ಜ್ಯೋತಿ ಗಾಂವ್ಕರ್
ಇಂದು ಬೆಳಿಗ್ಗೆ ಹಣ್ಣು ತರಕಾರಿ ತರೋಕೆ ಅಂತ ಮಾರ್ಕೆಟ್ ಗೆ ಹೋಗಿದ್ದೆ… ಮನೆಯಿಂದ ಅರ್ಧ ಕಿಲೋಮೀಟರ್ ಹೋಗಿದ್ದೀನಿ ಅಷ್ಟೇ ಸರ್ಕಲ್ ನಲ್ಲಿ ಪೊಲೀಸಪ್ಪ ಗಾಡಿ ನಿಲ್ಲಿಸಿದ..
ಅವನು ಕೈ ಮಾಡ್ತಾ ಇದ್ದಂತೆ ಮಾಸ್ಕ್ ಬಿಟ್ಟು ಬಂದಿದ್ದು ನೆನಪಾಯ್ತು. ಶಿಟ್… ಅಂದ್ಕೊಂಡು ಗಾಡಿ ನಿಲ್ಸಿದೆ.
ಸಾರಿ ಸರ್ ಅಂದೆ 100 ರೂ. ದಂಡ ಕೊಟ್ಟು ರಿಸಿಪ್ಟ್ ತಗೊಂಡು ಹೋಗಿ ಅಂದ… ನನ್ ಹಾಗೇ ಸುಮಾರು ಜನ ದಂಡ ಕಟ್ಟೋಕೆ ನಿಂತಿದ್ರು….
ಓಕೆ ತಪ್ಪು ನಂದೇ ಅಲ್ವಾ ಅಂತ ಒಂದೂ ಮಾತಾಡದೇ ಹಣ ಕೊಟ್ಟೆ…
ಆಮೇಲೆ ಅಕ್ಕ ಪಕ್ಕದಲ್ಲಿ ಎಲ್ಲೂ ಮಾಸ್ಕ್ ಅಂಗಡಿ ಕಾಣಲಿಲ್ಲ… ಸರಿ ವಾಪಸ್ಸು ಹೋಗಿ ಮಾಸ್ಕ್ ಹಾಕ್ಕೊಂಡು ಬರೋಣ ಅಂತ ಗಾಡಿ ಟರ್ನ್ ಹೊಡೆದೆ.
ಯಾಕ್ ಮೇಡಂ ವಾಪಸ್ಸು ಹೊಂಟ್ರಿ ಅಂತ ಕೇಳ್ದ.
“ಮಾಸ್ಕ್ ತಂದಿಲ್ಲ ಹೋಗಿ ಹಾಕ್ಕೊಂಡು ಬರ್ತೀನಿ” ಅಂದೆ…
“ಇರ್ಲಿ ಹೋಗಿ “ಅಂದ
“ಮುಂದೆ ಯಾರಾದ್ರೂ ಮತ್ತೆ ಮಾಸ್ಕ್ ಸಲುವಾಗಿ ಗಾಡಿ ನಿಲ್ಸಿದ್ರೆ?” ಕೇಳ್ದೆ
ಇಲ್ಲ ಮುಂದೆ ಯಾರಿಲ್ಲ ಇದೇ ಮೇನ್ ಸರ್ಕಲ್, ಇನ್ ಕೇಸ್ ಇದ್ರೂ ಕೂಡಾ ಈ ಹಾಳೆ ತೋರ್ಸಿ ಬಿಡ್ತಾರೆ ಅಂದ…
“ಅರೇ ಇದೇನ್ರೀ ನಿಮ್ಮ ಪ್ರಕಾರ ದಂಡ ಕೊಟ್ಟಾದ್ಮೇಲೆ ಇಡೀ ದಿನ ಊರೆಲ್ಲ ಮಾಸ್ಕ್ ಇಲ್ದೇ ತಿರುಗಬಹುದಾ. ಅದರ ಅರ್ಥ, ನಿಮ್ಮ ಉದ್ದೇಶ ಓಮಿಕ್ರಾನ್ ತಡೆಯೋದಲ್ಲ ಬರೀ ದಂಡ ಕಟ್ಟಿಸ್ಕೊಳ್ಳೋದು ಅಷ್ಟೇ ಅಂತ ಆಯ್ತಲ್ಲ” ಅಂದೆ.
ಏನಾರ ಮಾಡ್ಕಳಿ ಮೇಡಮ್ ನಾವ್ ಅವೇರ್ನೆಸ್ ಬರೋದಿಕ್ಕೆ ರೂಲ್ಸ್ ಫಾಲೋ ಮಾಡ್ತೀವಿ ದಂಡ ಕಟ್ಟಾಯ್ತಲ್ಲ ಮುಗಿತು. ಮಾಸ್ಕ್ ಹಾಕ್ಕೊಳಿ ಬಿಟ್ಕೊಳಿ ಅಂದ್ರು…
“ಸರಿ ನಾ ಏನಾದ್ರೂ ಮಾಡ್ತೀನಿ ಆದ್ರೆ ನೀವು ಒಂದು ಕೆಲಸ ಮಾಡಿ ಮನೆಯಲ್ಲೇ ಮಾಸ್ಕ್ ಮರೆತು ಬಂದೋರು, ಅಥವಾ ದಾರಿ ಮಧ್ಯೆ ಕಳಕೊಂಡವರು ಮಾಸ್ಕ್ ಹಾಕ್ಕೊಳ್ಳೋಕೆ ಮರೆತು ಅರ್ಜೆಂಟಲ್ಲಿ ಬಂದಿರೋರು, ಅಥವಾ ದಂಡ ಕಟ್ಟೋಕೆ ಕಿಸೆಯಲ್ಲಿ 100 ರೂ. ಇಲ್ಲದೇ ಇರುವವರೂ ಇರ್ತಾರೆ. ದಂಡ ಏನೋ ಕಟ್ತಾರೆ ಆದ್ರೆ ಕೊಟ್ಟಾದ್ಮೇಲೆ ಮತ್ತೆ ಮಾಸ್ಕ್ ಇಲ್ದೇ ಊರೆಲ್ಲ ಓಡಾಡ್ತಾರೆ. ಹೆಂಗಿದ್ರೂ 100 ರೂ. ತಗೋಳ್ತೀರಿ 10 ರೂ. ದು ಎಲ್ರಿಗೂ ಒಂದೊಂದು ಮಾಸ್ಕ್ ಆದ್ರೂ ಕೊಟ್ಟು ಕಳಿಸೋ ವ್ಯವಸ್ಥೆ ಇಟ್ಕೊಳ್ಳಿ” ಅಂದೆ.
“ಅಯ್ಯೋ ಏನ್ ಮೇಡಂ ನೀವು ಪೋಲೀಸರ ಹತ್ರಾನೇ ತಮಾಷೆ ಮಾಡ್ತಿದ್ದೀರಿ. ನಡೀರಿ ನಡೀರಿ ” ಅಂತ ಹಲ್ಲು ಕಿರಿದು ಕಳ್ಸಿದ..
ಮುಂದೆ ಹೋದ್ರೆ ನಾಳೆಯಿಂದ ಎರಡು ದಿನ ಕರ್ಫ್ಯೂ ಅಂತ ಮಾರ್ಕೆಟ್ ಫುಲ್ ರಶ್. ಮೇಲಾಗಿ 50% ಜನರ ಮುಖಕ್ಕೆ ಮಾಸ್ಕೇ ಇಲ್ಲದೇ ರಾಜಾರೋಷವಾಗಿ ಓಡಾಡ್ತಾ ಇದ್ದಾರೆ.
ಎಲ್ಲೂ ಯಾವ ಪೊಲೀಸ್ಸರೂ ಹೇಳೋರು ಕೇಳೋರೇ ಇಲ್ಲ..
ಆಮೇಲೆ ಅಂದ್ಕೊಂಡೆ “ಮೋಸ್ಟ್ಲೀ ಇವ್ರೆಲ್ಲ ಮೊದಲ ಸರ್ಕಲ್ ನಲ್ಲೇ 100 ರೂ. ಕೊಟ್ಟು ಮಾಸ್ಕ್ ಹಾಕ್ಕೊಳ್ಳದೇ ಓಡಾಡೋಕೆ ಲೈಸನ್ಸ್ ತಂದ್ಕೊಂಡಿದ್ದಾರೆ” ಅಂತ
ತಡಿರಿ ಕಥೆ ಇನ್ನಾ ಮುಗ್ದಿಲ್ಲ…
ಆಮೇಲೆ ಮನೆಗೆ ಬಂದು ಇವ್ರತ್ರ ದಂಡ ಕಟ್ಟಿ ಬಂದೆ ಅಂತ ರಿಸಿಪ್ಟ್ ತೋರ್ಸಿದೆ.
ಅಯ್ಯೋ ಇದೇನು ಇದ್ರಲ್ಲಿ ಸಿಗರೇಟು, ತಂಬಾಕು, ವಿತರಣೆ ಅಪರಾಧ ಅಂತೆಲ್ಲ ಇದೆ. ಮಾರಾಯ್ತಿ ಅಂತ ನಗೋಕೆ ಶುರು ಮಾಡಿದ್ರು…
“ಅಯ್ಯೋ ಹೌದಲ್ಲಾ ನೋಡೇ ಇಲ್ಲ ಅಂತಿದ್ರೆ… ಇರು ಇದು ಹಂಗೇ ಇಟ್ಕೋತೀನಿ ನಿನ್ ಹೆಸರಲ್ಲಿ ರಿಸಿಪ್ಟ್ ಹರಿದು ದಂಡ ಕಟ್ಟಿದ ಜೀವನದ ಮೊದಲ ಕ್ರಿಮಿನಲ್ ಕೇಸ್ ಇದು. ಅಂತ ಕಾಲು ಎಳೀತಾ ಇದ್ರು… ಫ್ಯಾಮಿಲಿ ಗ್ರೂಪ್ ಗಳಲ್ಲಿ ಕಳಿಸಿ ತಮಾಷೆ ಮಾಡ್ತಿದ್ರು
“ಖರ್ಮ ಇದ್ರಲ್ಲಿ ಹಿಂಗೆಲ್ಲ ಭಾನಗಡಿ ಬರ್ದಿದೆ ಅಂತ ಅಲ್ಲೇ ಗೊತ್ತಾಗ್ಬೇಕಿತ್ತು ಆ ಪೊಲೀಸನ ಹತ್ರ ಬ್ಯಾರೆ ರಿಸಿಪ್ಟ್ ಕೊಟ್ರೆ ಮಾತ್ರ ದುಡ್ ಕೊಡ್ತೀನಿ ಅಂತ ಜಗಳ ಮಾಡ್ತಿದ್ದೆ” ಅಂದೆ…