ಡಾ. ಎನ್. ಚಿನ್ನಸ್ವಾಮಿ ಸೋಸಲೆ
ಭಾರತ ಶತಶತಮಾನಗಳಿಂದಲೂ ತೊಂಡಿ ಸಂಪ್ರದಾಯದ ಸಂಸ್ಕೃತಿಯನ್ನು ತನ್ನ ಅಂತರಾಳದಲ್ಲಿ ಬೆಳೆಸಿಕೊಂಡಿರುವ ರಾಷ್ಟ್ರ. ಏಕೆಂದರೆ ಅಕ್ಷರವನ್ನು ತಮ್ಮ ಸ್ವಂತಾಗಿಸಿಕೊಂಡ ಕೆಲವೇ ಕೆಲವು ಬೆರಳೆಣಿಕೆಯ ಜನವರ್ಗ ಬಹುಸಂಖ್ಯಾತರಿಗೆ ಅಕ್ಷರ ಕಲಿಸಲು ಮುಂದಾಗಲಿರುವುದು ಇದಕ್ಕೆ ಚಾರಿತ್ರಿಕ ಸತ್ಯವಾಗಿದೆ. ಅಕ್ಷರವನ್ನು ಸ್ವಂತದ್ದಾಗಿಸಿಕೊಂಡವರು ಬರೆಸಿದ ಶಾಸನ, ನಾಣ್ಯಗಳ ಮೇಲಿನ ಅಕ್ಷರ, ಕೈಫಿಯತ್, ಬಖೈರುಗಳು, ಹಸ್ತಪ್ರತಿಗಳು ಮಾತ್ರವೇ ಚರಿತ್ರೆಯ ಮೂಲ ಆಕಾರವಾಗಿ ಇಂದಿಗೂ ರಾರಾಜಿಸುತ್ತಿವೆ. ಇವೇ ಅಂತಿಮವೆಂಬಂತೆ ಇಂದು ಚರಿತ್ರೆಯನ್ನು ನಿರ್ಮಿಸಲಾಗುತ್ತಿವೆ. ಇದಕ್ಕೆ ವಿಸ್ತೃತವಾಗಿ ಬಹುಸಂಖ್ಯಾತರು ಅಕ್ಷರದಿಂದ ವಂಚಿತರಾದರೂ ಸಹ ತಮ್ಮ ಮಾತಿನ ಮೂಲಕ ಜನರ ಜೀವನ-ಬದುಕು ಹಾಗೂ ಅಂದಿನ ಸಾಂಸ್ಕೃತಿಕ ಸಂದರ್ಭಗಳನ್ನು ವಿಸ್ತೃತವಾಗಿ ಕಟ್ಟಿ ಕೊಟ್ಟಿರುವುದಕ್ಕೆ ನಮ್ಮ ಮುಂದೆ ನೂರಾರು ನಿದರ್ಶನಗಳಿವೆ.
ಅಕ್ಷರ ಬರೆದವರದು ‘ವೇದ’ಗಳಾದವು, ಅವು ಸುಳ್ಳಾಗಬಹುದು ಆದರೆ ಅಕ್ಷರ ಬಲ್ಲದವರದು ‘ಗಾದೆ’ಗಳಾದವು, ಅವು ಎಂದೆದಿಗೂ ಸುಳ್ಳಾಗಲಿಲ್ಲ. (ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಪಾರಂಪರಿಕ ಗಾದೆಯೇ ಇದಕ್ಕೆ ಸಾಕ್ಷಿ). ಅಕ್ಷರದವರ ವೇದ-ಪುರಾಣಗಳು ತೀರ್ಥದ ಸಂಕೇತವಾದರೆ, ಗಾದೆಗಳು ಬೆವರಿನ ಸಂಕೇತಗಳಾದವು. ಈ ರಾಷ್ಟ್ರದ ಸಾಂಸ್ಕೃತಿಕ ರಾಜಕಾರಣದ ಸಂದರ್ಭದಲ್ಲಿ ತೀರ್ಥ ಮೆರೆದಷ್ಟ್ಟು ಬೆವರು ಮೆರೆಯಲು ಸಾಧ್ಯವಾಗಲೇ ಇಲ್ಲ. ಕಾರಣ ತೀರ್ಥ ದೇವಾಲಯದ (ಧರ್ಮದ) ಒಳಗಿದೆ. ಬೆವರು ದೇವಾಲಯದ ಹೊರಗಿರುವ ಕಾಯಕದ ತತ್ವ ಸಿದ್ಧಾಂತದಲ್ಲಿದೆ. ಈ ರಾಷ್ಟ್ರವನ್ನು ವೇದಗಳ ಕಾಲದಿಂದಲೂ ತೀರ್ಥದ ಕೆಲವೇ ಕೆಲವು ಸ್ವಾರ್ಥಿ ಅಜ್ಞಾನದ ಜನವರ್ಗ ಪ್ರಭುತ್ವವನ್ನು ತನ್ನ ಅಧೀನದಲ್ಲಿಟ್ಟುಕೊಂಡು ಮೆರೆದದ್ದರಿಂದ ತೀರ್ಥದ ಚರಿತ್ರೆ ಸಹಜವಾಗಿಯೇ ಮೆರೆಯಿತು. ಆದರೆ ರಾಷ್ಟ್ರವನ್ನು ‘ಕಾಯಕದ’ ಮೂಲಕ ಕಟ್ಟಿದ ಜ್ಞಾನವಂತರ ಜನಚರಿತ್ರೆ ಅಸಜವಾಗಿಯೇ ಸೊರಗಿತು. ಇದು ಈ ದೇಶದ ಚಾರಿತ್ರಿಕ ದುರಂತವೇ ಸರಿ. ದುರಂತವಾದರೇನಂತೆ ಸುಳ್ಳು ಎಷ್ಟೇ ಅಂತರಾಳದಲ್ಲಿದ್ದರೂ ಸಹ ಸತ್ಯದ ಮುಂದೆ ಒಂದಲ್ಲ ಒಂದು ದಿನ ಸೋಲಲೇ ಬೇಕು. ದೇವನೂರು ಮಹಾದೇವ ಅವರು ಹೇಳುವ ಹಾಗೆ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಒಂದಲ್ಲ ಒಂದು ದಿನ ಫಲ ಕೊಟ್ಟೆಕೊಡುತ್ತದೆ ಎಂಬ ಮಾತಿನಂತೆ ಸತ್ಯ ಚರಿತ್ರೆಯ ವಾರಸುದಾರರಾಗಿ ಭೂಮಿಗೆ ಬಿದ್ದ ಬೀಜವಾಗಿ ನಮ್ಮ ನಡುವೆ ಉದಯಿಸಿದವರೇ ಭಾರತದ ಕಾಯಕ ಜನವರ್ಗದವರ ವಾರಸುದಾರರಾದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು.
ಬಾಬಾಸಾಹೇಬ್ರು ಭಾರತ ಮಣ್ಣಿನಲ್ಲಿ ಶಿಕ್ಷಣ ಪಡೆದು, ಮಹತ್ವವನ್ನು ಸಾಧಿಸಿ, ಇಂದು ಶಿಕ್ಷಣ ಪಡೆಯುವವರಿಗೆ ಪ್ರೇರಣೆಯಾದ ಮೊದಲ ಭಾರತೀಯ ಮೂಲನಿವಾಸಿ. ಇವರಿಗೂ ಮೊದಲು ಬ್ರಿಟೀಷರಿಂದ ಮತಾಂತರದ ರುಚಿಗಾಗಿ ಊರಿನಿಂದ ಆಚೆ ಅಸ್ಪೃಶ್ಯರಾಗಿ ಕೇರಿಯಲ್ಲಿ ವಾಸಿಸುತ್ತಿದ್ದವರು, ಬ್ರಿಟೀಷರು ನೀಡಿದ ತಮ್ಮ ಸ್ವಾರ್ಥ ಸಾಧನೆಯ ಮತಾಂತರದ ಮೂಲಕ ಕೂಳಿಗಾಗಿ ಅವರ ಸ್ವಾರ್ಥದಿಂದ ಕ್ರೈಸ್ತರಾಗಿ ಒಂದಷ್ಟು ಒಪ್ಪಿತ ಮಾದರಿಯ ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ಶಿಕ್ಷಣ ಪಡೆದರು. ಆದರೆ ಅವರಿಂದ ಬಾಬಾಸಾಹೇಬ್ರ ಮಾದರಿಯ ಭಾರತದ ಮಣ್ಣಿನ ಒಡಲಾಳದ ಶಿಕ್ಷಣ ನಿರೀಕ್ಷಿಸುವುದು ಕಷ್ಟ ಸಾಧ್ಯವೇ ಆಗಿತ್ತು. ಅದರೆ ಬಾಬಾಸಾಹೇಬರು ಪಡೆದ ಶಿಕ್ಷಣದಜ್ಞಾನ ಭಾರತದ ಭೂಪಟ ಹಾಗೂ ಭಾರತದ ಭೂಪ್ರದೇಶವನ್ನೇ ಬೌದ್ಧಿಕವಾಗಿ ಅಲುಗಾಡಿಸಿದ ಜ್ಞಾನಸಂಪತ್ತಾಗಿತ್ತು. ಒಂದರ್ಥದಲ್ಲಿ ಇದು ನಿರಂತರವಾಗಿ ಯಾವುದೇ ತೊಂದರೆಯಿಲ್ಲದೆ ಹಳ್ಳ-ಕೊಳ್ಳ-ಬಯಲು-ಕಾಡು-ಬೆಟ್ಟಗಳಲ್ಲಿ ಶತಶತಮಾನಗಳಿಂದ ಅಜ್ಞಾನವೆಂಬ ನದಿಯಾಗಿ ಹರಿಯುತ್ತಿದ್ದ ಸನಾತನೀಯರ ಸಾಂಪ್ರದಾಯದ ನದಿಗೆ ಶಿಕ್ಷಣದಿಂದ ದೊರಕಿದ ಜ್ಞಾನ ವೆಂಬ ಬೃಹತ್ ಅಣೆಕಟ್ಟನ್ನು ಕಟ್ಟಿ ಹರಿಯುವ ನದಿಯ ದಿಕ್ಕಿನಲ್ಲಿ ಬದಲಾಯಿಸಿದಂತಾಯಿತು. ಇದೊಂದು ಭಾರತದಂತಹ ಭಾರತಕ್ಕೆ ಸಂಭವಿಸಿದ ಸಾಂಸ್ಕೃತಿಕ ಬದಲಾವಣೆಯ ಬಹುದೊಡ್ಡ ಪಲ್ಲಟದ ಪವಾಡವೇ ಸರಿ.
ಭಾರತದಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಟಿಪ್ಪುಸುಲ್ತಾನ್ ಹತ್ಯೆಯ ನಂತರ ಸಂಪೂರ್ಣ ಭಾರತವನ್ನು ತಮ್ಮ ತೆಕ್ಕೆಗೆ ಪಡೆದ ಬ್ರಿಟೀಷರ ವಿರುದ್ಧ ಹೋರಾಡಿದರು. ಇವರು ಬ್ರಿಟೀಷರಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದರು. ಇಂತಹ ಜವಾಬ್ದಾರಿಯನ್ನು ಸಮಯ ಬಂದಾಗ ತಮ್ಮ ಹೆಗಲ ಮೇಲೆ ಹೋರಲು ಅಂದಿನ ಪಾಕಿಸ್ತಾನವು ಒಳಗೊಂಡಂತೆ ಕೋಟ್ಯಾಂತರ ಜನರು ಮುಂದಾದರು. ಜನರ ದಂಡು ಸಾಗರದಂತೆ ಹಿರಿದು ಬಂದಿತ್ತು. ಈ ದೃಷ್ಟಿಯಿಂದ ಭಾರತದ ರಾಜಕೀಯ ಸ್ವಾತಂತ್ರ್ಯ ಹೋರಾಟದ ‘ಭಾರ’ವು ಇವರ ಯಾರ ಹೆಗಲಿಗೂ ನೋವೇ ಆಗಲಿಲ್ಲ ಅಥವಾ ಭಾರವೇ ಆಗಲಿಲ್ಲ. ಆದರೂ ಇದೊಂದು ಮಹತ್ವದ ಘಟನೆಯಾಗಿಯೇ ಭಾರತದ ಚರಿತ್ರೆಯಲ್ಲಿ ಉಳಿದಿದೆ.
ಈ ‘ಅಲ್ಪ’ ಭಾರಕ್ಕೆ ನಾವು ಮಹತ್ವದ ಬೆಲೆಯನ್ನು ಕಟ್ಟಿದ್ದೇವೆ. ಆದರೆ ಭಾರತದ ಎರಡು ಸಾವಿರ ವರ್ಷಗಳ ಚಾತ್ರಿಕವಾದ ಸಮಾಜಿಕ ಅಸಮಾನತೆ ಹಾಗೂ ಸಾಂಸ್ಕೃತಿಕ ಅನೈತಿಕತೆಯನ್ನು ಹೋಗಲಾಡಿಸಲು ತನ್ನ ಹೆಗಲ ಮೇಲೆ ಏಕಾಂಗಿಯಾಗಿ ಶತ ಶತಮಾನದ ‘ಭಾರ’ವನ್ನು ತನ್ನ ಏಕಾಂಗಿ ಹೆಗಲ ಮೇಲೆ ಹೊತ್ತುಕೊಂಡವರು ಮಾತ್ರ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಒಬ್ಬರೆ. ಈ ಪಾರಂಪಾರಿಕ ಅಸಮಾನತೆಯನ್ನು ಹೋಗಲಾಡಿಸುವ ಭಾರವನ್ನು ಹೊರಲು ತಾ ಮುಂದು, ನಾ ಮುಂದು ಎಂಬಂತೆ ಅಂದಿನ ಪಾಕಿಸ್ತಾನವೂ ಒಳಗೊಂಡಂತೆ ಯಾರೊಬ್ಬರೂ ತಮ್ಮ ಹೆಗಲು ಕೊಡಲೇ ಇಲ್ಲ. ಈ ಕಾರಣದಿಂದಾಗಿ ವಿದೇಶಿಯರಿಂದ ಭಾರತವನ್ನು ಮುಕ್ತ ವಾಗಿಸಲು ನಡೆದ ಸ್ವಾತಂತ್ರ್ಯ ಚಳುವಳಿಯ ಮುಂದೆ, ದೇಶಿಯರಿಂದ ದೇಶಿಯರಿಗಾಗಿ ಅಂಬೇಡ್ಕರ್ರವರ ಸ್ವಾತಂತ್ರ್ಯ ಚಳುವಳಿ ಎಂದೆಂದಿಗೂ ಅಜರಾಮರವಾಗಿದೆ. ಶೋಷಿತ ಜನರ ರಾಜಕೀಯ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಬಾಬಾಸಾಹೇಬ್ರು ಹೊತ್ತು ಕೊಂಡ ಸ್ವಾತಂತ್ರ್ಯದ ಭಾರ ಬೆಲೆಕಟ್ಟಲಾಗದ್ದು. ಆದರೇನು ಮಾಡುವುದು? ಇಂದು ಯಾವುದಕ್ಕೆ ಬೆಲೆಕಟ್ಟ ಬಾರದೋ ಅದಕ್ಕೆ ಮಹತ್ವದ ಬೆಲೆ ಕಟ್ಟುತ್ತಿದ್ದೇವೆ. ಯಾವುದಕ್ಕೆ ಬೆಲೆ ಕಟ್ಟಬೇಕಿತ್ತೋ ಅದಕ್ಕೆ ಸಾಮಾಜಿಕ ಹಿನ್ನೆಲೆಯಿಂದ ಕಿಂಚಿತ್ತೊ ಬೆಲೆ ಕಟ್ಟುತ್ತಿಲ್ಲ ಎಂಬುದಕ್ಕೆ ಭಾರತದ ಸಮಕಾಲೀನ ಸಂದರ್ಭದ ಸಾಂಸ್ಕೃತಿಕ ಸಂದರ್ಭವೇ ಸಾಕ್ಷಿಯಾಗಿದೆ.
ಕನ್ನಡ ನಾಡಿನಲ್ಲಿ ಮಹಾನ್ ಸಾಧಕರ ಕುರಿತು ಮೌಖಿಕ ಕಥನಗಳು ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಈವರೆಗೂ ಆಗಿರಲಿಲ್ಲವೇ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಕಾಡುತ್ತದೆ. ಈ ಪ್ರಶ್ನೆ ಕಾಡಿದಾಗ ಮಾತ್ರ ಉತ್ತರ ಹುಡುಕಲು ಸಾಧ್ಯ. ಇದಕ್ಕೆ ಉತ್ತರವಾಗಿ 12ನೇ ಶತಮಾನದಲ್ಲಿನ ಬಸವಚರಿತ್ರೆಯಿಂದ ಮೊದಲುಗೊಂಡು ೧೫ನೇ ಶತಮಾನದಲ್ಲಿದ್ದ ಸಾಂಸ್ಕೃತಿಕ ನಾಯಕರುಗಳಾದ ಮಾದಪ್ಪ, ಮಂಟೇಸ್ವಾಮಿ, ರಾಚಪ್ಪಜಿ, ಜುಂಜಪ್ಪ, ಸಿದ್ದಾಪ್ಪಾಜಿ, ಕೊಟ್ರಪ್ಪ, ನಾಯಕನಹಟ್ಟಿ ತಿಪ್ಪೇಸ್ವಾಮಿ, ತಿಂಥಿಣಿ ಮೌನೇಶ್ವರರ ಮೌಖಿಕ ಕಥನ ಜನರ ಬಾಯಿಯಲ್ಲಿ ಉಳಿದಿವೆ. ಮಾತೃದೇವತೆಗಳಾದ ಯಲ್ಲಮ್ಮ, ಹುಲಿಗೆಮ್ಮ ಹಾಗೂ ಪುರಾಣ ಹಿನ್ನೆಲೆಯ ಶಿವಪುರಾಣ, ಶನಿಮಹಾತ್ಮ, ಪ್ರಾಕೃತಿಕವಾದ ಮಳೆ, ಬೆಳೆ, ಪರಿಸರ ಇತ್ಯಾದಿ ಇತ್ಯಾದಿ ಘಟನೆಗೆಳು ಮೌಖಿಕ ಕಥನಗಳಾಗಿ ಈ ನೆಲ ಸಂಸ್ಕೃತಿಯ ಜನರ ಬಾಯಿಯಲ್ಲಿ ಅಪಾರ ಜ್ಞಾನ ಸಂಪತ್ತಿನ ಮಾತಿನ ಬಳುವಳಿಯೇ ಮೂಲ ನಿವಾಸಿಗಳಲ್ಲಿ ಉಳಿದಿದೆ. ಬಾಬಾಸಾಹೇಬರು ಈ ನೆಲದ ಮೂಲನಿವಾಸಿಗಳಿಗಾಗಿ- ಅವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಅಪಾರ ಜ್ಞಾನ ಸಂಪತ್ತಿನಿಂದ ಧಾರೆಯೆರೆದ ಸಮ ಸಂಸ್ಕೃತಿಯ ಸಂವಿಧಾನ ದಿಂದಾದ ಸಾಂಸ್ಕೃತಿಕ ಕ್ರಾಂತಿಯ ನಂತರ ಇವೆಲ್ಲವೂ ಲಿಖಿತ ರೂಪದಲ್ಲಿ ಪ್ರಕಟವಾಗಿ ಕನ್ನಡ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿವೆ.
ಭಾರತ ದೇಶದ ನೆಲ ಸಂಸ್ಕೃತಿಯ ದುಡಿಯುವ ಜನ ವೈದಿಕರು ನೀಡಿದ ಸಂಪ್ರದಾಯಕ ಶಿಕ್ಷಣ ಕಲಿಯದಿದ್ದರೂ ಸಹ ಬದುಕುವ ವೈಜ್ಞಾನಿಕ ಶಿಕ್ಷಣವನ್ನು ಅಪಾರವಾಗಿಯೇ ಕಲಿತ್ತಿದ್ದರು. ಇದು ಅನುಭವದಿಂದ ಪರಂಪರಿಕವಾಗಿ ಬಂದ ಕಲಿಕೆಯಾಗಿತ್ತು. ತಮ್ಮ ಶ್ರಮ ಹಾಗೂ ಜೀವನದ ವಿವಿಧ ಮಜಲುಗಳನ್ನು ಜಾನಪದ ಪರಂಪರೆಯಂತೆ ಬಾಯಿಯಿಂದ ಬಾಯಿಗೆ, ಕೈಯಿಂದ ಕೈಗೆ ಬಳುವಳಿಯಾಗಿ ಒದಗಿಸಿ ಹೋದರು. ಈ ಬಳುವಳಿ ರಾತ್ರೋರಾತ್ರಿ ಹಾಡಿದರೂ ಮುಗಿಯದ ಜೀವನ ಪರಂಪರೆಯಾಗಿ ಇಂದಿಗೂ ಉಳಿದಿದೆ. ಇಂತಹ ಮೂಲ ಆಕಾರವನ್ನು ಚರಿತ್ರೆಕಾರರು ತಾವು ಬರೆದ ರಾಜ-ಮಹಾರಾಜರುಗಳು ಹಾಗೂ ಸಾಮ್ರಾಜ್ಯಗಳ ವೈಭವದ ಸುವರ್ಣಯುಗಗಳನ್ನು ಕಂಡ ಕಾಲವೆಂದು ಸ್ವಘೋಷಿಸಿಕೊಂಡು ಬರೆದ ಚರಿತ್ರೆಯಲ್ಲಿ ಯಾವ ಸಂದರ್ಭದಲ್ಲಿಯೂ ಆಕಾರವಾಗಿ ಬಳಸಿಕೊಂಡಿಲ್ಲ. ಮೌಖಿಕ ಪರಂಪರೆಯಲ್ಲಿ ವೈಭವ ಇಲ್ಲ. ಸುವರ್ಣಯುಗದ ಸಿದ್ಧಾಂತವಿಲ್ಲ. ಅಲ್ಲಿರುವುದು ಕಾಯಕ ಮಾತ್ರ. ಆದರೆ ರಾಷ್ಟ್ರೀಯ ವಾದಿಗಳು ಇಲ್ಲಿಯೂ ಬಳಸಿಕೊಂಡಿರುವುದು ಪ್ರಭುತ್ವವನ್ನು ಓಲೈಸಲು, ಪ್ರಭುತ್ವವನ್ನು ನಿಯಂತ್ರಿಸುತ್ತಿದ್ದವರು ಬರೆಸಿದ ಶಾಸನ, ಸ್ಮಾರಕ, ಹಸ್ತಪ್ರತಿ, ಪುರಾಣ ಮಿಶ್ರಿತ ಘಟನೆಗಳನ್ನು ಮಾತ್ರ ಎಂಬುವುದು. ಆದರೆ ಮೌಖಿಕ ಗಾದೆ, ಒಗಟು, ಸಾಮಾಜಿಕ ಸಂಬಂಧಗಳು, ವೃತ್ತಿ, ವೃತ್ತಿಯ ಮೂಲಕ ಶ್ರೇಣಿಕೃತ ಜಾತಿ, ಜಾತಿಯ ಕಾರಣದಿಂದಾಗಿ ಸ್ಪೃಶ್ಯ-ಅಸ್ಪೃಶ್ಯ ಎಂಬ ತಾರತಮ್ಯ ಇಲ್ಲಿ ಇವರ ಚರಿತ್ರೆ ರಚನೆಗೆ ಆಕಾರವೇ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಅಂಬೇಡ್ಕರ್ರವರ ಕುರಿತು ಕಿಂಚಿತ್ತೋ ಚರಿತ್ರೆ ರಚನೆಯಾಗಲೇ ಇಲ್ಲ. ಏಕೆಂದರೆ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಚಿಂತನೆ ಮಾಡಿದ ಜನವರ್ಗಕ್ಕೆ ಮಹತ್ವದ ಚರಿತ್ರೆ ಇದ್ದರೂ ಸಹ ಆ ಚರಿತ್ರೆಯನ್ನು ಬರೆಯುವವರಿಗೆ ಅಕ್ಷರದ ಜ್ಞಾನ ಇರಲಿಲ್ಲ. ಆದರೆ ಕೆಲವು ಮೂಲಭೂತ ವಾದ ಜನರು ಮಾತ್ರ ತಮ್ಮ ಚರಿತ್ರೆ ಶೂನ್ಯವಾಗಿದ್ದರೂ ಅಕ್ಷರ ಬಲ್ಲವರಾದ್ದರಿಂದ ತಮಗೆ ತಾವೇ ಬೆಲೆ ಕಟ್ಟಲಾಗದ ಚರಿತ್ರೆ ಎಂದು ಬರೆದುಕೊಂಡರು. ಅಷ್ಟೇ ಅಲ್ಲದೇ ಅದೇ ಸತ್ಯ-ಶುದ್ಧ ಚರಿತ್ರೆ ಎಂದು ಮೊಂಡು ವಾದ ಮಾಡಲು ಮುಂದಾಗಿರುವುದು ದುರಂತವೇ ಸರಿ.
ಅಕ್ಷರ ಬಲ್ಲದವರು ಬಾಬಾಸಾಹೇಬ್ ಅಂಬೇಡ್ಕರವರನ್ನು ಅವರ ಜೀವನ, ಸಾಧನೆ ಹಾಗೂ ನೋವುಗಳ ಮೂಲಕ ಸಾಧಿಸಿದ ಕಾರ್ಯವನ್ನು ತಮ್ಮ ಅಂತರಾಳದಿಂದ ಪ್ರಜ್ಞಾಪೂರ್ವಕವಾಗಿ ನೋಡಿ-ಕೇಳಿ ರಾತ್ರಾನೋರಾತ್ರಿ ಹಾಡಿದರೂ ಮುಗಿಯದಷ್ಟು ಅವರ ಜೀವನ ಗಾಥೆಯನ್ನು ಹಾಡುತ್ತಿರುವುದಕ್ಕೆ ಇಂದು ನಮ್ಮ ಮುಂದೆ ನಿರ್ದೇಶನ ವಾಗಿ ಉಳಿದಿದೆ. ಮೌಖಿಕ ಪರಂಪರೆಗೆ ಲಿಖಿತ ಪರಂಪರೆಗಿಂತಲೂ ಅತಿಹೆಚ್ಚಿನ ಜ್ಞಾನ ಬೇಕು. ಇಂಥಹ ಜ್ಞಾನ ಹೊಂದಿರುವವರು ಈ ನೆಲ ಸಂಸ್ಕೃತಿಯ ಕಾಯಕದ ಕುಲದವರು. ಇಂಥಹ ಜ್ಞಾನವಂತರನ್ನು ಅಜ್ಞಾನಿಗಳಾಗಿಸಿ ಲಿಖಿತ ಪರಂಪರೆಯವರನ್ನು ಸ್ವಘೋಷಿತ ಜ್ಞಾನ ವಂತರನ್ನಾಗಿಸಿದ ದುರಂತ ಅನಾಗರೀಕ ಸಂಸ್ಕೃತಿ ನಮ್ಮದು.
ಈ ದೇಶದಲ್ಲಿ ದುಡಿದು ತಿನ್ನುವರಿಗೆ ಬೆಲೆಯಿಲ್ಲ. ದುಡಿಸಿ ಕುಳಿತು ತಿನ್ನುವವರಿಗೆ ಹೆಚ್ಚಿನ ಬೆಲೆಯಿದೆ. ಈ ಅಮಾನವೀಯ ಸಂಸ್ಕೃತಿಯನ್ನು ಹೋಗಲಾಡಿಸಿ ಸಮಸಂಸ್ಕೃತಿಯನ್ನು ಪ್ರತಿಪಾದನೆ ಮಾಡುವುದೇ ಬಾಬಾಸಾಹೇಬ್ರು ರಚಿಸಿದ ಭಾರತದ ಬೃಹತ್ ಲಿಖಿತ ಸಂವಿಧಾನದ ಮುಖ್ಯ ಆಶಯ. ಕೆಲವು ಸ್ವಘೋಷಿತ ಪಂಡಿತರು ಹೇಳಿದರು ಖಡ್ಗಕಿಂತ ಲೇಖನಿ ಮೊನಚು ಅಂತ. ಆದರೆ ಇದು ಸುಳ್ಳು. ಏಕೆಂದರೆ ಖಡ್ಗಕ್ಕೆ ಅದರದೇ ಆದ ಸ್ಪಷ್ಟ ಬದ್ಧತೆಯಿದೆ. ಅದು ಒಂದೇ ಬಾರಿಗೆ ಚುಚ್ಚಿ ಸಾಯಿಸುತ್ತದೆ, ಇಲ್ಲಿ ಸಾವು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತದೆ. ಆದರೆ ಲೇಖನಿಗೆ ಯಾವುದೇ ಬದ್ಧತೆಯೂ ಇಲ್ಲ. ಏಕೆಂದರೆ ಇದು ಜೀವಂತ ಇರುವವರನ್ನು ಜೀವಿಸಿದ ಅವಧಿ ಹಾಗೂ ಅವರ ಮರಣದ ನಂತರವೂ ಎಗ್ಗಿಲ್ಲದೆ ಚುಚ್ಚಿ ಚುಚ್ಚಿ ಸಾಯಿಸುತ್ತಿರುತ್ತದೆ. ಮುಂದುವರಿದು ಜೀವಂತ ಇರುವವರನ್ನು ಸಾಯಿಸುತ್ತದೆ. ಬಣ್ಣ ಬಣ್ಣದ ಗೋರಿಗಳನ್ನು ನಿರ್ಮಿಸುತ್ತದೆ. ಇಲ್ಲಿ ಜೀವಂತ ಶವವಾಗಿ ಬದುಕಿಸುವ ರೀತಿ ಅಮಾನವೀಯ ಕಟ್ಟುಪಾಡುಗಳ ಪ್ರಶ್ನೆಗಳಿಗೆ ಉತ್ತರ ದೊರಕುವುದೇ ಇಲ್ಲ. ಲೇಖನಿಗಿಂತ ಅಂದರೆ ವೇದ-ಪುರಾಣಗಳಿಂತ; ಮೌಖಿಕ ಸಂಪ್ರದಾಯದ ಜನಸಂಸ್ಕೃತಿಯೇ ಶ್ರೇಷ್ಠ ಎಂಬುವುದು ನನ್ನ ಸ್ಪಷ್ಟ ಅಭಿಪ್ರಾಯ. ಇದಕ್ಕೆ ಉತ್ತರವನ್ನು ನಮ್ಮ ಮೌಖಿಕ ಪರಂಪರೆಯೇ ಹೇಳುತ್ತದೆ. ಖಡ್ಗಕ್ಕೆ ಬದ್ಧತೆ ಇದೆ. ಲೇಖನಿಗಳಿಗೆ ಬದ್ಧತೆ ಇಲ್ಲ ಎಂಬುವುದು ಸ್ಪಷ್ಟ ಅಭಿಪ್ರಾಯ.
ಇಲ್ಲಿ ವಿದ್ವಾಂಸರು ಹೇಳಿದ್ದನ್ನು ಮೌಖಿಕರು ಒಪ್ಪುವುದಿಲ್ಲ-ಮೌಖಿಕರು ಹೇಳುವುದನ್ನು ವಿದ್ವಾಂಸರು ಒಪ್ಪುವುದಿಲ್ಲ ಎಂಬ ಬೌದ್ಧಿಕವಾದವೂ ಇದೆ. ಹೌದು ಇದು ಒಪ್ಪುವ ಮಾತೆ ಸರಿ. ಆದರೆ ಮೌಖಿಕರ ಮಾತುಗಳು ಕಾಯಕದ ಮಾದರಿ ಯಾದರೆ, ವಿದ್ವಾಂಸರ ಮಾತುಗಳು ಸಾಂಪ್ರದಾಯವಾದಿಗಳ ಧರ್ಮಕೇಂದ್ರಿತ ಮಾದರಿಯದಾಗಿದೆ. ಈ ತಾತ್ವಿಕ ಹಿನ್ನೆಲೆಯಿಂದ ಇವರಿಬ್ಬರೂ ತಮ್ಮ ತಮ್ಮ ವಾದಕ್ಕೆ ಬದ್ಧಗಿರುವುದು ಕಂಡುಬರುತ್ತದೆ. ಈ ದೃಷ್ಟಿಯಿಂದ ನಮಗೆ ಮೌಖಿಕ ಪರಂಪರೆಯ ಕಾಯಕವೇ ಶ್ರೇಷ್ಠವೆಂದು ಕಂಡುಬರು್ತದೆ. ಏಕೆಂದರೆ ಕಾಯಕದವರ ಮಾತುಗಳು ಕರುಳಿನಿಂದ ಬಂದವುಗಳಾದರೆ, ಸಂಪ್ರದಾಯಿಕವಾದಿಗಳ ಮಾತು ಕೊರಳಿನಿಂದ ಬಂದವುಗಳು. ನಿಜ ಚರಿತ್ರೆಯಲ್ಲಿ ಕರುಳಿನ ಭಾಷೆಗೆ ಬೆಲೆಬೇಕಾಗಿದೆ. ಆದರೆ ಇಂದು ಕರುಳಿನ ಭಾಷೆ ಸೋಲುತ್ತಿದೆ, ಕೊರಳಿನ ಭಾಷೆ ಗೆಲ್ಲುತ್ತಿದೆ. ಏಕೆಂದರೆ; ಕರುಳಿಗೆ ‘ಮೈಲಿ’ಗೆ ಇದೆ. ಆದರೆ ಕೊರಳಿಗೆ ‘ಶೃಂಗಾರ’ವಿದೆ. ಈ ಬಣ್ಣ ಬಣ್ಣದ ನವರಂಗಿ ಆಟದ ಶೃಂಗಾರವೇ ಇಂದು ಪಾರಂಪರಿಕ ಸಂಸ್ಕೃತಿಯಾಗಿ ನಮ್ಮನ್ನಾಳ್ವಿಕೆ ಮಾಡುತ್ತಿದೆ. ಇಂಥವರ ನಡುವೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತ ಈ ಜನಪದ ಸತ್ಯ ಕಥನಗಳು ನಮ್ಮನ್ನು ಕರುಳಿನ ಕೊಂಡಿಗಳಾಗಿ ಗೋಚರಿಸುತ್ತವೆ. ಇವು ಸುಳ್ಳು ಚರಿತ್ರೆಯನ್ನು ಬದಿಗಿರಿಸಿ ಸತ್ಯ ಚರಿತ್ರೆಯನ್ನು ತನ್ನ ಒಡಲಾಳದ ಅಂತರಾಳದಿಂದ ಹೊರಚಲ್ಲುತ್ತವೆ. ಇದಕ್ಕಾಗಿಯೇ ಇಲ್ಲಿ ದುಡಿಯುವನ ಬೆವರಿನ ನೆಲ ಸಂಸ್ಕೃತಿಯ ಅನುಭವದ ಮೌಖಿಕ ಶಿಕ್ಷಣ ಶ್ರೇಷ್ಠತೆ ಪಡೆಯುತ್ತದೆ. ಈ ಹಂತದಲ್ಲಿ ಲಿಖಿತಕಿಂತಲೂ ಮೌಖಿಕ ಪರಂಪರೆ ತನಗೆ ತಾನೇ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ.
ಕರ್ನಾಟಕ ಪ್ರದೇಶದಲ್ಲಿಯೇ ಬೀದರ್-ಕಲಬುರಗಿ-ರಾಯಚೂರು ಪ್ರದೇಶಗಳು ಇಂದಿನ ಕನ್ನಡನಾಡಿಗೆ ಅಲ್ಲದೆ, ದಕ್ಷಿಣ ಭಾರತಕ್ಕೆ ಸಮಸಂಸ್ಕೃತಿಯನ್ನು ಹುಟ್ಟುಹಾಕಿದ ಪ್ರಜ್ಞಾವಂತ ನಾಡು. ಈ ಪ್ರದೇಶದಲ್ಲಿ 12ನೇ ಶತಮಾನದಲ್ಲಿಯೇ ಬಸವಣ್ಣ ಜನಕೇಂದ್ರಿತ ಸಮಾನತೆಯ ಸಂಸ್ಕೃತಿಯನ್ನು ಬೆಳಗಿಸಿದರು. ಅಂತಹ ಪ್ರಜ್ಞಾವಂತ ಪ್ರದೇಶದ ಅನೇಕ ಮೌಖಿಕ ಹಾಡುಗಾರರು ಸಮಸಂಸ್ಕೃತಿಯ ಹರಿಕಾರ ಬಾಬಾಸಾಹೇಬ್ ಅಂಬೇಡ್ಕರವರನ್ನು ಕುರಿತು ಲಾವಣಿ ರೂಪದಲ್ಲಿ ಅವರ ಜೀವನಗಾಥೆಯನ್ನು ಕೊಂಡಿಗೆ ಕೊಂಡಿ ಸೇರಿಸಿ ಎಲ್ಲೋ ಲೋಪವಾಗದಾಗೆ ಹಾಡುತ್ತಿರುವುದಕ್ಕೆ ನಿರ್ದೇಶನಗಳಿವೆ. ಇದಕ್ಕೆ ಮುಖ್ಯವಾಗಿ ಈ ಭಾಗದ ದುಡಿಯುವ ಜನವರ್ಗ ಕನ್ನಡದ ಜೊತೆ ಮರಾಠಿ ಭಾಷೆಯನ್ನು ಬಲ್ಲವರಾಗಿರುವುದು. ಪ್ರಗತಿಪರ ಚಿಂತಕರಾಗಿದ್ದ ಶ್ರೀ ತೋಂಟದಾರ್ಯ ಸ್ವಾಮಿಜೀ (ಗದಗ-ಡಂಬಳ) ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುರಾಣ (ಚರಿತಾಮೃತ) ಎಂಬ ಸಮಗ್ರ ಜೀವನ ಗಾಥೆಯನ್ನು ಶ್ರೀ ರಾಮಣ್ಣ ದೊಡ್ಡಪ್ಪ ಬ್ಯಾಟಿ ಅವರಿಂದ ಹಾಡಿಸಿ ೪೫೦ ಪುಟಗಳಷ್ಟು ದೊಡ್ಡ ಕೃತಿಯನ್ನು ಮಠದಿಂದಲೇ ಪ್ರಕಟಿಸಿದ್ದರು. ಅಂಬೇಡ್ಕರ್ ಅವರ ಕುರಿತ ಮೌಖಿಕ ಸಾಹಿತ್ಯದ ಲಾವಣಿ ರೂಪದ ಸಂಗ್ರಹದಲ್ಲಿ ಈ ಕೃತಿಯು ಮೊದಲಿನದು. ಗಾಯಕರಾದ ಶ್ರೀರಾಮಣ್ಣ ದೊಡ್ಡಪ್ಪ ಬ್ಯಾಟಿ ಅವರು ನೂರಾರು ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿ ಅಂಬೇಡ್ಕರ್ ಅವರ ಜೀವನದ ಚರಿತ್ರೆಯನ್ನು ಜನರಿಗೆ ತಿಳಿಸುತ್ತಿರುವುದು ಇಂದಿಗೂ ಸಾಕ್ಷಿಯಾಗಿದೆ. ಇದನ್ನು ಹೊರತು ಪಡಿಸಿದರೆ ಇಂದು ಕಲಬುರಗಿಯಲ್ಲಿ ಎಸ್.ಕೆ. ಬಂಧು ಅವರು ಸಂಪಾದಿಸಿ ಪ್ರಕಟಿಸಿರುವ ಮೌಖಿಕ ಪಾರಂಪರೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನ ಎಂಬ ಕೃತಿಯು ಮಹತ್ವವನ್ನು ಪಡೆದಿದೆ. ಇಲ್ಲಿ ಮೌಖಿಕರೂಪದಲ್ಲಿ ಹಾಡಿರುವವರು ಇದು ಎರಡನೇ ಕೃತಿ ಎಂದು ನನ್ನ ಅಧ್ಯಯನ ಸಮೀಕ್ಷೆಯ ಪ್ರಕಾರ ತಿಳಿಯಬಸುತ್ತೇನೆ.
ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅನೇಕ ವಿಚಾರಗಳು ಪುಸ್ತಕ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅಪಾರ ಮಾಹಿತಿ ನೀಡುತ್ತವೆ. ಈ ಮಾಧ್ಯಮ ಅಂಬೇಡ್ಕರ್ ಅವರನ್ನು ಕೆಲವು ಸಂದರ್ಭದಲ್ಲಿ ವೈಭವೀಕರಿಸದಿರಲು ಸಾಧ್ಯವಾಗಿಲ್ಲ ಎಂದರೆ ತಪ್ಪಾಗುತ್ತದೆ. ಅವರ ಈ ವೈಭವದ ಹಿಂದೆ ಧಾರ್ಮಿಕತೆಯ ಜೊತೆ ರಾಜಕೀಯ ಮೇಳೈಸಿಕೊಂಡಿರುತ್ತಾರೆ. ಆದರೆ ಜನಪದರರಿಗೆ ಇವರ ಸಾಧ್ಯತೆ ಇಲ್ಲ, ಅದರ ಅವಶ್ಯಕತೆಯು ಇವರಿಗಿಲ್ಲ. ಏಕೆಂದರೆ ಇವರು ತಮಗಾಗಿ-ತಮ್ಮ ಜನರಿಗಾಗಿ ಅಂತರಾಳದಿಂದ ಹಾಡುದ ಮಾತುಗಳೇ ಇವು. ಇದರಲ್ಲಿ ಯಾವ ಫಲವನ್ನು ಬಯಸದೆ ಕೇವಲ ಸೇವೆಯ ಫಲವನ್ನು ಮಾತ್ರ ಬಯಸುತ್ತಾರೆ. ಆದರೆ ಲಿಖಿತ ರೂಪದ ಸಾಹಿತ್ಯ ಸಾಂಸ್ಕೃತಿಕವಾಗಿ ಪ್ರತಿಯೊಂದರಲ್ಲಿಯೂ ಫಲವನ್ನು ಬಯಸುತ್ತದೆ. ಅಲ್ಲಿ ಕಥೆಯ ಜೊತೆ ಸ್ವಾರ್ಥಿ ಸಾಧನೆಯ ಮಸಾಲೆಯೂ ಇರುತ್ತದೆ.
ಮಹಾತ್ಮ ಗಾಂಧಿ ಅವರು ಸ್ವತಂತ್ರ ಚಳುವಳಿಯ ಮುಖಂಡತ್ವ ವಹಿಸಿಕೊಂಡು ದೇಶದಾತ್ಯಂತ ಸಂಚರಿಸಿದಾಗ ಅವರ ಸಂಚಾರದ ಸ್ವರೂಪ. ಮಹತ್ವ ಕುರಿತು ಅನೇಕ ಲಿಖಿತ ಬರವಣಿಗೆಗಳು ಬಂದವು. ಏಕೆಂದರೆ ಗಾಂಧಿ ಅವರ ಕುರಿತು ಬರೆಯಲು ಅವರ ಅನುಯಾಯಿಗಳಿಗೆ ಶಿಕ್ಷಣ ತಿಳಿದಿತ್ತು. ಆದರೆ ಅಂಬೇಡ್ಕರ್ ಅವರ ಜೀವನ, ಸಮಾಜಮುಖಿ ಹೋರಾಟಗಳ ಕುರಿತು ಬರೆಯಲು ಅವರ ಅನುಯಾಯಿಗಳಿಗೆ ಅಕ್ಷರದ ಜ್ಞಾನವೇ ಇರಲಿಲ್ಲ. ಪ್ರಪಂಚದ ಚರಿತ್ರೆಯಲ್ಲಿ ಕುಡಿಯುವ ನೀರಿಗಾಗಿ ಬಾರಿ ಬೃಹತ್ ಚಳವಳಿ ನಡೆಸಿದ ಅಂಬೇಡ್ಕರ್ ಅವರು ಇತಿಹಾಸದ ಭಾಗವೇ ಆದರು. ಇದಕ್ಕೆ ಭಾರತದ ಸಮಕಾಲೀನ ಸಂದರ್ಭದಲ್ಲಿ ಕಾಣವಾಯಿತು. 1927 ರಲ್ಲಿನ ಮಹಾಡ್ ಕೆರೆಯ ಕುಡಿಯುವ ನೀರಿನ ಹೋರಾಟ ಕುರಿತು ಲಿಖಿತ ದಾಖಲೆಗಳಿಗಿಂತಲೂ ಮೌಖಿಕ ದಾಖಲೆಗಳೇ ಎತ್ತೇಚ್ಚವಾಗಿವೆ. ಈ ಕುರಿತು ಮರಾಠಿ ಯಲ್ಲಿ ಡಾ. ರಾಮಕೃಷ್ಣ ಪೋಕಳೆ ಹಾಗೂ ಡಾ. ಸುಂದರ ಕಾಂಬಳೆ ಎಂಬುವವರು 1999 ರಲ್ಲಿ ‘ಮಹಾಡ್ ಮುಮೆಂಟ್’ ಎಂಬ ಮೌಖಿಕ ಕಥನಗಳನ್ನು ಸಂಗ್ರಹಿಸಿ ಕೃತಿ ಪ್ರಕಟಿಸಿದ್ದರು. ಈ ಕುರಿತು ಅಂದಿನ ಕೇಸರಿ ಪತ್ರಿಕೆಯಲ್ಲಿಯೂ ಸಹ ಯಾವುದೋ ಲಿಖಿತ ಮಾಹಿತಿ ದೊರಕುವುದಿಲ್ಲ. ಆದರೆ ಗಾಂಧೀಜಿ ಅವರ ಹರಿಜನ ಪರ ಕಾರ್ಯಗಳು ಮಾತ್ರ ಪುಂಕಾನು ಪುಂಕವಾಗಿ ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಸಹ ಸಾಂಸ್ಕೃತಿಕ ದುರಂತವೇ ಸರಿ.
ಅಂಬೇಡ್ಕರ್ ಅವರು ಈ ಕಾರಣಕ್ಕಾಗಿಯೇ ಮೂಕನಾಯಕ ಎಂಬ ಪತ್ರಿಕೆಯನ್ನು 1920 ರಲ್ಲಿಯೇ ಆರಂಭಿಸಿದರೂ ಸಹ ಇದನ್ನು ಓಡುವ ವರ್ಗಕ್ಕೆ ಅಕ್ಷರ ಜ್ಞಾನ ಇರಲಿಲ್ಲ. ಅಕ್ಷರಜ್ಞಾನವಿದ್ದವರು ಈ ಪತ್ರಿಕೆಯನ್ನು ಓದಲೂ ಮುಂದಾಗುತ್ತಿರಲಿಲ್ಲ. ಏಕೆಂದರೆ ಇಲ್ಲಿ ಅಕ್ಷರ ಬಲ್ಲವರ ಅಲಿಖಿತ ಸಾಮಾಜಿಕ ಕಾನೂನುಗಳು ವಿಶ್ಲೇಷಾಣಾತ್ಮಕ ವಾಗಿ ಚರ್ಚೆಗೊಳಪಡುತ್ತಿದ್ದವು. ಜೊತೆಗೆ ಅಸ್ಪೃಶ್ಯ ವರ್ಗದ ಅಂಬೇಡ್ಕರ್ ಅವರು ಇದರ ಸಂಪಾದಕರಾಗಿದ್ದರು. ಆದರೆ ಹರಿಜನ ಪತ್ರಿಕೆಯು ಸ್ವಾರ್ಥ ಸಾಧನೆಗೆ ಪೂರಕ ವಾಗಿದ್ದರಿಂದ ಹಾಗೂ ಸ್ಪೃಶ್ಯ ವರ್ಗದ ಮಹಾತ್ಮ ಗಾಂಧೀಜಿ ಅವರು ಸಂಪಾದಕರಾಗಿದ್ದ ರಿಂದ ಹೆಚ್ಚು ಹೆಚ್ಚು ಓದುಗರು ಇದನ್ನು ಒಪ್ಪಿಕೊಂಡರು. ಇಂಥಹ ಬೌದ್ಧಿಕ ಅಸ್ಪೃಶ್ಯತೆಗೆ ಭಾರತದಲ್ಲಿ ಸಾವಿರಾರು ಜ್ವಲಂತ ಮೌಖಿಕ ನಿದರ್ಶನಗಳಿವೆ. ಮುಂದುವರೆದು ಹೇಳುವುದಾದರೆ ಗಾಂಧೀಜಿ ಅವರು ಬರೆದದ್ದು 1೦೦ ಪುಟಗಳಾದರೆ ಅವರ ಕುರಿತು ಅಕ್ಷರ ಬಲ್ಲವರು ಬರೆದದ್ದು ಅವರಿಗೆ ಪೂರಕವಾಗಿ ಸಾವಿರಾರು ಪುಟಗಳು. ಆದರೆ ಅಂಬೇಡ್ಕರ್ ಅವರು ಬರೆದದ್ದು ತನ್ನ ಜನರಿಗಾಗಿ ಸಾವಿರಾರು ಪುಟಗಳು. ಆದರೆ ಅವರ ಬರವಣಿಗೆಯನ್ನು ಓದಿದ್ದು ಮಾತ್ರ ಬೆರಳೆಣಿಕೆಯಷ್ಟು ಜನರು ಮಾತ್ರ. ಇದಕ್ಕೆ ಕಾರಣ ಅಂಬೇಡ್ಕರ್ ಹೇಳಿದ ಜನರಿಗೆ ಅಕ್ಷರದ ಜ್ಞಾನ ತಿಳಿದಿರಲಿಲ್ಲವೆಂಬುವುದು. ಆದರೆ ಅವರ ಹೋರಾಟದ ಪತ್ರಿಯೊಂದು ಸಂದರ್ಭವನ್ನು ಮೌಖಿಕವಾಗಿ ಹೇಳಿ ಕೊಂಡು ಬಂದರು. ಭಾರತದ ಚರಿತ್ರೆಯಲ್ಲಿ ಲಿಖಿತ ಮಾಹಿತಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಹಿನ್ನೆಲೆಯಲ್ಲಿ ಜನಕೇಂದ್ರಿತ ಮೌಖಿಕ ಪರಂಪರೆ ಸೋತಿತ್ತು. ಈ ಸೋಲಿಗೆ ಸಾಮಾಜಿಕ ಹಿನ್ನೆಲೆಯಲ್ಲಿ ಪ್ರಮುಖ ಕಾರಣವೆನ್ನಬಹುದು.