ನವದೆಹಲಿ: ಲೈಂಗಿಕವಾಗಿ ಬಳಸಿಕೊಳ್ಳುವ ದುರಾಲೋಚನೆಯಿಂದ ಅಪ್ರಾಪ್ತೆಯನ್ನು ಆಕೆ ತೊಟ್ಟಿದ್ದ ಬಟ್ಟೆಯ ಮೇಲಿಂದ ಸ್ಪರ್ಶಿಸಿದರೂ ಅದು ಪೋಕ್ಸೋ ಕಾಯ್ದೆಯಡಿಯೇ ಅಪರಾಧವಾಗಲಿದೆ. ಅತ್ಯಂತ ಸರಳವಾಗಿ ಇರುವ ವಿಷಯಗಳಲ್ಲಿ ಅಸ್ಪಷ್ಟತೆಯನ್ನು ಹುಡುಕುವ ಕೆಲಸವನ್ನು ನ್ಯಾಯಾಲಯಗಳು ಎಂದಿಗೂ ಮಾಡಬಾರದು ಎಂದಿರುವ ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ನ ತೀರ್ಪನ್ನು ತಳ್ಳಿಹಾಕಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್.ರವೀಂದ್ರ ಭಟ್ ಮತ್ತು ಬೇಲಾ ತ್ರಿವೇದಿ ಅವರನ್ನೊಳಗೊಂಡ ಪೀಠವು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಬಂದಿರುವ ಕಾಯ್ದೆಯನ್ನು ಹೀಗೆ ಅರ್ಥೈಸುವುದು ಸರಿಯಲ್ಲ. ಇಲ್ಲಿ ಸ್ಪರ್ಶ ಎಂಬ ಶಬ್ದವನ್ನು ಕೇವಲ ಚರ್ಮದಿಂದ ಚರ್ಮಕ್ಕೆ ಎಂದು ಸೀಮಿತವಾಗಿ ಬಳಸಬಾರದು. ಹೀಗೆ ಮಾಡುವುದು ತೀರ ಸಂಕುಚಿತ ಮತ್ತು ಅಸಂಬದ್ಧವಾದದ್ದು. ಇದರಿಂದ ಕಾಯ್ದೆಯ ಉದ್ದೇಶವೇ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಸರಳವಾದ ಪದಗಳಲ್ಲಿ ದ್ವಂದ್ವಾರ್ಥತೆಯನ್ನು ಹುಡುಕುವಲ್ಲಿ ನ್ಯಾಯಾಲಯಗಳು ಅತಿಯಾದ ಉತ್ಸಾಹ ತೋರಬಾರದು” ಎಂದಿರುವ ಸುಪ್ರೀಂ ಕೋರ್ಟ್ 2021ರ ಜನವರಿ 12ರ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದ ತೀರ್ಪನ್ನು ರದ್ದುಗೊಳಿಸಿದೆ.
ನಿಯಮವೊಂದು ಕಾಯಿದೆಯನ್ನು ಸೋಲಿಸುವ ಬದಲು ಅದು ಶಾಸಕಾಂಗದ ಉದ್ದೇಶದ ಮೇಲೆ ಪರಿಣಾಮ ಬೀರುವ ರೀತಿಯ ವ್ಯಾಖ್ಯಾನ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ. “ನಿಯಮವೊಂದನ್ನು ರೂಪಿಸುವುದು ನಿಯಮಕ್ಕೆ ಪರಿಣಾಮಕಾರಿಯಾಗುವಂತೆ ಇರಬೇಕೆ ವಿನಾ ಅದನ್ನು ನಾಶಗೊಳಿಸುವಂತೆ ಇರಬಾರದು. ಶಾಸಕಾಂಗದ ಉದ್ದೇಶ ಕಾರ್ಯಗತಗೊಳಿಸದೆ ವ್ಯಾಪಕ ವ್ಯಾಖ್ಯಾನ ನೀಡಬಾರದು” ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ಉದ್ದೇಶದಿಂದ ಮಗುವಿನ ಯಾವುದೇ ಲೈಂಗಿಕ ಭಾಗವನ್ನು ಸ್ಪರ್ಶಿಸುವ ಯಾವುದೇ ಕ್ರಿಯೆಯನ್ನು ಪೊಕ್ಸೊ ಕಾಯಿದೆಯ ಸೆಕ್ಷನ್ 7ರ ವ್ಯಾಪ್ತಿಯಿಂದ ತೆಗೆದುಹಾಕಲಾಗದು ಎಂದು ಅದು ತೀರ್ಪು ನೀಡಿದೆ. ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಈ ಕುರಿತಾಗಿ ಪ್ರತ್ಯೇಕ ತೀರ್ಪು ನೀಡಿದರು.
ಬಾಂಬೆ ಹೈಕೋರ್ಟ್ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ವಿ ಗಣೇದಿವಾಲಾ ಅವರು 12 ವರ್ಷದ ಹುಡುಗಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಸ್ಪರ್ಶಿಸಿದರೆ ಅದನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೊಕ್ಸೊ) ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು. ಬದಲಿಗೆ ಇದು ಮಹಿಳೆಯ ಘನತೆಗೆ ಧಕ್ಕೆ ತರುವುದನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದ್ದರು.
ಈ ತೀರ್ಪು ಸ್ವಲ್ಪ ವಿವಾದ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಗೆ ಕಾರಣವಾಗಿತ್ತು. ತೀರ್ಪಿನ ವಿರುದ್ಧ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಎನ್ಸಿಡಬ್ಲ್ಯೂ ಮತ್ತು ಮಹಾರಾಷ್ಟ್ರ ರಾಜ್ಯವು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ಸಂದರ್ಭದ ಆರಂಭವಾಗುತ್ತಿದ್ದಂತೆ ಬಾಂಬೆ ಹೈಕೋರ್ಟ್ನ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿತ್ತು. ಇಂದು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ, ಬಾಂಬೆ ಹೈಕೋರ್ಟ್ನ ತೀರ್ಪನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಪ್ರಸ್ತುತ ಪ್ರಕರಣ ಪೋಕ್ಸೋ ಕಾಯ್ದೆಯಡಿಯೇ ಬರುತ್ತದೆ ಎಂದು ಹೇಳಿದೆ.