಬರೆಯದೆ ಹಿಂದು ವ್ಯಕ್ತಿಯೊಬ್ಬರು ಮೃತಪಟ್ಟರೆ ಆತನ ಎಲ್ಲಾ ಸ್ವಯಾರ್ಜಿತ ಆಸ್ತಿ ಮತ್ತು ಇತರ ಸೊತ್ತುಗಳ ವಾರೀಸುದಾರರು ಪುತ್ರಿಯರಿಗೆ ಸೇರುತ್ತದೆ ದೇಶದ ಸರ್ವೋಚ್ಛ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
“ಹಿಂದು ವ್ಯಕ್ತಿಯೊಬ್ಬ ವಿಲ್ ಮಾಡದೆಯೇ ಮೃತಪಟ್ಟರೆ ಹಾಗೂ ಆತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ಅಥವಾ ಕುಟುಂಬದಿಂದ ಪಡೆದ ಪಾಲು ಆಗಿದ್ದರೆ ಅವುಗಳು ಆತನ ಸಹೋದರರ ಪುತ್ರ ಪುತ್ರಿಯರಿಗೆ ಹೋಗುವುದಿಲ್ಲ, ಬದಲು ಆ ವ್ಯಕ್ತಿಯ ಪುತ್ರಿಯೇ ವಾರೀಸುದಾರಳಾಗುತ್ತಾಳೆ ಎಂದು ನ್ಯಾಯಮೂರ್ತಿ ಎಸ್ ಅಬ್ದುಲ್ ನಝೀರ್ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪಿ ನೀಡಿದೆ.
ಮದ್ರಾಸ್ ಹೈಕೋರ್ಟ್‍ನ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಪೀಲಿನ ಮೇಲೆ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಮೇಲಿನಂತೆ ಆದೇಶಿಸಿದೆ.
ಹಿಂದೂ ಮಹಿಳೆಯು ಯಾವುದೇ ವಿಲ್ ಮಾಡದೇ ಸತ್ತರೆ, ಆಕೆಯ ತಂದೆ ಅಥವಾ ತಾಯಿಯಿಂದ ಪಡೆದ ಆಸ್ತಿಯು ಆಕೆಯ ತಂದೆಯ ವಾರಸುದಾರರಿಗೆ ಹೋಗುತ್ತದೆ. ಹಾಗೆಯೇ ಆಕೆಯ ಪತಿ ಅಥವಾ ಮಾವನಿಂದ ಪಡೆದ ಪಿತ್ರಾರ್ಜಿತ ಆಸ್ತಿಯು ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ವಿವರಿಸಿದೆ. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಪುರುಷ ಮತ್ತು ಸ್ತ್ರೀಯರ ನಡುವೆ ಸಂಪೂರ್ಣ ಸಮಾನತೆಯನ್ನು ಸ್ಥಾಪಿಸುವುದು ಈ ಕಾಯಿದೆಯ ಮುಖ್ಯ ಆಶಯವಾಗಿದೆ ಎಂದು ಅದು ಹೇಳಿದೆ.
ಕಾಯಿದೆ ಯಾರಿಗೆಲ್ಲಾ ಅನ್ವಯಿಸುತ್ತದೆ ಎಂದು ವಿವರಿಸಿರುವ ಸುಪ್ರೀಂ ಕೋರ್ಟ್, ‘‘ಈ ಕಾಯಿದೆಯು ಏಕರೂಪದ ಮತ್ತು ಸಮಗ್ರವಾದ ಉತ್ತರಾಧಿಕಾರದ ವ್ಯವಸ್ಥೆಯನ್ನು ರೂಪಿಸುತ್ತದೆ. ಮಿತಾಕ್ಷರ ಮತ್ತು ದಯಾಭಾಗ ಶಾಲೆಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಮತ್ತು ಹಿಂದೆ ಮುರುಮಕ್ಕಟ್ಟಯಂ, ಅಳಿಯಸಂತಾನ ಮತ್ತು ನಂಬೂದ್ರಿ ಕಾನೂನುಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಈ ಕಾಯಿದೆಯು ವೀರಶೈವ, ಲಿಂಗಾಯತ ಅಥವಾ ಬ್ರಹ್ಮ ಪ್ರಾರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿ ಸೇರಿದಂತೆ ಅದರ ಯಾವುದೇ ರೂಪದಲ್ಲಿ ಧರ್ಮದಿಂದ ಹಿಂದೂ ಆಗಿರುವವರಿಗೆ ಅನ್ವಯಿಸುತ್ತದೆ. ಮತ್ತು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹೊರತುಪಡಿಸಿ ಬೌದ್ಧ, ಜೈನ ಅಥವಾ ಸಿಖ್ ಧರ್ಮದ ಯಾವುದೇ ವ್ಯಕ್ತಿಗೂ ಈ ಕಾಯ್ದೆ ಅನ್ವಯಿಸುತ್ತದೆ’’ ಎಂದು ಪೀಠವು ತಿಳಿಸಿದೆ.
ಬೇರೆ ಯಾವುದೇ ಕಾನೂನುಬದ್ಧ ವಾರೀಸುದಾರರು ಇಲ್ಲದೇ ಇದ್ದಾಗ ಆಸ್ತಿಯ ಮೇಲೆ ಪುತ್ರಿಯ ಹಕ್ಕಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಕೂಡು ಕುಟುಂಬವಿದ್ದರೂ ಮೃತ ವ್ಯಕ್ತಿಗೆ ಏಕೈಕ ಪುತ್ರಿಯಿದ್ದುದರಿಂದ ಆತನ ಎಲ್ಲಾ ಆಸ್ತಿಗೆ ಆಕೆಯೇ ವಾರಸುದಾರಳಾಗುತ್ತಾಳೆ ಎಂದು ಹೇಳಿ ಹೈಕೋರ್ಟಿನ ತೀರ್ಪನ್ನು ತಳ್ಳಿ ಹಾಕಿದೆ.