ಕೇಂದ್ರ ಸರಕಾರ ಆಶ್ವಾಸನೆ ಈಡೇರಿಸದಿದ್ದರೆ, ಜನವರಿ 31 ರಂದು ‘ವಿಶ್ವಾಸಘಾತ ದಿನ’
ನವದೆಹಲಿ :ಜನವರಿ 15 ರಂದು ದಿನವಿಡೀ ನಡೆದ ದೀರ್ಘಸಭೆಯ ನಂತರ, ಜನವರಿ 31 ರೊಳಗೆ ನರೇಂದ್ರ ಮೋದಿ ಸರ್ಕಾರವು ನೀಡಿದ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 1 ರಿಂದ ‘ಮಿಷನ್ ಉತ್ತರ ಪ್ರದೇಶ’ವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಒಂದು ವರ್ಷದ ಆಂದೋಲನದ ನಂತರ, ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿಯೂ, ಪ್ರತಿಭಟನಾ ಸ್ಥಳಗಳಲ್ಲಿ ನಿಧನರಾದ ರೈತರಕುಟುಂಬದವರಿಗೆ ಪರಿಹಾರ ಒದಗಿಸುವುದಾಗಿಯೂ ಮತ್ತು ಸ್ಪಷ್ಟವಾದ ಉಲ್ಲೇಖಗಳೊಂದಿಗೆ ಕನಿಷ್ಠ ಬೆಂಬಲ ಬೆಲೆ (MSP) ಸಮಿತಿಯನ್ನು ರಚಿಸುವುದಾಗಿಯೂ ಸರ್ಕಾರ ಭರವಸೆ ನೀಡಿದ್ದರಿಂದ, ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಸಾಮೂಹಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು.
ಇದಕ್ಕೆ ಮೊದಲು ನವೆಂಬರ್ 19 ರಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು.
ಎಸ್‌ಕೆಎಂ ತನ್ನ ಭರವಸೆಗಳ ಮೇಲೆ ಕೇಂದ್ರ ಸರಕಾರವು ತನ್ನ ಆಶ್ವಾಸನೆಗಳ ಬಗ್ಗೆ ನಿಷ್ಕ್ರಿಯವಾಗಿರುವುದನ್ನು ಗಮನಿಸಿದೆ ಎಸ್.ಕೆ.ಎಂ. ಜನವರಿ 31 ರವರೆಗೆ ಯಾವುದೇ ಕ್ರಮಕ್ಕಾಗಿ ಕಾಯುವುದಾಗಿ ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಕೆಎಸ್ ಅಧ್ಯಕ್ಷ ಅಶೋಕ್ ಢವಳೆ, ಹೇಳಿದರು.
“ಸರಕಾರ ಯಾವುದೇ ಉಪಕ್ರಮಕ್ಕೆ ಮುಂದಾಗದಿದ್ದರೆ, ನಾವು ನಮ್ಮ ಮಿಷನ್ ಉತ್ತರ ಪ್ರದೇಶ ಮತ್ತು ಮಿಷನ್ ಉತ್ತರಾಖಂಡ್ ಅನ್ನು ಪ್ರಾರಂಭಿಸುತ್ತೇವೆ, ಇದರಲ್ಲಿ ನಾವು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕದಂತೆ ಜನರನ್ನು ಕೇಳುತ್ತೇವೆ” ಎಂದ ಧಾವಳೆಯವರು ಜನವರಿ 31 ರಂದು ರೈತರು ‘ವಾದಾ ಖಿಲಾಫಿ ದಿವಸ್”(ವಿಶ್ವಾಸಘಾತ ದಿನ) ಅನ್ನು ಆಚರಿಸುತ್ತಾರೆ, ಅಂದು ರೈತ ಸಂಘಗಳು ದೇಶದಾದ್ಯಂತ ಜಿಲ್ಲಾ ಮತ್ತು ತಹಸಿಲ್ ಕೇಂದ್ರಗಳಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿಯನ್ನು ಸುಡಲಿವೆ ಎಂದು ಅವರು ಹೇಳಿದರು.
ಭಾರತೀಯ ಕಿಸಾನ್ ಯೂನಿಯನ್ (ಟಿಕಾಯ್ತ್) ವಕ್ತಾರ ರಾಕೇಶ್ ಟಿಕಾಯ್ತ್ ಅವರು ಜನವರಿ 23 ರಿಂದ ಮೂರು ದಿನಗಳ ಭೇಟಿಯಲ್ಲಿ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ ಎಂದು ಢವಳೆ ಹೇಳಿದರು. ಉತ್ತರ ಪ್ರದೇಶ ಸರ್ಕಾರವು ಲಖಿಂಪುರ ಖೇರಿ ಹತ್ಯೆಗಳ ಆರೋಪಿಗಳನ್ನು “ರಕ್ಷಿಸುತ್ತಿದೆ”, ಇದರಲ್ಲಿ ಕೇಂದ್ರ ಸಂಪುಟ ಸಚಿವ ಅಜಯ್ ಮಿಶ್ರಾ ಟೆನಿ ಅವರ ಮಗ ಸೇರಿದ್ದಾರೆ. ಇನೊಂದೆಡೆಯಲ್ಲಿ ಈ ಹಿಂಸಾಚಾರದ ಸಂತ್ರಸ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಅವರು ಹೇಳಿದರು.
ವಿಶೇಷ ತನಿಖಾ ತಂಡದ (ಎಸ್‌ಐಟಿ) ಚಾರ್ಜ್‌ಶೀಟ್ ತೀರ್ಮಾನದ ಪ್ರಕಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಹತ್ಯಾಕಾಂಡವನ್ನು ಯೋಜಿಸಿದ್ದು ಮಾತ್ರವಲ್ಲದೆ ಸ್ಥಳದಲ್ಲಿಯೇ ಹಾಜರಿದ್ದರು ಎಂಬುದು ಸಾಬೀತಾಗುತ್ತದೆ ಎಂದು ಢವಳೆ ಹೇಳಿದರು.
ಆರೋಪಿಗಳ ಮೇಲೆ IPC ಸೆಕ್ಷನ್ 279 (ಅಪವೇಗದ ಚಾಲನೆ/ಸವಾರಿ), 338 (ನಿರ್ಲಕ್ಷ್ಯದಿಂದ ಘೋರವಾದ ಗಾಯಗಳನ್ನು ಉಂಟುಮಾಡುವುದು) ಮತ್ತು 304A (ಉದ್ವೇಗದ ಮತ್ತು ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಆರೋಪಗಳ ಜಾಗದಲ್ಲಿ IPC ಸೆಕ್ಷನ್ 307 (ಕೊಲೆಯ ಯತ್ನ) ನ್ನು ಸೇರಿಸಬೇಕೆಂದು ಎಸ್.ಐ.ಟಿ. ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರನ್ನು ಒತ್ತಾಯಿಸಿತು. ನಾಲ್ವರು ರೈತರು ಸಾವನ್ನಪ್ಪಿದ ಅಕ್ಟೋಬರ್ 3 ರ ಹಿಂಸಾಚಾರಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಹಾಕಿದ್ದ IPC ಸೆಕ್ಷನ್ 302 (ಕೊಲೆ), 147 (ಗಲಭೆ), 148 (ಗಲಭೆ, ಮಾರಣಾಂತಿಕ ಆಯುಧದಿಂದ ಸಜ್ಜಿತ), 149 (ಕಾನೂನುಬಾಹಿರ ಸಭೆಯ ಪ್ರತಿಯೊಬ್ಬ ಸದಸ್ಯರು ತಪ್ಪಿತಸ್ಥರು) ಮತ್ತು 120B (ಅಪರಾಧ ಪಿತೂರಿ) ಗಳನ್ನು ಉಳಿಸಿಕೊಳ್ಳಲಾಗಿದೆ.
13 ಆರೋಪಿಗಳ ವಾರಂಟ್‌ಗಳಲ್ಲಿ IPC 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗಳನ್ನು ಉಂಟುಮಾಡುವುದು), 34 (ಸಾಮಾನ್ಯ ಉದ್ದೇಶಗಳೊಂದಿಗೆ ಹಲವಾರು ವ್ಯಕ್ತಿಗಳಿಂದ ಕೃತ್ಯಗಳು) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 3/25/30 ಸೆಕ್ಷನ್‌ಗಳನ್ನು ವಿಧಿಸಬೇಕು ಎಂದೂ ಎಸ್‍ಐಟಿ ಶಿಫಾರಸು ಮಾಡಿದೆ.
ಟಿಕುನಿಯಾದಲ್ಲಿ ನಾಲ್ವರು ರೈತರು ಮತ್ತು ಒಬ್ಬ ಸ್ಥಳೀಯ ಪತ್ರಕರ್ತರ ಸಾವಿಗೆ ಸಂಬಂಧಿಸಿದ ಎಫ್‌ಐಆರ್ ಸಂಖ್ಯೆ 219 ಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಟಿಕಾಯ್ತ್ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗುವುದಾಗಿಯೂ ಮತ್ತು “ಇದರಲ್ಲಿರುವ ಸಚಿವರನ್ನು ವಜಾಗೊಳಿಸುವವರೆಗೆ ಮತ್ತು ರೈತರ ಮೇಲಿನ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳುವವರೆಗೆ ಒಂದು ಶಾಶ್ವತ ಆಂದೋಲನವನ್ನು ಪ್ರಾರಂಭಿಸುತ್ತೇವೆ” ಎಂದೂ ಹೇಳಿದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿ ಫೆಬ್ರವರಿ 22-23 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಎಸ್‌ಕೆಎಂ ತನ್ನ ಸೌಹಾರ್ದವನ್ನು ವ್ಯಕ್ತಪಡಿಸಲಿದೆ ಎಂದು ಬಿಕೆಯು (ಟಿಕಾಯ್ತ್) ನ ಯುಧವೀರ್ ಸಿಂಗ್ ಹೇಳಿದರು.
ಜೋಗಿಂದರ್ ಸಿಂಗ್ ಉಗ್ರಹನ್, ಭಾರತೀಯ ಕಿಸಾನ್ ಯೂನಿಯನ್ ಏಕ್ತಾ ಉಗ್ರಹನ್ ನ ಅಧ್ಯಕ್ಷರು , ಪಂಜಾಬ್‌ನಲ್ಲಿ ಕೆಲವು ರೈತ ಸಂಘಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸಂಯುಕ್ತ ಸಮಾಜ ಮೋರ್ಚಾವನ್ನು ರಚಿಸಿರುವ ಬೆಳವಣಿಗೆಗಳನ್ನು ಎಸ್‍ಕೆಎಂ ಗಮನಿಸಿದೆ ಎಂದು ಹೇಳಿದರು.
“ಈ ಪ್ರಶ್ನೆಯ ಮೇಲೆ ಚಿಂತನ-ಮಂಥನದ ನಂತರ, ಏಪ್ರಿಲ್‌ನಲ್ಲಿ ಈ ಸಂಘಗಳೊಡನೆ ಸಂಬಂಧದ ಸ್ವರೂಪದ ಕುರಿತು ಮತ್ತಷ್ಟು ಚರ್ಚಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.