2021ರಲ್ಲಿ ಗಾಂಧೀಜಿ ಒಂದು ಹೊಸ ಅವತಾರದಲ್ಲಿ! ಸಾವರ್ಕರ್‌ಗೆ ಕ್ಷಮಾಯಾಚನೆಯ ಅರ್ಜಿಗಳ ಸಲಹೆಗಾರರಾಗಿ!!

ಸಾವರ್ಕರ್ ಅವರ ರಾಷ್ಟ್ರೀಯವಾದಕ್ಕೆ ರುಜುವಾತುಗಳನ್ನು ಸೃಷ್ಟಿಸಲು ಮಹಾತ್ಮ ಗಾಂಧಿಯವರನ್ನು ಎಳೆದು ತರಲಾಗುತ್ತಿದೆ, ಅದೂ ಕೂಡ ಕ್ಷುಲ್ಲಕ ಆಧಾರದ ಮೇಲೆ! ಈಮೂಲಕ, ಗಾಂಧೀಜಿ ಮತ್ತು ಸಾವರ್ಕರ್ ನಿಕಟ ಸಂಬಂಧವನ್ನು ಹೊಂದಿದ್ದರು, ಎಷ್ಟು ನಿಕಟವೆಂದರೆ, ಕ್ಷಮಾಯಾಚನೆಯ ಅರ್ಜಿಯಂತಹ ಮಹತ್ವದ ವಿಷಯಗಳ ಬಗ್ಗೆ ಗಾಂಧೀಜಿಯವರ ಸಲಹೆಯನ್ನು ಪಡೆದರು ಮತ್ತು ಗಾಂಧೀಜಿ ಅವರ ಬಿಡುಗಡೆಗೆ ಮನವಿ ಮಾಡಿದರು ಎಂಬ ಒಂದು ಚಿತ್ರವನ್ನು ಸೃಷ್ಟಿಸುವ ಪ್ರಯತ್ನವಿದು. ಹಲವಾರು ಇತರ ರಾಷ್ಟ್ರೀಯವಾದಿಗಳು ಕ್ಷಮಾದಾನ ಕೇಳಲು ನಿರಾಕರಿಸುತ್ತಿದ್ದಾಗ ಮತ್ತು ಸ್ವತಃ ಗಾಂಧೀಜಿಯಂತೂ ತನಗೆ ತೀವ್ರತರವಾದ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾಗ, ಸಾವರ್ಕರ್ ಕ್ಷಮೆಗಾಗಿ ಬೇಡುತ್ತಿದ್ದುದನ್ನು ಒಂದು ಸಾಮಾನ್ಯ ಸಂಗತಿ ಎಂದು ಬಿಂಬಿಸುವ ಸ್ಪಷ್ಟ ಪ್ರಯತ್ನ ಇದು ಎನ್ನುತ್ತಾರೆ ಈ ಮೂವರು ಇತಿಹಾಸಜ್ಞರು ಈ ಲೇಖನದಲ್ಲಿ.

ಮೃದುಲಾಮುಖರ್ಜಿ, ಆದಿತ್ಯ ಮುಖರ್ಜಿ ಮತ್ತು ಸುಚೇತಾ ಮಹಾಜನ್

ಭಾರತೀಯ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ “ಸಾವರ್ಕರ್ ವಿರುದ್ಧ ಬಹಳಷ್ಟು ಸುಳ್ಳುಗಳನ್ನು ಹರಡಲಾಗಿದೆ“ ಎಂದು ಹೇಳಿಕೊಂಡಿರುವುದಾಗಿ 13 ಅಕ್ಟೋಬರ್ 2021 ರ ಇಂಡಿಯನ್ ಎಕ್ಸ್‌ಪ್ರೆಸ್‌ ನಮಗೆ ಹೇಳುತ್ತದೆ, “ಅವರು ಬ್ರಿಟಿಷ್ ಸರ್ಕಾರದ ಮುಂದೆ ಅನೇಕ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರು ಎಂದು ಪದೇ ಪದೇ ಹೇಳಲಾಗಿದೆ. ಸತ್ಯವೆಂದರೆ ಆತ ತನ್ನ ಬಿಡುಗಡೆಗಾಗಿ ಈ ಅರ್ಜಿಗಳನ್ನು ಸಲ್ಲಿಸಲಿಲ್ಲ. ಸಾಮಾನ್ಯವಾಗಿ ಒಬ್ಬ ಖೈದಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕಿದೆ. ನೀವು ಕ್ಷಮಾದಾನ ಅರ್ಜಿ ಸಲ್ಲಿಸಿ ಎಂದು ಮಹಾತ್ಮ ಗಾಂಧಿ ಕೇಳಿದ್ದರು. ಗಾಂಧಿಯವರ ಸಲಹೆಯ ಮೇರೆಗೆ ಅವರು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರು ಮತ್ತು ಸಾವರ್ಕರ್ ಜೀಯವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಮನವಿ ಮಾಡಿದ್ದರು. ನಾವು ಸ್ವಾತಂತ್ರ‍್ಯಕ್ಕಾಗಿ ಚಳುವಳಿಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ ಹಾಗೆಯೇ ಸಾವರ್ಕರ್ ಕೂಡ ಎಂದು ಅವರು ಹೇಳಿದ್ದರು” ಎಂದೂ ಅದು ಹೇಳುತ್ತದೆ. “ನೀವು ಭಿನ್ನಾಭಿಪ್ರಾಯಗಳನ್ನು ಹೊಂದಬಹುದು, ಆದರೆ ಅವರನ್ನು ಹೀನಾಯವಾಗಿ ನೋಡುವುದು ಸರಿಯಲ್ಲ. ಅವರ ರಾಷ್ಟ್ರೀಯ ಕೊಡುಗೆಯನ್ನು ತುಚ್ಛವಾಗಿ ಕಾಣುವ ಕೃತ್ಯವನ್ನು ಸಹಿಸಲಾಗುವುದಿಲ್ಲ” ಎಂದು ಅವರು ಹೇಳಿದರಂತೆ (ಬೆದರಿಕೆಯನ್ನು ಗಮನಿಸಿ-ಗೋಡ್ಸೆ ದೇವಸ್ಥಾನಗಳನ್ನು ಸ್ಥಾಪಿಸುವುದು ಮತ್ತು ವ್ಯಕ್ತಿಪೂಜೆ ಮಾಡುವುದನ್ನು ಸಹಿಸಿಕೊಳ್ಳಬಹುದು ಆದರೆ ಸಾವರ್ಕರ್ ಅವರನ್ನು ಟೀಕಿಸುವುದನ್ನು ಸಹಿಸುವುದಿಲ್ಲ!)

ಯಾರಾದರೂ ಇವರ ಸ್ಪಷ್ಟೀಕರಣ ಕೇಳಲು ಬಂದುಬಿಡುವ ಮೊದಲು ಸಾಗಿಸಿ ಬಿಡಿ!! – ವ್ಯಂಗ್ಯಚಿತ್ರ ಕೃಪೆ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

ಸತ್ಯಸಂಗತಿಗಳು ಯಾವುವು?

ರಾಜನಾಥ್ ಸಿಂಗ್ ಅವರ ಹೇಳಿಕೆಯು ಬಹುಶಃ 1920 ರ ವರ್ಷಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿದೆ: ಗಾಂಧೀಜಿಯವರಿಗೆ ವಿ ಡಿ ಸಾವರ್ಕರ್ ಮತ್ತು ಗಣೇಶ್ ಸಾವರ್ಕರ್ ಅವರ ಸಹೋದರ ಎನ್ ಡಿ ಸಾವರ್ಕರ್ ಬರೆದ ಪತ್ರ, ಗಾಂಧೀಜಿಯವರ ಉತ್ತರ ಮತ್ತು ಗಾಂಧೀಜಿಯವರ ‘ಯಂಗ್ ಇಂಡಿಯಾ’ದಲ್ಲಿನ ಒಂದು ಲೇಖನ.

ವಾಸ್ತವಾಂಶಗಳು ರಾಜನಾಥ್ ಸಿಂಗ್ ಹೇಳಿಕೊಂಡಿರುವುದಕ್ಕಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿವೆ. ಮೊದಲ ಕ್ಷಮಾದಾನ ಅರ್ಜಿಯನ್ನು ಒಂಭತ್ತು ವರ್ಷಗಳ ಹಿಂದೆಯೇ ವಿನಾಯಕ ದಾಮೋದರ್ ಸಾವರ್ಕರ್ 1911 ರಲ್ಲಿ ಸಲ್ಲಿಸಿದರು, ಅವರು ಶಿಕ್ಷೆಗೊಳಗಾದ ಆರು ತಿಂಗಳೊಳಗೆ ಮತ್ತು ನಂತರದ ವರ್ಷಗಳಲ್ಲಿ ಇತರ ಹಲವು ಅರ್ಜಿಗಳನ್ನು ಸಲ್ಲಿಸಿದರು, ಇವನ್ನೆಲ್ಲ ಗಾಂಧೀಜಿಯ ಸಲಹೆಯ ಮೇರೆಗೆ ಸಲ್ಲಿಸಲಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳು ಅಥವಾ ದಾವೆಗಳಿಲ್ಲ! ಗೃಹ ಇಲಾಖೆ ಸದಸ್ಯ ಸರ್ ರೆಜಿನಾಲ್ಡ್ ಕ್ರಾಡಾಕ್ ಅವರು 1913ರಲ್ಲಿ ಅಂಡಮಾನ್ ಜೈಲಿಗೆ ಭೇಟಿ ನೀಡಿದಾಗ, ತನ್ನ ಬಿಡುಗಡೆಗಾಗಿ ಅವರಿಗೆ ವೈಯಕ್ತಿಕವಾಗಿ ಸಲ್ಲಿಸಿದ ಇಂತಹ ಒಂದು ಅರ್ಜಿಯಿಂದ ಉಲ್ಲೇಖಿಸುವುದಾದರೆ, ಅದರಲ್ಲಿ ತಾನು ಬ್ರಿಟಿಷ್ ಸರ್ಕಾರಕ್ಕೆ ನಿಷ್ಠರಾಗಿರುವುದಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಆ ಅರ್ಜಿಯ ಒಂದು ಉಲ್ಲೇಖವನ್ನು ಹೀಗಿದೆ:

“ಸರ್ಕಾರವು ತನ್ನ ಬಹುವಿಧ ಉಪಕಾರಬುದ್ಧಿ ಮತ್ತು ಕರುಣೆಯಿಂದ ನನ್ನನ್ನು ಬಿಡುಗಡೆ ಮಾಡಿದರೆ, ನಾನು ಸಂವಿಧಾನಾತ್ಮಕ ಪ್ರಗತಿಯ, ಮತ್ತು ಎಲ್ಲಕ್ಕೂ ಹೆಚ್ಚಾಗಿ ಆ ಪ್ರಗತಿಗೆ ಅಗತ್ಯವಾದ ಇಂಗ್ಲೀಷ್ ಸರ್ಕಾರಕ್ಕೆ ನಿಷ್ಠೆಯ ಪ್ರಬಲ ಪ್ರತಿಪಾದಕನಾಗಿರುವುದಲ್ಲದೆ ಬೇರೇನೂ ಆಗಿರಲಾರೆ. ಸರಕಾರ ಇಷ್ಟಪಡುವ ಯಾವುದೇ ಸ್ಥಾನದಲ್ಲಿ ನಾನು ಸರ್ಕಾರಕ್ಕೆ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ, ಏಕೆಂದರೆ ನನ್ನ ಪರಿವರ್ತನೆಯು ಅಂತಃಕರಣಪೂರ್ವಕ ವಾಗಿರುವುದರಿಂದ ನನ್ನ ಮುಂದಿನ ನಡವಳಿಕೆಯು ಹಾಗೆಯೇ ಇರುತ್ತದೆ ಎಂದು ನಾನು ಆಶಿಸುತ್ತೇನೆ. ಶಕ್ತಿಶಾಲಿಯು ಮಾತ್ರವೇ ಕರುಣಾಮಯಿಯಾಗಲು ಸಾಧ್ಯ, ಆದ್ದರಿಂದಲೇ ದುಂದುಗಾರ ಮಗ ಸರ್ಕಾರದ ಪೋಷಕ ಬಾಗಿಲಿಗಲ್ಲದೆ ಬೇರೆಲ್ಲಿಗೆ ಮರಳಿ ಬರಲು ಸಾಧ್ಯ?”

ಮುಂದೆ, ಜಿಎಸ್ ಖೋಪಾರ್ಡೆ ಅವರ ಸಾಕ್ಷ್ಯದಂತೆ, ಮಾರ್ಚ್ 22, 1920 ರಂದು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿ ಒಬ್ಬ ಸಾವರ್ಕರ್ ಬೆಂಬಲಿಗರು ಈ ಪ್ರಶ್ನೆ ಕೇಳಿದ್ದರು: “ಶ್ರೀ ಸಾವರ್ಕರ್ ಮತ್ತು ಅವರ ಸಹೋದರ 1915ರಲ್ಲಿ ಒಮ್ಮೆ ಮತ್ತು ಇನ್ನೊಂದು ಸಮಯದಲ್ಲಿ 1918ರಲ್ಲಿ ಬಿಡುಗಡೆಯಾದರೆ, ಯುದ್ಧದ ಮುಂದುವರಿಕೆಯ ಸಮಯದಲ್ಲಿ ಸೇನೆಯಲ್ಲಿ ಸೇರಿಕೊಂಡು ಸಾಮ್ರಾಜ್ಯಕ್ಕೆ ಸೇವೆ ಸಲ್ಲಿಸುವುದಾಗಿ ಮತ್ತು ಸುಧಾರಣಾ ಮಸೂದೆಯನ್ನು ಅಂಗೀಕರಿಸಿದ ನಂತರ, ಕಾಯಿದೆಯನ್ನು ಯಶಸ್ವಿಯಾಗಿ ಮಾಡಲು ಪ್ರಯತ್ನಿಸುವುದಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಬದ್ಧರಾಗಿರುವುದಾಗಿ ಹೇಳುವ ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.” ಹೋಂ ಮೆಂಬರ್ ಸರ್ ವಿಲಿಯಂ ವಿನ್ಸೆಂಟ್ ತಮ್ಮ ಉತ್ತರದಲ್ಲಿ: “ವಿನಾಯಕ ದಾಮೋದರ್ ಸಾವರ್ಕರ್ ಅವರಿಂದ ಎರಡು ಅರ್ಜಿಗಳನ್ನು – ಒಂದು 1914ರಲ್ಲಿ ಮತ್ತು ಇನ್ನೊಂದು 1917ರಲ್ಲಿ, ಅಧೀಕ್ಷಕ, ಪೋರ್ಟ್ ಬ್ಲೇರ್, ಮೂಲಕ ಸ್ವೀಕರಿಸಲಾಗಿದೆ. ಮೊದಲಿನದರಲ್ಲಿ ಅವರು ಯುದ್ಧದ ಸಮಯದಲ್ಲಿ ಯಾವುದೇ ಸ್ಥಾನದಲ್ಲಿ ಸರ್ಕಾರಕ್ಕೆ ತನ್ನ ಸೇವೆಗಳನ್ನು ಸಲ್ಲಿಸುವುದಾಗಿ ಹೇಳಿದ್ದರು ಮತ್ತು ಎಲ್ಲಾ ರಾಜಕೀಯ ಕೈದಿಗಳಿಗೆ ಒಂದು ಸಾರ್ವತ್ರಿಕ ಕ್ಷಮಾದಾನವನ್ನು ನೀಡಬೇಕೆಂದು ಪ್ರಾರ್ಥಿಸಿದರು. ಎರಡನೆಯ ಅರ್ಜಿಯು ನಂತರದ ಪ್ರಸ್ತಾವನೆಗೆ ಸೀಮಿತವಾಗಿತ್ತು.” ಎಂದು ದೃಢಪಡಿಸಿದರು.

ಹೀಗಾಗಿ, ಸಾವರ್ಕರ್ 1911 ಮತ್ತು 1920 ರ ನಡುವೆ ಗಾಂಧಿಯ ಯಾವುದೇ ಸಲಹೆ ಅಥವಾ ಪ್ರೇರಣೆಯಿಲ್ಲದೆಯೇ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರು ಎಂಬುದು ಸ್ಪಷ್ಟವಾಗಿದೆ. ಅವುಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯನ್ನು ಮತ್ತು ಯಾವುದೇ ಸ್ಥಾನದಿಂದ ಅದಕ್ಕೆ ಸೇವೆ ಸಲ್ಲಿಸಲು ತಾನು ಸಿದ್ಧ ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಸಾವರ್ಕರ್ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಲಿಲ್ಲ, ಆದರೆ ಮಹಾತ್ಮರ ಸಲಹೆಯ ಮೇರೆಗೆ ಮಾತ್ರ ಸಲ್ಲಿಸಿದರು ಎಂಬ ರಕ್ಷಣಾ ಸಚಿವರ ಹೇಳಿಕೆಯು ನಿಜವಾದ ಐತಿಹಾಸಿಕ ದಾಖಲೆಯಿಂದ ದೃಡಪಟ್ಟಿಲ್ಲ.

ಹಾಗಾದರೆ ಗಾಂಧೀಜಿ ಈ ಕಥೆಯಲ್ಲಿ ಎಲ್ಲಿ ಬರುತ್ತಾರೆ?

1920ರಲ್ಲಿ, ಬ್ರಿಟಿಷ್ ರಾಯಲ್ ಘೋಷಣೆಯ ಅಡಿಯಲ್ಲಿ ಬಿಡುಗಡೆಯಾಗಲಿದ್ದ ಕೈದಿಗಳ ಪಟ್ಟಿಯಲ್ಲಿ ಜೈಲಿನಲ್ಲಿದ್ದ ತನ್ನ ಇಬ್ಬರು ಸಹೋದರರ ಹೆಸರುಗಳು ಒಳಗೊಂಡಿಲ್ಲ ಎಂದು ಈ ಸಾವರ್ಕರ್ ಸಹೋದರರ ಕಿರಿಯ ಸಹೋದರ ಎನ್ ಡಿ ಸಾವರ್ಕರ್ ಗೆ ಕಂಡು ಬಂದಾಗ ಅವರು ಗಾಂಧೀಜಿಗೆ ಸಲಹೆ ಕೇಳಿದಾಗಲಷ್ಟೇ ಈ ಕಥೆಯಲ್ಲಿ ಬರುತ್ತಾರೆ. ಗಾಂಧೀಜಿಯವರು ಸಲಹೆ ನೀಡುವುದು ಕಷ್ಟ ಎಂದು ಉತ್ತರಿಸಿದರು, ಆದರೆ, ಅವರು ಒಂದು ಸಂಕ್ಷಿಪ್ತ ಅರ್ಜಿಯ ಕರಡನ್ನು ರಚಿಸಬಹುದು ಎಂದು ಸೂಚನೆ ನೀಡಿದರು. ಇದರ ಜೊತೆಯಲ್ಲಿ, ಅವರು 26 ಮೇ 1920 ರಂದು ‘ಯಂಗ್ ಇಂಡಿಯಾ’ದಲ್ಲಿ ‘ಸಾವರ್ಕರ್ ಬ್ರದರ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಲೇಖನವನ್ನು ಬರೆದರು, ಅಲ್ಲಿ ಅವರು ರಾಜಘೋಷಣೆಯನ್ನು ಉಲ್ಲೇಖಿಸುತ್ತಾರೆ ಮತ್ತು ಇತರ ಅನೇಕ ರಾಜಕೀಯ ಕೈದಿಗಳನ್ನು ಇದರ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದರೂ ಸಾವರ್ಕರ್ ಸಹೋದರರನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಬರೆಯುತ್ತಾರೆ.

ಅವರು ಹೇಳುತ್ತಾರೆ “ಇಬ್ಬರೂ ಸಹೋದರರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಘೋಷಿಸಿದ್ದಾರೆ, ಇಬ್ಬರೂ ತಾವು ಯಾವುದೇ ಕ್ರಾಂತಿಕಾರಿ ವಿಚಾರಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ ಮತ್ತು ತಾವು ಬಿಡುಗಡೆಗೊಂಡರೆ ಸುಧಾರಣಾ ಕಾಯಿದೆಯ ಅಡಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ…” (ಭಾರತ ಸರ್ಕಾರ ಕಾಯಿದೆ, 1919) “ ಬ್ರಿಟಿಷ್ ಸಂಬಂಧದಿಂದ ಸ್ವಾತಂತ್ರ‍್ಯವನ್ನು ಬಯಸುವುದಿಲ್ಲ ಎಂದು ಇಬ್ಬರೂ ನಿಸ್ಸಂದಿಗ್ಧವಾಗಿ ಹೇಳುತ್ತಾರೆ. ತದ್ವಿರುದ್ಧವಾಗಿ, ಅವರು ಭಾರತದ ಹಣೆಬರಹವನ್ನು ಬ್ರಿಟಿಷರ ಸಹಯೋಗದಲ್ಲಿಯೇ ಉತ್ತಮವಾಗಿ ರೂಪಿಸಬಹುದು ಎಂದು ಭಾವಿಸುತ್ತಾರೆ.”

ಗಮನಿಸಬೇಕಾದ ಸಂಗತಿಯೆಂದರೆ, ಗಾಂಧೀಜಿಯವರ ಲೇಖನದಲ್ಲಿ ಎಲ್ಲಿಯೂ ರಕ್ಷಣಾ ಸಚಿವರು “ಸಾವರ್ಕರ್‌ಜೀಯವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಮನವಿ ಮಾಡಿದರು” ಎಂದು ಹೇಳಿರುವಂತೆ ಸಾವರ್ಕರ್ ಬಿಡುಗಡೆಗೆ ಮನವಿಯೇನೂ ಇಲ್ಲ . ಅವರು “ಸಾರ್ವಜನಿಕ ಸುರಕ್ಷತೆ”ಗೆ ಯಾವುದೇ ಅಪಾಯ ಒಡ್ಡುವಂತಾಗಲೀ ಅಥವಾ “ಪ್ರಭುತ್ವಕ್ಕೆ ಅಪಾಯ” ಒಡ್ಡುವಂತಾಗಲೀ ಕಾಣುತ್ತಿಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡದಿರುವ ಸರ್ಕಾರದ ನಿರ್ಧಾರವನ್ನು ಗಾಂಧೀಜಿ ಪ್ರಶ್ನಿಸುತ್ತಾರೆ, ಆದರೆ ಬ್ರಿಟಿಷರಿಗೆ ಮನವಿ ಮಾಡುವುದಿಲ್ಲ. ಅಥವಾ ಗಾಂಧೀಜಿಯವರು ತಮ್ಮ ಲೇಖನದಲ್ಲಿ ಎಲ್ಲಿಯೂ, ರಕ್ಷಣಾ ಸಚಿವರು ಹೇಳುವಂತೆ, “ನಾವು ಸ್ವಾತಂತ್ರ‍್ಯಕ್ಕಾಗಿ ಚಳುವಳಿಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ, ಹಾಗೆಯೇ ಸಾವರ್ಕರ್ ಕೂಡ.” ಎಂದು ಹೇಳಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಗಾಂಧೀಜಿಯವರು ಸಾವರ್ಕರ್ ಸಹೋದರರು ಸ್ವಾತಂತ್ರ‍್ಯವನ್ನು ಬಯಸುವುದಿಲ್ಲ ಮತ್ತು ಸುಧಾರಣಾ ಕಾಯಿದೆಯ ಅಡಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂಬುದನ್ನು ಒತ್ತಿಹೇಳುತ್ತಾರೆ.

ಈ ಇಡೀ ಪ್ರಸಂಗದಲ್ಲಿ ವಿಚಿತ್ರವಾದ ವ್ಯಂಗ್ಯವಿದೆ. ಸಾವರ್ಕರ್ ಅವರ ರಾಷ್ಟ್ರೀಯತಾವಾದಕ್ಕೆ ರುಜುವಾತುಗಳನ್ನು ಸ್ಥಾಪಿಸಲು ಮಹಾತ್ಮಾ ಗಾಂಧೀಜಿಯವರನ್ನು ಎಳೆ ತರಲಾಗುತ್ತಿದೆ, ಅದೂ ಕೂಡ ಇಂತಹ ಕ್ಷುಲ್ಲಕ ಆಧಾರದ ಮೇಲೆ! ಈ ಮೂಲಕ, ಗಾಂಧೀಜಿ ಮತ್ತು ಸಾವರ್ಕರ್ ನಿಕಟ ಸಂಬಂಧವನ್ನು ಹೊಂದಿದ್ದರು, ಎಷ್ಟು ನಿಕಟವೆಂದರೆ, ಕ್ಷಮಾದಾನದ ಅರ್ಜಿಯಂತಹ ಮಹತ್ವದ ವಿಷಯಗಳ ಬಗ್ಗೆ ಗಾಂಧೀಜಿಯವರ ಸಲಹೆಯನ್ನು ಪಡೆದರು ಮತ್ತು ಗಾಂಧೀಜಿ ಅವರ ಬಿಡುಗಡೆಗೆ ಮನವಿ ಮಾಡಿದರು ಎಂಬ ಒಂದು ಚಿತ್ರವನ್ನು ಸಾರ್ವಜನಿಕ ಮನಸ್ಸಿನಲ್ಲಿ ಸೃಷ್ಟಿಸುವ ಪ್ರಯತ್ನವಿದು ಹಲವಾರು ಇತರ ರಾಷ್ಟ್ರೀಯವಾದಿಗಳು ಕ್ಷಮಾದಾನ ಕೇಳಲು ನಿರಾಕರಿಸುತ್ತಿದ್ದಾಗ ಮತ್ತು ಗಾಂಧೀಜಿಯಂತೂ ತನಗೆ ತೀವ್ರತರವಾದ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾಗ, ಸಾವರ್ಕರ್ ಕ್ಷಮೆಗಾಗಿ ಬೇಡುತ್ತಿದ್ದುದನ್ನು ಒಂದು ಸಾಮಾನ್ಯ ಸಂಗತಿ ಎಂದು ಬಿಂಬಿಸುವ ಸ್ಪಷ್ಟ ಪ್ರಯತ್ನವಾಗಿದೆ.

ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ

ನಾವು ಮರೆಯಬೇಕೆಂದು ನಿರೀಕ್ಷಿಸುವ ಸಂಗತಿಗಳು ಯಾವುವು?

ಜನವರಿ 1948ರಲ್ಲಿ, ಗಾಂಧಿ ಹತ್ಯೆಯಾದಾಗ, ಸಾವರ್ಕರ್ ಅವರನ್ನು ಪಿತೂರಿಯ ಹಿಂದಿನ ಮಹಾನಿಯೋಜಕ ಎಂದು ಶಂಕಿಸಲಾಗಿದ್ದರಿಂದ ಬಂಧಿಸಲಾಯಿತು. ಸರ್ದಾರ್ ಪಟೇಲ್, ಗೃಹ ಸಚಿವರಾಗಿ, ಇಡೀ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದರು, ಉತ್ತಮ ಕ್ರಿಮಿನಲ್ ವಕೀಲರಾಗಿದ್ದ ಅವರಿಗೆ, ಸಾವರ್ಕರ್ ಅವರ ತಪ್ಪು ವೈಯಕ್ತಿಕವಾಗಿ ಮನವರಿಕೆ ಆಗಿತ್ತು, ಇಲ್ಲದಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ಒಪ್ಪುತ್ತಿರಲಿಲ್ಲ. ಅವರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ನಿಸ್ಸಂದಿಗ್ಧವಾಗಿ ಹೇಳಿದರು, ‘ಇದು ನೇರವಾಗಿ ಹಿಂದೂ ಮಹಾಸಭಾದ ಮತಾಂಧ ವಿಭಾಗವಾಗಿದ್ದು, ಸಾವರ್ಕರ್ ನೇತೃತ್ವದಲ್ಲಿ ಪಿತೂರಿಯನ್ನು [ಮಾಡಿತು] ಮತ್ತು ಅದನ್ನು ಸಾಧಿಸಿತು. (ದುರ್ಗಾ ದಾಸ್, ಸರ್ದಾರ್ ಪಟೇಲ್ ಪತ್ರವ್ಯವಹಾರ, 1945-50, ಸಂಪುಟ 6, ಪುಟ 56.)

ಹಿಂದೂ ಮಹಾಸಭಾ ತನ್ನ ಪಾತ್ರವೇನೂ ಇಲ್ಲ ಎಂದುದಕ್ಕೆ ಪ್ರತಿಕ್ರಿಯೆಯಾಗಿ, ಪಟೇಲರು 6 ಮೇ 1948 ರಂದು ಹಿಂದೂ ಮಹಾಸಭಾ ನಾಯಕರಾದ ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಹೀಗೆ ಪತ್ರ ಬರೆದರು:

“… ಮಹಾಸಭಾದ ಸದಸ್ಯರ ಒಂದು ಗಮನಾರ್ಹ ಸಂಖ್ಯೆಯ ಜನರು ದುರಂತದ ಬಗ್ಗೆ ಸಂತೋಷಪಟ್ಟರು ಮತ್ತು ಸಿಹಿತಿಂಡಿಗಳನ್ನು ಹಂಚಿದರು ಎಂಬ ಅಂಶಕ್ಕೆ ನಾವು ಕಣ್ಣು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಮಹಂತ್ ದಿಗ್ಬಿಜಯ್ ನಾಥ್, ಪ್ರೊ.ರಾಮ್ ಸಿಂಗ್ ಮತ್ತು ದೇಶಪಾಂಡೆ ಸೇರಿದಂತೆ ಮಹಾಸಭಾದ ಹಲವು ವಕ್ತಾರರು ಕೆಲವೇ ತಿಂಗಳುಗಳ ಹಿಂದೆ ಬೋಧಿಸುತ್ತಿದ್ದ ಉಗ್ರಗಾಮಿ ಕೋಮುವಾದ ಸಾರ್ವಜನಿಕ ಭದ್ರತೆಗೆ ಅಪಾಯ ಎಂದಲ್ಲದೆ ಬೇರೆ ರೀತಿಯಲ್ಲಿ ಪರಿಗಣಿಸಲು ಆಗಲಿಲ್ಲ. ಆರ್.ಎಸ್.ಎಸ್.ಗೆ ಕೂಡ ಇದು ಅನ್ವಯಿಸುತ್ತದೆ, ಜತೆಗೆ ಮಿಲಿಟರಿ ಅಥವಾ ಅರೆ ಸೇನಾ ಮಾರ್ಗದಲ್ಲಿ ರಹಸ್ಯವಾಗಿ ನಡೆಸಲ್ಪಡುವ ಸಂಸ್ಥೆಯಲ್ಲಿ ಹೆಚ್ಚುವರಿ ಅಪಾಯ ಅಂತರ್ಗತವಾಗಿರುತ್ತದೆ.” (ಸರ್ದಾರ್ ಪಟೇಲ್ ಕರೆಸ್ಪಾಂಡೆನ್ಸ್, ಸಂಪುಟ 6, ಪುಟ 66.)

ಮುಂದೆ, ಪಟೇಲರು ಶ್ಯಾಮಪ್ರಸಾದ್ ಮುಖರ್ಜಗೆ ‘ಆರ್‌ಎಸ್‌ಎಸ್‌ನ ಚಟುವಟಿಕೆಗಳು ಸರ್ಕಾರ ಮತ್ತು ಪ್ರಭುತ್ವದ ಅಸ್ತಿತ್ವಕ್ಕೆ ಸ್ಪಷ್ಟವಾದ ಅಪಾಯವನ್ನುಂಟುಮಾಡಿದೆ” ಎಂದು ಬೊಟ್ಟುಮಾಡು ಹೇಳಿದರು (18 ಜುಲೈ 1948, ಸರ್ದಾರ್ ಪಟೇಲ್ ಕರೆಸ್ಪಾಂಡೆನ್ಸ್, ಸಂಪುಟ 6, ಪುಟ 323.)

ಮುಂಬೈಯ ಮುಖ್ಯಮಂತ್ರಿ, ಬಿ.ಜಿ. ಖೇರ್, ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ಪಟೇಲ್‌ಗೆ ಹೀಗೆಂದು ವಿವರಿಸಿದರು: ‘ಹಿಂದೂ ಮಹಾಸಭಾವು ಕಾಂಗ್ರೆಸ್ ಮತ್ತು ಮಹಾತ್ಮರ ವಿರುದ್ಧ ದ್ವೇಷದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿತು, ಅದು ಕೆಲವು ಮಹಾರಾಷ್ಟ್ರೀಯರ ಕೈಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಕೊನೆಗೊಂಡಿತು’. {ಬಿ.ಜಿ. ಖೇರ್ ಟು ಪಟೇಲ್, 26 ಮೇ 1948, ಅದೇ., ಸಂಪುಟ. 6, ಪುಟಗಳು 77-78.)

ಕ್ರಿಮಿನಲ್ ಕಾನೂನಿನ ಒಂದು ತಾಂತ್ರಿಕ ಅಂಶದಿಂದಾಗಿ ಸಾವರ್ಕರ್ ಅಂತಿಮವಾಗಿ ಗಾಂಧಿ ಕೊಲೆ ವಿಚಾರಣೆಯಲ್ಲಿ ಶಿಕ್ಷೆಗೊಳಗಾಗಲಿಲ್ಲ: ಅದೆಂದರೆ, ಮಾಫಿ ಸಾಕ್ಷೀದಾರ(ಅಪ್ರೂವರ್)ನ ಸಾಕ್ಷ್ಯವನ್ನು ದೃಡಿಕರಿಸಲು ಸ್ವತಂತ್ರ ಸಾಕ್ಷ್ಯಾಧಾರಗಳ ಕೊರತೆ.

ಆದಾಗ್ಯೂ, ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೀವನ್ ಲಾಲ್ ಕಪೂರ್ ಅವರ ಅಡಿಯಲ್ಲಿ 1965ರಲ್ಲಿ ಸ್ಥಾಪಿಸಲಾದ ವಿಚಾರಣಾ ಆಯೋಗವು ವಿಚಾರಣಾ ನ್ಯಾಯಾಧೀಶರಿಗೆ ಲಭ್ಯವಿಲ್ಲದ ಸಾಕಷ್ಟು ಪುರಾವೆಗಳನ್ನು ಕಲೆ ಹಾಕಿತು. ವಿಚಾರಣೆಯಲ್ಲಿ ಸಾಕ್ಷಿ ಹೇಳದ, ಸಾವರ್ಕರ್ ಅವರ ಇಬ್ಬರು ನಿಕಟವರ್ತಿಗಳಾದ ಎ ಪಿ ಕಸರ್ ಮತ್ತು ಜಿ.ವಿ. ದಾಮ್ಲೆ ಆ ವೇಳೆಗೆ ಸಾವರ್ಕರ್ ನಿಧನರಾಗಿದ್ದರಿಂದ ಕಪೂರ್ ಕಮಿಷನ್ ಮುಂದೆ ಮಾತನಾಡಿದ್ದು, ಮಾಫಿ ಸಾಕ್ಷೀದಾರರ ಹೇಳಿಕೆಗಳನ್ನು ದೃಡಪಡಿಸಿದರು. ಒಂದು ವೇಳೆ ಅವರು ವಿಚಾರಣೆಯಲ್ಲಿ ಸಾಕ್ಷಿ ಹೇಳಿದ್ದರೆ ಸಾವರ್ಕರ್ ಅಪರಾಧಿ ಎಂದು ಸಾಬೀತಾಗುವ ಸಾಧ್ಯತೆ ಇತ್ತು. ವಾಸ್ತವವಾಗಿ, ಕಪೂರ್ ಆಯೋಗವು ಸರ್ದಾರ್ ಪಟೇಲ್ ಅವರಂತೆಯೇ ಒಂದು ತೀರ್ಮಾನಕ್ಕೆ ಬಂದಿತು: ‘ಈ ಎಲ್ಲಾ ಸಂಗತಿಗಳನ್ನು ಒಟ್ಟಾಗಿ ತೆಗೆದುಕೊಂಡರೆ ಸಾವರ್ಕರ್ ಮತ್ತು ಅವರ ಗುಂಪಿನ ಕೊಲೆ ಪಿತೂರಿಯನ್ನು ಹೊರತುಪಡಿಸಿ ಬೇರೆ ಯಾವುದೇ ಸಿದ್ಧಾಂತವನ್ನು ಧ್ವಂಸ ಮಾಡುತ್ತದೆ’ (ಮಹಾತ್ಮ ಗಾಂಧಿಯವರ ಕೊಲೆಗೆ ಪಿತೂರಿಯ ವಿಚಾರಣೆಯ ಆಯೋಗದ ವರದಿ, 1970, ಪುಟ 303, ಪ್ಯಾರಾ 25.106.)

ಗಾಂಧೀಜಿಯವರ ಹತ್ಯೆಯ ನಂತರ, ಸರ್ದಾರ್ ಪಟೇಲ್, ಉಪಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಭಾರತ ಸರ್ಕಾರವು ಆರ್.ಎಸ್.ಎಸ್. ಅನ್ನು ನಿಷೇಧಿಸಿತು ಮತ್ತು ಅದರ ಸುಮಾರು 25,000 ಸದಸ್ಯರನ್ನು ಜೈಲಿಗೆ ಹಾಕಿತು. ಹಿಂದೂ ಮಹಾಸಭಾ ನಿಷೇಧವನ್ನು ಎದುರಿಸಬೇಕಾಗಿ ಬಂದಾಗ ತನ್ನನ್ನು ತಾನೇ ವಿಸರ್ಜಿಸಿ ಕೊಳ್ಳುವದೇ ಒಳ್ಳೆಯದು ಎಂದು ಬಗೆಯಿತು. ಗಾಂಧೀಜಿಯವರ ಕೊಲೆಯೊಂದಿಗೆ ಕಳಂಕಿತವಾಗಿದ್ದ ಹಿಂದೂ ಮಹಾಸಭಾವು ಹಿಂದೆ ಸರಿಯುವ ತಂತ್ರವನ್ನು ಅನುಸರಿಸಿದರೆ, ಶ್ಯಾಮ ಪ್ರಸಾದ್ ಮುಖರ್ಜಿ, 1951 ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು. ಇದು ಅಂದಿನಿಂದ ಹಿಂದೂ ಕೋಮುವಾದಿ ಅಭಿವ್ಯಕ್ತಿಯ ಪ್ರಮುಖ ರಾಜಕೀಯ ವಾಹಕವಾಯಿತು, ತುರ್ತುಪರಿಸ್ಥಿತಿಯ ನಂತರ ಜನತಾ ಪಕ್ಷದಲ್ಲಿ ವಿಲೀನಗೊಳ್ಳುವವರೆಗೆ ಅದರ ಮುಂಚೂಣಿಯ ರಾಜಕೀಯ ಪಕ್ಷವಾಯಿತು ಮತ್ತು ನಂತರ ಅದರ ಜಾಗದಲ್ಲಿ ಬಿಜೆಪಿ ಬಂತು.

ಭಾರತದ ಸ್ವಾತಂತ್ರ‍್ಯಕ್ಕಾಗಿ ನಿಜವಾದ ಹೋರಾಟ ನಡೆಯುತ್ತಿದ್ದಾಗ ಇಂದು ಅತ್ಯಂತ ಬದ್ಧ ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುವ ರಾಜಕೀಯ ಶಕ್ತಿಗಳು ಯಾವುದೇ ಪಾತ್ರವನ್ನು ವಹಿಸದಿರುವುದು ನಿಜಕ್ಕೂ ವಿಪರ್ಯಾಸ.

1924 ರಲ್ಲಿ ಬ್ರಿಟಿಷರ ಕ್ಷಮಾದಾನ ಪಡೆದು ಜೈಲಿನಿಂದ ಬಿಡುಗಡೆಗೊಂಡಾಗ ಸ್ವಾಗತ

1924ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಸಾವರ್ಕರ್ ಯಾವುದೇ ಬ್ರಿಟಿಷ್ ವಿರೋಧಿ ರಾಜಕೀಯದಲ್ಲಿ ಭಾಗವಹಿಸಲಿಲ್ಲ. ವಾಸ್ತವವಾಗಿ, ಅವರು, ಅಸಲೀ ಭಾರತೀಯರೆಂದರೆ ಯಾರು ಎಂಬುದನ್ನು ಅವರ ‘ಪಿತೃಭೂಮಿ’ ಮತ್ತು ‘ಪುಣ್ಯಭೂಮಿ’ ಆಧಾರದಲ್ಲಿ ವ್ಯಾಖ್ಯಾನಿಸುವ, ಆ ಮೂಲಕ, ಪುಣ್ಯಭೂಮಿಯು ಭಾರತದಿಂದ ಹೊರಗಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರತುಪಡಿಸುವ ಹಿಂದುತ್ವ ಸಿದ್ಧಾಂತದ ಮೂಲ ರೂವಾರಿಯಾಗಿದ್ದರು. 1930 ಮತ್ತು 1940ರ ದಶಕಗಳಲ್ಲಿ ಹಿಂದೂ ಮಹಾಸಭಾ ಕೂಡ ಬ್ರಿಟಿಷರಿಗೆ ಹೆಚ್ಚು ನಿಷ್ಠಾವಂತವಾಯಿತು. ನಿಷ್ಠಾವಂತ ಪ್ರವೃತ್ತಿ ಮೊದಲೇ ಇದ್ದರೂ, ಆರಂಭದಲ್ಲಿ ಅದರ ಕೆಲವು ನಾಯಕರು ಕಾಂಗ್ರೆಸ್ ನೇತೃತ್ವದ ಚಳುವಳಿಗಳಲ್ಲಿ ಭಾಗವಹಿಸಿದರು. ಆದರೆ 1937 ರಿಂದ, ಸಾವರ್ಕರ್ ಅಧ್ಯಕ್ಷರಾಗಿ, ಅದರ ನಿರ್ವಿವಾದ ನಾಯಕರಾದಾಗ, ಅವರು ಬ್ರಿಟಿಶ್ ಸಾಮ್ರಾಜ್ಯದ ಮೇಜಿನಿಂದ ಎಸೆಯುವ ರೊಟ್ಟಿ ತುಣುಕುಗಳಿಗಾಗಿ ಮುಸ್ಲಿಂ ಲೀಗ್‌ನೊಂದಿಗೆ ಸ್ಪರ್ಧೇಗೆ ಇಳಿದರು. ಎರಡನೆಯ ಮಹಾಯುದ್ಧದ ಆರಂಭವು ರಾಷ್ಟ್ರೀಯತಾವಾದಿ ಶಕ್ತಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಕ್ಕೆ ತಂದಿತು. ಭಾರತವನ್ನು ಅದರ ಒಪ್ಪಿಗೆಯಿಲ್ಲದೆ ಯುದ್ಧದಲ್ಲಿ ಭಾಗೀದಾರ ಮಾಡಲು ನಿರ್ಧರಿಸಿದಾಗ, ಕಾಂಗ್ರೆಸ್ ಪ್ರಾಂತೀಯ ಸಚಿವರು ಬ್ರಿಟಿಷ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜೀನಾಮೆ ನೀಡಿದರೆ, ಹಿಂದೂ ಮಹಾಸಭಾ ನಾಯಕರು ಬ್ರಿಟಿಷರಿಗೆ ಸಹಕಾರವನ್ನು ನೀಡಿದರು ಮತ್ತು ಭಾರತೀಯರು ಯುದ್ಧ-ಪ್ರಯತ್ನದಲ್ಲಿ ಭಾಗವಹಿಸಿ ಸೈನ್ಯಕ್ಕೆ ಸೇರಿಕೊಳ್ಳಬೇಕೆಂದು ಪ್ರತಿಪಾದಿಸಿದರು. ಸಾವರ್ಕರ್, ಮಹಾಸಭಾದ ಅಧ್ಯಕ್ಷರಾಗಿ, ಹಿಂದೂಗಳಿಗೆ ‘ಬ್ರಿಟಿಷ್ ಸರ್ಕಾರದ ಎಲ್ಲಾ ಯುದ್ಧ-ಪ್ರಯತ್ನಗಳಲ್ಲಿ ಭಾಗವಹಿಸುವಂತೆ’ ಮನವಿ ಮಾಡಿದರು ಮತ್ತು ಈ ನೀತಿಯನ್ನು ‘ಸಾಮ್ರಾಜ್ಯಶಾಹಿಯ ಸಹಕಾರ’ ಎಂದು “ಖಂಡನೆ” ಮಾಡುವ “ಕೆಲವು ಮೂರ್ಖರ” ಮಾತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.(ಸಾವರ್ಕರ್, ಹಿಂದೂ ರಾಷ್ಟ್ರ ದರ್ಶನ, ಪುಟ 203 ff.)

ಖಾಸಗಿಯಾಗಿ, ಸಾವರ್ಕರ್ ಅಕ್ಟೋಬರ್ 1939ರಲ್ಲಿ ವೈಸ್‌ರಾಯ್‌ಗೆ ಹಿಂದೂಗಳು ಮತ್ತು ಬ್ರಿಟಿಷರು ಸ್ನೇಹಿತರಾಗಿರಬೇಕು ಎಂದು ಹೇಳಿದರು ಮತ್ತು ಕಾಂಗ್ರೆಸ್ ಮಂತ್ರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ ಹಿಂದೂ ಮಹಾಸಭಾ ಆ ಜಾಗವನ್ನು ತುಂಬುತ್ತದೆ ಎಂದು ಭರವಸೆ ನೀಡಿತು.(ಝೆಟ್ಲ್ಯಾಂಡ್ಗೆ, ಗೃಹ ಕಾರ್ಯದರ್ಶಿಗೆ ಲಿಲಿತ್ ಗೊ, ವೈಸರಾಯ್ ಪತ್ರ, 7 ಅಕ್ಟೋಬರ್ 1939, ಜೆಟ್ಲ್ಯಾಂಡ್ ಪೇಪರ್ಸ್, ಸಂಪುಟ 18, ರೀಲ್ ಸಂಖ್ಯೆ 6.)

ಈ ಬ್ರಿಟಿಷ್ ಪರ ನೀತಿಗೆ ಅನುಸಾರವಾಗಿ, 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿದ್ದಾಗ ಮತ್ತು ಗಾಂಧೀಜಿ ಸೇರಿದಂತೆ ಇಡೀ ರಾಷ್ಟ್ರೀಯವಾದಿ ಕಾಂಗ್ರೆಸ್ ನಾಯಕತ್ವವು ಜೈಲಿನಲ್ಲಿದ್ದಾಗ, ಹಿಂದೂ ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂಗಾಳದ ಫಜ್ಲುಲ್ ಹಕ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದರು. ಹಿಂದೂ ಮಹಾಸಭಾವು ಸಿಂಧ್ ಮತ್ತು ವಾಯವ್ಯ ಗಡಿಪ್ರಾಂತದಲ್ಲಿ ಮುಸ್ಲಿಂ ಲೀಗ್ ನೊಂದಿಗೆ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿತು. ಈ ಎಲ್ಲಾ ನಿಷ್ಠೆ ಅವರಿಗೆ ಚುನಾವಣಾ ಯಶಸ್ಸನ್ನು ಗಳಿಸಿ ಕೊಡಲಿಲ್ಲ, ಅವರು 1946ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು ಎಂಬುದು ಬೇರೆ ಮಾತು!

ಆರ್‌ಎಸ್‌ಎಸ್ ಕೂಡ ಒಂದು ಸಂಘಟನೆಯಾಗಿ ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ‍್ಯಕ್ಕಾಗಿ ಯಾವುದೇ ಪ್ರಮುಖ ಸಮರಗಳಲ್ಲಿ ಭಾಗವಹಿಸಲಿಲ್ಲ. ಆರೆಸ್ಸೆಸ್ ಅನ್ನು 1925ರಲ್ಲಿ ಸ್ಥಾಪಿಸಲಾಯಿತು, 3 ವರ್ಷದ ನಂತರ 1928ರಲ್ಲಿ ಸೈಮನ್ ಕಮಿಷನ್ ಬಹಿಷ್ಕಾರವಲ್ಲದೆ, ಕನಿಷ್ಠ ಎರಡು ಪ್ರಮುಖ ಚಳುವಳಿಗಳನ್ನು, 1930-34ರ ನಾಗರಿಕ ಅಸಹಕಾರ ಚಳುವಳಿ ಮತ್ತು 1942ರ ಕ್ವಿಟ್ ಇಂಡಿಯಾ ಚಳುವಳಿಯನ್ನು ಕಾಂಗ್ರೆಸ್ ನಡೆಸಿತು. ಇವುಗಳಲ್ಲಿ ಆರ್‌ಎಸ್‌ಎಸ್ ಯಾವುದೇ ಪಾತ್ರವನ್ನು ವಹಿಸಲಿಲ್ಲ. ಆರ್‌ಎಸ್‌ಎಸ್‌ನ ಸಂಸ್ಥಾಪಕ ಹೆಡ್ಗೆವಾರ್ 1930 ರಲ್ಲಿ ವೈಯಕ್ತಿಕವಾಗಿ ಜೈಲಿಗೆ ಹೋಗಿದ್ದರು, ಆದರೆ ಅವರು ತಮ್ಮ ಸಂಘಟನೆ ಮತ್ತು ಅದರ ಸದಸ್ಯರನ್ನು ಅಸಹಕಾರ ಚಳವಳಿಯಿಂದ ದೂರವಿಟ್ಟರು. ಸರ್ಕಾರವು ಆರ್‌ಎಸ್‌ಎಸ್‌ನಿಂದ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿತ್ತು. ಆರೆಸ್ಸೆಸ್ ಕುರಿತು ಗೃಹ ಇಲಾಖೆಯ ಟಿಪ್ಪಣಿಯು ಇದನ್ನು ವರದಿ ಮಾಡಿದೆ: ‘ಕಾಂಗ್ರೆಸ್ ಗಲಭೆಗಳ ಸಮಯದಲ್ಲಿ (1943ರಲ್ಲಿ) ಆರ್‌ಎಸ್‌ಎಸ್ ನ ಸಭೆಗಳಲ್ಲಿ, ನಾಯಕರುಗಳು ತಮ್ಮ ಸದಸ್ಯರನ್ನು ಕಾಂಗ್ರೆಸ್ ಚಳವಳಿಯಿಂದ ದೂರವಿರುವಂತೆ ಒತ್ತಾಯಿಸಿದರು ಮತ್ತು ಈ ಸೂಚನೆಗಳನ್ನು ಸಾಮಾನ್ಯವಾಗಿ ಪಾಲಿಸಲಾಯಿತು.”

ಗಾಂಧೀಜಿ ಹತ್ಯೆಯ ವಿಚಾರಣೆಯಲ್ಲಿ ಕಟೆಕಟೆಯಲ್ಲಿ ಗೋಡ್ಸೆ ಮತ್ತಿತರರೊಂದಿಗೆ ಸಾವರ್ಕರ್- ಹಿಂದಿನ ಸಾಲಿನಲ್ಲಿ

ಗಾಂಧೀಜಿಯ ಹತ್ಯೆಯಾದಾಗ, ಸಾವರ್ಕರ್ ಅವರನ್ನು ಪಿತೂರಿಯ ಹಿಂದಿನ ಮಹಾನಿಯೋಜಕ ಎಂದು ಶಂಕಿಸಲಾಗಿದ್ದರಿಂದ ಬಂಧಿಸಲಾಯಿತು. ಸರ್ದಾರ್ ಪಟೇಲ್, ಗೃಹ ಸಚಿವರಾಗಿ, ಇಡೀ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದರು, ಉತ್ತಮ ಕ್ರಿಮಿನಲ್ ವಕೀಲರಾಗಿದ್ದ ಅವರಿಗೆ, ಸಾವರ್ಕರ್ ಅವರ ತಪ್ಪು ವೈಯಕ್ತಿಕವಾಗಿ ಮನವರಿಕೆ ಆಗಿತ್ತು, ಇಲ್ಲದಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ಒಪ್ಪುತ್ತಿರಲಿಲ್ಲ.ಮಾಫಿ ಸಾಕ್ಷೀದಾರ(ಅಪ್ರೂವರ್)ನ ಸಾಕ್ಷ್ಯವನ್ನು ದೃಡಿಕರಿಸಲು ಸ್ವತಂತ್ರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಾವರ್ಕರ್ ಅಂತಿಮವಾಗಿ ಗಾಂಧಿ ಕೊಲೆ ವಿಚಾರಣೆಯಲ್ಲಿ ಶಿಕ್ಷೆಗೊಳಗಾಗಲಿಲ್ಲ: ಆದಾಗ್ಯೂ, 1965ರಲ್ಲಿ ನೇಮಿಸಿದ ವಿಚಾರಣಾ ಆಯೋಗವು ಹಿಂದೆ ವಿಚಾರಣಾ ನ್ಯಾಯಾಧೀಶರಿಗೆ ಲಭ್ಯವಿಲ್ಲದ ಸಾಕಷ್ಟು ಪುರಾವೆಗಳನ್ನು ಕಲೆ ಹಾಕಿತು. ಹಿಂದೆ ಸಾಕ್ಷಿ ಹೇಳದ, ಸಾವರ್ಕರ್ ಅವರ ಇಬ್ಬರು ನಿಕಟವರ್ತಿಗಳಾದ ಎ ಪಿ ಕಸರ್ ಮತ್ತು ಜಿ.ವಿ. ದಾಮ್ಲೆ ಆ ವೇಳೆಗೆ ಸಾವರ್ಕರ್ ನಿಧನರಾಗಿದ್ದರಿಂದ ಕಪೂರ್ ಕಮಿಷನ್ ಮುಂದೆ ಮಾತನಾಡಿದ್ದು, ಮಾಫಿ ಸಾಕ್ಷೀದಾರರ ಹೇಳಿಕೆಗಳನ್ನು ದೃಡಪಡಿಸಿದರು.

ಗಾಂಧೀಜಿಯವರ ಹತ್ಯೆಯ ನಂತರ ಏಕೆ ಆರ್‌ಎಸ್‌ಎಸ್ ಮತ್ತು ಜನ ಸಂಘ-ಬಿಜೆಪಿ ಶಿಬಿರದಲ್ಲಿ ಸಾವರ್ಕರ್ ಅವರ ಬಗ್ಗೆ ಏಕೆ 4-5 ದಶಕಗಳಿಗು ಹೆಚ್ಚು ಕಾಲ ಮೌನವಿತ್ತು ಎಂದು ಕೇಳುವುದು ನ್ಯಾಯಸಮ್ಮತವಾಗಿದೆ. ಜನಮಾನಸದಲ್ಲಿ ಸಾವರ್ಕರ್ ಅವರು ಗಾಂಧೀಜಿಯವರ ಹತ್ಯೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಬಿಂಬಿತವಾಗಿದ್ದರಿಂದ ಅವರ ಪರವಾಗಿ ಮಾತಾಡುವುದು ರಾಜಕೀಯವಾಗಿ ಆತ್ಮಹತ್ಯೆಯೇ ಅಗುತ್ತಿತ್ತು ಎಂಬ ಕಾರಣಕ್ಕಾಗಿಯೇ ಹೀಗಾಗಿರಬಹುದೇ? ಈಗ ಬಹಳಷ್ಟು ಸಮಯ ಕಳೆದುಹೋಗಿದೆ, ಸಾರ್ವಜನಿಕ ನೆನಪು ಬಹಳ ಸಮಯ ಇರುವುದಿಲ್ಲ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಸಾವರ್ಕರ್ ರನ್ನು ಈಗ ಮತ್ತೆ ಜೀವಂತಗೊಳಿಸಬಹುದು ಎಂದು ಭಾವಿಸಿರಬಹುದೇ? ಅಲ್ಲದೆ, ಹೊಸ ಆಕ್ರಮಣಕಾರಿ ಹಂತದ ಭಾಗವಾಗಿ ‘ಹಿಂದುತ್ವ’ಕ್ಕೆ ಹೊಸ ಸಾರ್ವಜನಿಕ ಒತ್ತು ನೀಡುತ್ತಿರುವಾಗ, ಈ ಪರಿಕಲ್ಪನೆಯ ಮೂಲ ಸೃಷ್ಟಿಕರ್ತನನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿತ್ತು. ಇದಲ್ಲದೆ, ‘ರಾಷ್ಟ್ರೀಯವಾದಿ’ ಎಂದು ಹೇಳಿಕೊಳ್ಳುವ ಪಕ್ಷಕ್ಕೆ, ತೋರಿಸಲು ಯಾವುದೇ ಸ್ವಾತಂತ್ರ‍್ಯ ಹೋರಾಟಗಾರರಿಲ್ಲದಿರುವುದು ಸ್ವಲ್ಪ ಮುಜುಗರದ ಸಂಗತಿಯಾಗಿದೆ. ಆದ್ದರಿಂದ, ರಾಷ್ಟ್ರೀಯವಾದಿ ಪ್ರತಿಮೆಗಳನ್ನು ಕಂಡುಹಿಡಿಯುವ ಹತಾಶ ಪ್ರಯತ್ನದಲ್ಲಿ, ಸಾವರ್ಕರ್ ಅವರನ್ನು ಆ ಅಚ್ಚಿನಲ್ಲಿ ಚಿತ್ರಿಸಲು ಪ್ರಯತ್ನಿಸಲಾಗುತ್ತಿದೆ.

ಸಾವರ್ಕರ್ ಅವರನ್ನು ಕ್ರಾಂತಿವೀರ, ಅಂಡಮಾನ್ ಕ್ರಾಂತಿಕಾರಿ ಎಂದು ಸ್ಮರಿಸುವ ಮೂಲಕ ಅವರ ಕೋಮುವಾದದ ಮೇಲೆ ರಾಷ್ಟ್ರೀಯವಾದ ಮುಸುಕು ಎಳೆಯಲಾಗಿದೆ. ಆ ಸಾವರ್ಕರ್ ಅಂಡಮಾನ್‌ನಲ್ಲಿ ಕ್ಷಮಿಸುವಂತೆ ಪದೇ ಪದೇ ಕೇಳುವ ಮೂಲಕ ಕ್ರಾಂತಿಕಾರಿಗಳನ್ನು ನಾಚಿಕೆಪಡುವಂತೆ ಮಾಡಿದರು ಮತ್ತು ಬ್ರಿಟಿಷ್ ಸರ್ಕಾರಕ್ಕೆ ನೀಡಿದ ಭರವಸೆಯಂತೆ ಅವರು ಬಿಡುಗಡೆಯಾದ ನಂತರ ಯಾವುದೇ ರಾಷ್ಟ್ರೀಯವಾದಿ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ ಎಂಬುದನ್ನು ಮರೆಯುವಂತೆ ಮಾಡಲು ಪ್ರಯತ್ನಿಸಲಾಗಿದೆ. 2003ರಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅಧಿಕಾರದಲ್ಲಿದ್ದಾಗ, ಸಾಕಷ್ಟು ವಿರೋಧದ ಹೊರತಾಗಿಯೂ, ಸಾವರ್ಕರ್ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಸ್ಥಾಪಿಸಲಾಯಿತು. ಸಾವರ್ಕರ್ ಬಗ್ಗೆ ಅನುಮಾನದ ತುಸುವಾದರೂ ಸಂದೇಹ ಇದ್ದರೂ ಹೀಗಾಗಬಾರದಿತ್ತು ಎಂದು ಯಾರಾದರೂ ಕಲ್ಪಿಸಿಕೊಳ್ಳಬಹುದು ಮತ್ತು ಈಗ ಇತ್ತೀಚಿನ ಪ್ರಯತ್ನವೆಂದರೆ, ಸಾವರ್ಕರ್ ಅವರ ಬಗ್ಗೆ ಮುಜುಗರಪಡುವಂತೆ ಮಾಡಿರುವ ಕ್ಷಮಾಯಾಚನೆ ಅರ್ಜಿಗಳನ್ನು ಸ್ವತಃ ಮಹಾತ್ಮರು ಮಂಜೂರು ಮಾಡಿದ್ದರು ಎನ್ನುವ ಮೂಲಕ, ಆ ರೀತಿಯ ಕ್ಷಮಾಯಾಚನೆ ಒಂದು ಸಾಮಾನ್ಯ ಸಂಗತಿ ಅದರಲ್ಲಿ ಮುಜುಗರಪಡುವಂತದ್ದೇನೂ ಇಲ್ಲ ಎಂದು ಅದನ್ನು ನ್ಯಾಯಸಮ್ಮತಗೊಳಿಸುವ ಪ್ರಯತ್ನ! ಇವರಿಬ್ಬರ ನಡುವೆ ನಿಕಟ ಮತ್ತು ಸ್ನೇಹಪರ ಸಂಬಂಧವಿತ್ತು ಎಂದು ತೋರಿಸುವುದು ಮತ್ತು ಈ ಮೂಲಕ ಇವರಿಬ್ಬರ ನಡುವೆ ಯಾವುದೇ ಸಾಮ್ಯತೆ ಇಲ್ಲ ಎಂಬ ಅಂಶವನ್ನು ಮರೆಮಾಚುವುದು ಕೂಡ ಗುರಿಯಾಗಿದೆ. ಹಿಂದುತ್ವದ ಸಿದ್ಧಾಂತಿ ಮತ್ತು ಹಿಂದೂ ಮಹಾಸಭಾದ ನಾಯಕರಾಗಿ ಸಾವರ್ಕರ್ ಗಾಂಧೀಜಿಯವರ, ವಿಶೇಷವಾಗಿ ಅವರ ಅಹಿಂಸೆ ಮತ್ತು ಮುಸ್ಲಿಮರನ್ನು ಒಳಗೊಳ್ಳುವ ನಿಲುವನ್ನು ಎಡೆಬಿಡದೆ ಮತ್ತು ಕಟುವಾಗಿ ಟೀಕಿಸುತ್ತಿದ್ದವರು. ಭಾರತ ಯಾರಿಗೆ ಸೇರಿದೆ ಎಂಬ ವಿಷಯದಲ್ಲಿ ಅವರ ಸೂತ್ರೀಕರಣಗಳ ನಡುವೆ ಇರುವ ವೈದೃಶ್ಯಕ್ಕಿಂತ ತೀಕ್ಷ್ಣವಾದುದು ಬೇರೊಂದಿರಲು ಸಾಧ್ಯವಿಲ್ಲ. ಸಾವರ್ಕರ್ “ಭಾರತವು ಹಿಂದೂ ಭೂಮಿಯಾಗಿರಬೇಕು, ಹಿಂದುಗಳಿಗಾಗಿ ಮೀಸಲಾಗಿರಬೇಕು” ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ ಹಿಂದುಗಳು “ತಮ್ಮ ಸ್ವಂತ ಮನೆಯಲ್ಲಿ, ಹಿಂದೂಸ್ಥಾನದಲ್ಲಿ, ಹಿಂದೂಗಳ ನಾಡಿನಲ್ಲಿ ಯಜಮಾನರಾಗಿರಬೇಕು” ಎಂದು ಅವರು ನಿಸ್ಸಂದಿಗ್ಧವಾಗಿ ಪ್ರತಿಪಾದಿಸುತ್ತಾರೆ. (ಹಿಂದೂ ರಾಷ್ಟ್ರ ದರ್ಶನ, ಪುಟ 92, 63). ಮತ್ತೊಂದೆಡೆ, ಗಾಂಧೀಜಿಯವರು 1942ರ ಆಗಸ್ಟ್‌ನಲ್ಲಿ ಮುಂಬೈಯಲ್ಲಿ ‘ಕ್ವಿಟ್ ಇಂಡಿಯಾ’ ಗೆ ಕರೆ ನೀಡಿದ ತಮ್ಮ ಪ್ರಸಿದ್ಧ ಭಾಷಣದಲ್ಲಿ, “ಡಾ. ಮೂಂಜೆ ಮತ್ತು ಶ್ರೀ ಸಾವರ್ಕರ್ ಅವರಂತಹ ಹಿಂದೂಗಳು ಖಡ್ಗದ ಸಿದ್ಧಾಂತವನ್ನು ನಂಬುತ್ತಾರೆ. ಅವರು ಮುಸಲ್ಮಾನರನ್ನು ಹಿಂದೂ ಪ್ರಾಬಲ್ಯದ ಅಡಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಬಹುದು. ನಾನು ಆ ವಿಭಾಗವನ್ನು ಪ್ರತಿನಿಧಿಸುವುದಿಲ್ಲ. ನಾನು ಕಾಂಗ್ರೆಸನ್ನು ಪ್ರತಿನಿಧಿಸುತ್ತೇನೆ. ಕಾಂಗ್ರೆಸ್ ಯಾವುದೇ ಗುಂಪಿನ ಅಥವಾ ಯಾವುದೇ ಸಮುದಾಯದ ಪ್ರಾಬಲ್ಯವನ್ನು ನಂಬುವುದಿಲ್ಲ. ಇದು ತನ್ನ ಕಕ್ಷೆಯಲ್ಲಿ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನ್ನರು, ಪಾರ್ಸಿಗಳು, ಯಹೂದಿಗಳು-ಈ ವಿಶಾಲವಾದ ದೇಶದಲ್ಲಿ ವಾಸಿಸುವ ಪ್ರತಿಯೊಂದು ಸಮುದಾಯವನ್ನು ಒಳಗೊಂಡಿರುವ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ…. ಈ ದೇಶದಲ್ಲಿ ಲಕ್ಷಾಂತರ ಮುಸಲ್ಮಾನರು ಹಿಂದೂ ಸಂತತಿಯಿಂದ ಬಂದವರು. ಅವರ ಸ್ವದೇಶ ಭಾರತವಲ್ಲದೆ ಬೇರೇನಾದರೂ ಆಗಿರಲು ಹೇಗೆ ಸಾಧ್ಯ?” ಎಂದು ಸಾರಿ ಹೇಳಿದರು.

ಸಾವರ್ಕರ್ ಮತ್ತು ಆತನ ಕಡೆಯವರು ಮತ್ತು ಭಗತ್ ಸಿಂಗ್ ರಂತಹ ಯಾವತ್ತೂ ಕ್ಷಮೆಯನ್ನು ಕೇಳುವುದಿಲ್ಲ ಎಂದು ತಮ್ಮ ಬಗ್ಗೆ ಹೆಮ್ಮೆಪಡುವ, ಸಾವು ಸೇರಿದಂತೆ ಎಲ್ಲಾ ಶಿಕ್ಷೆಯನ್ನು ಅನುಭವಿಸಲು ಸಿದ್ಧವಾದ ಕ್ರಾಂತಿಕಾರಿಗಳ ನಡುವೆ ಎಷ್ಟೊಂದು ವ್ಯತ್ಯಾಸವಿದೆ ಎಂದು ಯೋಚಿಸದಿರಲು ಸಾಧ್ಯವಿಲ್ಲ. ವಾಸ್ತವವಾಗಿ ಆರಂಭಿಕ ದಿನಗಳಿಂದಲೂ ಭಾರತೀಯ ರಾಷ್ಟ್ರೀಯವಾದಿಗಳು ತಾವು ಎಸಗುವ ಬ್ರಿಟಿಷ್-ವಿರೋಧಿ ಕೃತ್ಯಗಳಿಗೆ ಜವಾಬ್ದಾರಿಯನ್ನು ಧೈರ್ಯದಿಂದ ಸ್ವೀಕರಿಸುವ, ವಿಚಾರಣೆಗಳನ್ನು ಎದುರಿಸುವ, ಆ ವಿಚಾರಣೆಗಳನ್ನೇ ರಾಷ್ಟ್ರೀಯವಾದಿ ಗುರಿಗಳ ಮತ್ತಷ್ಟು ಪ್ರಚಾರಕ್ಕಾಗಿ ಬಳಸುವ ಮತ್ತು ನಂತರ ಜೈಲುವಾಸ, ಗಡಿಪಾರು ಅಥವಾ ಸಾವನ್ನು ಕೂಡ ಶಿಕ್ಷೆಯಾಗಿ ಸ್ವೀಕರಿಸುವ ಅಭ್ಯಾಸವನ್ನು ವಿಕಸನಗೊಳಿಸಿದರು,

ಗಮನಿಸಬೇಕಾದ ಸಂಗತಿಯೆಂದರೆ, ಬಂಧನದಿಂದ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಮತ್ತು ಉತ್ತಮ ನಡವಳಿಕೆಯ ವಚನ ಕೊಡುವ ಸಾವರ್ಕರ್ ಅವರ ಅಭ್ಯಾಸವು 1924ರಲ್ಲಿ ಬ್ರಿಟಿಷ್ ಜೈಲಿನಿಂದ ಅವರನ್ನು ಬಿಡುಗಡೆ ಪಡೆಯುವುದರೊಂದಿಗೇ ಕೊನೆಗೊಳ್ಳಲಿಲ್ಲ. ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದ ಮೂರು ವಾರಗಳಲ್ಲಿ, ಫೆಬ್ರವರಿ 22, 1948 ರಂದು ಅವರು ಆರ್ಥರ್ ರೋಡ್ ಕಾರಾಗೃಹದಿಂದ ಪೊಲೀಸ್ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲೂ “ಯಾವುದೇ ಕೋಮು ಅಥವಾ ರಾಜಕೀಯ ಸಾರ್ವಜನಿಕ ಚಟುವಟಿಕೆಯಲ್ಲಿ ಸರ್ಕಾರವು ಇಚ್ಛಿಸುವ ಯಾವುದೇ ಅವಧಿಯವರಿಗೆ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ನನ್ನನ್ನು ಬಿಡುಗಡೆಗೊಳಿಸುವುದಾದರೆ..” ತಾನು ಆ ಷರತ್ತನ್ನು ಪಾಲಿಸಲು ಸಿದ್ಧ ಎಂಬುದನ್ನು ವ್ಯಕ್ತಗೊಳಿಸಿದ್ದರು. ಇದು ಕೂಡ ಗಾಂಧೀಜಿಯವರ ಸಲಹೆಯ ಮೇರೆಗೆ ಎಂದು ಸಾಬೀತುಪಡಿಸುವುದು ಬಹುಶಃ ಅತ್ಯಂತ ಮೇಧಾವಿ ವಕೀರಿಗೂ ಕಷ್ಟಕರವೆನಿಸುವ ಕೆಲಸ.

ಅನುವಾದ: ಕೆ.ಆರ್.ಎಸ್.

Donate Janashakthi Media

Leave a Reply

Your email address will not be published. Required fields are marked *