ನವದೆಹಲಿ: ವಿಶ್ವದ ಬಹುತೇಕ ಸಾಮಾಜಿಕ ಕ್ರಾಂತಿಗಳು ಮತ್ತು ಬದಲಾವಣೆಗಳು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಜಾಗೃತಿಯಿಂದ ಆಗಿದೆ. ಹಾಗಾಗಿ ಆಧುನಿಕ ಪ್ರಜಾ ಪ್ರಭುತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆ ಅತ್ಯಗತ್ಯ. ಕಳೆದ ಕೆಲವು ದಶಕಗಳಲ್ಲಿ ವಿದ್ಯಾರ್ಥಿ ಸಮುದಾಯದಿಂದ ಯಾವುದೇ ಮಹತ್ವದ ನಾಯಕ ಹೊರಹೊಮ್ಮಿಲ್ಲ ಎಂಬುದನ್ನು ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯಾರಾದರೂ ಗುರುತಿಸಬಲ್ಲರು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದರು.
ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಉದಾರೀಕರಣದ ನಂತರ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರ ಪಾತ್ರ ದಾಖಲಾಗದೆ ಆಧುನಿಕ ಭಾರತದ ಇತಿಹಾಸ ಅಪೂರ್ಣವಾಗಲಿದೆ ಎಂದು ತಿಳಿಸಿದರು.
ಆಧುನಿಕ ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಾರ್ವಜನಿಕ ಜೀವನಕ್ಕೆ ಕಾಲಿರಿಸಿ ನಾಯಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
“ಸಮಕಾಲೀನ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆಯಲ್ಲಿ ಯುವಕರು ಭಾಗವಹಿಸುವುದು ಅಗತ್ಯವಾಗಿದೆ. ನಿಮಗೆ ಸ್ಪಷ್ಟವಾದ ದೃಷ್ಟಿಕೋನ ಇರಬೇಕು. ತಿಳಿವಳಿಕೆ ಹೊಂದಿರುವ, ಭವಿಷ್ಯದ ಬಗ್ಗೆ ಕನಸುಗಳಿರುವ, ಸಮರ್ಥವಾಗಿರುವ ನಿಮ್ಮಂಥ ವಿದ್ಯಾರ್ಥಿಗಳು ಸಾರ್ವಜನಿಕ ಬದುಕಿಗೆ ಪ್ರವೇಶಿಸಬೇಕು. ಸಂವಿಧಾನದಲ್ಲಿ ತಿಳಿಸಿರುವಂತೆ ರಾಜಕೀಯ ಪ್ರಜ್ಞೆ ಮತ್ತು ಅತ್ಯುತ್ತಮ ಚರ್ಚೆಗಳು ರಾಷ್ಟ್ರವನ್ನು ವೈಭೋವೋಪೇತವಾದ ಭವಿಷ್ಯದತ್ತ ಕೊಂಡೊಯ್ಯುತ್ತವೆ” ಎಂದು ಎನ್.ವಿ.ರಮಣ ಹೇಳಿದರು.
ವಕೀಲ ವೃತ್ತಿಯು ಒಂದು ದೊಡ್ಡ ಕರೆಯಾಗಿದೆ ಮತ್ತು ಇದು ಕಲಿತ ಮತ್ತು ಉದಾತ್ತ ವೃತ್ತಿಯಾಗಿದೆ. ಅದು ವ್ಯಾಪಾರ ಅಥವಾ ವ್ಯವಹಾರವಲ್ಲ. ಇವೆರಡರ ನಡುವಿನ ವ್ಯತ್ಯಾಸವು ಆಳವಾದ ಮತ್ತು ಮೂಲಭೂತವಾಗಿದೆ. ವ್ಯವಹಾರದಲ್ಲಿ, ನಿಮ್ಮ ಏಕೈಕ ಉದ್ದೇಶ ಹಣ ಗಳಿಸುವುದು. ವಕೀಲ ವೃತ್ತಿಯಲ್ಲಿ ಹಣ ಸಂಪಾದಿಸುವುದು ಕೇವಲ ಆಕಸ್ಮಿಕ ಎಂದರು.
“ಹೆಚ್ಚು ವೇತನ ದೊರೆಯುವ ಮತ್ತು ಲಾಭದಾಯಕ ಉದ್ಯೋಗವಕಾಶ ಪಡೆಯುವ ಒತ್ತಡದ ಹಿನ್ನೆಲೆಯಲ್ಲಿ ಮಕ್ಕಳನ್ನು ಖಾಸಗಿಯವರು ನಡೆಸುವ ವಸತಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಉದಯೋನ್ಮಖ ಪ್ರತಿಭೆಗಳ ಆರಂಭಿಕ ವರ್ಷಗಳನ್ನು ಉಸಿರುಗಟ್ಟಿಸುವ ಜೈಲಿಗೆ ಸಮನಾದ ವಾತಾವರಣದಲ್ಲಿ ಕಳೆಯುವಂತೆ ಮಾಡುವುದು ದುರದೃಷ್ಟಕರ” ಎಂದು ಬೇಸರ ವ್ಯಕ್ತಪಡಿಸಿದರು.
“ಸಮಾಜವನ್ನು ಶ್ರೀಮಂತಗೊಳಿಸುವ ಮತ್ತು ಸುಧಾರಣೆ ಮಾಡುವ ನಿಟ್ಟಿನಲ್ಲಿ ನಿಮ್ಮ ಪಾತ್ರದ ಬಗ್ಗೆ ನೀವು ಪರಿಭಾವಿಸಿಕೊಳ್ಳಬೇಕು. ಇಂಥ ಆತ್ಮಾವಲೋಕನದಿಂದ ಮಾತ್ರ ಅಗತ್ಯ ಗುಣಶಕ್ತಿ ವೃದ್ಧಿ ಮತ್ತು ನಂಬಿಕೆಗೆ ಬದ್ಧವಾಗಿರಲು ಸಾಧ್ಯ” ಎಂದು ಸಿಜೆಐ ರಮಣ ಹೇಳಿದರು.