ಗುರುರಾಜ ದೇಸಾಯಿ
ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನಲ್ಲಿ 15 ನಿಮಿಷಗಳ ಕಾಲ ಫ್ಲೈ ಓವರ್‌ನಲ್ಲಿ ಸಿಲುಕಿದ ವಿಚಾರ ಈಗ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಇದಕ್ಕಾಗಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಆದರೆ ಪ್ರಧಾನಿ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜನ ರಸ್ತೆ ಬಂದ್ ಮಾಡಿದ್ದ ಕಾರಣ ಫ್ಲೈ ಓವರ್ ಮೇಲೆ ಅವರು 15 ನಿಮಿಷ ಸಿಲುಕಿದ್ದರು. ಭದ್ರತೆ ಸರಿಯಾಗಿಲ್ಲ ಎಂಬ ನೆಪವನ್ನು ಒಡ್ಡಿ, ಬ್ಲೂ ಬುಕ್ ನಿಯಮ ಪಾಲಿಸಿಲ್ಲ ಎಂದು ಪ್ರಧಾನಿಯವರು ಸಮಾವೇಶವನ್ನು ರದ್ದುಗೊಳಿಸಿದರು.
ಏನಿದು ಬ್ಲೂ ಬುಕ್ : ಪ್ರಧಾನಿ ಭದ್ರತೆ ನೋಡಿಕೊಳ್ಳುವ ಎಸ್‌ಪಿಜಿ ತನ್ನದೇ ಆದ ಮಾರ್ಗಸೂಚಿ ಹೊಂದಿದೆ. ಇದನ್ನು ಬ್ಲೂ ಬುಕ್ ಎಂದು ಕರೆಯುತ್ತಾರೆ. ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವಾಗ ಬದಲಿ ಮಾರ್ಗವನ್ನು ಸಹ ಪೊಲೀಸರು ತಯಾರು ಮಾಡಿರಬೇಕು. ಗುಪ್ತಚರ, ಎಸ್ಜಿಪಿ ಹಾಗೂ ಕೇಂದ್ರದ ಅಧಿಕಾರಿಗಳು ಮೊದಲೇ ಅಲ್ಲಿ ಹೋಗಿ, ಪ್ರತಿ ಸ್ಥಳ ಪರಿಶೀಲಿಸಿ, ಎಲ್ಲಿ ಎಷ್ಟು ಜನ ಸೇರಬೇಕು ಎಂದು ತೀರ್ಮಾನಿಸಿರುತ್ತಾರೆ. ಪ್ರಧಾನಮಂತ್ರಿಗಳ ಹೆಲಿಕಾಪ್ಟರ್ ಎಲ್ಲಿ ಇಳಿಯಬೇಕು, ಅವರು ಎಲ್ಲಿ ಸಭೆ ಮಾಡುತ್ತಾರೆ, ಯಾರು ಇರಬೇಕು ಎಂಬ ಮಾರ್ಗಸೂಚಿಗಳನ್ನು ಹೊಂದಿರುವುದುಕ್ಕೆ ಬ್ಲೂ ಬುಕ್ ಎನ್ನುತ್ತಾರೆ.
ಪ್ರಧಾನ ಮಂತ್ರಿ ಪ್ರಯಾಣ ಮಾಡುವ ಮುನ್ನ ಅವರ ಬೆಂಗಾವಲು ವಾಹನಗಳು ಮೊದಲೇ ಸಂಚಾರ ಮಾಡಿ ಪರಿಸ್ಥಿತಿ ನೋಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಾರೆ. ರಸ್ತೆಯಲ್ಲಿ ಹೋದರೆ, ಮೊದಲು ಹತ್ತಾರು ಗಾಡಿ ಹೋಗಿ, ನಂತರ ಅವರ ಕಾರು ಭದ್ರತೆಯೊಂದಿಗೆ ಹೋಗುತ್ತದೆ. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿದೇಶಿ ಮಾದರಿಯ ಬುಲೆಟ್ ಪ್ರೂಫ ಕಾರಿದ್ದರೂ, ಪಂಜಾಬ್ ಸರ್ಕಾರದ ಮೇಲೆ ಆರೋಪ ಮಾಡಿರುವುದು ಆಚ್ಚರಿಯ ಬೆಳವಣಿಗೆಯಾಗಿದೆ. ಪ್ರಧಾನಿ ಸಾಗುವ ಮಾರ್ಗದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂಬ ಗುಪ್ತಚರ ಇಲಾಖೆ ವರದಿಯನ್ನು ಪಂಜಾಬ್ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು ಮತ್ತು ಬದಲಿ ಮಾರ್ಗದ ವ್ಯವಸ್ಥೆಯನ್ನು ಸಹ ಪೊಲೀಸರು ಮಾಡಿರಲಿಲ್ಲ ಎಂಬ ಮಾತುಗಳಿವೆ. ಅದೇನೆ ಇರಲಿ, ಪ್ರಧಾನಮಂತ್ರಿಯೊಬ್ಬರ ಸುರಕ್ಷತೆಯ ವಿಷಯದಲ್ಲಿ ನಿಜಕ್ಕೂ ಲೋಪವಾಗಿದೆಯೇ? ಅದಕ್ಕೆ ಹೊಣೆ ಯಾರು? ಇದನ್ನು ರಾಜಕೀಯಕ್ಕೆ ಯಾಕೆ ತಿರುಗಿಸಿದರು? ಪ್ರಧಾನಿಗೆ ಭದ್ರತೆ ನೀಡದೆ ಇರುವುದಕ್ಕೆ ಕೇಂದ್ರ ಗೃಹಖಾತೆಯನ್ನು ಹೊಣೆಯಾಗಿಸಬೇಕಾ ಅಥವಾ ಎಸ್‌ಜಿಪಿ ಮುಖ್ಯಸ್ಥರನ್ನು ಹೊಣೆಯಾಗಿಸಬೇಕಾ ಎಂಬ ಪ್ರಶ್ನೆಗಳೆದ್ದಿವೆ.
20 ನಿಮಿಷ ಫ್ಲೈ ಓವರ್ ಮೇಲೆ ಕಾಯ್ದ ವಿಚಾರವನ್ನು ಬೇರೆ ರೀತಿ ತಿರುಗಿಸಿ ಭದ್ರತಾ ವೈಫಲ್ಯದಿಂದಾಗಿ ವಾಪಸ್ಸ ಹೊರಡುತ್ತಿದ್ದೇನೆ. ಪಂಜಾಬ್ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ಎಂದು ಮೋದಿ ಹೇಳಿರುವುದರ ಹಿಂದೆ ವಾಸ್ತವ ಅಂಶ ಏನಿದೆ ಎಂಬುದು ಮುಖ್ಯವಾಗಿ ತಿಳಿಯಬೇಕಾದ ವಿಚಾರ. ಈ ಘಟನೆಯನ್ನು ರಾಜಕೀಯಕ್ಕೆ ತಿರುಗಿಸುವ ಅಗತ್ಯ ಪ್ರಧಾನಿಯವರಿಗೆ ಇರಲಿಲ್ಲ. ಭಧ್ರತೆಯ ಬಗ್ಗೆ ಖಚಿತ ಮಾಡಿಕೊಂಡೆ ಇಲ್ಲಿಯವರೆಗೆ ಪ್ರಧಾನಿಯವರು ಪ್ರಯಾಣ ಮಾಡಿದ್ದಾರೆ. ಆದರೆ ಪಂಜಾಬ್ ನಲ್ಲಿನ ಘಟನೆಯನ್ನು ಮಾತ್ರ ಈ ರೀತಿ ತಿರುಗಿಸಿದ್ದಕ್ಕೆ ಹಲವು ಕಾರಣಗಳಿವೆ.
ಮೆರವಣಿಗೆಗೆ ಬಂದಿದ್ದು ಕಮ್ಮಿ ಜನ : ಪ್ರಧಾನಿಯವರು ಭಾಗವಹಿಸಬೇಕಿದ್ದ ಚುನಾವಣಾ ಮೆರವಣಿಗೆಗೆ 70 ಸಾವಿರ ಜನರನ್ನು ಸೇರಿಸುವ ಅಂದಾಜನ್ನು ಅಲ್ಲಿಯ ಬಿಜೆಪಿ ಘಟಕ ಮಾಡಿಕೊಂಡಿತ್ತು. ಕಾರ್ಯಕ್ರಮದ ಸಮಯ ಆರಂಭವಾಗಿದ್ದರೂ ಸಂಖ್ಯೆ 500 ದಾಟಲಿಲ್ಲ. ಪ್ರಧಾನಿಗಳು ಇನ್ನೇನು ಕೆಲ ನಿಮಿಷಗಳಲ್ಲಿ ಬರುತ್ತಾರೆ ಎಂದು ತಿಳಿಸಿದರೂ ಜನ ಸೇರಲೆ ಇಲ್ಲ. ಅಂತಿಮವಾಗಿ ಜನ ಸೇರಿದ್ದು 700ರ ಆಸುಪಾಸು. ಇನ್ನೂ ಇಷ್ಟು ಕಮ್ಮಿ ಜನರು ಇರುವ ಮೆರವಣಿಗೆಯಲ್ಲಿ ಭಾಗವಹಿಸಿದರೆ “ಜನರೇ ಇಲ್ಲದ ಕಾರ್ಯಕ್ರಮ “ಎಂದು ಮಾಧ್ಯಮದಲ್ಲಿ ಸುದ್ದಿಯಾಗಿ ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎಂದು ಅನುಕಂಪದ ನಾಟಕವಾಡಿದ್ದಾರೆ. ಚುನಾವಣೆಗಳು ಹತ್ತಿರ ಇರುವಾಗ ಈ ರೀತಿ ನರೇಂದ್ರ ಮೋದಿಯವರು ಅನುಕಂಪದ ನಾಟಕವಾಡುವುದು ಹೊಸದೇನು ಅಲ್ಲ. ನನಗೆ ಜೀವ ಬೆದರಿಕೆ ಕರೆ ಬರುತ್ತದೆ ಎಂದ ಅವರು ಹಲವು ಬಾರಿಯ ಚುನಾವಣೆಗಳಲ್ಲಿ ಆಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಚುನಾವಣೆ ಮುಗಿದಾದ ಮೇಲೆ ಅದು ಏನು? ಏತ್ತು? ಯಾರು ಬೆದರಿಕೆ ಹಾಕಿದ್ದರು ಯಾವುದರ ಬಗ್ಗೆಯೂ ಒಂದು ಸಣ್ಣ ತನಿಖೆಯನ್ನು ನಡೆಸುವುದಿಲ್ಲ. ಈಗ ಪಂಚಾಬ್ ಟ್ರಾಫಿಕ್ ಘಟನೆ ಅನುಕಂಪ ಗಿಟ್ಟಿಸಲು ಮಾಡಿದ ನಾಟಕ ಎಂಬುದು ಪ್ರಭಲವಾಗಿ ಅರ್ಥವಾಗುತ್ತದೆ.
ದಲಿತ ಸಿಎಂ ಹೆಸರು ಕೆಡಿಸಲು ಹೂಡಿದ ತಂತ್ರ : ಪಂಜಾಬ್ ಸಿಎಂ ಚರಣಜಿತ್ ಸಿಂಗ್ ದಲಿತರಾಗಿದ್ದು, ಅವರ ಮೇಲೆ ಕೆಟ್ಟ ಹೆಸರು ಬರುವುದಕ್ಕಾಗಿ ಈ ರೀತಿಯ ಅಪಪ್ರಚಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿರುವ ಅಂಶವು ಮುಖ್ಯವಾಗಿದೆ. ದಲಿತರ ಬೆಳವಣಿಗೆಯನ್ನು ಮೋದಿ, ಬಿಜೆಪಿ ಮತ್ತು ಆರ್.ಎಸ್‌ಎಸ್ ಸಹಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇತ್ತಿಚೆಗೆ ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿಗೆ ಅಲ್ಲಿ ಹಿನ್ನಡೆಯಾಗಿತ್ತು. ಆ ವಿಚಾರವನ್ನು ತಿರುಗಿಸಲು ಪ್ರಧಾನಿ ಭದ್ರತೆ ವೈಫಲ್ಯದ ಅಸ್ತ್ರವನ್ನು ಬಳಸಿದ್ದಾರೆ.
ಪ್ರಧಾನಿ ಮೋದಿ ತಾವು ಕುಳಿತು ಕೊಳ್ಳುವ ಖುರ್ಚಿಯನ್ನು, ಭಾಷಣ ಮಾಡುವ ಪೋಡಿಯಂನ್ನು ಹತ್ತಾರು ಬಾರಿ ತಪಾಸಣೆ ಮಾಡುವ ಅವರ ಬೆಂಗಾವಲು ರಕ್ಷಕರು, ಈ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬದಲಿ ಮಾರ್ಗದಲ್ಲಿ ಹೋಗಲು ಸೂಚನೆ ನೀಡಬಹುದಿತ್ತು. ಒಂದೇ ಕ್ಲಿಕ್ ನಲ್ಲಿ ಮೋದಿ ಜಗತ್ತನ್ನು ನೋಡುತ್ತಾರೆ ಎಂದು ಕೊಂಡಾಡಲಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಟ್ರಾಫಿಕ್ ಎಲ್ಲಿದೆ ಎಂಬುದನ್ನು ಗೂಗಲ್ ತೋರಿಸಿ ಬಿಡುತ್ತದೆ. ಆದರೆ ಡಿಜಿಟಲ್ ಡಿಜಿಟಲ್ ಎಂದು ಹೇಳಿದ ಪ್ರಧಾನಿಗೆ ಇದು ಕಾಣಲೇ ಇಲ್ಲವಾ? ಆಯ್ತು, ಟ್ರಾಫಿಕ್ ಇದ್ದದ್ದು ನಿಜ, ಆದರೆ ಪ್ರತಿಭಟನೆ ಮಾಡುತ್ತಿದ್ದದ್ದು ರೈತರು. ರೈತರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ? ಅವರ ಬೇಡಿಕೆಗಳೇನು ಎಂದು ಕೇಳಬಹುದಿತ್ತು ಅಲ್ಲವೆ? ಅವರ ಹೋರಾಟವನ್ನು ಭದ್ರಾತಾ ವೈಫಲ್ಯ ಎಂದು ಅಣುಕಿಸಿದ್ದಿ ಸರಿಯೇ? ಅನ್ನದಾತನಿಗೆ ಮೋದಿಯವರು ಅವಮಾನಿಸಿದ್ದು ಸರಿಯೇ? ದೇಶದ ಜನರ ಮೇಲೆ ನಂಬಿಕೆ ಇಡದೆ ಇರುವುದು ಏನನ್ನು ತೋರಿಸುತ್ತದೆ. ಒಟ್ಟಾರೆ ಮೋದಿಯವರು ಈ ಘಟನೆಯನ್ನು ಅನುಕಂಪ ಬಳಸಿ ರಾಜಕೀಯದ ಲಾಭ ಪಡೆಯಲು ಬಳಸಿದ್ದಾರೆ ಎಂಬುದನ್ನು ದೇಶದ ಜನ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ.
ನಿಜಕ್ಕೂ ಭದ್ರತಾ ವೈಫಲ್ಯ ಆಗಿದ್ದರೆ, ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿಯೇ ಭದ್ರತಾ ಲೋಪದ ಕುರಿತ ತನಿಖೆ ನಡೆದಲ್ಲಿ ಸತ್ಯ ಹೊರಬರುವ ನಿರೀಕ್ಷೆ ಇದೆ. ಆದಷ್ಟು ಬೇಗ ಸತ್ಯಾಸತ್ಯತೆ ಹೊರ ಬೀಳಲಿ ಪ್ರಧಾನಿಯವರು ಹೇಳುತ್ತಿರುವುದು ಸುಳ್ಳಾ, ನಿಜವಾ ಎಂಬ ಸತ್ಯ ಜಗಜ್ಜಾಹಿರಾಗಲಿ.