ಅರುಣಾ ರಾಯ್
1968ರಲ್ಲಿ ಅಜಿತ್ ದೋವಲ್ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ದಾಖಲಾದರು. ಅದೇ ವರ್ಷ ನಾನೂ ಸಹ ಭಾರತೀಯ ಆಡಳಿತ ಸೇವೆಗೆ (ಐಎಎಸ್) ದಾಖಲಾಗಿದ್ದೆ. ಈ ಎರಡೂ ಹುದ್ದೆಗಳಿಗೆ ತರಬೇತಿ ಬಹಳ ಮುಖ್ಯವಾಗಿತ್ತು. ಪ್ರತಿಯೊಬ್ಬರೂ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ ಸಂಸ್ಥೆಯಲ್ಲಿ ಪ್ರಾರಂಭಿಕ ತರಬೇತಿಯನ್ನು ಪಡೆಯುವುದು ಕಡ್ಡಾಯವಾಗಿತ್ತು. ತರಬೇತಿಯಲ್ಲಿರುವ ನಾಗರಿಕ ಸೇವಾಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳಿರುತ್ತವೆ ಆದರೆ ನಾಗರಿಕ ಸೇವೆಗೆ ಸೇರ್ಪಡೆಯಾಗುವ ಯಾರಿಗೇ ಆದರೂ ಭಾರತ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುವುದು ಕಡ್ಡಾಯವಾಗಿರುತ್ತದೆ. ಈ ಪ್ರಮಾಣವಚನವನ್ನು ಇಲ್ಲಿ ಉಲ್ಲೇಖಿಸುವುದು ಉಚಿತ ಎನಿಸುತ್ತದೆ : “ ನಾನು ………. ಭಾರತಕ್ಕೆ ಹಾಗೂ ಭಾರತದ ಸಂವಿಧಾನಕ್ಕೆ , ಸ್ಥಾಪಿತ ಕಾನೂನುಗಳನ್ವಯ, ನನ್ನ ಸಂಪೂರ್ಣ ಬದ್ಧತೆಯನ್ನು ಹೊಂದುವುದರ ಮೂಲಕ ನಿಷ್ಠೆಯಿಂದಿರುತ್ತೇನೆ, ನಾನು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆ, ನನ್ನ ಅಧಿಕಾರಾವಧಿಯಲ್ಲಿ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತೇನೆ. (ಹಾಗಾಗಿ ದೇವರೇ ನನಗೆ ಸಹಾಯ ಮಾಡು.”
ನನ್ನ ತರಬೇತಿಯ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ನಾನು ವಿಮರ್ಶಾತ್ಮಕವಾಗಿದ್ದೆ. ಆದರೂ ಐಎಎಸ್ ಅಧಿಕಾರಿಯಾಗಿ ಏಳು ವರ್ಷಗಳ ಸೇವಾವಧಿಯಲ್ಲೇ ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಒಂದು ಸಂಗತಿ ಎಂದರೆ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಸಾರ್ವಜನಿಕ ಅಧಿಕಾರಿಯ ಧ್ಯೇಯ ಮತ್ತು ದುರ್ಬಲ ವರ್ಗಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಂವಿಧಾನದ ನಿರ್ದೇಶಕ ತತ್ವಗಳು ಹೇಳುವ ಪ್ರಭುತ್ವ ನೀತಿಗಳು. ಅಕಾಡೆಮಿಯ ತರಬೇತಿಯಲ್ಲಿ ಮತ್ತು ಸೇವಾ ವಲಯದಲ್ಲೂ ಸಹ, ಪ್ರಾಮಾಣಿಕತೆ, ಋಜುತ್ವ, ನಿಷ್ಪಕ್ಷಪಾತತೆಯ ನೀತಿಗಳನ್ನು ಸಂವಿಧಾನದ ಸಂದರ್ಭದಲ್ಲಿ ಸಮರ್ಪಕವಾಗಿ ಅರ್ಥಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಚುನಾಯಿತ ಶಾಸಕಾಂಗ ಪ್ರತಿನಿಧಿಗಳು ಸಂವಿಧಾನದ ಈ ಧ್ಯೇಯಗಳನ್ನು ಮೀರುವಂತಿಲ್ಲ ಮತ್ತು ಪ್ರತಿಯೊಬ್ಬ ನಾಗರಿಕ ಸೇವಾಧಿಕಾರಿಯೂ ಯಾವುದೇ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಸ್ಪಷ್ಟಪಡಿಸಲಾಗುತ್ತಿತ್ತು.
ಆದರೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ದೋವಲ್ ಹೈದರಾಬಾದ್ನಲ್ಲಿರುವ ಪೊಲೀಸ್ ಅಕಾಡೆಮಿಗೆ ಹಿಂದಿರುಗಿದಾಗ, ನವಂಬರ್ 11ರಂದು ನಡೆದ ಪೆರೇಡ್ ಒಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಸಂದರ್ಭದಲ್ಲಿ ಯುದ್ಧ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಒಂದು ಹೊಸ ರಾಜಕೀಯ ತತ್ವವನ್ನು ಪ್ರತಿಪಾದಿಸಿದ್ದಾರೆ. ಇದು ಭಾರತದ ಮೇಲೆ ಭೀಕರ ಅಪಾಯಕಾರಿ ಪರಿಣಾಮ ಮತ್ತು ಪ್ರಭಾವ ಬೀರುವಂತಹ ಮಾತುಗಳಾಗಿವೆ. ಹೊಸ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ ದೋವಲ್ “ ಸಿವಿಲ್ ಸೊಸೈಟಿಯು, ಅಂದರೆ ಪ್ರಜ್ಞಾವಂತ-ಕ್ರಿಯಾಶೀಲ-ಪ್ರತಿಕ್ರಯಿಸುವ ನಾಗರಿಕ ಸಮಾಜವು ನಮಗೆ ನಾಲ್ಕನೆ ಮಜಲಿನ ಯುದ್ಧನೀತಿಯಾಗಿದೆ. ಇದೊಂದು ನವೀನ ಯುದ್ಧ ತಂತ್ರ. ರಾಜಕೀಯ ಅಥವಾ ಸೇನಾ ಗುರಿಗಳ ಈಡೇರಿಕೆಗೆ ಯುದ್ಧಗಳಿಂದ ಗೆಲುವು ಸಾಧಿಸುವುದು ಈಗ ಅಸಾಧ್ಯವಾಗಿದೆ. ಯುದ್ಧಗಳು ಅತಿ ಹೆಚ್ಚು ದುಬಾರಿಯೂ ಭರಿಸಲಾಗದವೂ ಆಗಿ ಅವುಗಳ ಅಂತಿಮ ಫಲಿತಾಂಶಗಳನ್ನು ಭವಿಷ್ಯ ನುಡಿಯಲಾಗುವುದಿಲ್ಲ. ಆದರೆ ನಾಗರಿಕ ಸಮಾಜವನ್ನು, ಸಿವಿಲ್ ಸೊಸೈಟಿಯನ್ನು ತಿದ್ದಬಹುದು, ಬಗ್ಗಿಸಬಹುದು, ಒಡೆಯಬಹುದು ಮತ್ತು ಕೈಗೊಂಬೆಯಾಗಿಸಬಹುದು. ಇದರಿಂದ ಯಾವುದೇ ರಾಷ್ಟ್ರದ ಹಿತಾಸಕ್ತಿಗಳಿಗೆ ಘಾಸಿಯುಂಟುಮಾಡಬಹುದು. ನಾವಿರುವುದು ಇಂತಹ ಶಕ್ತಿಗಳಿಂದ ರಕ್ಷಿಸಲೋಸುಗವೇ ”
ತಮ್ಮ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಸಂಘರ್ಷದಲ್ಲಿರಬೇಕಾದ ನಾಗರಿಕ ಸಮಾಜವನ್ನು ವಿಷದೀಕರಿಸಲು ವಿಫಲರಾಗಿರುವ ದೋವಲ್ ನಮ್ಮದೇ ಪ್ರಜೆಗಳ ವಿರುದ್ಧ ನಾಲ್ಕನೆ ಮಜಲಿನ ಯುದ್ಧ ಸಾರುವ ಅಧಿಕಾರವನ್ನು ಇವರಿಗೆ ನೀಡಿದವರಾದರೂ ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. ದೋವಲ್ ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಬೇಕಿತ್ತು. ಆದರೆ ಇಲ್ಲಿ ರಾಜಕೀಯ ಕಾರ್ಯಾಂಗ ಮತ್ತು ಖಾಸಗಿ ವಲಯವು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಕೈಗೊಳ್ಳುವ ಪ್ರಯತ್ನಗಳನ್ನು ನ್ಯಾಯಬದ್ಧವಾಗಿಸುವ ಇಂಗಿತ ಕಾಣುತ್ತದೆ. ಇಲ್ಲಿ ಸಂಘಟಿತ ನಾಗರಿಕ ಗುಂಪುಗಳು (ನಾಗರಿಕ ಸಮಾಜ) ವ್ಯಕ್ತಪಡಿಸುವ ವಿರೋಧಿ ಅಭಿಪ್ರಾಯಗಳು ಮತ್ತು ಪ್ರತಿರೋಧಗಳನ್ನು ರಾಷ್ಟ್ರೀಯತೆ ಮತ್ತು ಅಭಿವೃದ್ಧಿಗೆ ಮಾರಕ ಎಂಬ ಭಾವನೆ ಢಾಳಾಗಿ ಕಾಣುತ್ತದೆ. ಹೀಗೆ ಸಂವಿಧಾನದಲ್ಲಿ ಅಡಕವಾಗಿರುವ ಪ್ರಜಾಸತ್ತಾತ್ಮಕ, ಸಾಮಾಜಿಕ ಮತ್ತು ಅಭಿವೃದ್ಧಿಯ ರಕ್ಷಣೆಗಳನ್ನು ದೋವಲ್ ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ.
ನಾನು 1975ರಲ್ಲಿ ಐಎಎಸ್ ಸೇವೆಯನ್ನು ತೊರೆದ ನಂತರ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸತೊಡಗಿದೆ. ಈ ಮಾರ್ಗದಲ್ಲೇ ನನಗೆ ನ್ಯಾಯ ಮತ್ತು ಸಮಾನತೆಯ ಸಾಂವಿಧಾನಿಕ ಮೌಲ್ಯಗಳು ಹೇಗೆ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಹೆಚ್ಚಿನ ಅಂಶಗಳ ಒಳಹೊಕ್ಕಿರುತ್ತವೆ ಎನ್ನುವುದು ಸ್ಪಷ್ಟವಾಗಿ ಅರ್ಥವಾಗತೊಡಗಿತ್ತು. ಅನೇಕ ಸಹೋದ್ಯೋಗಿಗಳು, ಪ್ರಚಾರಾಂದೋಲನಗಳು, ಚಳುವಳಿಗಳು, ಯಾವುದೇ ಅಧಿಕಾರ ಅಂತಸ್ತಿನ ಮೋಹ ಇಲ್ಲದೆಯೇ, ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಒಂದು ಸ್ವತಂತ್ರ ರಾಷ್ಟ್ರದ ಬುನಾದಿಯನ್ನು ನಿರ್ಮಿಸಿದ್ದಾರೆ ಎನ್ನುವುದು ನನಗೆ ಅರ್ಥವಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಿಂದ ಸ್ಪೂರ್ತಿ ಪಡೆದು ನಾಗರಿಕರ ಗುಂಪುಗಳು ಮತ್ತು ಕಾರ್ಯಕರ್ತರು ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಾಂವಿಧಾನಿಕ ತತ್ವಗಳಾದ ಸ್ವಾತಂತ್ರ್ಯ,ಸಮಾನತೆ, ನ್ಯಾಯ, ಭ್ರಾತೃತ್ವ, ಘನತೆಯನ್ನು ಆಧರಿಸಿ ಮುನ್ನಡೆದಿವೆ ಮತ್ತು ಈ ಮೌಲ್ಯಗಳನ್ನು ಭಂಗಗೊಳಿಸುವ ಶಕ್ತಿಗಳ ವಿರುದ್ಧ ಹೇಗೆ ಜಾಗೃತಿ ಮೂಡಿಸಿವೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ಬಹುಶಃ ಹಾಲಿ ಸರ್ಕಾರಕ್ಕೆ ಇದೇ ಒಂದು ಸಮಸ್ಯೆಯಾದಂತೆ ಕಾಣುತ್ತಿದೆ.
ಭಾರತಕ್ಕೆ ಇರಬಹುದಾದ ಸಂಭಾವ್ಯ ಅಪಾಯಗಳನ್ನು ಗುರಿಯಾಗಿಸುವ ನಿಟ್ಟಿನಲ್ಲಿ ದೋವಲ್, ನಾಗರಿಕ ಸಮಾಜವನ್ನೇ ಸಂಭಾವ್ಯ ಶತ್ರುವಿನಂತೆ ನೋಡಬೇಕು ಎಂಬ ಸಂದೇಶವನ್ನು ಹೊಸ ಐಪಿಎಸ್ ಅಧಿಕಾರಿಗಳಿಗೆ ನೀಡಿದ್ದಾರೆ. ಈ ನಾಗರಿಕ ಸಮಾಜದೊಡನೆಯೇ ನಾಲ್ಕನೆ ಮಜಲಿನ ಯುದ್ಧಕ್ಕೂ ಸಜ್ಜಾಗುವಂತೆ ಕರೆ ನೀಡಿದ್ದಾರೆ. ನಮ್ಮ ಬ್ಯಾಚ್ನವರ ಪೈಕಿ ಇಂದಿಗೂ ಸಾರ್ವಜನಿಕ ಅಧಿಕಾರವನ್ನು ಹೊಂದಿರುವ ಏಕೈಕ ವ್ಯಕ್ತಿ ದೋವಲ್ ಆಗಿದ್ದು, ಕೇಂದ್ರ ಸಚಿವ ಸಂಪುಟ ಹುದ್ದೆಗೆ ಸಮಾನವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕನೆ ಮಜಲಿನ ಯುದ್ಧದ ಎಲ್ಲೆಗಳ ಬಗ್ಗೆ, ನಾಗರಿಕ ಸಮಾಜದ ಸಂಭಾವ್ಯ ಅಪಾಯದ ಬಗ್ಗೆ ದೋವಲ್ ಅವರ ವ್ಯಕ್ತಿಗತ ದೃಷ್ಟಿಕೋನ ಏನೇ ಇದ್ದರೂ, ಒಬ್ಬ ಸಾರ್ವಜನಿಕ ಅಧಿಕಾರಿಯಾಗಿ ಅವರು ನಮ್ಮೆಲ್ಲರಿಗಿಂತಲೂ ಹೆಚ್ಚು, ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿದ್ದಾರೆ. ನಾಗರಿಕ ಸಮಾಜದ ವಿರುದ್ಧ ಧಾಳಿ ನಡೆಸುವಂತಹ ಸೂಚನೆ ನೀಡುವ ಒಂದೇ ಒಂದು ಅಕ್ಷರವನ್ನೂ ಸಂವಿಧಾನದಲ್ಲಿ ಕಾಣಲು ಸಾಧ್ಯವಿಲ್ಲ. ಓರ್ವ ಹಿರಿಯ ಸಲಹೆಗಾರರಾಗಿ, ದೋವಲ್ ಭಾರತದ ನಾಗರಿಕ ಸಮಾಜದ ವಿರುದ್ಧ ಆಂತರಿಕ ಯುದ್ಧ ಸಾರುವ ಮೂಲಕ ರಾಷ್ಟ್ರದ ಭದ್ರತೆಗೆ, ಸಾಂವಿಧಾನಿಕ ಚಿಂತನೆಯ ಭಾರತವನ್ನು ವಿರೋಧಿಸುವವರಿಗಿಂತಲೂ ಹೆಚ್ಚು ಅಪಾಯ ಉಂಟುಮಾಡುತ್ತಾರೆ.
ರಾಜಕೀಯವಾಗಿ ನೇಮಕಗೊಂಡಿರುವ ಅಧಿಕಾರಿಯಾಗಿ ದೋವಲ್, ರಾಜಕೀಯವಾಗಿ ಅಧಿಕಾರದಲ್ಲಿರುವ ಸರ್ಕಾರವನ್ನು ವಿರೋಧಿಸುವ ಪ್ರತಿಯೊಬ್ಬರೂ ರಾಷ್ಟ್ರಕ್ಕೆ ಅಪಾಯಕಾರಿ ಎಂದು ನಿರ್ಧರಿಸಿದಂತಿದೆ. ಅಂತರಿಕ ವಿರೋಧವನ್ನೇ ಶತ್ರು ಎಂದು ಬಣ್ಣಿಸುತ್ತಿದ್ದಾರೆ. ಈ ಅಭಿಪ್ರಾಯದನ್ವಯ, ಪ್ರಜಾಪ್ರಭುತ್ವದಲ್ಲಿ ನ್ಯಾಯಯುತವಾದದ್ದೆಲ್ಲವೂ ಚುನಾಯಿತ ಸರ್ಕಾರ ಮತ್ತು ಅದು ಜಾರಿಗೊಳಿಸುವ ಕಾನೂನುಗಳಲ್ಲಿ ಮಾತ್ರವೇ ಇರುತ್ತದೆ. ಇದೇ ಭಾಷಣದಲ್ಲಿ ದೋವಲ್ “ ಪ್ರಜಾಪ್ರಭುತ್ವದ ಅಂತಃಸತ್ವ ಮತಪೆಟ್ಟಿಗೆಯಲ್ಲಿಲ್ಲ. ಈ ಮತಪೆಟ್ಟಿಗೆಗಳ ಮೂಲಕ ಜನರಿಂದಲೇ ಚುನಾಯಿಸಲ್ಪಟ್ಟ ಪ್ರತಿನಿಧಿಗಳು ರೂಪಿಸುವ ಕಾನೂನುಗಳಲ್ಲಿ ಅಡಗಿರುತ್ತವೆ ” ಎಂದು ಹೇಳುತ್ತಾರೆ. ಹಾಗಾಗಿ ರಾಷ್ಟ್ರ ಮತ್ತು ರಾಷ್ಟ್ರೀಯತೆಯಂತೆಯೇ ಚುನಾಯಿತ ಶಾಸಕಾಂಗದ ಸಿದ್ಧಾಂತವೇ ದೇಶದ ಕಾನೂನಿನ ಆಕರವಾಗಿಬಿಡುತ್ತದೆ.
ಈ ಅಭಿಪ್ರಾಯಕ್ಕೆ ಒಂದು ಸಿದ್ಧ ಮಾದರಿಯನ್ನೂ ಕಾಣಬಹುದು. ಸೇನಾ ಪಡೆಗಳ ಪ್ರಥಮ ಮುಖ್ಯಸ್ಥರಾಗಿ ನೇಮಕಗೊಂಡ ಜನರಲ್ ಬಿಪಿನ್ ರಾವತ್, ಟೈಮ್ಸ್ ನೌ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ “ಭಯೋತ್ಪಾದಕರನ್ನು ಹಿಡಿದು ಥಳಿಸುವುದಾಗಿ ಜಮ್ಮು ಕಾಶ್ಮೀರದ ಸ್ಥಳೀಯ ಜನತೆ ಹೇಳುತ್ತಿದ್ದಾರೆ, ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದೆ…… ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದಕರು ಸಕ್ರಿಯವಾಗಿದ್ದರೆ, ನೀವೇಕೆ ಅವರನ್ನು ಹಿಡಿದು ಥಳಿಸಬಾರದು” ಎಂದು ಕೇಳುತ್ತಾರೆ. ಭಯೋತ್ಪಾದಕರು ಯಾರು ಎಂದು ನಿರ್ಧರಿಸಲು ಜನರಲ್ ರಾವತ್ ಈ ಗುಂಪುಗಳಿಗೆ ಪ್ರೋತ್ಸಾಹ ನೀಡುತ್ತಿರುವುದೇ ಅಲ್ಲದೆ ಅವರೇ ಶಿಕ್ಷೆ ನೀಡುವಂತೆಯೂ ಹೇಳುತ್ತಿದ್ದಾರೆ. ಇದು ಕಾನೂನಿನ ಪ್ರಭುತ್ವ ಎನ್ನಬಹುದೇ ? ರಾಜಕೀಯ ನೇಮಕಾತಿಯ ಮುಖ್ಯಸ್ಥರನ್ನೇ ಹೊಂದಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಹೆಚ್ಆರ್ಸಿ) ಇತ್ತೀಚೆಗೆ ನಡೆಸಿದ ಕೇಂದ್ರೀಯ ಪೊಲೀಸ್ ಪಡೆಗಳ ಒಂದು ಚರ್ಚೆಯಲ್ಲಿ “ ಮಾನವ ಹಕ್ಕುಗಳು ಭಯೋತ್ಪಾದನೆ ಮತ್ತು ನಕ್ಸಲ್ವಾದವನ್ನು ಎದುರಿಸಿ ಹೋರಾಡುವುದಕ್ಕೆ ಅಡ್ಡಿಯಾಗುತ್ತಿದೆಯೇ ?” ಎಂಬ ಪ್ರಶ್ನೆಯನ್ನು ಕೇಳಿತ್ತು. ಈ ಸಂಸ್ಥೆಯ ಅಸ್ತಿತ್ವಕ್ಕೆ ಕಾರಣವಾದ ಕಾನೂನುಬದ್ಧ ಧ್ಯೇಯ ಮತ್ತು ಕಾರಣಗಳಾಗಿ ಪರಿಗಣಿಸಲ್ಪಡುವ ಮಾನವ ಹಕ್ಕುಗಳು ಅಡ್ಡಿಯಾಗಿದೆಯೇ ಎಂದು ಕೇಳುತ್ತಿರುವುದು ಸಾಂವಿಧಾನಿಕವಾಗಿ ಪ್ರಜೆಗಳ ಸುಪ್ರಜ್ಞೆಯನ್ನು ರಕ್ಷಿಸಬೇಕಾದ ಒಂದು ಸಾಂವಿಧಾನಿಕ ಸಂಸ್ಥೆ.
ಈ ಎಲ್ಲ ಬೆಳವಣಿಗೆಗಳೂ ನಮ್ಮದೇ ಜನಗಳ ಮೇಲೆ ನಡೆಸುವ ಪ್ರಹಾರವೇ ಆಗಿರುತ್ತದೆ. ಭವಿಷ್ಯದಲ್ಲಿ ನಮ್ಮ ಸಂವಿಧಾನದ ಮೌಲ್ಯಗಳನ್ನೂ ಲೆಕ್ಕಿಸದೆ, ಪ್ರಜಾಪ್ರಭುತ್ವ ಮತ್ತು ಪೌರತ್ವಗಳನ್ನೂ ಲೆಕ್ಕಿಸದೆ ಅನ್ಯಾಯಗಳು ನಡೆಯಲು ಇದು ಪೂರ್ವಭಾವಿಯಾಗಿ ಕಾಣುತ್ತದೆ. ಈ ಕಾರಣಗಳಿಗಾಗಿಯೇ ಇದು ಭಾರತ ಎಂಬ ಕಲ್ಪನೆಗೆ ವಿರುದ್ಧವಾದುದಾಗಿರುತ್ತದೆ. ಈ ಸರ್ಕಾರವಾಗಲಿ, ಮತ್ತಾವುದೇ ಚುನಾಯಿತ ಸರ್ಕಾರವಾಗಲಿ, ಅನುಲ್ಲಂಘನೀಯ ಪ್ರಜಾಸತ್ತಾತ್ಮಕ ಕರ್ತವ್ಯಗಳನ್ನು ಹೊಂದಿರುತ್ತವೆ. ಈ ಸರ್ಕಾರಗಳು ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಯಾವುದೇ ಸರ್ಕಾರವೂ ಇದನ್ನು ಉಲ್ಲಂಘಿಸಲಾಗುವುದಿಲ್ಲ.
ಅನುವಾದ: ನಾ ದಿವಾಕರ
ಮೂಲ: Civil society is not the enemy, ಇಂಡಿಯನ್ ಎಕ್ಸ್ಪ್ರೆಸ್ 19/11/2021