ನವದೆಹಲಿ: ರೈತ ಹೋರಾಟದಲ್ಲಿ ಒಟ್ಟು 750 ಕ್ಕೂ ಅಧಿಕ ರೈತರು ನಿಧನಹೊಂದಿದ್ದಾರೆ. ಆದರೆ ಕೇಂದ್ರ ಸರ್ಕಾರ ಅವರಿಗೆ ಯಾವುದೇ ಸಂತಾಪವನ್ನು ವ್ಯಕ್ತಪಡಿಸಿಲ್ಲ. ಈ ಕಾರಣದಿಂದಾಗಿಯೇ ದೇಶದ ರೈತರು ಪ್ರಧಾನಿ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ರೈತರಿಗಾಗಿ ಇರುವವರು ಅಲ್ಲ ಎಂಬ ಭಾವನೆ ರೈತರಲ್ಲಿ ಮೂಡಿದೆ. ರೈತರನ್ನು ಅವರು ಈ ದೇಶದಿಂದಲ್ಲೇ ಪ್ರತ್ಯೇಕ ಎಂದು ಭಾವಿಸುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರವು ದೇಶದಲ್ಲಿ ಜಾರಿಗೊಳಿಸಲು ಹೊರಟಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಕಳೆದ ಒಂದು ವರ್ಷದಿಂದ ಎಲ್ಲೆಡೆ ಹೋರಾಟಗಳು ನಡೆಯುತ್ತಿವೆ. ಹೋರಾಟವಷ್ಟೇ ಅಲ್ಲದೆ ಮಹಾಪಂಚಾಯತ್ಗಳನ್ನು ನಡೆಸುವ ಮೂಲಕ ದೇಶಕ್ಕೆ ಮಾರಕವಾಗಿರುವ ಕಾಯ್ದೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ವಿಚಾರಗಳ ಮಂಡನೆಯಾಗಲಿದೆ.
ಹೋರಾಟದೊಂದಿಗೆ ದೇಶದ ಉದ್ದಗಲಕ್ಕೂ ಮಹಾಪಂಚಾಯತ್ಗಳನ್ನು ನಡೆಸುತ್ತಿರುವ ಸಂಯುಕ್ತ ಕಿಸಾನ ಮೋರ್ಚಾ ಕೃಷಿ ಕಾಯ್ದೆಗಳ ಪರಿಣಾಮ ಮತ್ತು ದೇಶಕ್ಕೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಲಿದೆ. ಮಹಾಪಂಚಾಯತ್ಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಭಾಗವಹಿಸಲಿದ್ದಾರೆ.
ದೇಶದಲ್ಲಿ ರೈತ ಹೋರಾಟ ಮತ್ತೆ ತೀವ್ರಗೊಂಡಿದ್ದು, ಮಹಾಪಂಚಾಯತ್ಗಳನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 100 ಕ್ಕೂ ಹೆಚ್ಚು ರೈತ ಸಂಘಟನೆಗಳು ನವೆಂಬರ್ 28, ರಂದು ಮುಂಬೈನ ಆಜಾದ್ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ಹಮ್ಮಿಕೊಂಡಿದೆ.
ಇದನ್ನು ಓದಿ: ಆಹಾರ ನಿಗಮವನ್ನು ಬಲಪಡಿಸಿ, ಬಡಜನರು ಉಪವಾಸ ಬೀಳದಂತೆ ತಡೆಯಿರಿ” ಪ್ರಧಾನ ಮಂತ್ರಿಗಳಿಗೆ ಕಿಸಾನ್ ಸಭಾ ಪತ್ರ
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳ ರದ್ದತಿ ಹಾಗೂ ಎಂಎಸ್ಪಿ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ರೈತರು ಆಗ್ರಹಿಸುತ್ತಿದ್ದಾರೆ. ದೆಹಲಿಯ ಗಡಿಗಳಲ್ಲಿ ಸತತವಾಗಿ ಹೋರಾಟ ನಡೆಯುತ್ತಿದೆ. ನವೆಂಬರ್ 26ಕ್ಕೆ ರೈತ ಹೋರಾಟಕ್ಕೆ ಒಂದು ವರ್ಷ ಸಂದಲಿದೆ. ಒಂದು ವರ್ಷದ ನೆನೆಪಿನಲ್ಲಿ ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಪ್ರದೇಶದ ಲಕ್ನೋಗಳಲ್ಲಿ ರೈತ ಮಹಾಪಂಚಾಯತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
ಮುಂಬೈನ ಆಜಾದ್ ಮೈದಾನ
ಮಹಾರಾಷ್ಟ್ರದ 100 ಕ್ಕೂ ಹೆಚ್ಚು ರೈತ ಸಂಘಟನೆಗಳು ನವೆಂಬರ್ 28, 2021 ರಂದು ಮುಂಬೈನ ಆಜಾದ್ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ಆಚರಿಸಲು ನಿರ್ಧರಿಸಿವೆ. ಸಂಯುಕ್ತ ಶೇತ್ಕರ್ ಕಾಮಗಾರ್ ಮೋರ್ಚಾ ವೇದಿಕೆಯ ಅಡಿಯಲ್ಲಿ ಈ ಹೋರಾಟ ನಡೆಯಲಿದೆ. ಥಾಣೆ, ಪಾಲ್ಘರ್ ಮತ್ತು ನಾಸಿಕ್ ಜಿಲ್ಲೆಗಳ ರೈತರು ಮತ್ತು ಕಾರ್ಮಿಕರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಂದಾಜು 60,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆಯೆಂದು ಹೇಳಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಒಕ್ಕೂಟದ ರಾಷ್ಟ್ರೀಯ ನಾಯಕರೊಂದಿಗೆ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಮತ್ತು ಶಿಕ್ಷಕರ ಮೋರ್ಚಾದಂತಹ ಟ್ರೇಡ್ ಯೂನಿಯನ್ಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಲಿವೆ.
ಇದನ್ನು ಓದಿ:ನ.26ಕ್ಕೆ ರೈತ ಹೋರಾಟಕ್ಕೆ ಒಂದು ವರ್ಷ: ರಾಷ್ಟ್ರೀ ಹೆದ್ದಾರಿಗಳ ಬಂದ್ಗೆ ಕರೆ
ಮಹಾಪಂಚಾಯತ್ಗೆ ಒಂದು ದಿನ ಮುಂಚಿತವಾಗಿ, ಉತ್ತರ ಪ್ರದೇಶದ ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರ ನೆನಪಿನ ಕಳಶ ಯಾತ್ರೆಗಳು ನವೆಂಬರ್ 27 ರಂದು ನಗರಕ್ಕೆ ಆಗಮಿಸಲಿವೆ. ಮರುದಿನ ಸಂಜೆ ಗೇಟ್ವೇ ಆಫ್ ಇಂಡಿಯಾದಲ್ಲಿ ಒಗ್ಗೂಡಿ ಹುತಾತ್ಮರ ಚಿತಾಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಗುವುದು ಎನ್ನಲಾಗಿದೆ.
ಮೇಧಾ ಪಾಟ್ಕರ್, ಪ್ರತಿಭಾ ಶಿಂಧೆ, ನಾಮದೇವ್ ಗಾವಡೆ, ಮಿಲಿಂದ್ ರಾನಡೆ, ಕಿಸಾನ್ ಗುಜಾರ್, ಡಾ ಅಜಿತ್ ನವಲೆ, ಡಾ ಎಸ್ ಕೆ ರೇಗೆ, ಶೈಲೇಂದ್ರ ಕಾಂಬಳೆ ಮುಂತಾದವರು ಈ ಮಹಾಪಂಚಾಯತ್ನಲ್ಲಿ ಭಾಗವಹಿಸಲಿದ್ದಾರೆ.
ಲಕ್ನೋದಲ್ಲಿ ಮಹಾಪಂಚಾಯತ್
ಲಕ್ನೋದಲ್ಲಿ ಹಮ್ಮಿಕೊಂಡಿರುವ ಮಹಾಪಂಚಾಯತ್ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ತಮ್ಮ ಟ್ವೀಟ್ ನಲ್ಲಿ “ನವೆಂಬರ್ 22 ರಂದು ಲಕ್ನೋದಲ್ಲಿ ಆಯೋಜಿಸಲಾದ ಕಿಸಾನ್ ಮಹಾಪಂಚಾಯತ್ ಐತಿಹಾಸಿಕವಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಈ ಮಹಾಪಂಚಾಯತ್ ರೈತ ವಿರೋಧಿ ಸರ್ಕಾರ ಮತ್ತು ಮೂರು ಕರಾಳ ಕಾನೂನುಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಸಾಬೀತುಪಡಿಸುತ್ತದೆ. ಈಗ ಪೂರ್ವಾಂಚಲದಲ್ಲೂ ಅನ್ನದಾತರ ಚಳವಳಿ ತೀವ್ರಗೊಳ್ಳಲಿದೆ” ಎಂದು ಘೋಷಿಸಿದ್ದಾರೆ. ಸುಮಾರು 40 ರೈತ ಸಂಘಗಳು ಈ ಮಹಾಪಂಚಾಯತ್ ನೇತೃತ್ವವನ್ನು ವಹಿಸಿಕೊಂಡಿವೆ.
ಇದನ್ನು ಓದಿ: ಬಿಜೆಪಿ ನಾಯಕರ ನಿವಾಸದ ಬಳಿ ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ದೇಶವ್ಯಾಪಿ ಹೋರಾಟ ನಡೆಸಿದ ರೈತರು
“ರೈತರು ಎಂದಿಗೂ ಈ ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ. ಈ ದೇಶದ ರೈತರು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ಎಲ್ಲಿಗೂ ಹೋಗಲಾರೆವು. ಸರ್ಕಾರ ಐದು ವರ್ಷಗಳ ಕಾಲ ನಡೆಯುತ್ತದೆ ಎಂದಾದರೆ, ನಮ್ಮ ಪ್ರತಿಭಟನೆ ಯಾಕೆ ನಡೆಯಲಾರದು. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಪ್ರತಿಭಟನೆ ಮುಂದುವರೆಸಲಿದ್ದೇವೆʼʼ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮೂರು ಹೊಸ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಇದುವರೆಗೆ 11 ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಕಾಯ್ದೆಗಳಲ್ಲಿ ಸಂಪೂರ್ಣವಾಗಿ ರದ್ದುಪಡಿಸಬೇಕೆಂಬ ಬೇಡಿಕೆಗೆ ಸಮ್ಮತಿಸುತ್ತಿಲ್ಲ.