ಬೆಳಗಾವಿ: ನೆನ್ನೆ ಸದನದಲ್ಲಿ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ರಮೇಶ್ ಕುಮಾರ್ ಆಡಿದ ಮಾತು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇಂದು ಸದನದಲ್ಲಿಯೂ ಹಲವು ಶಾಸಕರು ಈ ಬಗ್ಗೆ ಚರ್ಚೆಗೆ ಒಳಪಡಿಸಿದರು.
ಸದನದಲ್ಲಿ ಉತ್ತರ ನೀಡಿದ ರಮೇಶ್ ಕುಮಾರ್ ಅವರು ʻʻನಿನ್ನೆ ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನ ಅನುಭವಿಸ್ತಿದ್ದೇನೆ ಅಂತ ನೋವು ತೋಡಿಕೊಂಡೆ. ನಾನು ಇಂಗ್ಲಿಷ್ ಭಾಷೆಯಲ್ಲಿರೋ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಯಾವ ಸನ್ನಿವೇಶದಲ್ಲಿ ಹೇಗೆ ಹೇಳಿದ್ದೀವಿ ಅನ್ನುವುದು ನಿರ್ಧಾರವಾಗುತ್ತದೆ. ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ಯಾವುದೇ ವರ್ಗದ ಮಹಿಳೆಯರಿಗೆ ನೋವಾಗಿದ್ದರೆ ನಾನು ವಿಷಾಧ ವ್ಯಕ್ತಪಡಿಸುತ್ತೇನೆ. ನಾನು ಕ್ಷಮೆ ಕೇಳುತ್ತೇನೆʼʼ ಎಂದು ಹೇಳಿದರು.
ಇದನ್ನು ಓದಿ: ಸದನದಲ್ಲಿ ಅತ್ಯಾಚಾರ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆ ಕೋರಿದ ರಮೇಶ್ ಕುಮಾರ್
ನಾನು ಯಾರನ್ನು ಅವಮಾನಿಸಿ ಮಾತಾನಾಡಿಲ್ಲ ನನ್ನ ಮಾತಿನಿಂದ ಹೆಣ್ಣು ಕುಲಕ್ಕೆ ಅವಮಾನ ಆಗಿದ್ರೆ ನಾನು ವಿಷಾದವನ್ನು ವ್ಯಕ್ತಪಡಿಸುತ್ತೆನೆ. ನನ್ನಿಂದ ಅಪರಾಧ ಆಗಿದೆ ಅಂತ ತೀರ್ಪೇ ಕೊಟ್ಟಿದೆ. ಆದ್ದರಿಂದ ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಇಲ್ಲೇ ಸುಖಾಂತ್ಯವನ್ನ ಹಾಡಿ, ಕಲಾಪ ಮುಂದುವರೆಸೋಣ. ನೀವು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸಿದೆ. ತಮ್ಮನ್ನೂ ಅಪರಾಧಿ ಮಾಡಿದ್ದಾರೆ, ತಾವೂ ಹೇಳುವುದಿದ್ದರೆ ಹೇಳಿ ಎಂದು ಸಭಾಧ್ಯಕ್ಷರಿಗೆ ಸಲಹೆ ನೀಡಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಾಜಿ ಸಭಾಧ್ಯಕ್ಷರು, ಹಿರಿಯ ಸಚಿವರಾಗಿದ್ದ ರಮೇಶ್ ಕುಮಾರ್ ಬಗ್ಗೆ ನಮಗೆಲ್ಲಾ ಗೌರವ ಇತ್ತು. ತಿಳಿವಳಿಕೆ ಉಳ್ಳ ಮುತ್ಸದ್ಧಿ ರಾಜಕಾರಣಿ ಎಂಬ ಗೌರವ ಇತ್ತು. ಆದರೆ ನಿನ್ನೆಯ ಅವರ ಹೇಳಿಕೆ ಖಂಡನೀಯ. ಇಂಥ ವ್ಯಕ್ತಿ ಮಾತನಾಡಿದಾಗ ಮಹಿಳೆಯರಿಗೆ ಯಾವ ರೀತಿ ಆಗಬಹುದು?. ರಾಜ್ಯದ ಜನರಿಗೆ ಯಾವ ರೀತಿಯ ಸಂದೇಶ ಕೊಡುತ್ತದೆ? ಮಹಿಳಾ ಸುರಕ್ಷತೆಯ ಬಗ್ಗೆ ಏನು ದಾರಿ ತೋರಿಸುತ್ತಿದ್ದಾರೆ? ಎಂಬುದನ್ನು ಅವರ ಮಾತಿನಲ್ಲಿ ನೋಡುತ್ತಿದ್ದೇವೆ. ಹೇಳಿಕೆ ವೇಳೆ ಸಭಾಧ್ಯಕ್ಷರು ಮುಗುನ್ಳಕ್ಕು ಸುಮ್ಮನಾದ ವಿಚಾರ ನೋಡಿದರೆ, ಅವರು ಮಾತನಾಡುವಾಗ ಕೆಲವು ಶಬ್ದಗಳು ಅವರಿಗೆ ಪೂರ್ಣವಾಗಿ ಕೇಳಿಸಿದೆಯೋ ಕೇಳಿಸಿಲ್ಲವೋ ಗೊತ್ತಿಲ್ಲ. ಸ್ಪೀಕರ್ ಬಗ್ಗೆ ನಾನು ಗಮನ ಕೊಟ್ಟಿಲ್ಲ. ನಿನ್ನೆ ಘಟನೆ ಆಗಬಾರದಂಥ ಘಟನೆ. ಅದನ್ನು ಖಂಡನೆ ಮಾಡುತ್ತೇವೆ. ಆ ರೀತಿಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದರು.
ಈ ವಿಚಾರದ ಬಗ್ಗೆಯೇ ಯಡಿಯೂರಪ್ಪ, ಅಂಜಲಿ ನಿಂಬಾಳ್ಕರ್, ರೇಣುಕಾಚಾರ್ಯ ಸಹ ಪ್ರತಿಕ್ರಿಯೆ ನೀಡಿದರು.