ದೆಹಲಿ: ಭಾರತದ ಕೊವ್ಯಾಕ್ಸಿನ್ ಲಸಿಕೆಗೆ ಇದೀಗ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ. ಕೊವ್ಯಾಕ್ಸಿನ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ. ಅದರಂತೆ, ಕೊವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು ವಿದೇಶಕ್ಕೆ ತೆರಳಬಹುದಾಗಿದೆ.
ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಅನ್ವಯ ವಿಶ್ವ ಆರೋಗ್ಯ ಸಂಸ್ಥೆಯು ಇಂದು ಅನುಮತಿ ನೀಡಿದೆ. ಕೊವ್ಯಾಕ್ಸಿನ್ ಭಾರತದ ಮೊದಲ ಸ್ವದೇಶಿ ಕೊವಿಡ್ 19 ಲಸಿಕೆ ಆಗಿದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಐಸಿಎಮ್ಆರ್ ಮತ್ತು ಎನ್ಐವಿ ಜೊತೆಗೂಡಿ ಈ ಲಸಿಕೆ ಸಿದ್ಧಪಡಿಸಲಾಗಿದೆ.
ಇದನ್ನು ಓದಿ: ನೂರು ಕೋಟಿ ಲಸಿಕೆ ಸಾಧನೆಯ ಹಿಂದೆಮುಂದೆ
ಕೊರೊನಾ ಸೋಂಕಿನ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ಸಂಸ್ಥೆಯು ಕಳೆದ 2021ರ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದು, ಅಗತ್ಯ ದಾಖಲೆಗಳೊಂದಿಗೆ ಅನುಮೋದನೆ ಶಿಫಾರಸ್ಸು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಇಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಿತು.
ಡಬ್ಲ್ಯುಎಚ್ಒನಲ್ಲಿ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ಪ್ರವೇಶದ ಸಹಾಯಕ ಮಹಾನಿರ್ದೇಶಕ ಡಾ ಮರಿಯಾಂಗೆಲಾ ಸಿಮಾವೊ ʻʻಸದ್ಯ ಕೊವಾಕ್ಸಿನ್ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಂಟು ಲಸಿಕೆ ಮಾದರಿಗಳ ಮೌಲ್ಯಮಾಪನ ಮಾಡುತ್ತಿದೆ. ನಾವು ಇದನ್ನು ಅತ್ಯಂತ ತುರ್ತು ಅಗತ್ಯ ವಿಷಯ ಎಂದುಕೊಂಡಿದ್ದೇವೆ. ಏಳು ವಿಷಯಗಳ ಮೇಲೆ ಮೌಲ್ಯಮಾಪನಕ್ಕೆ ಏಳು ಬೇರೆ ಬೇರೆ ತಂಡಗಳು ಕೆಲಸ ಮಾಡುತ್ತಿದೆ. ಮಹಾನಿರ್ದೇಶಕರ ಅಡಿಯಲ್ಲಿ ಸಂಸ್ಥೆಯು ಈ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ವೇಗವಾಗಿ ಮುಗಿಸಲು ಬದ್ಧವಾಗಿದೆ. ಆದರೆ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸುವ ಶಿಫಾರಸು ಪ್ರಕ್ರಿಯೆಯು ಉತ್ಪಾದಕರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿರಬೇಕು. ವಿಶ್ವ ಆರೋಗ್ಯ ಸಂಸ್ಥೆಯಿಂದ ಸ್ವತಂತ್ರವಾಗಿರುವ ತಾಂತ್ರಿಕ ಸಲಹಾ ಸಮಿತಿಗೆ ಉತ್ಪಾದಕ ಕಂಪನಿಯು ಎಷ್ಟು ಕ್ಷಿಪ್ರಗತಿಯಲ್ಲಿ ಅಗತ್ಯ ಮಾಹಿತಿಯನ್ನು ಸಲ್ಲಿಸುತ್ತದೆಯೋ ಅಷ್ಟು ವೇಗವಾಗಿ ಶಿಫಾರಸ್ಸು ಸಿಗಲಿದೆ. ಈ ಅಂಶವನ್ನು ನಾವು ಇಲ್ಲಿ ತುಂಬಾ ಸ್ಪಷ್ಟವಾಗಿ ಹೇಳುವುದಕ್ಕೆ ಬಯಸುತ್ತೇವೆ,” ಎಂದು ತಿಳಿಸಿದ್ದರು.
ಇದನ್ನು ಓದಿ: ಲಸಿಕೆ ಲಸಿಕೆ ಲಸಿಕೆಗಾಗಿ ಶುರುವಾಗಿದೆ ಹಾಹಾಕಾರ, ಎರಡನೇ ಡೋಸ್ ಪಡೆಯಲು ಪರದಾಟ
ಭಾರತದಲ್ಲಿ ಉತ್ಪಾದಿಸುವ ಎರಡು ಲಸಿಕೆಗಳ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ. ಈ ಮೊದಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಚ್ರಾಜೆನಿಕಾ ಸಂಸ್ಥೆಗಳು ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಇದೀಗ ಅದೇ ಪಟ್ಟಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯೂ ಸಹ ಸೇರ್ಪಡೆಯಾಗಿದೆ.
ಕೊವ್ಯಾಕ್ಸಿನ್ ಲಸಿಕೆ ಕೊರೊನಾವೈರಸ್ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಕೋವಿಡ್-19 ರೂಪಾಂತರ ಡೆಲ್ಟಾ ವೈರಸ್ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಈವರೆಗೆ ಹಲವು ಕಂಪನಿಗಳು ಉತ್ಪಾದಿಸುವ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತದ ಮಟ್ಟಿಗೆ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯು ತುರ್ತು ಬಳಕೆ ಅನುಮೋದನೆ ಪಟ್ಟಿಗೆ ಸೇರ್ಪಡೆಯಾಗಿವೆ. ಇದರ ಹೊರತಾಗಿ ಫೈಜರ್, ಬಯೋನಟೆಕ್, ಜಾನ್ಸನ್ ಆಂಡ್ ಜಾನ್ಸನ್, ಮಾಡರ್ನಾ ಮತ್ತು ಸಿನೋಫಾರ್ಮಾ ಕಂಪನಿಗಳು ಉತ್ಪಾದಿಸುವ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ.