ದಕ್ಷಿಣ ಅಮೆರಿಕದಲ್ಲಿ ಇನ್ನೊಂದು ದೇಶದಲ್ಲಿ ಮತ್ತೆ ಎಡ-ಪ್ರಗತಿಪರ ಶಕ್ತಿಗಳು ಜಯ ಸಾಧಿಸಿವೆ. ನವೆಂಬರ್ ಕೊನೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಲಿಬರ್ (ಲಿಬರ್ಟಿ ಮತ್ತು ರಿಫೌಂಡೇಶನ್) ಪಾರ್ಟಿಯ ಅಭ್ಯರ್ಥಿ ಕ್ಸಿಯೊಮಾರ ಕಾಸ್ಟ್ರೋ, ಆಳುವ ಬಲಪಂಥೀಯ ಪಕ್ಷ ನೇಶನಲ್ ಪಾರ್ಟಿಯ ಅಭ್ಯರ್ಥಿ ನಸ್ರಿ ಅಸ್ಫುರ ಅವರನ್ನು ಭಾರೀ ಅಂತರದೊಂದಿಗೆ ನಿರ್ಣಾಯಕವಾಗಿ ಸೋಲಿಸಿದ್ದಾರೆ. ಕಾಸ್ಟ್ರೋ ಶೇ.53.6 ಮತಗಳಿಸಿ ನಿಚ್ಚಳ ಬಹುಮತ ಪಡೆದಿದ್ದು, ಅಸ್ಪುರಾ ಕ್ಕಿಂತ ಶೇ.20 ರಷ್ಟು ಅಂತರ ಕಾಯ್ದುಕೊಂಡಿದ್ದರು. ಈ ವಿಜಯ ಹಲವು ಮಗ್ಗುಲುಗಳಿಂದ ಗಮನಾರ್ಹವಾದದ್ದು. ಕ್ಸಿಯೊಮಾರ ಕಾಸ್ಟ್ರೋ ಹೊಂಡುರಸ್ ನ ಮೊದಲ ಮಹಿಳಾ ಅಧ್ಯಕ್ಷರು. ಮಾತ್ರವಲ್ಲದೆ ಲ್ಯಾಟಿನ್ ಅಮೆರಿಕನ್ ಖಂಡದಲ್ಲೇ ಅಪರೂಪದ ವಿದ್ಯಮಾನ.
ಅಧ್ಯಕ್ಷರಾಗಿ 2005ರಲ್ಲಿ ಚುನಾಯಿತರಾಗಿದ್ದ ಕ್ಸಿಯೊಮಾರ ಅವರ ಪತಿ ಮನುಯೆಲ್ ಜೆಲಯ ಅವರನ್ನು 2009ರಲ್ಲಿ ಯು.ಎಸ್ ಬೆಂಬಲಿತ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಪದಚ್ಯುತಗೊಳಿಸಲಾಗಿತ್ತು. ಆಗಿನಿಂದ ಹನ್ನೆರಡು ವರ್ಷಗಳ ಕಾಲ, ಮಿಲಿಟರಿಯ ಮತ್ತು ಅದು ಹೊರಿಸಿದ ಬಲಪಂಥೀಯ ಅಧ್ಯಕ್ಷರು ಹಿಂಸಾತ್ಮಕ ದಮನಗಳ ಮೂಲಕ ಆಡಳಿತ ನಡೆಸಿದ್ದರು. ಮಿಲಿಟರಿ ಕ್ಷಿಪ್ರಕ್ರಾಂತಿಯಾದ ಕೇವಲ ಐದು ತಿಂಗಳುಗಳಲ್ಲಿ 270 ಮಾನವ ಹಕ್ಕುಗಳ ತೀವ್ರ ಉಲ್ಲಂಘನೆಯಾಗಿತ್ತು. ಇನ್ನೊಂದು ಅಧ್ಯಕ್ಷರ ಮೊದಲ ತಿಂಗಳುಗಳಲ್ಲೇ 36 ರಾಜಕೀಯ ಕೊಲೆಗಳು, ರಾಜಕೀಯ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಸಾವುಗಳ ಸಂಭವಿಸಿದ್ದವು. ಇದರ ವಿರುದ್ಧ, ಎಲ್ಲ ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ಹೋರಾಟ ಕೊನೆಗೂ ಗೆದ್ದಿದೆ. ಬೊಲಿವಿಯ ನಂತರ ಒಂದು ವರ್ಷದ ಒಳಗೆ ಯು.ಎಸ್ ಬೆಂಬಲಿತ ಮಿಲಿಟರಿ ಕ್ಷಿಪ್ರಕ್ರಾಂತಿಯನ್ನು ಚುನಾವಣೆಗಳ ಮೂಲಕ ಪ್ರಜಾಸತ್ತಾತ್ಮಕವಾಗಿಯೇ ಸೋಲಿಸಿರುವ ಎರಡನೆಯ ದೇಶವಾಗಿ ಹೊಂಡುರಾಸ್ ಹೊಮ್ಮಿದೆ. ಯು.ಎಸ್ ಬೆಂಬಲಿತ ಮಿಲಿಟರಿ ಕ್ಷಿಪ್ರಕ್ರಾಂತಿಯನ್ನು ಚುನಾವಣೆಗಳ ಮೂಲಕ ಹಿಮ್ಮಟ್ಟಿಸಲಾಯಿತಾದರೂ, ಅದರ ಹಿಂದೆ ಈ ಸರಕಾರಗಳನ್ನು ಬೇಕಾಬಿಟ್ಟಿ ಆಡಳಿತ ನಡೆಸಲು ಬಿಡದ ದುಡಿಯುವ ಜನರ ಮತ್ತು ಜನಸಂಘಟನೆಗಳ ಸಾಮೂಹಿಕ ಶಕ್ತಿ, ತೀವ್ರ ಪ್ರತಿರೋಧಗಳೂ ಇದ್ದವು. ಹಿಂದೆ ವೆನೆಜುವೇಲಾದಲ್ಲಿ ಚುನಾಯಿತ ಸರಕಾರ ಉರುಳಿಸುವ ಇಂತಹ ಪ್ರಯತ್ನಗಳನ್ನು ಯು.ಎಸ್ ಬೆಂಬಲದೊಂದಿಗೆ ಹಲವು ಬಾರಿ ಮಾಡಲಾಗಿದೆ. ಅರ್ಜೆಂಟಿನಾ, ಚಿಲಿ ಗಳ ನಂತರ ಈಗ ಹೊಂಡುರಸ್ ನಲ್ಲಿ ಎಡ ಶಕ್ತಿಗಳು ಚುನಾವಣಾ ವಿಜಯ ಸಾಧಿಸಿ ಬಲಪಂಥೀಯ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸಿವೆ. 1990ರ ಕೊನೆಯಿಂದ ಸುಮಾರು ಒಂದು ದಶಕಗಳ ಕಾಲ ಬೀಸಿದ್ದ ಎಡಶಕ್ತಿಗಳ ವಿಜಯದ ‘ಎಳೆಗೆಂಪು ಅಲೆ’ ಮತ್ತೆ ಬೀಸುತ್ತಿರುವಂತೆ ಕಾಣುತ್ತಿದೆ.
ನವ ಅಧ್ಯಕ್ಷರಾದ ಕಾಸ್ಟ್ರೋ ದೇಶದ ರಾಷ್ಟ್ರೀಯ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು, ಸಾಮಾಜಿಕ ನ್ಯಾಯ ಒದಗಿಸುವುದು, ಪ್ರಾದೇಶಿಕ ಸಹಕಾರ ಆಧಾರಿತ ಆರ್ಥಿಕ ಬೆಳವಣಿಗೆಯ ನೀತಿಗಳನ್ನು ಮತ್ತೆ ಜಾರಿಗೆ ತರುವುದು ತಮ್ಮ ಆಧ್ಯತೆ ಎಂದಿದ್ದಾರೆ. ತಮ್ಮ ಪತಿ 2005-09 ಅವಧಿಯಲ್ಲಿ ಕೈಗೊಂಡ ಪ್ರಗತಿಪರ ಕ್ರಮಗಳನ್ನು ಮತ್ತೆ ಜಾರಿಗೆ ತರುವುದುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಜೆಲಯ ಕನಿಷ್ಠ ವೇತನವನ್ನು ಇಮ್ಮಡಿಗೊಳಿಸಿದ್ದರು. 16 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಉಚಿತ ಶಿಕ್ಷಣವನ್ನು ಖಾತ್ರಿಗೊಳಿಸಲಾಗಿತ್ತು. ಭೂಸುಧಾರಣಾ ಕ್ರಮಗಳನ್ನು ಕೈಗೊಂಡು ಕೃಷಿ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಿದ್ದರು. ಕ್ಯೂಬಾದ ಡಾಕ್ಟರುಗಳ ಆಧಾರಿತ ಉಚಿತ ಆರೋಗ್ಯ ಸೇವೆಯನ್ನು ಖಾತ್ರಿಗೊಳಿಸಿದ್ದರು. ದೇಶದ ಬಡತನ ಶೇ10ರಷ್ಟು ಕಡಿಮೆಯಾಗಿತ್ತು. ಸೊಟೊ ಕಾನೊ ದಲ್ಲಿನ ಯು.ಎಸ್ ಮಿಲಿಟರಿ ನೆಲೆಯನ್ನು ಮುಚ್ಚಿದ್ದರು. ಕ್ಯೂಬಾ, ವೆನೆಜುವೇಲಾ ನಾಯತ್ವದ ಲ್ಯಾಟಿನ್ ಅಮೆರಿಕ ದೇಶಗಳ ಸಹಕಾರಿ ಸಂಘಟನೆ ಅಲ್ಬಾ ದ ಸದಸ್ಯ ದೇಶವಾಗಿ ಕಡಿಮೆ ಬೆಲೆಯ ತೈಲ ಮತ್ತು ಅಭಿವೃದ್ಧಿ ನೆರವು ಪಡೆದಿತ್ತು. ಆ ಮೇಲೆ 12 ವರ್ಷಗಳ ಮಿಲಿಟರಿ ಬಲಪಂಥೀಯ ಆಡಳಿತದಲ್ಲಿ ಹೆಚ್ಚಿನ ಈ ನೀತಿಗಳನ್ನು ಬದಲಾಯಿಸಲಾಗಿತ್ತು. ಈ ನೀತಿಗಳನ್ನು ಮತ್ತೆ ತರುವುದಾಗಿ ಕಾಸ್ಟ್ರೋ ಘೋಷಿಸಿದ್ದಾರೆ.
ಈ 12 ವರ್ಷಗಳಲ್ಲಿ ಬಲಪಂಥೀಯ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಈ ಅವಧಿಯ ಎಲ್ಲ ಅಧ್ಯಕ್ಷರುಗಳು ಮತ್ತು ಪ್ರಮುಖ ಸಚಿವರ ವಿರುದ್ಧ ಸಾರ್ವಜನಿಕ ಹಣಕಾಸು ದುರುಪಯೋಗ, ಮಾದಕ ದ್ರವ್ಯ ವ್ಯಾಪಾರಕ್ಕೆ ರಕ್ಷಣೆ ಕೊಟ್ಟ ಕುರಿತು ಯು.ಎಸ್ ಆಡಳಿತ ಹಲವು ಪ್ರಕರಣಗಳನ್ನು ದಾಖಲಿಸಿದೆ. ಇದನ್ನು ತೊಡೆದು ಹಾಕಲು ವಿಶ್ವಸಂಸ್ಥೆ ಆಧಾರಿತ ಭ್ರಷ್ಟಾಚಾರ-ನಿಗ್ರಹ ಕಮಿಶನ್ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಕೊಡುವ ಕಾನೂನುಗಳನ್ನು ರದ್ದು ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ. ಯು.ಎಸ್ ಒತ್ತಡದಲ್ಲಿ ಹಿಂದಿನ ಸರಕಾರ ತೈವಾನ್ ಕೊಟ್ಟ ರಾಜತಾಂತ್ರಿಕ ಮನ್ನಣೆಯನ್ನು ಹಿಂತೆಗೆಯುವುದಾಗಿ ಹೇಳಿದ್ದಾರೆ. ಜನ ಪಾಲುಗೊಳ್ಳುವ ಪ್ರಜಾಸತ್ತೆ ಸ್ಥಾಪಿಸಲು ಅಗತ್ಯ ಸಂವಿಧಾನ ತಿದ್ದುಪಡಿ ತರುವುದು, ಗರ್ಭಪಾತದ ಅಪರಾಧೀಕರಣವನ್ನು ತೊಡೆಯುವುದು ಅವರು ಸೂಚಿಸಿರುವ ಇತರ ಕ್ರಮಗಳು. ಹಿಂದಿನ ಹಲವು ಚುನಾವಣೆಗಳಲ್ಲೂ ತೀವ್ರ ಅಕ್ರಮಗಳಾಗಿದ್ದು, ಬಲಪಂಥೀಯರು ಈ ಅಕ್ರಮಗಳ ಮೂಲಕವೇ ಜಯಗಳಿಸಿ ಅಧಿಕಾರದಲ್ಲಿ ಇದ್ದರು.