ನಾ ದಿವಾಕರ
“2014ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ” ಎಂದು ವಿವಾದಿತ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್, ತಾವು ಯಾವ ಶಾಲೆಯಲ್ಲಿ ಇತಿಹಾಸದ ಪಾಠ ಕಲಿತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಾವಿರಾರು ಜನರ ತ್ಯಾಗ ಬಲಿದಾನಗಳ ಫಲ ಭಾರತದ ಸ್ವಾತಂತ್ರ್ಯ. ಈ ವಿಮೋಚನೆಯ ಪೂರ್ಣ ಸಾರ್ಥಕತೆಯನ್ನು ಹಾಳುಗೆಡಹಿದ ವಿಕೃತ ಶಕ್ತಿಗಳ ಗರಡಿಯಲ್ಲಿ ಪಳಗಿರುವುದರಿಂದ ಪದ್ಮಶ್ರೀ ಕಂಗನಾ ಗುರುಕಾಣಿಕೆ ಸಲ್ಲಿಸಿದ್ದಾರೆ.
2014ರಲ್ಲಿ ನಿಜವಾದ ಸ್ವಾತಂತ್ರ್ಯ ಲಭಿಸಿರುವುದು, ಎಗ್ಗಿಲ್ಲದೆ ಮಾತನಾಡುವ ಪೂರ್ಣ ಸ್ವಾತಂತ್ರ್ಯ ಲಭಿಸಿರುವುದು, ಈ ವಿಕೃತಿಯ ಸಂತತಿಯಲ್ಲೇ ಬೆಳೆದುಬಂದ ಕೂಸುಗಳಿಗೆ. 1947ರಲ್ಲಿ ಭಾರತಕ್ಕೆ ಭಿಕ್ಷೆ ಲಭಿಸಿದ್ದರೆ ಆ ಭಿಕ್ಷಾಪಾತ್ರೆಯಲ್ಲಿ ಬಿತ್ತ ಬೀಜ, ಮೊಳಕೆಯೊಡೆದು, ಚೆಂದದ ಸಸಿಯಾಗಿ ಹೆಮ್ಮರವಾಗಿ ರೂಪುಗೊಂಡ ಬಾಲಿವುಡ್ ಪ್ರಸ್ಥಭೂಮಿಯ ಒಂದು ಕುಡಿ ಈ ಕಂಗನಾ. ಈಕೆ ತನಗೊಲಿದ ಪ್ರಶಸ್ತಿಗಳನ್ನು ಬದಿಗಿಟ್ಟು, ಅಹಮಿಕೆಯನ್ನು ಅದಮಿಟ್ಟು ಒಮ್ಮೆ ಹಿಂದಿರುಗಿ ನೋಡಿದರೂ ಸಾಕು, ನಟನೆಯಲ್ಲಿ ತನ್ನ ಸಾಧನೆ ಏನೇನೂ ಅಲ್ಲ ಎಂದು ಅರ್ಥವಾಗಿಬಿಡುತ್ತದೆ. ಆ ದಿಗ್ಗಜ ನಟ-ನಟಿಯರ ಮುಂದೆ ನಟಿಯಾಗಿ ಕುಬ್ಜರಾಗಿ ಕಾಣುವ ಕಂಗನಾ ತಮ್ಮ ಆಲೋಚನೆಯಲ್ಲೂ ಕುಬ್ಜರಾಗಿಬಿಟ್ಟಿದ್ದಾರೆ. ಇತಿಹಾಸದ ಅರಿವಿಲ್ಲದೆಯೇ ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ನಟರು ನಟಿಯರು ಯಾರೇ ಆದರೂ ಬಾಲಿವುಡ್ ಚಿತ್ರರಂಗದ ಸೊಹ್ರಾಬ್ ಮೋದಿ, ಪೃಥ್ವಿರಾಜ್ ಕಪೂರ್, ಕೆ ಎ ಅಬ್ಬಾಸ್, ಕೆ ಆಸಿಫ್, ಮೆಹಬೂಬ್, ವಿ ಶಾಂತಾರಾಮ್ ಅವರ ಹೆಜ್ಜೆಗಳನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲವಾದರೆ ತೆರೆಯ ಮೇಲೆ ವಿಜೃಂಭಿಸುವ ಪಾತ್ರಧಾರಿಗಳು ಥಿಯೇಟರಿನಲ್ಲೇ ಕಳೆದು ಹೋಗುತ್ತಾರೆ. ಕಂಗನಾ ಇಂಥವರಲ್ಲೊಬ್ಬರು.
ಆಮ್ರಪಾಲಿಯ ವೈಜಯಂತಿಮಾಲಾ, ಮುಘಲ್ ಎ ಅಜಂನ ಪೃಥ್ವಿರಾಜ್, ದಿಲೀಪ್-ಮಧುಬಾಲಾ, ಅನಾರ್ಕಲಿಯ ಬೀನಾರಾಯ್, ಕಿತ್ತೂರು ರಾಣಿಯ ಸರೋಜಾದೇವಿ, ಪುಕಾರ್ ಚಿತ್ರದ ಸೊಹ್ರಾಬ್ ಮೋದಿ, ಕೃಷ್ಣದೇವರಾಯ ಚಿತ್ರದ ರಾಜಕುಮಾರ್, ಕಟ್ಟಬೊಮ್ಮನ್ ಶಿವಾಜಿ ಇವರೆಲ್ಲಾ ಚಿರಸ್ಮರಣೀಯರಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ? ಇವರಾರೂ ಇತಿಹಾಸತಜ್ಞರಲ್ಲ, ಇತಿಹಾಸದ ವಿದ್ಯಾರ್ಥಿಗಳೂ ಅಲ್ಲ. ಆದರೆ, ಭಾರತದ ವಿಮೋಚನೆಯ ತ್ಯಾಗ ಬಲಿದಾನಗಳನ್ನು ಅವಮಾನಿಸಲಿಲ್ಲ. ಸ್ವತಂತ್ರ ಭಾರತದ ಪರಿಪಕ್ವ ಫಲಾನುಭವಿಗಳಾಗಿ ತಮ್ಮ ಕಲೆಯನ್ನು ಆರಾಧಿಸಿದ ಈ ಮಹಾನ್ ನಟ-ನಟಿಯರು ತಮ್ಮನ್ನು ಪೋಷಿಸಿ ಸಲಹಿದ ಮೇರು ವೃಕ್ಷಕ್ಕೆ, ಅರ್ಥಾತ್ ಸ್ವತಂತ್ರ ಭಾರತಕ್ಕೆ, ಸಮರ್ಪಣಾ ಭಾವದಿಂದಲೇ ತಮ್ಮ ಕಲೆ ಎಂಬ ಪವಿತ್ರ ನೀರನ್ನೆರೆದಿದ್ದಾರೆ. ಅಲ್ಲವೇ ಕಂಗನಾ ಜೀ.
ನೀವು 1947ರ ಸ್ವಾತಂತ್ರ್ಯವನ್ನು ಭಿಕ್ಷೆ ಎನ್ನುವ ಮೂಲಕ ಕೋಟ್ಯಂತರ ಜನರನ್ನು ಒಂದೇ ಮಾತಿನಲ್ಲಿ ಅವಮಾನಿಸಿದ್ದೀರಿ. ಅವರ ಪೈಕಿ ನಿಮ್ಮ ಪೂರ್ವಿಕರೂ ಇದ್ದಾರೆ ಅಲ್ಲವೇ? ನೀವು ಬಾಚಿಕೊಂಡಿರುವ ರಾಷ್ಟ್ರಪ್ರಶಸ್ತಿಗಳ ಮೂಲಕ ನಿಮಗೆ ಸಂದಾಯವಾಗಿರುವ ಕೋಟ್ಯಂತರ ಹಣ ಅದೇ ಭಿಕ್ಷಾಪಾತ್ರೆಯಲ್ಲಿ ಬಿತ್ತ ಬೆವರು ಬೀಜಗಳ ಫಲ. ನೀವು ಪಡೆದ ಫಲಕ, ಟ್ರೋಫಿಗಳ ತಯಾರಿಕೆಯ ಹಿಂದೆ ಸಹ ಇದೇ ಭಿಕ್ಷಾಪಾತ್ರೆಯಲ್ಲಿ ಹರಿದ ಬೆವರು ನೆತ್ತರಿನ ವಾಸನೆ ಇದೆ. ಭಾರತದ ಸ್ವಾತಂತ್ರ್ಯ ಲಭಿಸಿದ್ದು ಕೋಟ್ಯನುಕೋಟಿ ಜನತೆಗೆ ವಸಾಹತು ದಾಸ್ಯದ ಸಂಕೋಲೆಗಳಿಂದ ವಿಮೋಚನೆ ದೊರೆತ ಅಮೂಲ್ಯ ಗಳಿಗೆ. ಅಂದು ನೂರಾರು ಹುತಾತ್ಮರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯದ ಫಲವೇ ನೀವು ಆರಾಧಿಸುವ ನಟನೆ ಎಂಬ ಕಲೆ.
ಆ ಕಲೆಯ ಆರಾಧಕರಾದ ನಿಮಗೆ ಅಮೂಲ್ಯ ಸ್ವಾತಂತ್ರ್ಯವೂ ಭಿಕ್ಷೆ ಎಂದೆನಿಸುವುದು ನಿಮ್ಮ ತಪ್ಪಲ್ಲ. ನಿಮ್ಮಂತಹ ಕ್ಷುದ್ರ ಮನಸ್ಥಿತಿಯ ಲಕ್ಷಾಂತರ ಜನರನ್ನು ಈ ದೇಶದ ಸಾಂಸ್ಕೃತಿಕ ಮತೀಯ ರಾಜಕಾರಣ ಸೃಷ್ಟಿಸಿದೆ. ನೀವು ಎಷ್ಟೇ ಮಹಾ ನಟಿ ಎನಿಸಿಕೊಂಡರೂ ಕೊನೆಗೆ ಆ ವಿಕೃತಿಯ ಕೂಸು ಎಂಬುದನ್ನು ಈ ಹೇಳಿಕೆಯ ಮೂಲಕ ನಿರೂಪಿಸಿಬಿಟ್ಟಿರಿ. ಕಲೆಯನ್ನು ಆರಾಧಿಸುವವರಲ್ಲಿ, ಕಲೆಯನ್ನೇ ಜೀವಿಸುವವರಲ್ಲಿ ಸೂಕ್ಷ್ಮ ಸಂವೇದನೆಗಳು ಸತ್ತು ಹೋದರೆ ನೀವು ಪರದೆಯ ಮೇಲೆ ಬಣ್ಣಬಣ್ಣದ Caricature ನಂತೆ ಕಾಣುತ್ತೀರಿ. ನಿಮ್ಮ ಕಲಾ ಕೌಶಲ ಪ್ರತಿಭೆ ಪ್ರಶಸ್ತಿ ಎಲ್ಲವೂ ಮಾರುಕಟ್ಟೆಯ ಜಗುಲಿಯಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲ. ಬಹುಶಃ ನೀವು ಆ ಚೌಕಟ್ಟನ್ನು ಸ್ವತಃ ನಿರ್ಮಿಸಿಕೊಂಡಿದ್ದೀರಿ, ಈ ಹೇಳಿಕೆಯ ಮೂಲಕ.
ಸ್ವತಂತ್ರ ಭಾರತ ಸಾವಿರಾರು ಸಂಗ್ರಾಮಿಗಳ, ಕೋಟ್ಯಂತರ ಶ್ರಮಜೀವಿಗಳ ಬೇರುಗಳನ್ನು ಹೊತ್ತ ಒಂದು ಬೃಹತ್ ಆಲದ ಮರ. ಈ ಮರದ ಕಾಂಡವೇ ಈ ನಮ್ಮ ಬಹುತ್ವದ ಸಮಾಜ. ಒಳಗೆ ಟೊಳ್ಳು ಪೊಟರೆಗಳೆಷ್ಟೇ ಇದ್ದರೂ ಗಟ್ಟಿಯಾಗಿ ನಿಂತಿದ್ದರೆ ಅದಕ್ಕೆ ಕಾರಣ ಬಲಿಷ್ಠ ಬೇರುಗಳು. ಈ ಬೃಹತ್ ಆಲದ ಟೊಂಗೆಗಳಂತೆ ಕಲೆ, ಸಂಸ್ಕೃತಿ, ಸಿನಿಮಾ, ಸಂಗೀತ, ಇತ್ಯಾದಿ. ಇದರಿಂದ ಕೆಳಗಿಳಿಯುವ ಮರಿಬೇರುಗಳೇ ಕಲಾವಿದರು, ಸಾಹಿತಿಗಳು, ಬರಹಗಾರರು, ಕ್ರೀಡಾಪಟುಗಳು, ಜನಪದ ಕಲಾವಿದರು, ಸಂಗೀತಗಾರರು ಮತ್ತು ಚಲನಚಿತ್ರ ಕಲಾವಿದರೂ ಸಹ. ಅಂತಹ ಲಕ್ಷಾಂತರ ಮರಿ ಬೇರುಗಳ ಅಂಚಿನಲ್ಲಿ ನೀವೊಂದು ಪೀಚು. ಇಷ್ಟು ಪರಿಜ್ಞಾನ ನಿಮ್ಮಲ್ಲಿದ್ದರೆ ನಿಮ್ಮನ್ನು ಕಲಾವಿದೆ ಎನ್ನಲು ಸಾಧ್ಯ.
ನಿಮ್ಮ ವಿಕೃತ ಹೇಳಿಕೆಗೆ ಮೌನ ವಹಿಸಿರುವ ನಿಮ್ಮ ಪೋಷಕರು ನಿಮಗಿಂತಲೂ ದೊಡ್ಡ ಅಪರಾಧಿಗಳು ಎನ್ನುವುದು ನಿಸ್ಸಂದೇಹ ವಾಸ್ತವ.