ಡಾ. ಲಕ್ಷ್ಮೀಶ ಜೆ.ಹೆಗಡೆ
‘Reservation Free NEET PG’ ಎಂಬುದು ಟ್ವಿಟರ್ನಲ್ಲಿ ಭಾರೀ ಟ್ರೆಂಡ್ ಆಗಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣವಾಗಿದ್ದು ‘ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ’ MCCಯವರು ಬಿಡುಗಡೆ ಮಾಡಿದ ಸೀಟ್ ಮ್ಯಾಟ್ರಿಕ್ಸ್. ಎಂಸಿಸಿಯ ಈ ಸೀಟ್ ಮ್ಯಾಟ್ರಿಕ್ಸ್ ಹೇಗೆ ಹಂಚಿಕೆಯಾಗುತ್ತದೆ ಎಂದರೆ, ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳ (MD, MS, Diploma) ಪ್ರವೇಶಕ್ಕಾಗಿ ರಾಷ್ಟ್ರೀಯ ಮಟ್ಟದ ನೀಟ್ ಪಿಜಿ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅದರ ಫಲಿತಾಂಶ ಬಂದ ನಂತರ ಲಭ್ಯವಿರುವ ಒಟ್ಟೂ ಸೀಟುಗಳಲ್ಲಿ 50% ಸೀಟುಗಳ ಹಂಚಿಕೆಗಾಗಿ MCC ಕೌನ್ಸಿಲಿಂಗ್ ನಡೆಸುತ್ತದೆ. ಉಳಿದ 50% ಸೀಟುಗಳನ್ನು ಆಯಾಯ ರಾಜ್ಯಗಳ ವೈದ್ಯಕೀಯ ಶಿಕ್ಷಣ ಪ್ರಾಧಿಕಾರಗಳು ರಾಜ್ಯಮಟ್ಟದಲ್ಲಿ ಕೌನ್ಸಿಲಿಂಗ್ ಮಾಡಿ ಹಂಚುತ್ತವೆ. ಆದರೆ ಮೆರಿಟ್ ನಿರ್ಣಯಿಸಲು ಇರುವ ಪರೀಕ್ಷೆ ರಾಷ್ಟ್ರಮಟ್ಟದಲ್ಲಿ ನಡೆಯುವ NEET PG ಮಾತ್ರ.
ಈ ಹಿನ್ನಲೆಯಲ್ಲಿಈ ವರ್ಷದ ನೀಟ್ ಪೀಜಿ ಪರೀಕ್ಷೆ ನಡೆದು ಫಲಿತಾಂಶ ಬಂದ ನಂತರ MCC ಬಿಡುಗಡೆ ಮಾಡಿದ All India quota ಸೀಟುಗಳ ಸೀಟ್ ಮ್ಯಾಟ್ರಿಕ್ಸ್ ನೋಡಿದಾಗ ವೈದ್ಯರಿಗೆ ಆಘಾತ ಕಾದಿತ್ತು. ಕಾರಣ, ದಿಲ್ಲಿಯ ಮೌಲಾನಾ ಆಝಾದ್ ಮೆಡಿಕಲ್ ಕಾಲೇಜು, ವರ್ಧಮಾನ್ ಮಹಾವೀರ ಮೆಡಿಕಲ್ ಕಾಲೇಜು, ಮುಂಬೈನ ಕೆಇಎಮ್ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು ಇಂತಹ ಉನ್ನತ ದರ್ಜೆಯ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಯಾವ ಮೀಸಲಾತಿಯ ವರ್ಗಕ್ಕೂ ಸೇರದ ಸಾಮಾನ್ಯ ವಿದ್ಯಾರ್ಥಿಗಳಿಗೆ Unreserved ವಿಭಾಗದಲ್ಲಿ ಚರ್ಮರೋಗ ಶಾಸ್ತ್ರದ ಒಂದೇ ಒಂದು ಸೀಟ್ ಕೂಡ ಲಭ್ಯವಿರಲಿಲ್ಲ. ನೀಟ್ ಪೀಜಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ Rank ಪಡೆದ ವೈದ್ಯರು ಸಾಮಾನ್ಯವಾಗಿ ಚರ್ಮರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸುತ್ತಾರೆ. ಅದಕ್ಕೆ ಅವರದ್ದೇ ಆದ ಕಾರಣಗಳಿರುತ್ತವೆ. ಆದರೆ ಈಗ ಬಂದಿರುವ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದವರೂ ಕೂಡ ಯಾವುದೇ ಮೀಸಲಾತಿ ವರ್ಗಕ್ಕೆ ಸೇರಿಲ್ಲದಿದ್ದರೆ ತಮಗೆ ಬೇಕಾದ ಕಾಲೇಜಿನಲ್ಲಿ, ತಮಗೆ ಬೇಕಾದ ವಿಭಾಗದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕಾಗಿ ಸೀಟು ಪಡೆಯಲು ಸಾಧ್ಯವಿಲ್ಲ!
ಈ ಬೆಳವಣಿಗೆಗೆ ಕಾರಣವೇನು?
ಜುಲೈ 29 ,2021ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಈ ಬೆಳವಣಿಗೆಗೆ ಮೂಲ ಕಾರಣ. ಈಗಾಗಲೇ ಇರುವ ಮೀಸಲಾತಿಯ ಜೊತೆ All India quotaದ ಸೀಟುಗಳಲ್ಲಿ ಶೇಕಡಾ 27% OBCಯವರಿಗೆ, 10% EWS ವರ್ಗಕ್ಕೆ(Economically weaker section) ಸೇರಿದವರಿಗೆ ಮೀಸಲಿಡಲಾಗುವುದು ಅಂತ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದರು. ಇದರಿಂದ ಯಾವುದೇ ಮೀಸಲಾತಿಯ ವರ್ಗಕ್ಕೆ ಸೇರದೇ ಇರುವ ಪ್ರತಿಭಾವಂತ Unreserved ವಿಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದೆಂಬ ಕೂಗು ಅವತ್ತೇ ಕೇಳಿ ಬಂದಿತ್ತಾದರೂ, ಅದರ ತೀವ್ರತೆ ಗೊತ್ತಾಗಿದ್ದು ಈ ವರ್ಷದ ಸೀಟ್ ಮ್ಯಾಟ್ರಿಕ್ಸ್ ನೋಡಿದಾಗಲೇ.
ಈ ಮೊದಲು ಸೀಟನ್ನು ಹೇಗೆ ಹಂಚಿಕೆ ಮಾಡಲಾಗುತ್ತಿತ್ತು?
ವೈದ್ಯಕೀಯ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕಾಗಿ ಸದ್ಯ ದೇಶದಾದ್ಯಂತ ಒಂದೇ ಪರೀಕ್ಷೆ NEET (National Eligibility Entrance Test) ಹೆಸರಲ್ಲಿ ನಡೆಯುತ್ತದೆ. ಆದರೆ 2013ರ ತನಕ ಆಯಾಯ ರಾಜ್ಯಗಳು ತಮ್ಮ ಮೆಡಿಕಲ್ ಕಾಲೇಜುಗಳಲ್ಲಿರುವ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಹಂಚಿಕೆಗಾಗಿ ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಅರ್ಹತಾ ಪರೀಕ್ಷೆಗಳನ್ನು ನಡೆಸುತ್ತಿದ್ದವು. ಬೇರೆ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಇರುವ ಅಖಿಲ ಭಾರತ ಕೋಟಾದ ಸೀಟುಗಳನ್ನು ಪಡೆಯುವ ಇಚ್ಛೆಯಿದ್ದ ಅಭ್ಯರ್ಥಿಗಳಷ್ಟೇ ರಾಷ್ಟ್ರ ಮಟ್ಟದ ALL INDIA PG ENTRANCE TEST ಬರೆಯುತ್ತಿದ್ದರು. ಈ ಆಲ್ ಇಂಡಿಯಾ ಕೋಟಾ ಅಸ್ತಿತ್ವಕ್ಕೆ ಬಂದು ಅದಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಶುರುವಾದ್ದು 1986ರಲ್ಲಿ. ದೇಶದಲ್ಲಿರುವ ಒಟ್ಟು ವೈದ್ಯಕೀಯ ಸ್ನಾತಕೋತ್ತರ ಸೀಟುಗಳಲ್ಲಿ 50% ಸೀಟುಗಳ ಮೇಲಿನ ಅಧಿಕಾರವನ್ನು ರಾಜ್ಯಗಳಿಗೆ ನೀಡಿದ್ದರಿಂದ ರಾಜ್ಯಗಳು ತಮ್ಮದೇ ರೀತಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದವು.
ಕರ್ನಾಟಕದಲ್ಲಿ ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ CET ಪರೀಕ್ಷೆ ನಡೆಸಿ ಕೌನ್ಸಿಲಿಂಗ್ ನಡೆಸುತ್ತಿತ್ತು. ಇದರಲ್ಲಿ ಬೇರೆ ಬೇರೆ ವರ್ಗದವರಿಗೆ ಒಂದಷ್ಟು ಸೀಟುಗಳು ಮೀಸಲಾಗಿದ್ದವು. ಯಾವ ಮೀಸಲಾತಿಗೂ ಒಳಪಡದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಏಕೆಂದರೆ ಅಖಿಲ ಭಾರತ ಮಟ್ಟದಲ್ಲಿ ಉಳಿದ 50% ಸೀಟುಗಳ ಹಂಚಿಕೆಗಾಗಿ ನಡೆಯುವ ಪರೀಕ್ಷೆ ಮತ್ತು ಕೌನ್ಸಿಲಿಂಗ್’ಗಳಲ್ಲಿ ಯಾವುದೇ ಥರದ ಮೀಸಲಾತಿ ಇರಲಿಲ್ಲ. ಮೆರಿಟ್ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತಿತ್ತು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿತ್ತು. ಉದಾಹರಣೆಗೆ ಸಾಮಾನ್ಯ ವರ್ಗಕ್ಕೆ ಸೇರಿದ ಕರ್ನಾಟಕದ ಅಭ್ಯರ್ಥಿಯೊಬ್ಬ ರಾಷ್ಟ್ರ ಮಟ್ಟದ ಪರೀಕ್ಷೆ ಬರೆದು ಕೌನ್ಸಿಲಿಂಗ್’ನಲ್ಲಿ ಭಾಗವಹಿಸಿ ತನ್ನ ಅರ್ಹತೆಗನುಗುಣವಾಗಿ ನಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲೇ ಆಲ್ ಇಂಡಿಯಾ ಕೋಟಾದಲ್ಲಿ ಸೀಟು ಪಡೆಯಬಹುದಿತ್ತು.
ರಾಜ್ಯ ಮಟ್ಟದಲ್ಲಿ ಆಯಾಯ ರಾಜ್ಯಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳನ್ನೆಲ್ಲ ಕೇಂದ್ರ ಸರ್ಕಾರ 2013ರಿಂದ ರದ್ದು ಮಾಡಿ NEET PG ಹೆಸರಲ್ಲಿ ರಾಷ್ಟ್ರಮಟ್ಟದ ಒಂದೇ ಪರೀಕ್ಷೆ ಮಾಡಲು ಪ್ರಾರಂಭಿಸಿತು. ಆದರೆ ದೇಶದ ಒಟ್ಟೂ ಸೀಟುಗಳಲ್ಲಿ 50% ಸೀಟುಗಳಿಗಾಗಿ ಕೌನ್ಸಿಲಿಂಗ್ ನಡೆಸುವ ಅಧಿಕಾರವನ್ನು ರಾಜ್ಯಗಳು ಉಳಿಸಿಕೊಂಡವು. NEET PGಯಲ್ಲಿ ಪಡೆದ ಮೆರಿಟ್ ಆಧಾರದಲ್ಲಿ ತಮ್ಮ ರಾಜ್ಯದ ಅಭ್ಯರ್ಥಿಗಳ ಪ್ರತ್ಯೇಕ ಮೆರಿಟ್ ಲಿಸ್ಟ್ ತಯಾರಿಸಿ ಸೀಟು ಹಂಚಿಕೆ ನಡೆಯುವ ಪ್ರಕ್ರಿಯೆಯನ್ನು 2013ರ ನಂತರವೂ ರಾಜ್ಯಗಳು ಮುಂದುವರೆಸಿವೆ.
2007ರ ತನಕ All India quotaದ ಸೀಟು ಹಂಚಿಕೆಯಲ್ಲಿ ಯಾವುದೇ ಮೀಸಲಾತಿ ಇರಲಿಲ್ಲ. ಪ್ರವೇಶ ಪರೀಕ್ಷೆಯಲ್ಲಿ ತಾವು ಪಡೆದ ಸ್ಥಾನಗಳ ಆಧಾರದಲ್ಲಿ ಅರ್ಹತೆಗನುಗುಣವಾಗಿ ಸೀಟು ಪಡೆಯಲು ಎಲ್ಲ ವರ್ಗದವರಿಗೂ ಸಮಾನ ಅವಕಾಶವಿತ್ತು. ಆದರೆ 2007ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಆಲ್ ಇಂಡಿಯಾ ಕೋಟಾದ ವೈದ್ಯಕೀಯ ಸ್ನಾತಕೋತ್ತರ ಸೀಟುಗಳಲ್ಲಿ 22.5% ಸೀಟುಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಯಿತು (15% SC& 7.5%ST) ಮತ್ತು 5% ಅಂಗವಿಕಲ ಅಭ್ಯರ್ಥಿಗಳಿಗಾಗಿ ಮೀಸಲಾಯಿತು.
ಈ ವರ್ಷದ ಮೀಸಲು ಹಂಚಿಕೆ ಹೇಗಿದೆ?
ಈ ವರ್ಷದ ಜುಲೈ 29ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಪ್ರಕಾರ ಈಗಾಗಲೇ ಇರುವ ಮೀಸಲಾತಿಯ ಜೊತೆ ಆಲ್ ಇಂಡಿಯಾ ಕೋಟಾ ಸೀಟುಗಳಲ್ಲಿ 27% OBCಯವರಿಗೆ, 10% ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ ಮೀಸಲು ಅಂತಾಯಿತು. ಅಂದರೆ ಒಟ್ಟೂ ಸೀಟುಗಳಲ್ಲಿ 64.5% ಮೀಸಲು ವರ್ಗದವರಿಗಾಗಿ ಲಭ್ಯವಾಗಲಿವೆ ಈ ವರ್ಷದಿಂದ. ಉಳಿದ 35.5% ಸೀಟುಗಳನ್ನಷ್ಟೇ ತಮ್ಮ ಅರ್ಹತೆಗನುಗುಣವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪಡೆಯಬಹುದು. ಇದು Unreserved ವರ್ಗಕ್ಕೆ ಭಾರೀ ಹೊಡೆತ ನೀಡಿದೆ.
ಮೀಸಲಾತಿಯಿಲ್ಲದ ಪ್ರತಿಭಾವಂತ ವಿದ್ಯಾರ್ಥಿಗೆ ಹೇಗೆ ಅನ್ಯಾಯವಾಗುತ್ತಿದೆ?
ರಾಜ್ಯ ಮಟ್ಟದ ಕೌನ್ಸಿಲಿಂಗ್ಲ್ಲಿ ಭಾಗವಹಿಸಿ ತಮ್ಮ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಸ್ನಾತಕೋತ್ತರ ಸೀಟು ಪಡೆಯಲು ಸಾಮಾನ್ಯವರ್ಗದವರಿಗೆ ಲಭ್ಯವಿರುವುದು ಕೆಲವೇ ಸಂಖ್ಯೆಯ ಸೀಟುಗಳು ಮಾತ್ರ. ಮೀಸಲಾತಿಯನ್ನು ಹೆಚ್ಚಿಸಿದ ಪರಿಣಾಮ ಆಲ್ ಇಂಡಿಯಾ ಕೋಟಾದಲ್ಲೂ ಸಾಮಾನ್ಯ ವರ್ಗದವರಿಗೆ ಲಭ್ಯವಿರುವ ಸೀಟುಗಳು ಗಣನೀಯವಾಗಿ ಕಡಿಮೆಯಾಗಿವೆ. ಕಳೆದ ವರ್ಷದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ 6556 ಸ್ನಾತಕೋತ್ತರ ಸೀಟುಗಳು ಯಾವುದೇ ಮೀಸಲಾತಿಯಿಲ್ಲದ ಸಾಮಾನ್ಯ ವರ್ಗದವರಿಗೆ ಲಭ್ಯವಿದ್ದವು. ಈ ಬಾರಿ 37% ಸೀಟುಗಳು ಪ್ರತೇಕವಾಗಿ ಮೀಸಲಾತಿ ವರ್ಗಕ್ಕೆ ಸೇರಿದ್ದರಿಂದ, ಸಾಮಾನ್ಯ ವರ್ಗಕ್ಕೆ ಲಭ್ಯವಿರುವುದು 3693 ಸೀಟುಗಳು ಮಾತ್ರ.
ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಮಾನ್ಯ ವರ್ಗದವರಿಗೆ ಹತ್ತಿರ ಹತ್ತಿರ ಅರ್ಧದಷ್ಟು ಸೀಟುಗಳು ಕಡಿಮೆಯಾಗಿವೆ. ಇದರಿಂದಾಗಿ ಯಾವುದೇ ಮೀಸಲಾತಿಯಿಲ್ಲದ ಪ್ರತಿಭಾವಂತ ಅಭ್ಯರ್ಥಿಯೊಬ್ಬ NEET PGಯಲ್ಲಿ ಮೊದಲ ಸ್ಥಾನ ಪಡೆದಿದ್ದರೂ ತನಗೆ ಬೇಕಾದ ಕಾಲೇಜಿನಲ್ಲಿ ತನ್ನಿಷ್ಟದ ಸೀಟನ್ನು ಆಲ್ ಇಂಡಿಯಾ ಕೋಟಾ ಮೂಲಕ ಪಡೆಯುವಂತಿಲ್ಲ.
ಸಾಮಾನ್ಯ ವರ್ಗಕ್ಕೆ ಲಭ್ಯವಿರುವ ಸೀಟುಗಳಲ್ಲಿನ ಸಮಸ್ಯೆಗಳೇನು?
ಮೀಸಲಾತಿಯಿಲ್ಲದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ನಿಯಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾರಣ, ತಮಗೆ ಲಭ್ಯವಿರುವ ಸೀಟುಗಳು ಕಡಿಮೆಯಾದ ದುಃಖ ಒಂದೆಡೆಯಾದರೆ, ಇರುವ 3696 ಸೀಟುಗಳಲ್ಲಿ ಹೆಚ್ಚಿನವು Non Clinical Brnachಗಳಿಗೆ ಸೇರಿದವುಗಳು ಎಂಬ ಹತಾಶೆ ಇನ್ನೊಂದೆಡೆ. Non clinical branch ಎಂದರೆ ರೋಗಲಕ್ಷಣ ಶಾಸ್ತ್ರ(Pathology), ಸೂಕ್ಷಾಣುಜೀವಿ ಶಾಸ್ತ್ರ(Microbiology), ಔಷಧಶಾಸ್ತ್ರ(Pharmacology) ಇತ್ಯಾದಿ. ಇಂಥ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ನೇರವಾಗಿ ರೋಗಿಗಳ ಜೊತೆ ಬೆರೆತು ಚಿಕಿತ್ಸೆ ನೀಡುವುದಿಲ್ಲ. ರೋಗ ಪತ್ತೆಗೆ ಪೂರಕವಾಗುವ ಪರೀಕ್ಷೆಗಳನ್ನು ಮಾಡುವಲ್ಲಿ, ಔಷಧಗಳ ತಯಾರಿಕೆಯಂಥ ಕೆಲಸದಲ್ಲಿ ನಿರತರಾಗುತ್ತಾರೆ. ಈ ರೀತಿಯ ತೆರೆಯ ಹಿಂದಿನ ಕೆಲಸ ಮಾಡುವ ವೈದ್ಯರಾಗಲು ಹೆಚ್ಚಿನವರು ಬಯಸುವುದಿಲ್ಲ. ತಮಗೆ ಸಿಗುತ್ತಿದ್ದ ಸೀಟುಗಳ ಸಂಖ್ಯೆಯಲ್ಲೇ ಗಣನೀಯ ಇಳಿಕೆಯಾಗಿದೆ, ಲಭ್ಯವಿರುವ ಸೀಟುಗಳಲ್ಲೂ ತಮ್ಮ ಆಸಕ್ತಿಯ clinical branchನ ಸೀಟುಗಳು ಹೆಚ್ಚಾಗಿ ಲಭ್ಯವಿಲ್ಲವೆಂಬುದು ಸಾಮಾನ್ಯ ವರ್ಗದ ವೈದ್ಯರ ಅಳಲು.
ಸೀಟು ಹಂಚಿಕೆಯನ್ನು ಹೇಗೆ ನಿರ್ವಹಿಸಬಹುದಿತ್ತು?
ಈಗ ಸಾಮಾನ್ಯ ವರ್ಗದಲ್ಲಿ ಲಭ್ಯವಿದ್ದ ಸೀಟುಗಳಲ್ಲಿ 37% ಅನ್ನು ಪ್ರತ್ಯೇಕ ವರ್ಗಕ್ಕೆ ಪರಿಗಣಿಸಿದಾಗ, ಮೆರಿಟ್ ಪಡೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ವೈದ್ಯರ ಅಳಲು. NEET PGಯಲ್ಲಿ ಮೊದಲ ಸ್ಥಾನ ಪಡೆದ ವೈದ್ಯನೂ ಕೂಡ ಮೀಸಲಾತಿ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ತನಗೆ ಬೇಕಾದ ಕಡೆ ಸೀಟು ಪಡೆಯಲಾಗದ ಸ್ಥಿತಿಯನ್ನು ತಂದೊಡ್ಡಿದೆ ಈ ಹೊಸ ವೈದ್ಯಕೀಯ ಶಿಕ್ಷಣ ವ್ಯವಸ್ಥೆ. ಮೀಸಲಾತಿಯ ಶೇಕಡಾವರು ಪ್ರಮಾಣವನ್ನು ಹೆಚ್ಚಿಸಿದಾಗ ಅದಕ್ಕೆ ತಕ್ಕಂತೆ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆಯನ್ನೂ ಹೆಚ್ಚಿಸಿದ್ದರೆ ಮೆರಿಟ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರಲಿಲ್ಲ.