ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತು ರೈತರನ್ನು ಟೀಕಿಸುವುದು ಸರಿಯಲ್ಲ- ಟಿವಿ ಚರ್ಚೆಗಳೇ ಹೆಚ್ಚು ಮಾಲಿನ್ಯಕಾರಕ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರು ʻʻಟಿವಿಯಲ್ಲಿ ಚರ್ಚೆಗಳೇ ಇತರ ಮೂಲಗಳಿಗಿಂತ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿವೆ. ಅಲ್ಲಿ ಎಲ್ಲರಿಗೂ ಅವರದ್ದೇ ಆದ ಅಜೆಂಡಾ ಇದ್ದರೆ, ಇಲ್ಲಿ ನಾವು ಒಂದು ಪರಿಹಾರ ಕಂಡು ಹಿಡಿಯಲು ಯತ್ನಿಸುತ್ತಿದ್ದೇವೆ” ಎಂದು  ಹೇಳಿದರು.

“ದೆಹಲಿಯ 5 ಸ್ಟಾರ್ ಮತ್ತು 7 ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತ ಜನರು ವಾಯು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂಷಣೆ ಮಾಡುವುದಾದರೆ, ಪಟಾಕಿಗಳ ಬಗ್ಗೆ ಏಕೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ.

ಕೃಷಿ ತ್ಯಾಜ್ಯ ಸುಡದಂತೆ ಸರಕಾರ ರೈತರ ಮನವೊಲಿಕೆ ಮಾಡಬೇಕು ಎಂದು ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ನಡುವೆ ಇಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಿತು.

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಮುಂಚಿತವಾಗಿ ಅವಿಡವಿಟ್ ಸಲ್ಲಿಸಿದೆ.

ಅಫಿಡವಿಟ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಸರ್ಕಾರಿ ಕಾರ್ಯಗಳ ಮೇಲೆ ಗಣನೀಯವಾಗಿ ದೀರ್ಘಾವಧಿಯವರೆಗೆ ಪರಿಣಾಮ ಬೀರಿವೆ. ಇದು ಇಡೀ ದೇಶದ ಮೇಲೆ ಪರಿಣಾಮ ಉಂಟು ಮಾಡಿತು. ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನ ಹಾಗೂ ಪರಿಣಾಮಕಾರಿಯಾಗುವುದಿಲ್ಲ. ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವ ಬದಲು, ಅವರು ಪ್ರಯಾಣಕ್ಕೆ ಬಳಲುವ ವಾಹನಗಳ ಸಂಖ್ಯೆ ಮಾಡಿ, ಕಾರ್ಪೂಲಿಂಗ್ ಅನುಸರಿಸುವುದು ಉತ್ತಮವಾಗಿರುತ್ತದೆ ಎಂದು ಹೇಳಿದೆ.

“ಸೋಮವಾರದಂದು ನಾನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಕೆಲ ಅಂಕಿಅಂಶಗಳ ಕುರಿತಂತೆ ಟಿವಿ ಮಾಧ್ಯಮದಲ್ಲಿ ಕೆಟ್ಟ ಪ್ರತಿಕ್ರಿಯೆಗಳು ಬಂದಿವೆ ಹಾಗೂ ನಾನು ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದ್ದೇನೆ ಎಂದು  ದೂರಲಾಗಿದೆ. ಅಕ್ಟೋಬರ್ ನಂತರ ಕೃಷಿ ತ್ಯಾಜ್ಯ ಸುಡುವಿಕೆ ಹೆಚ್ಚಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ, ವರ್ಷಪೂರ್ತಿಯಲ್ಲ” ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ದೆಹಲಿ ಸರಕಾರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಎಸ್‌ಎಎಫ್‌ಎಆರ್ ಅಂಕಿಅಂಶಗಳನ್ನು ಮುಂದಿಡಲು ಯತ್ನಿಸಿದಾಗ “ಇಂದಿನ ಪ್ರತಿಯೊಂದು ದಿನಪತ್ರಿಕೆಯಲ್ಲೂ ಅದರದೇ ಆದ ಅಂಕಿಅಂಶಗಳನ್ನು ನೋಡಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

“ಈ ಅಂಕಿಅಂಶಗಳು ನಮಗೆ ಮುಖ್ಯವಲ್ಲ, ಮಾಲಿನ್ಯ ಕಡಿಮೆಗೊಳಿಸುವುದು ನಮಗೆ ಮುಖ್ಯ.” ಎಂದು ಆಗ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಹೇಳಿದರು.

“ನೀವು ಜಾರಿ ಮತ್ತು ತಪಾಸಣೆ ಕ್ರಮಕ್ಕೆ ಒತ್ತು ನೀಡಿದ್ದೀರಿ. ಇವುಗಳ ಹೊರತಾಗಿ, ನೀವು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡರೆ ಅದು ಉತ್ತಮ ಪರಿಣಾಮವನ್ನು ಬೀರುತ್ತದೆ ಅಲ್ಲವೇ,” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, “ಕೇಂದ್ರದ ಪಟ್ಟಿ ಮಾಡಿರುವುದರಲ್ಲಿ ಶೇ.90ರಷ್ಟು ಕೆಲಸವನ್ನು ದೆಹಲಿ ಸರ್ಕಾರ ಮಾಡಿದೆ. ನಾವು ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬಹುದು; ಆದರೆ ಅದಕ್ಕಾಗಿ ನಾವು ಟೆಂಡರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ,” ಎಂದರು.

ಈ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಪಂಜಾಬ್, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳೊಂದಿಗೆ ನವೆಂಬರ್ 16 ರಂದು “ತುರ್ತು ಸಭೆ” ನಡೆಸುವಂತೆ ಹಾಗೂ ಈ ವೇಳೆ ದೆಹಲಿ-ಎನ್‌ಸಿಆರ್‌ನಲ್ಲಿನ ವಾಯುಮಾಲಿನ್ಯವನ್ನು ತಡೆಯಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು. ಅಲ್ಲದೆ, ಉದ್ಯೋಗಿಗಳಿಗೆ ಕನಿಷ್ಠ ಒಂದು ವಾರದವರೆಗೆ ಮನೆಯಿಂದ ಕೆಲಸ ಮಾಡಲು ಪರಿಗಣಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *