ಗುರುರಾಜ ದೇಸಾಯಿ
ಬೆಳಗಾವಿ ಅಧಿವೇಶನದ ಪ್ರಮುಖ ಉದ್ದೇಶ ಇದ್ದದ್ದು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಎಂಬ ಕಾರಣದಿಂದ. ಆದರೆ ಈ ಕುರಿತಾದ ಚರ್ಚೆಗೆ ಅವಕಾಶ ಸಿಕ್ಕಿದ್ದೇ ಕಡಿಮೆ. ಕೊನೆ ದಿನವಾದ ಶುಕ್ರವಾರ ಕೆಲ ಹೊತ್ತು ಚರ್ಚೆ ನಡೆದರೂ ಸಮರ್ಪಕವಾಗಿ ಹಾಗೂ ಸಮಗ್ರವಾದ ಚರ್ಚೆಗೆ ಕಾಲಾವಕಾಶ ಸಿಗಲಿಲ್ಲ. ಸ್ವತ: ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಬಹುತೇಕ ಸದಸ್ಯರು ಚರ್ಚೆಗೆ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕಕ್ಕೆ ಮೀಸಲು ಅಂತಾರೆ, ಕಳೆದ 10 ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚ್ಚರೆ ನಡೆಯಲಿಲ್ಲ. ಇಂದು ನಡೆದರೂ ಕೇವಲ ಐದು ಗಂಟೆ ಮಾತ್ರ ಚರ್ಚೆ ನಡೆದಿದೆ. ಇದನ್ನು ಗಮನಿಸಿದರೆ, ಉತ್ತರ ಕರ್ನಾಟಕದ ಗತಿ-ಸ್ಥಿತಿ, ಕಥೆ ಇಷ್ಟೇನಾ? ಈ ಪ್ರಶ್ನೆ ಯಾರನ್ನು ಕೇಳಬೇಕು, ಯಾರ ಮುಂದೆ ಅಳಲು ತೋಡಿಕೊಳ್ಳಬೇಕು? ಎಂಬ ಪ್ರಶ್ನೆ ಆ ಭಾಗದ ಜನರದ್ದಾಗಿದೆ.
ಶಿಕ್ಷಣ, ನೀರಾವರಿ, ಮೂಲ ಸೌಲಭ್ಯ, ಅಭಿವೃದ್ಧಿ ವಿಚಾರದಲ್ಲಿ ಸರಕಾರಗಳ ವರ್ತನೆ, ಉದಾಸೀನತೆ ಈ ಭಾಗದ ಅಸಂಖ್ಯಾತರ ಮನದೊಳಗೆ ಇಂತಹ ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ. ನಿಮಗಾಗಿಯೇ ‘ಸುವರ್ಣ ವಿಧಾನ ಸೌಧ’ ಕಟ್ಟಿದ್ದೇವೆಂದು ಹೇಳುತ್ತಲೇ ಉತ್ತರ ಕರ್ನಾಟಕವನ್ನು ಮತ್ತೆ ಮತ್ತೆ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಯೋಜನೆಗಳು ಕಡತಗಳಲ್ಲೇ ಅಣಕಿಸುತ್ತಿವೆ, ಇದ್ದ ಸೌಲಭ್ಯಗಳನ್ನು ಕಿತ್ತುಕೊಂಡು ಬೇರೆ ಕಡೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಯುತ್ತಲೇ ಇದೆ. ವಿವಿಧ ಇಲಾಖೆಗಳಲ್ಲಿ ನೂರಾರು ಸಮಸ್ಯೆಗಳಿವೆ. ಆ ಭಾಗದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಅತೀವೃಷ್ಟಿ ಮಳೆಗೆ ಅಧಿವೇಶನ ನಡೆದ ಜಿಲ್ಲೆ ಸೇರಿದಂತೆ ಆ ಭಾಗದ ಜಿಲ್ಲೆಗಳು ನರಳಿ ಹೋಗಿವೆ. ಆದರೆ ಅವುಗಳ ಬಗ್ಗೆ ಹೆಚ್ಚು ಚರ್ಚೆ ಆಗಲಿಲ್ಲ.
ನಂಜುಂಡಪ್ಪ ವರದಿಯ ಪ್ರಕಾರವೇ 114 ಹಿಂದುಳಿದ ತಾಲ್ಲೂಕುಗಳ ಪೈಕಿ 59 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿಯೇ ಇವೆ. ಅದರಲ್ಲಿ 39 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು. ಅವು ಎಲ್ಲವೂ ಉತ್ತರದಲ್ಲಿಯೇ ಇವೆ. ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗದ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹೋಲಿಸಿದರೆ ಉತ್ತರದ ಬೆಳಗಾವಿ ಮತ್ತು ಕಲ್ಬುರ್ಗಿ ಕಂದಾಯ ವಲಯಗಳಲ್ಲಿ ತಲಾವಾರು ಆದಾಯ ಈಗಲೂ ಕಡಿಮೆಯೇ ಇದೆ. ಒಂದು ಪ್ರದೇಶವನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಲು ಅನೇಕ ಮಾನದಂಡಗಳು ಇವೆ. ಈ ಯಾವ ಮಾನದಂಡಗಳಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳು ಮುಂದೆ ಇಲ್ಲ. ಪ್ರತಿ ಬಾರಿಯೂ ಇಲ್ಲ ಅಧಿವೇಶನ ನಡೆದಾಗ ಉತ್ತರ ಕರ್ನಾಟಕ ಬದಲಾವಣೆಗಾಗಿ ನಡೆಯುವ ಅಧಿವೇಶನ ಎಂದು ಆಸೆಗಣ್ಣಿನಿಂದ ಜನ ಕಾಯುತ್ತಾರೆ. ಆದರೆ ಇಲ್ಲಿಯವರೆಗೆ 1% ರಷ್ಟಾದರೂ ಚರ್ಚೆ, ಜಾರಿ ನಡೆದಿದೆಯೇ ಎಂಬುದಕ್ಕೆ ದಾಖಲೆಯೂ ಇಲ್ಲ, ಉತ್ತರವೂ ಇಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೆಪ ಮಾಡಿಕೊಂಡು ಬಹಳಷ್ಟು ಶಾಸಕರು ಅಧಿವೇಶನದಿಂದ ದೂರ ಉಳಿದಿದ್ದು ಅವರ ಕಾಳಜಿ ಎಂತದ್ದು ಎಂದು ತೋರಿಸುತ್ತದೆ. ಸದನದ ಆರಂಭದಿಂದಲೂ ಶಾಸಕರ ಹಾಜರಾತಿ ಕಡಿಮೆ ಇರುವ ಬಗ್ಗೆ ಸಾರ್ವತ್ರಿಕ ಟೀಕೆ ವ್ಯಕ್ತವಾಗಿದ್ದರೂ, ಶಾಸಕರ ಹಾಜರಾತಿಯಲ್ಲಿ ಗಣನೀಯ ಹೆಚ್ಚಳವಾಗಲೇ ಇಲ್ಲ. ಇನ್ನೂ ಬಂದ ಶಾಸಕರು, ಸಚಿವರು, ಅಕಾರಿಗಳು ಬೆಂಗಳೂರಿನಿಂದ ಬಂದಿರುವುದು ಪಿಕ್ನಿಕ್ಗೆ ಎಂಬಂತೆ ಭಾಸವಾಗುತ್ತಿದೆ. ಶನಿವಾರ, ಭಾನುವಾರ ಬಂತೆಂದರೆ ಗೋವಾ ಪಿಕ್ನಿಕ್ ಹೋಗ್ತಾರೆ ಎಂದು ಜನ ಆಡಿಕೊಳ್ಳುತ್ತಿರುವ ಮಾತುಗಳು ಸತ್ಯ ಎನಿಸುತ್ತಿವೆ.
ಕೊರೊನಾ, ಲಾಕ್ಡೌನ್, ಅತೀವೃಷ್ಟಿ ಎಂಬ ಕಾರಣದಿಂದ ಮೂರುವರ್ಷಗಳಿಂದ ಇಲ್ಲಿ ಅಧಿವೇಶನ ನಡೆದಿರಲಿಲ್ಲ. ಹಾಗಾಗಿ ಈ ಬಾರಿಯ ಅಧಿವೇಶವನ್ನು ಜನ ಕುತೂಹಲದಿಂದ ನೋಡುತ್ತಿದ್ದರು. ಮುಖ್ಯವಾಗಿ ಸಿಎಂ ಈ ಭಾಗದವರೆ ಆಗಿದ್ದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಮಹತ್ವ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರ ನಿರೀಕ್ಷೆ ಸುಳ್ಳಾಯಿತು. ಸರಕಾರಕ್ಕೆ ಈ ಭಾಗದ ಸಮಸ್ಯೆ ಪರಿಹಾರ ಮಾಡುವುದಕ್ಕಿಂತ ಮತಾಂತರ ನಿಷೇಧ ಮಸೂದೆ ಜಾರಿ ಮಾಡುವುದು ಪ್ರಮುಖ ಅಜೆಂಡವಾಗಿತ್ತು ಎಂಬುದು ಸ್ಪಷ್ಟವಾಗಿದೆ. ಅಗತ್ಯವಿಲ್ಲದ ಮಸೂದೆಯನ್ನು ಜಾರಿ ಮಾಡುವುದಕ್ಕಾಗಿ ಸಮಯ ವ್ಯರ್ಥ ಮಾಡಿ ಅಗತ್ಯವಾಗಿ ಆಗಬೇಕಿದ್ದ ಅಭಿವೃದ್ಧಿಯ ಕಡೆ ಅಧಿವೇಶನ ಮುಖ ಮಾಡದಿರುವುದು ಆ ಭಾಗದ ಜನರಿಲ್ಲಿ ನಿರಾಸೆಯನ್ನು ತಂದಿದೆ. ಉತ್ತರ ಕರ್ನಾಟಕ “ಯಾರಿಗೂ ಬೇಡವಾದ ಕೂಸು” ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.