ದ್ವೇಷ ಹರಡಲು ‘ಬಿಜೆಪಿ ಐಟಿ ಸೆಲ್’ ನಿಂದ ‘ಬುಲ್ಲಿ ಬಾಯಿ’ ಆ್ಯಪ ಬಳಕೆ

ನವದೆಹಲಿ: ದೇಶದಲ್ಲಿ ವಿವಾದವನ್ನು ಸೃಷ್ಟಿಸಿರುವ ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಅಸ್ಸಾಂನ ಜೋರ್ಹಾಟ್‌ನಲ್ಲಿ ನೀರಜ್‌ ಬಿಷ್ಣೋಯಿ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಗುರುವಾರ ಬಂಧಿಸಿದ್ದಾರೆ. ಹಾಗೂ ದ್ವೇಷವನ್ನು ಹರಡಲು ಈ ಆ್ಯಪ್ ಬಳಕೆ ಮಾಡಲಾಗಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ.

‘ನೀರಜ್‌ ಈ ಪ್ರಕರಣದ ಮುಖ್ಯ ಸಂಚುಕೋರ ಹಾಗೂ ಆ್ಯಪ್‌ಅನ್ನು ಸೃಷ್ಟಿಸಿದಾತ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಬಂಧಿಸಿರುವ ಮೊದಲ ಆರೋಪಿ ಈತ. ಪ್ರಕರಣ ಕುರಿತು ಮುಂಬೈ ಸೈಬರ್‌ ಕ್ರೈಂ ಪೊಲೀಸರು ಸಹ ತನಿಖೆ ನಡೆಸುತ್ತಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ.

ಶ್ವೇತಾ ಸಿಂಗ್‌ (18) ಹಾಗೂ ದೆಹಲಿ ವಿ.ವಿಯಲ್ಲಿ ಬಿಎಸ್‌ಸಿ ಅಧ್ಯಯನ ಮಾಡುತ್ತಿರುವ ಮಯಂಕ್ ರಾವಲ್ (20) ಎಂಬ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ. ವಿಶಾಲಕುಮಾರ್‌ ಝಾ (21) ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ದೆಹಲಿ ಪೊಲೀಸ್‌ ವಿಶೇಷ ಘಟಕದ ಅಂಗಸಂಸ್ಥೆಯಾದ ‘ಇಂಟೆಲಿಜೆನ್ಸ್ ಫ್ಯೂಜನ್ ಆಯಂಡ್ ಸ್ಟ್ರ್ಯಾಟೆಜಿಕ್ ಆಪರೇಷನ್ಸ್‌ನ (ಐಎಫ್‌ಎಸ್‌ಒ) ಅಧಿಕಾರಿಗಳು ಅಸ್ಸಾಂನ ಜೋರ್ಹಾಟ್‌ ನಿವಾಸಿ ನೀರಜ್‌ರನ್ನು ಬಂಧಿಸಿದ್ದಾರೆ. ಈತ ಭೋಪಾಲ್‌ನಲ್ಲಿರುವ ವೆಲ್ಲೂರ್ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್‌ ಓದುತ್ತಿದ್ದಾನೆ.

ʻಗಿಟ್‌ಹಬ್ʼ ವೇದಿಕೆಯಲ್ಲಿ ಬುಲ್ಲಿ ಬಾಯಿ ಆ್ಯಪ್‌ಅನ್ನು ತಾನೇ ಅಭಿವೃದ್ಧಿಪಡಿಸಿದ್ದಾಗಿ ನೀರಜ್‌ ಬಿಷ್ಣೋಯಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಐಎಫ್‌ಎಸ್‌ಒ ಡಿಸಿಪಿ ಕೆ.ಪಿ.ಎಸ್‌.ಮಲ್ಹೋತ್ರಾ ಹೇಳಿದ್ದಾರೆ.

‘ಈ ಕುರಿತ ತಾಂತ್ರಿಕ ಕುರುಹುಗಳನ್ನು ಆತನ ಲ್ಯಾಪ್‌ಟಾಪ್‌ನಲ್ಲಿ ಪತ್ತೆಮಾಡಲಾಗಿದೆ. ಇಂಟರ್‌ನೆಟ್‌ ಪ್ರೊಟೊಕಾಲ್ ಡಿಟೇಲ್ ರೆಕಾರ್ಡ್ಸ್ (ಐಪಿಡಿಆರ್‌) ಹಾಗೂ ಇತರ ಗೇಟ್‌ವೇ ಬಳಸಿ ಪ್ರಕರಣದ ತಾಂತ್ರಿಕ ವಿಶ್ಲೇಷಣೆಯನ್ನೂ ಮಾಡಲಾಗಿದೆ’ ಎಂದು ಹೇಳಿದ್ದಾರೆ.

100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವ ಪ್ರಕರಣ ಇದಾಗಿದೆ.

ಸುದ್ದಿಪೋರ್ಟಲ್ ‘ದಿ ವೈರ್‌’ನ ಪತ್ರಕರ್ತೆ ಇಸ್ಮತ್ ಆರಾ ಎಂಬುವವರು ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಇನ್ನೊಂದೆಡೆ, ಮುಂಬೈ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

ದ್ವೇಷ ಹರಡಲು’ಬುಲ್ಲಿ ಬಾಯಿ’ ಆ್ಯಪ ಬಳಕೆ : ದ್ವೇಷವನ್ನು ವ್ಯವಸ್ಥಿತವಾಗಿ ಹರಡಲು ಬಿಜೆಪಿ ತನ್ನದೇ ಆದ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಆ ಅಪ್ಲಿಕೇಶನ್ ಮೂಲಕ ರಾಜಕೀಯ ವೈರಿಗಳನ್ನು ಟೀಕಿಸಲು, ತನ್ನ ವಿಮರ್ಶಕರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತದೆ ಎಂಬ ಅಂಶವನ್ನು TheWire.in ತನಿಖಾ ವರದಿ ಬಹಿರಂಗಪಡಿಸಿದೆ. ಈ ವರದಿಯನ್ನು ಆಯುಷ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಸಿದ್ಧಪಡಿಸಿದ್ದಾರೆ.

ದಿ ವೈರ್‌ನ ತನಿಖಾ ವರದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ : Tek Fog: An App With BJP Footprints for Cyber Troops to Automate Hate, Manipulate Trends

2020ರ ಎಪ್ರಿಲ್‌ನಲ್ಲಿ ಬಿಜೆಪಿ ಐಟಿಸೆಲ್ ಉದ್ಯೋಗಿ ಎಂದು ಹೇಳಿಕೊಂಡ ಆರತಿ ಶರ್ಮಾ ಎಂಬವರು ಬಿಜೆಪಿ ಐಟಿ ಸೆಲ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುವ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಬಿಜೆಪಿ ಐಟಿ ಸೆಲ್ ಅಭಿವೃದ್ಧಿ ಪಡಿಸಿದ ಟೆಕ್ ಫಾಗ್ (Tek Fog) ಎಂಬ ಅಪ್ಲಿಕೇಶನ್ ಕುರಿತು ಅವರು ಉಲ್ಲೇಖಿಸಿದ್ದರು. ಈ ಜಾಡು ಹಿಡಿದು ಹೋದ ದಿ.ವೈರ್ ಹಲವು ಆಘಾತಕಾರಿ ಅಂಶವನ್ನು ಹೊರಗೆಡವಿದೆ. ಟೆಕ್ ಫಾಗ್ ಅಪ್ಲಿಕೇಶನ್ ಮೂಲಕ ಆಡಳಿತ ರೂಢ ಬಿಜೆಪಿಯ ವೈರಿ ರಾಜಕೀಯ ಪಕ್ಷಗಳನ್ನು ವಿಮರ್ಶಿಸಲು, ಸರ್ಕಾರದ ವಿರುದ್ಧದ ವಿಮರ್ಶಕರನ್ನು ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಟ್ವೀಟ್ ಸರಣಿಯಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಖಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ನಲ್ಲಿರುವ ಹ್ಯಾಷ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು ಗುರಿಮಾಡಿಸಲು ವಿಷಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಟೆಕ್ ಫಾಗ್ ಆಪ್ ಮೂಲಕ ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದೆ.

ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾದರೆ ಸರ್ಕಾರಿ ಉದ್ಯೋಗ ನೀಡುವುದಾಗಿ ಆಮಿಷಗಳನ್ನು ನೀಡಲಾಗಿತ್ತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದರು.

ಈ ಆರೋಪಗಳನ್ನು ಪರಿಶೀಲಿಸಲು ವೈರ್ ತಂಡವು ಕಳೆದ ಎರಡು ವರ್ಷಗಳ ಕಾಲ ತನಿಖೆ ಕೈಗೊಂಡಿದ್ದು, ಅಪ್ಲಿಕೇಶನ್ ಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಹಾಗೂ ಮೇಲೆ ಹೇಳಿದ ಉದ್ಯೋಗಿಗೂ ಐಟಿ ಸೆಲ್ ಗೂ ಇರುವ ಸಂಬಂಧವನ್ನು ಕೂಡಾ ಪರಿಶೀಲಿಸಿದ್ದು, ಪ್ಲೇ ಸ್ಲಿಪ್ ಗಳನ್ನು, ಈಮೇಲ್ ಗಳನ್ನು ಪರಿಶೀಲಿಸಿದೆ. ಅದಕ್ಕೆ ಸಂಬಂಧಪಟ್ಟ ಹಲವು ಸ್ಕ್ರೀನ್ ಶಾಟ್ ಗಳು ವೈರ್ ತಂಡಕ್ಕೆ ದೊರೆತಿದ್ದು, ಷರತ್ತಿನ ಮೇರೆಗೆ ಈ ಗೌಪ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಹೊರ ಹಾಕಿಲ್ಲ ಎಂದು ವೈರ್ ವರದಿ ಹೇಳಿದೆ.

ತನಗೆ ಲಭಿಸಿರುವ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ವಿಶ್ಲೇಷಿಸಿರುವ ವೈರ್, ಭಾರತದಲ್ಲಿ ಪಕ್ಷಾಪಾತದಿಂದ ಮಾಹಿತಿ ಹಂಚಲು ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ.

 ಏನಿದು ಬಿಲ್ಲಿ ಬಾಯಿ : ಬುಲ್ಲಿ  ಬಾಯಿ  ಅಪ್ಲಿಕೇಶನ್‌ನಲ್ಲಿ ಟ್ವಿಟರ್‌ನ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ   ಕದ್ದ ಅನೇಕ ಮಹಿಳೆಯರ ಫೋಟೋಗಳನ್ನು  ಹಾಕಲಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಮಹಿಳೆಯರ ಆನ್‌ಲೈನ್ ಬಿಡ್ಡಿಂಗ್ ಮಾಡಲಾಗುತ್ತದೆ.  ಈ ಅಪ್ಲಿಕೇಶನ್ ಅನ್ನು GitHub ನಿಂದ ಡೌನ್‌ಲೋಡ್ ಮಾಡಲಾಗಿದೆ. ಗಿಟ್‌ಹಬ್ ಸಾಫ್ಟ್‌ವೇರ್ ಕೋಡಿಂಗ್ ಪ್ರೊವೈಡರ್ ಪ್ಲಾಟ್‌ಫಾರ್ಮ್ ಆಗಿದ್ದು, ಅಂತಹ ಓಪನ್ ಸೋರ್ಸ್ ಸಮುದಾಯ ಅಪ್ಲಿಕೇಶನ್‌ಗಳು ಕಂಡುಬರುತ್ತವೆ.

Donate Janashakthi Media

Leave a Reply

Your email address will not be published. Required fields are marked *