ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯನ್ನು ತಮಿಳುನಾಡು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ. ಬದಲಾಗಿ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ರಚನೆ ಮಾಡಲಾಗುವುದು. ಅದಕ್ಕಾಗಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥರೂ ಆಗಿರುವ ಎಂ ಕೆ ಸ್ಟಾಲಿನ್ ಬಾಗಿಲಿಗೆ ಶಿಕ್ಷಣ ಯೋಜನೆಗೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಸ್ಟಾಲಿನ್ ʻಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 2020ರಿಂದ ಹಲವಾರು ನಿರ್ಬಂಧಗಳಿಂದಾಗಿ ತರಗತಿ ಇಲ್ಲದ ಕಾರಣ ಮಕ್ಕಳಿಗೆ ಶೈಕ್ಷಣಿಕ ಕೌಶಲ್ಯಗಳನ್ನು ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆʼ ಎಂದು ಹೇಳಿದರು.
ಇದನ್ನು ಓದಿ: ಜಾರಿಗೊಂಡಿರುವುದು ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ- ನಾಗ್ಪುರ ಶಿಕ್ಷಣ ನೀತಿ: ಡಿಕೆಶಿ ಆರೋಪ
ಬಾಗಿಲಿಗೆ ಶಿಕ್ಷಣ ಕಾರ್ಯಕ್ರಮವು ತಜ್ಞರ ಸಮಿತಿಯ ಶಿಫಾರಸಗಳನ್ನು ಸರ್ಕಾರ ಅಂಗೀಕರಿಸಿದೆ. ಈ ಹೊಸ ಯೋಜನೆಯಿಂದ ಶಿಕ್ಷಣಕ್ಕೆ ಪೂರಕವಾದ ಹಲವು ಅಂಶಗಳನ್ನು ಅಭಿವೃದ್ಧಿಪಡಿಸುತ್ತದೆ. ಇಲ್ಲಿಯವರೆಗೆ ಸುಮಾರು 86,550 ಸ್ವಯಂಸೇವಕರು ಶಾಲಾ ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ನೀಡಲು ನೋಂದಾಯಿಸಿಕೊಂಡಿದ್ದಾರೆ. ಈ ಸ್ವಯಂಸೇವಕರಿಗೆ ಸರ್ಕಾರದಿಂದ ತರಬೇತಿ ನೀಡಲಾಗುವುದು ಮತ್ತು ಅವರ ಕೆಲಸವನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು. ಅಲ್ಲದೆ ಮುಂಬರುವ ಶಿಕ್ಷಣ ವರ್ಷದಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಯೋಜಿಸಲಾಗಿದೆ ಎಂದಿದ್ದಾರೆ.
“ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚನೆ ಮಾಡಲಿದ್ದು, ಈ ಸಮಿತಿಯು ರಾಜ್ಯಕ್ಕೆ ಬೇಕಾಗುವಂತಹ ಹೊಸ ಶಿಕ್ಷಣ ನೀತಿಯನ್ನು ರಚನೆ ಮಾಡಲಿದೆ. ಅದನ್ನು ನಾವು ಜಾರಿಗೆ ತರುತ್ತೇವೆ” ಎಂದು ಸುದ್ದಿಸಂಸ್ಥೆಯೊಂದಿಗೆ ವಿಷಯವನ್ನು ಹಂಚಿಕೊಂಡರು.
ಇದನ್ನು ಓದಿ: ಹೊಸ ಶಿಕ್ಷಣ ನೀತಿ ಮತ್ತು ತಾಯ್ನುಡಿ ಕಲಿಕೆ
ಜುಲೈ 29, 2020 ರಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಾರಿಗೆ ತಂದ ಸಂದರ್ಭದಿಂದಲೇ ಎಂ ಕೆ ಸ್ಟಾಲಿನ್ ಈ ರಾಷ್ಟ್ರೀಯ ಶಿಕ್ಷಣ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಹಿಂದಿ ಮತ್ತು ಸಂಸ್ಕೃತವನ್ನು ಎಲ್ಲರ ಮೇಲೆ ಹೇರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ” ಎಂದಿರುವರು. ಹಾಗೆಯೇ ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೈಜೋಡಿಸುವ ಮೂಲಕ ಇದರ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.
ನೂತನ ಶಿಕ್ಷಣ ನೀತಿ (ಎನ್ಇಪಿ) ಅನ್ನು ಅನುಷ್ಠಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಇಲಾಖೆ ಕಾರ್ಯದರ್ಶಿಗಳೊಂದಿಗೆ ಅಂದಿನ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಡೆಸಿದ್ದ ವರ್ಚುವಲ್ ಸಭೆಗೆ ತಮಿಳುನಾಡಿನ ಪ್ರತಿನಿಧಿಗಳು ಹಾಜರಾಗಿರಲಿಲ್ಲ. ಮಾತ್ರವಲ್ಲದೇ ಇನ್ನು ಕೆಲವು ರಾಜ್ಯಗಳು ಎನ್ಇಪಿಗೆ ವಿರೋಧ ವ್ಯಕ್ತಪಡಿಸಿದೆ. ಕೇರಳ, ಪಶ್ಚಿಮ ಬಂಗಾಳ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ ವ್ಯಕ್ತಪಡಿಸಿದೆ.