ಸೇವಾ ಭದ್ರತೆಯೂ ಇಲ್ಲ, ಖಾಯಮಾತಿಯೂ ಇಲ್ಲ- ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರ ಗೋಳು ಕೇಳುವವರು ಯಾರು?

ಗುರುರಾಜ ದೇಸಾಯಿ

ಸೇವಾ ಭದ್ರತೆ, ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ 8 ನೇ ದಿನಕ್ಕೆಕಾಲಿಟ್ಟಿದೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಗೌರವಧನ ಹೆಚ್ಚು ಮಾಡುವಂತೆ ಹಲವು ಬಾರಿ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಹಾಗಾಗಿ ಮತ್ತೆ ಈಗ ಅನಿರ್ಧಿಷ್ಟಾವಧಿ ಧರಣಿಗೆ ಕಾರಣವಾಗಿದೆ.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಉಪನ್ಯಾಸಕರು ಸೇವಾ ಭದ್ರತೆ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿಗೆ ತರಗತಿ ಬಹಿಷ್ಕರಿಸಿದ್ದಾರೆ. ಈ ಬಾರಿ ಸರಕಾರ ಪ್ರಮುಖ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸುವುದಾಗಿ ಅತಿಥಿ ಉಪನ್ಯಾಸಕರು ಘೋಷಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಲಿದೆ ಎಂಬುದನ್ನು ಸರಕಾರ ಅರಿಯಬೇಕು.

10-15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಇಲ್ಲದಾಗಿದೆ. ಬಹಳಷ್ಟು ಜನ 45 ರಿಂದ 50 ವರ್ಷ ಮೇಲ್ಪಟ್ಟವರಿದ್ದಾರೆ. ಅವರು ಇತರ ನೌಕರಿಗೆ ಪರೀಕ್ಷೆ ಬರೆಯುವ ವಯೋಮಾನವನ್ನು ಕಳೆದುಕೊಂಡಿದ್ದಾರೆ. ಕೇವಲ ಏಳುಂಟು ಸಾವಿರ ರೂ ಗೆ  ನಿತ್ಯ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ಬಿತ್ತುವ  ಅತಿಥಿ ಉಪನ್ಯಾಸಕನ ಎದೆಯಾಳದಲ್ಲಿ ನೋವೆ ತುಂಬಿಕೊಂಡಿದೆ. ಎರಡು ಮೂರು ತಿಂಗಳಿಗೊಮ್ಮೆ ವೇತನ ಬಿಡುಗಡೆಯಾಗುತ್ತದೆ. ಕೆಲ ಬಾರಿ ಅದು ಆರು ತಿಂಗಳಿಗೆ ಹೋದ ಉದಾಹರಣೆಯೂ ಇದೆ.  ಸರಕಾರ ನೀಡುವ ಅಲ್ಪ ಸಂಬಳದಲ್ಲಿ ನಗರ ಪ್ರದೇಶದಲ್ಲಿದ್ದು ಜೀವನ ನಿರ್ವಹಣೆ ಮಾಡುವುದ ಸುಲಭದ ಮಾತಲ್ಲ. ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ ಹೀಗೆ ಹತ್ತಾರು ಸವಾಲುಗಳಿವೆ. ಎಷ್ಟೊ ಅತಿಥಿ ಶಿಕ್ಷಕರು ಬಡ್ಡಿ ರೂಪದಲ್ಲಿ ಸಾಲ ಪಡೆದು ಜೀವನ ನಡೆಸುತ್ತಿದ್ದಾರೆ. ಸಮಾನ ಕೆಲಸಕ್ಕೆ- ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ರಾಜ್ಯ ಸರ್ಕಾರ ಕಾಯಂ ಉಪನ್ಯಾಸಕರಿಗೆ ನೀಡುವ ಸಂಬಳದ ಜತೆಗೆ ಅವರಿಗೆ ನೀಡುವ ಎಲ್ಲಾ ಸೇವಾ ಭದ್ರತೆಗಳನ್ನು ಅತಿಥಿ ಉಪನ್ಯಾಸಕರಿಗೂ ಒದಗಿಸಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಸರಕಾರ ಪದವಿ ಕಾಲೇಜುಗಳ ಮಕ್ಕಳ ಭವಿಷ್ಯ ನಿಂತಿರುವುದು ಅತಿಥಿ ಯಪನ್ಯಾಸಕರ ಮೇಲೆ. ಅವರು ಇಲ್ಲದೆ ಹೋದರೆ  ಉಪನ್ಯಾಸಕರ ಪರದಾಟ ಹೆಚ್ಚಾಗುತ್ತಿತ್ತು. ಒಬ್ಬ ಸರಕಾರಿ ಉಪನ್ಯಾಸಕನಿಗೆ ಲಕ್ಷಾಂತರ ರೂ ವೇತನ ನೀಡಬೇಕು. ಅದೇ ಅತಿಥಿ ಉಪನ್ಯಾಸಕರಾದರೆ ಎಂಟತ್ತು ಸಾವಿರ ರೂ ಕೆಲಸ ಮಾಡುತ್ತಾರೆ ಎಂಬ ಪಾಲಸಿ ಸರಕಾರದ್ದು. ಸರಕಾರಿ ನೇಮಕಾತಿ ಮಾಡಿಕೊಂಡರೆ ಲಕ್ಷ ರೂ ವೇತನ ನೀಡುವಲ್ಲಿ 10 ಜನ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಪಾಠ ಪ್ರವಚನ ನಿರ್ವಹಿಸಬಹುದು ಎಂಬುದು ಸರಕಾರದ ಲೆಕ್ಕಾಚಾರ ಇದ್ದಂತೆ ಕಾಣುತ್ತಿದೆ.  15 ವರ್ಷಗಳಿಂದ ಅತಿಥಿ ಉಪನ್ಯಾಸಕಾರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದುವರೆಸುವ ಭರವಸೆಯನ್ನೂ ನೀಡುತ್ತಿಲ್ಲ. ಎಷ್ಟೋಜನ ಅತಿಥಿ ಉಪನ್ಯಾಸಕರು ಒಂದು ಬಾರಿ ಆಯ್ಕೆಯಾದರೆ ಮತ್ತೆ ಮರುವರ್ಷ ಅರ್ಜಿ ಸಲ್ಲಿಸಬೇಕು. ಆಗ ಇವರೇ ಆಯ್ಕೆ ಯಾಗುತ್ತಾರೆ ಎಂಬ ಭರವೆಸಯೂ ಇರುವುದಿಲ್ಲ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು ಕಂಗಾಲಾಗಿಸಿದೆ.

‘ಅತಿಥಿ ಉಪನ್ಯಾಸಕರು ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಪಡೆದಿದ್ದರೂ ಅವರ ಪರಿಸ್ಥಿತಿ ಕೂಲಿ ಕಾರ್ಮಿಕರಿಗಿಂತ ಹೀನಾಯವಾಗಿದೆ. ಜೀತಮುಕ್ತ ಸಮಾಜ,- ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಕಾನೂನು ತರುತ್ತಿರುವ ಸರ್ಕಾರಗಳು ಶಿಕ್ಷಣ ಇಲಾಖೆಯಲ್ಲಿ ಜೀತ ಮತ್ತು ಶೋಷಣೆಯ ವಾತಾವರಣ ನಿರ್ಮಿಸಿರುವುದು ದೇಶದ ದುರಂತ’ ಎಂಬುದು ಕಳವಳಕಾರಿ ವಿಚಾರವಾಗಿದೆ. ‘ಕೆಸಿಎಸ್‌ಆರ್‌ 1977ರ ನಿಯಮ (1), (2) (3) ಮತ್ತು 14ರ ಅಡಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ತಾತ್ಕಾಲಿಕ ನೌಕರರನ್ನು ಸೇವೆಯಲ್ಲಿ ವಿಲೀನಗಿಳಿಸಲು ಅವಕಾಶವಿದೆ. ಸಂವಿಧಾನದ ಕಲಂ 209ರ ಪ್ರಕಾರ ತಾತ್ಕಾಲಿಕ ನೌಕರರನ್ನು ಕಾಯಂ ಮಾಡಲು ಇಲಾಖೆಯ ಸಿ ಮತ್ತು ಆರ್‌ ನಿಯಮಾವಳಿಗೆ ತಿದ್ದುಪಡಿ ಮಾಡಬಹುದು’ ಎಂಬುದು ಅತಿಥಿ ಉಪನ್ಯಾಸಕರ ವಾದವಾಗಿದೆ. ಆದರೆ ಉನ್ನತ ಶಿಕ್ಷಣ ಸಚಿವರು ಕನಿಷ್ಟ ಈ ನಿಯಮ ಜಾರಿ ಇದೆಯಾ, ಸಾಧ್ಯವಾ? ಎಂದು ಯೋಚನೆ ಮಾಡುತ್ತಿಲ್ಲ. ತಜ್ಞರ ಸಲಹೆಯನ್ನೂ ಪಡೆಯುತ್ತಿಲ್ಲ. ಬದಲಾಗಿ ಖಾಯಂ ಮಾಡಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡಾಗಿಸಿದಂತೆ ಮಾತನಾಡುತ್ತಿದ್ದಾರೆ.

ಸೇವಾ ಭದ್ರೆತೆ ನೀಡಿ, ಖಾಯಂ ಮಾಡಿ ಎಂದು ಅತಿಥಿ ಉಪನ್ಯಾಸಕರು  ‘ಹಲವು ವರ್ಷಗಳಿಂದ ಪ್ರತಿಭಟನೆ ಮೂಲಕ ಬೇಡಿಕೆ ಸಲ್ಲಿಸಿದರೂ ನೀಡಿದರೂ ಸರ್ಕಾರ ಕುಂಟು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ರಾಜ್ಯದ ಪದವಿ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಅತಿಥಿ ಉಪನ್ಯಾಸಕರ ಕೊಡುಗೆ ಅಪಾರ. ಆದರೆ, ಅವರ ಕಷ್ಟಕ್ಕೆ ಉನ್ನತ ಶಿಕ್ಷಣ ಇಲಾಖೆ ಮತ್ತು ಮುಖ್ಯಮಂತ್ರಿಗಳು ಸ್ಪಂದಿಸದಿರುವುದು ದುರಂತದ ಸಂಗತಿ.  ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಎಂದು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.  ಮಜ್ಜಿಗೆ, ತರಕಾರಿ, ಹಣ್ಣು ಮಾರಾಟದ ಮಾದರಿಯ ಪ್ರತಿಭಟನೆಗಳನ್ನು ನಡೆಸುವ ಮೂಲಕ ಅತಿಥಿ ಉಪನ್ಯಾಸಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಇನ್ನಾದರೂ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ದೇಶದ ಇತರೆ ರಾಜ್ಯಗಳ ಮಾದರಿಯಲ್ಲಿ ಕನಿಷ್ಠ ವೇತನ ನಿಗದಿಪಡಿಸಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷದ ಸೇವೆಗೆ ಕನಿಷ್ಠ 3 ಕೃಪಾಂಕ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 6 ತಿಂಗಳ ವೇತನಸಹಿತ ಮಾತೃತ್ವ ರಜೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *