ಬೆಂಗಳೂರು: ಪುನೀತ್ ರಾಜಕುಮಾರ್ ಪಾರ್ಥಿವ ಶರೀರ ಕಂಡು ಅವರ ಹಿರಿಯ ಮಗಳು ಧೃತಿ ಕಣ್ಣೀರಿಟ್ಟರು. ಅಪ್ಪನ ತಲೆಯ ಮೇಲೆ ಕೈ ನೇವರಿಸಿದ ಅವರು ಬಿಕ್ಕಿಬಿಕ್ಕಿ ಅತ್ತ ದೃಶ್ಯಗಳು ನೋಡುಗರ ಮನ ಕಲಕುವಂತಿತ್ತು.
ಶಿವರಾಜ್ ಕುಮಾರ್ ಧೃತಿಯ ಭುಜ ಹಿಡಿದುಕೊಂಡು ಪುನೀತ್ ರಾಜಕುಮಾರ್ ಪಾರ್ಥಿವ ಶರೀರದ ಮುಂದೆ ಬಿಟ್ಟರು.
ಅಪ್ಪನ ಮುಖ ನೋಡುತ್ತಿದ್ದಂತೆ ಬಿಕ್ಕಳಿಸುತ್ತಾ ಅಳಲು ಪ್ರಾರಂಭಿಸಿದರು. ಧೃತಿಯೊಂದಿಗೆ ಪುನೀತ್ ಪತ್ನಿ ಅಶ್ವಿನಿ ಹಾಗೂ ಕಿರಿಯ ಪುತ್ರಿ ಕೂಡ ಗದ್ಗದಿತರಾದರು.
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಧೃತಿ ನ್ಯೂಯಾರ್ಕ್ನಿಂದ ದೆಹಲಿಗೆ ಇಂದು ಮಧ್ಯಾಹ್ನ ಆಗಮಿಸಿದ್ದರು. ಧೃತಿ ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನ್ಯೂಯಾರ್ಕ್ನಿಂದ ಒಬ್ಬರೇ ದೀರ್ಘ ಅವಧಿಯ ಪ್ರಯಾಣ ಬೆಳೆಸಿದರು.
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದರು. ಸಂಜೆ 4 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಬೆಂಗಳೂರು ವಿಮಾನ ನಿಲ್ದಾಣದಿಂದ ಸದಾಶಿವನಗರದ ಮನೆಗೆ ತೆರಳಲಿ ಅಲ್ಲಿಂದ ಹಲವು ಪೊಲೀಸ್ ಜೀಪ್ಗಳ ಭದ್ರತೆಯಲ್ಲಿ ಕಂಠೀರವ ಸ್ಟೇಡಿಯಂಗೆ ಬಂದರು. ಧೃತಿ ಅವರೊಂದಿಗೆ ಸಹೋದರ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಘವೇಂದ್ರ ಇದ್ದರು. ತಡೆರಹಿತವಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದರು.
ಎಲ್ಲಿಯೂ ಕೂಡ ಸ್ವಲ್ಪವೂ ತಡವಾಗದೆ ಆದಷ್ಟು ಬೇಗನೇ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ರಾಜಕುಮಾರ್ ಅವರನ್ನು ನೋಡುವಂತಾಗಲಿ ಎಂದು ಪೊಲೀಸರು ಸಾಕಷ್ಟು ಮುಂಜಾಗ್ರತೆ ವಹಿಸಿ ಭದ್ರತೆ ಕೈಗೊಂಡಿದ್ದರು.
ಪುನೀತ್ ನಿಧನದ ಸುದ್ದಿ ಹೊರಬಿದ್ದಾಗಿನಿಂದಲೂ ಅವರ ಕುಟುಂಬಕ್ಕೆ ಧೃತಿಯದ್ದೇ ಚಿಂತೆಯಾಗಿತ್ತು. ಆಕೆ ಒಬ್ಬಳೇ 24 ಗಂಟೆ ಸುದೀರ್ಘ ಅವಧಿ ಪ್ರಯಾಣವನ್ನು ದುಃಖಕರ ಸನ್ನಿವೇಶದಲ್ಲಿ ಹೇಗೆ ಮಾಡುತ್ತಾರೆ ಎಂದು ಚಿಂತಿತರಾಗಿದ್ದರು.
ಕಂಠೀರವ ಸ್ಟುಡಿಯೊದಲ್ಲಿ ನಾಳೆ ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರ ನೆರವೇರಲಿದೆ.