ಟಿ.ಎಲ್. ಕೃಷ್ಣೇಗೌಡ
ಇತ್ತೀಚಿಗೆ ಸರ್ವ ಶಿಕ್ಷಾ ಅಭಿಯಾನ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದ ಆಘಾತಕಾರಿ ಅಂಶವೇನೆಂದರೆ 11 ರಿಂದ 13 ವರ್ಷದ ಒಳಗಿನ ಮಕ್ಕಳಲ್ಲಿ ಶೇ. 63 ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ರೀತಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಶೇ. 49 ರಷ್ಟು ದಲಿತ ಮಕ್ಕಳಿದ್ದರೆ, ಶೇ. 48.9 ರಷ್ಟು ಮಕ್ಕಳು ಇತರೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ನಂತರದ ಸ್ಥಾನ ಕಲ್ಬುರ್ಗಿ ಜಿಲ್ಲೆಯದು. ಅಂದರೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಹೆಚ್ಚಾಗಿರುವುದು ಒಂದು ಕಡೆ ಸರ್ಕಾರಿ ಶಾಲೆಗಳ ಕೊರತೆ ಮತ್ತು ಇನ್ನೊಂದೆಡೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲಾಗದ ನಗರದ ಬಡವರ ಕತೆಯನ್ನು ಹೇಳುತ್ತದೆ.
ಸಂವಿಧಾನದ ನಿರ್ದೇಶಕ ತತ್ವಗಳ ಪ್ರಕಾರ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದರೂ ವಾಸ್ತವ ಚಿತ್ರಣ ಬಹಳ ಭಿನ್ನವಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಎಲ್ಲರಿಗೂ ಸಮಾನವಾಗಿ ಮತ್ತು ಸಾರ್ವತ್ರಿಕವಾಗಿ ನೀಡುವಲ್ಲಿ ಜಾತಿ, ವರ್ಗ, ಲಿಂಗ ಮತ್ತು ಪ್ರಾದೇಶಿಕ ಅಸಮಾನತೆಗಳು ತಡೆಯಾಗಿವೆ. ಇದರ ಪರಿಣಾಮವಾಗಿ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಶಾಲೆ ಬಿಡುವ ಮಕ್ಕಳ ಸಂಖ್ಯೆ ಗಣನೀಯವಾಗಿದ್ದು, 91 ರ ನಂತರದ ಉದಾರೀಕರಣ ನೀತಿಗಳು ಮತ್ತು ಇತ್ತೀಚಿನ ಕೋವಿಡ್ ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ.
ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಒಂದು ಮಾನವ ಹಕ್ಕು ಎಂಬ ನಿಲುವನ್ನು ಅಂಗೀಕರಿಸಿ ಸುಮಾರು ಮುಕ್ಕಾಲು ಶತಮಾನವೇ ಕಳೆದು ಹೋಗಿದೆ. ಆದರೆ ಈಗಲೂ ಸಹ ಶಾಲೆಗೆ ಹೋಗುವ ವಯಸ್ಸಿನ 44 ಸಾವಿರ ಮಕ್ಕಳು ಶಾಲೆಯ ಮುಖವನ್ನೇ ಕಾಣದಿರುವವರು ಕರ್ನಾಟಕದಲ್ಲಿದ್ದಾರೆ, ಸಮೀಕ್ಷೆ ಇನ್ನೂ ಮುಂದುವರೆದಿದ್ದು ಈ ಸಂಖ್ಯೆ 60 ಸಾವಿರ ಮುಟ್ಟುವ ಸಂಭವವಿದೆ. ಈಗಲೂ ಶಾಲೆಗೆ ಹೋಗುವ ವಯಸ್ಸಿನ ಕಾಲು ಭಾಗದಷ್ಟು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಶಾಲೆಗೆ ದಾಖಲಾದರೂ ಶಾಲೆಗೆ ಹೋಗದ ಮಕ್ಕಳನ್ನು ಗೈರು ಹಾಜರಿ ಎಂದು ತೋರಿಸಿದರೆ ಎದುರಿಸಬೇಕಾದ ತಾಂತ್ರಿಕ ಸವಾಲುಗಳ ಕಾರಣಕ್ಕಾಗಿ ಗೈರುಹಾಜರಿ ಎಂದು ತೋರಿಸದೆ ಹಾಜರಾತಿ ತೋರಿದರೂ ವಾಸ್ತವವಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿರುತ್ತಾರೆ.
ನಮ್ಮ ದೇಶದಲ್ಲಿ ಸರ್ಕಾರದ ನೀತಿ ನಿರೂಪಣಾ ದಾಖಲೆಗಳಲ್ಲಿ ಶಾಲಾ ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದ್ದರೂ, ಇದನ್ನು ಸಾಧಿಸಲು ಬೇಕಾದ ಕ್ರಮಗಳಾಗಲಿ ಅಥವಾ ಸಂಪನ್ಮೂಲಗಳನ್ನು ಒದಗಿಸುವುದಾಗಲಿ ಕಂಡುಬರುವುದಿಲ್ಲ ಹಾಗೂ ಅಂಚಿನ ವಿಭಾಗದ ಮಕ್ಕಳನ್ನು ಶಾಲಾ ಶಿಕ್ಷಣದಲ್ಲಿ ಒಳಗೊಳ್ಳಲು ಬೇಕಾದ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇದರ ಪರಿಣಾಮವಾಗಿ ಜಗತ್ತಿನ ಒಟ್ಟು ಅನಕ್ಷರಸ್ಥ ಜನರ ಪೈಕಿ ಶೇ. 30 ರಷ್ಟು ಭಾರತದಲ್ಲೇ ಇದ್ದಾರೆ. ಅದರಲ್ಲೂ ಮಹಿಳಾ ಸಾಕ್ಷರತೆಯ ಪ್ರಮಾಣ ಆಫ್ರಿಕಾದ ಸಾಕ್ಷರತೆಯ ಪ್ರಮಾಣಕ್ಕಿಂತ ಕಡಿಮೆಯಿದೆ.
ಯುನೆಸ್ಕೋ ವರದಿಗಳ ಪ್ರಕಾರ ಭಾರತದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 20 ದಶಲಕ್ಷಕ್ಕೂ ಹೆಚ್ಚು. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ 60 ದಶಲಕ್ಷಕ್ಕೂ ಹೆಚ್ಚು. ಇದರಲ್ಲಿ ಶೇಕಡಾ 60 ಕ್ಕೂ ಹೆಚ್ಚಿನವರು ಹೆಣ್ಣುಮಕ್ಕಳು. ಶಾಲೆಗೆ ದಾಖಲಾದ ಮಕ್ಕಳಲ್ಲೂ ಶೇ. 37 ಮಕ್ಕಳು ಐದನೇ ತರಗತಿಯನ್ನು ತಲುಪುವುದಿಲ್ಲ.
ಐವತ್ತರ ದಶಕಕ್ಕೆ ಹೋಲಿಸಿದರೆ ಪ್ರಾಥಮಿಕ ಶಾಲೆಗಳ ಸಂಖ್ಯೆ ಹೆಚ್ಚಾಗಿ ದಾಖಲಾತಿ ಉತ್ತಮಗೊಂಡಿದ್ದರೂ ಅಗತ್ಯವಿರುವಷ್ಟು ಸೌಲಭ್ಯಗಳನ್ನು ಕಲ್ಪಿಸಿ, ತೃಪ್ತಿಕರವಾದ ಮೂಲಸೌಕರ್ಯವನ್ನು ಒದಗಿಸಲು ಒಕ್ಕೂಟ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಈಗಲೂ ಜಿಡಿಪಿಯ ಶೇ. 3 ಕ್ಕಿಂತ ಕಡಿಮೆ ಅನುದಾನ ನೀಡಲಾಗುತ್ತಿದ್ದು ಬಹುಶಃ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಅತ್ಯಂತ ಕಡಿಮೆ ಅನುದಾನವಾಗಿದೆ.
ಕರ್ನಾಟಕದ ಪ್ರಾಥಮಿಕ ಶಿಕ್ಷಣದ ಪರಿಸ್ಥಿತಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಅತ್ತ ಬಿಹಾರದಷ್ಟು ಹಿಂದುಳಿದಿದೆ ಎನ್ನುವ ಹಾಗೂ ಇಲ್ಲ ಇತ್ತ ಕೇರಳದಂತೆ ಮುಂದುವರಿದಿದೆ ಎನ್ನುವಂತೆಯೂ ಇಲ್ಲ. ರಾಜ್ಯದೊಳಗಡೆ ಕೂಡ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಗುಲ್ಬರ್ಗಾವೂ ಇದೆ. ಮುಂದುವರಿದ ಅಥವಾ ಪರವಾಗಿಲ್ಲ ಎನ್ನಬಹುದಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳೂ ಇವೆ. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತೆ ಶೇ. 75, ಮಹಿಳಾ ಸಾಕ್ಷರತೆ ಪ್ರಮಾಣ ಶೇ.68. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಹೆಣ್ಣುಮಕ್ಕಳು ಕಡಿಮೆಯಿದ್ದರೂ ಸಾಕ್ಷರತೆಯ ಅಂತರ ಹೆಚ್ಚೇ ಇದೆ.
ಪ್ರಾಥಮಿಕ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಪ್ರಗತಿ ನಿರಾಶಾದಾಯಕ ಅಲ್ಲದಿದ್ದರೂ ತೀವ್ರವಾಗಿಲ್ಲ. ಪ್ರತಿ ಒಂದು ಕಿಲೋಮೀಟರ್ ಅಂತರದಲ್ಲಿ ಒಂದು ಪ್ರಾಥಮಿಕ ಶಾಲೆ ಇದೆ ಎಂದು ಶಿಕ್ಷಣ ಇಲಾಖೆ ಹೇಳಿದರೂ, ಇನ್ನೂ ಶಾಲೆಯೇ ಇಲ್ಲದ ಜನವಸತಿಗಳೂ ಇವೆ. ಈಗಲೂ ಏಕೋಪಾದ್ಯಾಯ ಶಾಲೆಗಳು, ಬಹು ತರಗತಿ ನಿರ್ವಹಣೆಯ ಶಾಲೆಗಳು ವ್ಯಾಪಕವಾಗಿದೆ.
ಕರ್ನಾಟಕದಲ್ಲಿ ಈಗಲೂ ಶಿಕ್ಷಣದ ಮೇಲೆ ಮಾಡುತ್ತಿರುವ ವೆಚ್ಚ ಜಿಡಿಪಿಯ ಶೇ. 3.2 ನ್ನು ಮೀರಿಲ್ಲ. ಈ ಹಣದಲ್ಲೂ ಪ್ರಾಥಮಿಕ ಶಿಕ್ಷಣಕ್ಕೆ ಸಿಂಹಪಾಲು ಖರ್ಚಾಗುತ್ತಿದ್ದು ಒಟ್ಟು ಮೀಸಲಿಟ್ಟ ಹಣದಲ್ಲಿ ಶೇ. 55 ರಷ್ಟು ಪ್ರಾಥಮಿಕ ಶಿಕ್ಷಣಕ್ಕೆ ವ್ಯಯವಾಗುತ್ತಿದೆ. ನಂತರದಲ್ಲಿ ಪ್ರೌಢ ಮತ್ತು ಕಾಲೇಜು ಶಿಕ್ಷಣಕ್ಕೆ ಖರ್ಚಾಗುತ್ತಿದೆ. ಪ್ರಾಥಮಿಕ ಶಿಕ್ಷಣಕ್ಕಾಗಿ ಪ್ರತಿ ಮಗುವಿನ ಮೇಲೆ ರಾಜ್ಯ ಸರ್ಕಾರ 1350 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ಇದರಲ್ಲಿ ಶೇ. 90 ರಷ್ಟು ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರ ಸಂಬಳಕ್ಕೆ ಹೋಗುತ್ತಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಹ ನೂರಾರು ಶಾಲೆಗಳು ಒದ್ದಾಡುತ್ತಿವೆ. ಹೀಗಿದ್ದರೂ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳು ಮತ್ತು ಅವುಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದೆ. 1960-61 ರಲ್ಲಿ 27,050, 1997-98 ರಲ್ಲಿ 46,900 ಈಗ ಸರಿ ಸುಮಾರು 62,000 ಪ್ರಾಥಮಿಕ ಶಾಲೆಗಳು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಶಾಲೆಗಳ ಸಂಖ್ಯೆಯಲ್ಲಿ ಆದ ಹೆಚ್ಚಳದಿಂದಾಗಿ ಒಂದರಿಂದ ಏಳನೇ ತರಗತಿಯ ಮಕ್ಕಳ ದಾಖಲಾತಿಯಲ್ಲೂ ಗಣನೀಯ ಹೆಚ್ಚಳವಾಗಿದೆ. 1959-60 ರಲ್ಲಿ 2.3 ದಶಲಕ್ಷ, 1998-99 ರಲ್ಲಿ 8.3 ದಶಲಕ್ಷ ಇದ್ದ ಮಕ್ಕಳ ಸಂಖ್ಯೆ ಈಗ 10 ದಶಲಕ್ಷಕ್ಕೂ ಹೆಚ್ಚಿನ ಮಕ್ಕಳು ಅನುದಾನಿತ, ಸರ್ಕಾರಿ ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಈಗಲೂ ಗಂಡು ಮಕ್ಕಳ ದಾಖಲಾತಿಗೆ ಹೋಲಿಸಿದರೆ ಹೆಣ್ಣು ಮಕ್ಕಳ ದಾಖಲಾತಿ ಕಡಿಮೆಯಿದ್ದು ಶಾಲೆಗೆ ದಾಖಲಾಗಬೇಕಾದ ಶೇ. 84 ರಷ್ಟು ಹೆಣ್ಣುಮಕ್ಕಳು ಮತ್ತು ಶೇ. 92 ರಷ್ಟು ಗಂಡುಮಕ್ಕಳು ಮಾತ್ರ ಶಾಲೆಗೆ ದಾಖಲಾಗಿದ್ದಾರೆ.
ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ 2.26 ಲಕ್ಷ ಶಿಕ್ಷಕರಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ಅನುಪಾತ ಸಮಾಧಾನಕರವಾಗಿದೆ. ಖಾಸಗೀ ಅಥವಾ ಅನುದಾನಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮತ್ತು ಶಿಕ್ಷಕರ ಅನುಪಾತ ಉತ್ತಮವಾಗಿದ್ದರೂ ಈಗಲೂ ಏಕೋಪಾದ್ಯಾಯ ಶಾಲೆಗಳು ಮತ್ತು ಬಹು ತರಗತಿ ಶಾಲೆಗಳು ಗಣನೀಯವಾಗಿಯೇ ಇವೆ. ಕಳದೆರಡು ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ವಾತಾವರಣದಿಂದಾಗಿ ಮಕ್ಕಳು ಮತ್ತು ಪೋಷಕರು ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳ ಕಡೆಗೆ ಆಕರ್ಷಿತರಾಗಿದ್ದು ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಸೊರಗುತ್ತಿವೆ. ಮಕ್ಕಳನ್ನು ಸರ್ಕಾರಿ ಶಾಲೆಯ ಕಡೆ ಸೆಳೆಯಲು ವಿಶೇಷ ಪ್ರಯತ್ನಗಳು ನಡೆಯದೆ ಮತ್ತು ಇಡಿಯಾಗಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸದೆ ಈ ಪರಿಸ್ಥಿತಿ ಬದಲಾಗುವುದು ಕಷ್ಟದ ಕೆಲಸ.
ವ್ಯಾಪಕ ಶಾಲಾ ವ್ಯವಸ್ಥೆ ಮತ್ತು ದಾಖಲಾತಿಯಲ್ಲಿ ಪ್ರಗತಿ ಇದ್ದಾಗ್ಯೂ ಮತ್ತು ನಿರಂತರವಾಗಿ ಶಿಕ್ಷಕರ ನೇಮಕಾತಿ ನಡೆದಿದ್ದಾಗ್ಯೂ 1985-86 ರಿಂದ 1993-94 ರ ನಡುವೆ ಶಾಲೆ ಬಿಡುವ ಮಕ್ಕಳ ಪ್ರಮಾಣ ಶೇ. 51.8 ಇದೆ. 1986-87 ರಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ ಶೇ. 64.5 ಇದ್ದದ್ದು 1997-98 ರಲ್ಲಿ ಶೇ. 44 ಕ್ಕೆ ಕುಸಿದಿದ್ದು ಈಗಲೂ ಕರ್ನಾಟಕದಲ್ಲಿ ಶೇ. 26.2 ರಷ್ಟು ಮಕ್ಕಳು ತಮ್ಮ ಕಲಿಕೆಯನ್ನು ಕೈಬಿಟ್ಟು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅಂದರೆ ಒಂದನೇ ತರಗತಿಗೆ ಸೇರಿದ 100 ಮಕ್ಕಳಲ್ಲಿ 26 ಮಕ್ಕಳು ಏಳನೇ ತರಗತಿಯ ಶಿಕ್ಷಣವನ್ನು ಪೂರೈಸುತ್ತಿಲ್ಲ.
ಇತ್ತೀಚಿಗೆ ಸರ್ವ ಶಿಕ್ಷಾ ಅಭಿಯಾನ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದ ಆಘಾತಕಾರಿ ಅಂಶವೇನೆಂದರೆ 11 ರಿಂದ 13 ವರ್ಷದ ಒಳಗಿನ ಮಕ್ಕಳಲ್ಲಿ ಶೇ. 63 ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ರೀತಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಶೇ. 49 ರಷ್ಟು ದಲಿತ ಮಕ್ಕಳಿದ್ದರೆ, ಶೇ. 48.9 ರಷ್ಟು ಮಕ್ಕಳು ಇತರೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ನಂತರದ ಸ್ಥಾನ ಕಲ್ಬುರ್ಗಿ ಜಿಲ್ಲೆಯದು. ಅಂದರೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಹೆಚ್ಚಾಗಿರುವುದು ಒಂದು ಕಡೆ ಸರ್ಕಾರಿ ಶಾಲೆಗಳ ಕೊರತೆ ಮತ್ತು ಇನ್ನೊಂದೆಡೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲಾಗದ ನಗರದ ಬಡವರ ಕತೆಯನ್ನು ಹೇಳುತ್ತದೆ.
ಇದು ಕರ್ನಾಟಕದ ಒಟ್ಟಾರೆ ಚಿತ್ರಣವನ್ನು ಹೇಳುತ್ತದೆ. ಆದರೆ ರಾಜ್ಯದ ಬೇರೆ, ಬೇರೆ ಪ್ರದೇಶ ಮತ್ತು ಸಾಮಾಜಿಕ ಆರ್ಥಿಕ ವಿಭಾಗಗಳ ನಡುವೆ ಶಿಕ್ಷಣದ ಪ್ರಗತಿ, ಕೊರತೆ ಮತ್ತು ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಾಗಿದೆ. ಹಿಂದುಳಿದ ಜಿಲ್ಲೆಗಳಾದ ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಶೇ. 43.8, ವಿಜಯಪುರ ಜಿಲ್ಲೆಯಲ್ಲಿ ಈ ಪ್ರಮಾಣ ಶೇ. 31.2 ರಷ್ಟಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಶೇ.18.1 ಅಥವಾ ಕೊಡಗಿನಲ್ಲಿ ಈ ಪ್ರಮಾಣ ಶೇ. 24, ಬೆಂಗಳೂರು ನಗರ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಶೇ. 12.7. ಅಂದರೆ ಶೈಕ್ಷಣಿಕ ಪ್ರಗತಿಯಲ್ಲಿ ಕೂಡ ಪ್ರಾದೇಶಿಕ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಪ್ರತಿಬಿಂಬಿಸುತ್ತಿವೆ. ಯಾವ ಪ್ರದೇಶಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿವೆಯೋ ಅಲ್ಲಿ ಶೈಕ್ಷಣಿಕ ಸೌಲಭ್ಯಗಳು ಕೂಡಾ ಹಿಂದುಳಿದಿವೆ. ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತೆ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗೆ ಕಾರಣವಾಗುತ್ತಿದೆ. ಈ ವಿಷ ವರ್ತುಲವನ್ನು ಬೇಧಿಸುವ ಕಾರ್ಯಕ್ಕೆ ಸ್ವಾತಂತ್ರ್ಯ ನಂತರದ ಯಾವ ಆಳುವ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ಮಾಡದಿರುವುದನ್ನು ಕಾಣುತ್ತೇವೆ.
ಕಳೆದ ಏಳು ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣ ರಂಗದಲ್ಲಿ ಒಂದಷ್ಟು ಪ್ರಗತಿ ಆಗಿದೆ. 1959-60 ರಲ್ಲಿ ಕೇವಲ 23 ಲಕ್ಷ ಮಕ್ಕಳು ಪ್ರಾಥಮಿಕ ಶಾಲೆಗಳಲ್ಲಿ ದಾಖಲಾಗಿದ್ದರೆ ಈಗ ದಾಖಲಾದ ಮಕ್ಕಳ ಪ್ರಮಾಣ ಒಂದು ಕೋಟಿಯನ್ನು ಮೀರುತ್ತದೆ. ಆದರೆ ಇಪ್ಪತ್ತೊಂದನೇ ಶತಮಾನದಲ್ಲೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿದ್ದಾರೆ. ಶಾಲೆಗೆ ದಾಖಲಾದ ಮಕ್ಕಳಲ್ಲೂ ಅವರ ಪೋಷಕರು ಆ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದೆ, ತಮ್ಮ ಬದುಕಿನ ಜಂಜಾಟಗಳಿಂದ ಹೊರ ಬರಲಾಗದೇ ತಮ್ಮ ಮಕ್ಕಳನ್ನು ಅರ್ಧದಲ್ಲೇ ಶಾಲೆ ಬಿಡಿಸಿ ದುಡಿಮೆಗೆ ಹಚ್ಚುವುದನ್ನು ಕಾಣುತ್ತಿದ್ದೇವೆ. ಜನತೆಯ ಸಾಮಾಜಿಕ ಆರ್ಥಿಕ ಸ್ಥಿತಿಗೂ ಮಕ್ಕಳು ಶಿಕ್ಷಣವನ್ನು ಪೂರೈಸುವುದಕ್ಕೂ ನೇರ ಸಂಬಂಧವಿದೆ. ತಿಂಗಳಿಗೆ 1500 ರೂಪಾಯಿಗೂ ಕಡಿಮೆ ಆದಾಯವಿರುವ ಕುಟುಂಬದ ಶೇ. 76 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ತಿಂಗಳಿಗೆ 1500-3000 ಆದಾಯವಿರುವ ಶೇ. 18.68 ಮಕ್ಕಳು, ತಿಂಗಳಿಗೆ 3000 ರೂಪಾಯಿ ಮೀರಿದ ಆದಾಯವಿರುವ ಕುಟುಂಬದ ಶೇ.4.5 ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಉಚಿತ ಎಂದು ಎಲ್ಲಾ ಸರ್ಕಾರಗಳೂ ಹೇಳುತ್ತಿವೆ. ಆದರೆ ಪುಸ್ತಕ, ನೋಟ್ ಬುಕ್, ಲೇಖನ ಸಾಮಗ್ರಿಗಳು, ಸಂಚಾರ ಇವುಗಳಿಗೆ ಪೋಷಕರು ಖರ್ಚು ಮಾಡಲೇಬೇಕಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರು ಕೂಡ ವರ್ಷಕ್ಕೆ ಸಾವಿರಾರು ರೂಪಾಯಿಗಳನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ವ್ಯಯಿಸಬೇಕಾಗಿದೆ. ಸರ್ಕಾರದ ಅನುದಾನ ಪಡೆಯುವ ಆದರೆ ಖಾಸಗಿ ಆಡಳಿತ ಮಂಡಳಿಗಳಿಂದ ನಿರ್ವಹಿಸಲ್ಪಡುವ ಅನುದಾನಿತ ಶಾಲೆಗಳಲ್ಲಿ ಇತ್ತೀಚಿನ ವರೆಗೂ ಉಚಿತ ಪುಸ್ತಕಗಳನ್ನಾಗಲೀ, ಮಧ್ಯಾಹ್ನದ ಊಟವನ್ನಾಗಲೀ ನೀಡುತ್ತಿರಲಿಲ್ಲ. ಅಂತಹ ಶಾಲೆಗಳಲ್ಲಿ ಟ್ಯೂಷನ್ ಫೀ ಇಲ್ಲದಿದ್ದರೂ, ಅಭಿವೃದ್ಧಿ ಶುಲ್ಕ, ಪುಸ್ತಕ ಸಮವಸ್ತ್ರ ಎಂದು ಪೋಷಕರು ಹಲವಾರು ಸಾವಿರ ರೂಪಾಯಿಗಳನ್ನು ತಮ್ಮ ಮಕ್ಕಳ ಶಿಕ್ಷಣಕ್ಕೆ ತೊಡಗಿಸಬೇಕಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದರೂ ಬದಲಾಗಿಲ್ಲ.
ಆದರೆ ಪೂರಾ ಖಾಸಗಿಯಾಗೇ ನಡೆಯುವ ಶಾಲೆಗಳಿಗೆ ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾದ ಕುಟುಂಬಗಳೆ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಮಹತ್ವಾಕಾಂಕ್ಷೆಯ ಪೋಷಕರು ತಮ್ಮ ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳುತ್ತಾರೆ. ಅಂದರೆ ಆರ್ಥಿಕವಾಗಿ ಮೇಲಿನ ವರ್ಗದ ಮಕ್ಕಳು ತಮ್ಮ ಶಾಲಾ ಶಿಕ್ಷಣವನ್ನು ಪೂರೈಸುತ್ತಾರೆ. ಮಾತ್ರವಲ್ಲ ಮುಂದೆಯೂ ಕಲಿಕೆ ಮತ್ತು ಸ್ಪರ್ಧೆಯಲ್ಲಿ ಉಳಿಯಲು ಬೇಕಾದಂತೆ ತಯಾರಾಗುತ್ತಾರೆ. ಅಧ್ಯಯನ ಒಂದರ ಪ್ರಕಾರ ಶಾಲೆ ತೊರೆದ ಮಕ್ಕಳಲ್ಲಿ ಶೇ. 81.14 ಮಕ್ಕಳ ಕುಟುಂಬದ ಮಾಸಿಕ ಆದಾಯ 500 ರಿಂದ 1000 ರೂಪಾಯಿ. ಶಾಲೆಗೆ ಹಾಜರಾಗದಿರಲು ಬಡತನವೇ ಮುಖ್ಯ ಕಾರಣವೆಂಬುದು ಇದರಿಂದ ತಿಳಿಯುತ್ತದೆ. ಇಂತಹ ಮಕ್ಕಳಲ್ಲಿ ಬಹುತೇಕರು ತಮ್ಮ ಕುಟುಂಬ ಪೋಷಣೆಯ ಕೆಲಸದಲ್ಲಿ ನೆರವಾಗುವುದನ್ನು ನೋಡಬಹುದು. ಶಾಲೆಯಿಂದ ಹೊರಗುಳಿದ ಶೇ. 9.14 ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಸಕ್ತಿ ತೋರಿದರೆ, 6.8 ಮಕ್ಕಳು ಶಾಲೆ ನೀರಸ ಎಂದು ಹೊರಗುಳಿಯುತ್ತಾರೆ, ಶೇ. 3.42 ಮಕ್ಕಳು ಶಾಲೆ ಮನೆಯಿಂದ ಬಹಳ ದೂರ ಎಂದು ಶಾಲೆಯಿಂದ ಹೊರಗಿದ್ದಾರೆ.
ಶಿಕ್ಷಣದ ಪರಿಧಿಯಿಂದ ಆಚೆ ಉಳಿಯಲು ಕೇವಲ ಆರ್ಥಿಕ ಕಾರಣಗಳು ಮಾತ್ರವೇ ಅಲ್ಲ ಜಾತಿಯಂತಹ, ಲಿಂಗದಂತಹ ಸಾಮಾಜಿಕ ಕಾರಣಗಳೂ ಇವೆ. ಈಗಲೂ ಜಾತಿ ವಿಭಜನೆ ದಲಿತರ ಮಕ್ಕಳನ್ನು ಶಾಲೆಗಳಿಂದ ಹೊರಗಿಡುತ್ತಿವೆ. ದಲಿತರ ಮಕ್ಕಳಿಗೆ ಸಿಗುವ ಸಣ್ಣ ಪುಟ್ಟ ಉಚಿತ ಸರ್ಕಾರಿ ಸವಲತ್ತುಗಳನ್ನು ಕೂಡ ಮೇಲ್ಜಾತಿಯ ಜನರು ಸಹಿಸಿಕೊಳ್ಳದ ಗ್ರಾಮೀಣ ಕರ್ನಾಟಕದಲ್ಲಿ ಆ ಮಟ್ಟಿಗೆ ದಲಿತರು ಶಾಲೆಯಿಂದ ಹೊರಗುಳಿಯಲು ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತಿಯಿಂದಲೇ ಗುರುತಿಸಿ ದಲಿತ ಮತ್ತು ಹಿಂದುಳಿದ ಜಾತಿಯ ಜನರಿಗೆ ಅವಕಾಶಗಳನ್ನು ನಿರಾಕರಿಸುವ, ವಂಚಿಸುವ ಶಕ್ತಿಗಳು ಕೆಲಸ ಮಾಡುತ್ತಿವೆ.
ಶಾಲೆಗೆ ಸೇರಿಸುವಾಗ ಗಂಡು ಮಕ್ಕಳು ಆದ್ಯತೆ ಪಡೆದರೆ ಶಾಲೆ ಬಿಡಿಸುವಾಗ ಹೆಣ್ಣುಮಕ್ಕಳು ಆದ್ಯತೆ ಪಡೆಯುತ್ತಾರೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಶಾಲೆ ಬಿಡುವ ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಕಡಿಮೆ ಇದೆ. ಆದರೆ ಖಾಸಗಿ ಅಥವಾ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗೆ ಮಕ್ಕಳನ್ನು ಸೇರಿಸಬೇಕು ಎಂದಾಗ ಮಗನೇ ಆದ್ಯತೆಯಾಗುವುದರಿಂದ ಹೆಣ್ಣುಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವ ಅಥವಾ ತಾರತಮ್ಯ ಎದುರಿಸುವುದು ಆರ್ಥಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ನಡೆಯುತ್ತದೆ. 1996 ರಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಸಂಖ್ಯೆ ಶೇ. 32.8 ಇದ್ದರೆ, ಗಂಡು ಮಕ್ಕಳ ಪ್ರಮಾಣ ಶೇ. 22.7 ಇತ್ತು. ಈಗ ಪರಿಸ್ಥಿತಿ ಸುಧಾರಣೆ ಕಂಡಿದ್ದರೂ ಸಾಗಬೇಕಾದ ಹಾದಿ ಬಹಳ ದೂರವಿದೆ.
ಒಟ್ಟಾರೆ ಕರ್ನಾಟಕದಲ್ಲಿ ಕಳೆದ 70 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯಾಗಿದ್ದರೂ ಕೂಡ ಸವಾಲುಗಳು ಮತ್ತು ಸಮಸ್ಯೆಗಳು ಬೆಟ್ಟದಷ್ಟಿವೆ. ಶಿಕ್ಷಣಕ್ಕೆ ಜಿಡಿಪಿಯ ಶೇ. 6 ರಷ್ಟು ಹಣವನ್ನು ಮೀಸಲಿಡದೆ ಆ ಮೂಲಕ ಗುಣಮಟ್ಟದ ವ್ಯವಸ್ಥೆಯನ್ನು ನಿರ್ಮಾಣ ಮಾಡದೆ ಹೋದರೆ ಈಗಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಆದರೆ 90 ರ ದಶಕದ ನಂತರದ ಉದಾರೀಕರಣ ನೀತಿಗಳಿಗೆ ಬಲಿಯಾದ ಸರ್ಕಾರಗಳು ಶಿಕ್ಷಣವನ್ನು ಸರಕಾಗಿಸಿವೆ. ಉದಾರೀಕರಣದ ದಾರಿಯನ್ನು ಬದಲಿಸದೆ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆ ಹೆಚ್ಚಾಗದು. ಪ್ರಾದೇಶಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕದೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗದು. ಶಿಕ್ಷಣ ಕ್ಷೇತ್ರವನ್ನು ಬಿಡಿಯಾಗಿ ನೋಡಿ ಬದಲಾವಣೆಗಳನ್ನು ತರಲಾಗದು. ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ತಲುಪದೇ ಇರಲು ಇರುವ ಕಾರಣಗಳನ್ನು ನಿವಾರಿಸುವ ಕೆಲಸ ಆಗಬೇಕು.