ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮುವಾರದಿಂದ ಆರಂಭವಾಗಲಿದೆ. ಮೂರು ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಸೇರಿದಂತೆ ಇತರೆ, 26 ಮಸೂದೆಯಲ್ಲಿ ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಇನ್ನುಳಿದಂತೆ ಕ್ರಿಪ್ಟೋ ಕರೆನ್ಸಿ ಮಸೂದೆ, ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸರ್ಕಾರದ ಪಾಲನ್ನು ಶೇಕಡಾ 51ರಿಂದ ಶೇಕಡಾ 26ಕ್ಕೆ ಇಳಿಸುವುದು ಪ್ರಮುಖ ವಿಚಾರಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.
ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಯನ್ನು ಸಂಸತ್ ಅಧಿವೇಶನದ ಮೊದಲ ದಿನದಿಂದೇ ಮಂಡಿಸಲಾಗುತ್ತಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ.
ಈ ಕೃಷಿ ಕಾಯ್ದೆಗಳನ್ನು 2020ರ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿತ್ತು. ಆದರೆ ಈ ಕಾಯ್ದೆಗಳು ರೈತರ ಕರಾಳ ಕಾಯ್ದೆಗಳಾಗಿದ್ದು, ದೊಡ್ಡ ಶ್ರೀಮಂತರು ಮತ್ತು ಬಂಡವಾಳದಾರರಿಗೆ ಮಾತ್ರ ಅನುಕೂಲವಾಗಲಿದೆ. ದೇಶದ ಬಹುಸಂಖ್ಯಾತ ರೈತ ವರ್ಗಕ್ಕೆ ಮಾರಕವಾಗಿದೆ. ಇವುಗಳನ್ನು ವಾಪಸ್ಸು ಪಡೆಯಲೇಬೇಕೆಂದು ಆಗ್ರಹಿಸಿ ದೇಶದ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ರೈತ ಆಂದೋಲನವು ಕೇಂದ್ರದ ಬಿಜೆಪಿ ಸರ್ಕಾರ ಈಗ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಸಮರಶೀಲವಾದ ಹೋರಾಟವನ್ನು ನಡೆಸಿ ಯಶಸ್ವಿಯಾಗಿದೆ. ಸಂಸತ್ತಿನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಆಗುವವರೆಗೂ ಹೋರಾಟವನ್ನು ಮುಂದುವರೆಸಿದ್ದಾರೆ. ಅಲ್ಲದೆ, ಇನ್ನು ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಹಲವು ಸುತ್ತಿನ ಮಾತುಕತೆಗಳು ನಡೆದರೂ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಲಿಲ್ಲ. ನವೆಂಬರ್ 19ರ ಗುರುನಾನಕ್ ಜಯಂತಿಯಂದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಆದರೆ ಸಂಸತ್ತಿನಲ್ಲಿ ರದ್ದುಗೊಂಡ ವಿನಃ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.