ಪ್ರಕಾಶ್ ಕಾರಟ್
ಚೀನಾದ ವಿರುದ್ಧ ಒಂದು ಸುಸಂಗತ ಜಾಗತಿಕ ವ್ಯೂಹವನ್ನು ಹೇಗಾದರೂ ಕಲೆಹಾಕಲು ಬೈಡೆನ್ ಆಡಳಿತ ಹತಾಶ ಪ್ರಯತ್ನ ನಡೆಸುತ್ತಿರುವಾಗ, ಈ ದುಸ್ಸಾಹಸದಲ್ಲಿ ಒಂದು ಕಿರು ಪಾಲುದಾರ ಆಗಲು ಭಾರತ ಬಯಸುತ್ತಿದೆಯೇ? ಕ್ವಾಡ್, ಔಕುಸ್ ಮತ್ತು ಆಫ್ಘಾನಿಸ್ತಾನ ಪತನಗೊಳ್ಳುವ ಮುನ್ನ ಘೋಷಣೆಯಾದ ಮಧ್ಯ ಏಷ್ಯಾದ ಕುರಿತಂತೆ ನಾಲ್ಕು ದೇಶಗಳ(ಅಮೆರಿಕ, ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಉಝಬೇಕಿಸ್ತಾನ) ಕೂಟ ರಚನೆಯ ಕೈಗೂಡದ ಪ್ರಕಟಣೆ -ಇವೆಲ್ಲವೂ ಚೀನಾವನ್ನು ಕಟ್ಟಿ ಹಾಕಲು ಮತ್ತು ಪ್ರತ್ಯೇಕಗೊಳಿಸಲು ಅಮೆರಿಕ ಹತಾಶೆಯಿಂದ ಓಡಾಡುತ್ತಿದೆ ಎನ್ನುವುದರ ದ್ಯೋತಕವಾಗಿದೆ. ಚೀನಾ ಸಾಧಿಸುತ್ತಿರುವ ಸರ್ವತೋಮುಖ-ಆರ್ಥಿಕ, ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿನ- ಏಳಿಗೆಯ ವಾಸ್ತವತೆಯ ಹಿನ್ನೆಲೆಯಲ್ಲಿ ಈ ಎಲ್ಲ ಕೂಟ ಮತ್ತು ಹೂಟಗಳು ಸೋಲುವ ಆಟದಂತೆಯೇ ಕಾಣುತ್ತವೆ. ಈ ಆಟದಲ್ಲಿ ಒಂದು ಕಿರಿಯ ಪಾಲುದಾರ ಹಾಗೂ ಯಾವುದೇ ಪರಿಣಾಮ ಬೀರಲಾರದ ಪಾಲುದಾರ ಆಗುವುದರಿಂದ ಭಾರತದ ಹಿತಾಸಕ್ತಿಗಳಿಗೆ ಏನಾದರೂ ಪ್ರಯೋಜನವಿದೆಯೇ?
ಅಮೆರಿಕ, ಇಸ್ರೇಲ್, ಭಾರತ ಮತ್ತು ಯು.ಎ.ಇ. ದೇಶಗಳ ವಿದೇಶಾಂಗ ಸಚಿವರ ಭಾಗಶಃ ದೂರಸಂಪರ್ಕದ (ವರ್ಚುವಲ್) ಮತ್ತು ಭಾಗಶಃ ಭೌತಿಕ ಸಭೆ ಅಕ್ಟೋಬರ್ 18ರಂದು ನಡೆದಿದ್ದು ಪಶ್ಚಿಮ ಏಷ್ಯಾದಲ್ಲಿ ಹೊಸದೊಂದು ಗುಂಪಿನ ಸೃಷ್ಟಿಗೆ ನಾಂದಿ ಹಾಡಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಸ್ರೇಲ್ಗೆ ಭೇಟಿ ನೀಡಿದ್ದ ವೇಳೆ ಈ ಸಭೆ ನಡೆದಿರುವುದು ಗಮನರ್ಹವಾಗಿದೆ. ನಫ್ತಾಲಿ ಬೆನೆಟ್ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಜೈಶಂಕರ್ ಅಲ್ಲಿಗೆ ತೆರಳಿದ್ದರು.
ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ವಾಣಿಜ್ಯ, ತಾಪಮಾನ ಬದಲಾವಣೆ, ಇಂಧನ ಮತ್ತು ಸಾಗರಯಾನ ಭದ್ರತೆ ಕುರಿತು ಚರ್ಚೆ ನಡೆಯಿತು ಎಂದು ಸಭೆಯ ನಂತರ ನೀಡಿದ ಹೇಳಿಕೆಯಲ್ಲಿ ಅಮೆರಿಕ ತಿಳಿಸಿದೆ. ಪಶ್ಚಿಮ ಏಷ್ಯಾಕ್ಕೆ ಎರಡನೇ ಕ್ವಾಡ್ ಎಂದು ಕರೆಯಲಾಗುತ್ತಿರುವ ಈ ಗುಂಪು ರಚನೆಯಾಗುವುದರೊಂದಿಗೆ ಚೀನಾದ ವಿರುದ್ಧ ಅಮೆರಿಕ ಇನ್ನೊಂದು ಹೆಜ್ಜೆಯನ್ನು ಇಟ್ಟಂತಾಗಿದೆ. ಗುಂಪಿನ ಸಂರಚನೆ ಪರಿಗಣಿಸಿದರೆ ಅದು ಇರಾನ್ ವಿರುದ್ಧದ ಕೂಟವೂ ಆಗಿದೆ.
ಪಶ್ಚಿಮ ಏಷ್ಯಾ ವಲಯದಲ್ಲಿ ಮೋದಿ ಸರ್ಕಾರದ ಪ್ರವೇಶವು ಎರಡು ಕಾರಣಗಳಿಗಾಗಿ ಮಹತ್ವದ್ದಾಗಿದೆ.
ಅಮೆರಿಕದ ಹೂಟಗಳಲ್ಲಿ ಶಾಮೀಲು
ಮೊದಲನೆಯದಾಗಿ, ಇಂಡೋ-ಫೆಸಿಫಿಕ್ ವಲಯಕ್ಕೆ ಕ್ವಾಡ್ ಕೂಟದ ಔಪಚಾರಿಕ ರಚನೆಯಾದ ನಂತರ ನಾಲ್ಕು ದೇಶಗಳ ಈ ಗುಂಪನ್ನು ರಚಿಸುವಲ್ಲಿ ಅಮೆರಿಕ ನಾಯಕತ್ವ ವಹಿಸಿದೆ ಹಾಗೂ ಭಾರತವನ್ನು ಅದರೊಳಕ್ಕೆ ಸೆಳೆದುಕೊಂಡಿದೆ. ಕ್ವಾಡ್ ಚೀನಾದ ಬೆಳೆಯುತ್ತಿರುವ ಪ್ರಭಾವದ ವಿರುದ್ಧದ ಒಂದು ಕೂಟವೆನ್ನುವುದು ಸ್ಪಷ್ಟವಾಗಿದೆ. ಹೊಸ ಗುಂಪಿನ ರಚನೆಯು ಭಾರತ ಮತ್ತು ಅಮೆರಿಕ ನಡುವೆ ಆಳಗೊಳ್ಳುತ್ತಿರುವ ಸಾಮರಿಕ ಮತ್ತು ರಾಜಕೀಯ ಮೈತ್ರಿಯ ಸೂಚನೆಯಾಗಿದೆ. ಮೋದಿ ಸರ್ಕಾರವು ಅಮೆರಿಕದ ಹುನ್ನಾರಗಳಲ್ಲಿ ಹೆಚ್ಚೆಚ್ಚಾಗಿ ಒಳಗೊಳ್ಳುತ್ತಿರುವುದು ಕಂಡು ಬರುತ್ತದೆ.
ಆಫ್ಘಾನಿಸ್ತಾನದಿಂದ ಆತುರಾತುರವಾಗಿ ವಾಪಸ್ ಹೋದ ನಂತರ, ಪಶ್ಚಿಮ ಏಷ್ಯಾದಲ್ಲಿ ತಮ್ಮ ತಂತ್ರಗಾರಿಕೆಯನ್ನು ಮರುರೂಪಿಸಲು ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಜೋ ಬೈಡೆನ್ ಆಡಳಿತದ ಚೀನಾ-ವಿರೋಧಿ ತಂತ್ರಗಳಲ್ಲಿ ಭಾರತ ಒಳಗೊಂಡಿದ್ದರಿಂದ ಅದು (ಭಾರತ) ತನ್ನ ತಂತ್ರಗಾರಿಕೆಯಲ್ಲಿ ಮನಃಪೂರ್ವಕವಾಗಿ ಪಾಲುದಾರ ಆಗುತ್ತದೆನ್ನುವುದನ್ನು ಅಮೆರಿಕ ಕಂಡುಕೊಂಡಿದೆ. ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಈ ಹೊಸ ರಾಜತಾಂತ್ರಿಕ ನಡೆ ಬಗ್ಗೆ ಭಾರತದೊಂದಿಗೆ ವಿಸ್ತೃತವಾಗಿ ಚರ್ಚಿಸಿರುವ ಸಂಭವವಿದೆ. ನಂತರ ಜೈಶಂಕರ್ ಜೊತೆಗೆ ನಡೆದ ವಿವಿಧ ಚರ್ಚೆಗಳಲ್ಲೂ ಈ ಬಗ್ಗೆ ಪ್ರಸ್ತಾಪಿಸಿರಬಹುದು.
ಸೈದ್ಧಾಂತಿಕ ಸಾಮೀಪ್ಯ
ಎರಡನೆಯ ಅಂಶವೆಂದರೆ, ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಹೂಟಗಳಿಗೆ ಇಸ್ರೇಲ್-ಭಾರತ ಕೂಟದ ಬೆಂಬಲವು ಈ ಹೊಸ ಗುಂಪಿನ ಮೂಲಕ ಇನ್ನಷ್ಟು ದೃಢಗೊಂಡಿದೆ. ಪ್ರಧಾನಿ ಮೋದಿಯಡಿ ಇಸ್ರೇಲ್ನೊಂದಿಗಿನ ವ್ಯೂಹಾತ್ಮಕ ಮೈತ್ರಿಯನ್ನು ಭಾರತ ಇನ್ನಷ್ಟು ಆಳಗೊಳಿಸಿದೆ. ಭದ್ರತೆ ಮತ್ತು ಮಿಲಿಟರಿ ಸಹಕಾರವು ಆರಂಭದಿಂದಲೂ ಇಸ್ರೇಲ್ನೊಂದಿಗಿನ ಮೈತ್ರಿಯ ಮೂಲಾಧಾರವಾಗಿದೆ. ಭಾರತಕ್ಕೆ ರಕ್ಷಣಾ ಹಾಗೂ ಭದ್ರತಾ ಉಪಕರಣಗಳ ಅತಿ ದೊಡ್ಡ ಸರಬರಾಜು ದೇಶಗಳಲ್ಲಿ ಒಂದಾಗಿ ಇಸ್ರೇಲ್ ಹೊರಹೊಮ್ಮಿದೆ. ಹಿಂದುತ್ವ ಮತ್ತು ಯೆಹೂದಿ ಉಗ್ರಗಾಮಿ ಸಿದ್ಧಾಂತಗಳ ಸಾಮಿಪ್ಯ ಇದನ್ನು ಬೆಸೆಯುವ ಅಂಶವಾಗಿದೆ.
ಈ ವಲಯದಲ್ಲಿ ಸೌದಿ ಅರೇಬಿಯಾದೊಂದಿಗೆ ಅಮೆರಿಕದ ನಿಕಟ ಮಿತ್ರನಾಗಿರುವ ಯುಎಇ, ಇಸ್ರೇಲ್ನೊಂದಿಗೆ ಕಳೆದ ವರ್ಷ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿತ್ತು. ಇಸ್ರೇಲ್ನೊಂದಿಗೆ ಬೇಹುಗಾರಿಕೆ ಮತ್ತು ಭದ್ರತಾ ಸಹಕಾರ ವಿಷಯದಲ್ಲಿ ಅದು ಈಗಾಗಲೇ ಆಳವಾಗಿ ಒಳಗೊಂಡಿದೆ.
ಭಾರತ ಇಂಥದ್ದೊಂದು ಗುಂಪಿನ ಸದಸ್ಯನಾಗುವುದೆಂದರೆ ದೀರ್ಘ ಕಾಲದಿಂದ ಅದು ಅನುಸರಿಸಿಕೊಂಡು ಬಂದ ವಿದೇಶಾಂಗ ನೀತಿಗೆ ವಿದಾಯ ಹೇಳಿದಂತೆಯೇ ಸರಿ. ಈಗ ರೂಪಿತವಾದ ಗುಂಪು ಸಾಂಸ್ಥೀಕರಣವಾದರೆ, ಅದು ಚೀನಾದಂತೆ ಇರಾನ್ ವಿರುದ್ಧದ ಕೂಟವೂ ಆಗಿರುತ್ತದೆ. ಏಕೆಂದರೆ, ಇರಾನ್ ತನ್ನ ಆಜೀವ ಶತ್ರು ಎಂದು ಇಸ್ರೇಲ್ ಪರಿಗಣಿಸುತ್ತದೆ. ಇದು ಇರಾನ್ನೊಂದಿಗೆ ಭಾರತ ದೀರ್ಘಕಾಲದಿಂದ ಹೊಂದಿರುವ ಸಂಬಂಧಕ್ಕೆ ಹಾನಿ ಮಾಡುತ್ತದೆ. ಇರಾನ್ನೊಂದಿಗಿನ ಅಮೆರಿಕದ ಪರಮಾಣು ಒಪ್ಪಂದವನ್ನು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದುಪಡಿಸಿ ಇರಾನ್ ಮೇಲೆ ಕಾನೂನುಬಾಹಿರ ದಿಗ್ಬಂಧನ ವಿಧಿಸಿದಾಗಿನಿಂದ ಇರಾನ್ ಜೊತೆಗಿನ ಸಂಬಂಧ ಹಲವು ವರ್ಷಗಳಿಂದ ಕ್ರಮೇಣ ದುರ್ಬಲಗೊಳ್ಳುತ್ತಾ ಬಂದಿದೆ. ಪಶ್ಚಿಮ ಏಷ್ಯಾದಲ್ಲಿನ ಇಂಥ ಸಂಕೀರ್ಣ ಹಾಗೂ ಚಂಚಲ ಸನ್ನಿವೇಶದಲ್ಲಿ ಈ ವಲಯದಲ್ಲಿ ಇಸ್ರೇಲ್ನೊಂದಿಗೆ ಜಂಟಿ ಸಾಹಸಕ್ಕೆ ಇಳಿದರೆ ಅದು ಭಾರತಕ್ಕೆ ತಿರುಗುಬಾಣ ಆಗಬಹುದು.
ಸಭೆಯಲ್ಲಿ ಚರ್ಚಿಸಲಾಯಿತೆನ್ನಲಾದ ಸಾಗರ ಯಾನ ಭದ್ರತೆಯು ಸಾಗರ ಮಾರ್ಗಗಳ, ಅದರಲ್ಲೂ ಮುಖ್ಯವಾಗಿ ಬಬ್-ಎಲ್-ಮಾಂಡೆಬ್ ಜಲಸಂಧಿಯ ನಿಯಂತ್ರಣದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದು ಅರಬ್ಬಿ ಸಮುದ್ರ ಮತ್ತು ಏಡೆನ್ ಕೊಲ್ಲಿ ಹಾಗೂ ಕೆಂಪು ಸಮುದ್ರ ಮತ್ತು ಸೂಯೆಜ್ ಕಾಲುವೆಗೆ ಸಂಪರ್ಕ ಕಲ್ಪಿಸುವ ಮಾರ್ಗ. ಇಂಡೋ-ಪೆಸಿಫಿಕ್ ವಲಯದ ಕ್ವಾಡ್ ವ್ಯಾಪ್ತಿಯಡಿ ಬರುವ ಮಲಕ್ಕಾ ಜಲಸಂಧಿಯಂತೆ ಬಬ್-ಅಲ್-ಮಾಂಡೆಬ್ ಜಲಸಂಧಿ ಚೀನಾದ ನೌಕಾಯಾನ ಮತ್ತು ನೌಕಾಪಡೆಯ ಚಲನವಲನಗಳಿಗೆ ಸಂಭಾವ್ಯ ಬಿಗಿತದ ಸ್ಥಳವಾಗಬಹುದು.
ತಿರುಗುಬಾಣವಾಗಬಹುದಾದ ನೀತಿ
ಚೀನಾದ ವಿರುದ್ಧ ಒಂದು ಸುಸಂಗತ ಜಾಗತಿಕ ವ್ಯೂಹವನ್ನು ಹೇಗಾದರೂ ಕಲೆಹಾಕಲು ಬೈಡೆನ್ ಆಡಳಿತ ಹತಾಶ ಪ್ರಯತ್ನ ನಡೆಸುತ್ತಿರುವಾಗ, ಈ ದುಸ್ಸಾಹಸದಲ್ಲಿ ಒಂದು ಕಿರು ಪಾಲುದಾರ ಆಗಲು ಭಾರತ ಬಯಸುತ್ತಿದೆಯೇ? ಕ್ವಾಡ್, ಔಕುಸ್ ಮತ್ತು ಆಫ್ಘಾನಿಸ್ತಾನ ಪತನಗೊಳ್ಳುವ ಮುನ್ನ ಘೋಷಣೆಯಾದ ಮಧ್ಯ ಏಷ್ಯಾದ ಕುರಿತಂತೆ ನಾಲ್ಕು ದೇಶಗಳ (ಅಮೆರಿಕ, ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಉಝಬೇಕಿಸ್ತಾನ) ಕೂಟ ರಚನೆಯ ಕೈಗೂಡದ ಪ್ರಕಟಣೆ -ಇವೆಲ್ಲವೂ ಚೀನಾವನ್ನು ಕಟ್ಟಿ ಹಾಕಲು ಮತ್ತು ಪ್ರತ್ಯೇಕಗೊಳಿಸಲು ಅಮೆರಿಕ ಹತಾಶೆಯಿಂದ ಓಡಾಡುತ್ತಿದೆ ಎನ್ನುವುದರ ದ್ಯೋತಕವಾಗಿದೆ. ಚೀನಾ ಸಾಧಿಸುತ್ತಿರುವ ಸರ್ವತೋಮುಖ-ಆರ್ಥಿಕ, ತಂತ್ರಜ್ಞಾನ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿನ- ಏಳಿಗೆಯ ವಾಸ್ತವತೆಯ ಹಿನ್ನೆಲೆಯಲ್ಲಿ ಈ ಎಲ್ಲ ಕೂಟ ಮತ್ತು ಹೂಟಗಳು ಸೋಲುವ ಆಟದಂತೆಯೇ ಕಾಣುತ್ತವೆ. ಈ ಆಟದಲ್ಲಿ ಒಂದು ಕಿರಿಯ ಪಾಲುದಾರ ಹಾಗೂ ಯಾವುದೇ ಪರಿಣಾಮ ಬೀರಲಾರದ ಪಾಲುದಾರ ಆಗುವುದರಿಂದ ಭಾರತದ ಹಿತಾಸಕ್ತಿಗಳಿಗೆ ಏನಾದರೂ ಪ್ರಯೋಜನವಿದೆಯೇ?
ಇಂಥದ್ದೊಂದು ಪಾತ್ರ ವಹಿಸಿದರೆ ಭಾರತ ನಿಕಟ ಹಾಗೂ ಮೈತ್ರಿಯುತ ಬಾಂಧವ್ಯ ಹೊಂದಿರುವ ಇತರ ಪ್ರಮುಖ ಶಕ್ತಿಗಳನ್ನು, ವಿಶೇಷವಾಗಿ ರಷ್ಯಾ ಮತ್ತು ಇರಾನಿನಿಂದ ದೂರ ಸರಿದಂತಾಗುತ್ತದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಇತ್ತೀಚೆಗಿನ ಉಪಕ್ರಮದಲ್ಲಿ ಸೇರಿಕೊಳ್ಳುವುದು ಭಾರತದ ವಿದೇಶಾಂಗ ನೀತಿಯು ವಾಶಿಂಗ್ಟನ್ನಿನ ಅಡಿಯಾಳಾಗುವ ಕ್ರಿಯೆ ವೇಗವಾಗಿ ಮುಂದುವರೆಯುತ್ತಿರುವುದರ ಸಂಕೇತವಾಗಿದೆ.
ಅನು: ವಿಶ್ವ