ಕೇಂದ್ರದ ಒಕ್ಕೂಟ ಸರ್ಕಾರವು ದೇಶದಲ್ಲಿ ಬಲವಂತದಿಂದ ಹೇರಲು ಹೊರಟಿರುವ ಕೃಷಿ ಕಾಯ್ದೆಗಳು ರೈತರ ಮರಣ ಶಾಸನವಾಗಿದೆ ಅವುಗಳನ್ನು ರದ್ದುಪಡಿಸಬೇಕೆಂದು ದೇಶದೆಲ್ಲೆಡೆ ಹರಡಿರುವ ಹೋರಾಟಗಳು, ಅದರಲ್ಲೂ ವಿಶೇಷವಾಗಿ ಭಾರತ ದೇಶದ ರಾಜಧಾನಿ ದೆಹಲಿ ಸುತ್ತಲಿನ ಗಡಿ ರಸ್ತೆಗಳಲ್ಲಿ ನಿರಂತರ ಹೋರಾಟದ ಮೂಲಕ ದೇಶದ ರೈತರ ಆಂದೋಲನವನ್ನು ರೂಪಿಸಿದ ರೈತ ಚಳುವಳಿಯು ಕಡೆಗೂ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಲು ಯಶಸ್ವಿಯಾಗಿದೆ.
ಇದರ ಅಂಗವಾಗಿ ಅನ್ನದ ಋಣ ಆಯೋಜಿಸಿದ್ದ “ದೆಹಲಿ ರೈತ ಹೋರಾಟ- ಕನ್ನಡಿಗರ ಒಳನೋಟ” ವೆಬಿನಾರ್ನಲ್ಲಿ ಲೇಖಕರು, ಸಂಶೋಧಕರು ಆಗಿರುವ ಪುರುಷೋತ್ತಮ ಬಿಳಿಮಲೆ ಅವರು ಐತಿಹಾಸಿಕ ರೈತ ಹೋರಾಟವನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳನ್ನು ತಿಳಿಸಿದರು.
ರೈತ ಚಳುವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು
೧. ಒಗ್ಗಟ್ಟು: ಸಂಯಕ್ತ ಕಿಸಾನ್ ಮೋರ್ಚಾವು ದೇಶದಾದ್ಯಂತ ಇರುವ ಸುಮಾರು ೪೫೦ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಂದು ವೇದಿಕೆಗೆ ತಂದು ಒಗ್ಗಟ್ಟು ಪ್ರದರ್ಶಿಸಿದ್ದು.
೨. ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ: ಆಧಾರ್ ಕಾರ್ಡ್, ಪಾನ್ ನಂಬರ್, ಇತ್ಯಾದಿ ಆಧಾರಗಳಿಲ್ಲದೆ ಯಾರಿಂದಲೂ ಹಣ ಸ್ವೀಕೃತಿಯಾಗಿಲ್ಲ. ಚಳುವಳಿ ಕೇಂದ್ರಗಳಲ್ಲಿ ನಗದು ಸ್ವೀಕರಣೆ ಇಲ್ಲ. ರೈತರು ತಿಂಗಳಿಗೊಮ್ಮೆ ನೀಡಿದ ದೇಣಿಗೆಯಿಂದಲೇ ಖರ್ಚುಗಳನ್ನು ಭರಿಸಿಕೊಳ್ಳಲಾಗಿದೆ. ದಾನಿಗಳು ನೀಡಿದ ಧನಸಹಾಯ ನೇರವಾಗಿ ಬ್ಯಾಂಕಿಗೇ ರವಾನೆಯಾಗಿದೆ.
೩. ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ ಮತ್ತು ದೆಹಲಿ ಗುರುದ್ವಾರ ನಿರ್ವಹಣಾ ಸಮಿತಿಯು ರೈತರಿಗೆ ನೀಡಿದ ನಿರಂತರ ಬೆಂಬಲ
೪. ಲಂಗರ್: ಸಿಖ್ ಪರಂಪರೆಯ ಎಲ್ಲರಿಗೂ ಉಚಿತ ಆಹಾರ ನೀಡಿಕೆ ಮತ್ತು ಸಾಮೂಹಿಕ ಭೋಜನದ ಪರಿಕಲ್ಪನೆಯು ಹೋರಾಟವನ್ನು ಕಳೆಗುಂದದಂತೆ ನೋಡಿಕೊಂಡದ್ದು.
೫. ಉಚಿತ ಸೇವೆಗಳು: ವೈದ್ಯರು, ಪ್ಲಂಬರ್ ಗಳು, ಇಲೆಕ್ಟ್ರಿಕಲ್ ಕೆಲಸಗಾರರು – ಹೀಗೆ ದೈನಂದಿನ ಅಗತ್ಯದ ಎಲ್ಲ ಸೇವೆಗಳೂ ರೈತರಿಗೆ ಉಚಿತವಾಗಿ ದೊರೆಯಿತು. ಸೇವೆ ಸಲ್ಲಿಸಿದವರೂ ಯಾವುದೇ ಸಂಭಾವನೆ ಪಡೆದಿಲ್ಲ.
೬. ಪರ್ಯಾಯ ಮಾಧ್ಯಮಗಳ ಸೃಷ್ಟಿ: ಮುಖ್ಯ ಮಾಧ್ಯಮಗಳನ್ನು ಹೊರಗಿಟ್ಟು ( ಅವರಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿಯೇ) ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು ಪರಿಣಾಮಕಾರೀ ಸಂವಹನವನ್ನು ಸಾಧಿಸಿದ್ದು. ಈ ಕೆಲಸದಲ್ಲಿ ಚಂಡೀಗಡ ಮತ್ತು ಅಮೃತಸರದ ಇಂಜಿನೀಯರಿಂಗ್ ಓದುವ ವಿದ್ಯಾರ್ಥಿಗಳು ಅಸಾಧ್ಯವಾದ್ದನ್ನೇ ಸಾಧ್ಯಮಾಡಿದರು.
೭. ಕೋಮುವಾದದಿಂದ ದೂರ: ಭಾರತ ವಿಭಜನೆಗೆ ದೊಡ್ಡ ಮಟ್ಟದಲ್ಲಿ ಬಲಿಯಾದ ಪಂಜಾಬಿಗಳು ಮುಂದಿನ ದಿನಗಳಲ್ಲಿ ಕೋಮುವಾದ ತಮ್ಮೊಳಗೆ ಪ್ರವೇಶಿಸದ ಎಚ್ಚರವನ್ನು ತೋರಿಸಿದ್ದು. ಜೊತೆಗೆ ಮಹಿಳೆಯರು, ದಲಿತರು, ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಚಳುವಳಿಯಲ್ಲಿ ತೊಡಗಿಸಿಕೊಳ್ಳುವಂತೆ ಸಂಘಟನೆಯನ್ನು ರೂಪಿಸಿದ್ದು.
೮. ಸಕ್ರಿಯ ವಾತಾವರಣ: ಪ್ರತಿಭಟನೆಯ ಸ್ಥಳದಲ್ಲಿ ಸಂಗೀತ, ಉಪನ್ಯಾಸ, ಪ್ರವಚನ, ಜಿಮ್, ಕಲಾಶಿಬಿರ, ಗ್ರಂಥಾಲಯ ಇತ್ಯಾದಿಗಳು ಇರುವಂತೆ ಮಾಡಿ, ಹೋರಾಟದ ವಾತಾವರಣವನ್ನು ಜೀವಂತ ಇರಿಸಿದ್ದು.
೯. ಒಳಗೊಳ್ಳುವಿಕೆಯ ಕೆಲಸಗಳು: ಪ್ರತಿಭಟನಕಾರರು ಸದಾ ಹೋರಾಟದೊಂದಿಗೇ ಇರುವಂತೆ ಮಾಡಲು ಟ್ರಾಕ್ಟರ್ ಮೆರವಣಿಗೆ, ಮಹಾಪಂಚಾಯತ್, ಕಿಸಾನ್ ಸಭಾ ಇತ್ಯಾದಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ರೈತರು ಜಡವಾಗದಂತೆ ನೋಡಿಕೊಂಡದ್ದು.
೧೦. ಹೋರಾಟವು ದೇಶ-ವಿದೇಶಗಳ ಗಮನಸೆಳೆಯುವಂತೆ ತಂತ್ರಗಳನ್ನು ರೂಪಿಸಿದ್ದು.
೧೧. ವಿರೋಧಿಗಳು ಕಟ್ಟಿದ ಕಥನಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಸಮಯ ವ್ಯರ್ಥವಾಗದಂತೆ ನೋಡಿಕೊಂಡ ಹೋರಾಟಗಾರರು, ತಮ್ಮದೇ ಕಥನಗಳು ಜನರಿಗೆ ತಲುಪುವಂತೆ ಮಾಡಿದ್ದು.
ಅತ್ಯಂತ ಸಂಕ್ಷಿಪ್ತವಾಗಿ ಹೇಳಿದ ಮೇಲಿನ 11 ಅಂಶಗಳು ಹೋರಾಟಗಾರರಿಗೆ ಇನ್ನೂ ಹೆಚ್ಚಿನ ಅರ್ಥವನ್ನು ನೀಡೀತು ಎಂದು ಭಾವಿಸುತ್ತೇನೆ.