ರಾಜ್ಯದ 16 ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆಯನ್ನು ಪಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ.
ರಾಜ್ಯದಲ್ಲಿ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿದಂತೆ 28 ವಿಶ್ವವಿದ್ಯಾಲಯಗಳ ಪೈಕಿ 16 ವಿಶ್ವವಿದ್ಯಾಲಯಗಳು ಇನ್ನೂ ಮಾನ್ಯತೆ ಪಡೆದಿಲ್ಲ ಎಂಬುದನ್ನು ನ್ಯಾಕ್ ರೂಪಿಸಿರುವ ವರದಿಯಿಂದ ತಿಳಿದುಬಂದಿದೆ. ಆ ವಿವಿಗಳು ಯಾವವು ಎಂದರೆ..
ಮಾನ್ಯತೆ ಪಡೆಯದ ವಿವಿಗಳು
1. ಕರ್ನಾಟಕ ಮುಕ್ತ ವಿವಿ, ಮೈಸೂರು
2. ದಾವಣಗೆರೆ ವಿವಿ, ದಾವಣಗೆರೆ
3. ವಿಜಯನಗರ ಶ್ರೀಕೃಷ್ಣದೇವರಾಯ
ವಿಶ್ವವಿದ್ಯಾಲಯ, ಬಳ್ಳಾರಿ
4. ಸಂಗೀತ ವಿವಿ, ಮೈಸೂರು
5. ಸಂಸ್ಕೃತ ವಿವಿ, ಬೆಂಗಳೂರು
6. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ- ಬೆಳಗಾವಿ
7. ಜನಪದ ವಿವಿ, ಹಾವೇರಿ
8. ಬೆಂಗಳೂರು ಕೇಂದ್ರ ವಿವಿ, ಬೆಂಗಳೂರು,
9. ಬೆಂಗಳೂರು ಉತ್ತರ ವಿವಿ, ಬೆಂಗಳೂರು,
10.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ
ವಿವಿ- ಬೆಂಗಳೂರು
11. ಕೃಷಿ ವಿವಿ- ಬೆಂಗಳೂರು
12.ಕೃಷಿ ವಿವಿ, ಧಾರವಾಡ
13. ಕೃಷಿ ವಿವಿ, ರಾಯಚೂರು
14.ತೋಟಗಾರಿಕಾ ವಿಜ್ಞಾನ ವಿವಿ
15.ಬಾಗಲಕೋಟೆ, ಕೃಷಿ ಮತ್ತು ತೋಟಗಾರಿಕಾ
ವಿಜ್ಞಾನ ವಿವಿ, ಶಿವಮೊಗ್ಗ
16.ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ವಿವಿ, ಗದಗ.
ನ್ಯಾಕ್ ಶ್ರೇಣಿ ನೀಡುವುದು ಹೇಗೆ : ಇದು ಕಾಲೇಜುಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ. ಏಕೆಂದರೆ, ನ್ಯಾಕ್ನಲ್ಲಿ ಉತ್ತಮ ಶ್ರೇಣಿ ಸಿಗುವುದು ಸುಲಭವಾದ ಮಾತಲ್ಲ. ಕಾಲೇಜಿನ ಕಾಂಪೌಂಡ್ನಿಂದ ಹಿಡಿದು ಕಾಲೇಜಿನ ಬೋಧಕರು ಪಡೆದುಕೊಂಡಿರುವ ಪಿಎಚ್.ಡಿವರೆಗೆ ಹಲವು ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಮೌಲ್ಯಾಂಕನ ಮಾಡಿಯೇ ಶ್ರೇಣಿಯನ್ನು ನೀಡಲಾಗುತ್ತದೆ.
ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ 16 ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆ ಪಡೆಯದೆ ಇರುವುದು ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ. ಇನ್ನೂ ಈ ವಿವಿಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಅನೇಕ ಕಾಲೇಜುಗಳು ಕುಡಿಯುವ ನೀರು, ಶೌಚಾಲಯ, ಕ್ರೀಡಾಂಗಣ, ಪ್ರಯೋಗಾಲುದಂತಹ ಸೌಲಭ್ಯಗಳನ್ನು ಹೊಂದಿಲ್ಲ.
ನ್ಯಾಕ್ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳ ನ್ಯಾಕ್ ಮಾನ್ಯತೆ ಸ್ಥಿತಿ ಮತ್ತು ಗುಣಮಟ್ಟ ಹೆಚ್ಚಿಸಲು ಶಿಫಾರಸು ಎಂಬ ವರದಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶಗಳನ್ನು ತಿಳಿಸಿದೆ.
ರಾಜ್ಯದಲ್ಲಿ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿದಂತೆ 28 ವಿಶ್ವವಿದ್ಯಾಲಯಗಳ ಪೈಕಿ 16 ವಿಶ್ವವಿದ್ಯಾಲಯಗಳು ಇನ್ನೂ ಮಾನ್ಯತೆ ಪಡೆದಿಲ್ಲ ಎಂಬುದನ್ನು ನ್ಯಾಕ್ ರೂಪಿಸಿರುವ ವರದಿಯಿಂದ ತಿಳಿದುಬಂದಿದೆ. ಈ ಪೈಕಿ ಕೆಲವು ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆ ಪಡೆದುಕೊಳ್ಳುವ ಸಿದ್ಧತೆಯಲ್ಲಿ ತೊಡಗಿವೆ. ಕೆಲವು ಹೊಸ ವಿವಿಗಳಾಗಿದ್ದು, ಸದ್ಯಕ್ಕೆ ನ್ಯಾಕ್ ಮಾನ್ಯತೆ ಪಡೆಯಲು ಅನರ್ಹವಾಗಿವೆ.
ನ್ಯಾಕ್ ಕಡೆಯೇ ಮುಖ ಹಾಕದ ಕಾಲೇಜುಗಳು: ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜುಗಳಿವೆ. ಈ ಪೈಕಿ 176 ಕಾಲೇಜುಗಳು ಮಾತ್ರವೇ ನ್ಯಾಕ್ ಮಾನ್ಯತೆ ಪಡೆದಿವೆ. ಉಳಿದ 167 ಕಾಲೇಜುಗಳು ಮಾನ್ಯತೆ ಪಡೆಯಲು ಅರ್ಹತೆ ಹೊಂದಿದ್ದರೂ ಈವರೆಗೆ ಅರ್ಜಿ ಸಲ್ಲಿಸಿಲ್ಲ. ಮಾನ್ಯತೆ ಪಡೆದಿದ್ದ ಕಾಲೇಜುಗಳ ಪೈಕಿ 52 ಕಾಲೇಜುಗಳ ನ್ಯಾಕ್ ಮಾನ್ಯತೆ ಅವಧಿ ಮುಗಿದಿದೆ. ಆನಂತರ ನವೀಕರಣಕ್ಕೆ ಹೊಸದಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ. ಇನ್ನೂ 9 ಕಾಲೇಜುಗಳ ಮಾನ್ಯತೆ ಪ್ರಕ್ರಿಯೆ ಹಂತದಲ್ಲಿದೆ. 21 ಕಾಲೇಜುಗಳು ಮಾನ್ಯತೆ ಪಡೆಯಲು ಅನರ್ಹವಾಗಿವೆ. 5 ವಿವಿಗಳು ಕ್ಲಸ್ಟರ್ ವಿವಿಗಳಾಗಿದ್ದು, ಮಾನ್ಯತೆ ಅನ್ವಯಿಸುವುದಿಲ್ಲವೆಂದು ನ್ಯಾಕ್ ರೂಪಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
16 ವಿವಿಗಳು ಮಾನ್ಯತೆ ಪಡೆದಿಲ್ಲ ಎಂದು ನ್ಯಾಕ್ ವರದಿ ತಿಳಿಸಿದೆ. 1990ರಲ್ಲೇ ವಿವಿಗಳು ಆರಂಭವಾಗಿದ್ದರೂ ಮಾನ್ಯತೆ ಪಡೆಯದಿರುವುದು ದುರಂತ. ಮೊದಲು ನ್ಯಾಕ್ ಮಾನ್ಯತೆ ಕಡ್ಡಾಯವಾಗಿರಲಿಲ್ಲ. 2013ರಲ್ಲಿ ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಡ್ಡಾಯ ಮಾಡಿದೆ.